ಲೇಖನ

ಟ್ರೇನ್ ಪ್ರಯಾಣ: ಆಶಾಜಗದೀಶ್

ನನಗೆ ಪ್ರಯಾಣವೆಂದರೆ ಬಹಳ ಇಷ್ಟ. ಬಸ್ ಟ್ರೇನ್ ಕಾರ್ ಬೈಕ್… ಯಾವ್ದಾದ್ರೂ ಸರಿ ಹತ್ತಿ ಹೊರಟುಬಿಟ್ಟರೆ ಮುಗೀತು. ಯಾಕೆ ಅಂತ ಗೊತ್ತಿಲ್ಲ. ಅದರೆ ನನಗೆ ಬೀಸುವ ಗಾಳಿ ಅಂದ್ರೆ ಇಷ್ಟ, ತೊಟ್ಟಿಲ ಹಾಗೆ ತೂಗುವ ವಾಹನ ಇಷ್ಟ, ಪ್ರಯಾಣದ ನಿದ್ದೆ ಇಷ್ಟ, ನಾನಾ ಥರದ ಜನಗಳನ್ನು ನೋಡುವುದು ಇಷ್ಟ, ಹಿಂದಕ್ಕೆ ಜೋರಾಗಿ ಓಡುವ ಮರಗಳು ಇಷ್ಟ, ನಾನಾ ಥರದ ಪರಿಸರದ ಚಿತ್ರಣವನ್ನು ಕಣ್ತುಂಬಿಕೊಳ್ಳುವುದು ಇಷ್ಟ….. ಹೀಗೆ ಇಷ್ಟಗಳ ಸಾಲೇ ಇದೆ. ಅದರೊಂದಿಗೆ ಅಪರೂಪದ ಅನುಭವಗಳೂ ಸಿಗುತ್ತವೆ. ಇಂತಹ ಅನುಭವಗಳು ಪ್ರಯಾಣವನ್ನು ಚಂದಗೊಳಿಸುವುದರ ಜೊತೆಗೆ ಕುತೂಹಲಭರಿತವಾಗಿಯೂ ಮಾಡುತ್ತವೆ.

ಒಮ್ಮೆ ಹೀಗೆ ಕಾರ್ಯಕ್ರಮವೊಂದಕ್ಕಾಗಿ ಮುಂಬೈಗೆ ಹೊರಟಿದ್ದೆವು. ಇಪ್ಪತ್ಮೂರು ತಾಸುಗಳ ಸುಧೀರ್ಘ ಪಯಣವದು. ನನ್ನ ಮೊಟ್ಟ ಮೊದಲ ಅತಿ ದೀರ್ಘ ಪಯಣವೂ ಆಗಿತ್ತು ಸಹ. ಗೌರಿಬಿದನೂರಿನಿಂದ ಟ್ರೇನ್ ಹತ್ತಿದ್ದೆವು. ಕಲಬುರ್ಗಿಯಲ್ಲಿ. ಒಂದು ವೃದ್ಧ ದಂಪತಿ ನಮ್ಮ ಕಂಪಾರ್ಟ್ಮೆಂಟಿಗೆ ಬಂದು ಹತ್ತಿತು. ಅಜ್ಜ ಬಹಳ ಕಟ್ಟುನಿಟ್ಟಿನ ಖಡಕ್ ಮನುಷ್ಯ. ಅಜ್ಜಿ ಮೆತ್ತನೆಯ ಅಜ್ಜನ ಅನುಪಾಲಕಿ. ತಮ್ಮ ಸೀಟನ್ನು ಹುಡುಕುತ್ತ ಬಂದಿತು ಈ ವೃದ್ಧ ದಂಪತಿ. ತಮ್ಮ ಸೀಟನ್ನು ಈಗಾಗಲೇ ಯಾರೋ ಆವರಿಸಿಕೊಂಡಿರುವುದನ್ನು ಕಂಡ ಅಜ್ಜ ಅಲ್ಲಿ ಕೂತಿದ್ದ ಪ್ರಯಾಣಿಕರಿಗೆ ಮಿಲಿಟರಿ ಮೇಜರ್ ನ ರೀತಿಯಲ್ಲಿ ಸುಲಲಿತ ಮರಾಠಿಯ ಠೀವಿಯಲ್ಲಿ “ಏ ಹಮಾರಾ ಬರ್ತ್ ಹೈ, ದೇಖೋ ತೊ ಸಹೀ ಭಾಯ್…” ಎನ್ನುತ್ತಾ ಅವರು ಮರುಮಾತಿಲ್ಲದೆ ಏಳುವಂತೆ ಮಾಡಿದ್ದ. ನಂತರವೂ ತನ್ನ ಅಕ್ಕ ಪಕ್ಕ ಕೂತಿದ್ದ ಎಲ್ಲರೊಂದಿಗೂ ಅಧಿಕಾರವಾಣಿಯಲ್ಲಿ ಮಾತನಾಡತೊಡಗಿದ್ದ. ಈ ಮಧ್ಯೆ ಮುಂದಿನ ಸ್ಟೇಶನ್ನಿನಲ್ಲಿ ಇಬ್ಬರು ಅಣ್ಣ ತಂಗಿ ತಮ್ಮ ತಾಯಿಯೊಂದಿಗೆ ನಮ್ಮದೇ ಕಂಪಾರ್ಟ್ಮೆಂಟಿಗೆ ಹತ್ತಿದರು. ಇಷ್ಟು ಹೊತ್ತೂ ಆರಾಮಾಗಿ ಕೂತಿದ್ದ ಈ ಅಜ್ಜ ಹೆಚ್ಚೇನೂ ವಿರೋಧ ವ್ಯಕ್ತಪಡಿಸದೆ ಜಾಗ ಬಿಟ್ಟುಕೊಟ್ಟು. ಎಲ್ಲರೂ ಅನುಸರಿಸಿಕೊಂಡು ಕೂರಲು ಅನುವಾದ. ಈ ಅಜ್ಜ ಅವರನ್ನು ಎಲ್ಲಿಗೆ ಹೋಗ್ತಿದೀರಿ ಯಾಕೆ ಹೋಗ್ತಿದೀರಿ ಎಲ್ಲಿ ಇಳಿತೀರಿ ಅಂತೆಲ್ಲ ಅವರ ಹಿಂದುಮುಂದು ವಿಚಾರಿಸಿಕೊಂಡ. ಈ ಮಧ್ಯೆ ಈ ಅಣ್ಣನ ಹಣೆ ಮೇಲಿನ ಕಂಡೂ ಕಾಣದಂತಿದ್ದ ನಾಮವನ್ನು ಕಂಡು ಇಷ್ಟೊತ್ತೂ ಸುಮ್ಮನೇ ಕೂತಿದ್ದ ಅಜ್ಜಿ ನೀವು ಬ್ರಾಮ್ಮಿನ್ಸಾ ಅಂತ ಕೇಳಿಬಿಟ್ಟರು. ಅಜ್ಜ ಶ್ …. ಹಾಗೆಲ್ಲ ಕೇಳ್ಬಾರ್ದು ಎಂದು ಅಜ್ಜಿಯನ್ನು ಗದರಿಕೊಂಡ. ಅಜ್ಜಿಗೆ ಇರುಸುಮರುಸಾದರೂ ತಿಳಿಯುವ ಕುತೂಹಲ ಕಡಿಮೆಯಾಗಲಿಲ್ಲ. ಪಕ್ಕದಲ್ಲಿ ಕೂತಿದ್ದ ತಂಗಿ ಮಾತ್ರ ಯಾವ ಮುಜುಗರಕ್ಕೊಳಪಡದೆ ಹೌದು ಎಂದಳು. ಅಜ್ಜಿಯ ಮುಖ ಪ್ರಸನ್ನವಾಯಿತು.

ನಂತರ ಒಂದಷ್ಟು ಹೊತ್ತು ಪ್ರಯಾಣ ಸುಖಕರವಾಗಿ ಸಾಗಿತು. ನಂತರ ಲೂನಾವಾಲಾ ಸ್ಟೇಶನ್ ಬಳಿ ರೈಲು ನಿಂತುಬಿಟ್ಟಿತು. ವಿಚಾರಿಸಿದಾಗ ಮುಂದೆ ಬ್ರಿಜ್ ರಿಪೇರಿ ನಡೆದಿದೆ. ಟ್ರೇನ್ ಹೊರಡುವುದು ಒಂದು ಘಂಟೆ ತಡವಾಗಲಿದೆ ಎಂದು ತಿಳಿಯಿತು. ಕಂಪಾರ್ಟ್ಮೆಂಟಿನಲ್ಲಿದ್ದ ತಂಗಿ “ಅರೆ ನನ್ನ ಇಂಟರ್ವ್ಯೂ ಗೆ ಲೇಟ್ ಆಗುತ್ತೇನೋ… ಏನ್ಮಾಡೋದು….”ಎಂದು ಒದ್ದಾಡತೊಡಗಿದಳು. ಈಗ ಅಜ್ಜ ಅವಳನ್ನು”ಟ್ರೇನ್ ಹೀಗೆ ತಡವಾಗೋದಾದ್ರೆ ಪೇಪರ್ ಪ್ರಕಟಣೆ ಕೊಡಬೇಕು ಮುಂಚಿತವಾಗಿ. ಅದೂ ಒಂದು ವಾರ ಮುಂಚೆ. ನೀವೇನಾದ್ರೂ ಪೇಪರ್ ಗಮನಿಸಿದ್ದಿರಾ?” ಎಂದು ಕೇಳಿದ. ಇಲ್ಲ “ನಮ್ಗಿದೆಲ್ಲ ಗೆತ್ತಿರ್ಲಿಲ್ ರಿ” ಎಂದಳು. “ಛೇ ಪ್ರಯಾಣ ಹೊರಡೊ ಮುಂಚೆ ಸಕ್ಕರೆ ಮೊಸರು ತಿಂದು ಬರ್ಬೇಕಂತ ಶಾಸ್ತ್ರ ಐತಿ, ನೀವು ತಿಂದ್ ಬಂದಿದ್ರೋ ಇಲ್ವೋ” ಪಕ್ಕದಲ್ಲಿದ್ದವರನ್ನು ಕೇಳಿದಳು ಅಜ್ಜಿ. “ಇಲ್ರಿ ನಾವೆಲ್ಲ ಸಕ್ರಿ ಮೊಸ್ರು ತಿಂದ ಟ್ರೇನ್ ಹತ್ತಿದ್ದು” ಎಂದರವರು ಒಕ್ಕೊರಲಿನಿಂದ. ಅಜ್ಜಿ “ನಮ್ಗೆ ಡಯಾಬೆಟೀಸು ಹಂಗಾಗಿ ಮೊಸರಷ್ಟೇ ತಿಂದು ಬಂದಿದ್ವಿ ” ಅಂದರು. ಅದಕ್ಕೆ ಅಜ್ಜ “ಏ ಒಂದೊದ್ ಸಲ ಹಿಂಗೆಲ್ಲ ಆಗ್ತತಿ..”ಏನೂ ಮಾಡೂದಾಗಲ್ಲ ಎಂದ ಅಜ್ಜ. ಕಾಲೇಜಿನಲ್ಲಿ ಮಾಸ್ತರಿಕೆ ಮಾಡುತ್ತಿದ್ದ ಆ ಅಣ್ಣ ಹೇಗೆ ಮೊಸರು ಸಕ್ಕರೆ ತಿನ್ನೋದ್ರಿಂದ ಪ್ರಯಾಣ ಒಳ್ಳೇದಾಗ್ತದೆ ಎಂದು ಪುಟ್ಟ ಭಾಷಣ ಬಿಗಿದ. ಅಜ್ಜ ನಡುನಡುವೆ ಒಮ್ಮೊಮ್ಮೆ ಒಪ್ಪಿ ಒಮ್ಮೊಮ್ಮೆ ಒಣ ವೈಚಾರಿಕತೆಯ ಮಾತನಾಡಿ ಮಾಡಿದ.

ಟ್ರೇನ್ ಹೊರಟಿತು. ಪ್ರಯಾಣ ಸಾಗಿತು. ಈ ತಂಗಿ ಒಮ್ಮೆ ತನ್ನ ತಾಯಿಯಲ್ಲಿ ಹಸಿವು ಎಂದಳು. ಆದರವರು ತಿನ್ನಲು ಏನೂ ತಂದಿಲ್ಲದಿರುವುದನ್ನು ತಿಳಿದ ಅಜ್ಜಿ ನಮ್ಮಲ್ಲಿ ಚಪಾತಿ ಪಲ್ಯವಿದೆ ತಿನ್ನಿ ಎಂದು ಒತ್ತಾಯಿಸತೊಡಗಿದರು. ಆದರೆ ತಂಗಿ ಯಾವುದೇ ಕಾರಣಕ್ಕೂ ತಿನ್ನಲು ಒಪ್ಪದೆ ಭೇಲ್ ಪುರಿ ಕೊಂಡುಕೊಂಡು ತಿನ್ನತೊಡಗಿದಳು. ಅಜ್ಜಿಗೆ ಸ್ವಲ್ಪ ಬೇಸರವಾಗಿರಬೇಕು. ನಂತರ ಸ್ವಲ್ಪ ಹೊತ್ತು ಸುಮ್ಮನೇ ಕೂತಳು. ಮುಂದೆ ಪೂನಾದಲ್ಲಿ ಆ ಅಣ್ಣತಂಗಿ ಮತ್ತವರ ತಾಯಿ ಇಳಿದು ಹೋದರು. ಇವರಿಬ್ಬರು ಒಂದಷ್ಟು ಹೊತ್ತು ಏನೇನೋ ಮಾತಾಡಿಕೊಂಡರು. ಕೊನೆಗೆ ಡೊಂಬಿವ್ಲಿಯಲ್ಲಿ ಇಳಿದು ಹೋದರು.

ನಂತರ ನಾವು ಮುಂಬೈನಿಂದ ಮರಳಿ ಬರುವಾಗ ನಮ್ಮ ಕಂಪಾರ್ಟ್ಮೆಂಟಿಗೆ ಒಂದು ವೃದ್ಧ ಮುಸ್ಲಿಂ ದಂಪತಿ ಬಂದು ಕೂತಿತು. ಅಜ್ಜನಿಗೆ ಹೆಚ್ಚೂ ಕಡಿಮೆ ತೊಂಬತ್ತರ ಆಸುಪಾಸು ಮತ್ತು ಅಜ್ಜಿ ಅವರಿಗಿಂತ ಒಂದೈದು ವರ್ಷ ಚಿಕ್ಕವರಿದ್ದರಿರಬಹುದು ಅಷ್ಟೇ. ಅವರು ಆ ವಯಸ್ಸಿನಲ್ಲೂ ಎಷ್ಟು ಲಕ್ಷಣವಾಗಿದ್ದರೆಂದರೆ ತಮ್ಮ ಹದಿವಯಸ್ಸಿನಲ್ಲಿ ಹೇಗಿದ್ದಿರಬಹುದು ಎನ್ನುವ ಆಲೋಚನೆ ಬಂದು ಅವರನ್ನೇ ನೋಡುತ್ತ ಕೂತುಬಿಟ್ಟೆ ಒಂದಷ್ಟು ಹೊತ್ತು. ನಂತರ ಸ್ವಲ್ಪ ಹೊತ್ತಿನಲ್ಲಿ ಅಲ್ಲಿಗೆ ಹೆಣ್ಣುಮಗಳೊಬ್ಬಳು ಬಂದು ಅಜ್ಜನ ಬರ್ತ್ ನ್ನು ನನ್ನದು ಎಂದು ಜಗಳವಾಡತೊಡಗಿದಳು. ಆದರೆ ಈ ಅಜ್ಜ ತಾನೂ ಅಷ್ಟು ಸುಲಭವಾಗಿ ಬಿಟ್ಟುಕೊಡಲು ತಯಾರಿರಲಿಲ್ಲ. ಕಾರಣ ಕಾಲು ನೋವಿನಿಂದಾಗಿ ಮೇಲಿನ ಬರ್ತ್ ಗೆ ಹತ್ತುವುದು ಕಷ್ಟವಾಗುತ್ತಿತ್ತು ಅವರಿಗೆ. ಇಲ್ಲ ಇದು ನನ್ನ ಸೀಟು ಎಂದು ಸ್ವಲ್ಪ ಹೊತ್ತು ವಾದ ಮಾಡಿದ. ಆದರೆ ಆ ಗಟ್ಟಿಗಿತ್ತಿ ಹೆಣ್ಣುಮಗಳು ಇಲ್ಲ ಇದು ನನ್ನದೇ ಬರ್ತು ರಾತ್ರಿವರೆಗೂ ಬೇಕಾದ್ರೆ ಅಡ್ಜಸ್ಟ್ ಮಾಡ್ಕೊತೀನಿ. ಆದ್ರೆ ರಾತ್ರಿ ನೀವು ಮೇಲೆ ಹೋಗ್ಲೇಬೇಕು ಎಂದು ಧಮ್ಕಿ ಹಾಕಿ ಮೇಲಿನ ಸೀಟ್ ಹತ್ತಿದಳು.

ರಾತ್ರಿ ಆದದ್ದೇ ಮತ್ತೆ ಅದೇ ಇರುಸುಮುರುಸು. ಆದರೆ ಆ ಆಂಟಿ ಯಾವುದೇ ಕಾರಣಕ್ಕೂ ಬರ್ತ್ ಬಿಟ್ಟುಕೊಡಲು ತಯಾರಿರಲಿಲ್ಲ. ಈಗ ಅಜ್ಜ ಮೇಲೆ ಹತ್ತಲೇಬೇಕಾಯಿತು. ಆದರೆ ಅವರಿಬ್ಬರಿಗೂ ಈ ಕನ್ಫೂಶನ್ ಯಾಕಾಯ್ತು ಎನ್ನುವುದು ನೋಡುತ್ತಿದ್ದ ನಮಗೂ ಅರ್ಥವಾಗಲಿಲ್ಲ.

ಕೊನೆಗೆ ತಿಳಿದದ್ದೇನೆಂದರೆ 32, 33, 34 ಎಂದು ಸೀಟ್ ನಂಬರನ್ನು ಕೆಳಗಿನಿಂದ ಮೇಲಕ್ಕೆ ಹಾಕಬೇಕಾಗಿದ್ದದ್ದನ್ನು ಮೇಲಿನಿಂದ ಕೆಳಕ್ಕೆ ಹಾಕಲಾಗಿಬಿಟ್ಟಿತ್ತು. ಆದರೆ ಕಂಪಾರ್ಟ್ಮೆಂಟಿನ ಮೇಲ್ಭಾಗದಲ್ಲಿ ಆ ಸಂಖ್ಯೆ ಸರಿಯಾಗಿ ನಮೂದಾಗಿತ್ತು. ಇದನ್ನು ಯಾರೊಬ್ಬರೂ ಗಮನಿಸಿರಲಿಲ್ಲ ಮತ್ತು ಟಿ.ಸಿ. ಯನ್ನು ವಿಚಾರಿಸುವ ಗೋಜಿಗೂ ಹೋಗಿರಲಿಲ್ಲ. ಕೊನೆಗೆ ಅಜ್ಜ ಮತ್ತು ಅಜ್ಜಿ ಬೀದರ್ ನಲ್ಲಿ ಇಳಿದು ಹೋದರು….

ಆಶಾಜಗದೀಶ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *