ಬೇಸಿಗೆ ಕಾಲ ಬಂದಾಗಲೆಲ್ಲಾ ಊಟಿ ಅಥವಾ ಮನಾಲಿಯ ನೆನಪಾಗುತ್ತಿತ್ತು ಕಾರಣ ನಿಮಗೆ ಗೊತ್ತೇ ಇದೆ. ಅಲ್ಲಿಯ ವಾತಾವರಣ ದೇಹ ತಂಪು ಮಾಡುವುದರ ಜೊತೆಗೆ ಕಣ್ಣುಗಳಲ್ಲಿ ಅಲ್ಲಿಯ ಸ್ವರ್ಗರಮಣೀಯ ದೃಷ್ಯಗಳನ್ನು ತುಂಬಿ ಆನಂದ ಪಡೆಸುತ್ತದೆ. ಹಾಗಾಗಿ ಈ ಬಾರಿ ಮನಾಲಿಗೆ ಹೋಗುವುದಾಗಿ ನಿರ್ಧರಿಸಿ ತಿರುವನಂತಪುರಂ-ಡೆಲ್ಲಿಗೆ ಹೊರಡುವ ರಾಜಧಾನಿ ಎಕ್ಸ್‍ಪ್ರೆಸ್‍ನಲ್ಲಿ ಟಿಕೆಟ್ ಬುಕ್ ಮಾಡಿ ಕುಟುಂಬ ಸಮೇತರಾಗಿ ಹೊರಟೇ ಬಿಟ್ಟೆವು. ರೈಲಿನ ಒಳಹೊಕ್ಕೊಡನೇ ತಂಪಾದ ಗಾಳಿ ಮೈಯಲ್ಲಾ ತಣ್ಣಗಾಗಿಸಿತು. ಮನಾಲಿಯ ಸುಖ ಇಲ್ಲಿಂದಲೇ ಸಿಗಲು ಶುರುವಾಯಿತು.
ನಮಗೆ ನಿಗಧಿ ಪಡಿಸಿದ ಬರ್ತನಲ್ಲಿ ನಾನು ನನ್ನ ಕುಟುಂಬದ ಸದಸ್ಯರೆಲ್ಲರೂ ಆಸೀನರಾದೆವು. ಸ್ವಲ್ಪ ಸಮಯದ ನಂತರ ಪಕ್ಕದಲ್ಲಿದ್ದ ಬರ್ತನಲ್ಲಿ ಯಾರೋ ಇಬ್ಬರು ಜೋರಾಗಿ ಕೂಗಾಡುತ್ತಿದ್ದಂತೆ ಕೇಳಿಸಿತು. ಅತ್ತಕಡೆ ಗಮನ ಹರಿಸಿದೆ. ಒಬ್ಬ ಸಣಕಲು ದೇಹದ ವ್ಯಕ್ತಿ ಇಂಗ್ಲೀಷ್‍ನಲ್ಲಿ ಮನಸೋಇಸ್ಚೆ ಬೈದಾಡುತ್ತಿದ್ದ. ‘ಯು ಸ್ಟುಪಿಡ್..ರ್ಯಾಸ್ಕಲ್..ಹೌ ಡಿಡ್ ಯು ಟಚ್ಡ್ ಮೈ ಬ್ಯಾಗ್.. ಐ ವಿಲ್ ಗಿವ್ ಕಂಪ್ಲೇಂಟ್ ..’ ಆದರೆ ಅಷ್ಟೇ ಶಾಂತವಾಗಿ ‘..ನೋಡಿ ನಾನು ರೈಲು ಹತ್ತಿದೊಡನೇ ನನ್ನ ಸೀಟಿನ ಮೇಲೆ ನಿಮ್ಮ ಬ್ಯಾಗಿತ್ತು ಅದಕ್ಕಾಗೆ ಅದನ್ನು ಪಕ್ಕಕ್ಕೆ ತಗೆದ್ದಿಟ್ಟಿದ್ದೇನೆ..ಅದೂ ಅಲ್ಲದೇ ನಿಮ್ಮನ್ನು ಕೇಳಿ ತೆಗೆಯಬೇಕೆಂದರೆ ನೀವು ನಾನು ಬಂದಾಗ ಇರಲಿಲ್ಲ..’ ಎಂದು ಸ್ವಲ್ಪ ಸ್ವಲ್ಪವೇ ಇಂಗ್ಲೀಷ್ ಗೊತ್ತಿದ್ದರಿಂದ ಹಿಂದಿಯಲ್ಲಿಯೇ ಆತನಿಗೆ ಉತ್ತರಿಸಿದ. ‘..ನಾನು ಬರುವವರೆಗೂ ನೀನು ನಿಲ್ಲಬೇಕಾಗಿತ್ತು’ ಎಂದು ಆ ಸಣಕಲು ವ್ಯಕ್ತಿ ಇಂಗ್ಲೀಷ್‍ನಲ್ಲಿಯೇ ಗಟ್ಟಿದನಿಯಲ್ಲಿ ಮತ್ತೇ ಕೂಗಾಡಿದ. ‘ನೋಡಿ ನೀವು ಹೀಗೆ ಇಂಗ್ಲೀಷ್‍ನಲ್ಲಿ ಕೂಗಾಡಿದರೆ ನನಗೆ ಅಷ್ಟೊಂದು ಗೊತ್ತಾಗುವುದಿಲ್ಲ..ಹಿಂದಿಯಲ್ಲಿ ಮಾತಾಡಿ..’ ಎಂದು ಹೇಳಿದರೂ ತನ್ನ ತನವನ್ನು ಆ ಸಣಕಲು ವ್ಯಕ್ತಿ ಬಿಡಲೇ ಇಲ್ಲಾ. ಒಂದು ಹಂತದಲ್ಲಿ ಹಿಂದಿಮಾತನಾಡುವ ವ್ಯಕ್ತಿಯ ಪೇಷನ್ಸ್ ಕಡಿಮೆಯಾಗಿ ಮಾತಿನ ಚಕಮಕಿ ಜೋರಾಗಿ ‘..ನಾನೇನಾದರೂ ನಿನ್ನ ಮೇಲೆ ಕೈ ಮಾಡಿದರೆ..ನೀನು ಮೇಲೇಳಲು ಸಾಧ್ಯವಿಲ್ಲ,ಜೋಪಾನ..’ ಎಂದು ಎಚ್ಚರಿಕೆ ನೀಡಿದ ಆದರೂ ಸಣಕಲು ವ್ಯಕ್ತಿ ಅದ್ಯಾವುದಕ್ಕೂ ಹೆದರದೇ ವಾಗ್ವಾದ ನಡೆಸಿ, ಸ್ವಲ್ಪ ಮುಂದುವರೆದು ಅವ್ಯಾಚ ಶಬ್ದ ಪ್ರಯೋಗವನ್ನೂ ಮಾಡಿದ. ‘..ನಿನ್ನ ಹಣೆಬರಹ ಸರಿ ಇದೆ..ನಾನು ನಿನ್ನ ಮೇಲೆ ಕೈಮಾಡಲು ನನ್ನ ಕೈಗಳನ್ನು ನನ್ನ ವೃತ್ತಿ ಭಂದಿಸಿದೆ..ಸುಮ್ಮನಿದ್ದರೆ ನಿನಗೇ ಒಳಿತು..’ ಎಂದು ಈತನೂ ಜೋರಾಗಿಯೇ ಹೇಳಿದ. ಅದವುದಕ್ಕೂ ಜಪ್ಪಯ್ಯ ಅನ್ನಲಿಲ್ಲ ಸಣಕಲು ವ್ಯಕ್ತಿ. ಅಷ್ಟರಲ್ಲಿಯೇ ಅಲ್ಲಿಗೆ ಬಂದ ಟಿಕೆಟ್ ಕಲೆಕ್ಟರ್ ಇಬ್ಬರನ್ನೂ ಸಮಾಧಾನ ಪಡಿಸಿ ಹಿಂದಿಮಾತನಾಡುವ ವ್ಯಕ್ತಿಗೆ ಅದೇ ಭೋಗಿಯ ಬೇರೆಡೆಗೆ ಕೂರಲು ವ್ಯವಸ್ಥೆ ಮಾಡಿದರು. ಇಲ್ಲವಾದಲ್ಲಿ ರೈಲ್ವೇ ಪೊಲೀಸ್ಗೆ ದೂರು ಸಲ್ಲಿಸಲು ಆ ಸಣಕಲು ವ್ಯಕ್ತಿ ತುದಿಗಾಲಿನಲ್ಲಿ ನಿಂತಿದ್ದ. ಇದನ್ನೆಲ್ಲಾ ನಾನು ದೂರದಿಂದಲೇ ಗಮನಿಸುತ್ತಿದ್ದೆ. ಅಲ್ಲಿ ನಡೆಯುತ್ತಿದ್ದ ಜಗಳದ ತಳಬುಡವೂ ಗೊತ್ತಿಲ್ಲದೇ ಅವರಿಬ್ಬರ ಮಧ್ಯೆ ಪ್ರವೇಶ ಮಾಡುವುದು ಉಚಿತವಲ್ಲವೆಂದು ಸುಮ್ಮನಿದ್ದೆ.
ಸ್ವಲ್ಪ ಹೊತ್ತಿನ ನಂತರ ಹಿಂದಿಮಾತನಾಡುವ ವ್ಯಕ್ತಿಯ ಹತ್ತಿರ ಹೋಗಿ ಜಗಳದ ಬಗ್ಗೆ ವಿಚಾರಿಸಿದೆ. ‘ಅಲ್ಲ..ಸಾರ್, ಆ ಸಣಕಲು ಮನುಷ್ಯ ಅಷ್ಟೊಂದು ಅವ್ಯಾಚ್ಚ ಶಬ್ದಗಳಿಂದ ಬೈಯುತ್ತಿದ್ದರೂ ನೀವು ಶಾಂತವಾಗಿ ಉತ್ತರಿಸುತ್ತಿದ್ದುದು ನನಗೆ ಆಶ್ಚ್ಯರ್ಯವಾಯಿತು..ನಿಮ್ಮ ಜಾಗದಲ್ಲಿ ಯ್ಯಾರೇ ಇದ್ದರೂ ನಾಲ್ಕು ಬಿಗಿಯುತ್ತಿದ್ದರು..ನೀವೇಕೆ ಸುಮ್ಮನಿದ್ದಿರೀ..? ಎಂದು ಮತ್ತೂ ಮುಂದುವರೆದು ‘..ಅದೇನೋ ನನ್ನ ಕೈಗಳನ್ನು ನನ್ನ ವೃತ್ತಿ ಭಂದಿಸಿವೆ ಎಂದು ಹೇಳಿದಿರಿ..ನೀವೇನು ಮಾಡುತ್ತಿದ್ದೀರಿ..’ ಎಂದು ಅತೀ ಕುತೂಹಲದಿಂದ ಕೇಳಿದೆ. ಅವರು ವಿವರವಾಗಿ ಹೇಳಿದರು. ‘ ಸರ್‍ಜೀ..ನಾನೊಬ್ಬ ಭಾರತದೇಶದ ಸೈನಿಕರ ತರಬೇತುದಾರ(ಸೋಲ್ಜರ್ ಟೈನಿಂಗ್ ಇನ್ಸ್‍ಟ್ರಕ್ಟ್‍ರ್). ನನ್ನ ಅಡಿಯಲ್ಲಿ ಮೂವತ್ತು ಸೈನಿಕರು ತರಬೇತಿಯನ್ನು ಪಡೆಯುತ್ತಿದ್ದಾರೆ, ನೀವು ನೋಡಿರ ಬಹುದು ನನ್ನನ್ನು ರೈಲಿನಲ್ಲಿ ಹತ್ತಿಸಲು ಮೂರು ಜವಾನರು ಬಂದಿದ್ದನ್ನು..’ ಎಂದಾಗ ನಾನೂ ಒಪ್ಪಿಕೊಂಡು ಅವರ ಮಾತನ್ನೇ ಆಲಿಸುತ್ತಿದ್ದೆ. ‘ಆಗಿದ್ದು ಇಷ್ಟೇ..ಆ ಸಣಕಲು ವ್ಯಕ್ತಿಯ ಬ್ಯಾಗನ್ನು ನನಗೆ ಗೊತ್ತಿಲ್ಲದೇ ನನ್ನ ಸೀಟಿನಿಂದ ತೆಗೆದು ಇನ್ನೊಂದೆಡೆ ಇಟ್ಟೆ..ಅಷ್ಟಕ್ಕೇ ಆ ಮನುಷ್ಯ ನನ್ನ ಮೇಲೆ ರೇಗಾಡತೊಡಗಿದ..ನಾನು ಆತನನ್ನು ಶಾಂತಗೊಳಿಸಲು ಪ್ರಯತ್ನಿಸಿದೆ ಆದರೆ ಆವನಿಗೆ ಅದು ಬೇಕಾಗಿರಲಿಲ್ಲ ಕಾರಣ ತನ್ನೊಂದಿಗೆ ಒಬ್ಬ ಹುಡಿಗಿಯೂ ಇದ್ದಳು..ಬಹುಶಃ ಅವನ ಗರ್ಲ್ ಫ್ರೆಂಡ್ ಆಗಿರಬೇಕು. ಅವಳನ್ನು ಇಂಪ್ರೆಸ್ ಮಾಡಲೆಂದೇ ನನ್ನ ಮೇಲೆ ಸಣ್ಣ ಕಾರಣಕ್ಕೆ ರೋಪ್ ಹಾಕತೊಡಗಿದ.
ಆದರೂ ನನ್ನ ತಾಳ್ಮೆಯನ್ನು ಕಳೆದು ಕೊಳ್ಳಲಿಲ್ಲ. ಒಂದು ವೇಳೆ ಸೈನಿಕನಾಗದಿದ್ದರೆ ಆ ಕಥೆಯೇ ಬೇರೆಯಾಗಿರುತ್ತಿತ್ತು..’ ಎಂದು ಸುಮ್ಮನಾದರು. ‘..ಆದರೆ ಸೈನಿಕರಿಗೂ ತಾಳ್ಮೆಗೂ ಏನು ಸಂಬಂಧ..?’ಎಂದು ಆಶ್ಚರ್ಯದಲ್ಲಿ ಕೇಳಿದಾಗ ಅವರು ಉತ್ತರಿಸಿದ ಮಾತು ಮನ ಮುಟ್ಟುವಂತಿತ್ತು. ‘..ಸರ್‍ಜಿ, ಸೈನಿಕನಿಗೆ ತಾಳ್ಮೆಯೇ ಬಹುಮುಖ್ಯವಾದ ಅಂಶ, ಯಾವ ನಾಗರಿಕನ ಮೇಲೂ ಸಣ್ಣ ವಿಷಯಗಳ ಮೇಲೆ ನಾವು ಕೈ ಮಾಡುವ ಹಾಗಿಲ್ಲಾ..ನಮ್ಮ ಕೈ ಎದ್ದರೆ ಕೇವಲ ದೇಶದ ಶತ್ರುಗಳ ಮೇಲೆ ಮಾತ್ರ..ಇದನ್ನೇ ನಮಗೆ ಯೋಧರ ತರಬೇತಿಯಲ್ಲಿ ಹೇಳಿ ಕೊಡುವುದು ಮತ್ತು ನಾನೂ ಒಬ್ಬ ಸೈನಿಕರ ತರಬೇತುದಾರನಾಗಿರುವುದರಿಂದಲೇ ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ..’ ಎಂದು ಹೇಳುತ್ತಿರುವಾಗ ಅವರ ಕಣ್ಣಲ್ಲಿ ದೇಶಭಕ್ತಿಯ ಜ್ವಾಲೆ ಉರಿಯುತ್ತಿದ್ದಿದು ಕಾಣುತ್ತಿತ್ತು. ‘ಸೋಲ್ಜರ್ಸ್ ಆರ್ ಗ್ರೇಟ್’ ಎಂದು ನೆನೆಯುತ ಮನಸಿನಿಂದಲೇ ಅವರಿಗೊಂದು ಸಲ್ಯೂಟ್ ಮಾಡಿ ‘ಸರ್ ಯು ಆರ್ ರಿಯಲ್ಯ್ ಗ್ರೇಟ್’ಎಂದೆ. ‘..
ನಿಮ್ಮಂತಹ ದೇಶದ ಬಗ್ಗೆ ಅಭಿಮಾನವಿರುವಂತಹ ಪ್ರಜೆಗಳು ಮಾತ್ರ ಯೋಧರಿಗೆ ಮರ್ಯಾದೆ ಕೊಡುತ್ತಾರೆ ಆದರೆ ಸ್ವಾರ್ಥಿಗಳು, ಇಗೋಇಸ್ಟಿಕ್ ಇರುವಂತ ಜನರು ದೇಶದ ಬಗ್ಗೆಯಾಗಲೀ,ಯೋಧರ ಬಗ್ಗೆಯಾಗಲೀ ಕಿಂಚಿತ್ತೂ ಅಭಿಮಾನವಿರುವುದಿಲ್ಲ.. ಆತನಿಗೆ ನಾ ಮೊದಲೇ ಹೇಳಿದ್ದೆ ನಾನೊಬ್ಬ ಸೈನಿಕರ ತರಬೇತುದಾರನೆಂದು, ನನ್ನ ಅಡಿಯಲ್ಲಿ ಹಲವಾರು ಮಂದಿ ಸೈನಿಕರು ತರಬೇತಿ ಪಡಿಯುತ್ತಿದ್ದಾರೆಂದು ಆದರೆ ಅದ್ಯಾವುದನ್ನೂ ಆತ ಕೇಳಿಸಿ ಕೊಳ್ಳಲಿಲ್ಲ..’ ಎಂದು ಹೇಳಿ ಇನ್ನೂ ಮುಂದುವರೆಸಿ ‘ಸರ್‍ಜೀ..ಈಗ ನಾನು ಯಾರ ಜೊತೆಯಲ್ಲೂ ಮಾತನಾಡುವ ಸ್ಥಿತಿಯಲ್ಲಿಲ್ಲ ಏಕೆಂದರೆ ದೇಶಕ್ಕಾಗಿ ಪ್ರಾಣತೆತ್ತ ನನ್ನ ಸ್ನೇಹಿತನ ಅಸ್ಥಿಯನ್ನು ಮತ್ತು ಆತನ ಕಡತಗಳನ್ನು ಅವರ ಮನೆಗೆ ಮುಟ್ಟಿಸಲು ಹೋಗುತ್ತಿದ್ದೇನೆ..ಅವರ ಮನೆಯವರನ್ನು ಅದು ಹೇಗೆ ಎದಿರಿಸಬೇಕು ಎನ್ನುವ ವಿಚಾರದಲ್ಲಿಯೇ ಮಗ್ನನಾಗಿದ್ದೆ ಹಾಗಿರುವಾಗ ಈ ಎಲ್ಲಾ ಘಟನೆ ನನ್ನ ಮನಸ್ಸಿಗೆ ಅತೀ ಹೆಚ್ಚು ಗಾಯ ಮಾಡಿತು..’ಎಂದಾಗ ನನ್ನ ಕಣ್ಣುಗಳು ತೇವವಾದದ್ದು ಸುಳ್ಳಲ್ಲ. ನಾ ಮಾತನಾಡದೇ ಅವರನ್ನೇ ನೋಡುತ್ತಿದ್ದೆ.
ತನ್ನ ಅಹಂನ ಮುಂದೆ ದೇಶ ಕಾಯುವ ಯೋಧರ ತ್ಯಾಗ ಬಹುದೊಡ್ಡದು ಎನ್ನುವ ಚಿಕ್ಕ ವಿಚಾರವೂ ಆ ಸಣಕಲು ಸೋ ಕಾಲ್ಡ್ ಎಜುಕೇಟೆಡ್ ಮತ್ತು ಇಂಗ್ಲೀಷ್ ಮಾತನಾಡುವ ವ್ಯಕ್ತಿಗೆ ಗೊತ್ತಾಗದೇ ಇದ್ದದ್ದು ವಿಪರ್ಯಾಸವೇ ಸೈ ಅಲ್ಲವೇ..!
– ನಾಗರಾಜ್.ಮುಕಾರಿ (ಚಿರಾಭಿ)