“ಒಂದು ರೊಟ್ಟಿಯ ತುಣುಕು ಕೊಡಿ” “ಏನಾದರೂ ತಿನ್ನಲು ಕೊಡಿ " ಆಕೆ ದೈನ್ಯತೆಯಿಂದ ಬೇಡಿದಳು.
ಗಟ್ಟಿ ಕಲ್ಲಿನ ಅಂಗಳದ ಸುಡು ಬಿಸಿಲಿನಲ್ಲಿ ನಿಂತಿದ್ದಳು ಹುಡುಗಿ. ಮೈಯಲ್ಲಿ ಮಾಂಸದ ಹೆಸರೇ ಇರಲಿಲ್ಲ, ಎಲುಬಿನ ಗೂಡು. ಮಕ್ಕಳಿಗೆ ಅನಾಟಮಿಯ ಪಾಠ ಕಲಿಸುವಷ್ಟು ಅವಳ ಎಲುಬು ನಿಚ್ಚಳವಾಗಿ ಮೈಯಿಂದ ಕಾಣುತ್ತಿದ್ದವು.
“ಅಮ್ಮ ಅವಳಿಗೆ ಸ್ವಲ್ಪ ತಿಂಡಿ ಕೊಡು. ನಿನ್ನೆಯಿಂದ ತಿಂಡಿಗೋಸ್ಕರ ಆಕೆ ಬೀದಿ ಬೀದಿ ಅಲೆಯುತ್ತಿದ್ದಾಳೆ’ ಕನಿಕರದಿಂದ ತನ್ನ ಅಮ್ಮನಿಗೆ ಹೇಳಿದ ಅದಿಲ್.
“ಹೋಗಾಚೆ”- ಅಮ್ಮ ಗಟ್ಟಿ ದನಿಯಿಂದ ಗದರಿದರು. “ನಮ್ಮ ಅಂಗಳದಲ್ಲಿ ನಿಂತು ತಿಂಡಿಗಾಗಿ ಅಂಗಲಾಚಲು ನಿನಗೆ ಎಷ್ಟು ಧೈರ್ಯ? ನಾವೇನಾದರೂ ನಿನಗೆ ಊಟ ಹಾಕುತ್ತೇವೆಂದು ನಿನ್ನ ಅಪ್ಪನ ಬಳಿ ಪಣ ತೊಟ್ಟಿದ್ದೇವಾ”?
“ಗೋದಿ ಕಿಲೋ ಗೆ ಮೂರು ರೂಪಾಯಿ. ಹಾಗಿದ್ದಲ್ಲಿ ಭಿಕಾರಿಗಳಿಗೆ ರೊಟ್ಟಿ ದಾನಮಾಡುವುದಾ’ ಜಪಮಾಲೆ ಹುಡುಕುತ್ತಲೇ ಅಲ್ಲೇ ಕೂತಿದ್ದ ಅಜ್ಜಿ ದನಿ ಸೇರಿಸಿದಳು.
"ಒಂದು ಚೂರು ರೊಟ್ಟಿ" ಆ ಹುಡುಗಿ ಮತ್ತೊಮ್ಮೆ ಕೀರಲು ದನಿಯಿಂದ ಬೇಡಿದಳು.
“ಹೋಗುತ್ತೀಯಾ, ಚಪ್ಪಲಿ ತೆಗೆದು ಬಾರಿಸಲಾ” ಜಪಮಾಲೆಯ ಸರಣಿ ತಪ್ಪಿಹೋದ ಅಜ್ಜಿ ಅಬ್ಬರಿಸಿದರು.
“ಅವಳಿಗೆ ಏನಾದರು ತಿನ್ನಲು ಕೊಡಿ ಅಥವಾ ಏನಾದರೂ ಕೆಲಸನಾದ್ರೂ ಕೊಡಿ’ ಬೆನ್ನಿಗಂಟಿಕೊಂಡಿದ್ದ ಅವಳ ಹೊಟ್ಟೆಯ ಮೇಲೆ ಕನಿಕರದ ದೃಷ್ಟಿಯಿಂದ ನೋಡಿ ಅದಿಲ್ ಪುನ: ತನ್ನ ಅಮ್ಮನ ಬಳಿ ಉಸುರಿದ
ಅಮ್ಮನ ಮುಖದಲ್ಲಿ ಫಕ್ಕನೆ ಬೆಳಗು ಮೂಡಿತು. ಹೌದಲ್ಲವೇ ದೇವರೆ ನನ್ನ ಪ್ರಾರ್ಥನೆ ಕೇಳಿ ಮನೆಕೆಲಸದಾಳು ನನಗೆ ದಯಮಾಡಿಸಿದ್ದಾನೆ ಎಂದಳು “ಅದೇ ಸರಿ ನಾವು ಅವಳನ್ನು ಮನೆಕೆಲಸಕ್ಕೆ ಇಟ್ಟುಕೊಳ್ಳೋಣ”
"ಇಲ್ಲಿ ನೋಡು ಹುಡುಗಿ, ಮನೆಗೆಲಸ ಮಾಡಿಕೊಡುತ್ತೀಯಾ"?
“ಕೆಲಸ? ಏನು ಕೆಲಸ? ಚಿಕ್ಕ ದನಿಯಿಂದ ಹುಡುಗಿ ಪ್ರಶ್ನಿಸಿದಳು” ಕೆಲ ಕ್ಷಣದ ನಂತರ ಅಳುತ್ತ ಪುನ: ತಿಂಡಿಗೋಸ್ಕರ ಬೇಡಿಕೆಯಿಟ್ಟಳು.
“ಸರಿ ನಿನಗೆ ತಿನ್ನಲು ಇಕ್ಕುತ್ತೇವೆ ಆದರೆ ಮೊದಲು ಮನೆಕೆಲಸಗಳನ್ನು ಮಾಡಿ ಕೊಡು” ಅಂದಳು ಅಮ್ಮ, ನಿನ್ನೆಯ ತಂಗಳನ್ನು ಬಿಸಾಕದೆ ಜೋಗಪ್ಪನಿಗೆತ್ತಿಟ್ಟ ಅನ್ನದ ನೆನಪಾಗಿ. ಹಳಸಿದ ಅನ್ನ ಕೊಟ್ಟು ಜೋಗಿಯಿಂದ ಆಶೀರ್ವಾದ ಪಡೆಯುವುದು ಅವಳ ಆಲೋಚನೆ
"ಸಧ್ಯ ದೇವರು ದೊಡ್ಡವನು. ಒಂದು ಕೆಲಸದ ಆಳು ಕಳುಹಿಸಿ ಕೊಟ್ಟಿದ್ದಾನೆ" ಅಂದಳು ಅಲ್ಲೆ ಪರೀಕ್ಷೆಗೆ ಓದುತ್ತಿದ ಆಜ್ರಾ. ಮನೆಕೆಲಸಗಳನ್ನು ಮಾಡಿ ಅವಳು ಸೋತಿದ್ದಳು. ಅದಲ್ಲದೇ ಅವಳ ಶಾಲೆ ಒಂದು ಮೈಲಿ ದೂರ. ಶಾಲೆಯಿಂದ ಅಷ್ಟು ದೂರ ನಡೆದು ಬಂದಮೇಲೆ ಬಟ್ಟೆ ತೊಳೆದು ಬೆನ್ನಿನಲ್ಲಿ ನೋವು ಶುರುವಾಗಿದೆ.
"ಇಲ್ಲಿ ಕೇಳು ಹುಡುಗಿ ನಿನಗೆ ಅಡಿಗೆ ಮಾಡಲು ಬರುತ್ತಾ"? ಅವಳಿಗೆ ಕೆಲಸ ಕೊಟ್ಟು ಸಂಬಳ ಕೊಟ್ಟರೆ ಇದರಿಂದ ನಮಗೆ ಸ್ವಲ್ಪವಾದರೂ ಮೈಯಲ್ಲಿ ಆರಾಮ ಅನಿಸಬೇಕಲ್ಲವಾ??
ಹುಡುಗಿ ಉತ್ತರಿಸಲಿಲ್ಲ. ಅಮ್ಮನ ಕಡೆ ನೆಟ್ಟ ನೋಟದಿಂದ ನೋಡಿದಳು ಇಂತಹ ಸಲ್ಲದ ಪ್ರಶ್ನೆಗಳಿಗೆ ಉತ್ತರವಿಲ್ಲ ಎಂಬಂತೆ. ಅಡಿಗೆ ಮಾಡಕ್ಕೆ ಸ್ಟವ್ ಬೇಕು. ಎಷ್ಟು ಜನರ ಬಳಿ ಸ್ಟವ್ ಇದೆ??
"ಮಾಂಸದ ಅಡುಗೆ ಮಾಡಬಹುದೆ” ಕೇಳಿದಳು ಅಜ್ಜಿ. ಇನ್ನು ಅವಳನ್ನು ಪ್ರಶ್ನಿಸುವ ಅಧಿಕಾರ ತನ್ನದು ಎಂಬಂತೆ.
"ಅಜ್ಜಿ ಮಾಂಸದ ಬಗ್ಗೆ ಆಕೆಗೆ ಯಾಕೆ ಕೇಳುತ್ತಿಯಾ, ಆಕೆ ಹಿಂದು ಆಗಿರಬಹುದು”, ಅದಿಲ್ ತನ್ನಜ್ಜಿಗೆ ಹೇಳಿದ.
“ಏನು ಹಿಂದು ವೆ? ಚುರುಕಾದಳು ಅದಿಲ್ ನ ಅಮ್ಮ. ಹುಡುಗಿ ಮೈ ಮೇಲೆ ಬಟ್ಟೆ ಕೂಡ ಸರಿಯಿಲ್ಲ, ಹಿಂದು ಮುಸ್ಲಿಮ್ ಅಂತ ತಿಳಿಯುವುದು ಹೇಗೆ? ಒಳ್ಳೆದಾಯ್ತು ಅದಿಲ್ ನಮ್ಮನ್ನು ಎಚ್ಚರಿಸಿದ್ದು. ಇಲ್ಲದಿದ್ದರೆ ನಮ್ಮ ಮನೆಯ ದೇವರ ಸಾಮಾನೆಲ್ಲ ಅವಳು ಕದಿಯುತ್ತಿದ್ದಳು.
“ನೀನು ಹಿಂದು ವೇನೆ ಹುಡುಗಿ?
“ಹಿಂದು”? ಹುಡುಗಿಯ ದನಿ ಇನ್ನಷ್ಟು ಉಡುಗಿ ಹೋಗಿತ್ತು.
ಏಂಥಹ ದಡ್ಡ ಹುಡುಗಿ ಎಂದಳು ಅಮ್ಮ ನಗುತ್ತ, ಈ ಹುಡುಗಿ ನನಗೆ ಹುಚ್ಚು ಹಿಡಿಸುತ್ತಾಳೆ ಅಷ್ಟೆ.
ಹುಡುಗಿಯ ಬಗ್ಗೆ ನಡೆಯುತ್ತಿದ್ದ ಮಾತುಕತೆ ಒಳಗಡೆ ಪತ್ತೆದಾರಿ ಕತೆ ಓದುತ್ತಿದ್ದ ಹಿರಿಯಣ್ಣನ ಕಿವಿಗೆ ತಲುಪಿತು. ಪುಸ್ತಕ ಬದಿಗಿಟ್ಟು ಅವನು ತನಿಖೆ ನಡೆಸಲು ಹೊರಗೆ ಬಂದ. ಹುಡುಗಿಯನ್ನು ನೋಡಿ ‘ಬರಿ ಮೂಳೆ ಮತ್ತು ವಯಸ್ಸು ಕೂಡ ಚಿಕ್ಕದು’. "ಹುಡುಗಿ ನಿನಗೆ ಹಿರಿಯಕ್ಕ ಇದ್ದರೆ ಅವಳನ್ನೇ ಕಳುಹಿಸು". ಒಂದು ಚೂರು ರೊಟ್ಟಿಗಾಗಿ ಈಕೆ ಏನಾದರೂ ಮಾಡಲು ತಯಾರಿದ್ದರೆ ಆಕೆಯ ಅಕ್ಕ ಕೂಡ ಬೇರೆಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತಾಳೆ ಎಂಬ ದುರಾಲೋಚನೆ ಆತನದ್ದು.
ನನ್ನ ಹಿರಿಯಕ್ಕ!? ಅಂತ ಚಕಿತಳಾಗಿ ಕೇಳಿದಳು ಹುಡುಗಿ ಏನೂ ಅರ್ಥವಾಗದವಳಂತೆ. ಹುಡುಗಿ ಕುಸಿದು ಕೂತು ಇನ್ನೇನೂ ಅಲ್ಲೇ ಮಲಗುವ ಹಾಗೆ ತೋರಿದಳು
ಆಜ್ರಾಗೆ ಆಟ. ಪುಸ್ತಕದಿಂದ ತಲೆ ಎತ್ತಿ ‘ಹೋ ಇವಳು ಇಲ್ಲೇ ಸದಾಕಾಲ ಠಿಕಾಣಿ ಹೂಡುವ ಅಂದಾಜಿನಲ್ಲಿದ್ದಂತೆ ತೋರುತ್ತಾಳೆ" ಅಂದಳು ನಗುತ್ತ.
“ಒಂದೆ ಒಂದು ರೊಟ್ಟಿ” ಹುಡುಗಿ ಪುನ: ಉಚ್ಚರಿಸಿದಳು
“ಮಹಾ ಜಾಣೆ, ರೊಟ್ಟಿ ರೊಟ್ಟಿ ಅಂತಾಳೆ ವಿನಹ: ಕೆಲ್ಸದ ಬಗ್ಗೆ ಚಕಾರ ಎತ್ತುತ್ತಿಲ್ಲ. ಒಂದು ರೊಟ್ಟಿ ಕೊಟ್ಟೆವೆಂದರೆ ಅವಳು ಇಲ್ಲಿಂದ ಮಾಯ ಅಷ್ಟೆ”
ಅಜ್ಜಿಯ ತನಿಖೆ ಮುಂದುವರೆಯುತು. “ಬೇರೆ ಎಲ್ಲಾದರೂ ಕೆಲ್ಸ ಮಾಡಿದ ಅನುಭವ ಉಂಟೋ? ಮನೆಯಲ್ಲಿ ಹೆಚ್ಚು ಕಡಿಮೆಯಾದರೆ ನಿನ್ನ ಕೃತ್ಯಕ್ಕೆ ಯಾರು ಜವಾಬ್ದಾರಿ?” ಯಾರಿಗೊತ್ತು ಆಕೆಗೆ ಕಳ್ಳರ ಜತೆ ಸಂಪರ್ಕ ಇದ್ದು ರಾತ್ರಿ ನಾವು ಮಲಗಿದ್ದಾಗ ಒಳಗಡೆಯಿಂದ ಚಿಲಕ ತೆಗೆದು ಅವರಿಗೆಲ್ಲ ಒಳ ನುಗ್ಗುವ ಅನುವು ಮಾಡಿಕೊಡಬಹುದು”
ಈಗ ಆ ಹುಡುಗಿಯ ಕಣ್ಣುಗಳು ಅತ್ತ ಇತ್ತ ಹಾರಾಡಿ ಅಡುಗೆ ಕೋಣೆಯತ್ತ ಸರಿದವು. ಅಲ್ಲಿಂದ ಬೇಳೆ ಅಕ್ಕಿ ,ಬೇಯುತ್ತಿರುವ ಖಿಚಡಿಯ ಪರಿಮಳ ಬರುತ್ತಿತ್ತು
"ನೋಡು ಆಕೆಯ ಕಣ್ಣುಗಳು ಹೇಗೆ ಮನೆಯೊಳಗೆ ತಿರುಗಾಡುತ್ತಿದ್ದಾವೆ ಆಕೆ ಕಳ್ಳಿನೆ ಸೈ. ಅವಳ ಕಣ್ಣುಗಳಲ್ಲಿನ ಹುಚ್ಚು ಹೊಳಪು ನೋಡಿ" ಅಂದಳು ಮನ:ಶ್ಯಾಸ್ತ್ರದ ವಿದ್ಯಾರ್ಥಿನಿ ಆದ ಆಜ್ರಾ ತಾನು ಮಹಾ ಎಲ್ಲರ ಮನಸ್ಸು ಓದ ಬಲ್ಲವಳಂತೆ
“ರೊಟ್ಟಿ” ಆ ಹುಡುಗಿ ಕೀರಲು ದನಿಯಿಂದ ಮತ್ತೊಮ್ಮೆ ಕೂಗಿಕೊಂಡಲು
ಹುಡುಗಿಗೆ ಮಾತು ಬರಲ್ಲ ಏನೋ ಮಣಮಣಿಸುತ್ತಿದ್ದಾಳೆ
ಅದೇ ಸರಿ ಎಂದ ಅಲ್ಲಿದ್ದ ಹಿರಿಯಣ್ಣ. "ಹಿಂದಿನ ಕೆಲಸದಾಳು ನಸೀಬನ್‍ದು ಎಷ್ಟು ಉದ್ದ ನಾಲಿಗೆ? ನನ್ನ ಬಗ್ಗೆ ಇಲ್ಲಸಲ್ಲದು ಹೇಳಿ ನೆರೆಹೊರೆಯಲ್ಲಿ ತಿರುಗಾಡಿಕೊಂಡಿದ್ದಳು”
“ನಿನಗೆ ತಿಂಗಳಿಗೆ ಏಳು ರೂಪಾಯಿ ಸಂಬಳ ಕೊಡುತ್ತೇನೆ.. ದಿನವಿಡೀ ಕೆಲಸವಿರುತ್ತೆ”
“ಏಳು ರೂಪಾಯಿಗಳೆ? ಹುಚ್ಚುಗಿಚ್ಚು ಏನಾದರು ತಗುಲಿತೆ ಸೊಸೆಯೇ? ಐದು ರೂಪಾಯಿಗಿಂತ ಹೆಚ್ಚು ದಮಡಿಯಿಲ್ಲ’ ಸರಿಯೆನಿಸಿದ್ರೆ ಇರು ಇಲ್ಲದಿದ್ದರೆ ಜಾಗ ಖಾಲಿ ಮಾಡು ‘ಗುಡುಗಿದರು ಅಜ್ಜಿ
ಹುಡುಗಿ ತಲೆಯಲ್ಲಾಡಿಸಿದಳು
ಈಗ ನಿಧಾನವಾಗಿ ಹೊರಗೆ ಬರುವ ಸರದಿ ಅತ್ತಿಗೆಯದು. “ಮಗುವಿನ ಬಟ್ಟೆ ತೊಳಿಬೇಕು, ಪಾತ್ರೆ ಪಗಡಿ ತೊಳಿಬೇಕು, ಮಗುವಿನ ಹಾಲಿನ ಬಾಟಲ್ ಬಿಸಿ ನೀರಿನಿಂದ ತೊಳೆಯಬೇಕು” ಮೊದಲೆ ತನ್ನ ಕೆಲ್ಸಗಳನ್ನು ಹೇಳಿಬಿಟ್ಟರೆ ಆಮೇಲೆ ಕಿರಿಕಿರಿಯಿರುವುದಿಲ್ಲ ಎಂಬುದು ಅತ್ತಿಗೆ ಯ ಆಲೋಚನೆ.
ಹುಡುಗಿ ಬಿಸಿಲಲ್ಲಿ ಕುಳಿತೇ ಇದ್ದಳು ತನ್ನ ತಲೆಯನ್ನು ಮಂಡಿಯೊಳಗೆ ಇಟ್ಟು.
"ಅಮ್ಮ ಆಕೆಗೆ ಗಿಡಗಳಿಗೆ ನೀರು ಹಾಕಲು ಹೇಳು ನಾನು ಪರೀಕ್ಷೆಗೆ ಓದಬೇಕು" ಅಂದಳು ಆಜ್ರಾ
ನಿಮ್ಮಗಳ ಕೆಲ್ಸ ಎಲ್ಲ ಮುಗಿದ ನಂತರ ಆಕೆಯನ್ನು ನನ್ನ ಬಳಿ ಕಳಿಸಿ. ಅವಳಿಂದ ಮೈ ಮಾಲೀಸು ಮಾಡಿಸಿಕೊಂಡು ಸ್ವಲ್ಪ ನಿದ್ರೆನಾದ್ರೂ ಬರುವುದಾ ನೋಡುತ್ತೇನೆ" ಅಂದಳು ಅಜ್ಜಿ
“ಅವಳು ಅಡಿಗೆ ಮಾಡಿದರೆ ನಾನಂತೂ ಊಣ್ಣುವುದಿಲ್ಲ , ಎಷ್ಟು ಗಲೀಜು ಇದ್ದಾಳೆ’ ಅಂದ ಹಿರಿಯಣ್ಣ "ಅವಳಿಗೆ ಹಿರಿಯಕ್ಕ ಇದ್ದಾಳೆಯೇ ಅಂತ ಕೇಳಿ ಯಾರಾದ್ರೂ"
“ನೀನು ಎಲ್ಲಿರುವುದು? ನಿನ್ನ ಮನೆಯೆಲ್ಲಿ?”
“ಏಳು ಏಳು ಕಸ ಗುಡಿಸು"
“ಅಮ್ಮ ಅವಳಿಗೆ ರೊಟ್ಟಿ ಕೊಡು” ಪುನ: ತನ್ನಮ್ಮನಿಗೆ ಹೇಳಿದ ಅದಿಲ್ ಅಲ್ಲಿಂದ ಹೊರ ಹೊರಟ
“ಮೊದಲು ನನ್ನ ಮಾತು ಕೇಳು’ ಅಂದಳು ಅಜ್ಜಿ ನನ್ನ ನಸ್ಯದ ಡಬ್ಬಿ ತೆರೆಯುತ್ತ” ಇಲ್ಲಿ ನಿನ್ನನ್ನು ಬಲ್ಲವರು ಯಾರಿದ್ದಾರೆ? ಏನಾದರೂ ಕಳುವಾದರೆ ನಾವು ಯಾರನ್ನು ಜವಬ್ದಾರರನ್ನಾಗಿಸುವುದು?”
“ತಟ್ಟೆ ಗ್ಲಾಸ್ ಏನಾದರೂ ಮುರಿದರೆ ಅದನ್ನು ನಿನ್ನ ಸಂಬಳದಲ್ಲಿ ಹಿಡಿಯುತ್ತೇವೆ” ಅಮ್ಮನಿಂದ ಬೆದರಿಕೆ
“ಕೆಲಸದ ಬಗ್ಗೆ ಹೇಳಿದ ಕೂಡಲೆ ಹೇಗೆ ನಿಶ್ಚಲಳಾಗಿ ಕೂತಿದ್ದಾಳೆ ಕಳ್ಳಿ” ಅವಳು ಕೆಲ್ಸ ಮಾಡುತ್ತಾಳೆ ಅಂದ್ರೆ ನಿಮ್ಮೆಲ್ಲರ ಭ್ರಮೆ; ರೊಟ್ಟಿ ತೆಗೊಂಡು ಇಲ್ಲಿಂದ ನಡೆದುಬಿಡುತ್ತಾಳೆ ಅಷ್ಟೆ’
"ಏಳು ಕಸ ಗುಡಿಸು"
"ಮಗುವಿನ ಬಟ್ಟೆ ತೊಳಿ"
ನನ್ನ ಪರವಾನಗಿ ಇಲ್ಲದೆ ಏನನ್ನು ತಿನ್ನ ಬಾರದು
ತಡೀರಿ ನಿಮಗೊಂದು ಆಟ ತೋರಿಸುತ್ತೇನೆ ಅಂದಳು ಆಜ್ರಾ. ಅವಳು ಅಡಿಗೆ ಮನೆಗೆ ಹೋಗಿ ಒಂದು ರೊಟ್ಟಿಯನ್ನು ತಂದು, ಹುಡುಗಿಯ ಬಳಿ ನಡೆದು, ರೊಟ್ಟಿಯನ್ನು ಅವಳ ತಲೆಯ ಮೇಲೆ ಹಿಡಿದಳು.
ಹುಡುಗಿಯಿಂದ ಏನೂ ಪ್ರತಿಕ್ರಿಯೆ ಬರದೆ ಅವಳ ಗದ್ದ ಹಿಡಿದು ಮೇಲೆತ್ತಿದಳು, ಹುಡುಗಿಯ ತಲೆ ನಿರ್ಜೀವವಾಗಿ ಅವಳ ಕೈಯಲ್ಲಿ ವಾಲಿತು
ಆಟಕ್ಕೆ ತೆರೆ ಬಿದ್ದಿತ್ತು
ಮೂಲ ಉರ್ದು: ಜೀಲಾನಿ ಬಾನೋ
ಇಂಗ್ಲಿಷ್: ತಕಿ ಅಲಿ ಮಿರ್ಜ
ಕನ್ನಡಕ್ಕೆ : ಮಾಲತಿ ಶೆಣೈ
ಹೊಟ್ಟೆ ಹಸಿದವರ ಮುಂದೆ ಹೊಟ್ಟೆ ತುಂಬಿದವರ ಆಟ!
ತಮಾಷೆ ಅಂತ ಟೈಟಲ್ ಕೊಟ್ಟು ಕೊನೇಲಿ ಅಳಿಸ್ಬಿಟ್ರಲ್ಲ ಮೇಡಂ… ಸೂಪರ್
Chenagidhe anuvada thamasheya ata savinondige konegondidu
Oh. Can people be so cruel?
ನನಗೂ ಹಾಗೇ ಅನಿಸಿತು – ಮನುಷ್ಯ ಅಷ್ಟು ಕ್ರೂರಿ ಆಗಲಾರ.
ಮನ ಕಲಕಿದ ಬರಹ.. ಚೆನ್ನಾಗಿದೆ.
ಮನಸ್ಸು ನಿಶಬ್ಧವಾಯಿತು. ಸಿರಿವಂತರ ತಮಾಷೆಗೆ ಬಲಿಪಶು ಆ ಹುಡುಗಿ. ಕಲ್ಲು ಕರಗಿಸುವ ಕಥೆ.. ಮನೋಜ್ಞವಾಗಿದೆ.
ಹೊಟ್ಟೆ ಹಸಿದವರ ಮುಂದೆ ಹೊಟ್ಟೆ ತುಂಬಿದವರ ಆಟ .
ಹೊಟ್ಟೆ ಹಸಿದವರ ಮುಂದೆ ಹೊಟ್ಟೆ ತುಂಬಿದವರ ಆಟ .
can humans be that much cruel..?
ಕಥೆಯ ಭಾವಾನುವಾದ ಚೆನ್ನಾಗಿದೆ .
ಕನ್ನಡದ್ದೇ ಕಥೆ ಓದಿದಂತೆನಿಸಿತು.
ಆಯಾ ವಯಸ್ಸಿನ ಮನಸ್ಥಿತಿ , ದೃಷ್ಟಿಕೋನವನ್ನು
ಚೆನ್ನಾಗಿ ಹಿಡಿದಿಡಲಾಗಿದೆ.ಅಮಾನವೀಯವತೆಯ
ಪರಮಾವಧಿ ಎಂಬಂತೆ ಕಂಡರೂ ಅದಿಲ್ ಎಂಬ ಪುಟ್ಟ ಹುಡುಗ ಮಾತ್ರ
ಮಾನವೀಯತೆಯ ಪ್ರತೀಕವಾಗುತ್ತಾನೆ.
ನೆನಪಿನಲ್ಲುಳಿಯುತ್ತಾನೆ.
🙁 🙁 🙁
ಪಂಜು, ನಟರಾಜು ಮತ್ತು ಓದಿ ಪ್ರತಿಕ್ರಿಯಿಸಿದ ಎಲ್ಲರಿಗೋ ಹೃತ್ಪೂರ್ವಕ ಧನ್ಯವಾದಗಳು
ಮಾಲತಿ ಎಸ್
ಇಂತಹ ಜನರೂ ಇರ್ತಾರ..
ತುಂಬಾ ಚೆನ್ನಾಗಿದೆ.
Oh manassu kalakuvantha kathe Mal. Anuvadha antha annisle illa. Chennagide,