ಕಾಲ ಬದಲಾಗಿದೆ. ನಿಜವೇ? ಹೌದೆ? ಬದಲಾದದ್ದು ಕಾಲವೇ? ನಮ್ಮಗಡಿಯಾರವೇ? ಅಥವಾ ನಮ್ಮ ಮನಸ್ಸೇ? ನೋಡುವ ದ್ರಷ್ಟಿಕೋನವೇ ? ವೈಚಾರಿಕತೆಯ ಪರಿಯೇ? ಯಾವುದು ಹಾಗಾದರೆ??!
ಕನಸುಗಳೂ ಬದಲಾಗುತ್ತಿರುತ್ತವೆ ಕಾಮನಬಿಲ್ಲಿನಂತೆ. ಹೇಗೆ ಕಾಮನಬಿಲ್ಲು ಮೋಡ, ಮಳೆ, ಸೂರ್ಯಕಿರಣ, ಗಾಳಿಯ ಚಾರಣಗಳಿಗನುಗುಣವಾಗಿ ಆಗಸದಲ್ಲಿ ಕಮಾನು ಕಟ್ಟುವುದೋ ಹಾಗೆ ನಮ್ಮ ಆಧ್ಯತೆ, ಅವಶ್ಯಕತೆಗಳಿಗನುಸಾರವಾಗಿ ಕನಸುಗಳನ್ನು ಕಾಣುತ್ತೇವೆ. ಕಿರಿಯರ ಮನಸ್ಸಂತೂ ಚಂಚಲ. ಟೀನೇಜ್ ಮಧುರ ಯಾತನೆಯ ಮರ್ಕಟ. ಮದ್ಯವಯಸ್ಸು ಸಂಸಾರ-ಸಂತೃಪ್ತಿ ಹೊಂದಿಸಲು ಜಂಜಾಟ. ಲಿಟ್ಲ್ ಪಾಂಡವಾಸ್, ಲಿಟ್ಲ್ ಕೌರವಾಸ್ ಗಳ ಚಕಮಕಿಯ ಚೆಲ್ಲಾಟ, ಸುತ್ತಮುತ್ತ ಭಾಷಣ-ಕೂಟಗಳು, ಫ್ಲೆಕ್ಸ್ , ಬಂಟಿಂಗ್ಸ್ , ಬ್ಯಾನರ್ , ತಲ್ಲಣಗಳ ತಾಕಲಾಟ, ಹೆಲ್ಪ್ ಲೈನ್ ದೂರುಗಳು, ಹೆಡ್ ಲೈನ್ ಗಳ ಹೈಲೈಟುಗಳು , ದಿಕ್ಸೂಚಿ ಆಧಾರಗಳು, ಅಂಬುಲೆನ್ಸ್, ಐ.ಸಿ ಯೂನಿಟಗಳು, ಹೈಟೆಕ್ ಹಾಸ್ಪಿಟಲ್ ಗಳು , ಅಕಾಡೆಮಿಕ್ ಕ್ವಾಲಿಫಿಕೇಶನ್ ಗಳು, ಮ್ಯಾನೇಜಮೆಂಟ್ ಕೋರ್ಸ್ ಗಳು , ಮ್ಯಾನರಿಸಂ ಕಲಿಸುವ ಶಿಭಿರಗಳು , ಬಾಳಬುತ್ತಿ ಕಟ್ಟಿ ಕೊಡುವ ಗುರುಗಳು ….ಉಪ್.ಪ್. ಪ್ ಇವೆಲ್ಲ ಇವೆ. ಇದ್ದೆ ಇರುತ್ತವೆ ಬಿಡಿ. ಆದರೆ ಗೊತ್ತಲ್ಲ…ಭಾಷಣ, ಭೋಜನ ಎರಡೂ ಅತಿಯಾದರೆ ಅಜೀರ್ಣ ಮತ್ತು ಅಪಾಯ. ಮೌನದಲ್ಲೇ ದ್ಯಾನಸ್ಥ ಸ್ಥಿತಿಯಲ್ಲಿ ಹುಡುಕಬೇಕಾಗಿದ ಬದುಕ ಕಟ್ಟುವ ಉಪಾಯ.
ಜೀವ ಮಂಡಲದಲ್ಲಿ 18 ಲಕ್ಷ ಪ್ರಭೇದಗಳಿಗೆ ಸೇರಿದ ಜೀವಿಗಳಿವೆಯಂತೆ. “ಮನುಷ್ಯ ಜೀವಿ” ಶ್ರೇಷ್ಠವಂತೆ; ಹೌದೇ ? ಹೇಳಿದ್ದು ಯಾರು ‘ಮನುಷ್ಯ ಜೀವಿ’ಯೇ ತಾನೇ?? ಈ ಪ್ರಶಸ್ತಿ ಶಹಬ್ಬಾಸಗಿರಿ ಸ್ವಯಾರ್ಜಿತ! ವಾರೆವ್ಹಾ !!?.. ಸ್ವಪ್ರತಿಷ್ಠೆಯ ಬೆನ್ನು ಚಪ್ಪರಿಸಿಕೊಳ್ಳೋ ಚಪಲ(height of selfishness).
ಬದುಕೇ ಬೆಲೆಬಾಳುವ ಬಳುವಳಿ. “ಆರ್ಟ್ ಆಪ್ ಲಿವಿಂಗ್ ” ಕಲಿಯಬೇಕಾದರೆ ಆರ್ಟ್ ಆಪ್ ಲವಿಂಗ್ ಕಲಿಯಬೇಕು. ಅಜ್ನಾನದಿಂದ ಅಂಧಕಾರ, ಅಹಂಕಾರದಿಂದಲೂ ಅಂಧಕಾರ. ಕಾಲಕ್ಕೆ ತಕ್ಕಂತೆ ಬದಲಾಗುವುದನ್ನು ಕಲಿತರೆ ದೂರದೀತು ಗಂಡಾಂತರ. ಬೋನ್ಸಾಯ್ ಬೆಳೆ ಬೇಡ, ಸ್ವಚ್ಚಂದವಾಗಿ ಬೆಳೆಯಲು ಅನುಕೂಲ ಮಾಡಿ.ಬಾಲಪ್ರತಿಭೆಯನ್ನು ಬೆಳೆಸುವ ಹೊಣೆಗಾರಿಕೆ ಹಿರಿಯರದ್ದೇನೋ ಸರಿಯೇ ಆದರೆ, ಪ್ರಯತ್ನ ಪರಿಶ್ರಮದಿಂದಷ್ಟೇ ಪ್ರಗತಿ ಉನ್ನತಿ ಸಾಧ್ಯ.ಕಾರ್ಪೊರತೆ ಬ್ಯುಸಿ ಬದುಕಿನ ಝಗಝಗ. ಕೆಲವೊಮ್ಮೆ ಅನಿಷ್ಟ ಅನಿಸ್ಸುತ್ತೆ. ನೆಟವರ್ಕ್ ಕಟ್ ಆದ ಮೇಲೆ, ವ್ಯಾಪ್ತಿ ಪ್ರದೇಶದ ಹೊರಕ್ಕೆ ಜಾರಿದ ಮೇಲೆ ಅನುಭವಿಸುವುದು ಬರಿಯ ಅಸಮಾಧಾನದ ಸಂಕಷ್ಟ.
ಮುದುಡಿದ ಮನಸ್ಸು, ಮರಗಟ್ಟಿದ ಸಂಭಂದ, ಕದಡಿದ ಸಂತಸ, ಮತ್ತೆ ಸರಿಯಾಗಲು ಸಂಕಷ್ಟದ ಸುಗಂಧ ಪಸರಿಸಲು ಅನುಭವ, ಅನುಭಾವ, ಅಧ್ಯಯನಗಳು ಗಟ್ಟಿಗೊಳ್ಳಬೇಕು. ಇದು ಸಾಧ್ಯವೇ?? ಯೋಚಿಸಿ. ಸಾಧ್ಯವಾಗಿಸುವ ವಾಸ್ತವ ಮಾರ್ಗ ಅರಸಿ ವಾಹಿನಿಗಳ “ರಿಯಾಲಿಟಿ ಶೋ” ಗಳೇ ಬೇರೆ, ರಿಯಲ್ ಲೈಫೇ ಬೇರೆ. ನಿಜ ಬಾಳಲ್ಲಿ ಬೇಡ ಬಾನಗಡಿ. ನೆನಪಿರಲಿ ನಿತ್ಯ ಹಿರಿಯರ ಹಿತನುಡಿ.
ಬದುಕಿನಲ್ಲಿ ಆಧುನಿಕತೆ ಆವರಿಸಿಕೊಂಡಿದೆ, ಹಾಗೆಂದು ಇದೇನು ತುತ್ತ ತುದಿಯಲ್ಲ. ಬದಲಾವಣೆ ನಿರಂತರ ಪ್ರಕ್ರಿಯೆ. ಕೆಲವೊಮ್ಮೆ ಕಣ್ಣಕೊರೈಸುವ ಮಾಯೆ ಅನಿಸಿದರೆ ಕೆಲವೊಮ್ಮೆ ಕರಿ ನೆರಳಿನ ಛಾಯೆ. ಎಲ್ಲ ಎದುರಿಸಲು ಸಜ್ಜಾಗಬೇಕು ಯುವ ಜನಾಂಗ. ಬದುಕು ಸೋಲು ಗೆಲುವುಗಳ ಕೂಟ. ಜಯಕ್ಕೆ ಜಗತುಂಬ ಗೆಳೆಯರು, ಸೋಲು ಮಾತ್ರ ಅನಾಥ, ಹಾಗೆಂದು ಸೋಲಿಗೆ ಸಮರ್ಥನೆ ಬೇಡ. ಮುಂದಿನ ಗೆಲುವಿಗೆ ಫಾರ್ಮುಲಾ ಹುಡುಕಿ ಸಾಕು. ಬ್ರೇಕಿಂಗ್ ನ್ಯೂಸ್ ಬ್ರೇಕಿಲ್ಲದ ನ್ಯೂಸ್, ಬೇಕಿಲ್ಲದ ನ್ಯೂಸ್, ಎಕ್ಸಕ್ಲೂಸಿವಗಳ ಗೊಂದಲಗಳ ಗುಂಡಿಯಲ್ಲಿ ಕಳೆದೊಗಬೇಡಿ.
ನಿಜ.. ಎಲ್ಲವೂ ಬದಲಾಗುತ್ತಿದೆ ಚಿಲ್ಲರೆ ನೋಟುಗಳ ಕಂತೆಗಳ ಹೊತ್ತೊಯ್ದು ವ್ಯವಹಾರಿಸುವ ಬದಲು ಕ್ರೆಡಿಟ್ ಕಾರ್ಡ್ , ಡೆಬಿಟ್ ಕಾರ್ಡ್ಗಳು ಬಂದಿವೆ, ಪೋಸ್ಟ್ ಕಾರ್ಡ್ ಇನ್ ಲ್ಯಾಂಡ, ಕವರ್ , ತಂತಿ, ಟೆಲಿಫೋನ್ ಬದಲು ಫೇಸ್ ಬುಕ್, ಗೂಗಲ್ , ಆರ್ಕುಟ್, ಬ್ಲಾಗ್, ಟ್ವಿಟ್ಟರ್ ಗಳು ಸಂದೇಶವಾಹಕಗಳಾಗಿವೆ.ಟೈಪ್ ರೈಟರ್ ಜಾಗಕ್ಕೆ ಕಂಪ್ಯೂಟರ್ ಬಂದಿದೆ. ಲ್ಯಾಪಟಾಪ್ ಗಳು ತೊಡೆಯಲಿ ಕುಳಿತಿವೆ. ಅಡ್ಡರಸ್ತೆ, ಉದ್ದರಸ್ತೆಯ ವಿಳಾಸದ ವಿವರಗಳ ಬದಲು ಇಮೇಲ್ ಐಡಿ, ಸೆಲ್ ಮೇಲ್ ಮೇಲೆನಿಸಿದೆ. ಅಂತರ್ಜಾಲವಂತು ಜನರನ್ನು ತೀರಾ ಸಮೀಪ ತಂದು ನಿಲ್ಲಿಸಿದೆ. ಕಚೇರಿ, ಕಾಂಪ್ಲೆಕ್ಸ್, ಅಂಗಡಿ ಮುಂಗಟ್ಟುಗಳು ಸಿಸಿ ಟಿವಿಗಳು ದುರುಗುಟ್ಟುತ್ತಿವೆ. ಚೀಲಗಳ ಬದಲು ಬಣ್ಣಬಣ್ಣದ ಕ್ಯಾರಿಬ್ಯಾಗ್ ಗಳು, ಹೀಗೆ ಮೊದಲಾದ “ಎಂಡ್ ” ಇಲ್ಲ ಹೊಸ “ಟ್ರೆಂಡ್” ಸರ್ವಾಂತಯಾರ್ಮಿ ಎನಿಸಿದೆ. ಮೇಟಿ ವಿದ್ಯೆಗಿಂತ ಲೂಟಿ ವಿದ್ಯೆ ಮೇಲಾಗಿ ರಾರಾಜಿಸುತ್ತಿದೆ.ಸ್ತ್ರೀಯನ್ನು ಪೂಜ್ಯ ಭಾವನೆಯಿಂದ ನೋಡುವ ಭವ್ಯ ಸನಾತನ ಸಂಸ್ಕೃತಿ ಇಂದು ಲೈಂಗಿಕ ಕಿರುಕುಳ, ಅತ್ಯಾಚಾರ, ಭ್ರೂಣಹತ್ಯೆ ಮೊದಲಾದ ಅಭದ್ರತೆಗೆ ಒಳಗಾಗಿ ಸೊರಗುತಿದೆ. ಛೇ ಛೇ ..
ಇದೆಲ್ಲ ಸರಿ ಆದರೆ …… ನಮ್ಮ ನೆಲದ ಸಂಸ್ಕೃತಿಯ ರಕ್ಷಾಕವಚ ನಮಗಿದ್ದೇ ಇದೆ. ನಮ್ಮ “ಸಂವೇದನೆ” ಸೋತು “ಸ್ಲಂ” ವೇದನೆ ಎನಿಸಬಾರದು. ವಿಚಾರದಲ್ಲಿ ವಿಕ್ರಮ ಮೆರೆದರೆ ಸಾಲದು ಆಚಾರಕ್ಕೆ ಅರಸನಾಗಬೇಕು. (ಚಿರಮೌಲ್ಯಗಳ ಪುನರುತ್ತಾನವಾಗಬೇಕು) ಚಿಂತೆ ಬಿಟ್ಟು ಮಾಡಬಹುದಾದ ಬದಲಾವಣೆಗಳ ಬಗ್ಗೆ ಚಿಂತನೆ, ಆದರ್ಶಗಳ ಅನುಷ್ಟಾನಕ್ಕೆ ಆದ್ಯತೆ ನೀಡಬೇಕು “ಲಿವ್ ಲೆಟ್ ಲಿವ್” ಬದಲು “ಲಿವ್ ಲೆಟ್ ಡೈ” ಎಂಬ ಸ್ವಾರ್ಥ ಸೈತಾನ ಸಂತಾನ ಎಲ್ಲೆಲ್ಲು ಕುಣಿಯುತ್ತಿವೆ. ಹೀಗೆಲ್ಲಾ ಕುಣಿಯುವವರನ್ನು ಮಣಿಸುವ ಒಳ್ಳೆಯ ಕಾಲ ಬರುತ್ತದೆ. ಒಪ್ಪುತ್ತೀರಾ …?? ಕಾಯೋಣವೇ ??? ನಂಬೋಣವೆ????
ಯಾಕೆಂದರೆ ……. ಯಾಕೆಂದರೆ ……. ಇಲ್ಲಿ ….. ನಮ್ಮ ಸೂತ್ರ, ಜೀವನಾಡಿಯನ್ನು ತಿಳಿಯದಂತೆ ಅಂಶ ಅಂಶವಾಗಿ ತಿಂದು ಹೊಸಕುವ ಬ್ಯಾಕ್ಟಿರಿಯಾಗಳು, ವೈರಸ್ ಗಳಿವೆ. ನೆಲನುಂಗುವ ತಿಮಿಂಗಿಲಗಳಿವೆ. ಎಂಡೋ ಸಲ್ಫಾನ ವಿಷವಿದೆ. ಎಷ್ಟoತ ಕ್ಯಾಮೆರಾ, ಸ್ಕ್ಯಾನರ್, ಸಿಸಿ ಟಿವಿ ಅಳವಡಿಸಲು ಸಾದ್ಯ ಹೇಳಿ ??? ಕ್ರಿಮಿನಲ್ ಮೈಂಡ್ ವೈಂಡ್ ಮಾಡುವ ಮಷೀನ್ ಎಲ್ಲಿದೆ???
ಯುವ ಗೆಳಯರೇ … ನಮ್ಮ ಡ್ರಿಲ್ ಸಾಗಲಿ ..ಎದೆ ತುಂಬಾ ಥ್ರಿಲ್ ತುಂಬಿ ಜಲ್ ಝಲ್ ಎನ್ನಲಿ … ದಿಲ್ ಗುಲಾಬಿಯಂತೆ ಅರಳಲಿ …..ಬಾಳು ಬೆಳಗಲಿ.. ಭವಿಷ್ಯ ಉಜ್ವಲವಾಗಿರಲಿ ಗುಡ್ ಲಕ್ ….
–ವೀಣಾ ಭಟ್ ಯಲ್ಲಾಪುರ
ಕನ್ನಡದ ಬರಹಗಳನ್ನು ಹಂಚಿ ಹರಡಿ
ವಿಚಾರಪೂರ್ಣ ಬರಹ. ಕಾಲ ಬದಲಾಗಿದೆ ನಾವೂ ಬದಲಾಗಿದ್ದೇವೆ..
ಚೆನ್ನಾಗಿದೆ.