ತಪ್ಪಿತಸ್ಥರಿಗೆ ಮರಣದಂಡನೆಯೊಂದೇ ಶಿಕ್ಷೆಯೇ? :ರುಕ್ಮಿಣಿ ಎನ್.

ಕಳೆದ ಡಿಸೆಂಬರ್ ನಲ್ಲಿ ನಡೆದ ದೆಹಲಿ ಅತ್ಯಾಚಾರ ಕೇಸು ಎಲ್ಲರ ಮನದಲ್ಲೂ ಹಸಿಗೋಡೆಯ ಮೇಲೆ ಹರಳು ನೆಟ್ಟಂತಿದೆ. ಸುದ್ದಿ ಹರಡುತ್ತಿದ್ದಂತೆ, ಅತ್ಯಾಚಾರಿಗಳ ವಿರುದ್ಧ ಕೇಳಿ ಬಂದ ಮಾತುಗಳು: “ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು”, “ಲಿಂಗ ನಿಷ್ಕ್ರಿಯಗೊಳಿಸಬೇಕು”. ಹೀಗೆ ಮಾಡಿದರೆ ತಪ್ಪಿತಸ್ಥರಿಗೆ ತಮ್ಮ ತಪ್ಪಿನ  ಅರಿವಾಗಬಲ್ಲುದೆ? ತಪ್ಪನ್ನು ತಿದ್ದಿಕೊಳ್ಳಲು ಅವಕಾಶಗಳೇ ಇಲ್ಲವೇ? ಅವರುಗಳು ಮಾಡಿದ್ದು ದೊಡ್ಡ ತಪ್ಪು ನಾನು ಒಪ್ಪುವೆ. ಆದರೆ, ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡದೆ ಮರಣದಂಡನೆ ವಿಧಿಸುವುದು ಅದೆಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ.

ನಮ್ಮ ಬಸವಣ್ಣನವರು ಒಂದು ಕಡೆ ಹೇಳುತ್ತಾರೆ, “ತೆಗೆದು ಕೊಡೆ ಎಲೆ ಚಾಂಡಾಲಗಿತ್ತಿ ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದರೆ ಕೂಡಲಸಂಗಮನಲ್ಲದೇ ಮತ್ತಿನ್ನಾರು” ಅಂತ. ಗಂಡ-ಹೆಂಡತಿ ರಾತ್ರಿ ಮಲಗಿದ್ದಾಗ, ಕಳ್ಳ ಬಂದು ಬಸವಣ್ಣನ ಹೆಂಡತಿಯ ಕತ್ತಲ್ಲಿದ್ದ ಮಂಗಳಸೂತ್ರವನ್ನು ಕದ್ದೊಯ್ಯುವ ಸಂದರ್ಭದಲ್ಲಿ ಹೆಂಡತಿಗೆ ಹೇಳಿದ ಮಾತಿದು. ಆ ದೇವರನ್ನು ಭಜಿಸಿ ಧ್ಯಾನಿಸಿ, ಅವರ ಹೃದಯವನ್ನೇ ಕದಿಯ ಹೊರಟ ಮಹಾಕಳ್ಳ ನಾನು, ನನ್ನ ಮನೆಗೆ ಮತ್ತೊಬ್ಬ ಕಳ್ಳ ಬಂದರೆ ಅದು ಆ ದೇವರ ಹೊರತು ಬೇರಾರೂ ಅಲ್ಲವೆಂದು ನುಡಿದರು. ಆ ದಿನ ಕಳ್ಳನಿಗೆ ಮಾಡಿದ ಆ ಉಪಚಾರ ಕಳ್ಳನ ಮನಪರಿವರ್ತನೆಗೆ ಕಾರಣವಾಗಿರಬಹುದಲ್ಲವೇ?

ಒಬ್ಬಾತ ಏಸುವಿನ ಬಳಿ ಬಂದು, ” ಸ್ವಾಮಿ, ಕ್ಷಮೆ ಕೇಳಿ ಬಂದ ನನ್ನ ಸಹೋದರನನ್ನು ಎಷ್ಟು ಸಾರಿ ಕ್ಷಮಿಸಬೇಕು” ಎಂದಾಗ ಯೇಸು ಹೇಳಿದರು, “ಏಳಲ್ಲ ಏಳೆಪ್ಪತ್ತು ಬಾರಿ ಕ್ಷಮಿಸು” ಅಂತ. ಅಷ್ಟೇ ಏಕೆ, ಕ್ರೂಜೆಗೇರಿಸುವ ಕೊನೆಯುಸಿರ ಘಳಿಗೆಯಲ್ಲೂ, ” ತಂದೆಯೇ, ಇವರನ್ನು ಕ್ಷಮಿಸು, ತಾವೇನು ಮಾಡುತ್ತಿರುವರು ಎಂಬುದು ಇವರು ಅರಿಯರು” ಎಂದು ಕ್ಷಮೆಯ ಸಂದೇಶವನ್ನು ಜಗತ್ತಿಗೆ ಸಾರಿದ ಕರುಣಾಮಯಿ ಆ ಏಸು.

ವಾಲ್ಮಿಕಿಗೆ ಕ್ಷಮೆ ನೀಡದೆ ಮನಪರಿವರ್ತನೆಗೆ ಅವಕಾಶ ಸಿಗದೆ ಹೋಗಿದ್ದರೆ ಇವತ್ತು ರಾಮಾಯಣ ನಮ್ಮೆಲ್ಲರಿಗೂ ಓದಲು ಸಿಗುತ್ತಿರಲಿಲ್ಲವೆನೋ. ನಮ್ಮ ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿ ಕೂಡ ಹೇಳಿದ್ದರು, “ಪಾಪವನ್ನು ದ್ವೇಷಿಸು, ಪಾಪಿಯನ್ನಲ್ಲ”ವೆಂದು ( Hate the sin not the sinner ). ಇಂತಹ ಮಹಾಪುರುಷರು ಕ್ಷಮೆಯ ಬಗ್ಗೆ ವ್ಯಾಖ್ಯಾನ ನೀಡಿದಲ್ಲಿ, ನಾವು ಕೂಡ ಕ್ಷಮಿಸಿ, ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡುವಲ್ಲಿ ಅರ್ಥವಿದೆ ಅಲ್ಲವೇ? ಅಪ್ರಾಪ್ತ ವಯಸ್ಕರರು ಹಾಗೂ ಮೌಲ್ಯಗಳ ಬಗ್ಗೆ ಜ್ಞಾನ ಇಲ್ಲದಿರುವ ಇಂತಹ ಮಕ್ಕಳು ಮಾಡಿದ ತಪ್ಪನ್ನು ತಿದ್ದಿಕೊಳ್ಳುವಲ್ಲಿ ಅವಕಾಶ ನೀಡುವಲ್ಲಿ ನ್ಯಾಯವಿದೆಯಲ್ಲವೇ ಸ್ನೇಹಿತರೆ?

ಇಂತಹ ಒಂದು ಪ್ರಯತ್ನ ನನ್ನಿಂದ, ನಿಮ್ಮಿಂದ, ನಮ್ಮ ಸಾಮಾಜಿಕ ಸಂಸ್ಥೆಗಳಿಂದ ಶುರುವಾಗಬೇಕು. ನಾವು ಮನೆಯಲ್ಲಿ ಮಕ್ಕಳೊಂದಿಗೆ ಸ್ನೇಹ ಭಾವದಿಂದ ವರ್ತಿಸಬೇಕು, ಅವರ ಇಷ್ಟ ಕಷ್ಟಗಳನ್ನು ಅರಿತು ಸ್ಪಂದಿಸಬೇಕು. ದಿನಕ್ಕೊಮ್ಮೆ, “ಮಗನೇ ಇವತ್ತು ಶಾಲೆಯಲ್ಲಿ ಏನೆಲ್ಲಾ ಮಾಡಿದೆ” ಎಂದು ಕೇಳುತ್ತ ಮಾತು ಮುಗಿದ ನಂತರ ಮಗನೇ, “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿದರೆ ಸಾಕು ಮಕ್ಕಳು ನಿಮ್ಮ ಆಪ್ತರಾಗಿಬಿಡುತ್ತಾರೆ. ಇಂತಹ ಪ್ರಕ್ರಿಯೆಗಳಿಂದ ಮಕ್ಕಳ ಮೇಲೆ ನಿಗಾ ಇಡಲು ಸಾಧ್ಯವಾಗಬಹುದು. ಮಕ್ಕಳು ತಿಳಿಯದೇ ತಪ್ಪು ದಾರಿಯಲ್ಲಿ ನಡೆಯುವ ಲಕ್ಷಣಗಳು ಕಂಡಲ್ಲಿ, ಅವರಿಗೆ ಪ್ರೀತಿಯಿಂದ ಸಲಹೆ ಕೊಟ್ಟರೆ, ತಮ್ಮ ತಪ್ಪನ್ನು ತಿದ್ದಿ ನಡೆಯುತ್ತಾರೆ. ಮಕ್ಕಳನ್ನು ಹೊಡೆಯಲು, ನಿಂದಿಸಲು ಹೊರಟರೆ ಮಕ್ಕಳು ಭಯಬಿದ್ದು ಸುಳ್ಳು ಹೇಳಲು ಶುರು ಮಾಡುವುದಲ್ಲದೇ ತಂದೆ-ತಾಯಿಯೊಂದಿಗಿನ ನಂಟು ಕಡಿಮೆಯಾಗುತ್ತ ಹೋಗುತ್ತದೆ.

ಮಕ್ಕಳ ಪ್ರಗತಿ ವಿಚಾರಿಸಲು ಪಾಲಕರು ಸಮಯ ಬಿಡುವು ಮಾಡಿಕೊಂಡು ಆಗಾಗ ಶಾಲೆಗಳಿಗೆ ಭೇಟಿ ನೀಡಿ ವಿಚಾರಿಸಿದರೆ ತುಂಬಾ ಒಳ್ಳೆಯದು. ಹಾಗೆಯೇ ಶಿಕ್ಷಣ ಸಂಸ್ಥೆಗಳಲ್ಲಿ “ಮೌಲ್ಯ ಶಿಕ್ಷಣ” ಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಪ್ರಾರ್ಥನೆ ಮಾಡುವುದನ್ನು ಹೇಳಿಕೊಡಬೇಕು ಅವರು ಹೇಳುವ ಭಜನೆ, ಶ್ಲೋಕ, ಹಾಗೂ ಕೀರ್ತನೆಗಳ ಅರ್ಥವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಜೊತೆಗೆ ದೇಶ ಪ್ರೇಮ, ದೇಶದ ಚಿಂತನೆ, ಸಾಮಾಜಿಕ ಚಿಂತನೆ ಹಾಗೂ ಸಾಮಾಜಿಕ ಕಾಳಜಿಯನ್ನು ಮಕ್ಕಳಲ್ಲಿ ತುಂಬಬೇಕು.

ಬಂಧುಗಳೇ, ಇಂತಹ ಚಿಕ್ಕ-ಚಿಕ್ಕ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುವುದು ತುಂಬಾ ಜರೂರಿಯಾಗಿದೆ. ದುಡ್ಡು ಗಳಿಕೆಯ ಅಬ್ಬರದಲ್ಲಿ ಇಂದು ಗಂಡ-ಹೆಂಡತಿಯರಿಬ್ಬರೂ ದುಡಿಯುತ್ತಿರುವುದು, ಮನೆಗೆ ಸುಸ್ತಾಗಿ ಬಂದು ತಿಂದು ಮಲಗಿ ಬಿಡುವುದು. ಯಾವಾಗಲೋ ಸಮಯ ಸಿಕ್ಕರೆ ಅದನ್ನೂ ಕೂಡ ಸಿನೆಮಾ, ಶಾಪಿಂಗ್ ಅಂತ ಕಾಲ ಕಳೆದುಬಿಡುವುದರಲ್ಲಿಯೇ ಬಿಜಿಯಾಗಿವೆ ಇಂದಿನ ಬೀಜಿ ಡೇ ಗಳು. ನಾವು, ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಷ್ಟೆಲ್ಲ ಕಷ್ಟ ಪಡ್ತಿದೀವಿ ನಿಜ. ಆದರೆ ನಾಳೆಯ ಚಿಂತೆಯಲ್ಲಿ ಮಕ್ಕಳ ಪ್ರಸ್ತುತ ದಿನಚರಿಯತ್ತ ಗಮನ ಹರಿಸದಿರುವುದೇ ಮಕ್ಕಳ ಅನಾರೋಗ್ಯಕರ ಬೆಳವಣಿಗೆಗೆ ಹಾಗೂ ಮುಂದೊಂದಿನ ಆಗುವ ಇಂತಹ ಅನಾಹುತಗಳಿಗೂ ಕಾರಣ.

ಹಾಗಾಗುವುದು ಬೇಡ ಬಂಧುಗಳೇ, ಇಂದಿನ ನಮ್ಮ ಮಕ್ಕಳೇ ಭವಿಷ್ಯದ ಉಜ್ವಲ ಸಂಪತ್ತು, ಆ ಉಜ್ವಲ ಸಂಪತ್ತಿಗಾಗಿ ನಾವು ಇಂದಿನ ದಿನ ಅವರನ್ನು ಆರೋಗ್ಯಕರ ಬೆಳವಣಿಗೆಯಲ್ಲಿ ತೊಡಗಿಸುವುದು, ನಮ್ಮ ಮಕ್ಕಳನ್ನು ಸಂರಕ್ಷಿಸುವುದು ಇವೆಲ್ಲ ನಮ್ಮ ನಿಮ್ಮ ಆದ್ಯ ಕರ್ತವ್ಯ. ಮೇಲೆ ಹೇಳಿದ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಹೋದಲ್ಲಿ ಸಮಾಜದಲ್ಲಿ ಭುಗಿಲೇಳುವ ಇಂತಹ ಸಮಸ್ಯೆಗಳ ಬೇರುಗಳನ್ನು ಬುಡ ಸಮೇತ ಕಿತ್ತೊಗೆಯಬಹುದು. ಹಾಗೂ ಇಂತಹ ಒಳ್ಳೆಯ ಪ್ರಕ್ರಿಯೆಗಳಿಂದ ದೆಹಲಿ ರೇಪ್ ಕೇಸ್ ಗಳಂತಹ ಘೋರ ಅನಾಹುತಗಳನ್ನು ತಪ್ಪಿಸಬಹುದು.

ಅಲ್ಲದೇ ದೆಹಲಿ ಕೇಸ್ ನ ಅತ್ಯಾಚಾರಿಗಳಿಗೆ ಮರಾಣದಂಡನೆಯೊಂದೇ ಶಿಕ್ಷೆಯಲ್ಲ. ಅಂತಹ ಮಕ್ಕಳನ್ನು “Rehabilitate” ಮಾಡುವುದರ ಮೂಲಕ ಅವರ ಮನವನ್ನು ಪರಿವರ್ತನೆಗೊಳಿಸಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯನ್ನಾಗಿ ಕೊಡಬಹುದು ಎಂದೆನಿಸಿ ಈ ಒಂದು ಪುಟ್ಟ ಲೇಖನ.

ನಿಮ್ಮ ಮನೆ ಮಗಳು

ರುಕ್ಮಿಣಿ ಎನ್.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

good………….

Vasuki
11 years ago

ರೇಪ್ ಮನಸ್ಥಿತಿಯ ಬಗ್ಗೆ ವಿಶ್ಲೇಷಿಸಿರುವ ನೀವು ಇದಕ್ಕೆ ಆಧುನೀಕರಣ / ನಗರೀಕರಣ ಮುಖ್ಯ ಕಾರಣ ಎನ್ನುವ ರೀತಿ ಬಿಂಬಿಸಿರುವುದು ಸರಿಯಿಲ್ಲ ಎಂದು ನನ್ನ ಅಭಿಪ್ರಾಯ. ಬಹುತೇಕ ರೇಪ್ ಪ್ರಕರಣಗಳು ಗ್ರಾಮೀಣ ಭಾಗಗಳಲ್ಲಿ ನಡೆಯುತ್ತವೆ (ಬಹಳಷ್ಟು ವರದಿ ಕೂಡ ಆಗೋದಿಲ್ಲ!) ರೇಪ್ ನಡೆಯಲು ಅತೀ ಮುಖ್ಯ ಕಾರಣ ಹೆಣ್ಣನ್ನು ಸರಿಸಮಾನ ಎಂದು ಒಪ್ಪದಿರುವ ಮನಸ್ಥಿತಿ. "ದುಡ್ಡು ಗಳಿಕೆಯ ಅಬ್ಬರದಲ್ಲಿ ಇಂದು ಗಂಡ-ಹೆಂಡತಿಯರಿಬ್ಬರೂ ದುಡಿಯುತ್ತಿರುವುದು" ಎನ್ನುವುದರ ಬಗ್ಗೆ ನನ್ನ ಆಕ್ಷೇಪ ಇದೆ. ಹೆಂಡತಿ ದುಡಿಯಬಾರದು ಅಂತ ಅರ್ಥವೇ? ಅಥವಾ ಗಂಡನಷ್ಟು ಪ್ರೀತಿ ತಮ್ಮ ಉದ್ಯೋಗದ ಮೇಲೆ ಇರಬಾರದು ಅಂತಲೇ? ತಂದೆ ತಾಯಿ ಇಬ್ಬರೂ ದುಡಿಯುತ್ತಿರುವ ಕುಟುಂಬದಲ್ಲಿ ಬೆಳೆದ ಮಕ್ಕಳು ತನ್ನ ತಾಯಿಯೂ ತಂದೆಯಷ್ಟೇ ಸಬಲಳು ಎನ್ನುವ ಮನೋಭಾವ ಹೊಂದುವ ಸಾಧ್ಯತೆ ಹೆಚ್ಚು ಅಲ್ಲವೇ?

ಶ್ರೀವತ್ಸ ಕಂಚೀಮನೆ.

ನಮಸ್ತೇ ರುಕ್ಮಿಣಿ ಜೀ –
ಬರಹ ಚೆನ್ನಾಗಿದೆ…ವಿಷಯದ ಬಗ್ಗೆ ನನ್ನಲ್ಲಿ ಸ್ವಲ್ಪ ಗೊಂದಲವಿದೆ…
ಕ್ಷಮೆ ಒಳ್ಳೆಯದೇ…ಆದರೆ ಯಾವೆಲ್ಲ ವಿಷಯಗಳಲ್ಲಿ ಕ್ಷಮೆ ಒಳ್ಳೆಯದು ಮತ್ತು ಎಲ್ಲಿ ಶಿಕ್ಷೆ ಅನಿವಾರ್ಯ ಎಂಬುದು ಪ್ರಶ್ನೆ…
ಭಯವು ಮಾತ್ರ ಧೈರ್ಯವಾಗಿ ಉಸಿರಾಡ್ತಾ ಇರೋ ಮತ್ತು ತಪ್ಪುಗಳಿಗೆ ಬ್ರಷ್ಟಾಚಾರದ ಶ್ರೀರಕ್ಷೆ ಇರೋ ಈ ಕಾಲಘಟ್ಟದಲ್ಲಿ ಕೆಲವೊಮ್ಮೆ ಕ್ಷಮೆ ದುಬಾರಿಯಾಗುತ್ತೇನೋ ಅನ್ನುವುದು ನನ್ನ ಅನುಮಾನ…
ಎನಿ ವೇ ಚೆಂದದ ಬರಹ…ಹೀಗೇ ಬರೆಯುತ್ತಿರಿ…

ರಾಘವೇಂದ್ರ ತೆಕ್ಕಾರ್
ರಾಘವೇಂದ್ರ ತೆಕ್ಕಾರ್
11 years ago

ದೇಶದ ನ್ಯಾಯ ವ್ಯವಸ್ಥೆಯ ಅಂತಿಮ ಶಿಕ್ಷೆ ಗಲ್ಲು. ಹಾಗೆ ನೋಡಿದಲ್ಲಿ ಇದು ಭಾರತದಲ್ಲಿ ವಿರಳ, ( ಅದಕ್ಕಾಗೆ ಈ ದೇಶದಲ್ಲಿ  ಈ ಪರಿಯ ಬ್ರಷ್ಟಾಚಾರ, ಅನ್ಯಾಯಗಳೋ ಏನೊ ನಾ ಕಾಣೆ),. ಇರಲಿ. ಗಲ್ಲು ಶಿಕ್ಷೆ ಎಂಬುದನ್ನು ಅಪಾರಾಧಿಗೆ ಶಿಕ್ಷೆ ಎಂಬುದಷ್ಟೆ ಸೀಮಿತ ಪರಿಧಿಯಲ್ಲಿ ನೋಡಲಾಗದು. ಇದು ಕ್ರೂರತನಕ್ಕೆ ಕೊಡೊ ಎಚ್ಚರಿಕೆಯ ಕರೆಘಂಟೆ ಎಂದು ವಿಸ್ತೃತ ರೂಪದಲ್ಲಿ ಅವಲೋಕಿಸುವದೋಳಿತು. ಇಂತದ್ದೊಂದು ಶಿಕ್ಷೆ ಇಲ್ಲವೆಂದೆ ಆದಲ್ಲಿ ಅದರ ಪರಿಣಾಮ ಏನಾಗಬಹುದು??? ಎಂದು ಯೋಚಿಸಿದರೆ ಇದರ ಅಗತ್ಯತೆ ಮನಗಾಣುವದು ಸಾಧ್ಯ.ಗಲ್ಲು ಶಿಕ್ಷೆಯಾದರೂ ಅದನ್ನು ಪ್ರಶ್ನಿಸುವಂತ ಕೊನೆಗೆ ಕ್ಷಮಾಧಾನಕ್ಕೂ ಅವಕಾಶ ಕೊಟ್ಟಂತ ದೇಶ ನಮ್ಮದು. ಆದುದರಿಂದ ಸಾವನ್ನು ಸಂಭ್ರಮಿಸುವ ವ್ಯವಸ್ಥೆ ನಮ್ಮದಲ್ಲ.ಚಿಂತಿಸಬೇಕಾದ್ದಿಲ್ಲ ನಿರಪರಾಧಿ/ಗಲ್ಲಿಗೆ ಅನರ್ಹನಾದವ ಗಲ್ಲು ಏರುವ ಸಂಭವವೇ ಇಲ್ಲದಷ್ಟು ನಮ್ಮ ನ್ಯಾಯ ವ್ಯವಸ್ಥೆ ಗಟ್ಟಿಯಾಗಿದೆ ಎಂದೆ ನಂಬಿಕೊಂಡು ಮುನ್ನಡೆಯೋಣ, 

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ನಿಮ್ಮ ಲೇಖನದ ತಲೆಬರಹ ಮತ್ತು ನೀವು ಹೇಳಿರುವ ಕ್ಷಮೆಯ ಬಗೆಗೆ ಓದಿದೆ. ಈ ಲೇಖನ ಓದುವ ಮೊದಲು ಯಾವುದೋ ಕನ್ನಡ ಸುದ್ದಿ ವಾಹಿನಿಯಲ್ಲಿ ನೋಡಿದ ಸುದ್ಧಿಃ ಜೈಲಿನಲ್ಲಿರುವ ವೀರಪ್ಪನ್ ಸಂಗಡಿಗರಿಗೆ ಕ್ಷಮೆ ಕೊಡಬೇಕು. ಅವರ ಮನೆಯವರು ತುಂಬಾ ತೊಂದರಯಲ್ಲಿ ಇದ್ದಾರೆ. ನನಗನಿಸಿದ್ದುಃ ಅವರು ಕೊಂದ ೨೨ ಜನರ ಮನೆಯ ಸ್ಥಿತಿ ಹೇಗಿದೆ ಎಂದು ಅವರು ಯೋಚಿಸಿದ್ದಾರೆಯೇ? ಸತ್ತ ಆ ಜನರನ್ನು ಹಿಂದೆ ತರುತ್ತಾರೆಯೇ?  ತಮ್ಮ ಕರ್ತವ್ಯ ಮಾಡುತ್ತಿದ್ದ ಜನರ ಬಲಿ ತೆಗೆದುಕೊಂಡವರಿಗೆ ಕ್ಷಮೆಯೇ?
ಇನ್ನು ಮಾನಹರಣ ಮಾಡಿದ ಆ ಹುಡುಗನಿಗೆ ಪಶ್ಚಾತ್ತಾಪವೇ ಇಲ್ಲವೆಂದು ಓದಿದ ನೆನಪು. ಅಂತಹ ಜನಗಳಿಗೆ ಕ್ಷಮೆಯೇ? ಆತ ಇನ್ನೊಂದು ಹೆಣ್ಣಿನ ಬಾಳು ಹಾಳು ಮಾಡುವುದಿಲ್ಲವೆಂದು ಯಾವ ಭರವಸೆ?
ಅಂಗೂಲಿಮಾಲ ಬದಲಾಗಿರ ಬಹುದು, ವಾಲ್ಮಿಕಿ ಬದಲಾಗಿರಬಹುದು. ಆದರೆ ಬುದ್ದ ಮತ್ತು ನಾರದರಂತಹ ಬದಲಾವಣೆ ತರುವ ಜನರಿದ್ದಾರೆಯೇ ಈಗಿನ ಸಮಾಜದಲ್ಲಿ?

Prasad V Murthy
11 years ago

ಥಾಟ್ ಪ್ರವೋಕಿಂಗ್ ಆಗಿದೆ ರುಕ್ಮಿಣಿ, ಪ್ರಸ್ತುತ ಪಡಿಸಿದ ರೀತಿ ಚೆನ್ನಾಗಿದೆ. 'ಕ್ಯಾಪಿಟಲ್ ಪನಿಶ್ಮೆಂಟ್' ಬಗ್ಗೆ ಮಾತನಾಡಿದ್ದೀರಿ, ಅದಕ್ಕೆ ದೆಹಲಿಯ ಅತ್ಯಾಚಾರ ಪ್ರಕರಣವನ್ನು ಉದಾಹರಣೆಯಾಗಿತ್ತಿದ್ದೀರಿ. ಭಾರತ ಶಾಂತಿಪ್ರಿಯ ರಾಷ್ಟ್ರ, ನಾವು ಆಗಂತುಕರನ್ನೂ ಅತಿಥಿಗಳೆಂದೇ ಸತ್ಕರಿಸುವವರು ಎಲ್ಲವೂ ಸರಿ. ಆದರೆ ಸಹನೆಗೊಂದು ಮಿತಿ ಇದೆ, ಅತಿಯಾದ ಸಹನೆ ಪ್ರತಿಭಟಿಸಲಾಗದ ದೌರ್ಬಲ್ಯವಾದೀತಷ್ಟೆ. ದೆಹಲಿಯ ದಾಮಿನಿಯನ್ನು ಅಷ್ಟು ಕ್ರೂರವಾಗಿ ಹಿಂಸಿಸಿ ಬಲಾತ್ಕರಿಸಿ ಕೊಲ್ಲುವಾಗ ಆ ಖೈದಿಗಳಲ್ಲಿರದಿದ್ದ ಮನುಷ್ಯತ್ವವನ್ನು ಅವರು ಬೇರೆಯವರಿಂದಲೂ ಬಯಸುವುದು ಎಷ್ಟರ ಮಟ್ಟಿಗೆ ಸರಿ? ಮನುಷ್ಯರಿಗಷ್ಟೇ ಮಾನವೀತೆಯ ರಕ್ಷೆ, ರಾಕ್ಷಸರಿಗೆ ಮೃಗೀಯ ವರ್ತನೆಯೇ ಸರಿ!
ಈಗ ನೀವು ಕಸಬ್ ಪ್ರಕರಣವನ್ನೇ ತೆಗೆದುಕೊಳ್ಳಿ, ಆತನನ್ನು ಮುಂಬೈ ದುರಂತದ ನಂತರ ಅವನನ್ನು ಗಲ್ಲಿಗೇರಿಸುವವರೆಗಿನ ಖರ್ಚು ವೆಚ್ಚಗಳನ್ನು ಘಣನೆಗೆ ತೆಗೆದುಕೊಂಡರೆ ಸರಿ ಸುಮಾರು ೨೫ ಕೋಟಿಗಳಷ್ಟಾಗಿರಬಹುದು! ಅವನನ್ನು ಗಲ್ಲಿಗೇರಿಸದೆ ಇನ್ನೂ ೩೦-೪೦ ವರ್ಷಗಳೋ ಅವನನ್ನು ಸಾಕಿದ್ದರೆ ದೇಶದ ಮೇಲೆ ಬರುತ್ತಿದ್ದ ಆರ್ಥಿಕ ಹೊರೆಯನ್ನು ಅಂದಾಜಿಸಲು ಸಾಧ್ಯವೇ? ಅಷ್ಟನ್ನೂ ಭರಿಸಿದ ನಂತರ ಮನ ಪರಿವರ್ತನಾ ಶಿಬಿರಗಳಲ್ಲಿ ಪಾಲ್ಗೊಂಡು ಒಳ್ಳೆಯವನಂತೆ ಸೋಗು ಹಾಕಿ ಬಿಡುಗಡೆಗೊಂಡನು ಎಂದಿಟ್ಟುಕೊಳ್ಳಿ. ನಂತರದಲ್ಲಿ ಮತ್ತೊಂದು ಭಯೋತ್ಪಾದಕ ವಿದ್ವಂಸಕ ಕೃತ್ಯದಲ್ಲಿ ಭಾಗಿಯಾಗುತ್ತಿರಲಿಲ್ಲ ಎಂಬ ನಂಬಿಕೆಯಾದರೂ ಏನು? ಖೈದಿಗಳು ಮತ್ತೆ ಮತ್ತೆ ಅಪರಾಧಗಳನ್ನು ಮಾಡುವುದು ಸಾಮಾನ್ಯ, ಅಂದ ಮಾತ್ರಕ್ಕೆ ಯಾವ ಖೈದಿಗಳು ಬದಲಾವಣೆ ಕಂಡೇ ಇಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಹಾಗೆ ಬದಲಾದವರ ಪ್ರಮಾಣ ತೀರ ನಗಣ್ಯ! ಇದು ಎಲ್ಲಾ ಖೈದಿಗಳಿಗೂ ಅನ್ವಯ. 'ಕ್ಯಾಪಿಟಲ್ ಪನಿಶ್ಮೆಂಟ್'ನ ಭಯ ಕ್ರೈಮ್ ರೇಟ್ ಅನ್ನು ಕಡಿಮೆ ಮಾಡಬಲ್ಲದು ಆದರೆ ನ್ಯಾಯಾಂಗದ ವಿಧಿ ವಿಧಾನಗಳು ಚುರುಕು ಪಡೆಯಬೇಕು. ಪ್ರಕರಣದ ಬಿಸಿ ನಂದುವ ಮೊದಲೇ ಎಲ್ಲಾ ಕಾನೂನು ರೀತ್ಯ ವಿಧಾನಗಳು ಮುಗಿದು ತಪ್ಪಿತಸ್ಥರನ್ನು ಗಲ್ಲಿಗೇರಿಸಿದ್ದರೆ ಭಯದಿಂದಾದರೂ ಮುಂದಾಗುವ ಸಂಭಾವ್ಯ ಅಪರಾಧಗಳು ತಪ್ಪುತ್ತವೆ! ಅಪರಾಧಗಳು ಅಪರಾಧಿಯ ಮಾನಸಿಕ ಅಸ್ಥಿರತೆಯಿಂದ ನಡೆಯುತ್ತವೆ ಎಂಬುದನ್ನು ನಂಬುವುದಿಲ್ಲ, ಅದೊಂದು ಪೈಶಾಚಿಕ ನಡಾವಳಿಯಾಗಿರುತ್ತದೆ.
'ಕ್ಯಾಪಿಟಲ್ ಪನಿಶ್ಮೆಂಟ್' ನಲ್ಲಿ ಒಂದು ಅಪಾಯವೆಂದರೆ ಅದು ಮತದಾರರನ್ನು ತನ್ನೆಡೆಗೆ ಸೆಳೆಯುವ ಸರ್ಕಾರದ ಅಸ್ತ್ರವಾಗಬಾರದಷ್ಟೆ, ಈಗ ನಮ್ಮ ಕೇಂದ್ರ ಸರ್ಕಾರದ ಅಸ್ತ್ರವಾಗಿರುವಂತೆ! ಮತ್ತು ಅದು ನಮ್ಮ ಕೈಯ್ಯಲ್ಲಿದೆ ಎಂದ ಮಾತ್ರಕ್ಕೆ ಹೇಗೆ ಬೇಕೋ ಹಾಗೆ ಉಪಯೋಗಿಸದೇ ಪ್ರಕರಣದ ಕ್ರೂರತೆಯನ್ನು ಮಾನದಂಡವಾಗಿ ತೆಗೆದುಕೊಂಡು, ಅತೀ ಕ್ರೂರವೆನಿಸುವ ಅಪರಾಧಗಳಿಗಷ್ಟೇ 'ಕ್ಯಾಪಿಟಲ್ ಪನಿಶ್ಮೆಂಟ್' ಅನ್ನು ಜಾರಿಗೊಳಿಸುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.
– ಪ್ರಸಾದ್.ಡಿ.ವಿ.
 

Raghunandan K
11 years ago

ರುಕ್ಮಿಣಿಯವರೇ ಪಂಜುವಿನಲ್ಲಿನ ನಿಮ್ಮ ಬರಹಕ್ಕಾಗಿ ಅಭಿನಂದನೆ.
ನಿಮ್ಮ ಬರಹದಲ್ಲಿನ ವಿಷಯಗಳಲ್ಲಿ ಇನ್ನೂ ಸ್ಪಷ್ಟತೆ ಬೇಕಿತ್ತೇನೋ ಅನ್ನಿಸಿದೆ, ಇದು ನನ್ನ ಮಿತಿಯೂ ಇರಬಹುದು.
ಮಕ್ಕಳನ್ನ ಬೆಳೆಸುವಲ್ಲಿನ ಸುಧಾರಣೆ ಸಮಾಜದ ಒಂದು ಭಾಗ ನಿಜವಾದರೂ, ತಪ್ಪಿತಸ್ತರಿಗೆ ಶಿಕ್ಷೆ ಕೊಡದಿರುವುದು ಸುಧಾರಣೆಯನ್ನು ಮೀರಿಯೂ ಪ್ರಚೋದಿಸಬಹುದು. ತಪ್ಪುಗಳಿಗೆ ಕಾರಣ ಹುಡುಕಿ ಅದನ್ನ ನಿವಾರಿಸಲು ಪ್ರಯತ್ನಿಸುವುದು ಎಷ್ಟು ಮುಖ್ಯವೋ ಆದ ತಪ್ಪಿಗೆ ಪ್ರತಿಕ್ರಿಯಿಸುವುದೂ ಕೂಡ ಅಷ್ಟೇ ಮುಖ್ಯವಾಗುತ್ತದಲ್ಲವೇ..?? 
ಪ್ರತಿಕ್ರಿಯೆಯ ಪ್ರಮಾಣ ತಪ್ಪಿನಿಂದ ಸಾಮಾಜಿಕವಾಗಿ ವೈಯಕ್ತಿಕವಾಗಿ ಉಂಟುಮಾಡಿದ ಪರಿಣಾಮಗಳ ಮೇಲಲ್ಲವೇ? ವೈಯಕ್ತಿಕ ಪರಿಣಾಮದ ತಪ್ಪಿಗೆ ಕ್ಷಮೆ ಸೂಕ್ತವಾದರೂ, ಸಾಮಾಜಿಕ ಆಂದೋಳನೆ ಉಂಟುಮಾಡಿದ ಅನಾಹುತಗಳಿಗೂ ಕ್ಷಮೆಯೇ ಪರಿಹಾರವಾಗಬಲ್ಲದೆ..?? 
ಉತ್ತರವನ್ನ ಕಾಲ ಹೇಳುತ್ತದೆ, ಮತ್ತಷ್ಟು ಬರಹಗಳು ನಿಮ್ಮಿಂದ ಬರಲಿ…
ಒಳಿತಾಗಲಿ.

Rukmini Nagannavar
Rukmini Nagannavar
11 years ago

ಸಹೋದರ Vasuki,  ರೇಪ್ ಮನಸ್ಥಿತಿಗೆ ಆಧುನೀಕರಣ / ನಗರೀಕರಣ ಮುಖ್ಯ ಕಾರಣ ಎಂದು ನಾನು ಖಂಡಿತ ಹೇಳುತ್ತಿಲ್ಲ. ಅಲ್ಲದೇ ದುಡ್ಡು ಗಳಿಕೆಯ ಅಬ್ಬರದಲ್ಲಿ ಮಕ್ಕಳಿಗೆ ಸಮಯ ಕೊಡುವುದು ತಪ್ಪುತ್ತಿದೆ ಎಂದು ಹೇಳಿದೆನೆ ಹೊರತು ಹೆಣ್ಣು ದುಡಿಯಬಾರದು ಅಂತಲ್ಲ.  🙂

Rukmini Nagannavar
Rukmini Nagannavar
11 years ago

 ಶ್ರೀವತ್ಸ ಕಂಚೀಮನೆ: ಹೌದು ಸರ್, ವಿಷಯ ಸ್ಪಷ್ಟನೆಯಲ್ಲಿ ಗೊಂದಲವಿದೆ. ಅದಕ್ಕೆ ಕ್ಷಮೆ ಇರಲಿ 🙂 ನಾನು Juveniles ಬಗ್ಗೆ ಮಾತನಾಡ್ಟಿದೀನಿ ಅನ್ನೋದನ್ನು ಸ್ಪಷ್ತಪದಿಸಬೇಕಿತ್ತು. ಇನ್ನೂ ಬದುಕಿ ಬಾಳಬೇಕಿರುವ ಮಕ್ಕಳು ೧೩-೧೪ನೆಯ ಸಣ್ಣ ವಯಸ್ಸಿನಲ್ಲಿ ರೇಪ್ ನಂತಹ ಘೋರ ತಪ್ಪುಗಳನ್ನು ಮಾಡಿದ ಘಟನೆಗಳು ನಮಗೆ ತುಂಬ ನೊಡಸಿಗುತ್ತವೆ. ಅಂತಹ ಮಕ್ಕಳನ್ನು ರೀಹ್ಯಾಬಿಲಿಟೇಟ್ ಮಾಡಿ ಬದುಕಿ ಬಾಳೋಕೆ ಒಂದು ಸುವರ್ಣ ಅವಕಾಶ ಸಿಕ್ಕಂಟಾಡುತ್ತದೆ ಎಂಬುದು ನನ್ನ ಆಶಯವಾಗಿತ್ತು. ಅಲ್ಲದೇ, ಮೌಲ್ಯ ಶಿಕ್ಷಣಕ್ಕೆ ಒತ್ತು ಕೊಡುವುದರಿಂದ ಸಮಾಜದಲ್ಲಿ ಒಳ್ಳೆಯ ವಾತಾವರಣ ಉಂಟಾಗಬಹುದೆಂಬ ಅನಿಸಿಕೆ. ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮ ಸಹಕಾರ ಹೀಗೆಯೇ ಇರಲಿ… 🙂

Rukmini Nagannavar
Rukmini Nagannavar
11 years ago

ಬಂಧುಗಳೇ,  ತಾವುಗಳು ಹೇಳಿರುವಂತೆ ವಿಷಯದ ಬಗ್ಗೆ ಸ್ಪಷ್ಟನೆ ಬಂದಿಲ್ಲ. ತಮ್ಮೆಲ್ಲ ಪ್ರತಿಕ್ರಿಯೆಗಳಿಗೆ ನಾನು ಸ್ವಾಗತಾರ್ಹಳು. ಲೇಖನದ ತಲೆಬರಹ ಹಾಗೂ ನಾನು ಬರೆದಿರುವ ವಿಷಯಗಳಲ್ಲಿ ಗೊಂದಲವಿದೆ ಎಂದು ಒಪ್ಪಿಕೊಳ್ಳುವೆ. ಕೆಲವು ಅಸ್ಪಷ್ಟತೆಗಳು ಮತ್ತೆ ಹಲವು ಪ್ರಶ್ನೆಗಳಿಗೆ ಕಾರಣವಾಗಿವೆ. ಮುಂದಿನ ಲೇಖನಗಳಲ್ಲಿ ಆ ಅಸ್ಪಷ್ಟತೆ ಕಾಣದಿರುವಂತೆ ನೋಡಿಕೊಳ್ಳುವೆ. ನಿಮ್ಮ ಅಮೂಲ್ಯ ಸಮಯವನ್ನು ನನ್ನ ಬರಹ ಓದಲಿಕ್ಕೆ ನೀಡಿದ್ದಲ್ಲದೇ, ಅಷ್ಟೇ ತಾಳ್ಮೆಯಿಂದ ಪ್ರತಿಕ್ರಿಯೆ ಕೂಡ ವ್ಯಕ್ತಪಡಿಸಿದ್ದೀರಿ. ಈ ನಿಮ್ಮ ಸಲಹೆ ಸೂಚನೆಗಳು ನನ್ನ ಬರಹ ಬೆಳವಣಿಗೆಗೆ ತುಂಬ ಸಹಕಾರಿಯಾಗಲಿದೆ. ಹೀಗೆಯೇ ಮುಂದುವರಿಸಿ. ಪ್ರತಿಕ್ರಿಯೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು. 🙂

ದಿವ್ಯ ಆಂಜನಪ್ಪ

                     ಬಾಲಾಪರಾಧ ತಡೆಯುವಲ್ಲಿ ಪೋಷಕರ ಪಾತ್ರವೇನೆಂದು ನಿಮ್ಮ ಲೇಖನ ಉತ್ತಮವಾಗಿ ತಿಳಿಸಿದೆ, ಹಾಗೆಯೇ ಶಾಲಾ ವಾತಾವರಣದ ಪ್ರಾಮುಖ್ಯತೆಯನ್ನು ಕೂಡ, ಧನ್ಯವಾದಗಳು ನಿಮಗೆ.
                     ಆದರೆ ಯಾವ ತಪ್ಪಿಗೆ ಯಾವ ಶಿಕ್ಷೆ ಎನ್ನುವ ಅಂದಾಜು ಮುಖ್ಯ. ತಪ್ಪು ಚಿಕ್ಕದಾಗಲೀ ಅಥವಾ ದೊಡ್ಡದಾಗಲೀ ತಪ್ಪು ಎಂಬುದು ತಪ್ಪೇ, ಆದರೆ ಶಿಕ್ಷೆಯ ಪರಿಮಾಣ ವ್ಯತ್ಯಾಸಗೊಳ್ಳಬಹುದು. ಹಾಗೆಯೇ ಕ್ಷಮೆಯ ವಿಚಾರವೂ ಅಷ್ಟೆ. ಆಯಾ ಅಪರಾಧಗಳ ಆಧಾರದ ಮೇಲೆ ನಿರ್ಧರಿತ. ನೀವು ಪ್ರಾರಂಭದಲ್ಲಿ ತೆಗೆದುಕೊಂಡ ಅಪರಾಧದೆಡೆಗೆ ಒಮ್ಮೆ ಕ್ಷಮೆಯ ವಿಚಾರವ ಮಾಡಬಹುದೇ ಹೊರತು ಕ್ಷಮೆ ಖಂಡಿತಾ ಇಲ್ಲ. 
ಬರಹ ಚೆನ್ನಾಗಿದೆ. ಧನ್ಯವಾದಗಳು

mamatha keelar
mamatha keelar
11 years ago

ರುಕ್ಮಿಣಿ ಅವರೆ ನಿಮ್ಮ ಬರಹ ಚನ್ನಾಗಿದೆ….ನಾನು ಕ್ಷಮೆ ಪಾರಣೆ ಆದರೆ ಎಲ್ಲ ತಪ್ಪಿಗೂ ಕ್ಷಮೆಯಿಂದ ಪರಿಹಾರ ಕಾಣಲು ಸಾಧ್ಯವಿಲ್ಲ…ಕೆಲವರ ಮನಸ್ಥಿತಿ ನಮ್ಮ ಒಳ್ಳೆ ತನವನ್ನ ನಮ್ಮ ದುರ್ಬಲತೆ ಅಂತ ತಿಳಿದುಕೊಳ್ಳುತ್ತದೆ…ಹಾಗಾಗಿ ಅವರಲ್ಲಿ ಪಶ್ಚಾತ್ತಾಪ ಉಂಟಾಗುವಂತ ಶಿಕ್ಸೆಯನ್ನ ಅವರಿಗೆ ನಿಡುವದು ಒಳಿತು..ಮರಣ ದಂಡನೆ ಬದಲು..ಆ ಶಿಕ್ಷೆ ಸಮಾಜಕ್ಕೆ ಒಂದು ಪಾಠ ಆಗಿರಬೇಕು..

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
11 years ago

ಚೆಂದದ ಲೇಖನಕ್ಕೆ ಅಭಿನಂದನೆಗಳು ಮೇಡಮ್.  ಇಂತಹ ಘೋರ ಅಪರಾದಗಳಿಗೆ ತಕ್ಕ ಶಿಕ್ಷೆಯೊಂದೇ ಸಮಂಜಸವಾದದ್ದು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಈ ಒಂದು ಕೃತ್ಯ ಎಸಗುವವರಲ್ಲಿ ಎರಡು ವಿಧದ ಜನ ವಿರುತ್ತಾರೆ. 1. ಮಾನಸಿಕ ಅಸಮತೋಲನವುಳ್ಳವರು 2. ಮಾನಸಿಕ ಸ್ವಸ್ಥರಾಗಿದ್ದೂ ಇಚ್ಛಾಸಕ್ತಿಯಿಂದ ತೊಡಗಿಕೊಳ್ಳುವವರು. ಯಾವದಕ್ಕೂ ಅವರ ಮಾನಸಿಕ ಕ್ಷಮತೆಯನ್ನು ಪರೀಕ್ಷಿಸಿ ತಕ್ಕ ಶಿಕ್ಷೆ ನೀಡಿದರೆ ಒಳಿತು. ಇದರಿಂದ ಸಮಾಜಕ್ಕೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದಂತೆ ಆಗುತ್ತದೆ.

Rukmini Nagannavar
Rukmini Nagannavar
11 years ago

prathikriye vyaktapadisida ellarigoo nanna dhanyavaadagalu… nimma prathikriyegalu yavattoo heegeye irali …

14
0
Would love your thoughts, please comment.x
()
x