ದಿನ ಪತ್ರಿಕೆಯ ಪುಟಗಳನ್ನು ತಿರುವಿ ಹಾಕಿದರೆ ಒಂದೆರಡಾದರೂ ಸ್ತ್ರೀಯರ ಮೇಲಿನ ಅತ್ಯಾಚಾರಗಳು, ಚೀಟಿಹಾಕಿ ಮೋಸಹೋದ ಪ್ರಕರಣಗಳು, ಪೋಲೀಸ್ ಅಧಿಕಾರಿಗಳು ಪೋಲೀಸರಿಗೆ ನೀಡಿದ ಕಿರುಕುಳಗಳು, ವರದಕ್ಷಿಣೆ ಕಿರುಕುಳ ತಾಳಲಾಗದೆ ಹಸುಗೂಸನ್ನು ಬಿಟ್ಟು ತಾಯಿ ಮಾಡಿಕೊಂಡ ಆತ್ಮಹತ್ಯೆಗಳು, ಲಂಚ ಪ್ರಕರಣಗಳು, ಭಯೋತ್ಪಾದನೆಗಳು, ಜನಾಂಗೀಯ ದ್ವೇಷಕ್ಕೆ ತುತ್ತಾದ ಬಲಹೀನರು, ಬಹುಸಂಖ್ಯಾತರಿಂದ ತೊಂದರೆಗೊಳಗಾದ ಅಲ್ಪಸಂಖ್ಯಾತರ ನೋವುಗಳು ವರದಿ ಆಗಿಯೇ ಇರುತ್ತವೆ! ಇಲ್ಲೆಲ್ಲಾ ತೊಂದರೆ ಅನುಭವಿಸಿದ್ದು ದುರ್ಬಲರು! ತೊಂದರೆ ನೀಡಿದ್ದು ಸಬಲರು! ಅಂದರೆ ಪ್ರಬಲರು ದುರ್ಬಲರಿಗೆ ಸದಾ ತೊಂದರೆ ನೀಡುವುದನ್ನು ಕಾಣುವಂತಾಗಿದೆ. ದುರ್ಬಲರ ಶೋಷಣೆಗೆ ಕೊನೆ ಇಲ್ಲವೇನೋ ಅನಿಸುವಂತಾಗಿದೆ.
ಭಾರತ ಪುರಾಣ, ಪುಣ್ಯ ಕತೆಗಳಿಂದ ಸಂಮೃದ್ದವಾದ ನಾಡು! ಭರತ ಭೂಮಿಯಲ್ಲಿ ಜನಿಸಿದವರೆಲ್ಲರಿಗೆ ಅವುಗಳ ಪರಿಚಯ ಸಾಕಷ್ಟಿರುತ್ತದೆ. ಪುರಾಣಗಳಲೆಲ್ಲಾ ಸುರಾಸುರರ, ಮಾನವ ದಾನವರ, ದುಷ್ಟರು ಶಿಷ್ಟರ ನಡುವಿನ ಕಾದಾಟಗಳೇ ಕತೆಗಳಾಗಿವೆ. ಅದರಲ್ಲಿ ದುಷ್ಟರ ದೌಷ್ಟ್ಯ ಮೇರೆಮೀರಿ ವಿಜೃಂಭಿಸುವುದು ಸಜ್ಜನರ ನರಳಾಟ ಮುಗಿಲು ಮುಟ್ಟುವುದು ಭಕ್ತ ತನ್ನ ಭಕ್ತಿಯ ಪರಾಕಾಷ್ಠೆಯನ್ನು ತಲುಪುವುದು, ಭಕ್ತ ದುಷ್ಟರ ಧಾಳಿಯಿಂದ ಇನ್ನೇನು ಕೊನೆಯುಸಿರೆಳೆಯಬೇಕಾಗುತ್ತದೆ ಎಂಬ ಸಂದರ್ಭದಲ್ಲಿ ಭಗವಂತ ಮೈದೋರಿ ದುಷ್ಟರ ಸಂಹಾರ ಮಾಡಿ ಭಕ್ತನನ್ನು ರಕ್ಷಿಸುವುದು ಓದಿರುತ್ತೇವೆ. ಅಲ್ಲೆಲ್ಲಾ ಬಲವಂತ ಬಲಹೀನರ ಶೋಷಣೆ ಮಾಡುವುದನ್ನು ಬರೆಯಲಾಗಿದೆ. ಸಜ್ಜನರ ಬಲಹೀನತೆ ಅಲ್ಲೆಲ್ಲಾ ಪ್ರಕಟವಾಗಿದೆ. ಸಜ್ಜನರೆಂದರೆ ಬಲಹೀನರು ಸ್ವಾಭಿಮಾನವಿಲ್ಲದವರು, ದುಷ್ಟರನ್ನು ನೇರವಾಗಿ ಎದುರಿಸಲಾಗದ ಹೇಡಿಗಳು ಎಂದು ಚಿತ್ರಿಸಲಾಗಿದೆ! ಈ ಕತೆಗಳೆಲ್ಲಾ ಕಷ್ಟಗಳನ್ನು ಅನುಭವಿಸಲು ಸಜ್ಜನರಾಗಬೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವಂತೆ ಮಾಡಿವೆ! ದುಷ್ಟರ ಕಣ್ಣು ಸಜ್ಜನರ ಮೇಲೆ ಬೀಳದೆ ಇರುವುದರಿಂದ ಅಥವಾ ದುಷ್ಟರ ಕಣ್ಣಿಗೆ ಸಜ್ಜನ ಕಾಣಿಸಿಕೊಳ್ಳದೆ ಇರುವುದರಿಂದ ಜಗತ್ತಿನಲ್ಲಿ ಸಜ್ಜನರು ಸಜ್ಜನರಾಗಿಯೇ ಉಳಿಯುವಂತಾಗಿದೆ! ದುಷ್ಟರ ಕಣ್ಣಿಗೆ ಕಾಣಿಸದ ಸಜ್ಜನರು ತಮ್ಮಪಾಡಿಗೆ ತಾವು ಕ್ಷೇಮವಾಗಿರುವುದ ಕಂಡು ದುಷ್ಟರಾಗಲು ಮನಸ್ಸಾಗದೆ ಸಜ್ಜನರಾಗುವಂತಾಗಿದೆ ಎಂದರೆ ತಪ್ಪಾಗದು!
ಪುರಾಣಗಳಲೆಲ್ಲಾ ಸಜ್ಜನರನ್ನು ಹಾಡಿ ಹೊಗಳಲಾಗಿದೆ. ಪರಮ ಭಕ್ತಿಯಿಂದ ಮುಕ್ತಿ ಪಡೆದವರ ಭಕ್ತಿಯನ್ನು ಶ್ಲಾಗಿಸಲಾಗಿದೆ. ಎಲ್ಲಾ ಧರ್ಮಗಳು, ಪುರಾಣಗಳು ಜನರೆಲ್ಲಾ ಸಜ್ಜನರಾಗಬೇಕೆಂದು ಸಾರಿ ಹೇಳುತ್ತಾ ಸಜ್ಜನಿಕೆಯೆ ಬದುಕಿನ ಪರಮ ಮಧುವೆಂದು ಓದುಗರಿಗೆ ಕೇಳುಗರಿಗೆ ಕುಡಿಸುತ್ತಿವೆ! ಸಜ್ಜನರಾಗಬೇಕೆಂದು ಒಂದು ಕಡೆ ಸಾರುತ್ತಾ ಮತ್ತೊಂದು ಕಡೆ ಸಜ್ಜನರಿಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂದು ಡಂಗೂರ ಹಾಕುತ್ತಾ ಸಜ್ಜನರಾಗಬೇಕೆಂದರೆ ದುಷ್ಟರ ಉಪಟಳ ಸಹಿಸಿ ಕಷ್ಟಗಳನ್ನು ಅನುಭವಿಸಿಯೆ ತೀರಬೇಕು ಕಷ್ಟಗಳ ಪರಿಹಾರ ಸಜ್ಜನರಿಂದಾಗದು. ಅದಕ್ಕಾಗಿ ಸಜ್ಜನರು ದುಷ್ಟನಿಗಿಂತ ಬಲಶಾಲಿಯ ಮೊರೆ ಹೋಗಲೇಬೇಕು, ಆ ಬಲಶಾಲಿಗಳು ಸುಮ್ಮನೆ ಸಜ್ಜನರ ಸಹಾಯಕ್ಕೆ ಬರರು! ಅವರಿಗೆ ಇಷ್ಟವಾದುದ ಕೊಡದೆ ರಕ್ಷಿಸರು ಎಂಬ ಸಂದೇಶ ನೀಡಿವೆ! ಎಲ್ಲಾ ರಾಕ್ಷಸರ, ದುಷ್ಟರ ಸಂಹಾರಗಳು ಇದನ್ನೇ ಸಾರಿವೆ! ಕಷ್ಟಗಳನ್ನು ಅನುಭವಿಸಲು ಸಜ್ಜನರಾಗಬೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವಂತೆ ಮಾಡಿವೆ! ಸಜ್ಜನ ಸತ್ಯಹರಿಶ್ಚಂದ್ರನಾಗಲು ರಾಜ್ಯವನ್ನು ಕಳೆದುಕೊಂಡು, ತಮ್ಮನ್ನು ಹರಾಜಿನಲ್ಲಿ ಮಾರಿಕೊಂಡು ಇತರರ ಆಳಾಗಿಸಿಕೊಂಡು ಇರುವ ಒಬ್ಬನೇ ರಾಜಕುಮಾರನಾದ ಮಗ ವಿಷಜಂತುವಿನಿಂದ ಕಚ್ಚಸಿಕೊಳ್ಳುವಂತಾದುದು, ಅವನ ಶವಸಂಸ್ಕಾರ ಮಾಡಲಾಗದಂತಹ ಪರಿಸ್ಥಿತಿ ತಂದುಕೊಂಡು, ಹೇಗೋ ಮಗನನ್ನು ಸಂಸ್ಕಾರ ಮಾಡಲು ಧಾವಿಸುವ ಹೆಂಡತಿಯನ್ನು ಬಲಿಕೊಡುವ ವೀರಬಾಹುವಿನ ಆಳಾಗಿ ಬದುಕಿನ ಬಹುಭಾಗ ಗೋಳಿನಲೇ ಕಳೆಯುವಂತಾದ ಹರಿಶ್ಚಂದ್ರನ ಬದುಕು ಯಾರಿಗೆ ಬೇಕು? ಸೀತೆ ಹದಿನಾಲ್ಕುವರ್ಷ ಗೆಡ್ಡೆಗೆಣಸು ತಿನುತ, ದುಷ್ಟರನ್ನು, ಮಳೆ, ಗಾಳಿ, ಬಿಸಿಲನ್ನು ಎದುರಿಸುತ ವನವಾಸ ಮಾಡಿ ಲಂಕೆಯ ವನವೊಂದರಲ್ಲಿ ರಾಕ್ಷಸಿಯರ ಮಧ್ಯೆ ರಾವಣನ ಹಿಂಸೆ ಸಹಿಸುತ್ತಾ ತನ್ನ ಬದುಕಿನ ಬಹುಕಾಲ ನೋವಲ್ಲೇ ಅಸಾಯಕಳಾಗಿ ಕಳೆದ ಸಜ್ಜನಿಕೆ ಯಾರಿಗೆ ಬೇಕು? ಹೀಗೆ ಕಷ್ಟಗಳ ಅನುಭವಿಸಿ ಸಜ್ಜನರಾಗಲು ಯಾರು ಇಷ್ಟಪಡುತ್ತಾರೆ ಹೇಳಿ? ದುಷ್ಟರಾಗಲು ಮನಸ್ಸಿಲ್ಲದೆ ಇತ್ತ ಸಜ್ಜನರಾಗಿ ಬಾರೀ ತೊಂದರೆಗಳ ಅನುಭವಿಸಲಾಗದೆ ಹೇಗಿರಬೇಕು ಎಂಬ ಗೊಂದಲದಲ್ಲಿ ಬಿದ್ದು ಹೊತ್ತು ಬಂದಂತೆ ಕೊಡೆ ಹಿಡಿಯುವ ಆಟ ಆಡಲು ಕೆಲವರು ನಿರ್ದರಿಸುವಂತಾಗಿದೆ. ಹಾಗೆ ಎಲ್ಲಾ ಸಜ್ಜನರಿಗೆ ಎಲ್ಲಿ ತೊಂದರೆಯಾಗಿದೆ? ಕೆಲವರಿಗೆ ಮಾತ್ರ ತೊಂದರೆ ಆಗಿರಬಹುದು ಎಂದು ಸಮಾಧಾನಪಟ್ಟುಕೊಂಡು ಸಜ್ಜನರ ಹಾದಿ ಕೆಲವರು ತುಳಿದರೆ ಮತ್ತೆ ಕೆಲವರು ಕರ್ಮ ಸಿದ್ದಾಂತಕ್ಕೆ ಕಿಂಚಿತ್ತೂ ಬೆಲೆ ಕೊಡದೆ ಯಾವ ಮಾರ್ಗ ಸುಖ ಕೊಡುತ್ತದೋ ಆ ಮಾರ್ಗ ಹಿಡಿಯುವಂತಾಗಿದೆ. ಸದ್ಯ ಸಜ್ಜನರಾಗಿಯೋ ದುಷ್ಟರಾಗಿಯೋ ಸುಖ ಪಡಬೇಕು ಮುಂದೆ ಏನಾಗುತ್ತದೋ ಆಗಲಿ ಅಂತ ಸುಖದ ಕಡೆ ಕೆಲವರು ಹೆಜ್ಜೆ ಹಾಕಿದ್ದಾರೆ!
ಹಿಂದಿನ ಕಾಲದಿಂದಲೂ ಸಾಧು ಪ್ರಾಣಿಗಳನ್ನು ಬಲಿಕೊಡುತ್ತಿರುವುದು ನೋಡುತ್ತಿದ್ದೇವೆ. ಇದು ಪ್ರಬಲರು ದುರ್ಬಲರನ್ನು, ದುಷ್ಟರು ಸಾದು ಸಜ್ಜನರ ಮೇಲೆ ದೌರ್ಜನ್ಯ ನಡೆಸುವುದರ ಸಂಕೇತ! ಯಾರೂ ಹುಲಿ ಸಿಂಹ ಚಿರತೆ ಆನೆಗಳಂತಹ ಬಲಿಷ್ಟ ಪ್ರಾಣಿಗಳನ್ನು ಬಲಿಕೊಡುವುದಿಲ್ಲ! ಏಕೆಂದರೆ ಅವು ಬಲಿಷ್ಟ ದುಷ್ಟ ಪ್ರಾಣಿಗಳು. ಬಲಿ ಕೊಡಬೇಕೆಂದು ಹಿಡಿಯಲು ಹೋದವರನ್ನೇ ಬಲಿತೆಗೆದುಕೊಂಡುಬಿಡುತ್ತವೆ! ಆದ್ದರಿಂದ ಅವುಗಳ ತಂಟೆ ಹೋಗದೆ ಕುರಿ, ಮೇಕೆ, ಕೋಣ, ಕೋಳಿಗಳ ಬಲಿಕೊಡುವರು. ಏಕೆಂದರೆ ಅವು ಸಾಧು ಪ್ರಾಣಿಗಳು. ಬಲಿಕೊಡುವವರ ಎದುರಿಸಿ ತಪ್ಪಿಸಿಕೊಳ್ಳಲಾಗದೆ ಬಲಿಯಾಗುತ್ತವೆ. ಕೆಲವಕ್ಕೆ ತಪ್ಪಿಸಿಕೊಂಡು ಹೋಗಲು ಬಲಹೀನತೆ ದೌರ್ಬಲ್ಯವಾಗಿದೆ. ಕೆಲವರು ಮೊಲ, ಜಿಂಕೆಗಳನ್ನು ಬೇಟೆಯಾಡುವರಾಗಲಿ ಹುಲಿ ಸಿಂಹಗಳನ್ನಲ್ಲ! ಏಕೆಂದರೆ ಅವು ಸಾದು ಪ್ರಾಣಿಗಳು ಅಪಾಯತರವು ದುಷ್ಟಮೃಗಗಳು ಅಪಾಯಕಾರಿ! ಮಾನವನ ಸಮಾಜದಲ್ಲೂ ಹೀಗೆ ದುಷ್ಟರು, ಸಾಧು ಸಜ್ಜನರನೆ ಆರಿಸಿ ತೊಂದರೆ ಕೊಡುವರು. ಅಂದರೆ ಶೋಷಣೆ ಮಾಡುವರು. ಸಜ್ಜನರು, ದುರ್ಬಲರು ” ಬಡವನ ಕೋಪ ದವಡೆಗೆ ಮೂಲ”, ” ಬಡವ ನೀನು ಮಡುಗಿದಂತಿರು ” ಅಂತ ದುಷ್ಟರ ವಿರುದ್ದ ಪ್ರತಿಭಟಿಸದೆ ತಮಗೆ ಸ್ವಲ್ಪ ಶೋಷಣೆಯಾದರೂ ಸಹಿಸಿಕೊಂಡು ಸುಮ್ಮನಿದ್ದುಬಿಡುತ್ತಾರೆ. ಈ ದೌರ್ಬಲ್ಯವೇ ಶೋಷಕರ ಬಂಡವಾಳ! ಇದರಿಂದನೆ ಸಜ್ಜನರು ದುಷ್ಟರಿಗೆ ಬಲಿಯಾಗುವುದು!
ಪ್ರಬಲರ ಉಳಿವು ದುರ್ಬಲರ ಅಳಿವು. ದುಷ್ಟರ ನಡುವೆ ಸಜ್ಜನರು ಬದುಕಲಾಗದು. ಸಮಾಜದಲ್ಲೂ ಬಲವಿದ್ದವನು ಬದುಕಿಯಾನು ಎಂಬ ಕಾಡಿನ ನಿಯಮ ಅನ್ವಯಿಸುವುದ ಅನೇಕ ಕಡೆ ಕಾಣುತ್ತಿದ್ದೇವೆ! ದುಷ್ಟರು ಇರುವ ವಾತಾವರಣದಲ್ಲಿ ಇದು ಎದ್ದು ಕಾಣುತ್ತದೆ. ಕೆಲವುಕಡೆ ಕಹಳೆಯಾಗಿ ಪ್ರಕಟವಾದರೆ ಬಹಳಷ್ಟುಕಡೆ ಗುಪ್ತಗಾಮಿನಿಯಾಗಿ ಹರಿಯುತ್ತದೆ! ಎಲ್ಲಾ ಸರಕಾರಗಳಲ್ಲೂ ಈ ನಿಯಮವೇ ಪ್ರಾಮುಖ್ಯತೆ ಪಡಿದುಕೊಳುವುದ ತಪ್ಪಿಸಲಾಗದು. ಬುದ್ದಿಯ ಬಲವಿದ್ದವ ದಡ್ಡರ ಅಥವಾ ಕಡಿಮೆ ಬುದ್ದಿವಂತರ, ಅಧಿಕಾರವಿದ್ದವ ಅಧಿಕಾರವಿಲ್ಲದವರ, ಮೇಲಾಧಿಕಾರಿಗಳು ತಮ್ಮ ಕೈ ಕೆಳಗಿನ ನೌಕರರ, ಶಕ್ತಿವಂತ ಶಕ್ತಿಹೀನರ ಶೋಷಣೆ ಮಾಡುವುದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ನಡೆದೇ ಇದೆ. ಸಜ್ಜನರಿಗೆ ಅನೇಕ ಕಾನೂನುಗಳ ಬಲವಿದ್ದರೂ ಅವುಗಳ ಬುದ್ದಿವಂತ ತನಗೆ ಅನುಕೂಲವಾಗುವಂತೆ ಮಾಡಿಕೊಂಡು ಬಲಹೀನರ ಶೋಷಿಸುವುದ ತಪ್ಪಿಸಲಾಗದು. ಒಟ್ಟಾರೆ ಸಜ್ಜನರು, ಬಲಹೀನರು ಶೋಷಣೆಗೆ ಗುರಿಯಾಗುವಂತಾಗಿದೆ.
ಸಜ್ಜನರು ಎಂದರೆ ಭಕ್ತರು, ಸದಾಚಾರಿಗಳು, ಅಹಿಂಸಾವಾದಿಗಳು, ನಿರುಪದ್ರವಿಗಳು, ಪರೋಪಕಾರಿಗಳು, ನೀತಿವಂತರು, ಪ್ರಾಮಾಣಿಕರು, ಸತ್ಯವಂತರು ಒಳ್ಳೆಯ ನಡೆ ನುಡಿಯವರು, ನಿಯಮ ಪಾಲಕರು! ಇವೆ ಇವರ ಬಲಹೀನತೆಯಾಗಿವೆ. ಇಂತಹವರಿಗೆ ದುಷ್ಟರು, ರಾಕ್ಷಸರು ತೊಂದರೆ ಕೊಡುವುದು ಸಜ್ಜನರು ದುಷ್ಟರ ಎದುರಿಸಲಾಗದೆ ಭಗವಂತನ ಮೊರೆ ಹೋಗುವುದು ಆಗ ದುಷ್ಟರಿಗಿಂತ ಬಲವಂತನಾದ ಭಗವಂತನೋ ಆದಿಶಕ್ತಿಯೋ ಅವತರಿಸಿ ದುಷ್ಟ ಸಂಹಾರ ಮಾಡುವುದು ಕಾಣುತ್ತೇವೆ. ದುಷ್ಟರ, ರಾಕ್ಷಸರ ದೇವರೋ ದೇವತೆಗಳೋ ಸಂಹಾರ ಮಾಡಿದರು ಸಜ್ಜನರು ಉಪದ್ರವವಿಲ್ಲದೆ ಬದುಕುವಂತಾಯಿತೆಂದು ಸಂತಸಪಡಲು ದಸರ, ದೀಪಾವಳಿ ಮುಂತಾದ ಹಬ್ಬಗಳ ಆಚರಿಸುವರು! ದುಷ್ಟರಿಗೇ ಶಿಷ್ಟರನ್ನು ಶೋಷಣೆ ಮಾಡಿಯೂ ಎದೆ ಉಬ್ಬಿಸಿಕೊಂಡು ನಡೆಯುವ ಶಕ್ತಿ ಇರಬೇಕಾದರೆ ಸಜ್ಜನರಿಗೆ ಅದಕ್ಕಿಂತಾ ಹೆಚ್ಚು ಶಕ್ತಿಯಿಲ್ಲದಮೇಲೆ ಅವರು ಸಜ್ಜನರು ಏಕೆ ಆಗಬೇಕು? ಅವರು ಸಜ್ಜನರು ಹೇಗೆ ಆದಾರು? ತಮ್ಮನ್ನು ರಕ್ಷಿಸಿಕೊಳ್ಳಲಾಗದ ಆ ಸಜ್ಜನಿಕೆ ಯಾರಿಗೆ ಬೇಕು? ಯಾಕೆ ಸಜ್ಜನರಾಗಲು ಜನ ಇಷ್ಟಪಡಬೇಕು? ದುಷ್ಟರು ಎಷ್ಟೆಲ್ಲಾ ಕಷ್ಟ ಕೊಟ್ಟರೂ ಸ್ವತಃ ಅದನ್ನು ನಿವಾರಿಸಿಕೊಳ್ಳಲಾಗದೆ ಭಗವಂತನ ಮೊರೆ ಹೋಗಲು ಸಜ್ಜನರಾಗಬೇಕೆ? ಸಜ್ಜನರು ಜೀವನ ಪೂರ್ತಿ ನೋವನುಭವಿಸುತ್ತಾ ಬದುಕುವಂತಾಗುವುದು ಭಕ್ತರ ಪರೀಕ್ಷೆಯೆ? ಸಜ್ಜನರು ದುಷ್ಟರ ಸಂಹರಿಸುವ ಶಕ್ತಿಹೊಂದಿದಾಗ ಮಾತ್ರ ಸಜ್ಜನರ ಬದುಕಿಗೆ ಅರ್ಥ ಬರುತ್ತದೆ. ಆಗ ದುಷ್ಟರು ಹೆದರುವರು. ಇಲ್ಲವಾದರೆ ಸಜ್ಜನರು ಹೇಡಿಗಳು ಎನ್ನುವ ಅರ್ಥ ಶಾಶ್ವತವಾಗಿ ಬಂದುಬಿಡುವುದು. ” ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಮ್! ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ!! ” ಎಂದು ಭಗವದ್ಗೀತೆಯಲ್ಲಿ ಬರೆದಿದೆ. ಸಜ್ಜನರು ತಮ್ಮನ್ನು ರಕ್ಷಿಸಿಕೊಳ್ಳಲಾಗದವರು ಸಜ್ಜನರನ್ನು ರಕ್ಷಿಸಲು ಭಗವಂತನೇ ಧರೆಗಿಳಿದು ಬರಬೇಕೆಂದರೆ ಸಜ್ಜನರ ಬದುಕಿಗೆ ಏನು ಬೆಲೆ? ಹೀಗಾದರೆ ಯಾರು ಸಜ್ಜನರಾಗಲು ಇಷ್ಟಪಡುತ್ತಾರೆ? ಸಮಾನರು ಸಮಾನರೊಂದಿಗೆ ಹೋರಾಡುವುದು ಮಾನವಲೋಕದ ಧರ್ಮ. ಆದರೆ ಗೆಲುವು ಸುಲಬ ಅಂತ ಪ್ರಬಲರು ಹೋರಾಡಲು ದುರ್ಬಲರನೆ ಆಯ್ಕೆ ಮಾಡಿಕೊಳ್ಳುವರು. ಸಜ್ಜನರ ಶೋಷಣೆ ನಿಲ್ಲಬೇಕೆಂದರೆ ಭಗವಂತ ದುಷ್ಟರ ದಂಡಿಸುವ ಯೋಗ್ಯತೆಯನ್ನು ಸಜ್ಜನರಿಗೇ ಕೊಡಬೇಕು! ಆಗ ಸಜ್ಜನತೆಗೆ ಬೆಲೆ. ಸಜ್ಜನರು ಎಷ್ಟೇ ಕಷ್ಟ ಎದುರಿಸುತ್ತಾ ಬದುಕುವಂತಾದರೂ ಲೋಕವೆಲ್ಲಾ ಸಜ್ಜನರಾಗಬೇಕೆಂದು ಪ್ರಯತ್ನಿಸುತ್ತಿರುವುದು ವಿಚಿತ್ರ! ದುಷ್ಟರು ಇರುವ ಕಡೆ ಸಜ್ಜನರ ಬದುಕು ನರಕವಾಗುವುದು. ದುಷ್ಟರ ಸಂಖ್ಯೆ ಕಡಿಮೆಯಿರುವುದರಿಂದ ಸಜ್ಜನರು ಉಪದ್ರವವಿಲ್ಲದೆ ಬದುಕುವಂತಾಗಿದೆ. ಎಲ್ಲಾ ಕಡೆ ದುಷ್ಟರು ಇದ್ದಾರೆ ಆದರೆ ಅವರ ದುಷ್ಟತೆಗಳು ಮೇರೆ ಮೀರಿಲ್ಲ! ಜತೆಗೆ ಸಜ್ಜನರ ಸಹನೆಗಳೂ ಇದಕ್ಕೆ ಕಾರಣವಾಗಿವೆ! ಇದರಿಂದ ಜಗತ್ತು ಶಾಂತವಾಗಿರಲು ಸಾಧ್ಯವಾಗಿದೆ. ಏನೇ ಆಗಲಿ ದುಷ್ಟರ ಎದುರಿಸುವ ಶಕ್ತಿ ಸಜ್ಜನರಿಗಿದ್ದರೇನೆ ಸಜ್ಜನತೆಗೆ ಬೆಲೆ!
* ಕೆ ಟಿ ಸೋಮಶೇಖರ ಹೊಳಲ್ಕೆರೆ.