ಡಾಬಿಲಿಡೂಬ ಮತ್ತು ಟುಸ್ಕಿಲಿ ಪುಸ್ಕಿಲಿ: ಹರಿಪ್ರಸಾದ್ ಕೆ.ಆರ್.

    

ಒಂದಾನೊಂದು ಕಾಡು. ಆ ಕಾಡಿನಲ್ಲಿ ಒಂದು ಸಿಂಹ ವಾಸವಾಗಿತ್ತು. ಆ ಸಿಂಹದ ಹೆಸರು ಡಾಬಿಲಿಡೂಬ. ಒಂದುದಿನ ಡಾಬಿಲಿಡೂಬಾಗೆ ತುಂಬಾ ಹಸಿವೆಯಾಯಿತು. ಅದು ಆಹಾರ ಹುಡುಕಿಕೊಂಡು ಹೊರಟಿತು. ಎಷ್ಟೇ ಅಲೆದರೂ ಅದಕ್ಕೆ ಆಹಾರ ಸಿಗಲಿಲ್ಲ. ಹುಡುಕಿ ಹುಡುಕಿ ಅದಕ್ಕೆ ಸುಸ್ತಾಗತೊಡಗಿತು. ಸುಸ್ತಿನಿಂದ ಅದಕ್ಕೆ ಸಿಟ್ಟು ಬರತೊಡಗಿತು.
 
ಅದೇ ಸಮಯಕ್ಕೆ ಕಿಚಕಿಚ ಅಂತ ಶಬ್ದ ಕೇಳಿತು. ಶಬ್ದ ಕೇಳಿ ಸಿಂಹ ತಿರುಗಿ ನೋಡಿತು. ನೋಡಿದರೆ ಒಂದು ಪುಟ್ಟ ಇಲಿ. ಸಿಂಹಕ್ಕೆ ಇಲಿ ನೋಡಿ ಸಂತೋಷವಾಯಿತು. ಗಬಕ್ಕನೆ ಇಲಿಯನ್ನು ಹಿಡಿಯಿತು. ಸದ್ಯ ತಿನ್ನೋಕೆ ಇಲಿಯಾದರೂ ಸಿಕ್ತಲ್ಲ ಅಂತ ಖುಷಿಯಾಗಿ ’’ಏಯ್ ಯಾರು ನೀನು? ಇಲ್ಲೆನು ಮಾಡ್ತಿದಿಯ’’ ಅಂತ ಗದರಿತು.  ಇಲಿಗೆ ಗಾಬರಿಯಾಯಿತು. ಆಗ ಇಲಿ ‘’ನನ್ನೆಸರು ಡುಸ್ಕಿಲಿ-ಪುಸ್ಕಿಲಿ. ನಾನು ಆಹಾರ ಹುಡುಕೊಂಡು ಬಂದೆ. ದಯವಿಟ್ಟು ನನ್ನ ಬಿಟ್ಬಿಡು’’ ಅಂತ ಗೋಗರೆಯಿತು.  ಬಿಡೋದಾ. ನನಗೆ ಮೊದಲೇ ಹೊಟ್ಟೆ ಹಸಿದು ಪ್ರಾಣ ಹೋಗ್ತಿದೆ. ತಿಂದು ಬಿಡ್ತೀನಿ’’ ಅಂತ ಆರ್ಭಟಿಸಿತು ಸಿಂಹ. ಆಯಿತು ನೀನು ನನ್ನ ತಿನ್ನುವಿಯಂತೆ. ಅದಕ್ಕೆ ಮೊದಲು ಒಂದು ಉಪಕಾರ ಮಾಡು. ನಿನ್ನ ಹೆಸರೇನು ಹೇಳು’’ ಅಂತ ಕೇಳಿತು ಟುಸ್ಕಿಲಿ ಪುಸ್ಕಿಲಿ. ಸಿಂಹಕ್ಕೆ ಇನ್ನೂ ಕೋಪ ಜಾಸ್ತಿ ಆಯಿತು. ಏಯ್ ನಿನ್ನ ತಲೆಹರಟೆ ಜಾಸ್ತಿ ಆಯಿತು. ನನ್ನ ಹೆಸರು ಕಟ್ಟಿಕೊಂಡು ನಿನಗೇನಾಗಬೇಕು ಅಂತ ಗರ್ಜಿಸಿತು. ಆಗ ಇಲಿ ‘’ಇರಲಿ ನಿನ್ನ ಹೆಸರು ಹೇಳು. ನಮ್ಮಮ್ಮ ನನಗೆ ಒಂದು ಕತೆ ಹೇಳಿದ್ದಳು. ಅದು ನೆನಪಿಗೆ ಬಂತು. ನಿನಗೂ ಆ ಕತೆ ಹೇಳ್ತಿನಿ. ಆಮೇಲೆ ನೀನು ಏನಾದರೂ ಮಾಡ್ಕೋ’’ ಅಂದಿತು. ಆಗ ಸಿಂಹ ‘’ನೋಡು ನನ್ನ ಹೆಸರು ಡಾಬಿಲಿಡೂಬ’’ ಅಂದಿತು. ಆ ಹೆಸರು ಕೇಳಿದೊಡನೆ ಟುಸ್ಕಿಲಿ ಪುಸ್ಕಿಲಿ ಥಕ ಥಕ ಕುಣಿಯಿತು. ‘’ಹಾಗಾದರೆ ನಿಮ್ಮಮ್ಮನ ಹೆಸರು ಚಮುಂಡಾಚಾಂಡಿ ಅಲ್ವಾ’’ ಅಂತ ಕೇಳಿತು. ಸಿಂಹಕ್ಕೆ ಅಚ್ಚರಿಯೋ ಅಚ್ಚರಿ. ನಮ್ಮಮ್ಮನ ಹೆಸರು ಈ ಇಲಿಗೆ ಹೇಗೆ ಗೊತ್ತು ಅಂತ ಸಿಂಹ ಯೋಚಿಸಿತು. ಆಗ ಇಲಿ ನೋಡು ಡಾಬಿಲಿಡೂಬ ಇದು ನಮ್ಮಮ್ಮ ಹೇಳಿದ ಕತೆ. ಈಗ ಕೇಳು ಅಂದಿತು.

ಇಪ್ಪತ್ತು ವರ್ಷಗಳ ಕೆಳಗೆ ನಮ್ಮಮ್ಮ ಹಲ್ಕಿಲಿ ಪುಲ್ಕಿಲಿ ಕಾಡಿನಲ್ಲಿ ಆಹಾರ ಹುಡುಕ್ತಾ ಬರ್ತಾ ಇತ್ತಂತೆ. ಆಗ ನಿಮ್ಮಮ್ಮ ಚಮುಂಡಾಚಾಂಡಿ ಕೈಗೆ ಸಿಕ್ಕುಬಿಟ್ತಂತೆ. ನಿಮ್ಮಮ್ಮ ಚಮುಂಡಾಚಾಂಡಿ ಇನ್ನೇನು ತಿಂದೇ ಬಿಡಬೇಕು ಅಂತಿರುವಾಗ ನಮ್ಮಮ್ಮ ಹಲ್ಕಿಲಿ ಪುಲ್ಕಿಲಿ ದಯವಿಟ್ಟು ನನ್ನ ಬಿಡು. ನಮ್ಮನೇಲಿ ಟುಸ್ಕಿಲಿ ಪುಸ್ಕಿಲಿ ಅಂತ ಮಗು ಇದೆ. ಈಗ ನೀನು ನನ್ನನ್ನ ತಿಂದರೆ ನಾಳೆ ಅದರ ಕತೆ ಏನು? ಅದನ್ನು ನೋಡಿಕೊಳ್ಳೋರು ಯಾರು? ಅದಿನ್ನೂ ಪುಟ್ಟಮಗು. ದಯವಿಟ್ಟು ನೀನು ನನ್ನ ಮೇಲೆ ಕರುಣೆ ಇಟ್ಟು ನನ್ನ ಬಿಟ್ಟರೆ ಆ ಮಗು ಜೀವ ಉಳಿಯುತ್ತೆ. ಈಗ ನೀನು ಹಸಿವು ಅಂತ ಕೊಂದ್ರೆ  ನಾಳೆ ಆ ಮಗೂನು ಹಸಿವಿನಿಂದ ಸತ್ತುಹೋಗುತ್ತೆ. ನೀನು ಈಗ ನನ್ನ ಬಿಟ್ಟರೆ ನಾನು ನಿನ್ನ ಉಪಕಾರಾನ ಹೇಗಾದ್ರೂ ಮಾಡಿ ತೀರಿಸ್ತಿನಿ. ಆಗ ನಿಮ್ಮಮ್ಮ ಚಮುಂಡಾಚಾಂಡಿಗೆ ಮನಸು ಕರಗಿ ಆಗಲಿ ಹೋಗು, ಬಿಟ್ಟಿದೀನಿ ಅಂತ ನಮ್ಮಮ್ಮನ ಬಿಟ್ಲಂತೆ. ಇದೆಲ್ಲ ಆಗಿ ಎಷ್ಟೋ ದಿನಗಳ ನಂತರ ಚಮುಂಡಾಚಾಂಡಿ ಕಾಡಿನಲ್ಲಿ ಇರುವಾಗ ಬೇಟೆಗಾರರು ಬಲೆ ಬೀಸಿ ಹಿಡಿದುಬಿಟ್ರಂತೆ. ಆಗ ನಿಮ್ಮಮ್ಮ ನನ್ನನ್ನು ಯಾರಾದ್ರೂ ಕಾಪಾಡಿ ಅಂತ ಕೂಗಿಕೊಂಡ್ಲಂತೆ. ಆಗ ನಮ್ಮಮ್ಮ ಕೇಳಿಸ್ಕೊಂಡು ಓಡಿ ಬಂದ್ಲಂತೆ. ಬೇಟೆಗಾರರು ಹಾಕಿದ್ದ ಬಲೆಯನ್ನೆಲ್ಲ ತನ್ನ ಚೂಪಾದ ಹಲ್ಲುಗಳಿಂದ ಕತ್ತರಿಸಿ ನಿಮ್ಮಮ್ಮನ ಪಾರು ಮಾಡಿದ್ಲಂತೆ.’’

ಈ ಕತೇನಾ ನಮ್ಮಮ್ಮ ಸಾಯೋಕೆ ಮುಂಚೆ ಹೇಳಿ ಸತ್ತೋದ್ಲು ಅಂತ ಕತೆ ನಿಲ್ಲಿಸಿತು ಟುಸ್ಕಿಲಿ-ಪುಸ್ಕಿಲಿ. ಈ ಕತೆ ಕೇಳಿ ಡಾಬಿಲಿಡೂಬಾಗೆ ಹೆಂಗೆಂಗೋ ಆಗೋಯ್ತು. ಹಸಿವೇ ಮರೆತುಹೊಯಿತು. ಹಾಗಾದ್ರೆ ನೀನು ನಮ್ಮಮ್ಮನ ಫ್ರೆಂಡ್ ಮಗಳು. ನಾವು ಈಗ ಫ್ರೆಂಡ್ಸೇ ಅಲ್ವಾ? ಇರಲಿ ಹೋಗು. ನಾನು ತಿನ್ನಲ್ಲ ಬಿಟ್ಟಿದೀನಿ ಅಂದಿತು. 

ಹೀಗೆ ಒಂದಷ್ಟು ದಿನ ಕಳೆಯಿತು. ಹಾಗೆ ವರ್ಷಗಳು ಕಳೆದವು. ಡಾಬಿಲಿಡೂಬಾಗೆ  ಕಾಡಿನಲ್ಲಿ ತಿನ್ನೊಕೆ ಆಹಾರ ಸಿಗುವುದು ಕಷ್ಟವಾಗತೊಡಗಿತು. ಊರಜನ ಕಾಡಿಗೆ ಬರೋದು ಜಾಸ್ತಿ ಆದಂತೆ ಕಾಡುಪ್ರಾಣಿಗಳ ಬದುಕು ಕಷ್ಟ ಆಗತೊಡಗಿತು. ಡಾಬಿಲಿಡೂಬ ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ಅದು ಆಹಾರ ಹುಡುಕಿಕೊಂಡು ಕಾಡು ಬಿಟ್ಟು ನಾಡಿನ ಕಡೆಗೆ ಹೊರಟಿತು. ಹೋಗ್ತಾ ಹೋಗ್ತಾ ಅದಿಕ್ಕೆ ಒಂದು ಊರು ಕಾಣಿಸಿತು. ಆ ಊರಿನ ಪಕ್ಕದಲ್ಲಿ ದನಗಳ ಹಿಂಡು ಕಾಣಿಸಿತು. ಡಾಬಿಲಿಡೂಬ ಓಡಿಹೋಗಿ ಒಂದು ದನ ಹಿಡಿದು ತಿಂದುಬಿಟ್ಟಿತು. ಈ ಸುದ್ದಿ ಊರಿಗೆ ತಲುಪಿತು. ಊರಜನ ಎಲ್ಲ ಸೇರಿ ಕೋಲು, ಬರ್ಜಿ ಹಿಡಿದು ಸಿಂಹವನ್ನ ಕಟ್ಟಿಹಾಕಿ, ಬಲೆ ಹಾಕಿದರು. ಆಮೇಲೆ ಅವರೆಲ್ಲ ಸೇರಿ ಈ ಸಿಂಹಾನ ಕೊಂದು ಬಿಡೋದೋ ಅಥವ ಫಾರೆಸ್ಟ್ ಡಿಪಾರ್ಟ್‍ಮೆಂಟ್‍ಗೆ ಒಪ್ಪಿಸೋದು ಅಂತ ತೀಮಾನ ಮಾಡೋಕೆ ಅರಳಿಕಟ್ಟೆ ಹತ್ತಿರ ಕೂತು ಮಾತಾಡೋಕೆ ಹೋದರು.

ಈಕಡೆ ಡಾಬಿಲಿಡೂಬ ಒದ್ದಾಡ್ತಾ ನರಳಾಡ್ತಾ ಇತ್ತು. ಅದನ್ನ ಬಲೆ ಹಾಕಿದ್ರಲ್ಲ, ಅಲ್ಲೇ ಪಕ್ಕದಲ್ಲೇ ಒಂದು ಬಿಲ ಇತ್ತು. ಆ ಬಿಲದಲ್ಲಿ ಒಂದು ಇಲಿ ಇತ್ತು. ಆ ಇಲಿ ಹೆಸರು ಜಾಮಿಲಿ-ಮಾಮಿಲಿ. ಅದು ಬಿಲದಿಂದ ಈಚೆ ಬಂತು. ಇಲಿ ನೋಡಿದ ತಕ್ಷಣ ಸಿಂಹ ‘’ ದಯವಿಟ್ಟು ನನ್ನನ್ನು ಈ ಬಲೆಯಿಂದ ಬಿಡಿಸು. ನೀನು ಏನು ಕೇಳಿದರೂ ಕೊಡ್ತಿನಿ’’ ಅಂದಿತು. ಆಗ ಜಾಮಿಲಿ-ಮಾಮಿಲಿ ಬೇಡಪ್ಪ ಬೇಡ. ನಿನ್ ಸಾವಾಸಾನೆ ಬೇಡ. ನೀನು ದುಷ್ಟ ಪ್ರಾಣಿ ಅಂದಿತು. ಡಾಬಿಲಿಡೂಬ ಮತ್ತೆ ಮತ್ತೆ ಇಲಿನ ಬೇಡಿಕೊಂಡಿತು. ಇಲಿಗೆ ಏನು ಮಾಡಬೇಕು ಅಂತ ಗೊತ್ತಾಗದೇ ಆಕಡೆ ಈಕಡೆ ನೋಡ್ತಿತ್ತು. 

ಅದೇ ಟೈಮ್‍ಗೆ ಅದರ ಫೋನ್ ರಿಂಗಾಯಿತು. ನೋಡಿದರೆ ಟುಸ್ಕಿಲಿ-ಪುಸ್ಕಿಲಿ. ಏನು ಟುಸ್ಕಿಲಿ ನನ್ನ ಮರ್ತೆ ಬಿಟ್ಟಿದೀಯ ಅಂದ್ಕೊಂಡಿದ್ದೆ. ತುಂಬ ದಿನ ಆದಮೇಳೆ ಫೋನ್ ಮಾಡ್ತಿದಿಯಲ್ಲ, ಏನ್ ಸಮಾಚಾರ ಅಂತ ಕೇಳಿತು. ಆಗ ಟುಸ್ಕಿಲಿ ಎಲ್ಲ ಮಾಮುಲು. ಈಗಂತೂ ನಮ್ ಕಾಡಲ್ಲಿ ತಿನ್ನೋಕೆ ಕಾಳು ಕಡ್ಡಿ ಏನೂ ಸಿಗ್ತಿಲ್ಲ ಹಾಗಾಗಿದೆ. ನಿನ್ ಪರಿಸ್ಥಿತಿ ಹೇಗಿದೆ ಅಂತ ಕೇಳಿತು. ಏನೋ ಪರವಾಗಿಲ್ಲಪ್ಪ. ಆದರೆ ಈವತ್ತು ನಮ್ಮೂರಲ್ಲೊಂದು ಗಲಾಟೆ ಆಗಿದೆ. ಕಾಡಿಂದ ಒಂದು ಸಿಂಹ ಬಂದು ದನ ತಿಂದುಬಿಟ್ಟಿದೆ. ನಮ್ಮೂರ ಜನ ಎಲ್ಲ ಸೇರಿ ಅದನ್ನ ಕಟ್ಟಿಹಾಕಿದಾರೆ. ಆ ಸಿಂಹ ಇಲ್ಲೆ ನನ್ನ ಪಕ್ಕದಲ್ಲಿ ನರಳಾಡ್ತಿದೆ. ನನ್ನ ಬಿಡಿಸು ಬಿಡಿಸು ಅಂತ ಗೋಗರೀತಿದೆ ಅಂದಿತು. ಹೌದ. ಆ ಸಿಂಹ ಯಾವ ಕಾಡಿನದಂತೆ? ಅವರ ಕಾಡಲ್ಲೂ ಆಹಾರ ಸಿಗ್ತಿಲ್ವೇನೋ. ಅದಿಕ್ಕೆ ನಿಮ್ಮೂರಿಗೆ ಬಂದಿರಬೇಕು. ಎಲ್ಲ ಕಾಡಲ್ಲು ಇದೇ ಪರಿಸ್ಥಿತಿ ಇದೆ ಅಂತಾಯ್ತು. ಹೋಗಲಿ ಆ ಸಿಂಹದ ಹೆಸರೇನು ಕೇಳು ಅಂತು. ಸಿಂಹದ ಹೆಸರು ಡಾಬಿಲಿಡೂಬ ಅಂತ ಗೊತ್ತಾಗಿದ್ದೇ ತಡ. ಟುಸ್ಕಿಲಿ, ಜಾಮಿಲಿ ಮಾಮಿಲಿಯನ್ನ ಗೋಗರೆಯಿತು. ಅಯ್ಯೋ ಅವಳು ನನ್ನ ಫ್ರೆಂಡ್. ಒಂದ್ಸಲ ನನ್ನ ಜೀವ ಉಳಿಸಿದೆ ಅದು. ದಯವಿಟ್ಟು ಅದನ್ನ ಹೇಗಾದರೂ ಮಾಡಿ ಉಳಿಸು ಅಂತ ಕೋರಿಕೊಂಡಿತು. ಜಾಮಿಲಿ ಡಾಬಿಲಿಡೂಬದ ಬಲೆ ಕಡಿದು ಅದನ್ನು ಪಾರು ಮಾಡಿತು.

ಹರಿಪ್ರಸಾದ್ ಕೆ.ಆರ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಶ್ರೀವತ್ಸ ಕಂಚೀಮನೆ

ಚಂದ… 🙂

Anantha Ramesh
8 years ago

ನಿಜಕ್ಕೂ ಮಕ್ಕಳು ಓದಿ ಖುಷಿಪಡುವ ಕತೆ.

2
0
Would love your thoughts, please comment.x
()
x