ಇಡ್ಲಿ ಬೇಯಲಿಟ್ಟು ಚಟ್ನಿಗಾಗಿ ಕಾಯಿ ತುರಿಯುತ್ತಲಿದ್ದೆ. ಪಕ್ಕದ ಮನೆಯ ಪಂಕಜಾಕ್ಷಿ ಅಕ್ಕಾ ಅಂತ ಕರೆದಳು. ಅದರ ಮೊದಲೇ ಅವಳ ಕುಮಾರ ಕಂಠೀರವ ಅಡುಗೆ ಮನೆಗೆ ನುಗ್ಗಿ ಎರಡು ಜ್ಯೂಸಿನ ಲೋಟ ನೆಲಕ್ಕೆಸೆದಾಗಿತ್ತು. ಪುಣ್ಯಕ್ಕೆ ಅದು ಅನ್ ಬ್ರೇಕೇಬಲ್ ಗಳಾದ್ದರಿಂದ ಬಿದ್ದ ಲೋಟ ಎತ್ತಿಟ್ಟು ಅವನ ಕೆಲಸಕ್ಕೆ ಬ್ರೇಕ್ ಹಾಕಿದೆ. ಅಕ್ಕಾ ಸ್ವಲ್ಪ ಹೊತ್ತು ಅವನನ್ನಿಲ್ಲಿ ಬಿಟ್ಟು ಹೋಗ್ತೀನಿ.. ಅಂದಳು ಅವಳು.. ನಾನು ಹೂಂ ಅನ್ನುವ ಮೊದಲೇ ಅವಳ ಕುಮಾರ ಕಂಠೀರವ ನನ್ನ ಮುಖ ನೋಡಿ ಕಿಟಾರನೆ ಕಿರುಚಿ ಅತ್ತು ಹೊರಗೋಡಿದ. ಕಾಲಿನ ಹೈ ಹೀಲ್ಡ್ ಚಪ್ಪಲಿ ತೆಗೆಯಲು ಉದಾಸೀನವಾಗಿ ಒಳಗೂ ಬರದೆ ಹೊರ ನಡೆದಿದ್ದ ಪಂಕಜಾಕ್ಷಿಯ ಮಾತೃ ಹೃದಯ ಚುಳ್ ಎಂದಿತು ಮಗನ ಅಳು ಕೇಳಿ.. ನಾನು ಹೊರಗೆ ಹೋಗಲು ಸಮಯವಿಲ್ಲದೇ ಒಳಗೇ ಇದ್ದೆ. ಅಕ್ಕಾ.. ಯಾಕೋ ಅಳ್ತಾನೆ.. ಕರ್ಕೊಂಡೇ ಹೋಗ್ತೀನಿ ಬಿಡಿ ಅಂದಳು.. ಅದಕ್ಕೂ ಹೂಂ ಅನ್ನಲು ನನಗೆ ಸಮಯವಿರಲಿಲ್ಲ.ಎಲ್ಲರಿಗೂ ತಿಂಡಿ ಕೊಟ್ಟು ಮಗನನ್ನು ಕಾಲೇಜಿಗೂ, ಇವರನ್ನು ಆಫೀಸಿಗೂ ಓಡಿಸಿ ಕೊಂಚ ಹೊತ್ತು ಪೇಪರ್ ಓದಿ ರಿಲ್ಯಾಕ್ಸ್ ಆಗೋಣ ಎಂದು ಪೇಪರ್ ತೆಗೆದೆ.
ಅದರೊಳಗಿನ ಸುದ್ದಿ ಓದಿದರೆ ರಿಲ್ಯಾಕ್ಸ್ ಆಗುವುದು ಬಿಟ್ಟು ಎದೆಯೊಡೆಯುವಂತೆ ಇತ್ತು. ನಾವು ಹೃದಯ ಹೀನರಾದ ಕಾರಣ ಇನ್ನೂ ಜೀವಂತ ಇದ್ದೀವಿ ಅಷ್ಟೇ.. ಅಲ್ಲಿ ಕೊಲೆ, ಇಲ್ಲಿ ದರೋಡೆ,ಮತ್ತೊಂದೆ ಕಡೆ ಬಿದ್ದ ಬಸ್ಸು, ಇನ್ನೊಂದು ಕಡೆ ಎದ್ದ ಸುನಾಮಿ, ಪ್ರವಾಹದಲ್ಲಿ ಮುಳುಗಿದ ನಗರ , ನೀರಿಲ್ಲದೆ ಸಾಯುತ್ತಿರುವವರ ಸಮರ .. ಒಂದೇ ಎರಡೇ..ಅಷ್ಟರಲ್ಲಿ ಬಾಗಿಲು ಬಡಿದ ಸದ್ದು. ನೇರವಾಗಿ ಹೋಗಿ ತೆರೆಯುವವಳಿದ್ದೆ. ಆದರೂ ಈಗಷ್ಟೇ ಪೇಪರಿನಲ್ಲಿ ನೀರು ಕೇಳುವ ನೆಪದಿಂದ ಕೊರಳಿನ ಸರ ಎಳೆದು ಕಳ್ಳತನ ಎಂದು ಓದಿದ್ದರಿಂದ ಯಾರು ಅಂದೆ. ಇದು ನಾನಮ್ಮಾ.. ನಿನ್ನ ಶೇಷ ಮಾವ ಅಂತ ಹೊರಗಿನಿಂದ ಸ್ವರ ಕೇಳಿತು. ಹೋ ಶೇಷ ಮಾವ ಎಂದರೆ ನಮ್ಮ ಅಮ್ಮನ ಮನೆಯ ಪಕ್ಕ ಇರುವವರು. ಇಲ್ಲೇ ನಮ್ಮನೆ ಹತ್ತಿರದಲ್ಲೇ ಅವರ ಎರಡನೇ ಮಗನ ಮನೆಯೂ ಇತ್ತು. ಅಲ್ಲಿಗೆ ಬಂದಾಗ ನಮ್ಮಲ್ಲಿಗೂ ಬಂದು ನನ್ನಮ್ಮನ ಮನೆಯಿಂದ ಕೊಟ್ಟ ಹಲಸಿನ ಹಣ್ಣಿನ ಹಲ್ವಾ, ಮಾವಿನ ಮಾಂಬುಳ, ಹಪ್ಪಳ ಹೀಗೆ ಏನಾದರೊಂದು ಹೊತ್ತು ತರುತ್ತಿದ್ದರು.
ಸಡಗರದಿಂದ ಬಾಗಿಲು ತೆಗೆದೆ. ಸಾಧಾರಣ ಗಾತ್ರದ ಹಲಸಿನ ಹಣ್ಣು ಪರಿಮಳ ಸೂಸುತ್ತಿತ್ತು. ತಂದು ಇಳಿಸಿದಾಗಲೇ ನನ್ನ ಬಾಯಲ್ಲಿ ನೀರೂರಲು ಪ್ರಾರಂಭಿಸಿತ್ತು. ಆದರೆ ಅವರ್ಯಾಕೋ ನನ್ನೆಡೆಗೆ ನೋಡಿದವರು ನೋಡಮ್ಮಾ ಈ ಹಲಸಿನ ಹಣ್ಣು ನನ್ನ ಮಗನ ಮನೆಗೆ ತಲುಪಿಸಿ ಬಿಡು. ನನಗೆ ಈಗ ಇನ್ನೊಂದು ಕಡೆ ಅವಸರದಲ್ಲಿ ಹೋಗಲಿದೆ. ನೀನು ಬಾಯಾರಿಕೆಗೆ ಮಾಡುವ ತೊಂದರೆ ತೆಗೋಳ್ಬೇಡ.ನಿನ್ನ ಅಮ್ಮನೋ ಅಪ್ಪನೋ ನಾಳೆ ಬಂದಾರು ನಾನು ಹೇಳ್ತೀನಿ.. ಈಗ ಬರ್ತೀನಮ್ಮಾ ಬಾಗಿಲು ಹಾಕಿಕೋ.. ಅಂತ ಅಂಗಳಕ್ಕಿಳಿದು ಹೊರಟೇ ಹೋದರು. ಛೇ.. ಇಷ್ಟು ಪರಿಮಳ ಭರಿತ ಹಲಸಿನ ಹಣ್ಣು ಇದು ನನ್ನ ಅಮ್ಮನ ಮನೆಯದ್ದೇ ಅಂತ ನನಗೆ ನಿಶ್ಚಿತವಾಗಿ ಗೊತ್ತಿತ್ತು. ಆದರೂ ಅವರ ಮಗನ ಮನೆಗೆ ಯಾಕೆ ಕೊಡಬೇಕು ॒ನಾಳೆ ನಮ್ಮ ಅಪ್ಪ ಯಾಕೆ ಬರ್ತಾರೋ ಏನೂ ಅರ್ಥವಾಗದೇ ಗೊಂದಲವಾಯ್ತು.
ಮತ್ತೆ ಪೇಪರಿನಲ್ಲಿ ತಲೆ ಹುದುಗಿಸಿದೆ. ಕರೆಗಂಟೆಯ ಸದ್ದು.. ಶೇಷ ಮಾವ ಮತ್ತೆ ಬಂದಿರಬಹುದಾ.. ಯಾಕೋ ಅವರ ಮುಖ ಒಂದು ರೀತಿ ಆದಂತಿತ್ತು..ಏನಾದರು ಚಿಂತೆಯೇನೋ ಪಾಪ .. ಪಕ್ಕನೆ ಬಾಗಿಲು ತೆಗೆದೆ. ಪರಿಚಿತರಿಬ್ಬರು ಯಜಮಾನರು ಆಫೀಸಿಗೆ ಹೋಗಿ ಆಯ್ತಾ .. ಮನೆ ಒಕ್ಕಲಿನ ಕಾಗದ ಕೊಡಲಿತ್ತು.. ಹಾಗೆ ಬಂದೆವು ಅಂದರು.. ಹೋ ಕುಳಿತುಕೊಳ್ಳಿ.. ಬಾಯಾರಿಕೆ ತರ್ತೀನಿ ಅಮ್ತ ಒಳಗೆ ಹೋದೆ. ನಾನು ಬರುವವರೆಗೆ ಇಬ್ಬರೂ ಗುಟ್ಟಿನಲ್ಲಿ ಏನೋ ಪಿಸಿಪಿಸಿ ಮಾತಾಡುತ್ತಾ ಕುಳಿತಿದ್ದರು. ನಾನು ಶರಬತ್ತಿನ ಲೋಟ ಇಡುವಾಗ ಅವರು ನನ್ನ ಕೈಯನ್ನೇ ನೋಡಿದಂತೆನಿಸಿತು. ಯಾಕೋ ಸ್ವಲ್ಪ ಗಾಬರಿಯಾಯಿತು. ಆದರೂ ಸುಮ್ಮನೆ ಇದ್ದೆ. ಅವರು ಅಷ್ಟೇ ಮತ್ತೊಮ್ಮೆ ನನ್ನ ಮುಖ ನೋಡಿ ’ಯಜಮಾನ್ರಿಗೆ ಹೇಳಿ ಅಕ್ಕಾ.. ಅವರಾದ್ರು ಬರಲಿ ಮನೆ ಒಕ್ಕಲಿಗೆ ಅಂತಂದು ಹೋದರು. ಇದೊಳ್ಳೆ ಕಥೆಯಾಯ್ತಲ್ಲ.. ನಾನು ಕಲ್ಲುಗುಂಡಿನಂತೆ ಎದುರೇ ನಿಂತಿದ್ದೇನೆ ಆದರೂ ನನ್ನನ್ನು ಬನ್ನಿ ಅಂತ ಕರಿಯುವುದು ಬಿಟ್ಟು ಅವರಾದ್ರು ಬರಲಿ ಅಂದ್ರೆ ಏನಾರ್ಥ.. ಇವರಿಗೂ ಹೇಳ್ಬೇಕು.. ಏನೇ ಆದ್ರೂ ಅವರ ಮನೆ ಒಕ್ಕಲಿಗೆ ಹೋಗ್ಬೇಡಿ ಅಂತ.. ಅಲ್ಲಾ ಮನೆಯೊಳಗೆ ಬಂದು ಆಮಂತ್ರಣ ಕೊಡುವಾಗ ಮನೆಯವರನ್ನೆಲ್ಲಾ ಬನ್ನಿ ಅನ್ನುವುದು ಬಿಟ್ಟು ಅವರಾದ್ರು ಬರಲಿ ಅಂತಾರಲ್ಲಾ.. ಬುದ್ಧಿ ಇದೆಯಾ ಇವರಿಗೆ ಅಂತ ಮನಸ್ಸಿನಲ್ಲೇ ಬಯ್ಕೊಂಡೆ.
ಇನ್ನು ಪೇಪರ್ ಓದುತ್ತಾ ಕುಳಿತರೆ ಮಧ್ಯಾಹ್ನದ ಅಡುಗೆ ಕೆಲಸ ಆದ ಹಾಗೆಯೇ ಅಂದುಕೊಂಡು ಅಡುಗೆ ಮನೆಗೆ ನುಗ್ಗಿದೆ. ತರಕಾರಿ ಕತ್ತರಿಸುವ ಮೊದಲು ತಿಂಡಿ ಡಬ್ಬದಲ್ಲಿದ್ದ ಎರಡು ಚಕ್ಕುಲಿಯನ್ನು, ಒಂದು ದೊಡ್ಡ ತುಂಡು ಮೈಸೂರ್ ಪಾಕನ್ನು ತಟ್ಟೆಗೆ ತುಂಬಿಕೊಂಡೆ. ಅಡುಗೆಯ ಮಧ್ಯ ಮಧ್ಯ ಪಾನೀಯಂ ಸಮರ್ಪಯಾಮಿ ಅಂತಾಗಬೇಕು ಅಂತ ದೊಡ್ಡ ಲೋಟದಲ್ಲಿ ತಣ್ನನೆಯ ಜ್ಯೂಸ್ ಕೂಡಾ ಮಾಡಿಟ್ಟುಕೊಂಡೆ. ಮತ್ತೆ ಬಾಗಿಲು ತಟ್ಟಿದ ಸದ್ದು. ನೋಡಿದರೆ ಎದುರು ಮನೆ ಪಾರ್ತತ್ತೆ. ತುಂಬಾ ಚುರುಕಿನ ಹೆಂಗಸಿವರು. ಎಂಟು ಗಂಟೆಗೆಲ್ಲಾ ಅವರ ಮನೆಯ ಅಡುಗೆ ಕೆಲಸ ಮುಗಿಸಿ ಹತ್ತಿರದ ಮನೆಗಳಿಗೆ ಭೇಟಿ ನೀಡ್ತಾರೆ. ಒಬ್ಬೊಬ್ಬರ ಮನೆಯ ಸುದ್ದಿಗಳನ್ನು ಸಂಗ್ರಹಿಸಿ ಇನ್ನೊಂದು ಮನೆಗೆ ಹಂಚುತ್ತಾ ಹೋಗುತ್ತಾರೆ. ಹೀಗೆ ನಮ್ಮ ಓಣಿಯ ಸುದ್ದಿಗಳು ಪೇಪರಿನ ಸಹಾಯವಿಲ್ಲದೇ ಕೆಲವೇ ಗಂಟೆಗಳ ಹೊತ್ತಲ್ಲಿ ಎಲ್ಲಾ ಮನೆಗಳಿಗೆ ಪ್ರಸಾರವಾಗುತ್ತಿತ್ತು. ನನ್ನ ಮುಖ ನೋಡಿದವರೇ ಸೀದಾ ಅಡುಗೆ ಮನೆಯವರೆಗೆ ಬಂದು ಏನು ಅಡಿಗೆ ಮಾಡ್ತಾ ಇದ್ದೀಯಾ ಅಂದರು. ಇವತ್ತು ಬದನೆ ಸಾಂಬಾರು, ತೊಂಡೆಕಾಯಿ ಗೊಜ್ಜು ಮಾಡೋಣ ಅಂತ ಇದ್ದೀನಿ ಪಾರ್ತತ್ತೆ ಅಂದೆ. ಅಯ್ಯೋ ಯಾಕಮ್ಮಾ ಅದೆಲ್ಲಾ ಮಾಡ್ತೀಯಾ.. ಅದು ಈಗ ನಿಂಗೆ ಅಷ್ಟು ಒಳ್ಳೇದಲ್ಲ.. ಎಲ್ಲಿ ನಾನು ಹೇಳಿದಂತೆ ಒಂದು ಗೊಡ್ಡು ಸಾರು ಮಾಡು.. ಮತ್ತ್ ಒಂದಿಷ್ಟು ಗಂಜಿ ಮಾಡ್ಕೋ ಸಾಕು.. ಅಯ್ಯೋ ಅಯ್ಯೋ ಇದೇನಿದು.. ತಟ್ಟೇಲಿ.. ಮೈಸೂರು ಪಾಕು, ಚಕ್ಕುಲಿ..ಈ ತಣ್ಣಗಿನ ಜ್ಯೂಸು.. ನೋಡಮ್ಮಾ ಒಂದು ನಾಲ್ಕು ದಿನ ಅಷ್ಟೇ ಬಾಯಿ ಕಟ್ಟಿದರೆ ಎಲ್ಲಾ ಸರಿ ಹೋಗುತ್ತೆ.. ಆಮೇಲೆ ಒಂದು ತುಂಡೇನೂ ನಾಲ್ಕು ತುಂಡು ತಿನ್ನು ನಿನ್ನನ್ಯಾರೂ ತಡೆಯೋದಿಲ್ಲ.. ಈಗ ಹೇಗೂ ಮಾಡಿಟ್ಟ ಜ್ಯೂಸ್ ಹಾಳಾಗುತ್ತಲ್ಲಮ್ಮಾ.. ಕೊಡಿಲ್ಲಿ ನಾನೇ ಅಷ್ಟು ಹೊಟ್ಟೆಗೆ ಎರೆದುಕೊಂಡು ಬಿಡ್ತೀನಿ.. ಡಬ್ಬದಿಂದ ಆಗಲೇ ತೆಗೆದಿಟ್ಟಿದ್ದೀಯಾ ಈ ಚಕ್ಕುಲಿ.. ಮತ್ತೆ ಪುನಃ ಯಾಕೆ ಡಬ್ಬಕ್ಕೆ ಹಾಕೋದು ಕೊಡಿಲ್ಲಿ.. ನಾನು ಮತ್ತೆ ಸಂಜೆ ತಿಂಡಿ ಹೊತ್ತಲ್ಲಿ ಬಾಯಾಡಿಸ್ತೀನಿ.. ಅಂತಂದು ಅದನ್ನು ಸೆರಗಿನೊಳಗೆ ಸುತ್ತಿ ಹಿಡಿದುಕೊಂಡು ಜ್ಯೂಸನ್ನು ಒಂದೇ ಸಲಕ್ಕೆ ಎತ್ತಿ ಗಂಟಲಿಗೆ ಎರೆದುಕೊಂಡು ಹೊರಟೇ ಬಿಟ್ಟರು.
ಅಲ್ಲಾ ಇವತ್ತೆಲ್ಲರಿಗೂ ಏನಾಗಿದೆ ಅಂತಲೇ ನನಗೆ ಅರ್ಥ ಆಗಿಲ್ಲ. ಬಂದವರೆಲ್ಲ ನನಗೆ ಉಪದೇಶ ಮಾಡಿ ಹೊರಡ್ತಾರಲ್ಲ ಅಂದುಕೊಂಡೆ. ಅಷ್ಟರಲ್ಲಿ ಕುಕ್ಕರ್ ವಿಸಿಲ್ ಹಾಕಿದ್ದರಿಂದ ಗಮನ ಅತ್ತ ಹೋಯಿತು. ಸ್ವಲ್ಪ ಹೊತ್ತಿನಲ್ಲಿ ಆಚೆ ಮನೆ ವಿಮಲ, ಈಚೆ ಮನೆ ನಳಿನ, ಎದುರು ಮನೆ ಕಾಮಾಕ್ಷಿ, ಮೇಲಿನ ಮನೆ ಮೀನಾಕ್ಷಿ.. ಪಕ್ಕದ ಪದುಮ.. ಹೀಗೆ ಒಬ್ಬರಾದ ಮೇಲೊಬ್ಬರು ಬಂದು ನನ್ನನ್ನು ನೋಡಿ ಹೇಗಿದ್ದೀರಾ ಅಂತ ಪ್ರಶ್ನೆ ಮಾಡಿ ತಮ್ಮೊಳಗೇ ಮಾತಾಡುತ್ತಾ ಹೋದರು.
ನನಗಂತೂ ಇವರೆಲ್ಲರ ನಾಟಕದಿಂದ ತಲೆ ಚಿಟ್ಟು ಹಿಡಿಯಿತು. ಎಂತ ಕರ್ಮ ಆಗಿದೆ ನನ್ನ ಮುಖಕ್ಕೆ.. ನೋಡಿದವರೆಲ್ಲಾ ಏನಾದ್ರು ಒಂದು ಹೇಳ್ತಾರಲ್ಲಾ ಅಂದುಕೊಂಡು ಕನ್ನಡಿಯ ಎದುರು ನಿಂತೆ. ನೋಡಿದವಳೇ ಕಿಟಾರನೆ ಕಿರುಚಿದೆ. ಮತ್ತೆ ಪಕ್ಕನೆ ನೆನಪಾಯಿತು.. ಕನ್ನಡಿಯಲ್ಲಿ ಕಂಡದ್ದು ನನ್ನದೇ ಮುಖ ಎಂದು.. ಮೊನ್ನೆ ಮನೆಗೆ ಗೆಳತಿಯೊಬ್ಬಳು ಕೊಟ್ಟ ಹೊಸ ಸಲಹೆಯನ್ನು ನಾನು ಪಾಲಿಸಿದ್ದರ ಆಪ್ಟರ್ ಇಫೆಕ್ಟ್ ಇದಾಗಿತ್ತು. ಮುಖಕ್ಕೆ ಅರಸಿನ ಮತ್ತು ಕೆನೆ ಎರಡನ್ನು ಬೆರೆಸಿ ಹಚ್ಚಿ ಒಂದರ್ಧ ಗಂಟೆ ಬಿಟ್ಟು ಮುಖ ತೊಳೆದುಕೊಳ್ಳಲು ಹೇಳಿದ್ದಳು. ಬೆಳಗ್ಗೆ ಬೇಗನೇ ಎದ್ದಿದ್ದೆ ಅಂತ ಮುಖ ಎಲ್ಲಾ ಸ್ವಚ್ಚಗೊಳಿಸಿ ಅದನ್ನು ಹಚ್ಚಿದ್ದೆ. ಮತ್ತೆ ತೊಳೆದುಕೊಳ್ಳಲು ಮರೆತೇ ಹೋಗಿತ್ತು. ಹಳದಿ ಬಣ್ಣದ ನನ್ನ ಮುಖ ನೋಡಿ ಮಗು ಹೆದರಿದ್ದರೆ, ಶೇಷ ಮಾವನಿಂದ ಹಿಡಿದು ಉಳಿದವರೆಲ್ಲಾ ನನಗೆ ಕಾಮಾಲೆ ರೋಗ ಬಂದು ಮುಖ ಎಲ್ಲಾ ಹಳದಿಯಾಗಿದೆ ಎಂದುಕೊಂಡು ಹೆದರಿದ್ದರು. ನನ್ನ ಮರೆವಿಗಿಷ್ಟು ಅಂದುಕೊಂಡು ಚೆನ್ನಾಗಿ ಸೋಪ್ ಹಾಕಿ ಮುಖ ತೊಳೆದೆ. ಮತ್ತೆ ಚಕ್ಕುಲಿ, ಮೈಸೂರ್ ಪಾಕ್ ತುಂಡನ್ನು ಬಾಯಿಗೆ ತಳ್ಳಿ, ದೊಡ್ಡದೊಂದು ಲೋಟ ಜ್ಯೂಸ್ ಹೀರಿ, ಬದನೆ ಸಾಂಬಾರ್, ತೊಂಡೆ ಗೊಜ್ಜು ಮಾಡಿಟ್ಟು ಡೈರೆಕ್ಟ್ ಆಗಿ ಪಾರ್ತತ್ತೆ ಮನೆಗೆ ನಡೆದೆ ಅವರ ಸುದ್ದಿ ಸಂಸ್ಥೆಗೆ ನನ್ನ ಮುಖ ತೋರಿಸಲು.. !!
*****
ಚೆನ್ನಾಗಿದೆ ಮೇಡಂ…. ಕಾಮಾಲೆ ರೋಗದ ಎಫೆಕ್ಟ್….
ಹಹಹ್ಹಹ್ಹ್ಹ ಸೂಪರ್ ಈ ಲೇಖನ
ಲೇಖನ ಚೆನ್ನಾಗಿದೆ ಬಹಳ ಇಷ್ಟವಾಯಿತು ಸರಣಿ ಸುಪರ್
ಚೆನ್ನಾಗಿದೆ….
🙂 hahaha. very nice
Thumbaaa Sogasaagidhe 🙂