ಟ್ಯೂನು, ಲೈನು ಮತ್ತು ನಾನು: ಹೃದಯಶಿವ

ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಪರಮೇಶ್ವರ ಹೆಗಡೆಯವರು ಸಂಗೀತ ನೀಡುತ್ತಿರುವ ಆಲ್ಬಮ್ ನಲ್ಲಿ ನಾಲ್ಕು ಹಾಡು ಬರೆಯುತ್ತಿದ್ದೇನೆ ಅಂತ ಹಿಂದೊಮ್ಮೆ ಹೇಳಿದ್ದೆ. ಪರಮೇಶ್ವರ ಹೆಗಡೆಯವರ ಮಾತಿನಂತೆ ಮೊದಲೇ ಸಾಹಿತ್ಯ ಬರೆದುಕೊಡುವಂತೆ, ಆಮೇಲೆ ಆ ಸಾಹಿತ್ಯಕ್ಕೆ ಅವರು ಟ್ಯೂನ್ಸ್ ಹಾಕುವುದಾಗಿ ಹೇಳಿದ್ದರು. ಅದರಂತೆ ನನ್ನ ಆರು ಭಾವಗೀತೆಗಳನ್ನು ಅವರಿಗೆ ಕಳುಹಿಸಿಕೊಟ್ಟೆ. ಆ ಆರರ ಪೈಕಿ ನಿಮಗೆ ಬೇಕಾದ ನಾಲ್ಕನ್ನು ಆಯ್ಕೆ ಮಾಡಿಕೊಳ್ಳಿ ಅಂತಲೂ ಹೇಳಿದೆ. ಅವರು ಆಯ್ತು ಅಂದು ಅದರಂತೆ ಆ ಆರರ ಪೈಕಿ ಒಂದಕ್ಕೆ ಟ್ಯೂನ್ ಕೂಡ ಹಾಕಿದ್ದೇನೆ ಅಂತ ಸ್ವಲ್ಪ ದಿನಗಳ ನಂತರ ನನಗೊಂದು ಮೆಸೇಜ್ ಮಾಡಿದ್ದರು. ಆಗ ಕೇರಳದಲ್ಲಿದ್ದ ನಾನು 'ಪೂರ್ತಿ ರೆಡಿಯಾದ ನಂತರ ಕೇಳೋಣ ಸಾರ್' ಅಂತ ತಿಳಿಸಿ ಸುಮ್ಮನಾದೆ. ಪರಮೇಶ್ವರ ಹೆಗಡೆಯವರ ಸಂಗೀತದ ಬಗ್ಗೆ ಅಪಾರವಾದ ಗೌರವವಿರುವ ನಾನು ಅವರ ಸಂಗೀತದಲ್ಲಿ ನನ್ನ ಸಾಹಿತ್ಯಕ್ಕೆ ಬೇರೆಯದೇ ಕಳೆ ಒದಗಿಬರಬಹುದು ಅಂತ ಭಾವಿಸಿದ್ದೆ. ಇಷ್ಟಕ್ಕೂ ಸಿ.ಅಶ್ವಥ್ ಅವರ ಸಂಗೀತದಲ್ಲಿ ನಾನು ಬರೆದ ಸಾಹಿತ್ಯ ಗೀತೆಗಳಾಗಬೇಕು ಅನ್ನುವ ದೊಡ್ಡ ಕನಸು ನನಗಿತ್ತು. ಆ ಕನಸು ಕನಸಾಗೇ ಉಳಿಯಿತು ಕೂಡ. ಪರಮೇಶ್ವರ ಹೆಗಡೆಯವರ ಸಂಗೀತದಲ್ಲಾದರೂ ನನ್ನ ಸಾಹಿತ್ಯ ಬೇರೆ ತರಹ ಮರುಹುಟ್ಟು ಪಡೆಯಬಹುದು, ನನ್ನ ಸಿನಿಮಾ ಹಾಡುಗಳಿಗಿಂತ ಭಿನ್ನ ಅನ್ನಿಸಬಹುದು ಅಂತ ಭಾವಿಸಿದ್ದು ಈ ಕಾರಣಕ್ಕೆ. ಇದೆಲ್ಲ ನಡೆದದ್ದು ಸುಮಾರು ಒಂದೂವರೆ ತಿಂಗಳ ಹಿಂದೆ. 

ಇಷ್ಟೆಲ್ಲಾ ಹೇಳಿದ ಮೇಲೆ ನಾನು ಹೇಳಬೇಕಾದ ಮಾತೆಂದರೆ ಮೊನ್ನೆಮೊನ್ನೆಯಷ್ಟೇ ಪರಮೇಶ್ವರ ಹೆಗಡೆಯವರು ಫೋನ್ ಮಾಡಿ, "ನೀವು ಕಳಿಸಿಕೊಟ್ಟಿರುವ ಸಾಹಿತ್ಯಕ್ಕೆ ಟ್ಯೂನ್ಸ್ ಹಾಕಲು ಸಾಧ್ಯವಾಗುತ್ತಿಲ್ಲ. ಬದಲಿಗೆ ನಾನೇ ನಾಲ್ಕು ಟ್ಯೂನುಗಳನ್ನು ನಿಮಗೆ ಕಳಿಸುತ್ತೇನೆ, ಆ ಟ್ಯೂನ್ ಗಳಿಗೆ ಸಾಹಿತ್ಯ ಬರೆದುಬಿಡಿ" ಅಂದರು. ಆ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ಟ್ಯೂನಿಗೆ ಬರೆಯುವುದು ನನಗೆ ಕಷ್ಟದ ಕೆಲಸವೇನಲ್ಲ. ಒಂದೇ ಒಂದು ಸಿನಿಮ ಮಾಡಿದರೆ ಬರೆದರೆ ಸಾಕು ಜನ್ಮ ಸಾರ್ಥಕ ಅನ್ನುವ ಛಲಕ್ಕೆ ಬಿದ್ದು ಮಾಡುವ ಕೆಲಸವನ್ನು ಬಿಟ್ಟು ಗುರುಕಿರಣ್ ಬಾ ಅಂದಾಗಲೆಲ್ಲ ಕೇರಳದಿಂದ ಬೆಂಗಳೂರಿಗೆ ಓಡೋಡಿ ಬಂದು ಅವರನ್ನು ಕಾಣುತ್ತಿದ್ದವನು. ಅಶ್ವಿನಿ ಸ್ಟುಡಿಯೋ ಮುಂದೆ ನಿಂತಿರುತ್ತಿದ್ದ ಅವರ ಸ್ಯಾಂಟ್ರೋ ಕಾರು ಕಂಡು 'ಸಂಜೆಯೊಳಗಾದರೂ ಹೊರಗೆ ಬರುತ್ತಾರೆ, ರಾತ್ರಿಯೊಳಗಾದರೂ ಬಂದೆ ಬರುತ್ತಾರೆ' ಅಂತ ಕಾಯುತ್ತಾ ನಿಂತವನು. ಬಂದವರೇ ಗಡಿಬಿಡಿಯಲ್ಲಿ ಕಾರು ಹತ್ತಿ ಹೊರಡುವ ಮುನ್ನ ನಾನು ಬರೆದು ಬ್ಯಾಗಿನಲ್ಲಿ ಹಾಕಿಕೊಂಡು ಬಂದಿದ್ದ ಚೂರುಪಾರು ಸಾಹಿತ್ಯವನ್ನು ಅವರಿಗೆ ತೋರಿಸುತ್ತಿದ್ದವನು. ಆ ಹಾಳೆಗಳನ್ನು ನೋಡಿದ ಅವರ ಕಣ್ಣುಗಳು ಏನನ್ನು ಹೇಳಬಹುದು ಅಂತ ಅವುಗಳತ್ತಲೇ ಸಂಪೂರ್ಣ ನನ್ನನ್ನೇ ನೆಟ್ಟವನು. ಒಂದೇ ಒಂದು ಟ್ಯೂನ್ ಕೊಟ್ಟರೆ ಸಾಕು ನನ್ನ ಶಕ್ತಿ ಏನಂತ ತೋರಿಸಿಬಿಡುತ್ತೇನೆ ಆತ್ಮವಿಶ್ವಾಶದಿಂದ ಬೀಗಿದವನು. 

ಕಡೆಗೊಂದು ದಿನ ಅವರು  'ತಗೋ ಈ ಟ್ಯೂನ್ ಗೆ ಏನ್ ಬರಿತಿಯೋ ಬರಿ' ಅಂದಾಗ ಕೆಲವೇ ನಿಮಿಷಗಳಲ್ಲಿ ಒಂಭತ್ತು ಪಲ್ಲವಿಗಳನ್ನು ಬರೆದು ತೋರಿಸಿದವನು. ಅದನ್ನು ನೋಡಿ ಮೆಚ್ಚಿದ ಅವರು ನನ್ನ ಹೆಗಲ ಮೇಲೆ ಕೈ ಹಾಕಿಕೊಂಡು ಅಶ್ವಿನಿ ಸ್ಟುಡಿಯೋ ಒಳಕ್ಕೆ ನನ್ನನ್ನು ಕರೆದೊಯ್ದು 'ಈಗ ನೀನು ಮಾಡುತ್ತಿರುವ ಜಾಬ್ ಬಿಟ್ಟುಬಿಡು' ಅಂತ ಹೇಳುವ ಮೂಲಕ ನಾನು ಸಿನಿಮಾ ಹಾಡುಗಳನ್ನೇ ಬರೆದು ಬದುಕಬಲ್ಲೆ ಎಂಬ ಧೈರ್ಯವನ್ನು ನೀಡಿದಾಗ ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿಕೊಂಡವನು. ಅದರಂತೆಯೇ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಟ್ಯೂನುಗಳಿಗೆ ಪದ ಜೋಡಿಸುವ ಕೆಲಸವನ್ನು ವೃತ್ತಿಯಾಗಿಸಿಕೊಂಡವನು. ಸುಮಾರು ಐನೂರಕ್ಕೂ ಹೆಚ್ಚು ಟ್ಯೂನುಗಳಿಗೆ ಪದಗಳನ್ನು ಹೊಂದಿಸಿದವನು. ಕಡೆಗೆ ಇದೆಲ್ಲ ಯಾವ ಸೀಮೆಯ ಕೆಲಸ? ಯಾರೋ ಕೊಟ್ಟ ಸನ್ನಿವೇಶಕ್ಕೆ, ಯಾರೋ ಮಾಡಿದ ಟ್ಯೂನಿಗೆ ಪದ ಜೋಡಿಸುವ ಹಾಡುಗಳಲ್ಲಿ ನನ್ನ ಸ್ವಂತಿಕೆಯ ಪಾಲೆಷ್ಟು? ಈ ಕೆಲಸ ಮಾಡುವ ಸಲುವಾಗಿಯೇ ನಾನು ನನ್ನ ಬದುಕನ್ನೇ ಮುಡುಪಿಟ್ಟು, ಒಳ್ಳೆಯ ದುಡಿಮೆ ಇದ್ದ ಕೆಲಸವನ್ನು ಬದಿಗಿಟ್ಟು ಗುರುಕಿರಣ್ ಮನೆ ಮುಂದೆ ನಿಲ್ಲಿತ್ತಿದ್ದೆನಾ? ಕಳೆದ ಈ ಅವಧಿಯಲ್ಲಿ ನಿರ್ದೇಶಕರ ತಾಳಕ್ಕೆ ಕುಣಿಯಲಾಗದೆ, ಸಂಗೀತ ನಿರ್ದೇಶಕರು ರೂಪಿಸಿದ ಹುನ್ನಾರಗಳ ಕಂಡು ಒಳಗೇ ನಕ್ಕು ನಾನೇ ಅವರೆಲ್ಲರಿಂದ ದೂರ ಉಳಿದು, ಆ ಪ್ರಪಂಚದಲ್ಲಿ ಇದ್ದಂತೆಯೂ ಇಲ್ಲದಂತೆ, ಇಲ್ಲದಂತೆಯೂ ಇದ್ದಂತೆ ಇದ್ದು ಈಗ ಹೊಸಹುಟ್ಟಿಗಾಗಿ ನನ್ನದೇ ಕನ್ನಡಿಯಲ್ಲಿ ನನ್ನದೇ ಇನ್ನೊಂದು ರೂಪವನ್ನು ಕಾಣಲು ತುಡಿಯಬೇಕಾಯಿತಲ್ಲ ಅನ್ನುವ ಜಿಜ್ಞಾಸೆಗೆ ಒಳಗಾದವನು. ಸಿನಿಮಾಗಳಿಗೆ ನಾನು ಬರೆಯುವ ಹಾಡುಗಳಲ್ಲಿ ತೃಪ್ತಿ ಸಿಕ್ಕದೆ ಯಾವನೂ ಮೂಗು ತೂರಿಸದ ನನ್ನನ್ನೇ ಪ್ರತಿಬಿಂಬಿಸುವ ಕವಿತೆಗಳನ್ನು ಬರೆಯತೊಡಗಿದವನು. 

'ಸಾರ್ ನಾನೂ ಚಿತ್ರಸಾಹಿತಿಯಾಗಬೇಕು' ಅಂತ ನನ್ನಲ್ಲಿ ಹೇಳಿಕೊಳ್ಳುವ ಹೊಸಹುಡುಗರಿಗೆ, "ಆ ಹುಚ್ಚು ಬಿಡ್ರೋ, ನೀವು ಯಾರಾದರೂ ನಿರ್ದೇಶಕರ ಬಳಿ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿ ಕೆಲಸ ಕಲಿತು, ನೀವುಗಳೇ ಡೈರೆಕ್ಟರ್ ಆಗ್ರೋ… ಆಗ ನಿಮ್ಮ ಸಿನಿಮಾಗೆ ನೀವೇ ಎಷ್ಟು ಹಾಡು ಬೇಕೋ ಅಷ್ಟನ್ನೂ ಬರಕೋಬಹುದು. ಮೊದ್ಲು ಕನ್ನಡ ಸಾಹಿತ್ಯಾನ ಆಳದಲ್ಲಿ ಹೋಗಿ ಹಿಡಕೊಳ್ರೋ… ಮೊದ್ಲು ಬೀಜ ಬಲೀಲಿ. ಆಮೇಲೆ ಮರ ಜಾಸ್ತಿ ಕಾಲ ಬಾಳಿಕೆ ಬರ್ತದೆ… ಇಷ್ಟಕ್ಕೂ ನೀವ್ಯಾರೂ ಸಿನಿಮಾ ಹಾಡು ಬರೀಲಿಲ್ಲ ಅಂದ್ರೆ ಯಾವ ಸಾಮ್ರಾಜ್ಯನೂ ಉರುಳೋದಿಲ್ಲ. ಸಿನಿಮಾ ಹಾಡು ಯಾವ್ ನನ್ಮಗ ಬೇಕಾದ್ರೂ ಬರಿಬಹುದು. ಕಾಗುಣ್ತ ಗೊತ್ತಿಲ್ದೆ ಇರೋರೆಲ್ಲ ಕನ್ನಡ ಸಿನಿಮಾಗಳಿಗೆ ಸಾಂಗ್ ಬರಿಯೋ ಜಮಾನ ಇದು. ಮೊದ್ಲು ಕವನ ಬರೆಯೋದು ರೂಢಿ ಮಾಡ್ಕೊಳ್ರೋ… ಗಾಂಧಿನಗರದಲ್ಲಿ ಹಾಡು ಬರೆಯೋರು ಕವನ ಬರ್ದಿದ್ ನನಗಂತೂ ಗೊತ್ತಿಲ್ಲಪ್ಪ… ಇಷ್ಟಕ್ಕೂ ಈ ಚಿತ್ರಸಾಹಿತಿ ಅನ್ನೋ ಲೇಬಲ್ಗೆ ಖಂಡಿತವಾಗಿ ಫ್ಯೂಚರ್ ಇಲ್ಲ ಹುಡುಗ್ರಾ. ಇದನ್ನ ನಂಬ್ಕೊಬೇಡ್ರೋ, ಯಾವ್ದೇ ಕಾರಣಕ್ಕೂ ನೀವೀಗ ಮಾಡ್ತಿರೋ ಕೆಲಸ ಬಿಡಬೇಡ್ರೋ , ಇದನ್ನೇ ನಂಬ್ಕೊಂಡು ಗಾಂಧಿನಗರಕ್ಕೇನಾದ್ರೂ ಬಂದಿದ್ರೆ ಮೊದ್ಲು ಒಂದು ಕೆಲಸ ಹುಡುಕ್ಕೊಂಡು ಅಂಡರ್ ವೇರ್ ಗೆ ಮಿನಿಮಮ್ ನೂರುಪಾಯ್ ದುಡ್ಕೊಳ್ರೋ. " ಅಂತ ಹೇಳಿ ಅವರನ್ನು ನನಗೆ ಗೊತ್ತಿರುವ ನಿರ್ದೇಶಕರ ಹತ್ತಿರ ಕಳಿಸಿದ್ದೇನೆ. 

ಅದಿರಲಿ, ನನಗೆ ಪರಮೇಶ್ವರ ಹೆಗಡೆಯವರ ವಿಷಯದಲ್ಲಿ ಆಶ್ಚರ್ಯವಾಗಲು ಕಾರಣವಾಗಿದ್ದು ಸದಭಿರುಚಿಯ, ಸದಭಿರುಚಿ  ಸಂಗೀತದ ಹಿನ್ನೆಲೆಯುಳ್ಳ, ಪ್ರತಿಭಾವಂತ ಗಾಯಕಿ ವಸುಂಧರಾ ದಾಸ್ ತರಹದ ಶಿಷ್ಯರನ್ನು ಹೊಂದಿರುವ  ಪ್ರಖ್ಯಾತ ಪರಮೇಶ್ವರ ಹೆಗಡೆಯಂತಹ ಸಂಗೀತ ನಿರ್ದೇಶಕರು 'ಟ್ಯೂನಿಗೆ ಬರೀರಿ' ಅನ್ನೋದಿದೆಯಲ್ಲ ಅದು ನಿಜಕ್ಕೂ ಬೇಸರ ತರುವಂಥದ್ದು. ಇಷ್ಟಕ್ಕೂ ಅತ್ತ ಭಾವಗೀತೆಯೂ ಅಲ್ಲದ, ಇತ್ತ ಚಿತ್ರಗೀತೆಯೂ ಅಲ್ಲದ ಶೈಲಿಯ ಆಲ್ಬಮ್ ಮಾಡಲು ಹೊರಟಿರುವ ಇವರು ಹೇಳಿದ ಇನ್ನೊಂದು ಮಾತೆಂದರೆ, "ನೀವು ಕಳುಹಿಸಿಕೊಟ್ಟಿರುವ ಸಾಹಿತ್ಯ ಭಾವಗೀತೆಗಳ ಸಾಹಿತ್ಯದಂತಿದೆ. ಸಾಧ್ಯವಾದಷ್ಟು ಫಿಲ್ಮಿಯಾಗಿರಲಿ" ಅಂತ. ಇಷ್ಟಕ್ಕೂ ಫಿಲ್ಮಿ ಸಾಹಿತ್ಯ ಅಂದರೆ ಏನು ಅಂತ ನನಗೆ ಅರ್ಥವಾಗಲಿಲ್ಲ. ಸಾಹಿತ್ಯ ಸಾಹಿತ್ಯವಷ್ಟೇ. ಅವರ ಆ ಮಾತಿಗೆ ಪ್ರತಿಕ್ರಿಯುತ್ತಾ, "ಸಾಹಿತ್ಯ ಸಾಹಿತ್ಯವಷ್ಟೇ ಸಾರ್. ಅದರಲ್ಲಿ ಭಾವಗೀತೆ ಸಾಹಿತ್ಯ, ಫಿಲ್ಮಿ ಸಾಹಿತ್ಯ ಅಂತೇನೂ ಇಲ್ಲ. ನೀವು ಮಾಡುವ ಟ್ಯೂನ್ ಮೇಲೆ, ಕೊಡುವ ಫೀಲ್ ಮೇಲೆ ಆ ಹಾಡು ಯಾವ ಬಗೆಯದ್ದು ಎಂಬುದು ನಿರ್ಧಾರವಾಗುತ್ತದೆ. ಕೇಳಿದವರು ನಿರ್ಧರಿಸುತ್ತಾರೆ. ಉದಾ: ಬಿ.ಆರ್.ಲಕ್ಷ್ಮಣರಾವ್ ಬರೆದಿದ್ದ 'ಬಾ ಮಳೆಯೇ ಬಾ' ಹಾಡು ಮೊದಲು ಭಾವಗೀತೆಗಳ ಕ್ಯಾಸೆಟ್ ನಲ್ಲಿ ಸೇರಿಕೊಂಡು ನಿಧಾನಗತಿಯ ರಾಗದ, ಅಬ್ಬರದ ಸಂಗೀತವಿಲ್ಲದ ಹಾಡಾಗಿತ್ತು. ಅದೇ ಹಾಡನ್ನು ಮುಂದೆ 'ಆಕ್ಸಿಡೆಂಟ್' ಚಿತ್ರಕ್ಕೆ ಬಳಸಿಕೊಳ್ಳುವಾಗ ಸಿನಿಮಾಗೆ ಹೇಗೆ ಬೇಕೋ ಹಾಗೆ ಟ್ಯೂನ್ ಹಾಕಿಕೊಂಡರು. ಅಲ್ಲಿದ್ದ ಸಾಹಿತ್ಯವೇ ಇಲ್ಲೂ ಇತ್ತು. ಟ್ಯೂನ್ ಮಾತ್ರ ಬೇರೆಯದಾಗಿತ್ತು. 

ಈ ಮಾತು ಯಾಕೆ ಹೇಳುತ್ತಿದ್ದೇನೆಂದರೆ, ನಾನು ಟ್ಯೂನುಗಳಿಗೆ ಬರೆಯುವ ಚಿತ್ರಸಾಹಿತಿ. ಪ್ರತಿ ಹಾಡು ಬರೆದಾಗಲೂ ಇಲ್ಲಿ ನಾನು ಎದುರಿಸುವ ಸವಾಲುಗಳು ಹಲವಾರು. ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಎಷ್ಟೋ ಜನ ನಿರ್ದೇಶಕರು ಈ ಸಾಲು ಹಾಗೆ ಬರೆಯಿರಿ, ಆ ಪದ ಹೀಗೆ ಬದಲಾಯಿಸಿ ಅಂತೆಲ್ಲಾ ವೃಥಾ ಮೂಗು ತೂರಿಸುತ್ತಾರೆ. ಚೆನ್ನಾಗಿರುವ ಸಾಹಿತ್ಯವನ್ನು ಯಕ್ಕುಟ್ಟಿಸಿಬಿಡುತ್ತಾರೆ. ಅದೇ ರೀತಿ ಸಂಗೀತ ನಿರ್ದೇಶಕರು ಕೂಡ ಇದು ಸರಿಯಿಲ್ಲ, ಅದು ಸರಿಯಿಲ್ಲ ಅಂತೆಲ್ಲಾ ಅಧಿಕಪ್ರಸಂಗಿತನ ತೋರಿಸುತ್ತಾರೆ. ಇಷ್ಟಕ್ಕೂ ಒಂದು ಟ್ಯೂನನ್ನು ಡೈರೆಕ್ಟರ್ ಓಕೆ ಮಾಡಿದ ಮೇಲೆ ಆ ಟ್ಯೂನ್ ಎಷ್ಟೇ ಕೆಟ್ಟದಾಗಿದ್ದರೂ, ಖರಾಬಾಗಿದ್ದರೂ ನಾನು ಮರುಮಾತಾಡದೆ ಬರೆಯುತ್ತೇನೆ. ಯಾಕೆಂದರೆ ಆ ಟ್ಯೂನನ್ನು ನಿರ್ದೇಶಕ ಅನ್ನುವ ಒಬ್ಬ ಜವಾಬ್ಧಾರಿಯುತ ವ್ಯಕ್ತಿ ಓಕೆ ಮಾಡಿರುತ್ತಾನೆ ಅನ್ನುವ ಒಂದೇ ಕಾರಣಕ್ಕೆ. ಅದೇ ರೀತಿಯಲ್ಲಿ ನಾನು ಬರೆದ ಸಾಹಿತ್ಯವನ್ನು ಒಮ್ಮೆ ನಿರ್ದೇಶಕ ಓಕೆ ಮಾಡಿದ ಮೇಲೆ ಈ ಸಂಗೀತ ನಿರ್ದೇಶಕರು ಯಾಕೆ ಮಧ್ಯದಲ್ಲಿ ಬಂದು ಇದು ಚೇಂಜ್ ಮಾಡಿ… ಅದು ಚೇಂಜ್ ಮಾಡಿ ಅನ್ನಬೇಕು. ಅವರ ಪ್ರಕಾರ ನಿರ್ದೇಶಕ ದಡ್ಡನಾ? ನಾನು ಬರೆದ ಸಾಲುಗಳು ತನ್ನ ಟ್ಯೂನಿಗೆ ಇದೆಯಾ ಇಲ್ಲವಾ… ಅಷ್ಟು ಮಾತ್ರ ನೋಡುವುದು ಸಂಗೀತ ನಿರ್ದೇಶಕರ ಕೆಲಸ, ಮಿತಿ. ಹಾಗಾದರೆ 'ಈ ಟ್ಯೂನ್ ಚೆನ್ನಾಗಿಲ್ಲ. ಅನುಪಲ್ಲವಿ ಚೇಂಜ್ ಮಾಡಿ' ಚರಣ ಡಬ್ಬಾ ಥರ ಇದೆ. ಬೇರೆಯದನ್ನು ಮಾಡಿ. ಆಮೇಲೆ ಬರೆಯುತ್ತೇನೆ' ಅಂತ ನಾನೂ ಹೇಳಬಹುದು ಅಲ್ಲವಾ? ಸೋ, ಇವೆಲ್ಲವುಗಳಿಂದ ನಾನು ರೋಸಿಹೊಗಿದ್ದೇನೆ. ಈ ಟ್ಯೂನಿಗೆ ಬರೆಯುವ ಹಣೆಬರಹ ಸಿನಿಮಾಗೆ ಸಾಕು. ಇದು ಸಿನಿಮಾ ಹಾಡು ಬರೆಯುವವರಿಗೆ ಅನಿವಾರ್ಯ ಕೂಡ. ಅದಕ್ಕೆ ನಾವು ಒಗ್ಗಿಕೊಂಡಿರುತ್ತೇವೆ ಕೂಡ. ಅಂದಹಾಗೆ ನೀವು ಮಾಡುತ್ತಿರುವ ಆಲ್ಬಮ್ ಗೆ ನನ್ನ ಸಾಹಿತ್ಯ ಬೇಕೆಂದಲ್ಲಿ ನಾನು ಕಳಿಸಿರುವ ಸಾಹಿತ್ಯಕ್ಕೆ ನಿಮಗೆ ಬೇಕಾದ ಹಾಗೆ ಟ್ಯೂನ್ ಹಾಕಿಕೊಳ್ಳಿ. ಆದರೆ ನಿಮ್ಮ ಟ್ಯೂನ್ ಗಳಿಗೆ ಬರೆಯಲು ನನ್ನಿಂದ ಸಾಧ್ಯವಿಲ್ಲ, ಕ್ಷಮಿಸಿ ಸಾರ್" ಅಂತ ಹೇಳಿದೆ. 

ಅದಕ್ಕವರು, "ಅದು ಹಾಗಲ್ಲ… ಇದು ಹೀಗಲ್ಲಾ.." ಅಂತ ಏನೇನೋ ಹೇಳಿ ಕಡೆಗೆ, "ನೀವು ನನಗೆ ಕಳಿಸಿರುವ ಸಾಹಿತ್ಯದಲ್ಲಿ ಯಾವುದಾದರನ್ನು ಬಳಸಿಕೊಂಡರೆ ನಿಮಗೆ ತಿಳಿಸುತ್ತೇನೆ" ಅಂತ ಹೇಳಿ ಸುಮ್ಮನಾದರು. ನಾನು "ಆಯ್ತು" ಅಂತ ಹೇಳಿ ಫೋನ್ ಕಟ್ ಮಾಡಿ ಆಕಾಶದೆಡೆಗೆ ಕಣ್ಣು ಹೊರಳಿಸಿದೆ. ಚಂದಿರ ನಗುತ್ತಿದ್ದ. 
-ಹೃದಯಶಿವ 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಶಿವಾ, ತುಂಬಾ ಹೃದಯಸ್ಪರ್ಶಿ ಬರಹ! ಓದಿ ನಿಜಕ್ಕೂ ಬೇಜಾರಾಯ್ತು… ಟ್ಯೂನ್ ಗೆ ಹಾಡು ಬರೆಯೋದು ತುಂಬಾ ಹಿಂಸೆಯ ಕೆಲಸ ಅಂತ ಒಮ್ಮೆ ಶ್ರೀ. ಜಯಂತ್ ಕಾಯ್ಕಿಣಿ ಹೇಳಿದ್ದು ಕೇಳಿ ಹೌದೆ? ಅಂತ ಆಶ್ಚರ್ಯ ಪಟ್ಟಿದ್ದೆ.. ಆದರೆ ನಿಮ್ಮ ಬರಹ ಓದಿದ ಮೇಲೆ ಅದು ನಿಜವೆನ್ನಿಸುತ್ತಿದೆ!

adarsh
adarsh
9 years ago

ಲೇಖನ ಓದುತ್ತ, ಆರನೆಯ ಕ್ಲಾಸಿನಲ್ಲಾದ ಒ೦ದು ಘಟನೆ ನೆನಪು ಬ೦ತು. ನಮಗೆ ಕನ್ನಡ ಹೇಳಿ ಕೊಡುವ ಗುರುಗಳಾದ ಶ್ರೀ.ನಾಡಿಗೇರ್ ಅವರದ್ದು ಒ೦ದು ವಿಶಿಷ್ಟ ಟ್ಯಾಲೆ೦ಟ್, ಪಾಠ್ಯಕ್ಕೆ ಇರುವ ಯಾವುದೇ ಕಥೆಯಾಗಲಿ, ಪದ್ಯವಾಗಲಿ ಅವನ್ನು ತು೦ಬಾ ಆಕರ್ಷಣೀಯವಾಗಿ ಮಾಡುವುದು. ಪದ್ಯಗಳನ್ನು ಹುಡುಗಿಯರಿಗೆ ಒಪ್ಪಿಸಿ, ಅವುಗಳಿಗೆ ಟ್ಯೂನ ಹಾಕಿ ಹಾಡುವ೦ತೆ ಹೇಳುತ್ತಿದ್ದರು.ಹೊಸ ಕನ್ನಡದ ಪದ್ಯಗಳಾದರೆ , ಯಾವುದೋ ಜಾನಪದ ಹಾಡಿನ ಇಲ್ಲಾ ಸಿನೆಮಾ ಹಾಡಿನ ಟ್ಯೂನ್ ಜೋಡಿಸಬಹುದು, ಆದರೆ ಹಳಗನ್ನಡದ ಪದ್ಯಗಳಾದರೆ?? ಕ್ಲಾಸಿನ ಹಾಡಿಗಾರ್ತಿಯರೆಲ್ಲ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಪರಸ್ಥಿತಿಯನ್ನು ಗುರುಗಳ ಮು೦ದೆ ಹೇಳಿಕೊ೦ಡಾಗ, ಅವರು…"ಹಳಗನ್ನಡವಿರಲಿ, ಹೊಸಗನ್ನಡವಿರಲಿ….ಎಲ್ಲದಕ್ಕೂ ಟ್ಯೂನ ಹಾಕಬಹುದು, ನಿಮಗೆ ಗೊತ್ತಿಲ್ಲವಾದ್ರೆನು ತೊ೦ದೆರೆಯಿಲ್ಲ ಸ೦ಗೀತ ಹೇಳಿಕೊಡುವ ಮೇಡಮ್ ಅವರಿಗೆ ಕೇಳಿನೋಡುತ್ತೇನೆ " ಅ೦ತ ಹೇಳಿ ಹಳಗನ್ನಡದ ಆ ಪದ್ಯವನ್ನು ಮಾರ್ಕ್ ಮಾಡಿಕೊ೦ಡರು. ಕೆಲ ದಿವಸಗಳ ನ೦ತರ, ನಮ್ಮ ಮ್ಯೂಸಿಕ್ ಮೇಡಮ್ ಶ್ರೀಮತಿ ಮನ್ನಾರಿ ಯವರು, ಆ ಹಳಗನ್ನಡ ಪದ್ಯಕ್ಕೆ ಹಿ೦ದುಸ್ತಾನಿ ರಾಗದ ಲೇಪ ಬೆರಸಿ, ತಾವೂ ಹಾಡಿ, ನಮಗೂ ಹಾಡಿಸಿದ್ದ ನೆನಪು ಬ೦ತು. ಉತ್ತಮ ಸ೦ಗೀತಕಾರ ಯಾವ ಪದ್ಯಕ್ಕೂ ಟ್ಯೂನ್ ಹಾಕಬಲ್ಲ.

mmshaik
mmshaik
9 years ago

antaraaLada baraha..

ಶಿವಾನಂದ ಆರ್ ಉಕುಮನಾಳ
ಶಿವಾನಂದ ಆರ್ ಉಕುಮನಾಳ
8 years ago

ನಿಜಾ ಹೇಳಬೇಕು ಅಂದ್ರೆ ನಾನು ಚಿತ್ರ ಸಾಹಿತಿ ಆಗಬೇಕು ಅನ್ನೋ ಕನಸು ಕಟ್ಟಿಕೊಂಡವನು ನಿಮ್ಮ ಈ ಲೇಖನದಿಂದ ಆ ಕನಸನ್ನು ಕೈ ಬಿಡಲೇ ಅಥವಾ ಏನಾದರಾಗಲೀ ತೊಡಗಿಕೊಳ್ಳಲೇ ಎಂಬುದು ತಿಳಿಯುತ್ತಿಲ್ಲ ದಯಮಾಡಿ ಪ್ರತಿಕ್ರಿಯಿಸಿ.

* ತುಡಿತದ ಮುನ್ನುಡಿ *
ಮೋಡದಾ ಹನಿಗಳಿಗೊಮ್ಮೇ
ಕಡಲನ್ನು ಸೇರುವ ತವಕ
ಕಡಲಿನಾ ಅಲೆಗಳಿಗೊಮ್ಮೇ
ದಡವನ್ನು ತಾಕುವ ಪುಳಕ
ಎಲ್ಲಿಹುದು ನೆಮ್ಮದಿ ಬದುಕು
ಅರಿಯದೇ ಅಲೆಯುವ ಮನಕೇ
ಒಂದನ್ನು ಪಡೆದಿಹ ಕ್ಷಣಕೇ
ಮತ್ತೊಂದರಾ ಹೊಸ ಬಯಕೆ
ಹೊಸದನ್ನು ಅರಸುವುದೇ ಬದುಕೇ?

ಬದುಕಿನಾ ಎಡ-ಬಲದಲ್ಲಿ
ಕನಸುಗಳ ಚೆಂದದ ಮಳಿಗೆ
ಯಾವ ಕನಸಿನ ಬೆನ್ನೇರಿ
ಹೊರಡುವುದು ಈ ಹೊಸ ಗಳಿಗೆ
ತಿಳಿಯದೇ ತಳಮಳಗೊಂಡು
ತಡವರಿಸುವಾಕ್ಷಣ ಮನಕೇ
ದಿಟ್ಟ ಗುರಿಯೊಂದನು ಎದೆಯಾ
ಕಂದಕದಿ ನೀನೇ ಬಿತ್ತಿ
ಅದರತ್ತ ತುಡಿಯುವುದೇ ಬದುಕೇ?

ತುಡಿತದಲಿ ಸೋತಾ ಮನಕೇ
ಸಾಂತ್ವನದ ಪೇಠವ ತೊಡಿಸಿ
ವಿಫಲತೆಯ ಬಂಜರಿನಲ್ಲಿ
ಭರವಸೆಯ ಹೊಳೆಯನು ಹರಿಸಿ
ಹಕ್ಕಿಯಂತಿರುವ ಮನಕೇ
ಮಳೆಬಿಲ್ಲ ರೆಕ್ಕೆಯ ತೊಡಿಸಿ
ಬತ್ತದುತ್ಸಾಹದ ತೊರೆಯ
ಎದೆಯಲ್ಲಿ ಪ್ರತಿಕ್ಷಣ ಹರಿಸಿ
ಬದುಕನ್ನು ಕಟ್ಟುವುದೇ ಕವಿತೇ?
                 -ಶಿವಾನಂದ ಆರ್ ಉಕುಮನಾಳ

ಬೋಪಣ್ಣ ಬೊಳ್ಳಿಯಂಗಡ
ಬೋಪಣ್ಣ ಬೊಳ್ಳಿಯಂಗಡ
4 years ago

ನನಗೂ ಚಿತ್ರಸಾಹಿತಿಯಾಗುವ ತುಡಿತವಿತ್ತು…ಆದ್ರೆ ಅದು ಸಾಧ್ಯವಾಗಲೇ ಇಲ್ಲ.. ನಿಮ್ಮ ಹಾಡುಗಳನ್ನ ಕೇಳುವಾಗಲೆಲ್ಲಾ ಹೊಟ್ಟೆಕಿಚ್ಚಾಗುತ್ತೆ..ಎಷ್ಟು ಅದ್ಭುತವಾಗಿ ಬರಿತೀರಿ ಸರ್..ನಿಮ್ಮಂತ ಸಾಹಿತಿಯನ್ನೆ ಹೀಗೆಲ್ಲ ಆಟವಾಡಿಸುತ್ತಾರೆ ಅಂದ್ರೆ ಸಾಹಿತಿಯಾಗ ಹೊರಟವರ ಪಾಡೇನು..?

-ಬೋಪಣ್ಣ ಬೊಳ್ಳಿಯಂಗಡ

5
0
Would love your thoughts, please comment.x
()
x