"ನ್ಯಾಯಬೆಲೆ ಅಂಗಡಿ" ಎಂಬೀ ಮೂರಕ್ಷರದ ಬೋರ್ಡಿನತ್ತ ಗಮನವಹಿಸಿದರೆ, ನನ್ನ ಮನವು ಪುಲಕಿತಗೊಳ್ಳುತ್ತದೆ. ಚನ್ನಪಟ್ಟಣ ತಾಲೂಕು ಬಹುತೇಕವಾಗಿ ಮಳೆಯನ್ನಾಶ್ರಯಿಸಿದ, ಅಲ್ಲಲ್ಲಿ ಕೊಂಚ ಪಂಪ್ ಸೆಟ್ಟನ್ನಾಶ್ರಯಿಸಿದ ಬೇಸಾಯ ಪದ್ದತಿಯನ್ನು ಹೊಂದಿದೆ. ಇಂಥ ತಾಲೂಕಿನ ನಮ್ಮನ್ನೂ ಸೇರಿಸಿ ಎಷ್ಟೋ ಜನರಿಗೆ ಅನ್ನದ ಆಸರೆಯಾಗಿದ್ದು ಮಾತ್ರ ಈ ಸೊಸೈಟಿಯ ಅಕ್ಕಿಯೇ. ನಾನು ಚಿಕ್ಕವನಾಗಿದ್ದಾಗ ನನ್ನ ಅಪ್ಪ-ಅವ್ವನ ಜತೆಯಲ್ಲಿ ತಿಂಗಳಿಗೊಂದಾವರ್ತಿ ಬರುತ್ತಿದ್ದ ಈ ಅಕ್ಕಿಯನ್ನು ತರಲು ಡಿಪೋ ಅಥವಾ ಸೊಸೈಟಿಗೆ ಹೋಗುತ್ತಿದ್ದದ್ದು, ಅದನ್ನು ನಾನೇ ಬಹಳ ಉತ್ಸಾಹದಿಂದ ಹೊತ್ತು ತರುತ್ತಿದ್ದದ್ದು ಈಗಲೂ ಪುಳಕಗೊಳಿಸುವ ನೆನಪು! ಅದನ್ನು ತಂದು ಮನೆಯ ಹಜಾರದಲ್ಲಿ ಹರಡಿ, ಸೋಸುತ್ತಿದ್ದದ್ದು ನಮ್ಮ ಅಕ್ಕಂದಿರು; ಅಲ್ಲದೆ ಪಕ್ಕದ ಮನೆಯ ಹೆಂಗಳೆಯರು!! ತಂದ ಆ ಅಕ್ಕಿಯಲ್ಲಿ ಇರುತ್ತಿದ್ದದ್ದು ಬಹುಪಾಲು ಹುಳು,ಕಸಕಡ್ಡಿ, ಕರಿಮಣ್ಣು, ಕರಿಕಲ್ಲುಗಳೆ. ಅವನ್ನೆಲ್ಲಾ ಒಟ್ಟುಗೂಡಿಸಿದರೆ ಅದರ ತೂಕವೇ ತಂದ ಅಕ್ಕಿಯ ಕಾಲುಭಾಗದಷ್ಟಿರುತ್ತಿತ್ತು. ಅದನ್ನು ನಾನು ತೂಕ ಸರಿಯಿದೆಯಾ? ಎಂದು ಪರೀಕ್ಷಿಸುವ ಸಲುವಾಗಿ ನಮ್ಮದೇ ಆದ ಬಾಡಿಗೆ ಕೊಟ್ಟ ಅಂಗಡಿಗೆ ತಂದು ತೂಗಿಸಿದರೆ ಆ ಅಕ್ಕಿಯ ತೂಕದಲ್ಲಿ ಸರಿಸುಮಾರು ಕೊಡಬೇಕಾದ ತೂಕಕ್ಕೂ ಅಲ್ಲಿರುವ ಅಕ್ಕಿಗೂ ಸುಮಾರು 3 ಕೆ.ಜಿ.ಯಷ್ಟು ವ್ಯತ್ಯಾಸವಿರುತ್ತಿತ್ತು…ಆಗ ನಾನು 7ನೇ ಕ್ಲಾಸಿನಲ್ಲಿ ಓದುತ್ತಿದ್ದೆನಾದರೂ ನಮ್ಮ ತಾಯಿ-ತಂದೆ ಅದನ್ನು ಡಿಪೋದವನ ಬಳಿ ಪ್ರಶ್ನಿಸಲು ಬಿಡದೆ,"ಏಯ್!! ಹೋಗ್ಲಿ, ಬಿಡ್ಲಾ" ಅಂತಾ ಸುಮ್ಮನಾಗಿಸ್ತಿದ್ರು….. ಇದಾಗಿ, ಸರಿಸುಮಾರು 22 ವರ್ಷಗಳು ಕಳೆದಿದ್ದರೂ ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಅಕ್ಕಿ ಮತ್ತಿತರೆ ಪಡಿತರದ ಗುಣಮಟ್ಟದಲ್ಲಿ ಬದಲಾವಣೆಯಾಗಿಲ್ಲ. ಬಡವರು-ಬಲ್ಲಿದರೆನ್ನದೆ ಆ ಅಕ್ಕಿಯನ್ನೇ ತಿನ್ನುತ್ತಿದ್ದರು. ಈಗ ಕಾಲ ಬದಲಾಗಿ, ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಿರುವ ಕಾರಣಕ್ಕಾಗಿ ಬಲ್ಲಿದರು ಹೆಚ್ಚಿನ ಬೆಲೆ ತೆತ್ತು ಉತ್ತಮಗುಣಮಟ್ಟದ ಅಕ್ಕಿಯನ್ನು ಕೊಂಡು ಉಣ್ಣುತ್ತಿದ್ದಾರೆ. ಆದರೆ, ಬಡವರು ಯಾವುದೇ ಸುಧಾರಣೆ ಕಾಣದೆ ಅದೇ ಮುಗ್ಗಲು ಅಕ್ಕಿಯನ್ನೇ ಎರಡು ಮೂರು ಸಲ ತೊಳೆದು ಉಣ್ಣುತ್ತಾ ಕಾಲಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಹೆಸರಿಗೆ ಮಾತ್ರ "ನ್ಯಾಯಬೆಲೆ ಅಂಗಡಿ" ಎನಿಸಿರುವ ಈ ಡಿಪೋ ಅಥವಾ ಸೊಸೈಟಿಗಳದ್ದು ಮಾತ್ರ ಅನ್ಯಾಯವನ್ನೇ ಹಾಸಿಹೊದ್ದ ಕತೆಯಾಗಿದೆ.
-ಹನಿಯೂರು ಚಂದ್ರೇಗೌಡ.
ಚಿಕ್ಕ-ಚೊಕ್ಕ ಬರಹ….
ಚೆನ್ನಾಗಿ ಬರೆದಿದ್ದೀರಿ.