”ತನ್ನದೇ ಎಳಸು ಹೃದಯಕ್ಕೊಂದು ಪತ್ರ”: ಪ್ರಸಾದ್ ಕೆ.

ಪ್ರಿಯ ಹರೆಯದ ಎಳಸು ಹೃದಯ…
ಹೇಗಿದ್ದೀಯಾ? ಇಂದು ವ್ಯಾಲೆಂಟೈನ್ಸ್ ದಿನವು ಬಂದಿರುವ ನೆಪದಲ್ಲಿ ನಿನ್ನ ಈವರೆಗಿನ ವ್ಯಾಲೆಂಟೈನ್ ಪಯಣಕ್ಕೊಂದು ಸುಮ್ಮನೆ ಮೆಲುಕು ಹಾಕಿ ನೋಡಿದೆ. ಅಬ್ಬಬ್ಬಾ, ಅದೆಷ್ಟು ಬಣ್ಣಗಳು, ಅದೆಷ್ಟು ಏರಿಳಿತಗಳು, ಅದೆಷ್ಟು ರೂಪಾಂತರ? ಅದೇನೇ ಇರಲಿ. ನೀನು ನಡೆದು ಬಂದ ಹಾದಿಯ ಬಗ್ಗೆ ನಿನಗೆ ಹೆಮ್ಮೆಯಿರಲಿ ಎಂಬ ಕಳಕಳಿಯ ವಿನಂತಿ ನನ್ನದು.

ನಿನ್ನ ಈ ಹಾದಿಯು ಕಲ್ಲುಮುಳ್ಳುಗಳದ್ದು ಎಂಬುದು ಸತ್ಯ. ಮೊದಲ ಬಾರಿಗೆ ಎಲ್ಲವೂ ಹೊಸತಾಗಿದ್ದರಿಂದ ಸುಮ್ಮನೆ ಬೇಸ್ತು ಬಿದ್ದೆ, ವೃಥಾ ಮೋಸ ಹೋದೆ. ಎರಡನೇ ಬಾರಿ ಎಲ್ಲವೂ ಸರಿಹಾದಿಗೆ ಬರುತ್ತಿದೆಯೆಂದು ನಿನಗನ್ನಿಸುತ್ತಿರುವಾಗಲೇ ಬದುಕು ಕೈಕೊಟ್ಟಿತು. ಮೂರನೆಯದ್ದು ನಿನಗಾಗಿ ಒಲಿದು ಬರುವ ಹೊತ್ತಿಗಂತೂ, ಇದ್ಯಾವುದರ ಸಹವಾಸವೇ ಬೇಡವೆಂದು ದೊಡ್ಡ ನಮಸ್ಕಾರ ಹಾಕಿ ನೀನು ಬಹಳಷ್ಟು ದೂರ ಮುನ್ನಡೆದಿದ್ದೆ. ಬಹುಷಃ ಮುಂದೆಂದೂ ಒಲವಿನೂರಿಗೆ ಹಿಂತಿರುಗಲಾರದಷ್ಟು ದೂರ ಬಂದಿರುವೆನೆಂಬ ಭಾವವನ್ನು ನಿನ್ನಲ್ಲಿ ತರುವಷ್ಟು. ಒಟ್ಟಾರೆಯಾಗಿ ಈ ಅನುಭವಗಳು ಬದುಕಿನ ಮತ್ತು ಪ್ರೀತಿಯ ಬಗೆಗಿನ ನಿನ್ನ ದೃಷ್ಟಿಕೋನವನ್ನು ಬದಲಿಸಿದ್ದವು. ಗೊತ್ತಿದ್ದೋ, ಗೊತ್ತಿಲ್ಲದೆಯೋ ಪ್ರಾಕ್ಟಿಕಲ್ ಆಗುವ ನೆಪದಲ್ಲಿ ನಿನ್ನನ್ನು ನೀನೇ ದಂಡಿಸಿಕೊಂಡೆ. ಬೇಕೆಂದೇ ನಿನ್ನ ಒಳದನಿಗೆ ಕಿವುಡಾದೆ. ಹೀಗೆ ಈ ವರ್ಷಗಳಲ್ಲಿ ನಿನ್ನೊಳಗಿನ ಪ್ರೀತಿಯೂ ಸೇರಿದಂತೆ, ಬಹಳಷ್ಟು ಸಂಗತಿಗಳು ಬದಲಾಗಿವೆ. ಅದು ಸಹಜವೂ ಕೂಡ.

ಈ ದಿನಗಳನ್ನೆಲ್ಲಾ ಮೆಲುಕು ಹಾಕುವುದು ಅದೆಷ್ಟು ಕಷ್ಟವೆಂಬುದು ನನಗೆ ತಿಳಿದಿದೆ. ನಿನ್ನ ಈ ಪಯಣದಲ್ಲಿ ಅದೆಷ್ಟೋ ಸೋಲುಗಳನ್ನು ನೀನು ಕಂಡಿರಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ನೀನು ಕಲಿತಿದ್ದು ಸಾಕಷ್ಟಿದೆ. ಈ ಬಗ್ಗೆ ಬದುಕಿಗೆ ಕೃತಜ್ಞನಾಗಿರು. ನಡೆಯಲು ಹೊರಟವನು ಎಡವಿ ಬೀಳುವುದು ಸಹಜ. ಹಾಗೆಂದು ಬೀಳುವ ಭಯದಲ್ಲಿ ನಡೆಯುವುದನ್ನೇ ಮರೆತುಬಿಡಲಾಗುವುದೇ? ಪ್ರೀತಿಯ ಅನುಭವಗಳು ನಿನಗೆ ಅದೆಷ್ಟು ಸಂತಸವನ್ನು ತಂದಿವೆಯೋ, ಅಷ್ಟೇ ದುಃಖದ ಸಂದರ್ಭಗಳನ್ನೂ ತಂದಿರಬಹುದು. ಬದುಕಿಗೆ ನಡೆಯುವುದೂ ಬೇಕು, ಎಡವಿ ಬೀಳುವುದೂ ಬೇಕು. ಹೀಗಾಗಿ ಎರಡನ್ನೂ ಸಮಾನವಾಗಿ ಸ್ವೀಕರಿಸು.

ಹೀಗೆ ತನ್ನ ರೂಪಾಂತರದ ಬಗ್ಗೆ ಮೆಲುಕು ಹಾಕಿದಾಗಲೆಲ್ಲಾ ನಿನ್ನಲ್ಲಿ ಏನೇನೋ ತಳಮಳಗಳುಂಟಾಗುವುದು ಸಹಜ. ಎಲ್ಲೋ ಮನದಾಳದಲ್ಲಿ ಸುಪ್ತವಾಗಿದ್ದ ಜ್ವಾಲಾಮುಖಿಯನ್ನು ಮತ್ತೆ ಕೆಣಕಿದಂತಿನ ಅನುಭವವದು. ಇದು ರೋಷದ ರೂಪದಲ್ಲೋ, ಸ್ವಮರುಕವಾಗಿಯೋ, ಹತಾಶೆಯಾಗಿಯೋ, ಪಶ್ಚಾತ್ತಾಪವಾಗಿಯೋ ಆಗಾಗ ಹೆಡೆಯೆತ್ತಿ ನಿನ್ನನ್ನು ಕಾಡಬಹುದು. ಹಾಗೆಂದು ಪ್ರೀತಿಯಲ್ಲಿ ಖುಷಿಯ ಕ್ಷಣಗಳು ಇರಲೇ ಇಲ್ಲವೇ? ಖಂಡಿತಾ ಇದ್ದವು. ಆದರೆ ನಮ್ಮ ಪಾಡೇ ಇದು. ಕೈಜಾರಿದ ಸಂಗತಿಗಳ ಹತಾಶೆಯಲ್ಲೇ ಸದಾಕಾಲ ಮುಳುಗಿರುವ ನಮಗೆ, ನಿಜಕ್ಕೂ ನಮ್ಮ ಕೈದಕ್ಕಿದ ಸಂಗತಿಗಳು ಗೌಣವಾಗಿ ಕಾಣುತ್ತವೆ. ಯಾತನೆಯ ನೆನಪುಗಳ ಹೆಣಭಾರಕ್ಕೆ ಖುಷಿಯೆಂಬ ಹೂಎಸಳಿನ ಕ್ಷಣಗಳು ಇಷ್ಟಿಷ್ಟೇ ನಲುಗಿ ಹೋಗುತ್ತವೆ. ನೋವಿರುವ ಹಲ್ಲಿನ ಕಡೆಗೇ ನಾಲಗೆಯು ವಿನಾಕಾರಣ ಹೊರಳಿದ ಹಾಗೆ!

ಮೊದಲು ಖುಷಿಯ ಸಂಗತಿಗಳತ್ತ ನೋಡೋಣ. ಇಡೀ ಜಗತ್ತು ನಿನ್ನ ಸುತ್ತಮುತ್ತಲೇ ತಿರುಗಾಡುತ್ತಿದೆಯೆಂಬ ಬಾಲಿಶ ಕಲ್ಪನೆಯಿಂದ ಹೊರಬಂದು, ಮತ್ತೊಂದು ಜೀವದ ಜೊತೆ ಬದುಕನ್ನು ಸಂಭ್ರಮಿಸಲು ಹೊರಟೆಯಲ್ಲಾ… ಅದು ಹಟಾತ್ತನೆ ಸಂಭವಿಸಿದಂತೆ ಕಂಡರೂ, ಅಂದು ನೀಡಿದ್ದ ರೋಮಾಂಚನವನ್ನು ಮರೆಯುವುದು ಸಾಧ್ಯವೇ? ಎಷ್ಟೊಂದು ಚಂದವಿತ್ತು ಆ ದಿನಗಳು? ಅಷ್ಟಕ್ಕೂ ನೈಜಸ್ಥಿತಿಗಿಂತ ಕಲ್ಪನೆಗಳ ಪ್ರಾಬಲ್ಯವು ಹೆಚ್ಚಿದ್ದರೂ ಒಂದು ಮಟ್ಟಿಗೆ ಅವೆಲ್ಲಾ ಸೊಗಸಾಗಿತ್ತು. ನಿನ್ನ ವ್ಯಕ್ತಿತ್ವವೆಂಬ ಪುಟ್ಟ ಗೂಡಿಗೆ ಮತ್ತೊಂದು ಜೀವವನ್ನೂ ಆಹ್ವಾನಿಸಿ, ಆ ಜೀವದೊಂದಿಗೆ ಬದುಕು ಕಟ್ಟುವ ಕನಸುಗಳನ್ನು ಅಂದು ನೀನು ಹೆಣೆಯತೊಡಗಿದ್ದೆ. ಮೊಟ್ಟಮೊದಲ ಬಾರಿಗೆ ಇನ್ನೊಂದು ಜೀವಕ್ಕಾಗಿ, ಅದರ ಸಂತೃಪ್ತಿಗಾಗಿ ತರಹೇವಾರಿ ಕಸರತ್ತುಗಳನ್ನು ಮಾಡಿದೆ. ಇಂದಿಗೆ ಇವೆಲ್ಲಾ ಬಾಲಿಶವೆನಿಸಿದರೂ ಆ ದಿನಕ್ಕೆ ಅವುಗಳು ನಿನ್ನ ಅಸ್ತಿತ್ವದ ಪ್ರಶ್ನೆಗಳಂತಿದ್ದವು. ಇವೆಲ್ಲಾ ನಿನ್ನನ್ನು ದಡ ಸೇರಿಸಿತೋ, ಇಲ್ಲವೋ ಎಂಬುದು ಬೇರೆ ಸಂಗತಿ. ಆದರೆ ಸಾಂಗತ್ಯದ ಮೊದಲ ರುಚಿಯನ್ನಂತೂ ಬದುಕು ನಿನಗೆ ಈ ರೀತಿಯಲ್ಲಿ ಕರುಣಿಸಿತ್ತು. ಅಂಥಾ ಬದುಕಿಗೊಮ್ಮೆ ಥ್ಯಾಂಕ್ಸ್ ಹೇಳು.

ಅದೆಷ್ಟು ಸಂಗತಿಗಳನ್ನು ಆ ವ್ಯಕ್ತಿಯೊಂದಿಗೆ, ಆ ಅನುಭವಗಳೊಂದಿಗೆ ನೀನು ಕಲಿತೆ? ಅದು ಬೆಲೆಕಟ್ಟಲಾಗದ ಸಂಪತ್ತು. ಆ ಖುಷಿಯ ಸಂಗತಿಗಳನ್ನೆಲ್ಲಾ ಜೋಪಾನವಾಗಿರಿಸುವುದನ್ನು ಕಲಿತುಕೋ. ಅವುಗಳು ಯಾವತ್ತಿದ್ದರೂ ನಿನ್ನದೇ ಆಸ್ತಿ. ಇಂಥಾ ನೆನಪುಗಳ ಮೆರವಣಿಗೆಯಲ್ಲಿ ನೀನು ಸದಾಕಾಲ ಮೈಮರೆಯಬೇಕಿಲ್ಲ. ಆದರೆ ಖುಷಿಯ ಇಂಥಾ ಪುಟ್ಟ ಸಿಂಚನಗಳು ನಿನ್ನ ಕತ್ತಲಿನ ಬದುಕಿಗೆ ನಕ್ಷತ್ರಗಳಾಗುವ ಸಾಧ್ಯತೆಗಳನ್ನು ಮರೆಯಬೇಡ.

ಪ್ರತಿಯೊಂದು ಸಂಬಂಧಕ್ಕೂ ಅದರದ್ದೇ ಆದ ಘನತೆಯಿರುತ್ತದೆ. ಕಾರಣಗಳೇನೇ ಇರಲಿ. ಬರುವಾಗ ಅದೆಷ್ಟು ಮಟ್ಟಸವಾಗಿ ಒಳಬಂದಿದ್ದೆಯೋ, ಆ ಸಂಬಂಧದಿಂದ ಹೊರನಡೆಯುವಾಗಲೂ ಅದೇ ಬದ್ಧತೆಯೊಂದಿಗೆ ಹೊರಟುಬಿಡು. ನಿನ್ನ ಅಸಮಾಧಾನಗಳನ್ನು, ಕೋಪ-ತಾಪಗಳನ್ನೆಲ್ಲಾ ಇಂಥಾ ಸಂದರ್ಭಗಳಲ್ಲಿ ಏಕಾಏಕಿ ಕಾರಿಕೊಂಡು ಒರಟೊರಟಾಗಿ ಹೊರನಡೆಯಬೇಡ. ಹಾಗೆ ಮಾಡಿ ಅಷ್ಟೂ ದಿನದ ಸುಂದರ ಪಯಣದ ಬಗ್ಗೆ ಅಸಹ್ಯ ಮೂಡುವಂತೆಯೂ ಮಾಡಬೇಡ. ಪರಿಸ್ಥಿತಿಗಳಿಗೆ ತಕ್ಕಂತೆ ಮನದಲ್ಲಿ ಹಲವಾರು ಬಗೆಯ ಭಾವನೆಗಳು ಮೂಡುವುದು ಸಾಮಾನ್ಯ. ಆದರೆ ಭಾವನೆಯೊಂದೇ ನಿನ್ನ ಬದುಕನ್ನು ನಡೆಸುವ ಸಾರಥಿಯಾಗದಿರಲಿ. ಭಾವುಕ ಸ್ಥಿತಿಯಲ್ಲೇ ಸದಾ ಕಾಲ ಇದ್ದು ಬಿಡುವುದು ನಿನ್ನನ್ನು ಬದುಕಿನ ನೈಜಸ್ಥಿತಿಯಿಂದ ದೂರ ಕೊಂಡೊಯ್ಯಬಹುದು. ಇನ್ನು ಸ್ವಮರುಕವೆಂಬುದು ಒಂದು ಹಂತದ ನಂತರ ವ್ಯಸನದಂತಾಗುತ್ತದೆ. ಅದೊಂದು ಸಂಕೀರ್ಣ ಚಕ್ರವ್ಯೂಹ. ಆ ನೋವಿನಲ್ಲೂ ಎಂಥದ್ದೋ ಬಗೆಯ ವಿಚಿತ್ರ ಸುಖವೊಂದು ಭ್ರಮೆಯಂತೆ ಗೋಚರಿಸತೊಡಗುತ್ತದೆ. ಅಂಥಾ ಮರೀಚಿಕೆಗಳಿಗೆ ಬಲಿಯಾಗಬೇಡ.

ಓ ಹೃದಯವೇ, ವಿಫಲ ಸಂಬಂಧಗಳಿಂದ ಹೊಡೆತಗಳನ್ನು ತಿಂದ ಮಾತ್ರಕ್ಕೆ ಒಟ್ಟಾರೆ ಬದುಕಿನ ಬಗೆಗೇ ಸಿನಿಕನಾಗುವಷ್ಟು ನಿರಾಶವಾದಿಯಾಗಬೇಡ. ಈ ವಿಚಾರದಲ್ಲಿ ನೀನು ಒಬ್ಬಂಟಿಯಲ್ಲ. ಅದೆಷ್ಟೋ ಮಂದಿ ಇಂಥಾ ಕಲ್ಲುಮುಳ್ಳುಗಳ ಹಾದಿಗಳಲ್ಲಿ ಸಾಮಾನ್ಯವಾಗಿ ಸಾಗಿಬಂದವರೇ ಆಗಿರುತ್ತಾರೆ. ಇಂಥಾ ಅನುಭವಗಳು ಹಲವರಲ್ಲಿ ತರುವ ಬದಲಾವಣೆಗಳು ನಿನ್ನ ಅನುಭವಕ್ಕೆ ಈಗಾಗಲೇ ಬಂದಿವೆ ಎಂದುಕೊಳ್ಳುತ್ತೇನೆ. ಕೆಲವಂತೂ ತೀರಾ ಸಾವಿನಲ್ಲೂ ಅಂತ್ಯವಾಗುವುದನ್ನು ನೀನೂ ನೋಡಿರುತ್ತೀಯಾ. ಹೀಗಾಗಿ ಇಂದಿಗೂ ನೀನು ಆರೋಗ್ಯವಂತನಾಗಿ ಮಿಡಿಯುತ್ತಿದ್ದರೆ ಈ ಬಗ್ಗೆಯೂ ನಿನಗೆ ಸಂತೃಪ್ತಿಯಿರಲಿ. ಅದೆಷ್ಟೋ ಏಳುಬೀಳುಗಳ ನಂತರವೂ ನೀನು ನಿನ್ನ ಪಯಣವನ್ನು ಇಲ್ಲಿಯವರೆಗೆ ಯಶಸ್ವಿಯಾಗಿ ತಲುಪಿಸಿರುವೆ. ಸೋ ಬಿ ಪ್ರೌಡ್ ಆಫ್ ಯುವರ್ ಸೆಲ್ಫ್.

ಪ್ರೀತಿಯು ಬಹಳಷ್ಟು ವಿಚಾರಗಳಲ್ಲಿ ಕಾಂಪ್ರೊಮೈಸ್ ಅನ್ನು ಬೇಡುತ್ತದೆ ಎಂದೆಲ್ಲಾ ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಆದರೆ ಈ ಹೊಂದಾಣಿಕೆಗಳು ನಿನ್ನತನವನ್ನೇ ಹೊಸಕಿಹಾಕದಿರಲಿ. ನಿನ್ನ ಪ್ರೀತಿಯು ನಿನ್ನನ್ನೂ, ನಿನ್ನ ಸಂಗಾತಿಯನ್ನೂ ಮತ್ತಷ್ಟು ಉತ್ತಮರಾಗುವಷ್ಟು ಪ್ರೇರೇಪಿಸುವ ಜೀವಂತಿಕೆಯನ್ನು ಹೊಂದಿರಲಿ ಎಂಬ ಹಾರೈಕೆ ನನ್ನದು. ಹಲವು ಪ್ರಯತ್ನಗಳ ನಂತರವೂ ಇಂಥಾ ವಾತಾವರಣವನ್ನು ನಿನಗೆ ಸೃಷ್ಟಿಸಲಾಗದಿದ್ದರೆ ನಿರ್ದಾಕ್ಷಿಣ್ಯವಾಗಿ ಅಲ್ಲಿಂದ ಹೊರನಡೆದುಬಿಡು. ನೀನು ಮಿಡಿಯಬೇಕಾಗಿರುವುದು ಬಂಧಕ್ಕಷ್ಟೇ ಹೊರತು, ಬಂಧನಕ್ಕಲ್ಲ. ಹೊರಜಗತ್ತು ಅಸೂಯೆ, ಅನುಮಾನ, ಸಂಗಾತಿಯನ್ನು ಸದಾ ತನ್ನ ಕಪಿಮುಷ್ಟಿಯಲ್ಲಿಡುವ ವಿಧಾನ… ಇತ್ಯಾದಿಗಳನ್ನೇ ಬಲವಾದ ಪ್ರೀತಿಯೆಂಬಂತೆ ನಂಬಿಸುವ ವಿಚಾರಗಳನ್ನು ಹರಿಯಬಿಡುತ್ತಿರುತ್ತದೆ. ಥ್ರಿಲ್ ಇರದ ಸಂಬಂಧಗಳಿಗೆ ಅರ್ಥವೇ ಇಲ್ಲವೆಂಬಂತಿನ ಪೊಳ್ಳು ಸಂದೇಶಗಳನ್ನು ನಿರಂತರವಾಗಿ ನೀಡುತ್ತಿರುತ್ತದೆ. ಅಂಥಾ ಫ್ಯಾಂಟಸಿ ವಿಚಾರಗಳಿಗೆಲ್ಲಾ ಬಲಿ ಬೀಳಬೇಡ.

ಭಾವನಾತ್ಮಕ ನೆಲೆಯಲ್ಲಿ ತೀವ್ರವೆನ್ನಿಸುವಷ್ಟು ನೋವನ್ನು ಕೊಡುವ ಪ್ರೀತಿಯ ಅನುಭವಗಳು ನಿನ್ನನ್ನು ಕೊಂಚ ಹೆಚ್ಚೇ ಡಿಫೆನ್ಸಿವ್ ಆಗುವಂತೆ ಮಾಡಬಹುದು. ಭಾವನಾತ್ಮಕವಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಭರದಲ್ಲಿ ಅಗೋಚರ ಕೋಟೆಯೊಂದನ್ನು ನೀನು ನಿನ್ನ ಸುತ್ತಲೇ ಕ್ರಮೇಣ ಕಟ್ಟಿಕೊಳ್ಳಬಹುದು. ಆದರೆ ಇದೊಂದು ಪಲಾಯನವಾದವೆನ್ನುವುದು ನಿನಗೆ ನೆನಪಿರಲಿ. ಹಳೆಯ ನೋವುಗಳನ್ನು ತ್ಯಜಿಸದ ಹೊರತು, ಹೊಸ ಸಂತಸಗಳಿಗೆ ನಿನ್ನೊಳಗೆ ಜಾಗವಿರದು. ಆತ್ಮರಕ್ಷಣೆಗೆಂದು ನೀನು ಕಟ್ಟಿಕೊಳ್ಳುವ ಭಾವನಾತ್ಮಕ ಭದ್ರಕೋಟೆಯು ಬದುಕಿನ ನೈಜ ಅನುಭವಗಳಿಂದಲೇ ನಿನ್ನನ್ನು ದೂರವಿಡದಿರಲಿ. ನೀನು ಬದುಕಿಗೆ ತೆರೆದುಕೊಂಡಷ್ಟೇ, ಬದುಕೂ ಕೂಡ ನಿನಗೆ ತೆರೆದುಕೊಳ್ಳುತ್ತದೆ ಎನ್ನುವುದು ಸದಾ ನೆನಪಿನಲ್ಲಿರಲಿ.

ಪ್ರೀತಿಯೆಂಬುದು ಇತರರನ್ನು ಪ್ರೀತಿಸುವುದಷ್ಟೇ ಅಲ್ಲ. ಅದು ಸ್ವಪ್ರೀತಿಗೂ ಕೂಡ ಅನ್ವಯವಾಗುವಂಥದ್ದು. ಸಂತಸ ಮತ್ತು ಪ್ರೀತಿಗಾಗಿ ಸದಾ ಕಾಲ ಪರರನ್ನು ಅವಲಂಬಿಸುವ ಚಟವನ್ನು ಬಿಟ್ಟುಬಿಡು. ಏಕಾಂತವು ನಿನ್ನಲ್ಲೊಂದು ಹೊಸ ಶಕ್ತಿಯನ್ನು ತರಬೇಕೇ ಹೊರತು ಭಯವನ್ನು ಹುಟ್ಟಿಸಬಾರದು. ಆಗಾಗ ಆತ್ಮಾವಲೋಕನಗಳನ್ನು ಮಾಡುತ್ತಿರು. ಕನಿಷ್ಠಪಕ್ಷ ಇಂಥಾ ಸಂದರ್ಭಗಳಲ್ಲಾದರೂ ತನ್ನ ಲೌಕಿಕ ಮುಖವಾಡಗಳನ್ನು ಕಿತ್ತೆಸೆದು ಸಂಪೂರ್ಣ ಬೆತ್ತಲಾಗಿಬಿಡು. ಇನ್ನು ಸಂಗಾತಿಯೂ, ನಿನ್ನ ಪ್ರೀತಿಪಾತ್ರರೂ ಬದುಕಿನ ಒಂದು ಭಾಗವಾಗಿ, ಒಲವಿನ ಸಂಭ್ರಮವನ್ನು ಆಚರಿಸುವ ಜೊತೆಗಾರರಾಗಬೇಕೇ ಹೊರತು, ನಿನ್ನ ಅಸಂಖ್ಯಾತ, ಅಸಂಬದ್ಧ ನಿರೀಕ್ಷೆಗಳನ್ನು ತನ್ನ ಹೆಗಲಿನಲ್ಲಿ ಹೊತ್ತುಕೊಂಡು ಗೊಂದಲದಲ್ಲಿರುವ ಶಾಪಗ್ರಸ್ತರಂತಲ್ಲ. ತಾನೂ ಸ್ವತಂತ್ರನಾಗಿದ್ದು, ಇತರರಿಗೂ ಆ ಸ್ವಾತಂತ್ರ್ಯವನ್ನು ನೀಡು. ಏಕೆಂದರೆ ಪಂಜರದೊಳಗಿರುವ ಗಿಣಿಯನ್ನು ಸದಾಕಾಲ ಕಾಯುವ ಕಾವಲುಗಾರನೂ ಒಂದು ರೀತಿಯಲ್ಲಿ ಬಂಧಿಯೇ ಆಗಿರುತ್ತಾನೆ. ಇಂಥಾ ವಿಷಕಾರಿ ಸಂಬಂಧಗಳು ನಿನಗೆ ಹೇಳಿ ಮಾಡಿಸಿದ್ದಲ್ಲ.

ಅಂದಹಾಗೆ ಪ್ರೀತಿಯನ್ನು ವ್ಯಾಲೆಂಟೈನ್ಸ್ ದಿನಕ್ಕಷ್ಟೇ ಮೀಸಲಿಡಬೇಡ ಮಾರಾಯ. ಪ್ರೀತಿಯು ತಕ್ಕಮಟ್ಟಿನ ಶ್ರಮವನ್ನು ಬೇಡುವುದು ಹೌದಾದರೂ ಅದನ್ನೊಂದು ಕಾಟಾಚಾರದ ಕರ್ತವ್ಯವೆಂಬಂತೆ, ಯಾಂತ್ರಿಕವಾಗಿ ಮಾಡಬೇಡ. ಬದಲಾಗಿ ನೀನೇ ಪ್ರೀತಿಯಾಗಿಬಿಡುವುದು ಲೇಸು. ನಿನ್ನ ಅಸ್ತಿತ್ವವೇ ಇಂಥದ್ದೊಂದು ಮಾನವೀಯ ಅಡಿಪಾಯದ ಮೇಲೆ ಸದೃಢವಾಗಿ ನಿಂತಿದ್ದರೆ ಬದುಕು ಸರಳವಾಗುವುದು ಖಚಿತ. ಇದು ಕಷ್ಟವಿರಬಹುದು. ಆದರೆ ಅಸಾಧ್ಯವೇನಲ್ಲ.

ಈ ಬಗೆಯ ರೂಪಾಂತರಗಳು ಹಿಂದೆಯೂ ನಡೆದಿತ್ತು. ಮುಂದೆಯೂ ನಿನ್ನ ಜೊತೆ ನಡೆಯಲಿದೆ. ಹೀಗಾಗಿ ಬದುಕಿನ ಇಂಥಾ ಬದಲಾವಣೆಗಳಿಗೆ ತನ್ನನ್ನು ತಾನು ತೆರೆದಿಟ್ಟುಕೋ. ಈ ಪಯಣದಲ್ಲಿ ಚಿಕ್ಕಪುಟ್ಟ ಗಾಯಗಳಾಗಬಹುದು, ದೊಡ್ಡ ಮಟ್ಟಿನ ಘಾಸಿಗಳಾಗಬಹುದು. ಒಟ್ಟಿನಲ್ಲಿ ಅದೇನೇ ಇದ್ದರೂ, ಜೀವನಪ್ರೀತಿಗೆ ಮಿಡಿಯುವುದನ್ನು ಮಾತ್ರ ಬಿಡಬೇಡ. ಪ್ರೀತಿಯು ನಿನ್ನ ಜೀವನಶೈಲಿಯಾಗಲಿ. ಮುಂದಿನ ವ್ಯಾಲೆಂಟೈನ್ಸ್ ದಿನವು ಬರುವಷ್ಟರಲ್ಲಿ ನೀನು ಮತ್ತಷ್ಟು ಉತ್ತಮವಾಗಿ ರೂಪಾಂತರಕ್ಕೊಳಗಾಗುವೆ ಎಂಬ ನಿರೀಕ್ಷೆಯಲ್ಲಿದ್ದೇನೆ.
ಸದಾ ನಿನ್ನ ಒಳಿತನ್ನು ಬಯಸುವ,
ನಿನ್ನದೇ ಮಾಗಿದ ಹೃದಯ
ಪ್ರಸಾದ್ ಕೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Varadendra k
Varadendra k
4 years ago

ಸರ್ ಬರಹ ಬಹಳ ಪ್ರೌಢತೆಯಿಂದ ಕೂಡಿದೆ. ಹೃದಯಕ್ಕೆ ಬದುಕು ಎಲ್ಲವನ್ನೂ ಕಲಿಸಿಕೊಡುತ್ತದೆ. ಪ್ರೀತಿ ಬಯಸಿದಾಗ ಪ್ರೀತಿಯನ್ನು, ತಿರಸ್ಕೃತವಾದಾಗ ಸಹಿಸುವ ಶಕ್ತಿಯನ್ನು ಕೂಡ. ಬಹಳ ಮೆಚ್ಚುಗೆ ಆಯ್ತು ಸರ್ ಲೇಖನ

1
0
Would love your thoughts, please comment.x
()
x