ಅಲ್ಪಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುತ್ತಿರುವ ಶಿಕ್ಷಣವು ವಿಶಾಲವಾದ ಜಗತ್ತನ್ನು ಸಂಕುಚಿಸುತ್ತ ಸಾಗಿದೆ. ತಂತ್ರಜ್ಞಾನದ ಪ್ರಭಾವದಿಂದಾಗಿ ಮಾನವ ಏನೆಲ್ಲ ಸಾಧಿಸಿದ್ದಾನೆ. ಅಂಗೈಯೊಳಗೆ ವಿಶ್ವವನ್ನು ಹಿಡಿದಿಟ್ಟುಕೊಂಡಿದ್ದಾನೆ. ಆದರೆ ಸ್ವಾರ್ಥತೆಯಿಂದ ಬದುಕಿ ತನ್ನ ಕುಟುಂಬವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಅಸಹಾಯಕನಾಗಿದ್ದಾನೆ. ಕುಟುಂಬದ ಆಧಾರ ಸ್ತಂಭಗಳಂತಿರುವ ತಂದೆ ತಾಯಿಯರನ್ನು ಹೊರಹಾಕಿ ಇಲ್ಲವೇ ತಾನೆ ಹೊರಹೋಗಿ ಬದುಕುತ್ತಿದ್ದಾನೆ. ಇದರ ಮಧ್ಯೆ ತಂದೆ ತಾಯಿಯರನ್ನು ಶ್ರವಣಕುಮಾರನ ಪಿತೃಭಕ್ತಿಯಂತೆ ಪ್ರೀತಿ ವಾತ್ಸಲ್ಯದಿಂದ ಸಲುಹುತ್ತಿರುವವರು ಕಾಣಸಿಗುತ್ತಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಅಷ್ಟಕ್ಕೂ ತಂದೆ ತಾಯಿಯರನ್ನು ಬಿಟ್ಟು ಬದುಕುವ ಧಾವಂತ ಹೇಗೆ ಬರುತ್ತದೆ? ಎಂದು ಒಳಹೊಕ್ಕು ನೋಡಿದಾಗ ಬಹಳಷ್ಟು ಕಾರಣಗಳು ನಮಗೆ ಸಿಗಬಹುದು. ಸ್ವಾಭಿಮಾನ, ಅಹಂಭಾವ, ಉದ್ಯೋಗದ ಒತ್ತಡ, ಬದಲಾದ ಜೀವನ ಶೈಲಿ, ಪರಸ್ಪರ ಹೊಂದಾಣಿಕೆಯ ಕೊರತೆ ಹೀಗೆ ಹಲವಾರು ಕಾರಣಗಳಿರಬಹುದು. ಪ್ರಮುಖವಾಗಿ ಯಾವ ಕಾರಣದಿಂದ ಈ ಸಮಸ್ಯೆ ಉದ್ಭವಿಸುತ್ತದೆ ಎಂದರೆ ತಂದೆ ಮಕ್ಕಳಿಗೆ ಹದಗೆಟ್ಟುದನು ಕಾಣೆಯಾ ?| ಹೊಂದಿರುವರವರ್ ಅಹಂತೆಯು ಮೊಳೆಯುವನಕ || ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ?| ಬಂಧ ಮುರಿವುದು ಬಳಿಕ-ಮಂಕುತಿಮ್ಮ. ಇಂದು ತಂದೆ ಮಕ್ಕಳ ನಡುವಿನ ಹೊಂದಾಣಿಕೆಯ ಕೊರತೆಯಿಂದ, ಪವಿತ್ರವಾದ ತಂದೆ ಮಕ್ಕಳ ಸಂಬಂಧವು ಕಳಚಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ವಿಷಾದನೀಯವಾಗಿದೆ. ಆಧುನಿಕತೆಯ ಸೋಗಿನಲ್ಲಿ ಸಂಬಂಧಗಳಿಗೆ ಬೆಲೆ ಸಿಗದೆ ಒಣ ಪ್ರತಿಷ್ಠೆಗೆ ಜೋತು ಬಿದ್ದು ತಾನು, ತನ್ನ ಹೆಂಡತಿ, ತನ್ನ ಮಕ್ಕಳ ಸುಖ ಸಂತೋಷದ ನಶೆಯ ಅಮಲಿನಲ್ಲಿ ತೇಲುತ್ತಾ, ತಂದೆ ತಾಯಿಯರನ್ನು ದೂರ ಮಾಡಿ ಸಂಬಂಧಗಳ ಕೊಂಡಿಯನ್ನು ಕಳಚಿಕೊಂಡು ಬಾಳುವವರು ಹೆಚ್ಚಾಗಿದ್ದಾರೆ. ನಾನು ಯಾವುದರಲ್ಲಿ ಕಡಿಮೆಯಿದ್ದೇನೆಂಬ ಅಹಂಭಾವ, ಸ್ವಾಭಿಮಾನದ ಕಿಚ್ಚು ಬರುವ ತನಕ ಮಾತ್ರ ಈ ತಂದೆ-ಮಕ್ಕಳ, ಅತ್ತೆ-ಸೊಸೆಯ, ಅಣ್ಣ-ತಮ್ಮ ಹೀಗೆ ರಕ್ತ ಸಂಬಂಧಿಗಳು ಹೊಂದಿಕೊಂಡು ಬಾಳುತ್ತಾರೆ. ಯಾವಾಗ ಯಾರೊಬ್ಬರಲ್ಲಿಯಾದರೂ ಈ ಅಹಂಭಾವದ ಭೂತ ಬಂದು ಬಿಟ್ಟರೆ ಸಾಕು ರೆಕ್ಕೆ ಬಲಿತ ಹಕ್ಕಿಯು ಯಾರ ಹಂಗು ಇಲ್ಲದೆ ಹಾರಿ ಹೋಗುವಂತೆ, ತಂದೆ ಮಕ್ಕಳ ಸಂಬಂಧವಾದರೂ ಸಹ ಮುರಿದು ಬಿದ್ದು ಹೋಗುತ್ತದೆ.
ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ, ತಂದೆ ತಾಯಿಯರಿಗೆ ಸರಿಯಾಗಿ ನೆಲೆ ಸಿಗದೆ ವೃದ್ಧಾಶ್ರಮಕ್ಕೆ ಹೆಜ್ಜೆ ಹಾಕುತ್ತಿದ್ದಾರೆ. ಇಲ್ಲವೆ ತಾವೆ ದುಡಿದುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಏನು ಮಾಡುವುದು ? ಯಾವ ರೀತಿಯ ಮನಸ್ಥಿತಿಯನ್ನು ನಾವು ಹೊಂದಿದಾಗ ಈ ತಂದೆ ಮಕ್ಕಳ ಅಥವಾ ಅತ್ತೆ ಸೊಸೆಯರ ಸಂಬಂಧ ಗಟ್ಟಿಯಾಗುತ್ತದೆ ?. ಒಂದು ಕುಟುಂಬದಲ್ಲಿ ತಂದೆ ತಾಯಿಗಳಿಗೆ ಒಬ್ಬನೇ ಮಗ. ಆತನನ್ನು ಬಹಳ ಪ್ರೀತಿಯಿಂದ ಸಲುಹಿ ಉತ್ತಮ ಶಿಕ್ಷಣ ಕೊಡಿಸಿದ್ದರು. ಆತನು ಸಹ ತನ್ನ ತಂದೆ ತಾಯಿಗಳೆಂದರೆ ಪಂಚಪ್ರಾಣ. ಅವರಿಗಾಗಿ ಏನೆಲ್ಲ ತ್ಯಾಗಕ್ಕೂ ಸಿದ್ಧನಾಗಿರುವಂತ ವ್ಯಕ್ತಿ. ಹೀಗಿದ್ದಾಗ ಆತನಿಗೆ ಮದುವೆ ಮಾಡಿಸಿ ಸೊಸೆಯನ್ನು ಮನೆ ತುಂಬಿಸಿಕೊಂಡರು. ಪ್ರಾರಂಭದಲ್ಲಿ ಅತ್ತೆ ಸೊಸೆಯರ ಮಧ್ಯೆ ಉತ್ತಮ ಹೊಂದಾಣಿಕೆಯಿಂದ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ವರ್ಷ ಉರುಳಿದ ನಂತರ ಅತ್ತೆಗೆ ಸೊಸೆಯ ಮೇಲಿನ ಪ್ರೀತಿ ಕಡಿಮೆಯಾಗಿ, ಸೊಸೆಗೆ ಅತ್ತೆಯ ಮೇಲಿನ ಪ್ರೀತಿ ಕಡಿಮೆಯಾಗಿ ಸಣ್ಣ ಸಣ್ಣ ವಿಷಯಗಳಿಗೆ ಕಾಲು ಕೆದರಿ ಜಗಳಕ್ಕೆ ನಿಲ್ಲುವುದು ಸಾಮಾನ್ಯವಾಯಿತು. ಸೊಸೆ, ಈ ಮುದಿ ಗೂಬೆಗಳು ಯಾವಾಗ ನೆಗೆದು ಬಿದ್ದು ಹೋಗುತ್ತವೆಯೋ ಎಂದು ಹಿಡಿಶಾಪ ಹಾಕಿದರೆ, ಇತ್ತ ಅತ್ತೆ ಮಾವನು ಸಹ ನನ್ನ ಮಗನ ತಲೆ ಕೆಡಿಸಿ ಅವನನ್ನು ಹಾಳು ಮಾಡಲು ಬಂದಿರುವ ಈ ಪಿಶಾಚಿ, ಎಂದು ತೊಲಗುತ್ತಾಳೆಯೊ ಎಂದು ಬೈಗುಳದ ಸುರಿಮಳೆ ಸುರಿದು ಆ ಮನೆಯ ತುಂಬಾ ಅಶಾಂತಿಯ ಕೆಸರು ರಾಚಲು ಕಾರಣರಾಗಿದ್ದರು. ಇತ್ತ ಗಂಡನೆಂಬ ಬಡಪಾಯಿಯು ಒಂದೆಡೆ ತಂದೆ ತಾಯಿಯ ಪ್ರೀತಿ, ಇನ್ನೊಂದೆಡೆ ಹೆಂಡತಿಯ ಮೋಹ ಇದರ ನಡುವೆ ಅಡಕೊತ್ತದಲ್ಲಿ ಸಿಲುಕಿದ ಅಡಕೆಯಂತೆ ಒದ್ದಾಡುತ್ತಾನೆ. ಹೆಂಡತಿಯು ಮನೆ ಬೇರೆ ಮಾಡೋಣ ಎಂದು ಹೇಳಿದಾಗ, ಗಂಡನ ಜಂಘಾಬಲವೇ ಉಡುಗಿ ಹೋಗಿ, ಬೇಡ ನನ್ನ ತಂದೆ ತಾಯಿಗಳಿಗೆ ನಾನೊಬ್ಬನೆ ಮಗ ಅವರನ್ನು ಸಾಕಿ ಸಲುಹುವುದು ನನ್ನ ಕರ್ತವ್ಯ ಅವರೊಂದಿಗೆ ಅನುಸರಿಸಿಕೊಂಡು ಹೋಗು ಎಂದು ಎಷ್ಟು ಹೇಳಿದರೂ ಕೇಳದ ಹೆಂಡತಿ, ಕೋಪಿಸಿಕೊಂಡು ತನ್ನ ತವರಿನ ಮನೆಗೆ ಹೋಗುತ್ತಾಳೆ. ತನ್ನ ಗಂಡನ ಮನೆಯಲ್ಲಿ ನಡೆಯುವ ಕಿರುಕುಳವನ್ನು ವೈದ್ಯನಾದ ತನ್ನ ತಂದೆಗೆ ತಿಳಿಸಿ, ಹೇಗಾದರೂ ಮಾಡಿ ನನ್ನ ಅತ್ತೆ ಮಾವರನ್ನು ಆದಷ್ಟು ಬೇಗ ಸಾಯಿಸುವಂತಹ ಔಷಧಿ ಕೊಡಿ ಎಂದು ಹಟ ಹಿಡಿಯುತ್ತಾಳೆ. ಅವಳ ತಂದೆಯು ಬೇಡ ಮಗಳೆ ಹಾಗೆ ಮಾಡುವುದರಿಂದ ನೀನು, ನಾನು ಜೈಲಿನ ಕಂಬಿಗಳನ್ನು ಎಣಿಸಬೇಕಾಗುತ್ತದೆ. ಸುಮ್ಮನೆ ಹಟ ಬಿಟ್ಟು ನಿನ್ನ ಗಂಡನ ಮನೆಗೆ ಹೋಗಿ ಅನುಸರಿಸಿಕೊಂಡು ನಡೆ ಎಂದು ಬುದ್ಧಿ ಹೇಳುತ್ತಾನೆ. ಆದರೆ ಇವಳ ಹಟದ ಮುಂದೆ ಆ ವೈದ್ಯ ತಂದೆಯು ಅಸಹಾಯಕನಾಗಿ, ಅವಳ ಅತ್ತೆ ಮಾವರನ್ನು ಸಾಯಿಸಲು ಒಂದು ಉಪಾಯ ಮಾಡುತ್ತಾನೆ. ಮಗಳೆ ಈ ವಿಷದ ಮಾತ್ರೆಗಳನ್ನು ತೆಗೆದುಕೊ, ನಿನ್ನ ಅತ್ತೆ ಮಾವನವವರು ಮಾಡುವ ಊಟದಲ್ಲಿ ಪ್ರತಿದಿನ ಮೂರು ಹೊತ್ತು ಬೆರೆಸಿ ಕೊಡುತ್ತಾ ಹೋಗು ಕೆಲವು ದಿನಗಳಲ್ಲಿ ಅವರು ನಿನ್ನಿಷ್ಟದಂತೆ ಪ್ರಾಣ ಬಿಡುತ್ತಾರೆ. ಆಗ ನೀನು ನಿನ್ನ ಗಂಡ ಸಂತೋಷದಿಂದ ಇರಬಹುದಲ್ಲವೇ ?.
ಆದರೆ ಒಂದು ಮಾತು! ನೀನು ಈ ವಿಷದ ಮಾತ್ರೆ ಹಾಕಿ ಸಾಯಿಸುವ ವಿಚಾರ ಯಾರಿಗೂ ಗೊತ್ತಾಗಬಾರದು, ಅಷ್ಟೆಯಲ್ಲ, ಊಟ ಬಡಿಸುವ ಸಂದರ್ಭದಲ್ಲಿ ಯಾರಿಗೂ ಅನುಮಾನ ಬರದಂತೆ ಅವರನ್ನು ಪ್ರೀತಿಯಿಂದ, ಗೌರವದಿಂದ ಕಾಣು ಎಂದು ಹೇಳಿ, ಗಂಡನ ಮನೆಗೆ ಕಳುಹಿಸುತ್ತಾರೆ. ಮನೆ ಬಿಟ್ಟು ಹೋದ ಹೆಂಡತಿಯ ಬಗ್ಗೆ ಚಿಂತಿಸುತ್ತ, ಜೀವನವೇ ಬೇಸರವಾಗಿ ಜಿಗುಪ್ಸೆಗೊಂಡಿದ್ದ ಪತಿರಾಯ, ಖುಷಿಯಿಂದ ಮನೆಗೆ ಬಂದ ಹೆಂಡತಿಯನ್ನು ಕಂಡು ನಿರಾಳನಾದ. ಅವಳು ಅಷ್ಟೆ ಪ್ರೀತಿಯಿಂದ ತನ್ನ ಗಂಡ, ಅತ್ತೆ, ಮಾವನ ಆರೋಗ್ಯ ವಿಚಾರಿಸಿ ತನ್ನ ತಪ್ಪಿನ ಅರಿವನ್ನು ತಿಳಿಸುತ್ತಾಳೆ. ಇನ್ನು ಮುಂದೆ ಹೀಗೆಲ್ಲ ಮಾಡುವುದಿಲ್ಲ ನಿಮ್ಮ ಮನಸ್ಸನ್ನು ಎಂದಿಗೂ ನೋಯಿಸುವುದಿಲ್ಲ ಎಂದು ಹೇಳಿ ಅಡುಗೆ ಮನೆಗೆ ಹೋಗುತ್ತಾಳೆ. ಸೊಸೆಯ ಈ ಬದಲಾವಣೆಗೆ ಅತ್ತೆ ಮಾವ ಸಹ ಖುಷಿಯಾಗುತ್ತಾರೆ. ಇತ್ತ ಸೊಸೆಯು ತನ್ನ ಉಪಾಯದ ಪ್ರತಿಫಲಕ್ಕಾಗಿ ಕಾಯುತ್ತ ಪ್ರತಿದಿನ ತನ್ನ ತಂದೆಯು ತಿಳಿಸಿದಂತೆ ವಿಷದ ಮಾತ್ರೆಗಳನ್ನು ಊಟದಲ್ಲಿ ಬೆರೆಸಿ ತನ್ನ ಅತ್ತೆ ಮಾವನಿಗೆ ಪ್ರೀತಿಯಿಂದ ಬಡಿಸಿ ಮಗಳಂತೆ ಉಣಬಡಿಸುತ್ತಾಳೆ. ಮನದೊಳಗೆ ಮಾತ್ರ ಬೇಗ ತಿಂದು ಸಾಯಿರಿ ಎಂದು ಹಿಡಿಶಾಪ ಹಾಕುತ್ತಾಳೆ. ಮೊದಮೊದಲು ಸೊಸೆಯನ್ನು ಕಂಡರೆ, ಆರಿಸಿದ ಅಕ್ಕಿಯಲ್ಲಿ ಕಲ್ಲನ್ನು ಹುಡುಕುವಂತೆ ತಪ್ಪುಗಳನ್ನು ಹುಡುಕಿ ನಿಂದಿಸುತ್ತಿದ್ದ ಅತ್ತೆ ಮಾವ ಅವಳನ್ನು ಮಗಳಂತೆ ಪ್ರೀತಿಯಿಂದ ಕಾಣುತ್ತಾರೆ. ಸೊಸೆಯ ಕೆಲಸದಲ್ಲಿ ಅತ್ತೆ ಮಾವ ಸಹಾಯ ಮಾಡುತ್ತ ಪರಸ್ಪರ ಪ್ರೀತಿ ವಿಶ್ವಾಸದಿಂದ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ದಿನಕಳೆದಂತೆ ಒಬ್ಬರನ್ನೊಬ್ಬರು ಬಿಟ್ಟು ಇರಲಾರದಷ್ಟು ಬಾಂಧವ್ಯದ ಬೆಸುಗೆ ಗಟ್ಟಿಯಾಗಿ, ಆ ಮನೆಯಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತಾಗುತ್ತದೆ.. ಇತ್ತ ಸೊಸೆಗೆ ಅತ್ತೆ ಮಾವನನ್ನು ದ್ವೇಷಿಸುವ ಭಾವನೆಯು ಬದಲಾಗಿ, ಪ್ರೀತಿಸುವ ಭಾವನೆಯು ಮೂಡುತ್ತದೆ. ತಾನು ಮಾಡುತ್ತಿರುವ ಪಾಪ ಪ್ರಜ್ಞೆಯ ಅರಿವಾಗಿ ತುಂಬಾ ದುಃಖಿತಳಾಗುತ್ತಾಳೆ. ದೇವರಂತಹ ನನ್ನ ತಂದೆ ತಾಯಿ ಸ್ವರೂಪರಾದ ಅತ್ತೆ ಮಾವನನ್ನು ಸಾಯಿಸಲು ವಿಷದ ಮಾತ್ರೆ ಕೊಟ್ಟು ತಪ್ಪು ಮಾಡಿದೆನೆಲ್ಲ ಎಂದು ಒಬ್ಬಳೇ ಗೋಳಾಡುತ್ತಾಳೆ. ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳಲೇಬೇಕೆಂದು ನಿರ್ಧರಿಸಿ ಮತ್ತೆ ತನ್ನ ತಂದೆಯ ಮನೆಗೆ ಓಡೋಡಿ ಬರುತ್ತಾಳೆ. ತುಂಬಾ ಭಾವುಕಳಾದ ಮಗಳ ಸ್ಥಿತಿಯನ್ನು ಕಂಡು ಏಕೆ ಮಗಳೇ? ಏಕೆ ಅಳುತ್ತಿಯಾ? ಮತ್ತೆ ನಿನ್ನ ಅತ್ತೆ ಮಾವನೊಂದಿಗೆ ಜಗಳವಾಡಿದೆಯಾ? ನಾನು ಹೇಳಿದಂತೆ ಮಾಡಿದಿಯಲ್ಲ ಬಿಡು .ಇನ್ನು ಕೆಲವೆ ದಿನದಲ್ಲಿ ನಿನ್ನ ಅತ್ತೆ ಮಾವ ತೀರಿ ಹೋಗುತ್ತಾರೆ, ದುಃಖಿಸಬೇಡ ಶಾಂತಳಾಗು ಎಂದು ಸಮಾಧಾನ ಪಡಿಸುತ್ತಾರೆ. ಆದರೆ ಇವಳು ಮತ್ತಷ್ಟು ಜೋರಾಗಿ ಅಳುತ್ತಾ ಅಪ್ಪಾ ದೇವರಂತ ನನ್ನ ಅತ್ತೆ ಮಾವನವರು ಸಾಯಬಾರದು, ಅವರನ್ನು ಬದುಕಿಸುವಂತಹ ಯಾವೂದಾದರೂ ಚಿಕಿತ್ಸೆ ನೀಡಿ ಬದುಕಿಸು ಅವರಿಲ್ಲದೆ ನಾನು ಬದುಕುವುದಿಲ್ಲ, ಅವರನ್ನು ಹೇಗಾದರೂ ಮಾಡಿ ಬದುಕಿಸಿಕೊಡಿ ಎಂದು ಅಳುತ್ತಾ ಹೇಳಿದಾಗ, ವೈದ್ಯ ತಂದೆಯು ಮಗಳ ಮಾತಿಗೆ ನಗುತ್ತಾನೆ, ಅಲ್ಲಮ್ಮ ನೀನೆ ಅಂದು ಬಂದು ನಿನ್ನ ಅತ್ತೆ ಮಾವನನ್ನು ಸಾಯಿಸಲು ವಿಷದ ಮಾತ್ರೆ ತೆಗೆದುಕೊಂಡು ಹೋಗಿದ್ದೀಯಾ ? ಇಂದು ಅವರನ್ನು ಬದುಕಿಸಿ ಕೊಡು ಎಂದು ಹೇಳುತ್ತೀದ್ದೀಯಾ ? ಏನಾಗಿದೆಯಮ್ಮ ನಿನ್ನ ಬುದ್ಧಿಗೆ ಎಂದು ಟೀಕಿಸುತ್ತಾನೆ. ಆಗ ಮಗಳು ಅಪ್ಪಾ ನಾನು ಕೊಟ್ಟ ಪ್ರೀತಿಯ ಪ್ರತಿಫಲವಾಗಿ ನನ್ನ ಅತ್ತೆ ಮಾವರು ಅದರ ಹತ್ತು ಪಟ್ಟು ಪ್ರೀತಿ ತೋರಿ ಮಗಳಂತೆ ಕಂಡು ನನ್ನಲ್ಲಿನ ಕೆಟ್ಟ ಆಲೋಚನೆಗಳನ್ನೆಲ್ಲ ಸುಟ್ಟು ಹಾಕಿದ್ದಾರೆ. ಅವರಿಲ್ಲದ ಬದುಕನ್ನು ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳಲು, ಬೇಗ ಬಂದು ಚಿಕಿತ್ಸೆ ನೀಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ.
ಇತ್ತ ಮಗಳ ಜೀವನದಲ್ಲಾದ ಬದಲಾವಣೆಯನ್ನು ಕಂಡು ಖುಷಿಪಡುತ್ತ ಅಳಬೇಡ ಮಗಳೇ ನಾನು ಕೊಟ್ಟಿರುವ ಮಾತ್ರೆಗಳು ವಿಷದ ಮಾತ್ರೆಗಳೆಂದು ತಿಳಿದಿದ್ದೀಯಾ ? ಅವು ಶಕ್ತಿವರ್ಧಕ ಮಾತ್ರೆಗಳು ನಿನ್ನ ಭಾವನೆಗಳನ್ನು ಬದಲಾಯಿಸಲು ನಾನು ಮಾಡಿದ ಒಂದು ಚಿಕ್ಕ ನಾಟಕವಿದು. ಅಳಬೇಡ ಧೈರ್ಯವಾಗಿ ಮನೆಗೆ ಹೋಗು ಎಂದು ಕಳುಹಿಸಿಕೊಡುತ್ತಾರೆ. ಅರ್ಥವಾಯಿತಲ್ಲವೇ ಸ್ನೇಹಿತರೆ, ಯಾರು ಪರಸ್ಪರ ಪ್ರೀತಿ ವಿಶ್ವಾಸವನ್ನು ಹಂಚುತ್ತಾ ಹೋಗುತ್ತಾರೆಯೋ ಅವರ ಜೀವನದಲ್ಲಿ ಎಂದಿಗೂ ಒಡಕು ಮೂಡುವುದಿಲ್ಲ, ಯಾವಾಗ ನಾವು ಸ್ವಾರ್ಥಿಗಳಾಗುತ್ತೇವೆಯೋ, ಅಹಂಭಾವ ತುಂಬಿದ ಸ್ವಾಭಿಮಾನಿಗಳಾಗುತ್ತೇವೆಯೋ ಆವಾಗ ಕೂಡಿ ಬಾಳಲು ಸಾಧ್ಯವಾಗದೆ ಒಡಕು ಮೂಡಿ ಸಂಸಾರ ಇಬ್ಭಾಗವಾಗುತ್ತದೆ. ಹಾಗಾಗಿ ತಂದೆ ತಾಯಿಗಳು ಸಹ ತಮ್ಮ ಮಕ್ಕಳೊಂದಿಗೆ, ವಿಶೇಷವಾಗಿ ಸೊಸೆಯೊಂದಿಗೆ ತನ್ನ ಒಡಹುಟ್ಟಿದ ಮಗಳಂತೆ ಕಂಡು, ತಮ್ಮ ಅಹಂಭಾವದ ಸ್ವಾಭಿಮಾನವನ್ನು ಬದಿಗಿಟ್ಟು ವಯೋಸಹಜ ವರ್ತನೆಗಳನ್ನು ತೋರಬೇಕು. ಮಕ್ಕಳು ಸಹ ಕಣ್ಣಿಗೆ ಕಾಣುವ ದೇವರೆಂದರೆ ತಂದೆ ತಾಯಿಗಳು ಎಂಬುದನ್ನು ಅರಿಯಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂದು ಹೇಳುವಂತೆ, ಸೊಸೆಯಾದವಳು ಮುಂದೊಂದು ದಿನ ಅತ್ತೆಯಾಗಲೇಬೇಕು ಆಗ ನಮಗೂ ಈ ಅವಸ್ಥೆ ಬರುತ್ತದೆಂಬುದನ್ನು ಸೊಸೆಯಂದಿರು ಮನಗಾನಬೇಕು. ಎಲ್ಲಕ್ಕೂ ಮೊದಲು ಎಲ್ಲರಲ್ಲಿಯೂ ಮನೆ ಮಾಡಿರುವ ‘ನಾನು’ ಎಂಬ ಅಹಂಭಾವದ ಶತ್ರುವನ್ನು ಹೊರಹಾಕಬೇಕು. ತಂದೆ ತಾಯಿ ಮಡದಿ ಮಕ್ಕಳೊಡಗೂಡಿದ ಸುಂದರ ಬದುಕು ನಮ್ಮದಾದಾಗ ಮಾತ್ರ ಸ್ವರ್ಗಕ್ಕೆ ಕಿಚ್ಚು ಹಚ್ಚು ಎನ್ನುವ ಮಾತು ಸತ್ಯವಾಗುತ್ತದೆ. ಕೇವಲ ತನ್ನ ಹೆಂಡತಿ ಮಕ್ಕಳು ಸುಖವಾಗಿದ್ದರೆ ಸಾಕು ಎಂದು ತಂದೆ ತಾಯಿಯರನ್ನು ದೂರ ಮಾಡಿ ಸುಖಿಸುವ ಮನಸುಗಳೆ, ಒಮ್ಮೆ ಯೋಚಿಸಿ ಮುಂದೊಂದು ದಿನ ನಾವು ಆ ಅವಸ್ಥೆಯನ್ನು ತಲುಪಿದಾಗ ಇದೇ ಅನುಭವ ನಮಗೆ ಬಂದರೆ ಹೇಗೆ ? ಆಗ ನೀವು ಯಾರನ್ನು ದ್ವೇಷಿಸುತ್ತೀರಿ ? ಈಗ ನೀವು ಮುದ್ದು ಮಾಡಿ ಅಪ್ಯಾಯಮಾನವಾಗಿ ಸಾಕಿ ಸಲುಹಿದ ಮಕ್ಕಳನ್ನಲ್ಲವೇ ? ಕಾಲಚಕ್ರ ತಿರುಗುತ್ತಿರುತ್ತದೆ ಇಂದು ಅವರಿಗೆ ಬಂದ ಗತಿ ನಾಳೆ ನಮಗೂ ಬಂದೆ ಬರುತ್ತದೆ. ಏಕೆಂದು ಕೊಂಡಿರುವಿರಾ ತಾ ಮಾಡಿದ ಪಾಪದ ಫಲವು ಮುಂದಿನ ಜನ್ಮದಲ್ಲಿ ತೋರಿಸುತ್ತದೆ ಎಂದು ನಂಬಿರುವ ಈ ದೇಶದಲ್ಲಿ ಅದು ಸುಳ್ಳಾಗಿ, ಇದೇ ಜನ್ಮದಲ್ಲಿ ಪುನರಾವರ್ತನೆಯಾಗುತ್ತದೆ. ನಮ್ಮನ್ನು ಸಾಕಿ ಸಲುಹಿದ ತಂದೆ ತಾಯಿಯರು ಒಂದು ಕಣ್ಣಾದರೆ, ಮಡದಿ ಮಕ್ಕಳು ಇನ್ನೊಂದು ಕಣ್ಣು. ಇವುಗಳಲ್ಲಿ ಯಾವುದನ್ನು ಕಳೆದುಕೊಂಡರೂ ಸಹ ನಾವು ಕುರುಡರಲ್ಲವೇ ? ಹಾಗಾಗಿ ಪ್ರೀತಿ ಪ್ರೇಮದ ಮಹತ್ವ ಅರಿತು, ಮಧುರಚನ್ನರು ಹೇಳುವಂತೆ “ದೇವಲೀಲೆಯೋ ಕಾಣೆ ಕರ್ಮಜಾಲವೋ ಕಾಣೆ ಅದು ನಮ್ಮ ಬುದ್ಧಿಯಾಚೆಗಿನ ಮಾತು | ಯಾವುದೇನೆ ಇರಲಿ ಪ್ರೀತಿಯಂಥಾ ವಸ್ತು ಭವದಲ್ಲಿ ಕಾಣೆ ಮನಗಂಡ ಮಾತು” ಎಂದಿದ್ದಾರೆ. ಈ ಜೀವನಕ್ಕೆ ಜೀವಕಳೆಯನ್ನು ತುಂಬುವ ಪ್ರೀತಿಯನ್ನು ಪರಸ್ಪರ ಹಂಚುತ್ತಾ ನಮ್ಮಲ್ಲಿನ ಅಹಂಭಾವದ ಸ್ವಾಭಿಮಾನವನ್ನು ನಾಶಮಾಡಿ, ನಿಸ್ವಾರ್ಥ ಭಾವದಿಂದ ತಂದೆ, ತಾಯಿ, ಮಡದಿ, ಮಕ್ಕಳು ಕೂಡಿ ಬಾಳಿದರೆ ಸ್ವರ್ಗಸುಖವಲ್ಲವೇ ?
ರವಿ ರಾ ಕಂಗಳ