ಡಿಸೆಂಬರ್ ಎಂದರೆ ಪ್ರವಾಸಗಳ ನೆನಪು..: ವಿನಾಯಕ ಅರಳಸುರಳಿ

ಶಾಲಾ ಪ್ರವಾಸವೆನ್ನುವುದು ಬದುಕಿನ ಮತ್ತೆಲ್ಲ ಪ್ರವಾಸಗಳನ್ನೂ ಮೀರಿಸುವಂಥಹಾ ಸವಿನೆನಪು. ಅರ್ಧವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ಛಳಿಗಾಲದ ಪ್ರವೇಶವಾಗುವ ಹೊತ್ತಿಗೆ ಶೈಕ್ಷಣಿಕ ಪ್ರವಾಸದ ಘೋಷಣೆಯನ್ನು ಸ್ವತಃ ಹೆಡ್ ಮಾಷ್ಟರೇ ಮಾಡುತ್ತಿದ್ದರು. ಬರುವ ಆಸೆ ಎಲ್ಲರಲ್ಲೂ ಇರುತ್ತಿತ್ತಾದರೂ ನೂರಿನ್ನೂರು ರೂಪಾಯಿಗಳ ಪ್ರವಾಸ ಶುಲ್ಕವನ್ನು ಹೊಂದಿಸುವುದು ಎಲ್ಲರಿಗೂ ಸಾಧ್ಯವಿರುವ ವಿಷಯವಾಗಿರಲಿಲ್ಲ. ಕೆಲವರಿಗೆ ಸುಲಭವಾಗಿ ಸಿಗುತ್ತಿದ್ದ ಈ ಹಣ ಇನ್ನು ಕೆಲವರಿಗೆ ಅಪ್ಪ-ಅಮ್ಮನಿಂದ ಬೆನ್ನಿನ ಮೇಲೆ ನಾಲ್ಕು ಗುದ್ದಿಸಿಕೊಂಡ ಬಳಿಕವೇ ಸಿಗುತ್ತಿತ್ತು. ಇನ್ನೂ ಕೆಲವರು ತಾವು ಅಲ್ಲಿಲ್ಲಿ ಅಡಿಕೆ ಸುಲಿದು, ಗೇರುಬೀಜ ಹೆಕ್ಕಿ ಸಂಪಾದಿಸಿದ್ದ ಹಣವನ್ನು ಮೇಷ್ಟರ ಕೈಗಿತ್ತು ತಮ್ಮ ಹೆಸರು ನೊಂದಾಯಿಸಿಕೊಳ್ಳುತ್ತಿದ್ದರು. ಹೀಗೆ ಕೊನೆಯಲ್ಲಿ ಸುಮಾರು ಮೊವ್ವತ್ತು – ನಲವತ್ತು ಜನರ ತಂಡವೊಂದು ಪ್ರವಾಸದ ಗುಂಗಿಗೆ ಬೀಳುತ್ತಿತ್ತು.

ಆಗ ನಮಗೆ ಈ ಮನೆಯಲ್ಲಿನ ಹಿರಿಯರ ಜೊತೆ ಪ್ರವಾಸ ಹೋಗುವುದೆಂದರೆ ಅದೇನೋ ಒಂದು ಥರದ ಕಿರಿಕಿರಿ. ಟ್ರ್ಯಾಕ್ಸ್ ನಲ್ಲೋ, ಓಮಿನಿಯಲ್ಲೋ ಇರುವ ಆರೆಂಟು ಸೀಟಿನಲ್ಲಿ ಹತ್ತು-ಹನ್ನೊಂದು ಜನ ಕೂರಬೇಕಾದ ಇಕ್ಕಟ್ಟಿನ ವಾತಾವರಣದಲ್ಲಿ ಕೊನೆಗೆ ಚಿಕ್ಕವರಾದ ನಾವೇ ನಮ್ಮ ಆಸನಗಳನ್ನು ತ್ಯಾಗಮಾಡಬೇಕಾಗುತ್ತಿತ್ತು. ಯಾರೋ ದೊಡ್ಡವರ ಕಾಲ ಮೇಲೆ ಕುಳಿತುಕೊಂಡು ಕರಕರೆ ಅನುಭವಿಸುತ್ತಾ, ತಿರುವು ಮುರುವು ರಸ್ತೆಯಲ್ಲಿ ಘಾಟಿಯಿಳಿಯುವಾಗ ಹೊಟ್ಟೆಯೊಳಗೆ ಬ್ರಶ್ ಹಾಕಿ ಕಲಸಿದಂತಾಗಿ ಬುಳಕ್ ಬುಳಕ್ಕೆಂದು ವಾಂತಿ ಮಾಡಿಕೊಳ್ಳುತ್ತಾ, ಹೊಟ್ಟೆಯಲ್ಲಿರುವುದೆಲ್ಲಾ ಖಾಲಿಯಾಗಿ ಹಸಿವಾಗಿ, ಹೊರಗಡೆ ಅಂಗಡಿಯಲ್ಲಿ ಕಂಡ ತಿಂಡಿಯೇನೋ ಬೇಕೆಂದು ಹಠ ಮಾಡಿ, ದೊಡ್ಡವರಿಂದ ಬೈಸಿಕೊಳ್ಳುತ್ತಾ ಯಾವುದೋ ಪುಣ್ಯಕ್ಷೇತ್ರದ ಜನಜಂಗುಳಿಯನ್ನು ತಲುಪಿ ಹಣ್ಣುಗಾಯಿ-ನೀರುಗಾಯಿಯಾಗುತ್ತಿದ್ದ ಅವಸ್ಥೆಯನ್ನು ನೆನೆಸಿಕೊಂಡಾಗ ಈಗಲೂ ಹೊಟ್ಟೆತೊಳೆಸಿದಂತಾಗುತ್ತದೆ. ನಿಂತಲ್ಲಿ ನಿಲ್ಲದ ನಮ್ಮ ಕಪಿಚೇಷ್ಟೆಗಳಿಗೆ ದೊಡ್ಡವರು ಸಂಪೂರ್ಣ ಅಂಕುಶ ಹಾಕುತ್ತಿದ್ದುದೂ ಇದಕ್ಕೆ ಇನ್ನೊಂದು ಕಾರಣ.

ಆದರೆ ಶಾಲಾ ಪ್ರವಾಸವೆಂದರೆ ಹಾಗಲ್ಲ. ಅದೊಂದು ಸ್ವಚ್ಛಂದ ಯಾನ. ಉತ್ಸಾಹದಲ್ಲಿ ಪುಟಿಯುತ್ತಾ ನೆಲದಿಂದ ಅರ್ಧ ಅಡಿ ಮೇಲೇ ಇರುತ್ತಿದ್ದ ನಮ್ಮನ್ನು ನಿಯಂತ್ರಿಸಲು ಮಾಸ್ತರುಗಳು ಇರುತ್ತಿದ್ದರಾದರೂ ಅವರು ತೀರಾ ನಮ್ಮ ನಡೆ-ನುಡಿಗಳನ್ನೂ ನಿಯಂತ್ರಿಸುವಷ್ಟು ಕಟ್ಟುನಿಟ್ಟಾಗಿರುತ್ತಿರಲಿಲ್ಲ. ಈಗೇನೋ ನಾವು ಪ್ರವಾಸವನ್ನು ಟೂರ್, ಟ್ರಿಪ್, ಟ್ರಕ್ಕಿಂಗ್, ಹೈಕಿಂಗ್ ಎಂದೆಲ್ಲಾ ಸ್ಟೈಲಾಗಿ ಕರೆಯುತ್ತೇವೆ. ಆದರೆ ಆಗ ಅದು ನಮ್ಮ ಅರ್ಧಂಬರ್ಧ ಇಂಗ್ಲೀಷು ಕಲಿತ ಬಾಯಿಯಲ್ಲಿ ‘ಸ್ಟೂರ್’ ಎಂದೇ ಪ್ರಸಿದ್ಧವಾಗಿತ್ತು. ಯಾರಾದರೂ ಟೂರಿಗೆ ಬರುದಿಲ್ಲವೆಂದೋ ಹಣವಿಲ್ಲವೆಂದೋ ಹೇಳಿದರೆ ಮುಗಿಯಿತು, “ಏನಲೇ, ಕಂಡಿದೀನಿ ಬಾರೋ ಸ್ಟೂರಿಗೆ. ನಿಮ್ ಅಪ್ಪಯ್ಯ ಇಟ್ಟಪ್ಪ ಫಾರಮ್ಮಲ್ ಕೋಳಿ ಕದ್ ಮಾಡಿಟ್ ದುಡ್ಡೆಲ್ಲಾ ಎಲ್ಲೋಯ್ತಲೇ?” ಎಂದು ಸಾರ್ವಜನಿಕವಾಗಿ ಅವನ ಜೊತೆಗೆ ಅವನ ತಂದೆಯ ಮಾನವನ್ನೂ ಸೇರಿಸಿ ಹರಾಜುಹಾಕಲಾಗುತ್ತಿತ್ತು. ಹೀಗೆ ಮಾಸ್ತರು ಕಡ್ಡಾಯ ಮಾಡದಿದ್ದರೂ ಗೆಳೆಯರ ಚೇತಾವನಿಗೆ ಹೆದರಿ ಮತ್ತಷ್ಟು ಹುಡುಗರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದರು.

ಅದೇನು ಗ್ರಹಚಾರವೋ ಗೊತ್ತಿಲ್ಲ. ಶಾಲಾದಿನಗಳ ಶೈಕ್ಷಣಿಕ ಪ್ರವಾಸವನ್ನಾಗಲಿ, ಮನೆಯವರೊಂದಿಗೆ ಹೋಗುತ್ತಿದ್ದ ಪುಣ್ಯಕ್ಷೇತ್ರಗಳ ಪ್ರವಾಸವನ್ನಾಗಲೀ ನೆನಪಿಸಿಕೊಂಡರೆ ಮೊದಲು ನೆನಪಾಗುವುದೇ ವಾಂತಿ! ಶಾಲೆಯಲ್ಲಿ ಪ್ರವಾಸದ ಬಸ್ಸುನ್ನು ಗೊತ್ತುಪಡಿಸುವ ಮೊದಲೇ ಮಾಸ್ತರುಗಳು ವಾಂತಿ ಮಾಡುವವರಿಗೆಂದು ಹತ್ತತ್ತು ಪ್ಲಾಸ್ಟಿಕ್ ಕವರ್ ಗಳನ್ನು ತಯಾರುಮಾಡಿಟ್ಟುಕೊಳ್ಳುತ್ತಿದ್ದರು. ಬೆಳ್ಳಂಬೆಳಗ್ಗೆ ಎಲ್ಲ ಮಕ್ಕಳೂ ನಿಗದಿಪಡಿಸಿದ ಜಾಗಕ್ಕೆ ಬಂದು, ಬಸ್ಸು ಹತ್ತಿ, ಇನ್ನೇನು ಡ್ರೈವರ್ ಆಕ್ಸಿಲೇಟರ್ ತುಳಿದಿದ್ದಷ್ಟೆ, ಅಷ್ಟರಲ್ಲಿ ಹಿಂದುಗಡೆ ಸೀಟಿನಿಂದ ವ್ಯಾ…..ಕ್ ಎನ್ನುವ ಸದ್ದೊಂದು ಆಶರೀರವಾಣಿಯಂತೆ ಕೇಳಿಬರುತ್ತಿತ್ತು. ಅಷ್ಟೇ! ಒಬ್ಬರು ವಾಂತಿ ಮಾಡಿಕೊಂಡಿದ್ದು ಗೊತ್ತಾಗುತ್ತಿದ್ದಂತೆಯೇ ಉಳಿದವರಲ್ಲೂ ವಾಂತಿ ಸಾಮೂಹಿಕವಾಗಿ ಉದ್ಭವವಾಗಿಬಿಡುತ್ತಿತ್ತು. ಪ್ರತೀಬಾರಿ ಬಸ್ಸು ಆಚೀಚೆ ಹೊರಳಿದಾಗಲೂ ಒಬ್ಬೊಬ್ಬರಾಗಿ ಕಿಟಕಿಯಲ್ಲಿ ತಲೆ ಹೊರಗೆ ತೂರಿಸುತ್ತಿದ್ದರು‌. ಮೊದಲ ಪ್ರವಾಸೀ ತಾಣವನ್ನು ತಲುಪುವಷ್ಟರಲ್ಲಿ ಸಂಪೂರ್ಣ ಹೊರಮೈಯ ಬಣ್ಣವೇ ಬದಲಾಗುವಂತೆ ಇಡೀ ಬಸ್ಸೇ ವಾಂತಿಯಲ್ಲಿ ಮುಳುಗೇಳುತ್ತಿತ್ತು. ಹೀಗೆ ಸುಸ್ತಾಗಿ, ಬಸ್ಸಿನಿಂದಿಳಿದು ನೋಡಿದರೆ ಹೊರಗಡೆ ರಸ್ತೆಯಲ್ಲಿ ಇದೇ ರೀತಿಯ ಅವಸ್ಥೆಯಲ್ಲಿ ನಿಂತಿರುವ ಮತ್ತಷ್ಟು ಪ್ರವಾಸದ ಬಸ್ಸುಗಳು ಗೋಚರವಾಗುತ್ತಿದ್ದವು.

ಶಾಲಾ ಪ್ರವಾಸದ ಜೊತೆಗೆ ಬೆರೆತಿರುವ ಮತ್ತೊಂದು ಸಂಗತಿಯೆಂದರೆ ಡಿಸೆಂಬರ್ ನ ಕಟಕಟ ಛಳಿ! ಸಾಧಾರಣವಾಗಿ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ನಲ್ಲಿ ಹೋಗುವ ಈ ಟೂರ್ ಗಳನ್ನು ಮತ್ತಷ್ಟು ರೋಮಾಂಚಕಗೊಳಿಸುವುದೇ ಈ ಛಳಿ. ಒಂದೇ ದಿನದಲ್ಲಿ ನೋಡಬೇಕಾದ ಪ್ರವಾಸೀ ತಾಣಗಳು ಹಲವಿರುತ್ತಿದ್ದುದರಿಂದ ಬೆಳಗ್ಗೆ ಐದಾಗುವಷ್ಟರಲ್ಲೇ ‘ಸಹಿಪ್ರಾ ಶಾಲೆ… ಶೈಕ್ಷಣಿಕ ಪ್ರವಾಸ’ ಎಂಬ ಬ್ಯಾನರ್ ಕಟ್ಟಿಕೊಂಡ ಬಸ್ಸು ಶಾಲೆಯೆದುರು ರಸ್ತೆಯಲ್ಲಿ ತಯಾರಾಗಿ ನಿಂತಾಗಿರುತ್ತಿತ್ತು. ಐದಾರು ಕಿಲೋಮೀಟರ್ ದೂರದಲ್ಲಿ ಮನೆಯಿರುತ್ತಿದ್ದವರೆಲ್ಲಾ ಹಿಂದಿನ ದಿನವೇ ಶಾಲೆಗೆ ಬಂದು ಉಳಿದುಕೊಂಡರೆ ಉಳಿದವರು ಇನ್ನೇನು ಬಸ್ಸು ಹೊರಡಬೇಕೆನ್ನುವ ಹೊತ್ತಿಗೆ, ಇನ್ನೂ ಬೆಳಕಾಗದ ಛಳಿಯ ಕತ್ತಲಿನ ಮಧ್ಯದಿಂದ ತಮ್ತಮ್ಮ ಅಪ್ಪಂದಿರ ಬೈಕು, ಸೈಕಲ್ಲುಗಳ ಹಿಂದಿನ ಸೀಟುಗಳಲ್ಲಿ ಕಿವಿ, ಮುಖಗಳೆಲ್ಲ ಪ್ಯಾಕ್ ಆದ ವೇಷದಲ್ಲಿ ಪ್ರತ್ಯಕ್ಷವಾಗುತ್ತಿದ್ದರು. ಹೀಗೆ ತಡವಾಗಿ ಬಂದ ಕಟ್ಟಕಡೆಯ ವಿದ್ಯಾರ್ಥಿಯನ್ನೂ ಹತ್ತಿಸಿಕೊಂಡ ಬಸ್ಸು ನಸುಬೆಳಕಿನ ದಾರಿಗೆ ಹೆಡ್ಲೈಟು ಬೀರುತ್ತಾ ಮುಂದುವರಿಯುತ್ತಿತ್ತು. ಮೆಲ್ಲಮೆಲ್ಲನೆ ಬೆಳಕು ಮೂಡಿದಂತೆಲ್ಲಾ ಕವಿದ ಮಂಜಿನ ಪರದೆ ಸ್ಪಷ್ಟವಾಗುತ್ತಾ ಹೋಗುತ್ತಿತ್ತು. ಕಿಟಕಿಯಿಂದ ತೂರಿ ಬರುವ ಛಳಿಗಾಳಿಗೆ ನಡುಗುತ್ತಾ, ಜ್ಯಾಮಾಗಿ ಮುಚ್ಚಲಾಗದ ಕಿಟಕಿಯ ಗಾಜಿನ ಜೊತೆ ಗುದ್ದಾಡುವಷ್ಟರಲ್ಲಿ ಹೊರಗಡೆ ಸೂರ್ಯ ಗುಡ್ಡವೊಂದರ ತೊಟ್ಟಿಲಿನಿಂದೆದ್ದುಬರುತ್ತಿದ್ದ. ಇಬ್ಬನಿಯ ಪರದೆಗೆ ಸಿಕ್ಕಿ ಪ್ರಭೆ ಕಳೆದುಕೊಂಡು ಬೆಳ್ಳಗೆ ಕಾಣುತ್ತಿದ್ದ ಅವನು ಸೂರ್ಯನೋ ಅಥವಾ ಚಂದ್ರನೋ ಎಂದು ಕಿಟಕಿಯ ಬಳಿ ಕುಳಿತ ಇಬ್ಬರು ಹುಡುಗರ ನಡುವೆ ವಾದವೇರ್ಪಟ್ಟು, ಅದು ಮಲ್ಲಯುದ್ಧವಾಗಿ ಬದಲಾಗಿ, ಅವನ ಬುರುಡೆಗೆ ಇವನೂ, ಇವನ ಬೆನ್ನಿಗೆ ಅವನೂ ಪರಸ್ಪರ ಗುದ್ದಿಕೊಂಡು, ಕೊನೆಗೆ ಮಧ್ಯಪ್ರೆವೇಶಿಸಿದ ಮೇಷ್ಟರು ಇಬ್ಬರ ಮಂಡೆಗೂ ಒಂದೊಂದು ತಟ್ಟುವ ಮೂಲಕ ಆ ಪ್ರವಾಸಕ್ಕೆ ಭವ್ಯ ಆರಂಭ ದೊರೆಯುತ್ತಿತ್ತು. ಇನ್ನು ಪ್ರವಾಸದ ವೇಳೆಯಲ್ಲಿ ಬಸ್ಸಿನಿಂದ ಎಸೆಯಲಿಕ್ಕೆ ‘ನಮ್ಮ ಪ್ರವಾಸಕ್ಕೆ ಜಯವಾಗಲಿ’, ‘ಸಹಿಪ್ರಾ ಶಾಲೆ ಅರಳಸುರಳಿ’ ಎಂಬೆಲ್ಲ ಚೀಟಿಗಳನ್ನು ಮೊದಲೇ ಬರೆದು ಜೇಬಿಗೆ ತುಂಬಿಕೊಂಡಿರುತ್ತಿದ್ದೆವು. ಅವುಗಳ ಮಧ್ಯೆ ಮಧ್ಯೆ ‘ಮಂಜ ಪ್ಯಕರ’, ‘ಕೋಳಿ ಕಳ್ಳ ಅರವಿಂದ’ ಮುಂತಾದ ಚೀಟಿಗಳನ್ನೂ ಸೇರಿಸಿ ಎಸೆಯಲಾಗುತ್ತಿತ್ತು. ಮುಂದೆ ಈ ಚೀಟಿಗಳು, ಪ್ರವಾಸದ ಮಧ್ಯದಲ್ಲಿ ಹೆಸರು ತಿಳಿಯದ ಯಾವುದೋ ಊರಿನ ದಾರಿಯ ಮೇಲೆ ಕಿಟಕಿಯಿಂದ ತೂರಲ್ಪಟ್ಟು, ಅನಾಮಿಕರಾದ ಅದ್ಯಾರಿಂದಲೋ ಓದಿಸಿಕೊಂಡು, ಅವರ ತುಟಿಯ ಮೇಲೆ ಕೆಲ ಕ್ಷಣಗಳ ನಗೆಯನ್ನುಂಟುಮಾಡುತ್ತಿದ್ದವು‌.

ಘಟ್ಟದ ಮೇಲಿನವರಾದ ನಮ್ಮನ್ನು ಹೆಚ್ಚಾಗಿ ಕರೆದೊಯ್ಯುತ್ತಿದ್ದದು ಘಟ್ಟದ ಕೆಳಗಿನ ಕೊಲ್ಲೂರು, ಮುರುಡೇಶ್ವರ, ಧರ್ಮಸ್ಥಳ, ಮಲ್ಪೆ, ಗೋಕರ್ಣ ಮುಂತಾದ ಜಾಗಗಳಿಗೆ. ಪುಣ್ಯಕ್ಷೇತ್ರಗಳ ಅಂಗಳದಲ್ಲಿ ಬಸ್ಸಿಂದಿಳಿದು ಸಾಲಾಗಿ ದೇವಸ್ಥಾನದೊಳಕ್ಕೆ ನಡೆದು ಹೋಗುತ್ತಿದ್ದ ನಮ್ಮ ಸೈನ್ಯವನ್ನು ಸುತ್ತಲಿನ ಭಕ್ತರೆಲ್ಲಾ ಖುಷಿಯಿಂದ ನೋಡುತ್ತಿದ್ದರೆ ನಾವು ಮಾತ್ರ ‘ಏ ನಾನು ಸುಮಂತನ ಜೊತೆ’, ‘ಏ ನಾನು ಪುಷ್ಪಾ ಜೊತೆ’ ಎಂದೆಲ್ಲಾ ಕಾದಾಡುತ್ತಾ ನಮ್ನಮ್ಮ ನೆಚ್ಚಿನ ಗೆಳೆಯ, ಗೆಳತಿಯರ ಕೈಹಿಡಿದು ದೇವಾಲಯದೊಳಕ್ಕೆ ನಡೆಯುತ್ತಿದ್ದೆವು. ಅಲ್ಲಿ ಯಾವುದೇ ಸ್ವಾರ್ಥ, ಬಯಕೆ, ಬೇಡಿಕೆಗಳಿಲ್ಲದೆ ನಿಶ್ಕಲ್ಮಷವಾಗಿ ಕೈಮುಗಿಯುವ ಈ ಮಕ್ಕಳನ್ನು ನೋಡಲೆಂದೇ ಕಾದಿದ್ದನೇನೋ ಎಂಬಂತೆ ಮುಗುಳ್ನಗು ಬೀರುವ ಗರ್ಭಗುಡಿಯೊಳಗಿನ ದೇವರನ್ನೊಮ್ಮೆ ನೋಡಿ, ಕೈಮುಗಿದು ಹೊರಬಂದ ಇಡೀ ಮಕ್ಕಳ ದಂಡು ಧಾಳಿಯಿಡುತ್ತಿದ್ದುದು ದೇವಳದ ಹೊರಗಿನ ಸಾಲು ಸಾಲು ಅಂಗಡಿಗಳಿಗೆ. ಅಲ್ಲಿ ನಮ್ಮ ಜೇಬಿನಲ್ಲಿರುತ್ತಿದ್ದ ನೂರಿನ್ನೂರು ರೂಪಾಯಿಗಳಿಗೆ ಪ್ರಾಣಸಂಕಟವನ್ನುಂಟುಮಾಡುವಂತಹಾ ಅನೇಕ ಆಕರ್ಶಕ ಆಟಿಕೆ ಹಾಗೂ ಮತ್ತಿತರ ವಸ್ತುಗಳು ನೇತಾಡಿಕೊಂಡಿರುತ್ತಿದ್ದವು. ತಲೆಯೆಲ್ಲಾ ಬೆಲೆಯಿರುವ ಅವನ್ನು ಕೊಳ್ಳುವುದಲ್ಲದೆ ಮನೆಯಲ್ಲಿರುವ ಅಪ್ಪ-ಅಮ್ಮನಿಗೂ ಏನನ್ನಾದರೂ ಕೊಳ್ಳಬೇಕು. ಅದೂ ಜೇಬಿನಲ್ಲಿರುವ ಪುಡಿಗಾಸಿನಲ್ಲಿ! ಸಾಲದ್ದಕ್ಕೆ ಅಲ್ಲೇ ಪಕ್ಕದ ಡಬ್ಬಿಗಳಲ್ಲಿ ಚಾಕೋಬಾರ್-ಕೇಕ್ ಗಳೂ, ನಾವು ಹಿಂದೆಂದೂ ಕಂಡುಕೇಳದ ಹತ್ತಾರು ವಿಶೇಷ ಖಾದ್ಯಗಳೂ ‘ನಾವಿರುವುದೇ ನಿನಗಾಗಿ’ ಎಂದು ಕೈಬೀಸಿ ಕರೆಯುತ್ತಿದ್ದವು. ಇಂತಹಾ ಒತ್ತಡದ ಪರಿಸ್ಥಿತಿಯನ್ನೂ ಮೀರಿ ಕೊನೆಗೂ ಹತ್ತೋ, ಇಪ್ಪತ್ತೋ ರೂಪಾಯಿ ಉಳಿಯಿತೆಂದರೆ ಅದು ನಮ್ಮನ್ನು ಹೆತ್ತವರ ಪೂರ್ವಜನ್ಮದ ಪುಣ್ಯ!

ಚಿಕ್ಕವರಾಗಲಿ, ದೊಡ್ಡವರಾಗಲಿ, ಪ್ರವಾಸವೆಂದಮೇಲೆ ಆಡಲೇಬೇಕಾದ ಆಟ- ಅಂತ್ಯಾಕ್ಷರಿ! ಸಾಕ್ಷಾತ್ ಆ ದೇವರೇ ವಿಭಾಗ ಮಾಡಿ ಕಳಿಸಿರುವ ಹುಡುಗಿಯರು ಹಾಗೂ ಹುಡುಗರೆನ್ನುವ ಎರೆಡು ಗುಂಪುಗಳ ನಡುವೆ ತುರುಸಿನ ಸ್ಪರ್ಧೆ ಶುರುವಾಗುತ್ತಿತ್ತು. ‘ಗಜಮುಖನೇ ಗಣಪತಿಯೇ’ಯಿಂದ ಹಿಡಿದು ‘ಧೂಳ್ ಮಗಾ ಧೂಳ್’ ತನಕ ತನಕ ಎಲ್ಲಾ ಪ್ರಕಾರದ ಹಾಡುಗಳೂ ಹಿನ್ನಲೆ ಸಂಗೀತದ ಸಮೇತ ಇಲ್ಲಿ ಬಿತ್ತರವಾಗುತ್ತಿದ್ದವು. ತರಗತಿಯಲ್ಲಿ ಪದ್ಯ ಹೇಳೆಂದಾಗ ಬೆಬ್ಬೆಬ್ಬೆ ಎಂದು ತೊದಲುವ ತಮ್ಮ ಪ್ರಚಂಡ ಶಿಷ್ಯನೊಬ್ಬ ಈಗ ಇಲ್ಲಿ ‘ಸೈಡೀಗ್ ಹೋಗು ಸೈಡೀಗ್ ಹೋಗು ರಂಗಾ ಬರ್ತವ್ನೇ’ ಎಂದು ತಪ್ಪಿಲ್ಲದೆ ಥೇಟ್ ಸುದೀಪ್ ನಂತೆ ಹಾಡುವುದನ್ನು ಇಂಗ್ಲೀಷ್ ಮೇಷ್ಟರ ಸೂಕ್ಷ್ಮ ಕಣ್ಣುಗಳು ಗಮನಿಸಿಕೊಳ್ಳುತ್ತಿದ್ದವು. ಮುಂದಿನ ತರಗತಿಯಲ್ಲಿ ಅವನ ಬೆಂಡೆತ್ತುವಾಗ ಹೇಳುವುದಕ್ಕೆ ಅವರಿಗೊಂದು ನೂತನ ಕಾರಣ ಸಿಕ್ಕಿರುತ್ತಿತ್ತು!

                  ***

ಪುಣ್ಯಕ್ಷೇತ್ರಗಳ ನಂತರ ನಮ್ಮ ಸವಾರಿ ಹೊರಡುತ್ತಿದ್ದದ್ದು ಸಮುದ್ರದತ್ತ‌. ಮೇಷ್ಟರು-ಟೀಚರುಗಳಿಗೆ ನಿಜವಾದ ಸವಾಲು ಎದುರಾಗುತ್ತಿದ್ದುದೇ ಇಲ್ಲಿ. ಸಮುದ್ರವನ್ನು ನೋಡುತ್ತಿದ್ದಂತೆಯೇ ಒಬ್ಬೊಬ್ಬ ಹುಡುಗನೂ ಸಾಕ್ಷಾತ್ ಗ್ವಾಂಕರು ಕಪ್ಪೆಯಾಗಿ ಬದಲಾಗಿ, ತನ್ನ ಅಂಗಿಯನ್ನು ಕಿತ್ತು ಬಸ್ಸಿನೊಳಗೆ ಬಿಸುಟು ಸಮುದ್ರದತ್ತ ನುಗ್ಗುತ್ತಿದ್ದ. ಈ ಪ್ರಚಂಡರ ಉತ್ಸಾಹ ಕಂಡು ಸುಮುದ್ರವೇ ಹಿಮ್ಮೆಟ್ಟಬೇಕಲ್ಲದೆ ಹುಡುಗರ್ಯಾರಿಗೂ ಒಂದಿನಿತೂ ಸುಸ್ತಾಗುತ್ತಿರಲಿಲ್ಲ. ಕಳೆದ ಜನ್ಮದಲ್ಲಿ ಶಾರ್ಕೋ, ತಿಮಿಂಗಲವೋ ಆಗಿದ್ದವರಂತೆ ಸಮುದ್ರದ ಉಪ್ಪುನೀರನ್ನೂ ಲೆಕ್ಕಿಸದೇ ಅಲೆಗಳಲ್ಲಿ ಬಿದ್ದು ಹೊಡಕುವವರನ್ನು ನಿಯಂತ್ರಿಸುವಷ್ಟರಲ್ಲಿ ಮೇಷ್ಟರಿಗೆಲ್ಲ ತಿಮಿಂಗಲಗಳ ಒಂದು ಗ್ಯಾಂಗನ್ನೇ ಹಿಡಿದಷ್ಟು ಸುಸ್ತಾಗುತ್ತಿತ್ತು. ಇನ್ನು ದಡದಲ್ಲಿ ಸಿಗುವ ಕಪ್ಪೆಚಿಪ್ಪುಗಳಿಗಾಗಿಯಂತೂ ಸಾಕ್ಷಾತ್ ಕೋಹಿನೂರು ವಜ್ರಕ್ಕಾಗಿಯೆಂಬಂತೆ ಕಿತ್ತಾಡಿಕೊಂಡು, ‘ಸಾ ಸಾ ನೋಡಿ ಸಾ, ನಂಗೆ ಸಿಕ್ಕಿದ್ ಕಪ್ಪೆ ಚಿಪ್ಪನ್ನ ಕೆಜೆ ಸ್ರೀಕಾಂತ ಕಸ್ಕಂಡ ಸಾ’ ಎಂಬ ಅಹವಾಲುಗಳು ಮೇಷ್ಟರೆದುರು ಹಾಜರಾಗುತ್ತಿದ್ದವು. ಹೀಗೆ ನಮ್ಮನ್ನು ನಿಯಂತ್ರಿಸುವುದರ ಜೊತೆಗೇ ನಮ್ಮ ವ್ಯಾಜ್ಯಗಳಿಗೆ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಷ್ಟೇ ಪಕ್ವವಾದ ತೀರ್ಪನ್ನು ನೀಡಬೇಕಾದ ಭಾದ್ಯತೆಯೂ ಶಿಕ್ಷಕರದಾಗಿರುತ್ತಿತ್ತು.

ಇನ್ನು ಶಿವಮೊಗ್ಗ, ಮೈಸೂರುಗಳ ಕಡೆಗೇನಾದರೂ ಹೋಗಿದ್ದಾದರೆ ಅಲ್ಲಿನ ಪ್ರಾಣಿಸಂಗ್ರಹಾಲಯಗಳಿಗೆ ಹೋಗುವ ಭಾಗ್ಯ ನಮ್ಮದಾಗುತ್ತಿತ್ತು‌. ಇದುವರೆಗೆ ಬರಿಯ ಚಿತ್ರಗಳಲ್ಲಿ ನೋಡಿರುತ್ತಿದ್ದ ಕಾಡು ಪ್ರಾಣಿಗಳು ನಿಜವಾಗಿ ಓಡಾಡುವುದನ್ನು ಕಣ್ತುಂಬಿಕೊಳ್ಳುತ್ತಿದ್ದೆವು. ಗುಹೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಹುಲಿ, ಎರೆಡೇ ಕಾಲಿನಲ್ಲಿ ನಿಂತು ಅನಾಮತ್ತು ಒಂದಿಡೀ ಕಟ್ಟು ಕಬ್ಬನ್ನು ಜಗಿಯುತ್ತಿರುವ ಅಜಾನುಬಾಹು ಕರಡಿ, ಬಿಸಿಲಿನ ಬೇಗೆಗೆ ತೇಕು ಹಾಕುತ್ತಾ ಕುಳಿತಿರುವ ಚಿರತೆ, ಪ್ಯಾಕ್ ಪ್ಯಾಕ್ ಪ್ಯಾಕ್ ಎಂದು ವಿಚಿತ್ರವಾಗಿ ಕೂಗುವ ಆಫ್ರಿಕಾದ ಡುಮ್ಮಣ್ಣ ಗಿಳಿ, ಜಡೆ ಕಟ್ಟಿಕೊಂಡು ಬಂದ ಹುಡುಗಿಯರ ಹಿಂಡನ್ನು ನೋಡಿ ಖುಷಿಯಲ್ಲಿ ಗರಿತೆರೆದ ಗಂಡು ನವಿಲು, ಬಾತುವಿನಿಂದ ಮೈಬಣ್ಣವ ಸಾಲ ಪಡೆದಂತೆ ಕಾಣುವ ಬಿಳಿ ನವಿಲು, ಪಂಜರದೊಳಗಿನ ಹೊಂಡದಾಳದಲ್ಲಿ ಗಡದ್ದಾಗಿ ನಿದ್ರೆಹೊಡೆಯುತ್ತಿರುವ ಹೆಬ್ಬಾವು, ಅದರ ಸುತ್ತ ಪ್ರಾಣ ಭಯದಲ್ಲಿ ಹಾರಲೆತ್ನಿಸುತ್ತಿರುವ, ಅದರ ಆಹಾರಕ್ಕೆಂದು ಬಿಟ್ಟ ಕೋಳಿಗಳು, ನಿಂತಿವೆಯೋ ಅಥವಾ ನಡೆಯುತ್ತಿವೆಯೋ ಎಂಬುದು ಗೊತ್ತಾಗದಷ್ಟು ನಿಧಾನವಾಗಿ ಚಲಿಸುತ್ತಿರುವ ಆಮೆಗಳು.. ಹೀಗೆ ಒಂದೊಂದು ಪ್ರಾಣಿಯನ್ನೂ ನೋಡುತ್ತಾ ನಮ್ಮ ದಂಡು ಮುಂದುವರೆಯುತ್ತಿತ್ತು. ಅಲ್ಲಿ ನೀರಿನಲ್ಲಿ ಬಾಯ್ತೆರೆದು ನಿಂತ ಮೊಸಳೆಯನ್ನು ನೋಡಿ ‘ನೋಡೋ ಅಲ್ಲಿ, ದೊಡ್ಮಂಡೆ ಮಧೂನ ನೋಡಿ ಒಂದು ವಾರದ ಊಟ ಸಿಕ್ತೂಂತ ಖುಷಿಯಾಗಿ ಮೊಸಳೆ ಹೇಗೆ ನಾಲಿಗೆ ಚಪ್ಪರಿಸ್ತಿದೆ’ ಎಂದು ಅರುಣನೆಂದರೆ ಅದಕ್ಕೆ ಮಧು ‘ಇಲ್ನೋಡಿಲ್ಲಿ, ನೀನು ಬಂದೇಂತ ಖುಷಿಯಾಗಿ ಈ ಸಿಂಗಳೀಕ ಹೇಗೆ ಪಲ್ಟಿ ಹೋಡೀತಿದೆ’ ಎಂದು ಸೇಡು ತೀರಿಸಿಕೊಳ್ಳುತ್ತಿದ್ದ. ಈ ಮಾತುಗಳನ್ನು ಕೇಳಿಸಿಕೊಂಡ ಮೇಷ್ಟರು ‘ಏನೇ ಆದ್ರೂ ನೀವಿಬ್ರೂ ಆ ಹೆಣ್ಣು ಕರಡಿಯ ಬೋನಿನ ಹತ್ರ ಮಾತ್ರ ಹೋಗ್ಬೇಡ್ರೋ. ಅದಕ್ಕೆ ಮದುವೆಯಾಗಲಿಕ್ಕೆ ಗಂಡು ಹುಡುಕ್ತಿದಾರಂತೆ’ ಎಂದು ಅವರಿಬ್ಬರನ್ನೂ ಮಕ್ಕರ್ ಮಾಡಿ ಉಳುದವರೆಲ್ಲರನ್ನೂ ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಹೀಗೇ ಮುಂದುವರೆಯುವಾಗ ಬೋನಿನೊಳಗೆ ನಮಗೆ ಬೆನ್ನುಹಾಕಿನಿಂತ ಕಾಡುಬೆಕ್ಕೊಂದು ಕಂಡು, ಅದನ್ನು ತಮ್ಮತ್ತ ತಿರುಗಿಸಿಲು ಎಲ್ಲರೂ ಏನೇನೋ ಪ್ರಯತ್ನ ಮಾಡಿ, ಏನು ಮಾಡಿದರೂ ನಮ್ಮತ್ತ ತಿರುಗದ ಅದು ಕೊನೆಗೆ ಯಾರೋ ‘ಕುರ್ ಕುರ್ ಕುರ್, ಪ್ರಸಾದೂ ಈ ಕಡೆ ತಿರುಗೋ’ ಎಂದಾಗ ಅಚಾನಕ್ಕಾಗಿ ನಮ್ಮತ್ತ ನೋಡಿ, ಹುಡುಗಿಯರೂ ಸೇರಿದಂತೆ ಎಲ್ಲರೂ ಗೊಳ್ಳೆಂದು ನಕ್ಕು, ಪ್ರಸಾದನೆಂಬ ಹೆಸರಿನ ಹುಡುಗ ಮುಖಭಂಗಕ್ಕೀಡಾಗುತ್ತಿದ್ದ.

ಹೀಗೆ ಗಲಾಟೆ, ಗೌಜು, ತಮಾಷೆಗಳಲ್ಲಿ ಸಾಗುವ ಬಸ್ಸಿನಲ್ಲಿ ಹುಡುಗಿಯರು ಮನೆಯಿಂದ ಮಾಡಿಸಿಕೊಂಡು ತಂದ ಕೋಡುಬಳೆ, ಚಕ್ಕುಲಿಗಳು ಎಲ್ಲರಿಗೂ ಹಂಚಲ್ಪಡುತ್ತಿದ್ದವು. ಬೆಳಗ್ಗೆ ಕಾಡಿದ್ದ ವಾಂತಿ ಪರ್ವ ಅಷ್ಟುಹೊತ್ತಿಗೆ ಮುಗಿದಿರುತ್ತಾದ್ದರಿಂದ ಎಲ್ಲರೂ ಚೆನ್ನಾಗಿ ತಿಂದು, ಕುಡಿಯುತ್ತಿದ್ದರು. ಕೊನೆಯಲ್ಲಿ ದಿನವಿಡೀ ನಮ್ಮೊಡನೆಯೇ ಸುತ್ತಿ, ಕುಣಿದು, ಕುಪ್ಪಳಿಸಿದ ಸೂರ್ಯನನ್ನು ಸಂಜೆಯ ಸಮುದ್ರ ತೀರದಲ್ಲಿ ಬೀಳ್ಕೊಟ್ಟು ಬಸ್ಸು ಹತ್ತಿದ ಮಕ್ಕಳೆಲ್ಲರಿಗೂ ಹೊಡೆದು ಹಾಕಿದಂತಹಾ ನಿದ್ರೆ. ನಿದ್ರೆಯ ಲೋಕದಲ್ಲೂ ಅನುರಣಿಸುತ್ತಿರುವ ರೊಂಯ್ಯೆನ್ನುವ ಬಸ್ಸಿನ ಸದ್ದಿಗೆ ತೂಗುತ್ತಾ ಸೀಟಿಗೊರಗಿದವರನ್ನು ಮೇಷ್ಟರು ‘ಊರ್ಬಂತು ಏಳ್ರಲೇ’ ಎಂದು ಎಚ್ಚರಗೊಳಿಸುವ ಹೊತ್ತಿಗೆ ಬಸ್ಸು ಮತ್ತದೇ ನಡುರಾತ್ರೆಯ ಶಾಲೆಯ ಬಯಲಿಗೆ ಬಂದು ಸ್ಥಗಿತವಾಗಿರುತ್ತಿತ್ತು. ಆಕಳಿಸುತ್ತಾ ಎದ್ದು ಇಳಿದು ಬಂದವರನ್ನು ಮತ್ತದೇ ಅಪ್ಪನ ಬೈಕು-ಸೈಕಲ್ಲುಗಳ ಹಿಂದಿನ ಸೀಟುಗಳು ಕೂರಿಸಿಕೊಂಡು ಕತ್ತಲಲ್ಲಿ ಅಂತರ್ಧಾನವಾಗುತ್ತಿದ್ದವು. ಮನೆ ತಲುಪಿ, ಅಮ್ಮ ಕಲಸಿಟ್ಟ ಅನ್ನ ಮಜ್ಜಿಗೆಯನ್ನು ಹೌದೋ ಅಲ್ಲವೋ ಎಂಬಂತೆ ತಿಂದು ಹಾಸಿಗೆಗೊರಗಿಕೊಂಡ ಮಕ್ಕಳನ್ನು ನಿದ್ರೆ ಆವರಿಸಿಕೊಳ್ಳುತ್ತಾ ಹೋದಂತೆ ತೆರೆದುಕೊಳ್ಳುವ ಕನಸಿನ ಲೋಕದಲ್ಲಿ ಆ ಬಸ್ಸು, ಸೂರ್ಯೋದಯ, ಆಟಿಕೆ, ಕಪ್ಪೆಚಿಪ್ಪುಗಳೆಲ್ಲಾ ಮತ್ತೆ ಜೀವಂತವಾಗಿ ಕಣ್ಮುಂದೆ ಬಂದಾಗ ನಮ್ಮಗಳ ಮುಖ ಹೊದಿಕೆಗಷ್ಟೇ ತಿಳಿಯುವಂತೆ ಅರಳುತ್ತಿತ್ತು. ಮತ್ತದೇ ಚೀಟಿಯನ್ನು ಬಸ್ಸಿನ ಕಿಟಕಿಯಿಂದ ತೂರಿಬಿಟ್ಟವರ ನೆನಪಿನ ಲೋಕದಿಂದ ಉದ್ಗಾರವೊಂದು ಹೊರಡುತ್ತದೆ:

“ನಮ್ಮ ಪ್ರವಾಸಕ್ಕೆ ಜಯವಾಗಲಿ!’

-ವಿನಾಯಕ ಅರಳಸುರಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x