ಡಾರ್ಕ್‍ವೆಬ್: ಸಾಮಾನ್ಯರಿಗೆ ನಿಲುಕದ ನಕ್ಷತ್ರ: ಚಾರು ಮಂಜುರಾಜ್

ನಮಗಿಷ್ಟವಾದುದನ್ನು ಆನ್‍ಲೈನ್‍ನಲ್ಲಿ ತರಿಸಿಕೊಳ್ಳುವಾಗಲೋ ಸ್ನೇಹಿತರಿಗಾಗಿ ಉಡುಗೊರೆಗಳನ್ನು ಕೊಳ್ಳುವಾಗಲೋ ಗೂಗಲ್‍ನಲ್ಲಿ ಕಾಣುವ ಪುಟಗಳು ಸರ್‍ಫೇಸ್ ವೆಬ್. ಅಂದರೆ ನಾವು ಗೂಗಲ್‍ನಲ್ಲಿ ಜಾಲಾಡುವಾಗ ಅದರಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಪುಟವೂ ಇಂಥ ಸರ್‍ಫೇಸ್ ವೆಬ್ಬೇ! ದಿನನಿತ್ಯ ನಾವು ಅಂತರ್ಜಾಲದೊಂದಿಗೆ ವ್ಯವಹರಿಸುವಾಗ ಕೇವಲ ಶೇಕಡ ಒಂದರಷ್ಟು ಮಾತ್ರ ಮಾಹಿತಿಯನ್ನು ಎಕ್ಸ್‍ಪ್ಲೋರ್ ಮಾಡುತ್ತಿರುತ್ತೇವೆ. ಉಳಿದ ಶೇಕಡ 96 ರಿಂದ 99 ರಷ್ಟು ಮಾಹಿತಿಗಳು ಡೀಪ್‍ವೆಬ್ ಮತ್ತು ಡಾರ್ಕ್‍ವೆಬ್‍ಗಳಲ್ಲಿ ಅಡಗಿರುತ್ತವೆ.

ಎರಡಂತಸ್ತಿನ ಕಟ್ಟಡವೊಂದರಲ್ಲಿ ಮೇಲೆ ಕಾಣುವುದೇ ನಾವು ಜಾಲಾಡುವ ತಾಣಗಳು, ಆನಂತರದ್ದು ಡೀಪ್‍ವೆಬ್. ಅದರ ಕೆಳಗಿರುವುದೇ ಈ ಡಾರ್ಕ್‍ವೆಬ್. ಅಂದರೆ ನಾವು ಯಾವುದನ್ನು ಡಾರ್ಕ್‍ವೆಬ್ ಎನ್ನುತ್ತೇವೆಯೋ ಅದೂ ಇಂಟರ್‍ನೆಟ್‍ನ ಬೇರ್ಪಡಿಸಲಾಗದ ಭಾಗವೇ ಆಗಿರುತ್ತದೆ.

ಸರ್‍ಫೇಸ್ ವೆಬ್‍ನ ಕೆಳಭಾಗದಲ್ಲಿರುವುದೇ ಡೀಪ್‍ವೆಬ್. ಇದನ್ನು ಡಾರ್ಕ್‍ವೆಬ್‍ನೊಂದಿಗೆ ಜೋಡಿಸಿ ಇವೆರಡೂ ಒಂದೇ ಎಂಬುದಾಗಿ ಬಿಂಬಿಸುತ್ತಾರೆ. ವಾಸ್ತವವಾಗಿ ಇವೆರಡೂ ಬೇರೆ. ಯಾವ ಜಾಲತಾಣಗಳನ್ನು ಗೂಗಲ್ ಅಥವಾ ಇನ್ನಾವುದೇ ಸರ್ಚ್ ಇಂಜಿನ್‍ಗಳಿಂದ ಜಾಲಾಡಲು ಸಾಧ್ಯವಿಲ್ಲವೋ ಅವೆಲ್ಲವನ್ನೂ ಡೀಪ್‍ವೆಬ್ ಮತ್ತು ಡಾರ್ಕ್‍ವೆಬ್‍ಗಳೆಂದು ಪರಿಗಣಿಸಬಹುದು. ಡೀಪ್‍ವೆಬ್‍ನಲ್ಲಿ ನಾವು ಸರ್‍ಫೇಸ್ ವೆಬ್‍ನಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುವ ಮಾಹಿತಿಗಳು ಅಂದರೆ ಆನ್‍ಲೈನ್ ಬ್ಯಾಂಕಿಂಗ್ ಟ್ರಾಫಿಕ್, ಸರ್ಕಾರದ ಕೆಲವು ಗೌಪ್ಯ ಡಾಟಾಬೇಸ್‍ಗಳು, ಮೆಡಿಕಲ್ ಮಾಹಿತಿಗಳು, ಪಾಸ್‍ವರ್ಡ್‍ನಿಂದ ಎನ್‍ಕ್ರಿಪ್ಟ್ ಆದಂಥ ಪುಟಗಳು ಸಂಗ್ರಹವಾಗಿರುತ್ತವೆ. ಇಂಥ ಡೀಪ್‍ವೆಬ್‍ನ ತಳಕ್ಕೆ ಹೋದರೆ ಸಿಗುವ ಆದರೆ ಅಂತರ್ಜಾಲವೆಂಬ ವಿಶಾಲದಾಗಸದಲ್ಲಿ ಸಾಮಾನ್ಯರಿಗೆ ನಿಲುಕದ ನಕ್ಷತ್ರವಾಗಿರುವುದೇ ಡಾರ್ಕ್‍ವೆಬ್. (ನಕ್ಷತ್ರವನ್ನಾದರೂ ನೋಡಬಹುದು; ಆದರೆ ಡಾರ್ಕ್‍ವೆಬ್ ಕಾಣಲೂ ಸಿಗುವುದಿಲ್ಲ!)

ಡಾರ್ಕ್‍ವೆಬ್‍ನ ಯುಆರ್‍ಎಲ್‍ಗಳು com, in, org ಗಳಿಂದ ಸಂಯೋಜನೆಗೊಂಡಿರುವುದಿಲ್ಲ. ಇವು onion ಎಂಬ ಡೊಮೈನ್‍ಗಳಿಂದ ರಚಿಸಲ್ಪಟ್ಟಿರುತ್ತವೆ. ಜೊತೆಗೆ ಇದರ ಜಾಲತಾಣಗಳ ವಿಳಾಸಗಳು ನೆನಪಿನಲ್ಲಿಟ್ಟುಕೊಳ್ಳುವಂತೆ ಇರುವುದಿಲ್ಲ! eajwlvm322lcca76.onion ಇದೊಂದು ಡಾರ್ಕ್‍ವೆಬ್‍ನ ಯುಆರ್‍ಎಲ್! ಎಷ್ಟು ಕಷ್ಟಕರ ಮತ್ತು ವಿಚಿತ್ರ ನೋಡಿ.

ಇದನ್ನು 1970ರ ದಶಕದಲ್ಲಿ ಇಂಟರ್‍ನೆಟ್ ಕಂಡುಕೊಂಡಾಗಲೇ ಆವಿಷ್ಕರಿಸಿದ್ದು. ಆದರೆ ಇದನ್ನು ಉಪಯೋಗಿಸಲು ಅರ್ಹವಾದಂಥ ಬ್ರೌಸರ್ ಅನ್ನು ಅಮೆರಿಕಾದ ನೌಕಾದಳದ ಗುಪ್ತಚರ ಪಡೆಯು 2000 ನೇ ಇಸವಿಯ ಆಸುಪಾಸಿನಲ್ಲಿ ಬಳಸಲು ಶುರುವಿಟ್ಟುಕೊಂಡಿತು. ಇವರು ಡೆವಲಪ್ ಮಾಡಿದ ಈ ಬ್ರೌಸರ್‍ಅನ್ನು ನಾವಿಂದು Tor ಎಂದು ಕರೆಯುತ್ತೇವೆ. ಇದು ನಾವು ಬಳಸುವ ಗೂಗಲ್ ಕ್ರೋಮ್ ಅಥವಾ ಇನ್ನಾವುದೇ ಬ್ರೌಸರ್‍ನಂತಲ್ಲ! ಬೇಕಾದ ಮಾಹಿತಿಯನ್ನು ಪ್ರಪಂಚದ ಮೂಲೆ ಮೂಲೆಯಲ್ಲಿರುವ ಕಂಪ್ಯೂಟರ್‍ಗಳಿಗೆ ಪುನರ್ ನಿರ್ದೇಶಿಸುವಂಥದು. ಇದರಿಂದಾಗಿಯೇ ಡಾರ್ಕ್‍ವೆಬ್‍ನಲ್ಲಿ ಸಂಪೂರ್ಣ ಅನಾಮಧೇಯತೆಯನ್ನು ಸಾಧಿಸಬಹುದು.

ಹಾಗಾದರೆ ಈ ಡಾರ್ಕ್‍ವೆಬ್‍ನ ಬಳಕೆದಾರರು ತಾನೇ ಯಾರು? ಎಂಬ ಪ್ರಶ್ನೆ ನಮಗೆ ಮೂಡದಿರದು. ಕ್ರಿಮಿನಲ್‍ಗಳು, ಭಯೋತ್ಪಾದಕರು, ತೀವ್ರಗಾಮಿಗಳು, ಹ್ಯಾಕರ್‍ಗಳು ಮತ್ತು ಇತರ ಬೇನಾಮಿ ವೃತ್ತಿಪರರು. ಬಹಳ ಮುಖ್ಯವಾಗಿ ಮಿಲಿಟರಿ ಪಡೆ ಮತ್ತು ಗುಪ್ತಚರ ಸಂಸ್ಥೆಗಳವರೂ ಈ ನಿಗೂಢವನ್ನು ಜಾಲಾಡುವವರಾಗಿರುತ್ತಾರೆ. ಹಾಗಾಗಿಯೇ ಇದನ್ನು eBay of the Underworld ಎಂದು ವರ್ಣಿಸುವರು.

Tor ಬ್ರೌಸರ್ ಯಾವ ರೀತಿಯಲ್ಲೂ ನಮ್ಮ ಐಪಿ ವಿಳಾಸವನ್ನು ದಾಖಲಿಸಿಕೊಳ್ಳುವುದಿಲ್ಲ ಮತ್ತು ನಮ್ಮ ಬೇಡಿಕೆ ಮತ್ತು ಪೂರೈಕೆಗಳನ್ನು ವಾಚ್ಯವಾಗಿ ತೆಗೆದುಕೊಳ್ಳದೇ ಎನ್‍ಕ್ರಿಪ್ಟ್ ಮಾಡಿಕೊಳ್ಳುತ್ತದೆ. ಇದರ ದುರುಪಯೋಗವನ್ನು ಮಾಡಿಕೊಂಡ ಕೆಲವು ಸಂಸ್ಥೆಗಳು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತವೆ. ಯಾರಿಗಾದರೂ ಸುಪಾರಿ ಕೊಡಬೇಕಾದರೆ, ಹಿಟ್‍ಮ್ಯಾನ್ ಅಥವಾ ಶಾರ್ಪ್ ಶೂಟರ್ ಮತ್ತು ಹ್ಯಾಕರ್‍ಗಳನ್ನು ನೇಮಿಸಬೇಕಾದರೆ ಡಾರ್ಕ್‍ವೆಬ್‍ನಲ್ಲಿ ಅವಕಾಶವಿದೆ. ಗೌಪ್ಯವಾಗಿ ಮತ್ತು ಕಾನೂನುಬಾಹಿರ ರೀತಿಯಲ್ಲಿ ಶಸ್ತ್ರಾಸ್ತ್ರಗಳನ್ನು ಖರೀದಿಸುವಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ ಡೀಲಿಂಗ್‍ಗಳನ್ನು ಮಾಡಿಕೊಳ್ಳುವಲ್ಲಿ ಈ ನಿಗೂಢ ವೆಬ್‍ನ ಪಾತ್ರ ಮುಖ್ಯವಾದದ್ದು.

ಅಷ್ಟೇ ಅಲ್ಲದೆ, ಕಳುವಾಗಿರುವ ಬ್ಯಾಂಕ್ ಖಾತೆಗಳು, ಡೆಬಿಟ್ ಕಾರ್ಡ್ ವಿವರಗಳು, ಹ್ಯಾಕಿಂಗ್ ಟೂಲ್‍ಗಳು ಮಾತ್ರವಲ್ಲದೇ ಹ್ಯಾಕಿಂಗ್ ತರಬೇತಿಗಳೂ ಇಲ್ಲಿ ಲಭಿಸುತ್ತವೆ. ಕದ್ದ ಮಾಹಿತಿಗಳಂತೂ ಭರಪೂರ! ಇನ್ನು ಕೆಲವರಂತೂ ಭಯಾನಕವಾದ ಹಿಂಸಾಚಾರ, ಅತ್ಯಾಚಾರದಂಥ ವಿಡಿಯೊ ತುಣುಕುಗಳನ್ನು ಹರಿಯ ಬಿಡುವರು. ಉದಾಹರಣೆಗೆ: ಬಾಲಲೈಂಗಿಕತೆ ಮತ್ತು ರೆಡ್‍ರೂಮ್. ಕಳುವಾದ ಪಾಸ್‍ವರ್ಡ್‍ಗಳು ಮತ್ತು ಸಾಮಾಜಿಕ ಜಾಲತಾಣಗಳ ಅಕೌಂಟುಗಳು ಮಾರಾಟವಾಗುವುದೂ ಇಲ್ಲೇ! ಯಾರು ಯಾರಿಗೆ ಮಾರುತ್ತಿರುವರು? ಯಾರನ್ನು ನೇಮಿಸುತ್ತಿರುವರು? ಎಂಬುದು ಯಾರಿಗೂ ತಿಳಿಯುವುದಿಲ್ಲ.

ಈ ಮಾರಾಟಕ್ಕೆ ಬಳಸುವ ಮತ್ತು ಮಾಪನ ಮಾಡುವ ಹಣವೆ ಕ್ರಿಪ್ಟೋಕರೆನ್ಸಿ. ಈ ವ್ಯವಹಾರಗಳೆಲ್ಲ ಬಹುಪಾಲು ಅಂತಾರಾಷ್ಟ್ರೀಯ ಮಟ್ಟದಲ್ಲೇ ನಡೆಯುವುದರಿಂದ ಕೇವಲ ಒಂದು ಕರೆನ್ಸಿಗೆ ಅಂಟಿಕೊಂಡು ಕೂರುವುದು ಅಸಾಧ್ಯದ ಮಾತು. ಆದುದರಿಂದಲೇ ಬಿಟ್‍ಕಾಯಿನ್ ಎಂಬ ಕ್ರಿಪ್ಟೋಕರೆನ್ಸಿಯನ್ನು ಡಾರ್ಕ್‍ವೆಬ್‍ನಲ್ಲಿ ಬಳಕೆ ಮಾಡಲಾಗುವುದು. ಒಂದು ಬಿಟ್‍ಕಾಯಿನ್‍ಗೆ ಇಂದಿನ ಮಾರುಕಟ್ಟೆಯ ಬೆಲೆ ಸುಮಾರು 7 ಲಕ್ಷದ 78 ಸಾವಿರ ರೂಗಳು. ಇಲ್ಲಿನ ಎಲ್ಲ ವ್ಯವಹಾರಗಳೂ ಇದರ ಮುಖಾಂತರವೇ ನಡೆಯುವಂಥದು.

ಇಷ್ಟಾಗಿಯೂ ಇಂಥ ಕಾನೂನು ಮತ್ತು ಸಮಾಜಬಾಹಿರ ದುಷ್ಕøತ್ಯಗಳು ಡಾರ್ಕ್‍ವೆಬ್‍ನಲ್ಲಿ ನಡೆಯುತ್ತಿದ್ದರೂ ಏನೂ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲವೆ? ಎಂಬ ಪ್ರಶ್ನೆ ಮೂಡದೇ ಇರದು. ಡಾರ್ಕ್‍ವೆಬ್ ಅನ್ನು ನಿಷೇಧಿಸಲು ಆಗದು. ಏಕೆಂದರೆ ಒಟ್ಟಾರೆ ಇಂಟರ್‍ನೆಟ್ ಅನ್ನೇ ನಿಷೇಧಿಸಬೇಕಾಗುತ್ತದೆ. ಸೈಬರ್ ಪೊಲೀಸ್ ವ್ಯವಸ್ಥೆಯೇನೂ ಕೈ ಕಟ್ಟಿ ಕುಳಿತಿಲ್ಲ. ಶಕ್ತಿ ಮೀರಿ ಕಾನೂನು ಕ್ರಮಗಳನ್ನು ಜರುಗಿಸುತ್ತಲೇ ಇರುತ್ತಾರೆ. ಆದರೆ ಇದು ಜಗತ್ತಿನಾದ್ಯಂತ ಹೆಣೆದುಕೊಂಡಿರುವ ಮಾಫಿಯಾ. ಅಂತಾರಾಷ್ಟ್ರೀಯ ಕಾನೂನು ತೊಡಕುಗಳು ಎದುರಾಗುತ್ತಿರುತ್ತವೆ. ಇತ್ತೀಚೆಗೆ ಇಂಗ್ಲೆಂಡಿನಲ್ಲಿ ಡಾರ್ಕ್‍ವೆಬ್ ಅನ್ನು ಬಳಸಿ ಪ್ರಚಾರ ನಡೆಸುತ್ತಿದ್ದ ಹಲವಾರು ಉಗ್ರಗಾಮಿಗಳನ್ನು ಅಲ್ಲಿನ ಸರ್ಕಾರ ಬಂಧಿಸಿತು.

ಈ ನಿಗೂಢ ಜಾಲದಲ್ಲಿ Silk Road, Project Black Flag, Black Market Reloaded, Alpha Bay ನಂಥ ಹತ್ತು ಹಲವು ಜನಪ್ರಿಯವಾದ ಆದರೆ ಕಾನೂನುಬಾಹಿರ ಜಾಲತಾಣಗಳನ್ನು ರದ್ದು ಮಾಡಿ, ಮುಚ್ಚಿಸಲಾಗಿದೆ. ಆದರೆ ಅಂಥ ನೂರು, ಸಾವಿರ ಜಾಲತಾಣಗಳು ಆಗಿಂದಾಗ್ಗ್ಯೆ ಹುಟ್ಟಿಕೊಂಡು ಕಾರ್ಯ ನಿರ್ವಹಿಸುತ್ತಲೇ ಇರುತ್ತವೆ.

ಹಾಗೆಂದ ಮಾತ್ರಕ್ಕೆ ಡಾರ್ಕ್‍ವೆಬ್‍ನಲ್ಲಿರುವುದೆಲ್ಲಾ ಕಾನೂನುಬಾಹಿರವೆಂದೇನಲ್ಲ. Tor ಬ್ರೌಸರ್‍ನ ಶೇಕಡ 60 ರಷ್ಟು ಹಣಕಾಸಿನ ನೆರವು ಅಮೆರಿಕಾದ ಗುಪ್ತಚರ ಇಲಾಖೆಯಿಂದಲೇ ಆಗುತ್ತಿದೆ. ಮಿಲಿಟರಿ ಇಂಟಲಿಜೆನ್ಸ್‍ನ ಅತಿ ಗೌಪ್ಯ ಮಾಹಿತಿ ವಿನಿಮಯಗಳು ಈ ಜಾಲದಲ್ಲೇ ನಡೆಯುತ್ತಿರುತ್ತವೆ. ಇತ್ತೀಚೆಗೆ ಇಂಥ ನಿಗೂಢಜಾಲಗಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ನಂತಹ ಸುದ್ದಿಸಂಸ್ಥೆಗಳು ಡಾರ್ಕ್‍ವೆಬ್‍ನಲ್ಲಿ ತಮ್ಮ ಯುನಿಟ್‍ಗಳನ್ನು ತೆರೆದು, ಗುಪ್ತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಸುಪ್ರಸಿದ್ಧ ಫೇಸ್‍ಬುಕ್ ಅಂತೂ ತನ್ನ ಡಾರ್ಕ್‍ವೆಬ್ ಗ್ರಾಹಕರಿಗಾಗಿ ಬ್ಲಾಕ್‍ಬುಕ್ ಎಂಬ ವೆಬ್‍ಸೈಟ್ ಅನ್ನು ತೆರೆದಿದೆ.

ಹಾಗಾದರೆ, ಡಾರ್ಕ್‍ವೆಬ್ ಅನ್ನು ಬಳಸಬಾರದೇ? ಇದು ಕಾನೂನುಬಾಹಿರವೇ? ಖಂಡಿತಾ ಅಲ್ಲ. ಸಾಫ್ಟ್‍ವೇರ್ ಸೆಕ್ಯುರಿಟಿ ಎಂಜಿನಿಯರ್‍ಗಳು, ಎಥಿಕಲ್ ಹ್ಯಾಕರ್‍ಗಳು ಮತ್ತು ಸರ್ಕಾರದ ಅಧಿಕೃತ ಪರವಾನಗಿ ಪಡೆದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಈ ನಿಗೂಢಜಾಲತಾಣಗಳನ್ನು ಬಳಸುತ್ತಾರೆ. ಆದರೆ ಈ ಜಾಲತಾಣವನ್ನು ಬಳಸಿಕೊಂಡು, ಕಾನೂನುಬಾಹಿರವಾದ ಮತ್ತು ಅಕ್ರಮ ಚಟುವಟಿಕೆಗಳನ್ನು ಕೈಗೊಳ್ಳಬಾರದು ಅಷ್ಟೇ. ಕೆಲವೊಂದು ಹ್ಯಾಕಿಂಗ್ ಟೂಲ್‍ಗಳನ್ನು ಈ ವೆಬ್‍ನಿಂದ ಪಡೆದ ಓರ್ವ ಎಥಿಕಲ್ ಹ್ಯಾಕರ್ ತನ್ನ ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ.

ಸಾಮಾನ್ಯರೂ ಈ ಡಾರ್ಕ್‍ವೆಬ್ ಅನ್ನು ಪ್ರವೇಶಿಸಬಹುದೇ? ಎಂದರೆ ಬೇಡ ಎಂಬುದು ಸರಿಯಾದ ಸಲಹೆ. ಕಾರಣವೆಂದರೆ ಇದರಲ್ಲಿ ವ್ಯವಹರಿಸಲು ಸಾಕಷ್ಟು ವೃತ್ತಿಪರತೆ ಮತ್ತು ಅಪಾರ ಪ್ರಮಾಣದ ಕೌಶಲ್ಯ ಬೇಕು. ಉದಾಹರಣೆಗೆ ಲಾಪ್‍ಟ್ಯಾಪ್ನ ವೆಬ್‍ಕ್ಯಾಮ್ ಮುಚ್ಚಿಡುವುದು, ಉತ್ತಮವಾದ ವರ್ಚುವಲ್ ಪ್ರೈವೇಟ್ ನೆಟ್‍ವರ್ಕ್ (ವಿಪಿಎನ್) ಅನ್ನು ಬಳಸುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅಪಾಯವಂತೂ ಕಟ್ಟಿಟ್ಟಬುತ್ತಿ. ಇಂಟರ್‍ನೆಟ್ ಅನ್ನು ಕುರಿತು ಹಾಗೂ ಅದರ ಖಾಸಗೀತನ ಮತ್ತು ಸುರಕ್ಷತೆ ಕುರಿತು ಮಾತಾಡುವಾಗಲೆಲ್ಲ ಡಾರ್ಕ್‍ವೆಬ್ ವಿಚಾರವನ್ನು ಕಣ್ಣಮುಂದೆ ತಂದುಕೊಳ್ಳುವುದು ಸರಿ. ಕಳೆದ ಎರಡು ವರ್ಷಗಳ ಹಿಂದೆ ತೆರೆ ಕಂಡ ಗುಲ್ಟು ಎಂಬ ಕನ್ನಡದ ಚಲನಚಿತ್ರವೊಂದು ಈ ಥೀಮನ್ನೇ ಬಳಸಿಕೊಂಡು ನಮ್ಮನ್ನು ಎಚ್ಚರಿಸುತ್ತದೆ.

ಈ ನಿಗೂಢಜಾಲವನ್ನು ಕುರಿತಂತೆ ಅಪಾರ ಪ್ರಮಾಣದ ಮಾಹಿತಿಗಳಾಗಲೀ, ಅಂಕಿಅಂಶಗಳಾಗಲೀ ಇವೆಯಾದರೂ ಸಾಮಾನ್ಯರಿಗೆ ಅವುಗಳ ಅಗತ್ಯವಿಲ್ಲ. ಏಕೆಂದರೆ ಇಂಥವುಗಳ ಬಗ್ಗೆ ನಾವು ಹೆಚ್ಚು ತಿಳಿದುಕೊಂಡಷ್ಟೂ ನಮಗೇ ಅಪಾಯ! ಹುತ್ತ ಕಂಡಿತೆಂದು ಅದರ ಬಳಿಗೆ ಹೋಗಿ ಹಾವಿದೆಯೇ? ಎಂದು ಕೈ ಹಾಕಿ ನೋಡುವ ದುಸ್ಸಾಹಸವಲ್ಲದೇ ಬೇರೇನಲ್ಲ.

ಚಾರು ಮಂಜುರಾಜ್,


ಕನ್ನಡದ ಬರಹಗಳನ್ನು ಹಂಚಿ ಹರಡಿ
3.6 5 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಎಲ್ ಎಚ್ ರವಿ
ಎಲ್ ಎಚ್ ರವಿ
3 years ago

ಬಹುಪಯೋಗಿ, ಸಾಕಷ್ಟು ವಿಚಾರಗಳು ತುಂಬಿರುವ ಗೌಪ್ಯ ಸಂಗತಿಗಳನ್ನು ಅರಿಯಲು ಸಹಾಯಕವಾದ ಬರಹ
ಧನ್ಯವಾದಗಳು ಚಾರು.

ಲಕ್ಷ್ಮಿ ಗೋಪಾಲಕೃಷ್ಣ
ಲಕ್ಷ್ಮಿ ಗೋಪಾಲಕೃಷ್ಣ
3 years ago

ಹೀಗೂ ಉಂಟೇ…..ಗುಲ್ಟು ನೋಡಿದಾಗಲೂ ಅರ್ಥ ಆಗದಿದ್ದದ್ದು ಈ ಸುಂದರ ಬರವಣಿಗೆಯಿಂದ ಸಾಕಷ್ಟು ಮನವರಿಕೆ ಆಯಿತು.ಇನ್ನಷ್ಟು ಇಂತಹ ಲೇಖನಗಳು ನಿಮ್ಮಿಂದ ಹೊರ ಬರಲೆಂದು ಹಾರೈಸುತ್ತೇನೆ.ಒಳ್ಳೆಯ ದಾಗಲಿ.😍
ಲಕ್ಷ್ಮಿ ಗೋಪಾಲಕೃಷ್ಣ
ಮೈಸೂರು.

ಕುಮಾರ್
ಕುಮಾರ್
3 years ago

ತುಂಬ ಉತ್ತಮವಾದ ಬರಹ. ಸಾಮಾನ್ಯರಿಗೆ ಎಟುಕದ ಕತ್ತಲ ಲೋಕವೊಂದರ ಪರಿಚಯ ಮಾಡಿರುವ ರೀತಿ ಚೆನ್ನಾಗಿದೆ.

Gerald Carlo
Gerald Carlo
3 years ago

ಧನ್ಯವಾದಗಳು. ಇಂತಾ ಒಂದು ಅಂತರ್ವಿಜಾಲವಿದೆ ಎಂದು ಗೊತ್ತೇ ಇರಲಿಲ್ಲ.

ದಿನೇಶ್ ಉಡಪಿ
ದಿನೇಶ್ ಉಡಪಿ
3 years ago

ವೈಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡ ಭಾಷೆಯಲ್ಲಿ ಎಂತಹವರಿಗೂ ಅರ್ಥವಾಗುವಂತೆ ಅದ್ಭುತವಾಗಿ, ಶಿವರಾಮ ಕಾರಂತರು,ತೇಜಸ್ವಿಯವರು,ಭೂಸನೂರಮಠ‌ ಅವರು, ಕೆ.ಎನ್ ಗಣೇಶಯ್ಯ ಅವರಂತವರು ಬರೆದಿದ್ದಾರೆ. ಕಂಪ್ಯೂಟರ್ ವಿಷಯದ ನಿಗೂಢ ಜಗತ್ತಿನ ಬಗ್ಗೆ ವಿಷಯ ತಜ್ಞರಾಗಿರುವ ಚಾರು ಮಂಜುರಾಜ್ ತರಹ ಸರಳವಾಗಿ ಮತ್ತು ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುವವರ ಅವಶ್ಯಕತೆ ತುಂಬಾ ಇದೆ.ಅವರಿಂದ ಮುಂದೆ ಈ‌ ರೀತಿಯ ಬರೆಹಗಳು ಬರುತ್ತಿರಲಿ.

5
0
Would love your thoughts, please comment.x
()
x