ಹರಿತವಾದ ಆಯುಧದಿಂದ ಹಣ್ಣನ್ನೂ ಕೊಯ್ಯಬಹುದು; ಜೀವವನ್ನೂ ತೆಗೆಯಬಹುದು ಎಂಬ ಮಾತು ಕ್ಲೀಷೆಯೆನಿಸಿದರೂ ಆಧುನಿಕ ಡಿಜಿಟಲ್ ಮಾಧ್ಯಮಗಳಿಗೆ ಇದಕ್ಕಿಂತ ಸೂಕ್ತವಾದ ವ್ಯಾಖ್ಯಾನ ಬೇರೊಂದಿರಲಾರದು! ನಮ್ಮೆಲ್ಲರ ಕೈಯಲ್ಲೂ ಮೊಬೈಲು; ಮನೆಯಲ್ಲಿ ಕಂಪ್ಯೂಟರು ಇರುವಾಗ ಯಾರಾದರೂ ಹೀಗೆ ಹೇಳಲೇಬೇಕು. ಅದರಲ್ಲೂ ಇಂಥವನ್ನು ಬಳಸಿಕೊಂಡು ಯುವಜನತೆ ದಾರಿ ತಪ್ಪುವುದಿರಲಿ ದಿಕ್ಕೇ ತಪ್ಪುತ್ತಿದೆ ಎಂದು ಬೈಯ್ಯುವವರ ಕೈಯಲ್ಲೂ ಇವೇ ಇವೆ!
ಆದರೆ ಇವನ್ನು ಸದ್ಬಳಕೆ ಮಾಡಿಕೊಂಡು ಬದುಕಿನ ಸಂವೇದನೆಯನ್ನು ಇನ್ನಷ್ಟು ನೇರ್ಪುಗೊಳಿಸಿಕೊಳ್ಳಬಹುದು; ದೈವತ್ವವನ್ನು ಧರಿಸಬಹುದು ಅಥವಾ ಅದರತ್ತ ಚಲಿಸಬಹುದು ಎಂದು ಆಲೋಚಿಸುವವರು ವಿರಳ. ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಸಾಲೊಂದನ್ನು ಇಲ್ಲಿ ಉಲ್ಲೇಖಿಸಬಹುದು: ‘ನೂರಾರು ಭಾವದ ಬಾವಿ, ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ; ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ, ನಮಗೆ ಬೇಕಾದದ್ದು ದಾಹ ಪರಿಹಾರ!’
ನಾನಿಲ್ಲಿ ಅಂಥ ಪಾಸಿಟಿವಿಟಿಯನ್ನು ಕುರಿತು ಒಂದಷ್ಟು ಪಟ್ಟಿ ಮಾಡ ಹೊರಟಿರುವೆ:
ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೋಧಿಸುವ ಅಧ್ಯಾಪಕರು ಕಂಪ್ಯೂಟರ್ ಮತ್ತು ಮೊಬೈಲ್ ಫೋನ್/ಟ್ಯಾಬ್‌ಗಳನ್ನು ಬಳಸಿಕೊಂಡು ತಮ್ಮ ಕಾಯಕವನ್ನು ಇನ್ನಷ್ಟು ಚೆಂದವಾಗಿ ಮತ್ತು ಈ ಕಾಲಕ್ಕನುಗುಣವಾಗಿ ಬೋಧಿಸಲು ಸಾಧ್ಯ.
ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನುಗಳು ಬಂದಾಗ ಇದ್ದ ಬೇಗುದಿ ಮತ್ತು ತಳ್ಳಂಕಗಳು ಈಗ ಇಲ್ಲ. ಅವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇರುವ ಪಾಠೋಪಕರಣ ಅಥವಾ ಕಲಿಕಾ ಸಲಕರಣ ಎಂಬುದೀಗ ಮನದಟ್ಟಾಗಿದೆ.
ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಕಲಿಯುವವರಾಗಲೀ ಅಥವಾ ಕಲಿಸುವವರಾಗಲೀ ಯಾವುದೇ ಮಡಿವಂತಿಕೆಯನ್ನು ಇಟ್ಟುಕೊಂಡರೆ ಈ ಕಾಲಕ್ಕೆ ನಾವು ಸಲ್ಲುವವರಾಗುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕನ್ನಡವನ್ನು ಬಳಸದೇ ಇದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ ಎಂದು ತೇಜಸ್ವಿಯವರು ಎಚ್ಚರಿಸಿ ಬಹಳವೇ ವರ್ಷಗಳಾಗುತ್ತಿವೆ. ಈ ಮಾತನ್ನಾಡುವಾಗ ಕನ್ನಡಕ್ಕೆ ಅಂಥದೇ ದುಃಸ್ಥಿತಿ ಎದುರಾಗಿತ್ತು. ಈಗ ಕಾಲ ಬದಲಾಗಿದೆ. ಕನ್ನಡವನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಇದು ತುಂಬ ಆಶಾದಾಯಕವಾಗಿಯೇ ಇದೆ. ಅಳಬೇಕಿಲ್ಲ ಅಥವಾ ಅಳಲು ಪಡಬೇಕಿಲ್ಲ!
ಇದು ಮಾಹಿತಿಯ ಯುಗವಾದರೂ ಇಂಥ ವಿಚಾರದಲ್ಲಿ ಮಾಹಿತಿಯ ಕೊರತೆಯಿಂದ ನಮ್ಮ ಕನ್ನಡವು ತಂತ್ರಜ್ಞಾನಕ್ಕೆ ಸಜ್ಜುಗೊಳ್ಳುತ್ತಿದೆಯೇ? ಎಂಬ ಕೀಳರಿಮೆಯನ್ನು ಹೊಂದಿದ್ದೇವಷ್ಟೇ.
ಕನ್ನಡ ನೆಲದಲ್ಲಿ ಮತ್ತು ಈ ನೆಲದಾಚೆ ಅಂದರೆ ವಿದೇಶದಲ್ಲಿ ಇರುವ ನಿಜಕನ್ನಡಿಗರು ಈ ದಿಕ್ಕಿನಲ್ಲಿ ತುಂಬ ಕೆಲಸ ಮಾಡುತ್ತಿದ್ದಾರೆ. ಸಂಘಸಂಸ್ಥೆಗಳು ಅಹರ್ನಿಶಿ ದುಡಿಯುತ್ತಿವೆ. ತಾವು ಕಲಿತ ತಂತ್ರಜ್ಞಾನದ ಮೂಲಕ ಕನ್ನಡದ ಸೇವೆ ಮಾಡುತ್ತಿದ್ದಾರೆ. ಅದನ್ನು ಅರಿಯಬೇಕಷ್ಟೇ.
ಡಿಜಿಟಲ್ ಮಾಧ್ಯಮ ಮತ್ತು ಅಂತರ್ಜಾಲದ ಜಗತ್ತಿನಲ್ಲಿ ಕನ್ನಡವು ರಾರಾಜಿಸುತ್ತಿದೆ. ಉದಾಹರಣೆಗೆ ನುಡಿ ತಂತ್ರಾಂಶ ೬.೦ ಆವೃತ್ತಿಯನ್ನು ನಮ್ಮ ಕಂಪ್ಯೂಟರಿನಲ್ಲಿ ಹೊಂದಿದ್ದರೆ ನೇರವಾಗಿ ನಾವು ಸಾಮಾಜಿಕ ಜಾಲತಾಣದಲ್ಲಿ ಮತ್ತು ಅಂತರ್ಜಾಲದಲ್ಲಿ ಕನ್ನಡದಲ್ಲೇ ಟೈಪಿಸಬಹುದು. ಗೂಗಲಿನ ಸಹಾಯದಿಂದ ಕನ್ನಡದಲ್ಲೇ ಟೈಪು ಮಾಡಿ ನಮಗೆ ಬೇಕಾದುದನ್ನು ಹುಡುಕಬಹುದು! ನೇರವಾಗಿ ಇಮೇಲ್ ಅಂದರೆ ಮಿಂಚಂಚೆ (ಮಿಂಚೆ)ಯಲ್ಲಿ ಕನ್ನಡವನ್ನು ಬಳಸಬಹುದು. ಜೊತೆಗೆ ನುಡಿ ತಂತ್ರಾಂಶ ೫.೦ ಆವೃತ್ತಿಯನ್ನೂ ಇಟ್ಟುಕೊಂಡಿರಬೇಕು. ಈ ನುಡಿ ೬.೦ ಆವೃತ್ತಿಯು ಅಂತರ್ಜಾಲದಲ್ಲಿ ಕನ್ನಡವನ್ನು ಬಳಸಲೆಂದೇ ಬಂದದ್ದು.
ಕನ್ನಡದ ಟೆಕ್ಕಿ ವಿ ಕೆ ಅರವಿಂದ್ ಅವರು ಆಸ್ಕಿ-ಯುನಿಕೋಡ್‌ಗೆ ಕನ್ನಡದ ಸಂಕ ಎಂಬ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿ ಕೊಟ್ಟಿದ್ದಾರೆ. ಗೂಗಲಿನಲ್ಲಿ ‘ಸಂಕ’ ಎಂದು ಟೈಪಿಸಿದರೆ ಸಾಕು! ಒಂದು ವೆಬ್‌ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನುಡಿಯಲ್ಲಿ ಟೈಪಿಸಿದ್ದನ್ನು ಯುನಿಕೋಡ್‌ಗೂ ಯುನಿಕೋಡ್‌ನಲ್ಲಿ ಟೈಪಿಸಿದ್ದನ್ನು ನುಡಿಗೂ ಅತ್ಯಂತ ಸರಳ ಮತ್ತು ಸುಲಲಿತವಾಗಿ ಬದಲಿಸಿಕೊಂಡು ಬಳಸಬಹುದು. ಈ ದಿಸೆಯಲ್ಲಿ ಕನ್ನಡ ಸ್ಲೇಟು ಮುಂಚೆ ಬಳಕೆಯಾಗುತ್ತಿತ್ತು! ಯುನಿಕೋಡ್ ಎಂಬುದೊಂದು ಜಾಗತಿಕ ಶಿಷ್ಟತೆ. ಇದನ್ನು ಆ್ಯಪ್ ಎಂದು ಹಲವು ಮಂದಿ ತಪ್ಪಾಗಿ ಗ್ರಹಿಸಿದ್ದಾರೆ. ನೇರವಾಗಿ ‘ನುಡಿ’ ಅಥವಾ ‘ಬರಹ’ದಲ್ಲಿ ಟೈಪಿಸಿ ಸಾಮಾಜಿಕ ಜಾಲತಾಣಗಳಿಗೋ ಅಂತರ್ಜಾಲಕ್ಕೋ ಇ-ಮೇಲಿಗೋ ಅಂಟಿಸಿದರೆ ಆಗ ಅದು ಕನ್ನಡ ಲಿಪಿಯಾಗುವುದಿಲ್ಲ! ಯುನಿಕೋಡ್‌ಗೆ ಬದಲಿಸಿ ಅಂಟಿಸಬೇಕು.
ಹಲವು ನೂರು ಸಾವಿರ ಕನ್ನಡ ಪುಸ್ತಕಗಳ ಡಿಜಿಟಲ್ ಆವೃತ್ತಿಗಳನ್ನು ಕಣಜ ಜಾಲತಾಣದಲ್ಲಿ ಕಾಣಬಹುದು. ಇದೊಂದು ಇ-ಗ್ರಂಥಾಲಯ. ಕೆಲವು ಖಾಸಗಿ ಸಂಸ್ಥೆಗಳು ಕನ್ನಡ ಪುಸ್ತಕಗಳ ಡಿಜಿಟಲ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿವೆ. ವಿಕಿಪಿಡಿಯಾ ಕನ್ನಡದಲ್ಲಿ ದೊರೆಯುತ್ತಿದೆ. ಸ್ವತಂತ್ರ ನಿಘಂಟು ‘ವಿಕ್ಷನರಿ’ ಎಂಬುದು ಕನ್ನಡವಾಗಿದೆ. ವಿಕಿಪಿಡಿಯಾ ಮತ್ತು ಕಣಜಗಳು ಸ್ವತಂತ್ರ ಮತ್ತು ಮುಕ್ತ ಜ್ಞಾನ ಭಂಡಾರವಾಗಿದೆ. ಅಂತರಜಾಲ ಕನ್ನಡ ಜ್ಞಾನಕೋಶವೇ ಆಗಿದೆ.
ಕನ್ನಡದಲ್ಲಿ ಬ್ಲಾಗ್ ಪತ್ರಿಕೋದ್ಯಮವು ಹುಲುಸಾಗಿ ಬೆಳೆದಿದೆ. ಉದಾಹರಣೆಗೆ ‘ಪಂಜು’ ಇಂಥ ಅಂತರ್ಜಾಲ ಪತ್ರಿಕೆ. ಅವಧಿ, ಋತುಮಾನ ಹೀಗೆ ಪಟ್ಟಿ ಬೆಳೆಯುತ್ತದೆ. ಸುಮಾರು ಆರು ಸಾವಿರ ಕನ್ನಡ ಬ್ಲಾಗಿಗರು ಇದ್ದಾರೆ! ಈ ನಿಟ್ಟಿನಲ್ಲಿ ವಿಶ್ವಕನ್ನಡ, ಸಂಪದ ಡಾಟ್ ನೆಟ್ ಅನ್ನೂ ಉದಾಹರಿಸಬಹುದು. ಈಗಂತೂ ಲೇಖಕರು, ಪತ್ರಕರ್ತರು, ಅಂಕಣಕಾರರು, ತಂತ್ರಜ್ಞರು, ಹವ್ಯಾಸಿ ಬರಹಗಾರರು, ವಿವಿಧ ವಿಷಯಗಳ ಪರಿಣತರು – ಹೀಗೆ ಅನೇಕರು ಬ್ಲಾಗ್ ಪ್ರಪಂಚದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡದ್ದೇ ಆದ ಸಾವಿರಾರು ಬ್ಲಾಗುಗಳು ಜಾಲಲೋಕದಲ್ಲಿ ಕನ್ನಡದ ಬೆಳವಣಿಗೆಗೆ ಒತ್ತು ನೀಡಿವೆ.
ಬ್ಲಾಗ್ ಎಂಬ ಹೆಸರು ವೆಬ್ ಲಾಗ್ ಎಂಬುದರ ಅಪಭ್ರಂಶ. ಇವನ್ನು ಜಾಲತಾಣಗಳೆಂದು ಕರೆಯುವುದಕ್ಕಿಂತ ಆನ್‌ಲೈನ್ ದಿನಚರಿ ಅಥವಾ ನಿಯಮಿತ-ನಿಗದಿತ ಬರೆಹ ಎನ್ನುವುದು ಸೂಕ್ತ. ನಾವು ಓದಿದ ಪುಸ್ತಕ, ಇಷ್ಟವಾಗದ ತಿಂಡಿ, ಇಷ್ಟವಾದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸ, ಪ್ರವಾಸ, ಸೃಜನಶೀಲತೆ- ಹೀಗೆ ನಮ್ಮ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಬ್ಲಾಗುಗಳಲ್ಲಿ ಹಂಚಿಕೊಳ್ಳಬಹುದಾಗಿದೆ. ಗೂಗಲಿಗೆ ಹೋಗಿ ಆ ಬ್ಲಾಗಿನ ಹೆಸರನ್ನು ಅಂದರೆ ಯುನಿಕೋಡ್ ಶಿಷ್ಟತೆಯಲ್ಲಿ ಟೈಪಿಸಿದರೆ ಸಾಕು; ತೆರೆದುಕೊಳ್ಳುತ್ತದೆ.
ಗೂಗಲ್ ಮೇಲ್ ಹೊಂದಿರುವ ಯಾರು ಬೇಕಾದರೂ ತಮ್ಮದೇ ಆದ ಸ್ವತಂತ್ರ ಮತ್ತು ಸ್ವಂತ ಬ್ಲಾಗ್‌ಅನ್ನು ಹೊಂದಬಹುದಾಗಿದೆ. ಇಂಥ ಬ್ಲಾಗುಗಳು ಸಾವಿರ ಸಾವಿರ ಇವೆ! ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬರೆಹಗಳನ್ನು ಕಳೆದ ಹದಿಮೂರು ವರುಷಗಳಿಂದ ‘ಇಜ್ಞಾನ ಡಾಟ್ ಕಾಮ್’ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ವೈಮಾಂತರಿಕ್ಷ ಸಂಶೋಧನಾ ಪ್ರಯೋಗಾಲಯವು ಕಳೆದ ನಲವತ್ತು ವರುಷಗಳಿಂದ ಪ್ರಕಟಿಸುತ್ತಿದ್ದ ‘ಕಣಾದ’ ಪತ್ರಿಕೆಯ ಆನ್‌ಲೈನ್ ಆವೃತ್ತಿ ನಮಗೀಗ ಲಭ್ಯವಾಗಿದೆ.
ರಾಜ್ಯ ಸರ್ಕಾರದ ಇ-ಆಡಳಿತ ಸೇವೆಗಳು ಮತ್ತು ಜಾಲತಾಣಗಳಲ್ಲಿ ಕನ್ನಡ ಭಾಷೆಯ ಸೌಲಭ್ಯ ಲಭ್ಯವಿದೆ. ಕಂಪ್ಯೂಟರನ್ನಾಗಲೀ ಮೊಬೈಲ್ ಫೋನನ್ನಾಗಲೀ ಸಂಪೂರ್ಣವಾಗಿ ಕನ್ನಡವನ್ನಾಗಿಸಿಕೊಳ್ಳಬಹುದು. ಸೆಟ್ಟಿಂಗ್‌ನಲ್ಲಿ ಭಾಷೆಯ ಆಯ್ಕೆ ಮಾಡಿಕೊಂಡರಾಯಿತು. ಪ್ರತಿಷ್ಠಿತ ಬ್ಯಾಂಕುಗಳು ತಮ್ಮ ಎಟಿಎಂಗಳಲ್ಲಿ ಕನ್ನಡದಲ್ಲಿ ವ್ಯವಹರಿಸಲು ಅವಕಾಶ ನೀಡಿವೆ.
ಗೂಗಲ್ ಸರ್ಚ್, ಗೂಗಲ್ ಮ್ಯಾಪ್ ಮತ್ತು ಗೂಗಲ್ ಅನುವಾದ ಸೌಲಭ್ಯಗಳು ಕನ್ನಡದಲ್ಲಿ ದೊರೆಯುತ್ತಿವೆ. ಗೂಗಲ್ ಟ್ರಾನ್ಸ್ಲೇಟ್‌ನಲ್ಲಿ ನೇರ ಅನುವಾದ ಮತ್ತು ಡಾಕ್ಯುಮೆಂಟ್ ಅನುವಾದಗಳೆಂಬ ಎರಡು ವಿಧಗಳಿವೆ. ನೂರಾರು ಪುಟಗಳನ್ನು ಯಾವುದೇ ಭಾಷೆಯಿಂದ ಯಾವುದೇ ಭಾಷೆಗೆ ಭಾಷಾಂತರಿಸಬಹುದು! ಹಾಗಂತ ಈ ಅನುವಾದವು ನೂರಕ್ಕೆ ನೂರು ಸೂಕ್ತವೆಂದೇನೂ ಅಲ್ಲ; ಹಾಗೆಂದು ತಳ್ಳಿ ಹಾಕುವಂತೆಯೂ ಇಲ್ಲ!!
ಮೊಬೈಲ್ ಫೋನಿನಲ್ಲಿ ಕನ್ನಡವನ್ನು ಬಳಸಬಹುದು. ಇದಕ್ಕಾಗಿ ಹಲವು ಆ್ಯಪ್‌ಗಳು ಇವೆ. ಜಸ್ಟ್ ಕನ್ನಡ ಕೀಬೋರ್ಡ್, ಸ್ವರಚಕ್ರ, ರೈಟ್ ಕನ್ನಡ, ವಾಗಕ್ಷರ ಮತ್ತು ಲಿಪಿಕಾರ್ ಆ್ಯಪ್‌ಗಳು ನಮ್ಮ ಸ್ಮಾರ್ಟ್ ಫೋನ್‌ಗಳನ್ನು ಕನ್ನಡವನ್ನಾಗಿಸಿವೆ. ವಾಗಕ್ಷರವು ಉಚಿತವಲ್ಲ; ಆದರೆ ಲಿಪಿಕಾರ್ ಸಂಪೂರ್ಣ ಉಚಿತ. ನಮ್ಮ ಧ್ವನಿಯನ್ನಾಲಿಸಿ ತಂತಾನೇ ಟೈಪಾಗುವ ಪವಾಡ ಇದರಲ್ಲಿದೆ. ಕೆಲವು ಅಚ್ಚಗನ್ನಡ ಪ್ರೇಮಿಗಳಂತೂ ಕಾಂಟಾಕ್ಟ್ಗಳನ್ನೂ ಕನ್ನಡದಲ್ಲೇ ಸೇವ್ ಮಾಡಿಕೊಂಡಿರುತ್ತಾರೆ! ಟೆಕ್ ಲೋಕದಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಜೋರಾಗಿಯೇ ನಡೆಯುತ್ತಿದೆ. ಯುವ ಟೆಕ್ಕಿಗಳಂತೂ ತಮ್ಮ ದೇಶ ಮತ್ತು ಭಾಷಾಭಿಮಾನವನ್ನು ಈ ಮೂಲಕ ಹೊರ ಹಾಕಿ ಕನ್ನಡ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯ ವಿಚಾರ.
ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಟ್ವಿಟರ್, ಯೂಟ್ಯೂಬ್ ಆ್ಯಪ್‌ಗಳಲ್ಲೂ ಕನ್ನಡವು ರಾರಾಜಿಸಿದೆ. ಆಡಿಯೋಗಿಂತಲೂ ವಿಡಿಯೋಗಳು ಹೆಚ್ಚು ಜನಪ್ರಿಯವೆಂದು ಕಂಡುಕೊಂಡ ಮೇಲಂತೂ ಕನ್ನಡ ಲಿಪಿಯಲ್ಲಿ ಬರೆಹ ಪ್ರತ್ಯಕ್ಷವಾಗುತ್ತಾ ಹಿಂಬದಿಯಲ್ಲಿ ದೃಶ್ಯವು ಬಿತ್ತರಗೊಳ್ಳುವ ಹೊಸ ಮಾರ್ಗ ಈಗ ಹೆಚ್ಚು ಪ್ರಸಿದ್ಧವಾಗುತ್ತಿದೆ. ಇಂಥ ನುಡಿನೇಯ್ಗೆ ಸರ್ಫಿಗರ ಗಮನ ಸೆಳೆಯುತ್ತಿದೆ.
ವರ್ಚುವಲ್ ಪುಸ್ತಕದ ಅಂಗಡಿಗಳು ಈಗ ಆನ್‌ಲೈನಿನಲ್ಲಿ ಕಾಣಿಸಿಕೊಳ್ಳುತ್ತಿವೆ. ಇ-ಬುಕ್‌ಗಳು ನಮಗೀಗ ಅಭ್ಯಾಸವಾಗುತ್ತಾ ಹೋಗುತ್ತಿವೆ. ಇವನ್ನು ಮೊಬೈಲ್ ಫೋನ್‌ಗಳಿಗಿಂತ ಟ್ಯಾಬ್‌ಗಳಲ್ಲಿ ಅಥವಾ ಇ-ಬುಕ್ ರೀಡರ್‌ಗಳ ಮೂಲಕ ನಿರಾಯಾಸವಾಗಿ ಓದಬಹುದಾಗಿದೆ. ಪಿಡಿಎಫ್ ಆವೃತ್ತಿಗಳಂತೂ ಈಗ ಸಾಕಷ್ಟು ಸಿಗುತ್ತಿವೆ. ಕನ್ನಡದ ಪ್ರಸಿದ್ಧ ಮತ್ತು ಖ್ಯಾತನಾಮರ ಕತೆ-ಕಾದಂಬರಿಗಳ ಪಿಡಿಎಫ್ ರೂಪ ನಮಗೆ ಲಭ್ಯವಾಗಿವೆ. ಉದಾಹರಣೆಗೆ ಬುಕ್ ಬ್ರಹ್ಮ ಎಂಬ ಜಾಲತಾಣ.
ನುಡಿಯನ್ನು ನಮಗೆ ಕೊಡ ಮಾಡಿದ ಕನ್ನಡ ಗಣಕ ಪರಿಷತ್ತು ಇದೀಗ ಒಂದು ಹೊಸ ಆವಿಷ್ಕಾರವನ್ನು ಮಾಡಿದೆ. ಇದರ ಹೆಸರು ‘ಅಕ್ಷರಜಾಣ.’ ಬರೆಹದ ಪ್ರತಿಯನ್ನು ಸ್ಕ್ಯಾನ್ ಮಾಡಿ ಈ ತಂತ್ರಾಂಶಕ್ಕೆ ಉಣಬಡಿಸಿದರೆ ತಿದ್ದಲು ಅವಕಾಶವಿರುವ ಅಕ್ಷರಗಳಾಗಿ ಮಾರ್ಪಡುತ್ತವೆ ಮಾತ್ರವಲ್ಲ, ಅಕ್ಷರ ಸ್ಖಾಲಿತ್ಯ ಮತ್ತು ವ್ಯಾಕರಣ ದೋಷಗಳನ್ನು ತಿದ್ದಲು ಸಹಕಾರಿಯಾಗುವಂಥ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಟೆಕ್ಸ್ಟ್ ಟು ಸ್ಪೀಚ್ ಮತ್ತು ಸ್ಪೀಚ್ ಟು ಟೆಕ್ಸ್ಟ್- ಹೀಗೆ ಎರಡೂ ನಮಗೆ ಬೇಕಾಗಿದೆ ಮತ್ತು ಇದೀಗ ಸಾಧ್ಯವಾಗಿದೆ. ಅಂಧರಿಗಾಗಿ ವಿಶೇಷವಾದ ತಂತ್ರಾಂಶಗಳು ಅಭಿವೃದ್ಧಿಯಾಗಿದ್ದು ಅಲ್ಲಿಯೂ ನಮ್ಮ ಕನ್ನಡವು ರಾರಾಜಿಸುತ್ತಿದೆ.
ಒಟ್ಟಾರೆ ಕನ್ನಡದ ಪ್ರೀತಿಯೊಂದಿಗೆ ಆಧುನಿಕ ತಂತ್ರಜ್ಞಾನವನ್ನು ನೋಡಿದಾಗ ನಮಗೆ ಖಂಡಿತ ನಿರಾಸೆಯಾಗುವುದಿಲ್ಲ; ಆದರೆ ಬಹಳ ಮಂದಿಗೆ ಇದು ಗೊತ್ತಾಗುತ್ತಿಲ್ಲ! ಸಿರಿಗನ್ನಡಂ ಮತ್ತು ಹಿರಿಗನ್ನಡಂ ಬಾಳ್ಗೆ; ತಂತ್ರಜ್ಞಾನದಲಿ ಕನ್ನಡಂ ನಿಲ್ಗೆ.
-ಡಾ. ಹೆಚ್ಚೆನ್ ಮಂಜುರಾಜ್
ಲೇಖನ ಬಹಳ ಅರ್ಥಪೂರ್ಣವಾಗಿದೆ ಮತ್ತು ಪ್ರಸ್ತುತ ದಿನಗಳ ಕನ್ನಡ ಕ್ಕೆ ಕನ್ನಡಿ ಆಗಿದೆ.
ಧನ್ಯವಾದಗಳು