’ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ’ ಎಂದು ಅಡುಗೆ ಮನೆಯಲ್ಲಿ ಪಲ್ಯ ತಳ ಹತ್ತದಂತೆ ಸೌಟಿನಲ್ಲಿ ತಾಳ ಹಾಕುತ್ತಾ ನನ್ನ ಧ್ವನಿಗೆ ನಾನೇ ಮೆಚ್ಚಿಕೊಳ್ಳುತ್ತಾ ಹಾಡುತ್ತಿದ್ದೆ.ಅಷ್ಟರಲ್ಲಿ ’ಅಮ್ಮಾ’ ಎಂದಿತು ಕಂದನ ಕರುಳಿನ ಕರೆಯೋಲೆ. ನಾನೇ ಹಾಡುತ್ತಿದ್ದ ಲಾಲಿ ಹಾಡು ಕೇಳಲಾಗದೇ ಬೇಗನೇ ನಿದ್ರಿಸಿ ದೊಡ್ಡವನಾದ ನನ್ನ ಕರುಳ ಕುಡಿಯಲ್ಲವೇ ಎಂದು ಹಾಡನ್ನು ಮುಂದುವರಿಸಿದೆ.
ಅಮ್ಮಾ.. ಡೊಂಕು ಬಾಲದ ನಾಯಕರು ಅಂದರೆ ಯಾರು ಎಂದ.
ಅವನ ಪ್ರಶ್ನೆಗೆ ಸರಳವಾಗಿ ’ನಾಯಿ’ ಎಂದು ಉತ್ತರ ಕೊಟ್ಟೆ. ತಕ್ಷಣ ನಾಲಿಗೆ ಕಚ್ಚಿಕೊಂಡೆ. ಆದರೂ ನನ್ನ ಉತ್ತರ ಮಾಡುವಷ್ಟು ಅನಾಹುತ ಮಾಡಿಯೇ ಬಿಟ್ಟಿತ್ತು.
ಅಮ್ಮಾ ನಂಗೆ ಒಂದು ನಾಯಿ ಮರಿ ಬೇಕೇ ಬೇಕು. ಅರ್ಚನಾ ಮನೆಯಲ್ಲೂ ಇದೆ, ಪಾರಿ ಮನೆಯಲ್ಲು ಇದೆ, ಚಿಲ್ಟು ಮನೇಲಿ ಎರಡಿದೆ. ಬೋಪಯ್ಯನ ಮನೇಲಿ ಐದು.. ಹೀಗೇ ಪಟ್ಟಿ ಮುಂದುವರಿಯಿತು.
ಮೊದಲೊಮ್ಮೆ ಈ ನಾಯಿಮರಿ ಬೇಡಿಕೆ ನನ್ನ ವಿರೋಧದಿಂದಾಗಿ ಮುಂದೂಡಲ್ಪಟ್ಟು ನಿನ್ನ ಪರೀಕ್ಷೆ ಮುಗಿದ ನಂತರ ಆಲೋಚಿಸುವ ಎಂದು ನಿರ್ಧರಿಸಲ್ಪಟ್ಟಿತ್ತು. ಈಗೆರಡು ದಿನಗಳ ಕೆಳಗೆ ರಜೆ ಸಿಕ್ಕಿ ಮನೆಯ ತಿಂಡಿ ಡಬ್ಬಗಳನ್ನು ಬುಡಮೇಲು ಮಾಡುತ್ತಾ, ಕಾರ್ಟೂನ್ ಲೋಕದಲ್ಲಿ ಕಳೆದು ಹೋಗುತ್ತಿದ್ದ ಇವನನ್ನು ಉತ್ಸಾಹಗೊಳಿಸಲು ನಾಯಿ ಮರಿ ಒಳ್ಳೆಯ ಮದ್ದಾಗಬಹುದೆಂದು ದೂರಾಲೋಚಿಸಿ ಅವನ ಬೇಡಿಕೆಗೆ ಅಸ್ತು ಎಂದೆ.
ಈಗ ಶುರು ಆಯಿತು ನಮ್ಮ ನಾಯಿ ಮರಿ ಭೇಟೆ. ಮನೆಗೆ ಬರುವ ಕೆಲಸದವರಿಂದ ಹಿಡಿದು, ಮೀಟರ್ ರೀಡರುಗಳವರೆಗೆ ಎಲ್ಲರನ್ನೂ ನಿಮ್ಮಲ್ಲಿ ನಾಯಿ ಮರಿ ಉಂಟೇ ಎಂದು ಕಾಡಿ ಬೇಡಿದ್ದಾಯಿತು. ನಕಾರಾತ್ಮಕವಾಗಿ ಎಲ್ಲರ ತಲೆ ಅಲುಗಿತ್ತೇ ವಿನಃ ನಾಯಿ ಮರಿ ಸಿಕ್ಕಿರಲಿಲ್ಲ.ನನ್ನ ಮಗರಾಯನ ಬೇಡಿಕೆ ಈಗ ಕುಂಯ್ಗುಟ್ಟುವಿಕೆಯ ಮಟ್ಟದಿಂದ ಮೇಲೇರಿ ಗುರುಗುಟ್ಟುತೊಡಗಿತ್ತು. ಬೇಗನೇ ಮನೆಗೆ ನಾಯಿ ಮರಿ ಬಾರದಿದ್ದರೆ ಉಳಿಗಾಲವಿಲ್ಲವೆಂದು ನಾನು ಎಲ್ಲರನ್ನೂ ಫೋನಿನ ಮೂಲಕ ಸಂಪರ್ಕಿಸಿ ಕೇಳಲು ಪ್ರಾರಂಭಿಸಿದೆ. ನನ್ನ ಅದೃಷ್ಟಕ್ಕೋ ದುರಾದೃಷ್ಟಕ್ಕೋ ಫೋನ್ ಎತ್ತಿದ ನನ್ನಣ್ಣ ’ನಾಯಿ ಮರಿ ನಮ್ಮಲ್ಲಿದೆ, ಬಾ’ ಎಂದ. ಅವನು ಬಾ ಎಂದೊಡನೇ ಹೋಗಲು ಅದೇನು ನೆರೆಮನೆಯಾಗಿರಲಿಲ್ಲ. ಅವನ ಮನೆ ದೂರದ ಶಿವಮೊಗ್ಗದಲ್ಲಿತ್ತು. ಅಲ್ಲಿಗೆ ಹೋಗದೆ ಎರಡು ವರ್ಷವೂ ದಾಟಿತ್ತು. ಇದು ಒಂದು ನೆವ ಆಯಿತು ಎಂದುಕೊಂಡು ಮನೆಯವರೆಲ್ಲರ ಸವಾರಿ ಕಾರೇರಿ ಹೊರಟಿತು. ನನ್ನ ಮಗ ಅಂತೂ ನಾಯಿ ಮರಿಯನ್ನು ಯಾವಾಗ ನೋಡುವುದೋ ಎಂಬ ಕುತೂಹಲದಲ್ಲಿ ಕಾಲು ಗಂಟೆಗೊಮ್ಮೆ ಬಂತಾ ಶಿವಮೊಗ್ಗ .. ಇನ್ನೂ ಎಷ್ಟು ದೂರ.. ಅಂತ ಕೇಳುತ್ತಲೇ ಇದ್ದ. ಅಂತೂ ಇಂತೂ ಕತ್ತಲಾಗುವ ಹೊತ್ತಲ್ಲಿ ಅಣ್ಣನ ಮನೆ ಸೇರಿದೆವು. ಮಗ ನಿದ್ದೆ ಹೋಗಿದ್ದ. ಆತ್ಮೀಯ ಸ್ವಾಗತ ಉಪಚಾರಗಳ ನಡುವೆ ನನ್ನ ಕಣ್ಣು ಅಲ್ಲೆಲ್ಲೂ ಕಾಣದ ನಾಯಿ ಮರಿಯನ್ನು ಹುಡುಕುತ್ತಿತ್ತು.
ಊಟದ ಹೊತ್ತಾದರೂ ಯಾರೂ ನಾಯಿ ಮರಿಯ ಬಗ್ಗೆ ಚಕಾರ ಎತ್ತಿರಲಿಲ್ಲ. ನನಗೂ ಈಗ ಅಣ್ಣ ತಮಾಶೆಗೆ ಹೇಳಿ ನಾನು ಅವಸರದಲ್ಲಿ ಬಂದೆನೇನೋ ಅನ್ನಿಸಲು ಶುರು ಆಯ್ತು. ಒಳ್ಳೇ ನಿದ್ದೆಯಲ್ಲಿದ್ದ ಮಗರಾಯನನ್ನು ಮೆತ್ತಗೆ ಚಿವುಟಿ ಏಳಿಸಿದೆ. ನಾಯಿ ಮರಿ ಸುದ್ದಿ ತೆಗೆಯಲು ಅವನಿಗಿಂತ ಉತ್ತಮ ಜನ ಸಿಗುವುದುಂಟೇ. ಕಣ್ಣೊರೆಸಿಕೊಳ್ಳುತ್ತಾ ಅವನು ಶಿವಮೊಗ್ಗ ಬಂತಾ.. ಇನ್ನೆಷ್ಟು ದೂರ.. ನಾಯಿ ಮರಿ ಎಲ್ಲಿ ಎನ್ನುತ್ತಲೇ ಎದ್ದ.
ಆಗಲೇ ಮನೆಯವರಿಗೂ ನೆನಪಾಗಿದ್ದು ನಾವು ನಾಯಿ ಮರಿಗೋಸ್ಕರವೇ ಬಂದವರೆಂದು.. ಅಣ್ಣ ಬಾಗಿಲು ಹಾಕಿದ್ದ ಒಂದು ರೂಮಿಗೆ ಎಲ್ಲರನ್ನೂ ಕರೆದೊಯ್ದ. ಮೆತ್ತಗೆ ಬಾಗಿಲು ಸರಿಸಿ ಬಲ್ಬ್ ಹೊತ್ತಿಸಿ ’ಬ್ರೂನೋ’ ಎಂದ. ಮಂಚದ ಮೇಲೆ ಕಂಬಳಿ ರಾಶಿಗಳ ನಡುವಿನಿಂದ ಮೆಲ್ಲನೆ ಮೈ ಮುರಿಯುತ್ತಾ ಪೀಚಲು ಶರೀರಿ ಬಡಕಲು ಬಾಲದ ಜೀವಿಯೊಂದು ಎದ್ದು ನಿಂತಿತು. ಹೊಸಬರಾದ ನಮ್ಮ ಕಡೆಗೆ ನೋಡಿ ನಿಂತಲ್ಲಿಂದಲೇ ಬೊಗಳಲು ಶುರು ಮಾಡಿತು. ಬರೋಬ್ಬರಿ ಎರಡಡಿ ಎತ್ತರವೂ ಉದ್ದವೂ ಇದ್ದ ಇದನ್ನು ನಾಯಿ ಮರಿ ಎನ್ನುವುದು ಹೇಗೆ? ಅಣ್ಣನ ಕಡೆಗೆ ನೋಡಿದೆ.
ಇದು ’ಗ್ರೇಟ್ ಡೆನ್’ ನಾಯಿ ಮರಿ ಈಗಷ್ಟೇ ಮೂರು ತಿಂಗಳಾಗಿದೆ ಎಂದ. ಅದರ ಗಾತ್ರ ನನ್ನ ಮನಸ್ಸಿನಲ್ಲಿ ನಾಯಿ ಮರಿ ಎಂಬುದರ ಬಗೆಗಿದ್ದ ಚಿತ್ರವನ್ನು ಅಳಿಸಿ ಹಾಕಿಸಿತ್ತು. ಮಗರಾಯ ವಾವ್.. ಎಷ್ಟು ಚೆನ್ನಾಗಿದೆ. ಇನ್ನು ಸ್ವಲ್ಪ ದಿನದಲ್ಲಿ ಇದು ಬೋಜಪ್ಪನ ಮನೇಲಿರೋ ’ಬ್ರೇವೋ’ಗಿಂತ ದೊಡ್ಡ ಆಗುತ್ತೆ ಎಂದು ಕುಣಿಯುತ್ತಿದ್ದ. ಮರುದಿನ ಬೆಳಗ್ಗೆ ನಮ್ಮ ಕಾರು ನಾಯಿಮರಿಯೊಂದಿಗೆ ಅದರ ನಿತ್ಯೋಪಚಾರದ ಪಟ್ಟಿಯ ಸಹಿತ ನಮ್ಮ ಮನೆಯ ಕಡೆ ತಿರುಗಿತು.
ದಾರಿಯುದ್ದಕ್ಕೂ ಕಾರಿನ ಹಿಂದಿನ ಸೀಟಿನಿಂದ ಮುಂದಿನ ಸೀಟಿಗೂ ಎಗರಾಡಿಕೊಂಡಿದ್ದ ಬ್ರೂನೋ ಕಾರು ನಿಲ್ಲಿಸಿದ ಕೂಡಲೆ ಕಿಟಕಿಯ ಹೊರಗೆ ತಲೆ ಹಾಕಿ ಅತ್ತಿತ್ತ ಹೋಗುವವರಿಗೆ ಇದ್ದಕ್ಕಿದ್ದಂತೆ ಬೊಗಳಿ ಅವರನ್ನು ಬೆಚ್ಚಿ ಬೀಳಿಸುತ್ತಿತ್ತು. ನನ್ನ ಮಗನಿಗಂತೂ ಇದು ಆಟದಂತೆ ಬಾಸವಾಗಿ ಸಣ್ಣ ಪೇಟೆ ಕಂಡರೆ ಸಾಕು ಅಲ್ಲಿ ಒಂದು ಗಳಿಗೆಯಾದರೂ ನಿಲ್ಲಿಸಪ್ಪ ಅಂತ ಗೋಗರೆಯುತ್ತಿದ್ದ.
ಮರಳಿ ಮನೆಗೆ ತಲುಪಿದ ಕೂಡಲೇ ನಾನು ನನ್ನ ಮಾಮೂಲಿ ಕೆಲಸಕ್ಕೆ ಇಳಿದರೆ ಅಪ್ಪ ಮಗ ಇಬ್ಬರೂ ನಾಯಿ ಸೇವೆಗೆ ಸಿದ್ಧರಾದರು. ಹೋಗುವ ಮೊದಲೇ ನಾನು ನಾಯಿ ಮರಿಗೆಂದು ಮಾಡಿಟ್ಟಿದ್ದ ರಟ್ಟಿನ ಪೆಟ್ಟಿಗೆಯ ಸಣ್ಣ ಗೂಡಿನಲ್ಲಿ ಅದರ ಮುಖ ಮಾತ್ರ ಹಿಡಿಯುತ್ತಿತ್ತಷ್ಟೇ. ಹಾಗಾಗಿ ಮನೆಯ ಹೊರಗಿನ ಸಿಟ್ ಔಟನ್ನು ಇವತ್ತಿನ ಮಟ್ಟಿಗೆ ಅದರ ಬೆಡ್ ರೂಮಾಗಿ ಮಾಡಿ ಎರಡೂ ಬದಿಯ ಗೇಟುಗಳನ್ನು ಮುಚ್ಚಿ ಅದನ್ನು ಅಲ್ಲಿ ಬಿಟ್ಟರು. ನಾಯಿಮರಿ ಚೆನ್ನಾಗಿ ನಿದ್ದೆಗಿಳಿಯಿತು. ಎಲ್ಲರಿಗೂ ಪ್ರಯಾಣದ ಆಯಾಸವಾಗಿದ್ದರಿಂದ ನಾವೂ ಕೂಡಾ ಮನೆಯ ಬಾಗಿಲನ್ನು ಭದ್ರ ಪಡಿಸಿ ನಿದ್ರಾಲೋಕಕ್ಕಿಳಿದಿದ್ದೆವು. ಸ್ವಲ್ಪ ಹೊತ್ತಿನಲ್ಲಿ ನಾಯಿ ಮರಿಯ ಕುಂಯ್ ಕುಂಯ್ ರಾಗ ಶುರು ಆಯಿತು. ಹೊಸ ಜಾಗವಾದ್ದರಿಂದ ಸ್ವಲ್ಪ ಹೊತ್ತಿನಲ್ಲಿ ನಿದ್ರೆ ಮಾಡೀತು ಎಂದುಕೊಂಡು ಅದನ್ನು ಕಡೆಗಣಿಸಿದೆ.
ಸಣ್ಣದಾಗಿ ಶುರುವಾದ ಅದು ತಾರಕಕ್ಕೇರಿತು. ಮಗನಿಗಂತೂ ಪಕ್ಕದಲ್ಲಿ ಭೂಕಂಪವಾದರೂ ತಿಳಿಯದಂತ ನಿದ್ದೆ. ಇವರು ’ಒಮ್ಮೆ ಹೋಗಿ ನೋಡಬಾರದೇ’ ಎಂದು ನಿದ್ದೆ ಕಣ್ಣಲ್ಲಿ ನನಗೆ ಅಪ್ಪಣೆಯಿತ್ತರು. ನನಗೂ ಅದರ ಹರಟೆಯಲ್ಲಿ ನಿದ್ದೆ ಬಾರದೆ ಎದ್ದು ಹೊರ ಹೋಗಿ ಅದರ ಹೆಸರು ಕರೆದೆ. ಸುಮ್ಮನಾಯಿತು. ಮತ್ತೆ ಒಳ ಬಂದು ಮಲಗಿದೆ. ಸ್ವಲ್ಪ ಹೊತ್ತಷ್ಟೇ.. ಈಗ ಬಾಗಿಲನ್ನು ಉಗುರುಗಳಿಂದ ಪರಚಲು ಶುರು ಮಾಡಿತು. ಎರಡು ಕೈಯೆತ್ತಿ ನಿಂತರೆ ಬಾಗಿಲಿನ ಚಿಲಕ ಎಟುಕುತ್ತಿದ್ದ ಅದು ಉಗುರುಗಳಿಂದ ಅದನ್ನು ಬಡಿದಂತೆ ಪರಚುತ್ತಿತ್ತು. ಜೊತೆಗೆ ಕುಂಯ್ ಕುಂಯ್ ರಾಗ..
ಪುನಃ ಹೊರಗೆ ಹೋಗಿ ಅದನ್ನು ಸುಮ್ಮನಿರಿಸಿದೆ. ಮರಳಿ ಹಾಸಿಗೆಗೆ ತಲೆಯಿಡುವ ಮೊದಲೇ ಅದರ ರಾಗ ಮತ್ತೆ ಶುರು. ನನಗಂತೂ ಏನು ಮಾಡಬೇಕೋ ತೋಚಲಿಲ್ಲ. ನಾನು ಅಲ್ಲಿಗೆ ಹೋದ ಕೂಡಲೇ ನಿಲ್ಲುತ್ತಿದ್ದ ರಾಗ ಹೆಜ್ಜೆ ತಿರುಗಿಸಿದ ಕೂಡಲೇ ಮತ್ತೆ ಶುರು. ಸಿಟ್ಟಿನಲ್ಲಿ ಸಿಟ್ ಔಟಿನಲ್ಲಿದ್ದ ಸೋಫಾದಲ್ಲಿ ಕುಸಿದು ಕುಳಿತೆ. ನನ್ನನ್ನು ನೋಡಿ ನಾಯಿಮರಿಯ ಕೂಗಾಟ ನಿಂತಿತು. ಮತ್ತೆ ನಾನ್ಯಾವಾಗ ಕಣ್ಣು ಮುಚ್ಚಿ ನಿದ್ರಾಲೋಕಕ್ಕಿಳಿದೆನೋ ತಿಳಿಯಲೇ ಇಲ್ಲ. ಬೆಳಗ್ಗಿನ ಜಾವಕ್ಕೆ ಕಣ್ಣು ಬಿಟ್ಟಾಗ ನಾನು ಶೇಷಶಯನನಂತೆ ಕೈಯನ್ನೇ ತಲೆದಿಂಬಾಗಿಸಿ ಮಲಗಿದ್ದರೆ ನಾಯಿ ನನ್ನ ಕಾಲ ಬುಡದಲ್ಲಿ ಪಾದ ಸೇವೆ ಮಾಡುವ ಲಕ್ಷ್ಮೀದೇವಿಯ ಪೋಸಿನಲ್ಲಿ ಮಲಗಿತ್ತು.
ಮುಂದೇನಾಯಿತು ಅಂತೀರಾ.. ಆ ಕಥೆಯನ್ನು ಇನ್ಯಾವಗಲಾದರೂ ಹೇಳ್ತೀನಿ.. ಈಗ ಡೊಂಕು ಬಾಲದ ನಾಯಕರಿಗೆ ವಾಕಿಂಗ್ ಮಾಡಿಸುವ ಸಮಯ.. ಸಂಕೋಲೆ ಕೆರೆಯುತ್ತಾ ನನ್ನನ್ನು ಕರೆಯುತ್ತಾ ಇದ್ದಾರೆ. ಇನ್ನೊಮ್ಮೆ ಸಿಗೋಣ.
*****
simple and lovely story anitha
Superrbb diii I lovd the story ….
Chanda ada… ishta aaytu… 🙂