ಪಂಜು-ವಿಶೇಷ

ತನ್ನಂತೆ ಪರರ ಬಗೆದೊಡೆ ಕೈಲಾಸ: ಆರಿದ್ರಿಕಾ ಭಾರತಿ

ಅಪ್ಪಾ ಹೆಣ್ಣು ಮಗುವಿಗಾಗಿ ಕಾಯುತ್ತಾ ಕಾಯುತ್ತಾ, ೭ನೇ ಮಗು ಜನಿಸಿದ ಮೇಲೆ ಭೂಮಿಗೆ ಇಳಿಯುತ್ತಾಳೆ 'ಲತಾ, ಮುದ್ದು ಮುಖ, ಬೆಳ್ಳಿ ಗುಂಡಿಗೆ ಟೋಪಿ ಹಾಕಿದಂತೆ ದಟ್ಟ ಕರಿ ಕೂದಲು, ಉದ್ದ ಮೂಗಿನ ಸುಂದರ ಗೊಂಬೆ, ಊರಣ್ಣ, ನಿನ್ ಮಗಳು ಸ್ಪುರದ್ರೂಪಿ, ಕೈ ತೊಳೆದು ಮುಟ್ಬೇಕು. ಎಂದರೆ ತಂದೆಗೊಂದು ಗರಿ. ಉಳಿದ ಯಾವುದೇ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸದ ಊರಣ್ಣ ನಿಗೆ 'ಏ ನನ್ ವಂಶಕ್ಕೆ ಪೋಲಿಯೋ, ಮಣ್ಣು ಮಸಿ ಬರಲ್ಲ, ಎಂಬ ಧೋರಣೆ. ಲತಾ ಗೆ ೩ ವರ್ಷ ತುಂಬುತ್ತಿದ್ದಂತೆ ಒಮ್ಮೆ ವಿಪರೀತ ಜ್ವರ ಬರುತ್ತದೆ. ಪೋಲಿಯೋ ವೈರಸ್ ಎಂದು ಅರಿಯದ ಜನ ಕೇವಲ ಜ್ವರಕ್ಕೆ ಮದ್ದು ಕೊಡಿಸಿಕೊಂಡು ಬರುತ್ತಾರೆ. ಅಲ್ಲಿಗೆ ಆ ಕನಸಿನ ಗೊಂಬೆಯ ವಿಕಲ ಚೇತನ ಬದುಕು ಪ್ರಾರಂಭವಾಗುತ್ತದೆ. ಅವರದ್ದೋ ಅವಿಭಕ್ತ ಕುಟುಂಬ, 'ನರಕ್ಕೆ ಇಂಜೆಕ್ಷನ್ ಚುಚ್ಚಿದ್ದಾನೆ ಡಾಕ್ಟರ್ರು, ಅವನ ಮೇಲೆ ಕೇಸು ಹಾಕ್ತೀನಿ ಎಂದು ಹಾರಾಡಿದ ಊರಣ್ಣ ತಣ್ಣಗಾಗುತ್ತಾರೆ, ಅವಳ ದೊಡ್ಡಪ್ಪ ಮೀನೆಣ್ಣೆ ಸವರಿ, ಕಾಲು ನೀವುತ್ತಾರೆ, ಅವಳ ಅಣ್ಣಂದಿರು ಕರೆಂಟು ಟ್ರೀಟ್ಮೆಂಟು ಕೊಡಿಸೋದಕ್ಕೆ ಆಸ್ಪತ್ರೆಗೆ ದಿನವೂ ಹೊತ್ತೊಯ್ಯುತ್ತಾರೆ. ಯೋಗ ಪಟುವಾದ ಅಣ್ಣ ಯೋಗ ಕಲಿಸಲು ಪ್ರಾರಂಭಿಸುತ್ತಾನೆ. ಹಿತೈಷಿಗಳ ಸಲಹೆಯ ಮೇರೆಗೆ ಅಪ್ಪಾ ಭರತನಾಟ್ಯ ಶಾಲೆಗೆ ಸೇರಿಸುತ್ತಾರೆ. ಈ ಲತಾಳಿಗೆ ಮನೆಯ ತುಂಬೆಲ್ಲಾ ಅವಳ ವಯಸ್ಸಿನ ಮಕ್ಕಳು, ಮುದ್ದು ಹೆಚ್ಚೇ ಸಿಗುತ್ತಿದ್ದ ಅವಳಿಗೆ ಸ್ಕೂಲಿನಲ್ಲಿ ಗೆಳತಿಯರು 'ಪಾಪ ಅವಳಿಗೆ ಬಿಡು', 'ಪಾಪ ಅವಳಿಗೆ ಕೊಡು' ಎಂಬೆಲ್ಲಾ ಮಾತುಗಳು ಗೊಂದಲ ಹುಟ್ಟಿಸುತ್ತದೆ, ಏಕೆಂದರೆ ಅವಳ ತಲೆಯಲ್ಲಿ ಅವಳೊಬ್ಬಳು ಅಂಗವಿಕಲೆ ಎಂಬುದು ರಿಜಿಸ್ಟರ್ ಆಗಿರುವುದೇ ಇಲ್ಲ. ಅಪ್ಪಾ ತನ್ನ ಜಮೀನಿಗೆ ಕರೆದುಕೊಂಡು ಹೋಗಿ ಕಾಲಿನ ಬಲ ವೃದ್ದಿಗೆ ಹೊಲದಲ್ಲೆಲ್ಲಾ ಓಡಾಡಿಸುತ್ತಾರೆ, ಅಣ್ಣಂದಿರು ಮೆಟ್ಟಲು ಹತ್ತಿಸಿ, ಇಳಿಸುವ, ಡ್ಯಾನ್ಸ್ ಕ್ಲಾಸಿಗೆ ದಿನಾ ಕರೆದೊಯ್ಯುವ ಕಾಯಕವನ್ನು ಚಾಚು ತಪ್ಪದೆ ಮಾಡುತ್ತಾರೆ. 

ಶಾಲೆಯಲ್ಲಿ ಪಿ,ಟಿ ಮೇಷ್ಟ್ರು ಆಡುವುದಕ್ಕೆ ವಿನಾಯಿತಿ ನೀಡುತ್ತಾರೆ, ಕಾನ್ವೆಂಟ್ ನಲ್ಲಿ ಅವಳಿಗೆ ಅಸೆಂಬ್ಲಿ ಯಲ್ಲಿ ನಿಲ್ಲೋದಕ್ಕೂ ಒತ್ತಡ ಇರುವುದಿಲ್ಲ. ಅಪ್ಪನ ಶಿಫಾರಸ್ಸು ಇದ್ದುದರಿಂದ ಯಾರಿಂದಲೂ ಯಾವ ಕಾರಣಕ್ಕೂ ದಂಡನೆ ಸಿಗುತ್ತಿರಲಿಲ್ಲ. ಅದನ್ನು ಅವಳು ಸೋಮಾರಿತನಕ್ಕೆ ಬಳಸಿಕೊಳ್ಳುತ್ತಾಳೆ. ಆದರೂ ಚುರುಕು ಮತಿಯವಳಾಗಿದ್ದ ಅವಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾಳೆ. ಒಂದು ದಿನ ತಾನು ಡ್ಯಾನ್ಸ್ ಕಲಿತರೂ ಎಲ್ಲರೊಡನೆ ಪ್ರದರ್ಶನದಲ್ಲಿ ಭಾಗವಹಿಸುವುದಕ್ಕೆ ಸಾದ್ಯವಿಲ್ಲ ಎಂಬುದನ್ನು ಅರಿತು  ಮಾನಸಿಕವಾಗಿ ಕುಸಿಯುತ್ತಾಳೆ, ಅಭ್ಯಾಸವನ್ನು ಬಿಡುತ್ತಾಳೆ. ತಾನು ಮನೆ ಬಳಿ ಇರುವ ಸ್ನೇಹಿತರೊಡನೆ ಶಟಲ್ ಕಾಕ್, ಜೂಟಾಟ ವನ್ನೆಲ್ಲಾ ಆಡಿ ಗೆಲ್ಲುತ್ತೇನೆ, ಶಾಲೆಯಲ್ಲಿ ಯಾಕೆ ಒಬ್ಬಳೇ ಪಿ.ಟಿ ಅವಧಿಯಲ್ಲಿ ಕೂರಬೇಕೆಂಬ ಚಿಂತೆ ಕಾಡುತ್ತದೆ, ದುಡ್ಡಿಗೆ ಬರವಿರದ ಅಪ್ಪಾ ಮೇಷ್ಟ್ರ ಮಾತು ಕೇಳಿ, ಸರಕಾರದ ದುಡ್ಡು ಯಾಕೆ ಬಿಡಬೇಕು ಎಂದು ಹ್ಯಾಂಡಿಕ್ಯಾಪ್ ಸರ್ಟಿಫಿಕೇಟ್ ಗೆ ವಕ್ರವಾಗಿ ಕಾಲು ನಿಲ್ಲಿಸಿಕೊಂಡು ಫೋಟೊ ತೆಗಿಸಿಕೊಳ್ಳುವಾಗ ಅವಳಿಗೆ ಮೈಯೆಲ್ಲಾ ಉರಿಯುತ್ತದೆ. ಅಂಗವೈಕಲ್ಯ ಕಾಡ ತೊಡಗುತ್ತದೆ ಕಾಲೇಜಿನಲ್ಲಿ ಎನ್,ಎಸ್,ಎಸ್, ವಿಧ್ಯಾರ್ಥಿ ಸಂಘ, ನಿರೂಪಣೆ, ನಾಟಕ, ಕವಿತೆ ಎಂದೆಲ್ಲಾ ತೊಡಗಿಕೊಳ್ಳುತ್ತಾಳೆ, ಅವಳಲ್ಲಿ ಈಗ ಒಬ್ಬ ಲೇಖಕಿ, ವಕೀಲೆ, ಸಮಾಜ ಕಾರ್ಯಕರ್ತೆ, ಬಹು ಜನರನ್ನು ಸಂಪಾದಿಸಿರುವ ಒಬ್ಬ ಮರಿ ಮದರ್ ತೆರೆಸಾ, ಎಷ್ಟೋ ಪುಟ್ಟಗಳ ಪ್ರೀತಿಯ ಅಕ್ಕ, ಒಂದು ಕಂದನ ಅಮ್ಮ, ಮುದ್ದಿನ ಹೆಂಡತಿ ಇದ್ದಾಳೆ. ಅವಳ ಸಾಧನೆಗೆ ಮೈಗೂಡಿಸಿ ಕೊಂಡ ಅಂಶಗಳನ್ನು ಹೀಗೆ ಹೇಳುತ್ತಾ ಹೋಗುತ್ತಾಳೆ.

ಇದು ಸಾಧಕಿ ’ಲತಾ’ಳ ಕಥೆ. ಲತಾಳಂತೆ ಕೆಲವು ವಿಕಲ ಚೇತನರು ಮಾನಸಿಕವಾಗಿ ಸದೃಡವಾಗಿರುತ್ತಾರೆ. ಹಾಗಾಗಿ ಅವರು ’ವಿಶೇಷ ಸಾಧಕ’ರಾಗಿರುತ್ತಾರೆ.  ನಾವು ದೃಡಕಾಯರು ವಿಶೇಷ ಸಾಧಕರನ್ನು ವಿಭಿನ್ನವಾಗಿ ಗುರುತಿಸಿ ಮನೋ ವೈಕಲ್ಯಕ್ಕೆ ತುತ್ತಾಗುತ್ತಿರುತ್ತೇವೆ. ನಮ್ಮ, ನಿಮ್ಮೆಲ್ಲರ ಪ್ರಕಾರ ವಿಕಲಾಂಗತೆ ಎಂದರೆ ದೈಹಿಕ, ಮಾನಸಿಕ ನ್ಯೂನ್ಯತೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಕಲಾಂಗತೆ ಎಂದರೆ ಕೇವಲ ಅಂಗಾಂಗಗಳ ವೈಕಲ್ಯತೆ ಮಾತ್ರ ಅಲ್ಲ, ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಉಂಟಾಗುವ ತೊಡರು ಹಾಗು ವ್ಯಕ್ತಿಯ ನ್ಯೂನ್ಯ ಬೆಳವಣಿಗೆ ಇತ್ಯಾದಿಗಳನ್ನು ವಿಕಲಾಂಗತೆ ಎಂದು ಗುರುತಿಸಬಹುದು. ಕೇವಲ ವಿಕಲ ಚೈತನ್ಯದ ಸ್ವಭಾವವನ್ನಷ್ಟೆ ತಿಳಿದುಕೊಂಡರೆ ಸಾಲದು, ಅದರ ಪರಿಣಾಮವನ್ನೂ ತಿಳಿದುಕೊಳ್ಳುವ ಅಗತ್ಯವಿದೆ. ಬರೀ ಕಾನೂನಿನ ನೆರವಷ್ಟೇ ಅಲ್ಲದೆ, ನಾವು ನಮ್ಮಂತೆ ಅವರನ್ನು ಕಾಣುವ ಪ್ರಯತ್ನದಿಂದ ವಿಕಲ ಚೇತನರ ಅಭಿವ್ರದ್ದಿ ಸಾದ್ಯವಾಗುತ್ತದೆ,  ನಮ್ಮ ವ್ಯಕ್ತಿತ್ವವೂ ಸಮೃದ್ದಗೊಳ್ಳುತ್ತದೆ. ನಾವು ಸಮಾಜದಲ್ಲಿ ಸಾಮಾನ್ಯವಾಗಿ ಕಾಣಬಹುದಾದಂತಹ ಅಂಗ ವೈಕಲ್ಯಗಳೆಂದರೆ ದೃಷ್ಟಿ ದೋಷಗಳು, ಶ್ರವಣ ದೋಷಗಳು, ಚಲನ ದೌರ್ಬಲ್ಯತೆ,  ಅರಿವಿನ/ಭಾಷೆಯ ಹಾನಿ, ಗ್ರಹಣ ಅಸ್ವಸ್ಥೆಗಳು ಇತ್ಯಾದಿ. ಇವಿಷ್ಟನ್ನು ನಾವು ಅದರ ಮೂಲ ಕೊರತೆಯಿಂದ ಮಾತ್ರ ಗ್ರಹಿಸಿಕೊಳ್ಳಬಾರದು. ಕೇವಲ ಚಟುವತಿಕೆಗಳಲ್ಲಿ ಸಮಾಜದ ಮದ್ಯೆ ತೊಡಗಿಕೊಳ್ಳಲಾಗದ ಕಾರಣಕ್ಕೆ "ಅಯ್ಯೊ ಪಾಪ" ಎಂದು ಅನುಕಂಪದ ಧಾರೆ ಎರೆಯುವ ನಾವು ಅಂಗವೈಕಲ್ಯವೆಂದರೆ ಅವರ ಜೀವನಾಧಾರಕ್ಕಂಟಿದ ದೌರ್ಬಲ್ಯ ಎಂಬುದನ್ನು ಗಂಭೀರವಾಗಿ ತೆಗೆದುಕೊಂಡು ಸರಕಾರ ಹಾಗು ಜಾಗತೀಕ ಮಟ್ಟದಲ್ಲಿ ಯೋಜನೆಯನ್ನು ರೂಪಿಸುವ ಪ್ರಯತ್ನವಾಗಬೇಕಿದೆ. ಇಂತಹ ಯೋಜನೆಗಳು ಅಲ್ಪಾವಧಿಯವಾಗಿರದೆ, ಪೂರ್ಣಾವಧಿ ಯೋಜನೆಗಳಾಗಿ ರೂಪುಗೊಂಡರೆ ಫಲಕಾರಿಯಾಗಿರುತ್ತದೆ. ಅವರು ಸಮಾಜದಿಂದ ಸರಿಯಾದ ಸಹಾಯ ಹಾಗು ಬೆಂಬಲವನ್ನು ಪಡೆದುಕೊಂಡು ಮುನ್ನಡೆಯಬೇಕಾದ್ದು ಅವರ ಹಕ್ಕು ಹಾಗು ಕರ್ತವ್ಯ ಎಂದು ಎಚ್ಚರಿಸಿ, ದೈಹಿಕ, ಮಾನಸಿಕ, ಸಾಮಾಜಿಕವಾಗಿ ವಿಕಲರಾಗಿರುವವರಿಗೆ ಇರುವ ಯೋಜನೆಗಳ ಬಗೆಗೆ ಮಾಹಿತಿ ನೀಡಬೇಕಾದ ಹೊಣೆ ಸಹ ನಮ್ಮದೇ ಆಗಿದೆ. ಅದಕ್ಕೆ ಪೂರಕವೆಂಬಂತೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅದಿನಿಯಮಗಳು ಅತ್ಯವಶ್ಯ ಎನ್ನಬಹುದು.

ಈ ನಿಟ್ಟಿನಲ್ಲಿ ವಿಕಲಾಂಗರ ಕುರಿತಾದ ವ್ಯಕ್ತಿಗಳ ಏಳಿಗೆಗಾಗಿ ಫ಼ೆಬ್ರವರಿ ೭, ೨೦೧೩ ರಂದು ರಾಜ್ಯಸಭೆ ಯು ’ವಿಕಲಾಂಗ ವ್ಯಕ್ತಿಗಳ ಹಕ್ಕು ಅದಿನಿಯಮ, ೨೦೧೪’ ನ್ನು ಪರಿಚಯಿಸಿದೆ. ಇನ್ನೂ ಪರಿಶೀಲಿಸಲ್ಪಡುತ್ತಿರುವ ಈ ಅದಿನಿಯಮವು "ವಿಕಲಾಂಗತೆ" ಯನ್ನು ವ್ಯಾಖ್ಯಾನ ಮಾಡಲು ಅದು ಸೂಚಿಸಿರುವ ೧೯ ಅಂಶಗಳನ್ನು ಒಳಗೊಂಡಿರಬೇಕು ಎನ್ನುತ್ತಿದೆ. ಈ ಕಾಯ್ದೆಯಲ್ಲಿ ನಮೂದಿಸಲ್ಪಟ್ಟಂತೆ ವಿಕಲಾಂಗರ ಹಕ್ಕು ಗಳು ಎಂದರೆ ಸಮಾನತೆಯ ಹಕ್ಕು, ಹಾಗು ಅಂಗವೈಕಲ್ಯದ ಆಧಾರದ ಮೇಲೆ ತಾರತಮ್ಯದಿಂದ ಮುಕ್ತರಾಗುವ ಹಕ್ಕು, ಅಲ್ಲದೆ ಅಮಾನವೀಯ ಕೃತ್ಯಗಳ ವಿರುದ್ದ ರಕ್ಷಣೆಯ ಹಕ್ಕು, ಸಮಾನ ರಕ್ಷಣೆ ಮತ್ತು ಅಪಾಯದ ಸಂಧರ್ಭದಲ್ಲಿ ಸಮಾನ ಸುರಕ್ಷತೆಯ ಹಕ್ಕು, ಹಾಗು ಸೂಕ್ತ ಉಪಕರಣಗಳನ್ನೊದಗಿಸುವುದು, ಮಾನವೀಯ ತುರ್ತು ಹಾಗು  ನೈಸರ್ಗಿಕ ವಿಪತ್ತುಗಳಲ್ಲಿ ಪೂರಕವಾಗಿ ಕ್ರಮ ಕೈಗೊಳ್ಳುವುದು, ಈ ಅದಿನಿಯಮದ ಪ್ರಕಾರ ಎಲ್ಲಾ ಸರಕಾರಿ ಕಟ್ಟದಗಳೂ ಅಂಗವಿಕಲರು ಸುಲಭವಾಗಿ ಬಳಸುವಂತೆ ವಿನ್ಯಾಸಗೊಳ್ಳಬೇಕು. ನಿಯಮವು ಮಂಜೂರಾದ ೫ ವರ್ಷದ ಒಳಗೆ ರಾಷ್ಟ್ರೀಯ ಸಮಿತಿ ಯನ್ನು ರಚಿಸಿ ಈ ಕಾರ್ಯವನ್ನು ಪೂರೈಸಬೇಕು. ಅದಕ್ಕೆ ಒಪ್ಪದ ಕಟ್ಟಡಗಳ ಪರವಾನಿಗೆಯನ್ನು ರದ್ದು ಮಾಡಬೇಕು. ಅಷ್ಟೇ ಅಲ್ಲದೆ ಎಲ್ಲಾ ಸರಕಾರಿ ಸಂಸ್ಥೆಗಳಲ್ಲಿ, ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿ ಔದ್ಯೋಗಿಕ ಅವಕಾಶಗಳಲ್ಲಿ ೫% ಮೀಸಲಾತಿಯನ್ನು ಜಾರಿಗೆ ತರಬೇಕು. ಈ ಎಲ್ಲಾ ಉದ್ದೇಶಗಳನ್ನು ಈಡೇರಿಸಲು ರಾಜ್ಯ ಹಾಗು ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸುವ ಪ್ರಸ್ತಾಪವು ಇದ್ದು, ಮುಂಬರುವ ತಿಂಗಳುಗಳಲ್ಲಿ ಕಾಯ್ದೆಯಾಗಿ ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳೂ ಇರುವುದು ಸ್ವಾಗತಾರ್ಹ. ಇದು ಉದಾಹರಣೆಯಷ್ಟೆ. ಅನೇಕ ಸಂಘ ಸಂಸ್ಥೆಗಳು ಈಗಾಗಲೇ ಅಂಗವಿಕಲರ ಏಳ್ಗೆಗಾಗಿ ಶ್ರಮ ವಹಿಸುತ್ತಿದ್ದು ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ. ಯೋಜನೆಗಳು ಸಮರ್ಪಕವಾಗಿ ಅವರ ಅವಶ್ಯಕತೆಗಳನ್ನು ಪೂರೈಸ ಬೇಕಾದರೆ ಕೇವಲ ಸವಲತ್ತುಗಳನ್ನು ನೀಡಿದರೆ ಸಾಲದು, ತಾವು ಬೇರೆಯವರಿಗಿಂತ ಭಿನ್ನರಲ್ಲ, ಬಲಾಡ್ಯರು ಎಂಬ ಮನೋ ದೈರ್ಯ ತುಂಬುವಲ್ಲಿ ನಾವು ಯಶಸ್ಸನ್ನು ಕಾಣಬೇಕಿದೆ.

ಕೊನೆಯದಾಗಿ ಈ ಎಲ್ಲದರ ಜೊತೆಗೆ ಈ ಹೊತ್ತಿನಲ್ಲಿ ನಮ್ಮವರೇ ಆದ ಈ ವಿಶಿಷ್ಟ ಚೇತನರಾದ ಸೂಕ್ಷ್ಮ ಮತಿಗಳಿಗೆ ಲತಾಳ ಕೆಲವು ಸಲಹೆಗಳು: 

 • ನಮಗೆ ಒಗ್ಗುವ ಕೆಲಸ ಮಾಡೋದಕ್ಕಿಂತ, ನಮ್ಮನ್ನು ಬಗ್ಗಿಸುವ ಕೆಲಸಕ್ಕೆ ನಾವು ತೆರೆದುಕೊಳ್ಳಬೇಕು.
 • ಯೋಗ, ಧ್ಯಾನ, ಪ್ರಾಣಾಯಾಮ, ಆಟ, ಪಾಠ ಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು.
 • ನಮ್ಮನ್ನು ಕಡೆಗಣಿಸುವ, ತುಚ್ಛವಾಗಿ ಕಾಣುವವರ ಮುಂದೆ ನಗಬೇಕು, ಹಿಗ್ಗಬೇಕು.
 • ಹಿಯಾಳಿಸುವ, ಹಿಂದೆತಳ್ಳುವ ಜನರನ್ನು ಕಡೆಗಣಿಸಬೇಕು, ಆದರೆ ಅವರೊಡನೆಯೇ ಇರಬೇಕು (ನಾವೇನೆಂದು ತೋರಿಸಲು)
 • ವಿಕಲ ಚೇತನರ ಯಶೋಗಾಥೆ ಯನ್ನು ಕೇಳಿ ಕಣ್ಣೀರಿಡುತ್ತಾ ಕೂರಬಾರದು, ಮುಂದೆ ಹೆಜ್ಜೆ ಇಡಬೇಕು.
 • ಸರಕಾರಿ ಅಥವಾ ಬೇರೆ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಬಳಸಿಕೊಳ್ಳಬೇಕು.
 • ಸಮಯ ಸಿಕ್ಕಾಗೆಲ್ಲ ನಮಗಿಷ್ಟವಾದ ವಿಷಯ ವ್ಯಾಪ್ತಿಯಲ್ಲೇ ಹೊಸದೊಂದು ಆಲೋಚಿಸಬೇಕು.
 • ಖಿನ್ನತೆಯನ್ನು ದಾಟಲು ಒಂದಿಷ್ಟು ಸ್ವಾಭಿಮಾನವನ್ನು ತುಂಬಿಕೊಳ್ಳಬೇಕು, ಅದು ದುರಹಂಕಾರಕ್ಕೆ ತಿರುಗದಂತೆ ನೋಡಿಕೊಳ್ಳಬೇಕು
 • ನಮಗೆ ಬೇಡವೆಂದರೂ ಅನುಕಂಪವನ್ನು ತೋರಿಸುವವರು ಇದ್ದೇ ಇರುತ್ತಾರೆ, ನಾವು ನಗುತ್ತಲೇ ಅದನ್ನು ದೂಡಬೇಕು.
 • ಜನರು ನಮ್ಮನ್ನು ಪ್ರೀತಿಸದೇ ಉಳಿಯಲಾರದಂತ ವ್ಯಕ್ತಿತ್ವವನ್ನು ನೀವೇ ರೂಡಿಸಿ ಕೊಳ್ಳಬೇಕು.

ಆಗಷ್ಟೆ ಸಮಾಜ ನಿಮ್ಮನ್ನು ಅವರಂತೆ ನೋಡಲು ಕಷ್ಟ ಸಾದ್ಯ. ನಾವೇ ಅವರನ್ನು ನಮ್ಮಂತೆ ಕಾಣೋಣ. ಮನೋವೈಕಲ್ಯ ರಹಿತ ಸಮಾಜ ನಿಮ್ಮಿಂದಲೇ ನಿರ್ಮಾಣವಾಗಲಿ. ಇವು ಲತಾಳ ಮನದಾಳದ ಮಾತುಗಳು. 

ಅವಳ ಮಾತುಗಳಂತೆ ನಾವೂ ಸಹ ಮನೋವೈಕಲ್ಯ ರಹಿತ ಸಮಾಜ ನಿರ್ಮಿಸುವಲ್ಲಿ ಭಾಗಿಯಾಗೋಣ ಎನ್ನುವ ಆಶಯದೊಂದಿಗೆ..

-ಆರಿದ್ರಿಕಾ ಭಾರತಿ

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

23 thoughts on “ತನ್ನಂತೆ ಪರರ ಬಗೆದೊಡೆ ಕೈಲಾಸ: ಆರಿದ್ರಿಕಾ ಭಾರತಿ

 1. Hi Author,

  All of these comes from experience facing many difficulties. i specially love the line "ನಮಗೆ ಒಗ್ಗುವ ಕೆಲಸ ಮಾಡೋದಕ್ಕಿಂತ, ನಮ್ಮನ್ನು ಬಗ್ಗಿಸುವ ಕೆಲಸಕ್ಕೆ ನಾವು ತೆರೆದುಕೊಳ್ಳಬೇಕು". this implies for everyone in the world. no matter what you are perfect, deff, male, female, dumb, handicapt, bedridden, single, married, working, non working, fresher, manager, ceo, and who ever it is.. This makes feel a person mode motivated and commited in his/her life. 

  Thanks for the wonderful article.

   

  Thanks

  Mahesh

   

   

 2. ಬರವಣಿಗೆಗೊಂದು ಹೊಸ ಆಯಾಮ… ಆರಿದ್ರಿಕಾ ಅವರ ಬರಹದ ಸೊಗಸೇ ನವ ಸಾಹಿತಿಗಳಿಗೊಂದು ಹೊಸ ಪರ್ವ… ಇನ್ನೂ ಹಲವು ಬರಹಗಳ ನಿರೀಕ್ಷೆಯಲ್ಲಿರುವೆ.

  1. ತುಂಬಾ ಥ್ಯಾಂಕ್ಸ್ ಸಿರಿ , ಆದ್ರೆ ಲೇಖನದ ಪಕ್ವತೆ ಯಲ್ಲಿ ಸಂಪಾದಕರ ಕೈಚಳಕವಿದೆ ಅನ್ನೋದು ಕಾಣದ ಸತ್ಯ

 3. ಮನದಾಳದ ಮಾತು ಮುತ್ತಿನoತೆ ವರ್ಣೀಸಿದ್ದೀರಿ, ನೀವು ಒಬ್ಬ ಅರ್ಥಪೂರ್ಣ ಮತ್ತು ಉತ್ತಮ ಲೇಖಕಿ ಎoಬುವದರಲ್ಲಿ ಎರಡು ಮಾತಿಲ್ಲ. ಲತಾ ಅವರಿಗೆ ಉತ್ಸಾಹದ ಆಧಾರ ದೊರದಿಕಿದರೆ ಆಕೆಯು ಏನೂ ಬೇಕಾದರು ಸಾದಿಸಬಲ್ಲಳು ಎoದೆನಿಸುತ್ತದೆ. 

  ಲತಾಳOತಹ ಪ್ರತಿಯೊಬ್ಬರೂ ನಿಮ್ಮ ಸಲಹೆಗಳನ್ನು ಪಾಲಿಸಲಿ ಎoಬುದೇ ನನ್ನ ಆಶಯ…

  ಲೇಖನ ಉತ್ತಮವಾಗಿ ಮೂಡಿ ಬoದಿದೆ….ಮತ್ತಷ್ಟು ಬರವಣಿಗೆಗಳು ಬರಲಿ ಎoದು ಆಶಿಸುತ್ತಾ…

 4. ಈ ಲೇಖನದಲ್ಲಿರೋ ಲತಾ ಎಷ್ಟೋ ಮನಸ್ಸು ಗೆದ್ದಿರೋ ತಾಯಿ… ಇದು ಅವರ ನೈಜ ಕಥೆ… ಮತ್ತು ಆರಿದ್ರಿಕಾ ಮತ್ತೆ ಬರೆಯುತ್ತಿರೋದು ಖುಷಿ ಕೊಡುತ್ತಿದೆ …ಧನ್ಯವಾದ ಪಂಜು

 5. Praapanchika savalugalanella geddu nintiruva latha ge hrudaya poorvaka abhinandane, manassina vikalate oonave horatu, sharira vikalateyalla, great aaridrika ,nimma lekhana nammantavarigu darideepa, thanx.

 6. Dear author,
  The writing came out so good that it not only motivates the physically challenged persons but also for those who are mentally suppressed by their surrounding people.

Leave a Reply

Your email address will not be published. Required fields are marked *