ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಶಾರೀರಿಕವಾಗಿ ಬಲಿಷ್ಟನಲ್ಲದ ಮಾನವ ಇವತ್ತು ಜಗತ್ತನ್ನು ಆಳುತ್ತಿದ್ದಾನೆ ಎಂದರೆ ಅದಕ್ಕೆ ಕಾರಣ ಇವನಿಗಿರುವ ಆಲೋಚನಾ ಶಕ್ತಿ, ಬುದ್ಧಿಮತ್ತೆ ಇತ್ಯಾದಿಗಳು. ಮನುಷ್ಯನ ವಿದ್ಯೆ-ಬುದ್ಧಿಗಳು ಜಗತ್ತಿನ ಒಳಿತಿಗೆ ಪೂರಕವಾದಲ್ಲಿ ಶಾಂತಿ-ನೆಮ್ಮದಿ ನೆಲೆಸುತ್ತದೆ. ಇದನ್ನೇ ದುಷ್ಕಾರ್ಯಗಳಿಗೆ ಬಳಸಿದರೆ ಸಿಗುವುದು ಹಿಂಸೆ-ಅಶಾಂತಿ ಇತ್ಯಾದಿಗಳು. ಎಲ್ಲಾ ಪ್ರಾಣಿಗಳಿಗೂ ಹೊಟ್ಟೆ ತುಂಬಿದ ಮೇಲೆ ಮನೋರಂಜನೆ ಬೇಕು. ಬೆಕ್ಕು ಚಿನ್ನಾಟವಾಡುವ ಹಾಗೆ, ಆಟಗಳು ದೈಹಿಕವಾಗಿ ಬಲಿಷ್ಟವಾಗಿರಲು ಮತ್ತು ಮನಸ್ಸಿನ ನೆಮ್ಮದಿ-ಆರೋಗ್ಯಕ್ಕೆ ಪೂರಕ. ಆಧುನಿಕ ಮನುಷ್ಯ ರೂಡಿಸಿಕೊಂಡ ಆಟಗಳು ಸಾವಿರಾರು. ಇದರಲ್ಲಿ ಹೆಚ್ಚಿನವು ಪರಿಸರಕ್ಕೆ ಧಕ್ಕೆ ತರುವಂತವುಗಳಾಗಿವೆ. ಬೈಕ್-ಕಾರ್ ರೇಸ್‌ಗಳು ಮಾಲಿನ್ಯ ಮಾಡಿದರೆ, ಕ್ರಿಕೇಟ್‌ನಂತಹ ಆಟಗಳು ಜಗತ್ತಿನಲ್ಲಿ ಸೋಮಾರಿಗಳನ್ನು ಸೃಷ್ಟಿಮಾಡುತ್ತವೆ. ಫುಟ್‌ಬಾಲ್-ವಾಲಿಬಾಲ್ ಆಟಗಾರರ ಶೂಗಳಿಗೆ ಅಳಿವಿನಂಚಿನಲ್ಲಿರುವ ಹಲವು ಪ್ರಾಣಿಗಳ ಚರ್ಮಗಳನ್ನು ಬಳಸಲಾಗುತ್ತದೆ. ಚೀನಾದಲ್ಲಿ ಪಾರಿವಾಳಗಳನ್ನು ಹಾರಿ ಬಿಟ್ಟು ಗುಂಡಿನಿಂದ ಹೊಡೆದುರುಳಿಸುವ ಆಟ, ಸ್ಪೇನಿನ ಗೂಳಿ ಕಾಳಗ, ಅಮೇರಿಕಾದ ರ್‍ಯಾಟಲ್ ಸ್ನೇಕ್ ಕೊಲ್ಲುವ ಆಟ ಹೀಗೆ ಹಿಂಸೆಯಲ್ಲಿ ವಿನೋದ ಅನುಭವಿಸುವಷ್ಟು ಕ್ರೂರಿಯಾಗಿದ್ದಾನೆ. ಕೆಲವು ಬಸ್ಸು-ಲಾರಿ ಡ್ರೈವರ್‌ಗಳಿಗೆ ಅಡ್ಡ ಸಿಕ್ಕ ಪ್ರಾಣಿಗಳ ಮೇಲೆ ವಾಹನ ಹರಿಸಿ ಕೊಲ್ಲುವುದು ಆನಂದ ತರುತ್ತದೆ. ಹುಟ್ಟು ಕ್ರೂರಿಯಾದ ಮನುಷ್ಯ ಪ್ರಪಂಚದಲ್ಲಿ, ಅಹಿಂಸಾಮೂರ್ತಿಗಳು ಸಿಗುವುದು ಕ್ರೂರತ್ವ ಸಿದ್ಧಾಂತದ ಅಪವಾದವಷ್ಟೆ ಸೈ.
ಇವತ್ತು ಪ್ರಪಂಚವನ್ನು ಆಳುತ್ತಿರುವುದು ಲಾಬಿಗಳು. ಪೆಟ್ರೋಲ್ ಲಾಬಿ, ಕಲ್ಲಿದ್ದಲು ಲಾಬಿ, ಕುಲಾಂತರಿ ಲಾಬಿ, ಶಸ್ತ್ರಾಸ್ತ್ರ ಲಾಬಿ ಹೀಗೆ ಬೆಳೆಯುತ್ತದೆ. ಆಯಾ ಲಾಬಿಗಳಿಂದ ಲಾಭ ಪಡೆಯುವವರು ಅದರ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಾರೆ. ನಮ್ಮ ಎಂ.ಪಿ.ಗಳು ಸಧ್ಯ ಕುಲಾಂತರಿ ಲಾಬಿಗಾಗಿ ಕೆಲಸ ಮಾಡುತ್ತಿದ್ದಾರೆ. ದೊಡ್ಡ ಮಾಧ್ಯಮಗಳನ್ನೂ ಕೂಡ ಇವರು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಟಿ.ವಿ. ಉದ್ಯಮದಲ್ಲಿ ಪಾಲುದಾರಿಕೆಯನ್ನು ಹೊಂದಿದ ರಾಜಕಾರಣಿಗಳು ನಮ್ಮಲ್ಲೂ ಇದ್ದಾರೆ. ಟಿ.ವಿಗಳಲ್ಲಿ ರಿಯಾಲಿಟಿ ಶೋಗಳು ಜನರನ್ನು ಬೇಗ ತಲುಪತ್ತವೆ ಎಂಬ ಕಾರಣಕ್ಕೆ ವಿವಿಧ ರೀತಿಯ ತಿಕ್ಕಳುಗಳನ್ನು ಬಿತ್ತರಿಸುವ ಪರಿಪಾಠ ಶುರುವಾಗಿದೆ. ಪ್ರಪಂಚದ ಮೂಲೆ-ಮೂಲೆಗಳನ್ನು ತಲುಪಬಲ್ಲ ಸಾಮರ್ಥ್ಯವಿರುವ ಟಿ.ವಿ.ಮಾಧ್ಯಮಗಳು ವೈವಿಧ್ಯಮಯವಾದ ಹೊಸತನ್ನು ಜನರಿಗೆ ತೋರಿಸಿ ಹೇಗೆ ದುಡ್ಡು ಮಾಡಬಹುದು ಎಂಬುದನ್ನೇ ಆಲೋಚಿಸುತ್ತವೆ.
ಅಮೇರಿಕಾದಲ್ಲಿ ಬಿತ್ತರವಾಗುವ ಒಂದು ಟಿ.ವಿ. ಮಾಧ್ಯಮದ ಹೆಸರು ಎನ್.ಬಿ.ಸಿ. ಸ್ಪೋಟ್ಸ್ ನೆಟ್‌ವರ್ಕ್. ಇದರಲ್ಲಿ ಒಂದು ಜನಪ್ರಿಯವಾದ ಒಂದು ಕಾರ್ಯಕ್ರಮದ ಹೆಸರು ಅಂಡರ್ ವೈಲ್ಡ್ ಸ್ಕೈಸ್. ದಟ್ಟಾರಣ್ಯಗಳಲ್ಲಿ ಪ್ರಾಣಿಗಳ ಜೀವನ ಹೇಗಿರುತ್ತದೆ. ಯಾವ ಪ್ರಾಣಿಯ ಬೇಟೆಯ ವಿಧಾನ ಎಂತಹದು. ಗುಡ್ಡಗಾಡಿನ ಜನ ಬೇಟೆಯಾಡುವ ಬಗೆ, ಅವರ ಜೀವನ ಕ್ರಮ ಇತ್ಯಾದಿಗಳಿರುತ್ತವೆ. ಆಫ್ರಿಕಾ ಖಂಡದಲ್ಲಿ ಆನೆಗಳ ಸಂಖ್ಯೆ ಹೆಚ್ಚು. ಅಲ್ಲಿನ ಆನೆಗಳು ಏಷ್ಯಾದ ಆನೆಗಳಿಗಿಂದ ದೊಡ್ಡವು ಮತ್ತು ಹೆಣ್ಣಾನೆಗಳಿಗೂ ದಂತಗಳಿರುತ್ತವೆ. ಆನೆಗಳ ಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿ ಭೇಟೆಗಾರ ಸಂಖ್ಯೆಯೂ ಸಾಕಷ್ಟಿದೆ. ಅಲ್ಲಿನ ಸರ್ಕಾರಗಳಿಗೆ ಆನೆಗಳ ಸಂತತಿಯನ್ನು ಕಾಪಾಡುವುದು ಹೇಗೆ ಎಂಬ ಚಿಂತೆಯಾದರೆ, ಕ್ರೀಡೆಯ ನೆವದಲ್ಲಿ ಅಮೇರಿಕಾದ ಟ್ರೋಫಿ ಹಂಟರ್‌ಗಳು ಅಲ್ಲಿನ ಹಳ್ಳಿಗರಿಗೆ ದುಡ್ಡಿನಾಸೆ ತೋರಿಸಿ, ಘೆಂಡಾಮೃಗ, ಸಿಂಹ, ಚಿರತೆ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಸತ್ತ ಪ್ರಾಣಿಯ ಶವದ ಮೇಲೆ ತಮ್ಮ ಬೂಟುಗಾಲಿಟ್ಟು, ರೈಫಲ್‌ನ್ನು ಎತ್ತಿ ಹಿಡಿದು ವಿಜಯ ನಗೆ ಬೀರುತ್ತಾ ಪೋಟೊ ತೆಗೆಸಿಕೊಳ್ಳುತ್ತಾರೆ. ಈ ಕೃತ್ಯದಿಂದ ಅವರು ಸಂತೋಷದ ಜೊತೆಗೆ ಹೆಮ್ಮೆಯನ್ನು ಪಡುತ್ತಾರೆ.
ಎನ್.ಬಿ.ಸಿ. ಸ್ಪೋಟ್ಸ್ ನೆಟ್‌ವರ್ಕ್ ಕಾರ್ಯಕ್ರಮದಲ್ಲಿ ಅಂಡರ್ ವೈಲ್ಡ್ ಸ್ಕೈಸ್ ಕಳೆದ ಮಂಗಳವಾರದಂದು ನಾಗರೀಕ ಸಮಾಜ ತಲೆತಗ್ಗಿಸುವಂತಹ ಒಂದು ಘಟನೆಯನ್ನು ಬಿತ್ತರಿಸಲಾಯಿತು. ಆಫ್ರಿಕಾ ಖಂಡದ ಬೋಟ್ಸಾವಾನದಲ್ಲಿ ಬಿಳಿತೊಗಲಿನ ಟೋಪಿ ಧರಿಸಿ, ಕೈಯಲ್ಲಿ ರೈಫಲ್ ಹಿಡಿದು, ಅಲ್ಲಿನ ಸ್ಥಳೀಯನ ನೆರವು ಪಡೆದು ಭೇಟೆಗೆ ಹೊರಡುತ್ತಾನೆ. ಸ್ವಲ್ಪ ದೂರ ಪಯಣಿಸುವುದಲ್ಲೇ ಬೃಹತ್ ಗಾತ್ರದ, ಉದ್ದ ದಾಡೆಗಳಿರುವ ಆನೆಯೊಂದು ಎದುರಾಗುತ್ತದೆ. ಹಿಂದೆ ಇರುವ ಟಿ.ವಿ.ಕ್ಯಾಮೆರ ಚಾಲೂ ಆಗಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಿಳಿತೊಗಲಿನವ ಆನೆಯ ಹಣೆಗೆ ಗುರಿಯಿಟ್ಟು ಗುಂಡು ಹಾರಿಸುತ್ತಾನೆ. ದೊಡ್ಡ ದೇಹದ ಆನೆ ತಕ್ಷಣ ಸಾಯುವುದಿಲ್ಲ. ದಿಕ್ಕೆಟ್ಟು ಓಡತೊಡಗಿದ ಆ ಬೃಹತ್ ಜೀವಿಯ ಹಣೆಗೆ ಮತ್ತೊಂದು, ಮಗದೊಂದು ಗುಂಡು ಹಾರಿಸುತ್ತಾನೆ. ಅಂತಿಮವಾಗಿ ಆನೆ ಧರಾಶಾಯಿಯಾಗುತ್ತದೆ. ಉಳಿದ ಗುಂಡುಗಳನ್ನು ಕುಟುಕು ಜೀವವಿರುವ ಆ ದೇಹಕ್ಕೆ ಹಾರಿಸಿ ವಿಜಯನಗೆ ಬೀರುತ್ತಾನೆ. ನ್ಯಾಷನಲ್ ರೈಪಲ್ ಅಸೋಸಿಯೇಷನ್ ಕಂಪನಿ ತಯಾರುಮಾಡಿದ .೫೭೭ ರೈಫಲ್‌ನ್ನು ಎತ್ತಿ ಹಿಡಿದು ಜಾಹೀರು ಮಾಡುತ್ತಾನೆ. ಎಲ್ಲರ ಮುಖದಲ್ಲೂ ಗೆದ್ದ ಸಂಭ್ರಮ-ಕೇಕೆ. ಶಾಂಪೇನ್ ಬಾಟಲನ್ನು ತೆರೆದು ಮೈಮೇಲೆರಚಿಕೊಂಡು ಸಂಭ್ರಮಾಚರಣೆಯನ್ನು ಮಾಡುತ್ತಾರೆ. ದೂರದ ಬೋಟ್ಸಾವಾನದ ಅರಣ್ಯದಲ್ಲಿ ಆನೆಯನ್ನು ಕೊಂದು ಅದರ ದಂತವನ್ನು ತಂದ ಈ ದಿನ ನನ್ನ ಜೀವನದ ಮರೆಯಲಾರದ ಸಂತಸದ ದಿನ ಎಂಬ ಮಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ. ಕಾರ್ಯಕ್ರಮದ ನಿರೂಪಕನ ಹೆಸರು ಟೋನಿ ಮಾರ್ಕಿಸ್. ಬಿತ್ತರಿಸಿದ ಚಿತ್ರದಲ್ಲಿ ಆನೆಯನ್ನು ಕೊಂದು ವಿಲನ್ ಆಗಿ ಕಾರ್ಯನಿರ್ವಹಿಸಿದವನೂ ಇವನೆ. ನ್ಯಾಷನಲ್ ರೈಪಲ್ ಅಸೋಸಿಯೇಷನ್ ಕಂಪನಿಯ ರಾಯಭಾರಿಯೂ ಈತನೆ. ಅಂಡರ್ ವೈಲ್ಡ್ ಸ್ಕೈದ ಪ್ರಾಯೋಜಕರು ಇದೇ ನ್ಯಾಷನಲ್ ರೈಪಲ್ ಅಸೋಸಿಯೇಷನ್.
ಈ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರಜ್ಞಾವಂತರು ಟಿ.ವಿ. ಚಾನೆಲ್‌ಗೆ ಫೋನ್ ಮಾಡಿ ಛೀ.. . ಥೂ. . ಮಾಡಿದರು. ಸಾಮಾಜಿಕ ಜಾಲತಾಣಗಳು ಖಂಡಿಸಿದವು. ಇದರ ವಿರುದ್ಧ ಜನಾಂದೋಲನ ಶುರುವಾಯಿತು. ಯಡವಟ್ಟಾಯಿತು ಎಂದು ಎಚ್ಚೆತ್ತ ಚಾನೆಲ್‌ನವರು ತೇಪೆ ಸಾರಿಸುವ ಕೆಲಸ ಮಾಡಿದರು. ಈ ಕಾರ್ಯಕ್ರಮವನ್ನು ಮರುಪ್ರಸಾರ ಮಾಡುವುದಿಲ್ಲ ಎಂಬರ್ಥ ಬರುವ ಒಂದು ಸಾಲನ್ನು ಟ.ವಿ.ಪರದೆಯ ಮೇಲೆ ಕಾಣುವಂತೆ ಮಾಡಿದರು. ಟೋನಿ ಮಾರ್ಕಿಸ್‌ನ ಮನ:ಸ್ಥಿತಿಯಂತದು ಎಂದು ನೋಡಿದರೆ, ಯಾರೂ ಮಾಡಬಾರದಂತಹ ತಪ್ಪನ್ನು ಮಾಡಿ, ತಾನು ಮಾಡಿದ್ದೇ ಸರಿ ವಾದಿಸುವ ಮಟ್ಟಕ್ಕೂ ಹೋಗಿದ್ದು ಜನರಲ್ಲಿ ರೇಜಿಗೆಯನ್ನು ತರಿಸಿತು. ಆನೆಯನ್ನು ಕೊಂದರೆ ಬಾಯಿಬಡಿದುಕೊಳ್ಳುವ ನೀವು ನಾನು ಬಾತುಕೋಳಿಯನ್ನು ಕೊಂದ್ದಿದ್ದರೆ ಇದೇ ರೀತಿ ವರ್ತಿಸುತ್ತಿದ್ದಿರಾ? ಎಂದು ಜನರನ್ನೇ ಪ್ರಶ್ನಿಸುತ್ತಾನೆ. ಮಾನವರಲ್ಲಿ ಜನಾಂಗ ತಾರತಮ್ಯ ಇದೆ, ಇದನ್ನು ನೀವು ಅಂದರೆ ಸಾರ್ವಜನಿಕರು ಮತ್ತು ಸೋಕಾಲ್ಡ್ ಪ್ರಾಣಿಪ್ರಿಯರು ಪ್ರಾಣಿ ಪ್ರಪಂಚಕ್ಕೂ ವಿಸ್ತರಿಸುತ್ತೀರಿ. ನಾನು ಮಾಡಿದ್ದು ತಪ್ಪು ಎಂದು ಹೇಳುವ ನೀವು ಎಷ್ಟು ಸರಿಯಿದ್ದೀರಿ ಎಂಬ ಎದೆಸೊಕ್ಕಿನ ಮಾತನಾಡುತ್ತಾನೆ. ಈಗೇನಾದರೂ ಹಿಟ್ಲರ್ ಇದ್ದಿದ್ದರೆ ನನ್ನ ಹಾಗೇ ಮಾತನಾಡುತ್ತಿದ್ದ ಎನ್ನುವ ಮಟ್ಟಕ್ಕೂ ಹೋಗಿದ್ದಾನೆ. ಹೇಗಿದೆ ನೋಡಿ ಮನುಷ್ಯತ್ವ ಕಳೆದುಕೊಂಡವನ ಅಹಂಕಾರದ ನುಡಿ.
ಮುಂದುವರೆದ ದೇಶ ಅಮೇರಿಕಾದ ಒಬ್ಬ ಪ್ರಜೆ, ಹಿಂದುಳಿದ ದೇಶಕ್ಕೆ ಹೋಗಿ ಅಲ್ಲಿ ಆನೆಯಂತಹ ಬೃಹತ್ ಪ್ರಾಣಿಯನ್ನು ತನ್ನ ರೈಫಲ್‌ನಿಂದ ಸಾಯಿಸಿ, ತಾನು ಮಾಡಿದ ದುಷ್ಕಾರ್ಯವನ್ನು ದೇಶದ ಜನತೆಗೆ ಪ್ರದರ್ಶಿಸಿ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾನೆ ಎಂದರೆ ಲಾಬಿಯ ಕೈವಾಡ ಎಂತದಿರಬಹುದು? ಜಿಂಬಾಬ್ವೆಯಂತಹ ಹಿಂದುಳಿದ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಆನೆ ಸಂತತಿಯಿದೆ. ಅಲ್ಲಿ ಕಳ್ಳಬೇಟೆಗಾರರು ದಂತಕ್ಕಾಗಿ ಆನೆಗಳನ್ನು ಸಾಯಿಸುತ್ತಾರಾದರೂ, ಅಲ್ಲಿ ಆನೆಗಳನ್ನು ಸಂರಕ್ಷಿತ ಪ್ರಾಣಿಯೆಂದು ಘೋಷಿಸಿ, ಕಳ್ಳಭೇಟೆಗಾರರಿಗೆ ಉಗ್ರ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಅಲ್ಲಿನ ಸರ್ಕಾರ ಆನೆ ಹಂತಕರ ಮೇಲೆ ಯುದ್ಧವನ್ನೇ ಸಾರಿದೆ. ಸಿಕ್ಕಿಬಿದ್ದವರಿಗೆ ಜೀವಾವಧಿ ಸಜೆಯನ್ನು ವಿಧಿಸಲಾಗುತ್ತದೆ. ಜಿಂಬಾಬ್ವೆಯ ವಾಂಜೆ ಸಂರಕ್ಷಿತ ಅಭಯಾರಣ್ಯ ಪ್ರದೇಶದಲ್ಲಿ ಸುಮಾರು ೭೫ ಸಾವಿರ ಆನೆಗಳಿವೆ ಎಂದು ಅಂದಾಜು ಮಾಡಿದ್ದಾರೆ. ಆನೆಗಳು ಚಲಿಸುವ ಕಾರಿಡಾರಿನಲ್ಲಿ ಇರುವ ನೀರಿನ ಹೊಂಡಗಳಿಗೆ ಸಯನೈಡ್ ಬೆರೆಸಿ ಇತ್ತೀಚಿಗೆ ೮೦ ಆನೆಗಳನ್ನು ಕೊಲ್ಲಲಾಗಿದೆ. ಬೋಟ್ಸಾವಾನ ಸರ್ಕಾರವು ೨೦೧೪ರಿಂದ ಯಾವುದೇ ರೀತಿಯ ಟ್ರೋಫಿ ಅಥವಾ ಗೇಮ್ ಹಂಟಿಂಗ್‌ಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದೆಯಾದರೂ, ಇನ್ನು ಕೆಲವೇ ದಶಕಗಳಲ್ಲಿ ಅಲ್ಲಿ ಆನೆಗಳ ಸಂತತಿ ಅಳಿದುಹೋಗಲಿದೆ ಎಂದು ಚಿಕಾಗೋ ಟ್ರಿಬ್ಯೂನ್ ಮತ್ತು ಡೆಡ್‌ಸ್ಪಿನ್ ಪತ್ರಿಕೆಗಳಲ್ಲಿ ವರದಿಯಾಗಿದೆ.
ಹೇಳಿಕೊಳ್ಳಲಿಕ್ಕೆ ದೊಡ್ಡಣ್ಣ. ಟೋನಿ ಮಾರ್ಕಿಸ್‌ಗೆ ಸರಿಯಾದ ಶಿಕ್ಷೆ ನೀಡಿ ಜೈಲಿಗೆ ಕಳುಹಿಸುವುದನ್ನು ಬಿಟ್ಟು, ಬರೀ ಅವನ ಕುಕೃತ್ಯದ ಪ್ರಸಾರವನ್ನು ನಿಲ್ಲಿಸಿದಷ್ಟೇ ಸಾಕೆ? ಎಲ್ಲಾ ದೇಶಗಳಿಗೆ ಮೇಲ್ಪಂಕ್ತಿಯಾಗಿ, ಮಾದರಿಯಾಗಿ ಇರಬೇಕಾದ ದೇಶ ಇಂತಹ ನೀಚ ಕೃತ್ಯಗಳಿಗೆ ನೀರೆದರೆ ವನ್ಯಜೀವಿ ಸಂರಕ್ಷಣೆ ಹೇಗೆ ಸಾಧ್ಯ? ಇದೇ ತರಹದ ಹುಚ್ಚಾಟಗಳನ್ನು ಎಲ್ಲಾ ದೇಶಗಳು ಅನುಕರಿಸಿದರೆ ಪ್ರಾಣಿ-ಪಕ್ಷಿಗಳು ಉಳಿದಾವೆ? ಹಿಂಸೆಯನ್ನು ವೈಭವಿಕರಿಸುವ ಯಾವುದೇ ದೇಶ-ಜನಾಂಗವನ್ನು ಒಪ್ಪುವುದು ಮತಿಯಿರುವವರಿಗೆ ಕಷ್ಟ. ಈ ದೃಶ್ಯವನ್ನು ಪ್ರಸಾರಮಾಡಿದ ಎನ್.ಬಿ.ಸಿ. ಸ್ಪೋಟ್ಸ್ ನೆಟ್‌ವರ್ಕ್ ಆಡಳಿತ ಮಂಡಳಿಯವರು ಸ್ಪಷ್ಟನೆಯೆಂದರೆ, ಅಂಡರ್ ವೈಲ್ಡ್ ಸ್ಕೈಸ್ ಕಾರ್ಯಕ್ರಮವನ್ನು ರದ್ದು ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ತರಹದ ಕಾರ್ಯಕ್ರಮಗಳು ಜನರಿಗೆ ಬೇಡವಾದರೆ ನಾವು ಪ್ರಸಾರ ಮಾಡುವುದಿಲ್ಲ ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಲಾಬಿಗಳ ಮುಂದೆ ಸರ್ಕಾರಗಳು ಮಂಡಿಯೂರಿ ತಲೆಬಾಗಿಸಿಕೊಂಡಿರಬೇಕು ಎಂಬುದು ಸಾಬೀತಾಯಿತು.
ಪ್ರಸಕ್ತ ದಿನಮಾನಗಳಲ್ಲಿ ನಡೆಯುವ ವಿಷಯಗಳಿಗೆ ಕನ್ನಡಿಯಂತೆ ಇದೆ ನಿಮ್ಮ ಲೇಖನ. ಜೀವ ಅಂದರೆ ಅದು ಜೀವವೆ. ಮನುಷ್ಯನದಾದರೆನು, ಪ್ರಾಣಿಯದಾದರೆನು? ಪ್ರಾಣಿಹಿಂಸೆಗೆ ಜೀವಾವಧಿ ಶಿಕ್ಷೆನೆ ಜಾರಿಗೆ ತರಬೆಕು. ಅಂದರೆ ಪ್ರಾಣಿ ಸಂಕುಲದ ರಕ್ಷಣೆ ಸಾಧ್ಯ….ಲೇಖನ ಇಷ್ಟ ಆಯ್ತು……..
🙁