ಅತಿಸಾರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಚಿತ್ರದುರ್ಗದ ಖಾಸಗಿ (ಹೆಸರು ನೆನಪಿಲ್ಲ) ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿನ ತಜ್ಞವೈದ್ಯರು ಒಂದು ವಾರ ಆತನಿಗೆ ಸೂಕ್ತ ಚಿಕಿತ್ಸೆ ನೀಡಿ ಬಿಡುಗಡೆ ಮಾಡುತ್ತಾರೆ. ಅತಿಸಾರದಿಂದ ಬಳಲಿದ ರೋಗಿಗೆ ಹೆಚ್ಚು-ಹೆಚ್ಚು ದ್ರವರೂಪದ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಹಾಗೆಯೇ ಎಳನೀರನ್ನು ಹೆಚ್ಚು ಸೇವಿಸಿ ಎಂದೂ ಸಲಹೆ ನೀಡುತ್ತಾರೆ. ಬಿಡುಗಡೆಯಾಗಿ ಹೋದ ರೋಗಿ ಮೂರನೇ ದಿನಕ್ಕೆ ಮತ್ತೆ ವಾಪಾಸು ಬರುತ್ತಾನೆ. ಈ ಬಾರಿ ಇನ್ನೂ ಹೆಚ್ಚು ಸುಸ್ತಿನಿಂದ ಬಳಲಿರುತ್ತಾನೆ. ಮುಖ ಬಿಳಿಚಿಕೊಂಡಿರುತ್ತದೆ. ಚಿಕಿತ್ಸೆಯಲ್ಲಿ ಏನೂ ವ್ಯತ್ಯಾಸ ಆಗಿರುವುದಿಲ್ಲ ಎಂದು ಮತ್ತೊಮ್ಮೆ ವೈದ್ಯರು ಖಚಿತಪಡಿಸಿಕೊಳ್ಳುತ್ತಾರೆ. ಈ ಬಾರಿ ಇನ್ನೂ ಉನ್ನತ ಮಟ್ಟದ ಮೂತ್ರ-ರಕ್ತ, ಸ್ಕ್ಯಾನಿಂಗ್ ಇತ್ಯಾದಿಗಳ ಪರೀಕ್ಷೆಗಳಾಗುತ್ತವೆ. ಎಲ್ಲವೂ ನಾರ್‍ಮಲ್ ಇರುತ್ತದೆ. ಬಹುಷ: ಆಂಟೀಬಯಾಟಿಕ್ ಡೋಸ್ ಕಡಿಮೆಯಾಗಿರಬಹುದು ಎಂದು ಭಾವಿಸಿದ ಡಾಕ್ಟರ್ ಇನ್ನೊಬ್ಬ ಹಿರಿಯ ವೈದ್ಯರೊಂದಿಗೆ ಚರ್ಚಿಸಿ, ಮತ್ತೂ ಹೆಚ್ಚಿನ ಪ್ರಮಾಣದ ಆಂಟೀಬಯಾಟಿಕ್ ಔಷಧಗಳನ್ನು ನೀಡುತ್ತಾರೆ. ಮತ್ತೊಂದು ವಾರ ಆತ ಆಸ್ಪತ್ರೆಯಲ್ಲಿದ್ದು, ಬಿಡುಗಡೆ ಹೊಂದಿ ಮನೆಗೆ ಹೋಗುತ್ತಾನೆ. ಮತ್ತೆ ಮೂರೇ ದಿನಕ್ಕೆ ಮೂರನೇ ಬಾರಿ ಇನ್ನೂ ಚಿಂತಾಜನಕ ಸ್ಥಿತಿಯಲ್ಲಿ ಬರುತ್ತಾನೆ. ಇದೀಗ ತಲೆಕೆಡುವ ಸರದಿ ವೈದ್ಯರದ್ದು. ಆಸ್ಪತ್ರೆಯ ಘನತೆಯ ಪ್ರಶ್ನೆ, ಫಿಜಿಷಿಯನ್‌ಗಳು, ಸರ್ಜನ್‌ಗಳು ಸೇರಿ ಚರ್ಚೆ ಮಾಡುತ್ತಾರೆ. ಅಷ್ಟೂ ವೈದ್ಯಕೀಯ ವರದಿಗಳನ್ನು ಪುನರ್‌ಪರಿಶೀಲಿಸುತ್ತಾರೆ. ಏನೂ ವ್ಯತ್ಯಾಸವಾದ ಹಾಗೆ ಕಂಡು ಬರುವುದಿಲ್ಲ. ಒಟ್ಟಾರೆ ನಮಸ್ಯೆ ಬಗೆಹರಿಯುವುದಿಲ್ಲ. ತಮ್ಮಿಂದ ಗುಣಮಾಡಲಾಗದ ಮತ್ತು ಅತಿಸಾರದಿಂದ ಬಳಲುತ್ತಿರುವ ರೋಗಿಯನ್ನು ಬೆಂಗಳೂರಿನ ದೊಡ್ಡಾಸ್ಪತ್ರೆಗೆ ಸಾಗಿಸಲು ಸಲಹೆ ನೀಡುತ್ತಾರೆ.
ಮರಣಸದೃಶ ಕೀಟನಾಶಕಗಳ ಬಗ್ಗೆ ಈ ಹಿಂದೆ ಕೆಲವು ಬಾರಿ ಪ್ರಸ್ತಾಪಿಸಲಾಗಿತ್ತು. ಅತಿಹೆಚ್ಚು ರಾಸಾಯನಿಕಗಳನ್ನು ಬೇಡುವ ತರಕಾರಿಯೆಂದರೆ ಹೂಕೋಸು ಮತ್ತು ಬೀಜರಹಿತ ದ್ರಾಕ್ಷಿ ಎಂಬುದು ಜನಸಾಮಾನ್ಯರ ಕಲ್ಪನೆ. ಸಾವಯವ ತರಕಾರಿ-ಹಣ್ಣುಗಳ ಬಗ್ಗೆ ಒಲವು ಇರುವವರು ಸಾಮಾನ್ಯವಾಗಿ ಇವೆರಡನ್ನೂ ತಿನ್ನುವುದಿಲ್ಲ. ಉಳಿದ ಹಣ್ಣು-ತರಕಾರಿಗಳನ್ನು ಉಪಯೋಗಿಸುತ್ತಾರೆ. ವಾರದ ಸಂತೆ ಮಾರುಕಟ್ಟೆಯಲ್ಲಿ, ತರಕಾರಿಯನ್ನು ಬೆಳೆಯಲು ಅವಕಾಶವಿರುವ ಹಳ್ಳಿಗರೇ ಹೆಚ್ಚು ಜನ ತುಂಬಿರುವುದನ್ನು ನೋಡಬಹುದು. ಸಂತೆಯಲ್ಲಿ ತರಕಾರಿಗಳು ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಮತ್ತು ತಾಜಾ ಇರುತ್ತವೆ ಎಂಬುದೇ ಹೆಚ್ಚು-ಹೆಚ್ಚು ಜನ ಸಂತೆಗೆ ಹೋಗಲು ಕಾರಣ. ಆದರೆ ಸತ್ಯವೆಂಬುದು ಬೇರೆಯೇ ಇದೆ.
ಹಿರಿಯ ಸ್ನೇಹಿತರು ಮತ್ತು ಕೃಷಿಕರೂ ಆದ ಹೆಗಡೆಯವರು ಮೊನ್ನೆ ಮಾತಿಗೆ ಸಿಕ್ಕಿದ್ದರು. ಇದೀಗ ಕೃಷಿಗೆ ಸಂಬಂಧಿಸಿದ ಸುಲಭ ಸಾಧನಗಳನ್ನು ತಯಾರು ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ತಮ್ಮ ಮೈಕ್ರೋಸ್ಪಿಂಕ್ಲರ್‌ಗಳ ಬಗ್ಗೆ ಮಾಹಿತಿ ನೀಡಲು ಹಲವು ರೈತರ ಜಮೀನುಗಳಿಗೆ ಬೇಟಿ ನೀಡುತ್ತಿದ್ದರು. ಮೊನ್ನೆ ಮಾತಿಗೆ ಸಿಕ್ಕಿದಾಗ ಆ ಅನುಭವಗಳನ್ನೇ ಹೇಳಿ ಎಂದು ಕೇಳಿಕೊಂಡೆ. ಪ್ರಸ್ತುತದಲ್ಲಿ ನಾವು ತಿನ್ನುವ ಆಹಾರವೇ ವಿಷವಾಗಿದೆ. ನೋಡಲು ಚೆನ್ನಾಗಿ ಕಾಣಬೇಕು ಎಂಬ ಉದ್ದೇಶದಿಂದ ಏನೆಲ್ಲಾ ಕೀಟನಾಶಕ ಮತ್ತು ಹಾರ್ಮೊನುಗಳನ್ನು ಸಿಂಪಡಿಸುತ್ತಾರೆ ಎಂದು ಪಟ್ಟಿ ಮಾಡುವುದೇ ಕಷ್ಟ. ಪಾದರಸದಂತಹ ವಿಷವನ್ನು ಸಿಂಪರಣೆ ಮಾಡುತ್ತಾರೆ. ಸಯನೈಡ್ ಸುಲಭವಾಗಿ ಸಿಗುವುದಿಲ್ಲವಾದ್ದರಿಂದ ಅದನ್ನೊಂದು ಉಪಯೋಗಿಸುವುದಿಲ್ಲ. ಅವರು ನೋಡಿದ ಕೆಲವು ತರಕಾರಿ ತೋಟಗಳ ಉದಾಹರಣೆಗಳನ್ನು ನೀಡಿದರು. ಎಲೆಕೋಸಿಗೆ ಹುಳ ಬೀಳಬಾರದು ಎಂದು ರಾಸಾಯನಿಕ ಪುಡಿಯನ್ನು ಉದುರಿಸುತ್ತಾರೆ, ಇದಕ್ಕೆ ಡಸ್ಟಿಂಗ್ ಎನ್ನುತ್ತಾರೆ. ವಿಘಟನೆ (ನಾನ್ ಬಯೋಡಿಗ್ರೇಡಬಲ್) ಗೊಳ್ಳದ ಈ ಪುಡಿಗಳು ಎಲೆಕೋಸಿನ ಒಳಪದರದಲ್ಲಿ ಹಾಗೆಯೇ ಉಳಿದಿರುತ್ತದೆ. ತಾಜಾ ಎಂದು ನಾವು ಸಂತೆಯಿಂದಲೋ ಅಥವಾ ಮಾರ್ಕೆಟ್‌ನಿಂದಲೋ ತಂದು ಪದಾರ್ಥ ಮಾಡುತ್ತೇವೆ. ಆ ರಾಸಾಯನಿಕ ಪುಡಿ ಸೀದಾ ನಮ್ಮ ಹೊಟ್ಟೆಗೆ ಸೇರುತ್ತದೆ. ಅಜೀರ್ಣ ಹೊಟ್ಟೆಯುಬ್ಬರ, ಬೇಧಿ, ತಲೆನೋವು ಇಂತಹ ಮೇಲ್ನೋಟಕ್ಕೆ ಕಾಣುವ ಕಾಯಿಲೆಗಳು ತಕ್ಷಣ ಶುರುವಾಗುತ್ತವೆ. ಇನ್ನು ಕರುಳುಬೇನೆ, ಲಿವರ್ ಮತ್ತು ಕಿಡ್ನಿ ತೊಂದರೆಗಳು ಆಮೇಲೆ ಕಾಣಿಸಿಕೊಳ್ಳುತ್ತವೆ. ನಾವು ವಿವಿಧ ವೈದ್ಯರ ಹತ್ತಿರ ಹೋಗಿ ನಾನಾವಿಧದ ಔಷಧಗಳನ್ನು ಸೇವಿಸುತ್ತೇವೆ. ಚೀಪಾಗಿ ಸಿಗುವ ಒಂದು ಎಲೆಕೋಸಿನ ಗೆಡ್ಡೆ ಪರೋಕ್ಷವಾಗಿ ನಮ್ಮ ಸಾವಿರಾರು ರೂಪಾಯಿಗಳನ್ನು ನುಂಗಿ ಹಾಕುತ್ತದೆ. ನಮಗೆ ಇದರ ಪರಿವೇ ಇಲ್ಲ. ಸಾಂಪ್ರಾದಾಯಿಕವಾಗಿ ಬೆಳೆಯುತ್ತಿದ್ದ ಇತರ ತರಕಾರಿಗಳನ್ನು ಈ ಕೀಟನಾಶಕವೆಂಬ ವಿಷ ಬಿಟ್ಟಿಲ್ಲ, ತೊಂಡೆ, ಎಲ್ಲಾ ತರಹದ ಸೊಪ್ಪು, ಹೀಗೆ ನಾವು ಕೊಂಡು ತಿನ್ನುವ ಪ್ರತಿ ತರಕಾರಿಯೂ ವಿಷಮಯವೆ ಆಗಿದೆ. ಅಚ್ಚ ಕೆಂಪು ಬಣ್ಣ ಹೊಂದಿದ, ಚೆಂದ ಕಾಣುವ ಟೊಮೇಟೊ ಬರುವುದು ಕೋಲಾರ ಎಂಬ ದೂರದ ಊರಿನಿಂದ. ಇದಕ್ಕೂ ಕೆಡದಿರಲು ಒಂದು ಬಗೆಯ ರಾಸಾಯನಿಕ ಮತ್ತು ಚೆಂದ ಕಾಣಲು ಇನ್ನೊಂದು ಬಗೆಯ ಹಾಗೂ ಒಂದೇ ತರಹದ ಗಾತ್ರ ಹೊಂದಲು ಹಾರ್ಮೋನೆಂಬ ವಿಷ ಹಾಕುತ್ತಾರೆ. ಆಹಾ! ಟೋಮೆಟೋ ಚಿಲ್ಲಿ ಬಲು ರುಚಿ ಎಂದು ಬಾಯಿ ಚಪ್ಪರಿಸುತ್ತೇವೆ.
ವ್ಯಾವಾಹರಿಕ ದೃಷ್ಟಿಯಿಂದ ಬೆಳೆಯುವ ಎಲ್ಲಾ ತರಕಾರಿ ಮತ್ತು ಹಣ್ಣುಗಳಿಗೂ ರಾಸಾಯನಿಕಗಳನ್ನು ಉಪಯೋಗಿಸದಿದ್ದಲ್ಲಿ ರೈತನಿಗೆ ಲಾಭವಾಗುವುದಿಲ್ಲ ಮತ್ತು ಕೀಟಗಳು ಆ ರೈತನ ಬದುಕನ್ನು ಹೈರಾಣ ಮಾಡುತ್ತವೆ ಎಂಬ ವಾದವಿದೆ. ಉದಾಹರಣೆಗೆ ಯಾವುದೋ ಒಂದು ರಾಸಾಯನಿಕವನ್ನು ತರಕಾರಿಗೆ ಉಪಯೋಗಿಸುತ್ತಾರೆ ಎಂದಿಟ್ಟುಕೊಳ್ಳಿ. ಆ ರಾಸಾಯನಿಕವು ಮಾನವನಿಗೆ ಅಪಾಯಕಾರಿಯೂ ಅಲ್ಲ ಎಂದಿಟ್ಟುಕೊಳ್ಳೋಣ. ಆದರೆ ಹೇಗೆ? ನಿಗದಿತ ಪ್ರಮಾಣ ಮತ್ತು ಸಮಯ ಇವೆರೆಡೂ ಅಂಶಗಳು, ಆ ರಾಸಾಯನಿಕದ ವಿಷಮುಕ್ತತೆಗೆ ಪೂರಕವಾಗಿರುತ್ತದೆ. ಅಂದರೆ, ೧ ಲೀಟರ್ ನೀರಿಗೆ ಅರ್ಧ ಮಿ.ಲಿ. ಮಾನೋಕ್ರಟಪಸ್ ಹಾಕಿ ಅದನ್ನು ಸಿಂಪಡಿಸಿದ ನಂತರದಲ್ಲಿ ಕನಿಷ್ಟ ೪೫ ದಿನಗಳವರೆಗೆ ಆ ತರಕಾರಿ ಸೇವನೆಗೆ ಅರ್ಹವಾಗಿರುವುದಿಲ್ಲ. ಯಾವ ರೈತರೂ ಈ ನಿಯಮಗಳನ್ನು ಪಾಲಿಸುವುದಿಲ್ಲ. ಕೊಯುವುದಕ್ಕೆ ಮುನ್ನಾ ದಿನ ಔಷಧವನ್ನು ಸಿಂಪಡಿಸುತ್ತಾರೆ ಮತ್ತು ತಕ್ಷಣದಲ್ಲಿ ಅದು ಮಾರುಕಟ್ಟೆಗೆ ಬಂದು ಆ ಮರುದಿನ ನಮ್ಮ ಊಟದ ತಟ್ಟೆಯಲ್ಲಿರುತ್ತದೆ. ಹೀಗೆ ನಾವು ಪ್ರತ್ಯಕ್ಷ ವಿಷವನ್ನು ಪರೋಕ್ಷವಾಗಿ ಸೇವಿಸುತ್ತಾ, ನಿಧಾನವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.
ಮಧ್ಯಾಹ್ನದ ಹೊತ್ತು, ಉರಿ ಬಿಸಿಲು, ಹೊಟ್ಟೆ ಬೇರೆ ಹಸಿಯುತ್ತಿದೆ. ಎದುರಿಗೆ ಅಚ್ಚ ಹಳದಿ ಬಣ್ಣದ ನೋಡಲು ಗೋಧಿಕಲ್ಲು ಗೂಟದಷ್ಟು ಉದ್ದವಿರುವ ದಪ್ಪನೆಯ ಬಾಳೆಹಣ್ಣು ಬಾಯಲ್ಲಿ ನೀರು ತರಿಸುತ್ತದೆ. ಸಾಮಾನ್ಯವಾಗಿ ಬಾಳೆ ಬೆಳೆಯಲು ಭಾರಿ ಪ್ರಮಾಣದ ಔಷಧಗಳ ಅಗತ್ಯವಿಲ್ಲ. ಆದರೂ ನಾಟಿಗೊಬ್ಬರದ ಜೊತೆಯಲ್ಲಿ, ತೋಟಗಾರಿಕಾ ಇಲಾಖೆಯವರು ಹೇಳಿದ್ದಾರೆ ಎಂದು ಒಂದಷ್ಟು ರಾಸಾಯನಿಕ ಗೊಬ್ಬರಗಳನ್ನು ಸುರಿಯುವುದು ಅನಿವಾರ್ಯ ಎಂಬಂತಾಗಿದೆ. ಇರಲಿ, ಜೊತೆಗೆ ಬಾಳೆ ಹಣ್ಣಿನ ಗಾತ್ರ. ಒಂದು ಹಣ್ಣು ತಿಂದರೆ ಸಾಕು ಹೊಟ್ಟೆ ತುಂಬಿಹೋಗುದೇನೋ ಎಂಬ ಹಾಗೆ ಕಾಣುತ್ತದೆ. ಬಾಳೆಗೊನೆಯನ್ನು ಕತ್ತರಿಸುವ ಪೂರ್ವದಲ್ಲಿ, ಬಾಳೆಗೊನೆಯ ತುದಿಯಲ್ಲಿರುವ ಬಾಳೆಮೂತಿಯನ್ನು ಕೊಯ್ದು, ಅದಕ್ಕಿಷ್ಟು ಹಾರ್ಮೊನುಗಳನ್ನು ಸವರಿದರೆ ಸಾಕು. ಬಾಳೆಕಾಯಿಯ ಗಾತ್ರ ಹುಣ್ಣಿಮೆ ಚಂದ್ರನಂತೆ ಹಿರಿದಾಗುತ್ತದೆ ಮತ್ತು ಬಣ್ಣ ಥೇಟ್ ನಮ್ಮ ಸಿನಿಮಾ ಸುಂದರಿಯರಂತೆ ಬೆಳಗುತ್ತದೆ. ನಾಳೆ ಬಲುದೊಡ್ಡವರ ಮದುವೆ ಮನೆ ಇದೆ, ಮಂಡಿಯಲ್ಲಿ ಬಾಳೆಹಣ್ಣು ಇನ್ನೂ ಆಗಿಲ್ಲ. ಚಿಂತೆ ಬೇಡ ಅದಕ್ಕೆ ಇನ್ನೊಂದು ಕೆಂಪು ಬಣ್ಣದ ರಾಸಾಯನಿಕ ಲಭ್ಯವಿದೆ. ಗೊನೆಯ ಬುಡದಲ್ಲಿ ಸ್ವಲ್ಪ ಸವರಿದರೆ ಸಾಕು. ಬಾಳೆಕಾಯಿ ೨ ತಾಸಿನಲ್ಲಿ ಹಣ್ಣಿನ ಬಣ್ಣವನ್ನು ಪಡೆಯುತ್ತದೆ. ಒಳಗೆ ಮಾತ್ರ ಕಾಯಿ ಹಾಗೆ ಇರುತ್ತದೆ. ಹಾಗಂತ ಮದುವೆ ಮನೆಯಲ್ಲಿ ಬಾಳೆಕಾಯಿಯನ್ನು ನೇತು ಹಾಕಲು ಬರುವುದಿಲ್ಲವಲ್ಲ. ಬಣ್ಣ ಮಾತ್ರ ಹಳದಿಯಿದ್ದರೆ ಸಾಕು, ಅದು ಹಣ್ಣು! ಕೊಡುವವರಿಗೂ ಅಷ್ಟೆ, ತಿನ್ನುವವರಿಗೂ ಅಷ್ಟೆ.
ಯಾವುದೇ ವ್ಯವಹಾರವಿರಲಿ, ವ್ಯಾಪಾರವಿರಲಿ. ಅದು ಗ್ರಾಹಕಸ್ನೇಹಿಯಾಗಿದ್ದರೆ ಆ ವ್ಯವಹಾರಕ್ಕೊಂದು ಅರ್ಥವಿರುತ್ತದೆ. ಗ್ರಾಹಕರಿಗಾಗಿ ನಮ್ಮಲ್ಲಿ ಬಲಿಷ್ಟವಾದ ಕಾನೂನುಗಳಿವೆ. ಎ.ಟಿ.ಎಂ.ನಿಂದ ದುಡ್ಡು ಸಿಗಲಿಲ್ಲ ಎಂದು ಬ್ಯಾಂಕಿನ ಮೇಲೆ ಕೇಸು ದಾಖಲಿಸಿದವರಿದ್ದಾರೆ, ಕೊಂಡ ಚೆಡ್ಡಿಯ ಬಣ್ಣ ಹೋಯಿತು ಎಂದು ಬಟ್ಟೆ ಅಂಗಡಿಯ ಮೇಲೆ ಮೊಕದ್ದಮೆ ಹೂಡಿದ ಗ್ರಾಹಕರು ನಿಮಗೆ ಸಿಗುತ್ತಾರೆ. ವಿಪರ್‍ಯಾಸ ನೋಡಿ, ಎಲ್ಲರಿಗೂ ಅನಿವಾರ್ಯವಾದ ತರಕಾರಿ-ಹಣ್ಣುಗಳು ಈ ಪರಿ ವಿಷಪೂರಿತವಾಗಿವೆ ಮತ್ತು ಇನ್ನಿಲ್ಲದ ರೋಗಗಳಿಗೆ ಕಾರಣವಾಗುತ್ತವೆ ಎಂದರೆ ಯಾರೂ ಕೇಳುವವರಿಲ್ಲ. ಪೇಟೆ-ಪಟ್ಟಣಗಳಲ್ಲಿ ವಾಸಿಸುವವರಿಗೆ ಮಾರ್ಕೆಟ್ ತರಕಾರಿ ಅನಿವಾರ್ಯ ಸರಕು. ವಿಷವಿರಲಿ, ದುಬಾರಿಯಿರಲಿ, ಚೆನ್ನಾಗಿರಲಿ ಅಥವಾ ಇಲ್ಲದಿರಲಿ, ಅಂತೂ ಹೊಟ್ಟೆಗಂತೂ ಏನಾದರೂ ಬೇಕಲ್ಲ!. ಹಳ್ಳಿಗರೂ ಪೇಟೆಗೆ ಬಂದು ದುಡ್ಡು ಕೊಟ್ಟು ವಿಷ ತಿನ್ನುವುದು ಯಾವ ಪರಿ. ಅಂದರೆ ಅಭಿವೃದ್ದಿಯ ಪರಕಾಷ್ಟೆಯೇ?. ಟಿ.ವಿ. ನೋಡುವುದಕ್ಕೇ ಸಮಯ ಸಾಲದು ಇನ್ನು ತರಕಾರಿ ಬೆಳೆಯುವುದೆಂತು?. ಬಹಳ ಸಂಕೀರ್ಣವಾದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಗೊತ್ತಿಲ್ಲದೇ ಮೋಸ ಮಾಡುವ ರೈತರಿಗೆ ತಿಳಿ ಹೇಳುವ ಕೆಲಸವಾಗಬೇಕು. ನಮ್ಮ ಮನೆಗೆ ಹಾಲು ತಂದು ಕೊಡುವ ರೈತನಿಗೆ ನಿಮ್ಮಲ್ಲಿ ರಾಸಾಯನಿಕಗಳನ್ನು ಬಳಸದೇ ಬೆಳೆದ ತರಕಾರಿ ಯಾವುದಾದರೂ ಇದೆಯಾ? ಎಂದು ಕೇಳಿದಾಗ, ಇಲ್ಲ ಎಂದ. ಬೆಂಡೆಕಾಯಿ, ಸೌತೆಕಾಯಿ, ಮಗೆಕಾಯಿ, ತೊಂಡೆಕಾಯಿ ಹೀಗೆ ಪ್ರತಿಯೊಂದಕ್ಕೂ ರಾಸಾಯನಿಕವನ್ನು ಸ್ಪ್ರೇ ಮಾಡಲೇ ಬೇಕು ಇಲ್ಲದಿದ್ದರೆ ಇಳುವರಿ ಬರುವುದಿಲ್ಲ ಎಂದ. ಆ ರೈತನ ಹಾದಿ ತಪ್ಪಿಸಿದವರು ಯಾರು ಎಂದು ಹುಡುಕಹೊರಟರೆ. . .
ಇಲ್ಲಿ ನಾವು ಈ ರೈತನನ್ನು ಅಂದು ಏನು ಪ್ರಯೋಜನ? ತತಲಾಂತರದಿಂದ ಪ್ರತಿ ಬೇಸಿಗೆಯಲ್ಲಿ ಅವರದು ತರಕಾರಿ ಬೆಳೆಯುವ ಕುಟುಂಬ. ಈಗ ಹತ್ತಿಪ್ಪತು ವರ್ಷದಿಂದ ಹುಳುಗಳ ಕಾಟ ಹೆಚ್ಚಾಗಿದೆ. ತೋಟಗಾರಿಕಾ ಇಲಾಖೆಗೆ ಹತ್ತಾರು ಬಾರಿ ಅಲೆದು, ವಿಚಾರಿಸಿ, ಅವರು ಹೇಳಿದ ಔಷಧವನ್ನು ತಂದು ಸಿಂಪಡಿಸಲು ಇವನ ಹತ್ತಿರ ಸಮಯವಿಲ್ಲ. ದಿನದ ಹೊತ್ತು ಕೆಲಸ ಮಾಡಿಯೇ ಕುಟುಂಬವನ್ನು ಪೊರೆಯಬೇಕು. ರಾತ್ರಿಹೊತ್ತು ತೋಟಗಾರಿಕಾ ಇಲಾಖೆ ಬಾಗಿಲು ತೆಗೆದಿರುವುದಿಲ್ಲ. ಸಂಜೆ ಪೇಟೆಗೆ ಬಂದವನು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಮಾರುವ ಘಾಟಿನ ಅಂಗಡಿಗೆ ಹೋಗುತ್ತಾನೆ. ಬೆಂಡೆಕಾಯಿಗೆ ಹುಳ ಬಿದ್ದಾವು ಔಸ್ದಿ ಕೊಡ್ರಿ ಎನ್ನುತ್ತಾನೆ. ಅಂಗಡಿಯವ ತನಗೆ ಜಾಸ್ತಿ ಕಮಿಷನ್ ಸಿಗುವ ದೊಡ್ಡ ಔಷಧದ ಡಬ್ಬಿಯನ್ನು ಕೊಟ್ಟು ಹಣ ಪಡೆಯುತ್ತಾನೆ. ಅಲ್ಲ ಇದು ಎಷ್ಟು ಹಾಕಬೇಕ್ರಿ ಅಂತ ರೈತ ಕೇಳುತ್ತಾನೆ. ಒಂದು ಬಕೇಟ್ ನೀರಿಗೆ ಇಡೀ ಬಾಟಲಿ ಹಾಕಿ ಸ್ಪ್ರೇ ಮಾಡು ಎನ್ನುತ್ತಾನೆ. ಓದಲು ಬಾರದ ರೈತ ಅಂಗಡಿಯವ ಹೇಳಿದ್ದನ್ನೇ ಮಾಡುತ್ತಾನೆ. ಅಂತಿಮವಾಗಿ ಗ್ರಾಹಕ ವಿಷವುಣ್ಣುತ್ತಾನೆ. ಬರೀ ಲಾಭದ ದುರಾಸೆಯಿಂದ ನುಡಿಯುವ ಅಂಗಡಿಯವನ ಸುಳ್ಳು ಇಡೀ ಸಮುದಾಯದ ಆರೋಗ್ಯವನ್ನು ಹಾಳುಗೆಡವುತ್ತದೆ. ಅಂಗಡಿಯವನ ಮೇಲೆ ಕೇಸ್ ಹಾಕಲು ಬರುವುದಿಲ್ಲ, ನೇರವಾಗಿ ಅವನ ಪಾತ್ರ ಇಲ್ಲ. ನಿಜವಾದ ಖಳರು ಯಾರು ಎಂದು ಗೊತ್ತಾಯಿತಲ್ಲ. ಪರೋಕ್ಷವಾಗಿ ತೋಟಗಾರಿಕಾ ಇಲಾಖೆಯೂ ಇದರಲ್ಲಿ ಭಾಗಿಯಾಗಿರುತ್ತದೆ. ಇಂತಹ ಬಲುದೊಡ್ಡ ಸಮಸ್ಯೆಯ ಬಗ್ಗೆ ಚಿಂತಿಸಲು ನಮ್ಮ ನಾಯಕರಿಗೆ ಸಮಯವಿಲ್ಲ. ಅತ್ಯಂತ ಗಂಭೀರ ಸಮಸ್ಯೆಯ ಬಗ್ಗೆ ಯಾರಿಗೂ ಕಲ್ಪನೆಯಿಲ್ಲ. ನಮ್ಮ ಮಕ್ಕಳು ವಿಷವುಣ್ಣುತ್ತಲೇ ಬೆಳೆಯುತ್ತಾರೆ, ಬೆಳೆದು ಬಲಿಷ್ಟ ಪ್ರಜೆಯಾಗಬೇಕಾದ ಮಕ್ಕಳು ಅಕಾಲ ಖಾಯಿಲೆಯಿಂದ ಬಳಲುತ್ತಾರೆ. ಖಾಯಿಲೆ ಗುಣವಾಗಿಲ್ಲವೆಂದು ವೈದ್ಯರನ್ನು ದೂರುತ್ತಾ, ದೇವರು-ದಿಂಡರು, ಮಾಟ-ಮಂತ್ರ, ತಾಯಿತ ಎಂದು ತಂದೆ-ತಾಯಿಗಳು ಅಲೆಯುತ್ತಾರೆ. ಕೆಲಸಕ್ಕೆ ಬಾರದ ವಿಷಯಗಳಿಗಾಗಿ ಜನ ಪ್ರತಿಭಟನೆ ಮಾಡುತ್ತಾರೆ, ಬೀದಿಗಿಳಿಯುತ್ತಾರೆ. ಮನುಕುಲದ ಜೊತೆಗೆ ಸಮಸ್ತವನ್ನೂ ಕೊಲ್ಲುತ್ತಿರುವ ವಿಷಕಾರಕ ಕೀಟನಾಶಕಗಳನ್ನು ಯಾರೂ ವಿರೋಧಿಸುತ್ತಿಲ್ಲ ಯಾಕೆ? ನಮ್ಮ ಸಂವೇದನೆ ಸತ್ತೇ ಹೋಗಿದೆಯಾ???
ಬೆಂಗಳೂರಿನ ಆಸ್ಪತ್ರೆಯವರಿಗೂ ಚಿತ್ರದುರ್ಗದ ಈ ಕೇಸು ಅಷ್ಟು ಸುಲಭವಾಗಿ ಬಗೆ ಹರಿಯಲಿಲ್ಲ. ಮತ್ತೆ ಹೊಸದಾಗಿ ಎಲ್ಲಾ ರೀತಿಯ ಟೆಸ್ಟ್‌ಗಳನ್ನು ಮಾಡಿದ್ದಾಯಿತು. ಸ್ಕ್ಯಾನಿಂಗೂ ಆಯಿತು. ಇನ್ನೂ ಉನ್ನತ ಪರೀಕ್ಷೆಗಾಗಿ ರಕ್ತ-ಮೂತ್ರಗಳನ್ನು ಮುಂಬಯಿಗೆ ಕಳುಹಿಸಲಾಯಿತು. ಅಲ್ಲಿ ರಕ್ತ-ಮೂತ್ರದಲ್ಲಿ ಮಾನೊಕ್ರಟಪಸ್ ಎಂಬ ವಿಷದ ಅಂಶ ಪತ್ತೆಯಾಯಿತು. ರೋಗಿ ರೈತನೂ ಅಲ್ಲ ಮತ್ತು ಮಾನೋಕ್ರಟಪಸ್ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಲೂ ಇಲ್ಲ. ಹಾಗಾದರೆ ಈ ವಿಷ ರೋಗಿಯ ದೇಹವನ್ನು ಹೇಗೆ ಸೇರಿತು?
ಈಗ ಸುಮಾರು ಹತ್ತು ವರ್ಷಗಳ ಹಿಂದೆ ರಾಜ್ಯದ ತೆಂಗಿನಮರಗಳಿಗೆ ಇದ್ದಕ್ಕಿದ್ದ ಹಾಗೆ ಒಂದು ವಿಚಿತ್ರ ರೋಗ ತಗುಲಿಕೊಂಡಿತು. ನೆಫ್ರಾಂಟೀಸ್ ಎಂದು ಈ ರೋಗಕ್ಕೆ ಹೆಸರಿಟ್ಟರು. ತೆಂಗಿನ ಗರಿಗಳ ಹಸಿರನ್ನು ಚೂರು ಬಿಡದಂತೆ ತಿಂದು ಹಾಕುತ್ತಿದ್ದವು ಕೀಟಗಳು. ಅರಸಿಕೆರೆ, ತರಿಕೆರೆ, ತುಮಕೂರು, ಚಿತ್ರದುರ್ಗ ಹೀಗೆ ರಾಜ್ಯದ ಹಲವು ಜಿಲ್ಲೆಗಳ ತೆಂಗಿನಮರಗಳು ಹರಿತ್ತನ್ನು ಉತ್ಪಾದಿಸಲು ವಿಫಲವಾಗಿ ಸಾಯುತ್ತಿದ್ದವು. ಜೊತೆಗೆ ತೆಂಗಿಗೆ ನುಸಿ ರೋಗ ಬಂದು ತೆಂಗಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದರು. ಸರ್ಕಾರದ ವಿಫಲತೆಯನ್ನು ಖಂಡಿಸಿ ರೈತ ಸಮುದಾಯದಿಂದ ಇಡೀ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದವು. ನುಸಿರೋಗ ಪೀಡಿತ ತೆಂಗಿನಮರಗಳ ಇಳುವರಿ ಕಡಿಮೆಯಾಯಿತು, ಮರಗಳು ಸಾಯತೊಡಗಿದವು. ಅಂತೂ ಪ್ರಬಲ ಮಧ್ಯದ ಲಾಬಿಯ ವಿರುದ್ಧ ನೀರಾ ಹೋರಾಟ ಗೆದ್ದಿತು. ನುಸಿಪೀಡೆ ಮಾತ್ರ ಉಳಿಯಿತು. ನಾಯಿಯ ಮೈಯಲ್ಲಿ ಸಣ್ಣ-ಸಣ್ಣ ಉಣ್ಣಿಗಳಿರುತ್ತವೆ. ಹಾಗಾಗಿ ಕಾಲಿನಿಂದ ನಾಯಿ ಪರ-ಪರ ಕೆರೆದುಕೊಳ್ಳುವುದನ್ನು ಎಲ್ಲರೂ ನೋಡಿರುತ್ತಾರೆ. ಇದೇ ಜಾತಿಯ ಒಂದು ಬರೀಗಣ್ಣಿಗೆ ತೋರದ ಕೀಟ, ತೆಂಗಿನ ಮಿಡಿಗಳಿಗೆ ಎರಗುತ್ತದೆ ಮತ್ತು ಅತ್ಯಂತ ತ್ವರಿತವಾಗಿ ಸಂತತಿಯನ್ನು ಬೆಳೆಸಿಕೊಳ್ಳುತ್ತಾ ಕಾಯಿಯ ರಸವನ್ನು ಹೀರುತ್ತದೆ. ತೆಂಗಿನ ಕಾಯಿಯ ಸಿಪ್ಪೆ ಗಟ್ಟಿ ಮತ್ತು ಸೊಟ್ಟ ಎರಡೂ ಆಗುತ್ತದೆ. ಕಾಯಿ ಸೈಜು ಬರುವುದಿಲ್ಲ. ಇದಕ್ಕೆ ಪರಿಹಾರವೆಂದರೆ ರಂಜಕವನ್ನು ಸಿಂಪಡಿಸುವುದು (ತೆಂಗಿನ ಜಾತಿಯಲ್ಲಿ ಕೆಂದಾಳ ಎಂಬ ಒಂದು ಪ್ರಬೇಧವಿದೆ, ಇದರಲ್ಲಿ ರಂಜಕದ ಅಂಶ ಹೆಚ್ಚು ಹಾಗೂ ಈ ತೆಂಗಿನಮರಕ್ಕೆ ನುಸಿರೋಗ ಬರುವುದಿಲ್ಲ). ರೈತರನ್ನು ಹಾದಿ ತಪ್ಪಿಸಿ ಹೊಸ-ಹೊಸ ವಿಧಾನಗಳನ್ನು ರಾಸಾಯನಿಕ ಅಂಗಡಿಗಳು ಹೇಳಿಕೊಡುತ್ತವೆ. ಇದರಲ್ಲಿ ಒಂದು ವಿಧ. ನೆಫ್ರಾಂಟೀಸ್ ಕೀಟಗಳನ್ನು ಕೊಲ್ಲಲು ಆಗ ತೆಂಗಿನ ಮರದ ಬುಡ ಬಿಡಿಸಿ, ಒಂದು ಬೇರನ್ನು ಕತ್ತರಿಸಿ, ೫೦ ಮಿಲಿ ಮಾನೊಕ್ರಟಪಸ್ ದ್ರಾವಣದಲ್ಲಿ ಅದ್ದಿ ಇಡುತ್ತಿದ್ದರು. ಬೇರಿನ ಮೂಲಕ ಈ ವಿಷ ಮರದ ತುದಿಗೆ ಮತ್ತು ಎಲೆಗಳಿಗೆ ಸೇರಿ ಅಲ್ಲಿನ ಕೀಟವನ್ನು ಕೊಲ್ಲುತ್ತದೆ. ಜೊತೆಗೆ ಅತ್ಯಂತ ಪರಿಶುದ್ಧ ನೀರು ಎಂದು ತಿಳಿಯುವ ಎಳನೀರು ವಿಷವಾಗುತ್ತದೆ. ಈ ಮಾನೊಕ್ರಟಪಸ್ ಔಷದ ಉಪಯೋಗಿಸಿದ ಎಳನೀರನ್ನು ಕುಡಿದ ಚಿತ್ರದುರ್ಗದ ರೋಗಿಗೆ ಅತಿಸಾರ ನಿಲ್ಲುತ್ತಲೇ ಇಲ್ಲ. ರೋಗದ ಮೂಲ ಗೊತ್ತಾಗಿ, ಗುಣವಾಗುವುದರಲ್ಲಿ ಪಾಪ ಆತ ಲಕ್ಷಾಂತರ ರೂಪಾಯಿ ಆಸ್ಪತ್ರೆಗಳಿಗೆ ಸುರಿದಿದ್ದ. ಈ ಸಂಗತಿ ಬಹಿರಂಗವಾದ ನಂತರದಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳು ಒಂದು ವರ್ಷ ಎಳನೀರು ಮಾರಾಟವನ್ನೇ ನಿಷೇಧಿಸಿದ್ದರು. ಈಗ ನುಸಿರೋಗ ತಡೆಯಲು ಎಲ್ಲಾ ಕಡೆ ಇದೇ ವಿಧಾನವನ್ನು ಅನುಸರಿಸಲಾಗುತ್ತಿದೆ. ನೀವು ಕುಡಿದ ಅಥವಾ ಕುಡಿಯಲಿರುವ ಎಳನೀರಿನಲ್ಲೂ ಮಾನೋಕ್ರಟಪಸ್ ಅಂಶ ಇರಬಹುದು ಯಾರಿಗೆ ಗೊತ್ತು???
*****
OMG !!! nice
ಕೆಲವೊಮ್ಮೆ ಇಂಥಾ ವಿಚಾರಗಳು ತಿಳಕೊಂಡು ಉಪಯೋಗವೇನು ಅನ್ಸುತ್ತೆ. ಹಣ ಸಂಪಾದನೆಯೊಂದೇ ಜೀವನದ ಏಕೈಕ ಮೌಲ್ಯ ಅಂತ ಆಗೋಗ್ತಿದೆ. ಹಾಲು ಹಣ್ಣು ಎಲ್ಲವೂ ವಿಷ ಅಂತಾಗೋದ್ರೆ ಏನು ಮಾಡಕ್ಕೆ ಆಗತ್ತೆ? ಬಳಕೆದಾರರು ಹೇಗೂ ಈ ಸಮಸ್ಯೆಯನ್ನು ಪರಿಹರಿಸೋಕೆ ಸಾಧ್ಯವಿಲ್ಲ. ವಿವರಗಳು ತಿಳಿದಷ್ಟೂ ಸುಮ್ನೆ ವೃಥಾ ಚಿಂತೆ, ಒತ್ತಡ ಅನ್ಸುತ್ತೆ.
informative one sir…..
ಪ್ರಿಯ ನಾರಾಯಣನ್ ಶಂಕರ್ ಜೀ
ಉಪಯೋಗ ಅಂದ್ರೆ ಆದಷ್ಟು ಅಂದ್ರೆ, ಅನುಕೂಲವಿದ್ದವರು ಮನೆಯಲ್ಲೇ ತರಕಾರಿ
ಬೆಳೆಯುವ ಪ್ರಯತ್ನ ಮಾಡಬಹುದಲ್ಲ ಎನ್ನುವ ಸದುದ್ದೇಶ. ಪ್ರತಿಕ್ರಯಿಸಿದ ಎಲ್ಲರಿಗೂ
ಧನ್ಯವಾದಗಳು
ಲೇಖನ ಚೆನ್ನಾಗಿದೆ. ಹಾಗೂ ನಿಮ್ಮ ಸದುದ್ದೇಶದ ಬಗ್ಗೆ ಗೌರವವಿದೆ. ಅಖಿಲೇಶ್ ಸರ್. ಆದರೆ ಈ ವಿಚಾರದಲ್ಲಿ ಹೆಚ್ಚಿನವರು ಅಸಹಾಯಕರು ಅನ್ನಿಸ್ತು. ಆ frustration ನಲ್ಲಿ ಹಾಗೆ ಕಾಮೆಂಟ್ ಮಾಡಿದ್ದಷ್ಟೆ.