ಡಾ.ಖಾದರ ಎನ್ನುವ ಆರೋಗ್ಯ ವಿಜ್ಞಾನದ ಸಂತ: ಗುಂಡುರಾವ್ ದೇಸಾಯಿ

•    ನೀವು ಕಕ್ಕಸಕ್ಕೆ ಹೋದಾಗ ನೀರು ಹಾಕಿದ ಕೂಡಲೆ ಕಕ್ಕಸು ಸ್ವಚ್ಛವಾದರೆ ನೀವು ಆರೋಗ್ಯವಂತರು, ಅದು ಅಲ್ಲೆ ಹಿಡಿದುಕೊಂಡರೆ ನಿಮಗೆ ಏನೋ ತೊಂದರೆ ಇದೆ ಎಂದೆ ಅರ್ಥ

•    ನಿಮ್ಮ ಮಕ್ಕಳಿಗೆ 15-20 ವರ್ಷಕ್ಕೆ ಶುಗರ್ ಗೆ ಬಲಿಯಾಗಿಸಬೇಕೆಂದಿದ್ದರೆ ನೂಡಲ್ಸ್ ತಿನ್ನಿಸಿ

•    ನಿಮ್ಮ ಮುಂದಿನ ಪೀಳಿಗೆ ಬೊಕ್ಕತಲೆಯವರಾಗಬೇಕಾದರೆ ನೀವು ಪ್ಲಾಸ್ಟಿಕ್ ಬಾಟಲ್ ನೀರನ್ನೆ ಕುಡಿಯಿರಿ

•    ನೂರು ಗ್ರಾಂ ಚಾಕಲೇಟ್ ನಲ್ಲಿ  4% ಜಿರಲೆ, 6% ಇಲಿ ಪಿಚ್ಚಿಕೆ ಇದ್ದೆ ಇರುತ್ತವೆ. ಹಾಗಾಗಿ ಆರಾಮಾಗಿ ನಿಮ್ಮ ಮಕ್ಕಳಿಗೆ ಚಾಕಲೇಟ್ ತಿನ್ನಿಸಿ

•    ಕೂದಲು ಉದುರುತ್ತಿದೆ ಎಂದರೆ ಆರೋಗ್ಯ ಸರಿಯಾಗಿಲ್ಲ ಎಂದೆ ಅರ್ಥ

•    ಜೀವನ ಎಂದರೆ ದುಡ್ಡು ಮಾತ್ರವಲ್ಲ ಆರೋಗ್ಯವಿಲ್ಲದ ದುಡ್ಡು ರದ್ದಿ ಪೇಪರ್‍ಗೆ ಸಮ

ಇವು ಡಾ.ಖಾದರ ಹೇಳುವ ಕೆಲ ಮಾತುಗಳ  ಝಲಕ್. ಸಮಾಜದ ಬಗ್ಗೆ, ಮಕ್ಕಳ ಬಗ್ಗೆ ಅಪಾರ ಕಳಕಳಿಯುಳ್ಳ ಡಾ.ಖಾದರ ನಿಜಕ್ಕೂ ಆರೋಗ್ಯ ವಿಜ್ಞಾನದ ಸಂತ. ಒಬ್ಬ ಅತ್ಯುತ್ತಮ ವಿಜ್ಞಾನ ಪ್ರಾಧ್ಯಪಕರಿಗಿಂತ ಹತ್ತು ಪಟ್ಟು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ  ಸಂವಹನ ಕೌಶಲ ಹೊಂದಿರುವ ಡಾ.ಖಾದರವರದು ಸ್ವಸ್ಥ ಭಾರತ ನಿರ್ಮಿಸಬೇಕೆನ್ನುವ ಕನಸು. ಪ್ರೀತಿಯಿಂದ ಕರೆದಲ್ಲೆಲ್ಲಿ ಹೋಗಿ ಬದಲಾದ ಜೀವನ ಶೈಲಿಯಿಂದಾಗಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಿಕೊಡುವುದಲ್ಲದೆ ತೃಣ ಧಾನ್ಯಗಳೆಂದೆ ಪರಿಗಣಿಸಲ್ಪಟ್ಟಿದ್ದ ಹೆಚ್ಚು ನಾರಿನಾಂಶ ಹೊಂದಿರುವ ದೇಶಿಯ ಧಾನ್ಯಗಳಾದ ನವಣೆ, ಸಾಮೆ, ಆರ್ಕ, ಕೊರಲು, ಬರಗು, ಊದಲು,  ಇವರುಗಳಿಗೆ ಸಿರಿಧಾನ್ಯಗಳೆಂದು ಹೆಸರಿಸಿ ಇವುಗಳ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಬಗೆ ಬಗ್ಗೆ ಮನೋಜ್ಞವಾಗಿ ತಿಳಿಸಿಕೊಡುತ್ತಾರೆ. ಅಲ್ಲದೆ ಗ್ಯಾಂಗರಿನ್ ಆಗಿ ಕಾಲು ಕಡಿಯಲೇಬೇಕಾದ ಪರಿಸ್ಥಿತಿ ಇದ್ದ ಜನರಿಗೆ ಈ ಧಾನ್ಯಗಳನ್ನು ತಿನ್ನಿಸುವುದರ ಮೂಲಕವೇ ಅನೇಕ ಬದುಕಿಗೆ ಜೀವ ನೀಡಿದ್ದಾರೆ. 

ಇಂತಹ ಡಾ.ಖಾದರ ಅವರ ಬದುಕೆ ರೋಚಕ. ಮಾತೃಭಾಷೆ ತೆಲುಗು. ಹುಟ್ಟಿದ್ದು ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ. ಕಾಲೇಜು ಹಂತದ ಶಿಕ್ಷಣ ಆಂಧ್ರದಲ್ಲೆ. ಆದರೆ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ಪೂರೈಸಿದ್ದು ಕರ್ನಾಟಕದಲ್ಲಿ. ಜೀವ ರಾಸಾಯನಿಕ ವಿಜ್ಞಾನದಲ್ಲಿ ಸ್ಟಿರಾಯಿಡಗಳ ಅಧ್ಯಯನವನ್ನು ಮಾಡಿ ಡಾಕ್ಟರೇಟ್ ಪಡೆದ ಮೇಲೆ ನಂತರ ಎರಡು ವರ್ಷ ಮೈಸೂರಿನಲ್ಲಿ ಸಿರಿಧಾನ್ಯಗಳ ಮೇಲೆ ಸಂಶೋಧನೆ ನಡೆಸಿದರು. ತದನಂತರದಲ್ಲಿ ಐದು ವರ್ಷಗಳ ಕಾಲ ಅಮೇರಿಕಾದ ‘ಡುಪಾಂಟ್’ ಎನ್ನುವ ಬಹುರಾಷ್ಟ್ರೀಯ ಕಂಪನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಕ ರಾಸಾಯನಿಕಗಳ, ಸೂಕ್ಷ್ಮಾಣು ಜೀವಿಗಳ ಸಂಶೋಧನೆ ನಡೆಸಿದರು. ನಂತರದ ಐದುವರ್ಷ ಪೋರ್ಟ ಲ್ಯಾಂಡ ನಲ್ಲಿ ಪರ್ಯಾವರಣ ಶಾಸ್ತ್ರದಲ್ಲಿ ಸೂಕ್ಷ್ಮಾಣು ಜೀವಿಗಳು, ಮರಗಟ್ಟು ವಿಧಾನಗಳು, ಸೂಕ್ಷ್ಮಜೀವಿಗಳ ನಿರ್ವಹಣೆ, ಪರ್ಯಾವರಣ ವಿಷರಾಸಾಯನಿಕ ಪದಾರ್ಥಗಳ ನಿಷ್ಕ್ರೀಯಗೊಳಿಸುವಿಕೆಯ ಅಧ್ಯಯನದಲ್ಲಿ, ಸಂಶೋಧನೆಯಲ್ಲಿ ತೊಡಗಿದರು. ಪಡೆದ ಜ್ಞಾನ ತಿಳುವಳಿಕೆಯನ್ನು ಮಾನವಕಲ್ಯಾಣಕ್ಕಾಗಿ ಹಂಚಬೇಕೆನ್ನುವ ಆಸೆ ಅವರಿಗೆ ಆದರೆ ಕಂಡುಕೊಂಡ ತಂತ್ರಜ್ಞಾನವನ್ನ ಲಾಭಕ್ಕಾಗಿ ಯೋಚಿಸುವ ಕಂಪನಿಗಳ ವ್ಯಾಪಾರಿಕರಣ ಗುಣ ಖಾದರವರಿಗೆ ಸರಿಬರಲಿಲ್ಲ.  ಅಮೇರಿಕಾದ ಅಪಾರ ಸಂಪತ್ತು, ಅಂತಸ್ತು, ಇರುವ ವೃತ್ತಿ ತೃಪ್ತಿ ಸಿಗದೆ ಒದ್ದಾಡಿತು. ಜೀವಮಾರಕ ರಾಸಾಯನಿಕ ಸಂಶೋಧನೆಗಳಿಂದ ಮನದಾಳದಲ್ಲಿನ ಮಾನವೀಯ ಮೌಲ್ಯ ಅವರ ಮನಸ್ಸನ್ನು ಕದಡಿತು. ಅಮೇರಿಕಾದ ವೈಭವಯುತ ಜೀವನವನ್ನು, ಕೋಟಿಗಟ್ಟಲೇ ಆದಾಯ ತರುವ ಕೆಲಸಕ್ಕೆ ತೀಲಾಂಜಲಿ ನೀಡಿ ಮರಳಿ ದೇಶಕ್ಕೆ ಬಂದು ಮೈಸೂರಿನ ತೊಣಚಿಕೊಪ್ಪಲಿನಲ್ಲಿ ನೆಲೆಸಿದರು. ಅಲ್ಲಿ ಸಂಶೋಧಕರಾಗಿ ‘ಕಾಡುಕೃಷಿ ವಿಧಾನದ’ ಬಗ್ಗೆ ಸಂಪೂರ್ಣ ಅಧ್ಯಯನವನ್ನು ಕೈಗೊಂಡು ಅದರಲ್ಲಿ ಯಶಸ್ವಿಯಾಗಿ ತಮ್ಮದೆ ಕನಸಿನಲ್ಲಿ ಸಾವಿರಾರು ರೈತರಿಗೆ ಮಹತ್ವ ತಿಳಿಸಿಕೊಟ್ಟು ಜಾಗೃತಿ ಮೂಡಿಸಿದರು. ಇವರ ಕನಸಿಗೆ ಸ್ಪಂದಿಸಿದ ಅನೇಕ ರೈತರು ಅವರ ಸಲಹೆಗಳನ್ನು ಸ್ವೀಕರಿಸಿ ಅದರಂತೆ ಉಳಿಮೆ ಮಾಡಿದರು. ನೆಮ್ಮದಿಯ ಬದುಕನ್ನು ಕಂಡುಕೊಂಡರು. ತಮ್ಮ ಅನುಭವಗಳನ್ನು ಕನಸನ್ನು ಸಾಕಾರಗೊಳಿಸಲು ಕಬಿನಿ ಜಲಾಶಯದ ಬಲಪಕ್ಕದ ದಿಬ್ಬದ ಮೇಲೆ 8 ಎಕರೆ ಬಂಜರು ಭೂಮಿಯನ್ನು ಖರೀದಿಸಿಕೊಂಡು ಕಾಡು ಕೃಷಿಯಲ್ಲಿ ನಿರತರಾಗಿದ್ದಾರೆ. 1995ರ ವರೆಗೆ ಭೂಮಿ,  ಕೃಷಿ ಎಂಬುದೆ ಗೊತ್ತಿರದ ಅವರು ಪರಿಣಿತ ಕೃಷಿಕರಾಗಿ ಆ ಹೊಲದಲ್ಲಿ ಧಾನ್ಯ, ಕಾಳು, ತರಕಾರಿ, ಸೊಪ್ಪು ಸೇರಿದಂತೆ 38 ಬೆಳೆಗಳನ್ನು ಬೆಳೆಯುತ್ತಿದ್ದಾರೆ.  ನಾಲ್ಕು ವರ್ಷದಲ್ಲಿ ಅವರ ಜ್ಞಾನ, ಸಂಶೋಧನೆ ಮತ್ತು ಅನುಭವಗಳು 8 ಎಕರೆ ಜಮೀನಿನಲ್ಲಿ ಸುಸ್ಥಿರ ಕೃಷಿಯ ರೂಪದಲ್ಲಿ ನಳನಳಿಸುತ್ತಿವೆ.

‘ಹೋಮಿಯೋಪತಿ ವೈದ್ಯ’ ವಿಜ್ಞಾನವನ್ನು ಸ್ವಯಂ ಅಧ್ಯಯನ ಮಾಡಿ  ಪಾಂಡಿತ್ಯ ಪಡೆದಿರುವ ಖಾದರರವರು ಕಡಿಮೆ ವೆಚ್ಚದಲ್ಲಿ ಬಹುತೇಕ ಕಾಯಿಲೆಗಳನ್ನು ಗುಣಪಡಿಸುವ ಹೋಮಿಯೋಪತಿ ವೈದ್ಯರಾಗಿ ಜನಪ್ರಿಯರಾಗಿದ್ದಾರೆ.  ತಮ್ಮ ಬಳಿ ಬರುವ ರೋಗಿಗಳಿಗೆ ಔಷಧಿಗಳ ಬದಲಾಗಿ ಸಿರಿಧಾನ್ಯಗಳನ್ನು ತಿನ್ನಿಸಿ ಅವಗಳಿಂದಲೇ ವಾಸಿಮಾಡಿಸುವ ಪರಿಣಿತಿಯುಳ್ಳವರು. ಜಗತ್ತಿನ ಆರೋಗ್ಯದ ಸಮಸ್ಯಗಳಿಗೆ ಸಿರಿಧಾನ್ಯಗಳೆ ಮದ್ದು ಎಂದು ನಂಬಿರುವ ಖಾದರವರು ಆ ಧಾನ್ಯಗಳನ್ನು ಮಾರುವ ವ್ಯಾಪಾರಿಗಳಲ್ಲ ಆದರೆ ಆ ಬೆಳೆಯನ್ನು ಎಲ್ಲಾ ಕಡೆ ಬೆಳಸಿ ಬಳಕೆ ಹೆಚ್ಚು ಮಾಡಿ ಆರೋಗ್ಯ ಪಸರಿಸುವ ಕನಸು ಹೊತ್ತವರು. ಬಿಳಿ ಅನ್ನ, ಬಿಳಿ ಸಕ್ಕರೆ, ಬಿಳಿ ಮೈದಾ, ಬಿಳಿ ಗೋದಿ ಹಿಟ್ಟನ್ನು ಸಂಪೂರ್ಣ ತ್ಯೆಜಿಸಿ ಎನ್ನುವ ಅವರು ಅದರಿಂದಾಗುವ ಪರಿಣಾಮಗಳನ್ನು ಅವರಿಂದಲೇ ಕೇಳಬೇಕು. ಖಾದರವರ ಸ್ವದೇಶಿ ಆಂದೋಲನದ, ಯಾವುದೆ ಉದ್ಯಮದ ಹಿಂದಿನ ಪ್ರಚಾರಕರಲ್ಲ. ಅವರ ಮಾತಿನಲ್ಲಿ ಕಳಕಳಿ ಇದೆ. ಭೊಗಕ್ಕೆ ಬಿದ್ದು ಆರೋಗ್ಯ ಕೆಡಿಸಿಕೊಳ್ಳುತ್ತಿರುವ ಜನರ ಬಗ್ಗೆ, ಮಕ್ಕಳಿಗೆ ಏನೆಲ್ಲಾ ತಿನ್ನಿಸಿ ಅವರ ಬದುಕನ್ನು ನರಕ ಮಾಡುತ್ತಿರುವ ಬಗ್ಗೆ ಕನಿಕರ ಇದೆ.  ಮಾಂಸವನ್ನು ಕುಚ್ಚುವ ಮೂಲಕ ತಯಾರಿಸುವ ಡಾಲ್ಡಾ ಬಗ್ಗೆ, ಚಾಕಲೇಟ ಹಿಂದಿನ ಸತ್ಯದ ಬಗ್ಗೆ, ಜಂಕ್ ಫುಡ್ ನಲ್ಲಿರುವ ವಿಷದ ಬಗ್ಗೆ, ಮೈದಾದ ಹಿಂದಿನ ಕುತಂತ್ರತೆಯ ಬಗ್ಗೆ ಅವರ ಮಾತಿನಲ್ಲೆ ಕೇಳಬೇಕು. ಮೈದಾದಲ್ಲಿ ಬೆರೆಸುವ ‘ಅಲೋಕ್ಸಾನ್’ ಎನ್ನುವ ರಾಸಾಯನಿಕ ಪಾಂಕ್ರಿಯಾಸನ ಬಿಟಾ ಕೋಶಗಳನ್ನು ನಾಶಪಡಿಸಿ ಇನಸುಲಿನ್ ಉತ್ಪಾದನಾ ಸಾಮಥ್ರ್ಯ ಕಡಿಮೆಗೊಳಿಸಿ ಮಧುಮೇಹವನ್ನು ತಂದೊಡ್ಡುವ ಅಪಾಯದ ಬಗ್ಗೆ ನೀಡುವ ವಿವರಣೆ ಎಂತಹ ನಿರಕ್ಷಕುಕ್ಷಿಗೂ  ತಿಳಿಯದೆ ಇರದು. ಬೇಕರಿಗಳಲ್ಲಿ ಎಣ್ಣೆಯ ಬದಲು ಬಳಸುವ ‘ಲಿಕ್ವೀಡ್ ಫಾರಾಫೀನ್’ ಎನ್ನುವುದು ಪೆಟ್ರೋಲಿನಿಂದ ಡಿಸೆಲ್, ಪೆಟ್ರೋಲ್, ಸೀಮೆ ಎಣ್ಣೆ ತೆಗೆದ ನಂತರದ ಉಳಿಕೆಯಿಂದ ಉತ್ಪಾದಿಸಲಾಗುವ ವಾಸನೆ ಇಲ್ಲದ ಸೀಮೆಎಣ್ಣೆ ಎಂದು ಕರೆಯಲ್ಪಡುವ  ಈ ಎಣ್ಣೆಯಿಂದಲೇ ಪದಾರ್ಥಗಳನ್ನು ಹುರಿಯಲಾಗುತ್ತದೆ. ಇದರಲ್ಲಿ ಹುರಿದ ಪದಾರ್ಥಗಳು ಬೇಗ ಹಾಳಾಗುವುದಿಲ್ಲ ಇದು ದೇಹ ತೂಕ ಹೆಚ್ಚಿಸಿ ಕೋಶಗಳ ನಾಶಕ್ಕ ದಾರಿ ಮಾಡುತ್ತವೆ ಎನ್ನುವ ಅವರು ಇಂತಹ ಬೇಕರಿ ಐಟಮ್‍ಗಳು ನಮಗೆ ಬೇಕಾ ಎಂದು ಪ್ರಶ್ನೆ ಹಾಕುತ್ತಾರೆ. ವಿದೇಶದಲ್ಲಿ ಆರೇಳು ವರ್ಷಕ್ಕೆ ಋತುಮತಿಯಾಗುತ್ತಿದ್ದಾರೆ. ನಮ್ಮಲ್ಲೂ ಎಂಟು ಹತ್ತು ವರ್ಷಕ್ಕೆ ಆಗುವ ಪ್ರಕರಣಗಳು ಕಣ್ಣಮುಂದಿವೆ. ಅದಕ್ಕೆ ಕಾರಣ ನಾವು ಬಳಸುವ ಪಾಕೇಟು ಹಾಲಿನ ಪ್ರಭಾವ ಎನ್ನುವ ಅವರು ಫಾರ್ಮ್ ಹಸುವಿಗೆ ಹೆಚ್ಚಿನ ಹಾಲಿನ ಉತ್ಪಾದಿಸಲು ನೀಡುವ ಚೋದಕ  ರಾಸಾಯನಿಕಗಳೆ ಮಕ್ಕಳಿಗೆ ಅಪತ್ತು ತಂದಿಡುತ್ತಿವೆ ಎಂದು ವಿಶ್ಲೇಷಿಸುತ್ತಾರೆ. ಅದರ ಬದಲು ಊರಲ್ಲಿ ಸಿಗುವ ಹಾಲನ್ನೆ ಬಳಸಿ,  ಅನ್ನ ಎಷ್ಟು ವಿಷಯಮಯವಾಗಿದೆ ಎಂದು ಗೊತ್ತೆ ಇದೆ.

ಆದರೂ ಬಿಡಲೊಲ್ಲೆವು. ಸಕ್ಕರೆ ನಮಗೆ ಅವಶ್ಯಕತೆಯೇ ಇಲ್ಲ, ನಿಸರ್ಗದ ಹಣ್ಣುಗಳೆ ಸಾಕು ಕೊರತೆ ನೀಗಿಸಲು ಆದರೂ ಹಿಡಿ ಹಿಡಿ ತಿನ್ನುತ್ತೇವೆ. ಚಾಕುಲೇಟ ತಯಾರಿಕೆಲ್ಲಿ  ಬಂದು ಬೀಳುವ ಜೀರಲೆಗಳ ಬಗ್ಗೆ ತಯಾರಿಕ ಕಂಪನಿಗಳೆ ಒಪ್ಪಿಕೊಂಡಿವೆ, ಆದರೂ ತಿನ್ನುತ್ತೇವೆ. ತಿನ್ನುವುದು ಸಮಸ್ಯೆಯಲ್ಲ ಯಾರ ಮನೆಗಳಲ್ಲಿ ಜಿರಲೆಗಳು ಇರುತ್ತವೆಯೋ ಆ ಮನೆಯವರು ಅಸ್ತಮಾ, ನಗಡಿ, ಕೆಮ್ಮ ಮೊದಲಾದ ಜ್ವರಗಳಿಂದ ಬಳಲುತ್ತಿರುತ್ತಾರೆ. ಅಂತಹ ವೈರಾಣುಗಳನ್ನು ಆ ಜಿರಲೆಗಳು ಹೊರಹಾಕುತ್ತವೆ. ಅಂತಹ ಜಿರಲೆಗಳು, ಇಲಿ ಇಕ್ಕಿ ಇರುವ ಚಾಕಲೇಟು ನಮ್ಮ ದೇಹದ ಮೇಲೆ ಪ್ರಭಾವ ಬೀರದೆ ಇರದೇ? ಇವುಗಳ ಬದಲು ಮಕ್ಕಳ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕರಿಎಳ್ಳಿನ ಉಂಡಿ ಮಕ್ಕಳಿಗೆ ತಿನ್ನಿಸಿ, ರಕ್ತ ಹೀನತೆಯನ್ನು ನಿವಾರಿಸಲು ಕಪ್ಪು ಬೆಲ್ಲ ಸೇವಿಸಿ, ಹಲ್ಲಿನ ಸ್ವಚ್ಛತೆ ಹಾಗೂ ಗಟ್ಟಿತನಕ್ಕೆ ಪೇಸ್ಟ್‍ಗಳನ್ನು ದೂರಿಕರಿಸಿ ಇದ್ದಿಲು ವಾರಕ್ಕೊಮ್ಮೆ ಬೇವಿನಕಡ್ಡಿ ಬಳಸಿ, ಬ್ಯಾಕ್ಟೀಯಾ ವಿರುದ್ಧ ಹೋರಾಡಬಲ್ಲ  ಆಂಟಿ ಆಕ್ಸಿಡೆಂಟ್, ಆಂಟಿ ಇನ್‍ಫ್ಲಮೇಟರಿ, ಆಂಟಿ ಏಜಿಂಗ್ ಗುಣ ಶೇಂಗಾದ ಗುಲಾಬಿ ಪೊದರಿನಲ್ಲಿದೆ. ಅದನ್ನು ಹುರಿದು ಉಫ್ ಅಂತ ಊದದೆ ಮಕ್ಕಳಿಗೆ ತಿನ್ನಿಸಿ, ಹಣ್ಣು ತರಕಾರಿ ಸೊಪ್ಪುಗಳನ್ನು ಸೇವಿಸಿ ಸಾಧ್ಯವಾದರೆ ನಿಮ್ಮ ಮನೆಯಂಗಳದಲ್ಲೆ ಬೆಳೆದು ಸೇವಿಸಿ ಎಂದು ಹೇಳುತ್ತಾರೆ. ಹೆಚ್ಚು ನಾರಿನಾಂಶವಿರುವ ಸಿರಿಧಾನ್ಯಗಳ ಸೇವೆನೆಯಿಂದ ಮಲಬದ್ಧತೆ ಸಮಸ್ಯೆ ತಪ್ಪಿಸಬಹುದು, ಮಧುಮೇಹ, ಬೊಜ್ಜು, ಕ್ಯಾನ್ಸರ್ ಮೊದಲಾದ ರೋಗಗಳಿಂದ ದೂರವಿರಬಹುದು ಎನ್ನುವ ಖಾದರವರು ಬೇಗನೇ ರಕ್ತಗತವಾಗುವ ಆಹಾರಕ್ಕಿಂತ ತಡವಾಗಿ ರಕ್ತತವಾಗುವ ಆಹಾರವೇ ಮೇಲು. ರಾಗಿ ತಿಂದರೆ  ರಕ್ತಕ್ಕೆ ಸೇರಲು ನಾಲ್ಕುವರೆ ಗಂಟೆ ಬೇಕು, ಸಿರಿಧಾನ್ಯ  ತಿಂದರೆ ಆರು ಗಂಟೆ ಬೇಕು, ಸಜ್ಜಿ, ಜೋಳ ತಿಂದರೆ ಮೂರು ಗಂಟೆ ಬೇಕು ಅದೇ ಅಕ್ಕಿ ತಿಂದರೆ ನಲವತೈದು ನಿಮಿಷ ಸಾಕು ಹಾಗೆ ಸಿಹಿಯಾದ ಯಾವುದೆ ಪದಾರ್ಥ ತಿಂದರೆ ಕೆಲವೇ ಕ್ಷಣ ಸಾಕು ಎನ್ನುವ ಅವರು ಮಧುಮೇಹ ಆಹ್ವಾನಕ್ಕೆ ಯಾವ ಆಹಾರ ಉತ್ತಮ ನೀವೆ ಗ್ರಹಿಸಿ ಎಂದು ಚಿಂತನೆಗೆ ಹಚ್ಚುತ್ತಾರೆ.  ಇಂದು ದೇಶದಲ್ಲಿ ಆಹಾರ ಪದ್ದತಿ ಬಗ್ಗೆ ದೊಡ್ಡ ಪರವಿರೋಧ ಚರ್ಚೆಗಳೆ ನಡಿದಿವೆ. ಜವಾರಿ ಅನ್ನುವುದೆ ವಿರಳವಾಗಿವೆ. ಹೆಚ್ಚಿನ ಮಾಂಸಕ್ಕಾಗಿ ಸ್ಟೀರಾಯಿಡಗಳನ್ನು ನೀಡಿ ಫಾರ್ಮಗಳಲ್ಲಿ ಕೋಳಿ, ದನ, ಹಂದಿಗಳನ್ನು ಬೆಳಸಲಾಗುತ್ತದೆ. ಫಾರ್ಮಗಳಲ್ಲಿನ ಆ ಪ್ರಾಣಿಗಳ ದೇಹ ಕೊಬ್ಬಿರುತ್ತದೆ ಹೊರತು ಅವುಗಳ ಸಧೃಡ ಮೂಳೆಗಳಲ್ಲ. ಅವು ಒಂದೊಂದು ಹೆಜ್ಜೆಯಿಡಲು ಹೆಣಗಾಡುತ್ತಿರುತ್ತವೆ. ಅಂತಹ ಸ್ಟಿರಾಯಿಡ್‍ಯುಕ್ತ ಮಾಂಸ ನಮ್ಮ ದೇಹಕ್ಕೆ ಯೋಗ್ಯವೆ? ಎನ್ನುವ ಪ್ರಶ್ನೆ ಅವರದು.

ಹೀಗೆ ಹತ್ತು ಹಲವು ಸ್ವಾರಸ್ಯಕರ ವಿಷಯಗಳನ್ನು ಬಿತ್ತುವ ಡಾ.ಖಾದರವರ ಮಾತುಗಳ ಹಿಂದೆ ತುಡಿತ ಇದೆ. ಜನರನ್ನು ಆರೋಗ್ಯದ ಮುಖ್ಯವಾಹಿನಿಯಲ್ಲಿ ತರಬೇಕೆನ್ನುವ ಬಲವಾದ ಹಂಬಲವಿದೆ. ಇತ್ತೀಚಿಗೆ ನಮ್ಮೂರು ಮಸ್ಕಿಯಲ್ಲಿ ಏರ್ಪಡಿಸಿದ್ದ ಅವರ ಕಾರ್ಯಕ್ರಮಕ್ಕೆ ಬಂದಿದ್ದ ಚಿದಾನಂದಪ್ಪ ಹೊಸಹಳ್ಳಿ ಎನ್ನುವ ಕೃಷಿಕ ಖಾದರರವರ ಬಗ್ಗೆ ಪತ್ರಿಕೆಯಲ್ಲಿ ಓದಿ ಪ್ರಭಾವಿತರಾಗಿ  ಸಿರಿಧಾನ್ಯಗಳನ್ನು ಬೆಳದವರು. ಅವರನ್ನು ಕಾಣಲೆಂದೆ ಕಾರ್ಯಕ್ರಮಕ್ಕೆ ಬಂದವರು. ಖಾದರವರು ‘ನೀವು ಈ ಧಾನ್ಯಗಳನ್ನು ನೋಡಿದವರು, ಬೆಳೆದವರು, ತಿಂದವರಿದ್ದಿರಾ?’ ಎಂದು ಕಾರ್ಯಕ್ರಮದ ಒಂದು ಹಂತದಲ್ಲಿ ಕೇಳಿದಾಗ ‘ನಾನು ಬೆಳದೀನಿ’ ಎಂದಾಗ, ಏನನ್ನು ವಿಚಾರಿಸದೆ ಆ ಬೆಳೆ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂದಾಗ ಆ ಕೃಷಿಕ ಹೇಳಿದ ಮಾತಿದು. ‘ನವಣೆ ನಮ್ಮ ಭಾಗದ ಒಂದು ಕಾಲದ ಪ್ರಮುಖ ಬೆಳೆ. ಅದರ ರುಚಿಯೇ ಬೇರೆ. ಆದರೆ ಈ ಐದು ಧಾನ್ಯಗಳನ್ನು ಬಿತ್ತಿದ ಮೇಲೆ  ನಾನು ಬದುಕಿನಲ್ಲೆ ಕಾಣದ ಬಗೆಬಗೆಯ ಪಕ್ಷಿಗಳು ಹೊಲದಲ್ಲಿ ಬಂದು ಗೂಡುಕಟ್ಟಿ ಇಲ್ಲಿಯ ಧಾನ್ಯಗಳನ್ನು ತಿಂದು ಸಂತಾನ ಬೆಳಸಿಕೊಂಡು ಹೋದವು, ಧಾನ್ಯ ಕಟಾವು ಮಾಡಿದಾಗ ಮಣ್ಣು ಸುಹಾಸನ ಭರಿತವಾಗಿತ್ತು, ರಾಶಿ ಮಾಡಿದ ಮೇಲೆ ಬಿದ್ದ ಕಾಳುಗಳನ್ನು ಇರುವೆ ಇನ್ನಿತರ ಕ್ರಿಮಿಗಳು ಹೊತ್ತುಕೊಂಡು ಹೋಗುತಿದ್ವು. ನಾನು ಭತ್ತ ಬೆಳೆಯುತ್ತೇನೆ. ಅಲ್ಲಿ ಒಂದು ಪಕ್ಷಿಗಳು ಬಂದು ಕೂಡುವುದಿಲ್ಲ. ತಿನ್ನುವುದು ದೂರ ಉಳಿತು. ಅದಕ್ಕೆ ಹಾಕುವ ವಿಷ ಗೊತ್ತಿದ್ದೆ ಇದೆ. ಅಂತಹ ಆಹಾರ ನಾವು ತಿನ್ನುತ್ತೇವೆ, ಬುದ್ಧಿ ಇರದ ಪ್ರಾಣಿಗಳಿಗೆ ಯಾವುದನ್ನು ತಿನ್ನಬೇಕು, ಬಿಡಬೇಕು ಎಂಬ ಅರಿವಿದೆ.’ ಎಂದು. ಅವರ ಮಾತಿನ ಗ್ರಹಿಕೆಗೆ  ಖಾದರವರೆ ತಲೆದೂಗಿ ‘ನಾನು ಎರಡು ತಾಸು ಮಾಡಿದ ಭಾಷಣದ ಸಾರವನ್ನು ಎರಡು ನಿಮಿಷದಲ್ಲೇ ಹೇಳಿ ಬೆರಗು ಮೂಡಿಸಿದಿರಿ’ ಎಂದು ಅಭಿಮಾನದಿಂದ ಸನ್ಮಾನಿಸಿದರು.   

ಹೀಗೆ ವಿಜ್ಞಾನಿ ವೈದ್ಯ, ಕೃಷಿಕರಾಗಿರುವ ಡಾ.ಖಾದರವರು ಸ್ನೇಹಜೀವಿಗಳು, ಎಲ್ಲರನ್ನು ಗೌರವಿಸುವ ಸಹೃದಯರು. ಅಷ್ಟೆ ಅಲ್ಲ ಕನ್ನಡಿಗರಲ್ಲದಿದ್ದರೂ ಕನ್ನಡಿಗರಿಗಿಂತಲೂ ವಿಷಯವನ್ನು ಅರ್ಥವತ್ತಾಗಿ ಮನಮುಟ್ಟುವಂತೆ  ತಿಳಿಸಬಲ್ಲ ವಾಗ್ಮಿಗಳು. ಜೊತೆಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದ ಮಹನೀಯರು. ವಾರದಲ್ಲಿ ಐದು ದಿನಗಳ ಕಾಲ ಹೋಮೊಯೋಪತಿ ವೈದ್ಯರಾಗಿ ಮೈಸೂರಿನ ತಮ್ಮ ‘ಸುಖಸದನ’ ಎಂಬ ಹೆಸರಿನ ಮನೆಯಲ್ಲಿ ಮೊದಲೆ ಅಪಾಯಿಂಟ್‍ಮೆಂಟ್ ಪಡೆದು ಬಂದವರಿಗೆ ಚಿಕಿತ್ಸೆ ನೀಡುವ  ಇವರ ಸಂದರ್ಶನಕ್ಕೆ ಮೂರು ತಿಂಗಳು ಕಾಯಬೇಕು. ಉಳಿದ ಎರಡು ದಿನಗಳ ಕಾಲ ಹೆಚ್.ಡಿ ಕೋಟೆ ತಾಲೂಕಿನ ಬಿದರಹಳ್ಳಿ ಬಳಿಯ ತಮ್ಮ ಜಮೀನಿನ ಪುಟ್ಟ ಮನೆಯಲ್ಲಿ ಅಲ್ಲಿನ ನೂರಾರು ಬುಡಕಟ್ಟು ಮತ್ತು ಕುಗ್ರಾಮಗಳ ಜನರ ಕಾಯಿಲೆಗೆ ಉಚಿತ ಪರೀಕ್ಷೆ ಮಾಡಿ ಔಷಧಿಗಳನ್ನು ಉಚಿತವಾಗಿ ನೀಡುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ. ಯಾವುದೆ ಪ್ರತಿಫಲಾಪೇಕ್ಷಯಿಲ್ಲದೆ ಆರೋಗ್ಯದ ಅವರಿವರೆನ್ನದೆ ಎಲ್ಲರಿಗೂ ‘ನಾವೇನು ತಿನ್ನುತ್ತಿದ್ದೇವೆ – ಆರೋಗ್ಯವಂತ ಜೀವನಕ್ಕೆ ನಾವೇನು ತಿನ್ನಬೇಕು’ ಎನ್ನುವ  ಬಗ್ಗೆ ಜಾಗೃತಿ ಮೂಡಿಸುತ್ತಿರುವ ಈ ಆರೋಗ್ಯ ವಿಜ್ಞಾನ ಸಂತ ಆಪೇಕ್ಷಿಸುವುದು ಸಿರಿಧಾನ್ಯಗಳನ್ನು ಬೆಳೆಸಿ, ಬಳಸಿ- ಆಸ್ಪತ್ರಯಿಂದ ದೂರವಿರಿ,  ನೀವು ತಿಳಿದುಕೊಂಡದನ್ನು ನಾಲ್ಕು ಜನಕ್ಕೆ ತಿಳಿಸಿ, ಮಕ್ಕಳಿಗೆ ಹಂಚಿ ಎನ್ನುವ ಸ್ವಾರ್ಥ ಅಷ್ಟೆ. ಯಾರಾರಿಗೂ ಎಂತೆಂತಹೋ ಪ್ರಶಸ್ತಿ ನೀಡಿ ಗೌರವಿಸುವ ಸರಕಾರ ಇಂತಹ ಮಹನೀಯರನ್ನು ಗುರುತಿಸಲು, ಇವರ ವಿಚಾರಗಳನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡಿದೆ. ಅದು ನಾಡಿಗೆ ನಮಗೆ ನಷ್ಟ. ಇನ್ನಾದರೂ ಅವರನ್ನು ಗುರುತಿಸುವಂತಾಗಲಿ ಎನ್ನುವ ಆಶಯ ನಮ್ಮದು.

ಡಾ:ಖಾದರ ಮೈಸೂರ 

ಮೊ.ಸಂ:9448561472


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Anantha Ramesh
8 years ago

ಇತ್ತೀಚೆ ಖಾದರರ ವಿಡಿಯೊ ತುಣುಕೊಂದನ್ನು ವಾಟ್ಸಪ್ ಅಲ್ಲಿ ನೋಡಿದ್ದೆ. ಮನುಷ್ಯ ಕಳಕಳಿಯ ಇಂಥವರ ಸಂದೇಶ ಎಲ್ಲರನ್ನೂ ಮುಟ್ಟಬೇಕಾಗಿದೆ. ಆ ದಿಶೆಯಲ್ಲಿ ಈ ಲೇಖನ ನಿಜಕ್ಕೂ ಸ್ತುಸ್ತ್ಯಾರ್ಹ.

ಗುಂಡುರಾವ್ ದೇಸಾಯಿ
ಗುಂಡುರಾವ್ ದೇಸಾಯಿ
8 years ago
Reply to  Anantha Ramesh

ಧನ್ಯವಾದಗಳು ಸರ್

Ramapriya
Ramapriya
8 years ago

How to contact the Doctor?, can you please let me know. I reside in chennai.

Thanks.

 

vinod pawar
vinod pawar
7 years ago

pls alet me know the next programme of Bharathada Ondu Amulayada Ratna Dr Khader in bangalore . truley he has a service moto to human kind today .

B V Shreedhara
7 years ago

Dr.Khadar is doing best service.I am his follower.

5
0
Would love your thoughts, please comment.x
()
x