ಮೈ ಡಿಯರ್, ಯಾಕಿಷ್ಟು ತೊಂದರೆ ಅನುಭವಿಸ್ತಾ ಇದೀಯಾ? ಕೂಲ್…… ನೀನು ಒಂದು ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿದಿಯಾ. ನಿನ್ನ ಕೆಳಗೆ ಸಾಕಷ್ಟು ಜನ ಕೆಲಸ ಮಾಡ್ತಿದಾರೆ. ಐದು ಬೆರಳೂ ಸಮಾ ಇರಲ್ಲ. ಹಾಗಂತ ಐದೂ ಬೆರಳಿಗೂ ನಿಯತ್ತಿರುವುದಿಲ್ಲ. ಒಂದೊಂದು ಬೆರಳಿಗೂ ಒಂದೊಂದು ಇಶಾರೆ. ಹಾಗೇನೇ ಎಲ್ರನ್ನೂ ಪ್ಲೀಸ್ ಮಾಡೋಕಾಗಲ್ಲ. ಎಲ್ರತ್ರಾನೂ ಪ್ರೀತಿ, ವಿಶ್ವಾಸದಿಂದ ಕೆಲಸ ತೆಗೀತೀನಿ ಅಂತಂದ್ರೆ ಸಾಧ್ಯಾನೂ ಆಗಲ್ಲ. ನಿನ್ನ ಮುಂದೆ ನಗ್ತಾ “ನೀವೇ ಗುರುಗಳೂ” ಅಂದವರು ನಿನ್ನಿಂದೆ “ಇವ್ನಂಥ ದರಿದ್ರದವನು ಎಲ್ಲೂ ಇಲ್ಲ” ಅಂತೆಲ್ಲಾ ಹೇಳೋದಿಲ್ಲಾಂತ ಏನ್ ಗ್ಯಾರಂಟಿ?. ಬಿಡಿ, ಆಫೀಸಂದ್ರೆ ಇವೆಲ್ಲಾ ಟೆನ್ಷನ್ ಇದ್ದಿದ್ದೇ. ಅದರ ಮಧ್ಯೆ ಮನೆ ಅಂತ ನಿಮಗೆ ನೆನಪಾಗೋದು ತುಸು ಕಷ್ಟವೇ…….
ಸ್ವಲ್ಪ ರಿಲ್ಯಾಕ್ಸ್ ಆಗೋಕೆ ಟೈಮಂತೂ ಬೇಕೇ ಬೇಕಲ್ಲಾ ರೀ? ಅದ್ಕೆ ಕೆಲಸ ಮುಗಿದ ಮೇಲೆ ಆತ್ಮೀಯ ಗೆಳೆಯರಿರ್ತಾರೆ. ಭೇಟಿ ಮಾಡಿ, ಹರಟೆ ಹೊಡಿರಿ, ನಗ್ರಿ, ಆ ನಗುವಿನ ಮಧ್ಯೆ ಸಮಯ ಹೋದದ್ದೇ ಗೊತ್ತಾಗಲ್ಲ, ಆಯ್ತಾ? ವಿಕೆಂಡಲ್ಲಿ, ಮಧ್ಯೆ ಮೂರು ದಿನದಲ್ಲಿ ಯಾರ್ದಾದ್ರೂ ಪ್ರೋಟೊಕಾಲ್ ಇದ್ದೇ ಇರುತ್ತೆ, ಡೆಲಿಗೇಟ್ಸ್ದು. ಅವರ ಜೊತೆ ಡಿನ್ನರ್ ಪಾರ್ಟಿ ಹೋಗ ಬಂದ್ರಂತೂ ಫುಲ್ ಖುಷ್. ಆ ಖುಷಿ ಮಧ್ಯೆ ನಿಂಗೊಬ್ಳು ಹೆಣ್ತಿ ಇದಾಳೆ ಅನ್ನೋದು ಕೂಡ ನೆನಪಾದ್ರೆ ಅಷ್ಟೇ ಸಾಕು. ನಾನು ನಿನ್ನ ಕಾಯ್ತಾ ಇದ್ರೇನು? ಊಟ ಮಾಡ್ದೆ ಇದ್ರೇನು? ಅದಕ್ಕೆಲ್ಲಾ ನೀನು ತಲೇನೇ ಕೆಡಿಸ್ಕೋಬೇಡ. ನಂಗೇನು ಬೇಕೇಳೂ? ಮನೆಯಿಂದ ಓಡಾಡೋಕೆ ಒಂದು ಆ್ಯಕ್ಟೀವಾ ಇದೆ. ಟ್ಯಾಂಕೂ ಫುಲ್ ಇರುತ್ತೆ. ಏನ್ ಬೇಕಂತ ಕೇಳಿದ್ರೂ ತಗೋಳ್ಳೋಕೆ ಖರ್ಚಿಗೇಂತ ದುಡ್ಡೂ ಕೊಟ್ಟಿರ್ತೀಯಾ. ನಾನೆಲ್ಲಾ ಮ್ಯಾನೇಜ್ ಮಾಡ್ತೀನಿ ಬಿಡು.
ಇದರ ಮಧ್ಯೆ ನಿಂಗೆ ಬೇರೆ ಬೇರೆ ಕಡೆಯಿಂದ ಪ್ರಾಜೆಕ್ಟ್ ಗಳು ಬರ್ತಾನೆ ಇರ್ತವೆ. ಗೈಡ್ ಮಾಡು. “How to improve the work efficiency” “How to manage the relationship” ಇನ್ನೂ ಏನೇನೋ ವಿಷಯಗಳ ಬಗ್ಗೆ ಡಿಬೇಟ್, ಸೆಮಿನಾರ್, ಮಾಮೂಲು. ನಿನ್ನಂಥ ಪ್ರಭಾವಿ ಮತ್ತು ಸಂಪನ್ಮೂಲ ವ್ಯಕ್ತಿ ಸಿಕ್ರೆ ಪಾಪ, ಯಾವ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಈ ಥರಾ ಪ್ರೋಗ್ರಾಂ ಆರ್ಗನೈಸ್ ಮಾಡಲ್ಲ ಹೇಳು?…… ಬಿಡು, ನನಗಿವೆಲ್ಲಾ ಅರ್ಥಾನೇ ಆಗಲ್ಲ. ಅರ್ಥ ಮಾಡ್ಕೋಳ್ಳೋಕೆ ನಾನೇನು ಕಂಪನಿ ಉದ್ಯೋಗೀನಾ? ಇಲ್ಲೇ ಮನೆಯಲ್ಲೇ ಚೂರು ಕುಸುರಿ ಮಾಡ್ಕೊಂಡು ಉಂಡು ತಿದ್ದಿದ್ದ ಮುಸುರೆ, ಬಟ್ಟೆ, ಅಷ್ಟು ದೊಡ್ಡ ಮನೇನೇ ಇದೆ. ಅಷ್ಟು ಕೆಲ್ಸಾ ಸಾಕಾಲ್ವಾ?. ಕೆಲ್ಸದವರು ಮಾಡಿದ್ದು, ನಂಗಿಷ್ಟ ಆಗಲ್ಲ. ಅದಿಕ್ಕೆ ನಾನು ಮುಂದಾಗ್ತೀನಿ, ನಿಂಗೊತ್ತಲ್ಲಾ? ನಮ್ಮನೇ ಕೆಲಸ ಮಾಡೋಕೆ, ಇಷ್ಟೇ ಹೊತ್ತು ಮಾಡ್ತೀನಿ, ಆದ್ರೆ ಮಾಡ್ತೀನಿ ಇಲ್ಲಾಂದ್ರೆ ನೋಡೋಣ ಅನ್ನೋಕೆ ನಂಗೇನೂ ಸಂಬಳ ಬೇರೆ ಕೊಡ್ತಾ ಇಲ್ಲ. ಮಾಡ್ಲಿಲ್ಲಾಂತ ಕಿತ್ತು ಹಾಕೋಕೆ ನಂಗ್ಯಾವ ಅಗ್ರಿಮೆಂಟಿದೆ, ಕಮಿಟ್ ಮೆಂಟ್ ಇದೆ ಹೇಳು?.. ಅದ್ಕೇ ಹೇಳಿದ್ದು, ನನ್ನ ಬಗ್ಗೆ ಚೂರೂ ಕಾಳಜಿ ಮಾಡ್ಲೇ ಬೇಡಿ. ನಿಮ್ ಪಾಡಿಗೆ ನೀವು, ನಿಮ್ ಕೆಲ್ಸ, ಕಂಪ್ನಿ, ಎಥಿಕ್ಸು, ಫಿಲಾಸಫಿ, ಪ್ರೋಟೋಕಾಲ್ ಕಡೆಗೆ ಗಮನ ಇರ್ಲಿ ಅಷ್ಟೇ.
ಅದೆಲ್ಲಿಂದ ಸಮಯ ಸೆಟ್ ಮಾಡ್ಕೊಳ್ತೀರಿ ನೀವು. ತುಂಬಾ ಆಶ್ಚರ್ಯವಾಗುತ್ತಪ್ಪಾ…. ಬೇರೆ ಬೇರೆ ಡಿಗ್ನಿಟಿ ಅಸೋಸಿಯೇಷನ್ನು, ಡಿಸ್ಕಷ್ಷನ್ನು, ಸಮಾನತೆ, ಹಕ್ಕು, ಜವಾಬ್ದಾರಿ, ಶಿಕ್ಷಣ, ಸಲಹೆ ಅಂತೆಲ್ಲಾ ವಿಪರೀತ ಹಚ್ಕೋತೀರಿ. ತುಂಬಾ ಚುರುಕು ಕಣ್ರೀ ನೀವು. ಯಾರಾದ್ರೂ ನನ್ನ ದೇವಸ್ಥಾನದಲ್ಲೋ, ಸೂಪರ್ ಬಜಾರಲ್ಲೋ ಕಂಡ್ರೆ, ನಿಮ್ಮ ಕೆಳಗಿನ ಉದ್ಯೋಗಸ್ಥ ಹೆಂಗಸರು ಎಷ್ಟು ಪ್ರೀತಿಯಿಂದ, ಗೌರವದಿಂದ ಮಾತಾಡ್ತಾರೆ ಗೊತ್ತಾ? ನಂಗಂತೂ ತುಂಬಾ ಹೆಮ್ಮೆ. ಆದರೆ, ನಾನು ಅವರೆದ್ರು ಯಾವಾತ್ತಾದ್ರೂ ಮನೇಲಿ ಒಬ್ಳೇ ಇರ್ತೀನಿ, ನೀವು ಬರೋದನ್ನೇ ಕಾಯ್ತಿರ್ತೀನಿ, ಬೋರಾಗಿರ್ತೀನಿ, ವಾರದಲ್ಲಿ ಸಿಗೋ ಒಂದು ಸಂಡೇನೂ ನೀವು ಕೈಗೆ ಸಿಗಲ್ಲ, ಅಷ್ಟು ಬಿಜಿಯಾಗಿರ್ತಿರಾ ಅಂತೆಲ್ಲಾ ಹೇಳೋದಿಕ್ಕೆ ಮನಸ್ಸೇ ಆಗೋದಿಲ್ಲ ರೀ, Honestly.
ಅದೂ ಬಿಡಿ, ನೀವು ಅಲ್ಲೆಲ್ಲೋ ಟ್ರೈನಿಂಗು ಅಂತ ಉದ್ಯೋಗಿಗಳ ಜೊತೆ ಅವರ ಕುಟುಂಬದವರೊಂದಿಗೆ ತುಂಬಾ ಕಾಳಜಿಯಿಂದ ಸೈಡ್ ಸೀಯಿಂಗ್ ಗೆ ಹೋಗಿ ಬಂದ್ಮೇಲೇ ನಿಮ್ಮ ಜೊತೆ ಬಂದಿದ್ದ ಉದ್ಯೋಗಸ್ಥ ಮಹಿಳೆ ಹೇಳ್ತಿದ್ಲು, “ಮೇಡಂ, ನಿಮ್ಮನೆಯವರಿಗೆ, ನಿಮ್ ಮಕ್ಕಳ ಎಜ್ಯುಕೇಷನ್ ಬಗ್ಗೆ ಕಾಳಜಿ ನೋಡಿ? ಮಕ್ಕಳನ್ನ ಶಾಲೆ ಬಿಡ್ಸಿ ಕರ್ಕೊಂಡ್ ಬರೋಕಾಗ್ಲಿಲ್ಲಂತೆ”.. ನಿಜ ತಾನೇ?. ಪಾಪ, ನೀವು ಬರೋದೇ ರಾತ್ರಿ ಲೇಟಾಗಿರುತ್ತೆ, ಮಕ್ಳು ಆಗ್ಲೇ ಮಲಗಿರ್ತಾವೆ, ಎಬ್ಬಿಸಿ ಡಿಸ್ಟರ್ಬ್ ಮಾಡಿ ಏನು ಎತ್ತ ಅಂತ ಕೇಳೋದೂ ನಿಮಗೆ ಆಗಬರಲ್ಲ. ಬಹಳ ಸೂಕ್ಷ್ಮ ರೀ ನೀವು… ನಾನೇ ಅವಕ್ಕೆ ಹೇಳಿ, ರಮಿಸಿ, ಊಟ ಮಾಡ್ಸಿ ಚುಕ್ಕು ತಟ್ಟಿ ಮಲಗಿಸಿಬಿಡ್ತೀನಿ.
ಮೊನ್ನೆ ಲೇಟಾಗಿ ಬಂದಿದ್ದೇ ತಡ, ಏನೋ ಹುಡ್ಕೋಕೆ ಶುರು ಮಾಡಿದ್ದು ನೋಡಿ ಗಾಬರಿಯಾಗಿದ್ದೆ. ಮೊಬೈಲ್ ಚಾರ್ಜಿಗೆ ಇಟ್ಟಿದ್ದು ನೋಡಿ ಸಮಾಧಾನವಾಯ್ತು. ನೆಟ್ ಆಫ್ ಮಾಡಿದ್ದಿಲ್ವೇನೋ, ಬೀಪ್ ಸೌಂಡ್ ಬರ್ತಾನೆ ಇತ್ತು. ನೀವು ಫ್ರೆಶ್ ಆಗೋದಿಕ್ಕೆ ಹೋಗಿದ್ರಿ, ನೋಡ್ತೀನಿ; ಅದೇನ್ರಿ, ನಿಮ್ ಫೇಸ್ಬುಕ್ಕು ಗೆಳೆಯರು….. ಐದು ಸಾವಿರ ಭರ್ತಿ. ವಾಟ್ಸಪ್ಪಲ್ಲಿ ಐವತ್ತಕ್ಕೂ ಹೆಚ್ಚು ಗ್ರೂಪ್ಗಳು, ಇಂಡಿವಿಜ್ಯುಯಲ್ ಚಾಟ್ಸ್. ಅರ್ಥವಾಗದ ಸಿಂಬಲ್ ಗಳು ಬೇರೆ. ಅದ್ಯಾರ್ರೀ ಕೋತಿ ಅಂತ ಹೆಸರು ಸೇವ್ ಮಾಡ್ಕೊಂಡಿದೀರಿ. ಆ ನಂಬರ್ ಗೆ ಒಂದು ಪದ್ಯ ಬರೆದು ಕೊನೆಗೆ ನಿಮ್ ಹೆಸರು ಹಾಕಿದ್ದು ನೋಡಿ ನಂಗಂತೂ ಖುಷಿ ತಡೆಯೋಗ್ಲಿಲ್ಲ… ಪದ್ಯ ಬರೆಯೋಕೆ ಯಾವಾಗ ಶುರು ಮಾಡಿದ್ರಿ ಡಿಯರ್? ಅದೇಗ್ರೀ ನೀವು ಒಟ್ಟೊಟ್ಟಾಗಿ ಕೆಲ್ಸ, ಕಂಪನಿ, ಟ್ರೈನಿಂಗು, ಟ್ರಿಪ್ಪು, ಡಿನ್ನರ್ ಪಾರ್ಟಿ, ಫ್ರೆಂಡ್ಸು, ಸೋಷಿಯಲ್ ಮೀಡಿಯಾ, ಟೆನ್ಷನ್ನು, ದುಡ್ಡು ಒಟ್ಟುಗೂಡ್ಸೋದು, ನಮಗೆ ಕೊರತೇನೇ ಆಗ್ದಂತೆ ಮನೆ, ಗಾಡಿ, ಖರೀದಿ, ಬೇಕರಿ ಐಟಮ್ಮು, ಎಲ್ಲಕ್ಕೂ ವ್ಯವಸ್ಥೆ ಮಾಡ್ತೀರಿ. ಭಾಳ ಬೇಜಾರುತ್ತೇ ರೀ, ನೀವು ಕಷ್ಟ ಪಡ್ತಾ ಇರೋದು ನೋಡಿದ್ರೆ. ಅದಕ್ಕೆ ಈ ಬಾರಿ ಮಕ್ಕಳ ಸ್ಕೂಲ್ ಬದ್ಲಿ ಮಾಡೋದಿಕ್ಕೆ ನೀವು ಬನ್ನಿ ಅಂತ ಕರ್ದು ತೊಂದರೆ ಕೊಡಲ್ಲ. ನಾನಿದೀನಲ್ಲ? ಡೋಂಟ್ ವರಿ ಡಿಯರ್…………..
ಅಯ್ಯೋ ನಾನೊಬ್ಳು ದಡ್ಡಿ. ಹೇಳೋದನ್ನೇ ಮರ್ತಿದ್ದೆ; “ನಿಮ್ ಕ್ರೆಡಿಟ್ ಕಾರ್ಡ್, ಡಿಬಿಟ್ ಕಾರ್ಡ್, ಮನೆ ತೆರಿಗೆ, ಎಲೆಕ್ಟ್ರಿಸಿಟಿ ಬಿಲ್, ಡಿಶ್ ಕನೆಕ್ಷನ್ ಬುಕ್ಕು, ವಾಷಿಂಗ್ ಮಷೀನ್ ವಾರಂಟಿ ಕಾರ್ಡ್, ಫ್ರಿಡ್ಜ್ ನ ಕೀ, ಒಂದಲ್ಲಾಂತ ಎಂಟ್ಹತ್ತು ವಾರ್ಡ್ ರೋಬ್ ಕೀಗಳ ನಂಬರ್, ಕಂಪ್ಯೂಟರ್ ಪಾಸ್ವರ್ಡ್, ಎಲ್ಲಾ ಒಂದು ಚೀಟೀಲಿ ಬರೆದು ನೀವು ಮೊಬೈಲ್ ಚಾರ್ಜಿಗೆ ಇಡ್ತೀರಲ್ಲಾ, ಟೀವಿ ಪಕ್ಕಾ, ಅಲ್ಲೇ ಇಟ್ಟಿದೀನಿ. ಹುಷಾರು ಡಿಯರ್, ನಿಮ್ಗೆ ಗ್ಯಾಸ್ ಹಚ್ಚೋಕೆ, ಅಡುಗೆ ಮಾಡೋಕೆ ಬರೋದಿಲ್ಲ, ನಂಗೊತ್ತು. ನೀವು ಯಾವಾಗ್ಲೂ ಹೋಗ್ತೀರ್ತೀರಲ್ಲಾ, ಡಿನ್ನರ್ ಪಾರ್ಟಿಗೆ? ಅಲ್ಲಿ ಬಿಟ್ಟು ಬೇರೆ ಕಡೆ ತಿನ್ನಬೇಡಿ, ನಿಮ್ ಆರೋಗ್ಯ ಪ್ರಕೃತಿ ನಂಗೆ ಚೆನ್ನಾಗ್ ಗೊತ್ತು. ಜಾಸ್ತಿ ಲಗೇಜೇ ಇಲ್ಲಾರೀ, ಮೂರೇ ಬ್ಯಾಗು, ಇಬ್ರು ಮಕ್ಳು, ನಾನೊಬ್ಳೇ….. ಹೊರಡ್ತಾ ಇದೀನಿ….. ತೌರ್ಮನೆಗೆ………BYE.
ಹೀಗೊಂದು ಕಾಲ್ ಮಾಡಿ ಥಟ್ಟಂತ ಹೆಣ್ತಿಯಾದೋಳು ಹೋರಡೋಕೆ ನಿರ್ಧಾರ ಮಾ….ಡಿ…..ದ…..ರೆ ಗಂಡನೆಂಬ ಬಿಲ್ಡಪ್ ಕೊಡೋ ಪ್ರಾಣಿ ಏನಾಗಬಹುದು ಎಂಬ ದಿಗಿಲಿನಿಂದಾದ್ರೂ ದಿನಚರಿಯೆಂದರೆ ಮನೆ, ಹೆಂಡತಿ, ಮಕ್ಕಳೂ ಹೌದೆಂದು ಅವರ ಕಡೆ ಹೆಚ್ಚು ವಾಲಿದರೆ ಅದೇ ಸಮಾಧಾನ…… ಹೌದಲ್ವಾ?