ತಂತ್ರಗಾರಿಕೆಯ ಚಕ್ರಮೇಘದಲ್ಲಿ ಮರೆಯಾದ ಜಯದ್ರತಭಾಸ್ಕರ!: ಕೆ ಟಿ ಸೋಮಶೇಖರ ಹೊಳಲ್ಕೆರೆ. 

ಮಹಾಭಾರತ ತಂತ್ರಗಳ ಆಗರ! ಶ್ರೀಕೃಷ್ಣ ತಂತ್ರಗಾರಿಕೆಯ ಅರಸ! ಪಾಂಡವರಿಂದ ಜಯಿಸಲಸದಳವಾದ ಕುರುಕ್ಷೇತ್ರ ಯುದ್ದವ, ಅತಿರಥ ಮಹಾರಥರೆನಿಸಿದ ಭೀಷ್ಮ, ದ್ರೋಣ, ಕರ್ಣ, ದುರ್ಯೋಧನ ಮೊದಲಾದವರನ್ನು ತಂತ್ರಗಾರಿಕೆಯಿಂದಲೇ ಜಯಿಸುವಂತೆ ಮಾಡಿ ವಿಜಯ ಮಾಲೆ ಪಾಂಡವರಿಗೆ ಹಾಕಿಸಿದ ಮಹಾತಂತ್ರಿ! ಇದೆಲ್ಲಾ ಧರ್ಮ ಸಂಸ್ಥಾಪನಾರ್ಥಾಯ ದುಷ್ಟ ಶಿಕ್ಷಣಾರ್ಥಾಯ ಶಿಷ್ಟ ರಕ್ಷಣಾರ್ಥಾಯ!

ದ್ರೋಣ ಪರ್ವ ಆರಂಭವಾಗಿರುತ್ತದೆ. ಪಾಂಡವರು ಮತ್ತು ಕೌರವರೆಲ್ಲರಿಗೂ ಬಿಲ್ವಿದ್ಯೆಯನ್ನು ಕಲಿಸಿದ ಗುರು ದ್ರೋಣ. ಇವರು ಕುರುಕ್ಷೇತ್ರ ಯುದ್ದದ ಸಂದರ್ಭದಲ್ಲಿ ಕೌರವರ ಪಕ್ಷದಲ್ಲಿ ಇರಬೇಕಾಗುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಸೇನಾ ನಾಯಕನಾಗಿದ್ದ ಭೀಷ್ಮರ ನಂತರ ದ್ರೋಣ ಸೇನಾ ನಾಯಕನಾಗಿ ಯುಧಿಷ್ಠಿರನನ್ನು ಜೀವಂತ ಹಿಡಿದು ತರುವ ಮಾತನ್ನು ದುರ್ಯೋಧನನಿಗೆ ಕೊಟ್ಟಿರುತ್ತಾನೆ. ಮೊದಲ ದಿನ ಯುದ್ಧದಲ್ಲಿ ಇದು ಸಾಧ್ಯವಾಗುವುದಿಲ್ಲ. ಆದರೆ ಮಾರನೇ ದಿನ ಚಕ್ರವ್ಯೂಹವನ್ನು ರಚಿಸಿ ಅದರಲ್ಲಿ ಆಯಪಾಣಿಯಾದ ಮಹಾರಥನೊಬ್ಬನನ್ನು ಬೀಳಿಸುತ್ತೇನೆಂದು ಪ್ರತಿಜ್ಞೆ ಮಾಡುತ್ತಾನೆ. ಹಾಗೇ ಪದ್ಮವ್ಯೂಹವನ್ನು ರಚಿಸಿ ಯುದ್ಧ ಆರಂಭಿಸುತ್ತಾನೆ. ಕೃಷ್ಣಾರ್ಜುನರು ಸಂಶಪ್ತರೊಡನೆ ಯುದ್ಧಕ್ಕೆ ಹೋಗಿರುವುದರಿಂದ ಆ ಪದ್ಮವ್ಯೂಹ ಭೇದಿಸಲು ಧರ್ಮರಾಯ ಭೀಮಸೇನರಿಗೆ ಸಾಧ್ಯವಾಗುವುದಿಲ್ಲ. ಅದನ್ನು ಅರ್ಜುನ, ಕೃಷ್ಣ, ಪ್ರದ್ಯುಮ್ನರನ್ನು ಬಿಟ್ಟರೆ ಅಭಿಮನ್ಯುವಿಗೆ ಮಾತ್ರ ಸಾಧ್ಯವಿರುತ್ತದೆ. ಅಭಿಮನ್ಯು ಒಳ ಪ್ರವೇಶಿಸುವುದು ಗೊತ್ತಿದ್ದು ಹೊರಗೆ ಬರುವುದು ಗೊತ್ತಿರದಿದ್ದರೂ ಚಕ್ರವ್ಯೂಹ ಭೇದಿಸಲು ರಣರಂಗಕ್ಕೆ ಬರುವುದು ಅನಿವಾರ್ಯವಾಗುತ್ತದೆ. ಅಭಿಮನ್ಯು ಪದ್ಮವ್ಯೂಹ ಭೇದಿಸಿ ಮುನ್ನುಗ್ಗುತ್ತಾನೆ ಅವನೊಂದಿಗೆ ನುಗ್ಗಲು ಪ್ರಯತ್ನಿಸಿದ ಯುಧಿಷ್ಟಿರ ಭೀಮಸೇನನ್ನು ಜಯದ್ರತ ತಡೆಯುತ್ತಾನೆ. ಪ್ರಯುಕ್ತ ಯುಧಿಷ್ಠಿರ ಮತ್ತು ಭೀಮಸೇನ ಅಭಿಮನ್ಯುವಿನ ಬೆಂಗಾವಲಿಗೆ ಹೋಗಲು ಸಾಧ್ಯವಾಗುವುದಿಲ್ಲ. ಅಭಿಮನ್ಯು ಒಂಟಿಯಾಗಿ ಪದ್ಮವ್ಯೂಹ ಪ್ರವೇಶಿಸಿದುದರಿಂದ ಅವನ ಮೇಲೆ ಅನೇಕ ಕೌರವ ವೀರರು ಮುತ್ತಿಗೆ ಹಾಕುತ್ತಾರೆ. ಅಭಿಮನ್ಯು ಒಬ್ಬನೇ ಒಂಟಿಯಾಗಿಯೇ ಹೋರಾಡುತ್ತಾನೆ. ಅಭಿಮನ್ಯುವಿನ ವೀರಾವೇಶದ ಹೋರಾಟಕ್ಕೆ ಕೌರವರ ಸೈನ್ಯ ಬಯಭೀತವಾಗುತ್ತದೆ. ಇವನನ್ನು ನೇರವಾಗಿ ಹೋರಾಡಿ ಗೆಲಲಾಗದೆಂದು ಹಿಂದಿನಿಂದ ಬಂದು ಸಾರಥಿಯನ್ನು ಕೊಂದು, ಬಿಲ್ಲನ್ನು ಮುರಿದು ಕೌರವ ಸೇನೆ ಸುತ್ತ ಮುತ್ತುತ್ತದೆ. ವೀರಾವೇಶದಿಂದ ಹೋರಾಡಿ ಮಡಿಯುತ್ತಾನೆ. ಆ ವಾರ್ತೆ ಅರ್ಜುನನಿಗೆ ಬರಸಿಡಿಲಾಗುತ್ತದೆ. ಅವನು ಕೋಪಗೊಂಡು ಅಭಿಮನ್ಯುವಿನ ಸಾವಿಗೆ ಕಾರಣನಾದ ಜಯದ್ರಥನನ್ನು ಸೂರ್ಯಾಸ್ತದೊಳಗೆ ಕೊಲ್ಲುತ್ತೇನೆ. ಹಾಗೆ ಕೊಲ್ಲದಿದ್ದರೆ ….. ನನಗೆ ತಾಯಿ ತಂದೆಯವರನ್ನು ಕೊಂದ ದುರ್ಗತಿ ಬರಲಿ… ಮತ್ತು ಅವನನ್ನು ಕೊಲ್ಲದಿದ್ದರೆ ನಾನೇ ಅಗ್ನಿ ಪ್ರವೇಶಿಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾನೆ.

ಈ ವಾರ್ತೆ ಕೌರವರ ಪಾಳೆಯವನ್ನು ತಲುಪುತ್ತದೆ. ಜಯದ್ರತ ಭಯಭೀತನಾಗುತ್ತಾನೆ. ಕೌರವರು ಅವನನ್ನು ರಕ್ಷಿಸುವ ಭರವಸೆ ಕೊಟ್ಟು ಮಾರನೆಯ ದಿನ ಇವನ ರಕ್ಷಿಸಲು ಮೂರು ವ್ಯೂಹಗಳನ್ನು ರಚಿಸುತ್ತಾರೆ. ಶಕಟವ್ಯೂಹವನ್ನು ರಚಿಸಿ ಅದರ ಹಿಂದೆ ಪದ್ಮವ್ಯೂಹವನ್ನು ಮಾಡಿ ಅದರೊಳಗೆ ಸೂಚಿ ವ್ಯೂಹವನ್ನು ಗರ್ಭೀಕರಿಸಿ ಸೂಚಿ ಮುಖದಲ್ಲಿ ಕೃತವರ್ಮ, ಕಾಂಬೋಜ, ಜಲಸಂದ, ದುರ್ಯೋಧನ, ಕರ್ಣ ಈ ವೀರರ ಜೊತೆಗೆ ಸಾವಿರಾರು ವೀರರ ನಿಲ್ಲಿಸಿ ಅದರ ಹಿಂದೆ ಜಯದ್ರತನನ್ನು ನಿಲ್ಲಿಸಿ ದ್ರೋಣ ಶಕಟವ್ಯೂಹದ ಮುಂದೆ ನಿಂತು ಅಭೇದ್ಯವಾದ ಭದ್ರವಾದ ರಕ್ಷಣಾ ವ್ಯೂಹವನ್ನು ದ್ರೋಣಾಚಾರ್ಯರು ರಚಿಸುತ್ತಾರೆ.

ಇಷ್ಟೆಲ್ಲಾ ರಕ್ಷಣೆಗೆ ಒಳಗಾಗುತ್ತಿರುವವರು ಯಾರೆಂದರೆ? ವೃದ್ಧಕ್ಷತ ಮಹಾರಾಜನ ಮಗ. ಸಿಂಧೂ ದೇಶದ ರಾಜ. ಕೌರವರ ನೂರು ಜನ ಸಹೋದವರಿಗೆಲ್ಲ ಏಕೈಕ ಸಹೋದರಿಯಾದ ದುಷಾಲಳ ಪತಿ ಜಯದ್ರತ. ದ್ರೌಪದಿಯ ಸ್ವಯಂವರಕ್ಕೆ ಹೋಗಿ ಸೋಲುಂಡು ಆವಳ ಮೇಲೆ ಮೋಹಿತನಾಗಿ ಅವಳನ್ನು ಪಡೆಯಬೇಕೆಂದು ಯೋಚಿಸುತ್ತಿರುತ್ತಾನೆ. ಒಮ್ಮೆ ಅವಳು ಒಂಟಿಯಾಗಿ ಸಿಕ್ಕಾಗ ಅವಳನ್ನು ಅಪಹರಿಸುತ್ತಾನೆ. ಸುದ್ದಿ ತಿಳಿದ ಪಾಂಡವರು ಅವನನ್ನು ಹಿಡಿದು ದ್ರೌಪತಿಯ ಬಿಡಿಸಿ ಅವನನ್ನು ದುಷಾಲಳ ಪತಿಯೆಂಬ ಕಾರಣಕ್ಕೆ ಕೊಲ್ಲದೆ ತಲೆಯ ಮೇಲೆ ಐದು ಕೂದಲಷ್ಟೆ ಇರುವಂತಹ ಶಿಕ್ಷೆ ಕೊಟ್ಟು ಅವಮಾನಿಸಿರುತ್ತಾರೆ. ಇದನ್ನು ಸಹಿಸಿಕೊಳ್ಳಲಾಗದೆ ಜಯದ್ರತ ಪಾಂಡವರನ್ನು ಎದುರಿಸುವ ಉದ್ದೇಶದಿಂದ ಶಿವನನ್ನು ಕುರಿತು ತಪಸ್ಸು ಮಾಡಿ ಮೆಚ್ಚಿಸಿ ಪಾಂಡವರನ್ನು ಒಮ್ಮೆ ಎದುರಿಸುವ ಶಕ್ತಿ ಪಡೆದಿರುತ್ತಾನೆ. ಅದನ್ನು ಅಭಿಮನ್ಯುವಿನ ಬಲಿ ಪಡೆದ ದಿನ ಬಳಸಿಕೊಳ್ಳುತ್ತಾನೆ. ತನ್ನ ತಂದೆಯಿಂದ ಜಯದ್ರತ ತನ್ನ ತಲೆ ನೆಲಕ್ಕೆ ಉರುಳಿಸಿದವರ ತಲೆ ಸಹಸ್ರ ಹೋಳಾಗಲಿ ಎಂಬ ವರ ಬೇರೆ ಪಡೆದುರುತ್ತಾನೆ! ಅದು ಜಯದ್ರತನ ರಕ್ಷಾಕವಚವಾಗಿರುತ್ತದೆ. ಇಂತಹ ಜಯದ್ರತನ ತಲೆ ತೆಗೆಯುವ ಪ್ರತಿಜ್ಞೆಯನ್ನು ಯಾರು ತಾನೇ ಮಾಡಲು ಮುಂದಾಗುತ್ತಾರೆ? ಅರ್ಜುನ ಜಯದ್ರತನ ತಲೆ ಕತ್ತರಿಸುವ ಪ್ರತಿಜ್ಞೆ ಮಾಡುತ್ತಾನೆ! ಅದೂ ಅಂದಿನ ಸೂರ್ಯಾಸ್ತದೊಳಗೆ! ವೃದ್ಧಕ್ಷತನ ಶಾಪದಂತೆ ಜಯದ್ರತನ ತಲೆ ತೆಗೆದರೆ ಅದು ನೆಲಕ್ಕೆ ಬೀಳುತ್ತದೆ ಆಗ ಅರ್ಜುನನ ತಲೆ ಸಹಸ್ರ ಓಳಾಗುತ್ತದೆ. ಇಂತಹ ಅವನ ತಲೆ ತೆಗೆಯುವ ಸವಾಲು ಸಾಮಾನ್ಯವೇ? ಶಿವನ ತಪಸ್ಸಿನ ಫಲ ತಂದೆಯ ಶಾಪ ಜಯದ್ರತನ ರಕ್ಷಣೆಗಿರುತ್ತವೆ. ಅವೇ ಅವನ ಮತ್ತು ಅವನ ತಂದೆಯ ಸಾವಿಗೂ ಕಾರಣವಾಗುವುದು ವಿಚಿತ್ರ.

ಅಂದು ಸಾಯಂಕಾಲದವರೆಗೂ ಎಷ್ಟು ಕಾದಿದರೂ ಜಯದ್ರತನ ತಲೆ ತೆಗೆಯುವುದಿರಲಿ ಅವನ ದರ್ಶನವೂ ಅರ್ಜುನನಿಗೆ ದುರ್ಲಭವಾಗುತ್ತದೆ. ಕೃಷ್ಣ ಅರ್ಜುನನಿಗೆ ಹೇಳುತ್ತಾನೆ ಹೀಗಾದರೆ ಜಯದ್ರತನನ್ನು ಕೊಲ್ಲಲಾಗುವುದಿಲ್ಲ. ನಾನು ಒಂದು ಉಪಾಯವನ್ನು ಮಾಡುತ್ತೇನೆ ಆಗ ಅವನನ್ನು ಕೊಲ್ಲಬಹುದೆಂದು ಹೇಳಿ ಚಕ್ರದಿಂದ ಸೂರ್ಯಮಂಡಲವನ್ನು ಮರೆಮಾಡುತ್ತಾನೆ. ಕತ್ತಲ ಮಸುಕು ಎಲ್ಲೆಡೆ ಆವರಿಸುತ್ತದೆ. ಸೂರ್ಯಾಸ್ತವಾಯಿತೆಂದು ಕೌರವರ ಪಾಳಯದಲ್ಲಿ ಸಂತೋಷ ಉಂಟಾಗಿ ಅವರು ಅರ್ಜುನ ಅಗ್ನಿ ಪ್ರವೇಶಿಸುವ ಕನಸು ಕಾಣತೊಡಗುತ್ತಾರೆ. ಸಂಭ್ರಮಿಸುತ್ತಾರೆ. ಜಯದ್ರತ ಸೂರ್ಯಾಸ್ತವಾಯಿತೆಂದು ತಾನು ಬದುಕಿದೆನೆಂದು ಇನ್ನು ನನ್ನ ಜೀವಕ್ಕೆ ಅಪಾಯವಿಲ್ಲವೆಂದು ಹೊರಗೆ ಬರುತ್ತಾನೆ. ತಕ್ಷಣ ಶ್ರೀಕೃಷ್ಣನ ಅಣತಿಯಂತೆ ಅರ್ಜುನ ವಜ್ರಾಯುಧಕ್ಕೆ ಸಮಾನವಾದ ಬಾಣದಿಂದ ಜಯದ್ರತನ ತಲೆ ಕತ್ತರಿಸುತ್ತಾನೆ. ಹಾಗೆ ಆ ತಲೆಯನ್ನು ಸ್ಯಮಂತಪಂಚಕದಲ್ಲಿ ಸಂಧ್ಯಾವಂದನೆಯ ಜಪದಲ್ಲಿ ನಿರತನಾಗಿದ್ದ ಜಯದ್ರತನ ತಂದೆಯ ತೊಡೆಯ ಮೇಲೆ ಬೀಳುವಂತೆ ಇನ್ನೊಂದು ಬಾಣದಿಂದ ಒಡೆಸುತ್ತಾನೆ! ಆ ತಲೆ ಜಯದ್ರತನ ತಂದೆಯಾದ ವೃದ್ಧಕ್ಷತನ ತೊಡೆಯ ಮೇಲೆ ಬೀಳುತ್ತದೆ. ಅವನ ತಂದೆ ಸಂಧ್ಯಾವಂದನೆ ಮುಗಿದ ನಂತರ ಮೇಲಕ್ಕೆ ಏಳುತ್ತಾನೆ. ಅವನ ತೊಡೆಯ ಮೇಲಿದ್ದ ಮಗನ ತಲೆ ನೆಲದ ಮೇಲೆ ಬೀಳುತ್ತದೆ. ವೃದ್ಧಕ್ಷತನ ತಲೆ ಸಹಸ್ರ ಓಳಾಗಿ ಮಗನಿಗೆ ವರವಾಗಲೆಂದು ಮಗನ ಶತ್ರುಗಳಿಗೆ ಶಾಪವಾಗಲೆಂದು ಅವನು ಕೊಟ್ಟ ವರ ಅವನಿಗೇ ಶಾಪವಾಗಿ ಪರಿಣಮಿಸಿ ಅವನ ಸಾವಿಗೆ ಪರೋಕ್ಷವಾಗಿ ಅವನೇ ಕಾರಣವಾಗುವಂತಾಗುತ್ತದೆ. ಅದಕ್ಕೇ ಕೆಟ್ಟ ಯೋಚನೆಗಳನ್ನು ಮಾಡಬಾರದು ಅಂತ ಹೇಳುವುದು. ಅವು ಕೆಟ್ಟ ಯೋಚನೆಗಳ ಮಾಡಿದವರ ಮೇಲೇ ಮೊದಲು ಪ್ರಯೋಗವಾಗಿಬಿಡುತ್ತವೆ! ಹೀಗೆ ಅರ್ಜುನನ ಪ್ರತಿಜ್ಞೆ ಈಡೇರಿದ ಮೇಲೆ ಕೃಷ್ಣ ತನ್ನ ಚಕ್ರವನ್ನು ಹಿಂಪಡೆದುದರಿಂದ ಸೂರ್ಯ ಮತ್ತೆ ಕಾಣಿಸಿಕೊಳ್ಳುತ್ತಾನೆ!

ಅರ್ಜುನ ಅಸಾಧ್ಯವಾದ ಪ್ರತಿಜ್ಞೆ ಮಾಡುವುದು. ಆದನ್ನು ಪೂರೈಸಲು ಕೃಷ್ಣ ತನ್ನ ಚಕ್ರದಿಂದ ಸೂರ್ಯನನ್ನು ಮರೆಮಾಡುವ, ಜಯದ್ರತನ ತಲೆ ನೆಲಕುರುಳಿಸಿದರೂ ಅರ್ಜನನ ತಲೆ ಸಹಸ್ರ ಓಳಾಗದಂತೆ ತಪ್ಪಿಸುವ ತಂತ್ರಗಳು ಊಹಿಸಲಸದಳ! ಹೀಗೆ ಶ್ರೀಕೃಷ್ಣನ ತಂತ್ರಗಾರಿಕೆಯ ಚಕ್ರಮೇಘದಲ್ಲಿ ಶಾಶ್ವತವಾಗಿ ಮರೆಯಾದ ಜಯದ್ರತಭಾಸ್ಕರ! ಕೃಷ್ಣ ತಂತ್ರಗಳ ಪರ್ವತದ ತುತ್ತ ತುದಿಗೇರುತ್ತಾನೆ. ಎಲ್ಲಾ ಧರ್ಮಸಂಸ್ಥಾಪನಾರ್ಥಾಯ!

* ಕೆ ಟಿ ಸೋಮಶೇಖರ ಹೊಳಲ್ಕೆರೆ. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x