ಅನಿ ಹನಿ

ಟೇಮು ಅಂದ್ರೆ ಟೇಮು: ಅನಿತಾ ನರೇಶ್ ಮಂಚಿ


ಒಂದು ಕೈಯಲ್ಲಿ ಕೋಕೋಕೋಲಾ ಮತ್ತು ರಿಮೋಟ್ ಕಂಟ್ರೋಲರನ್ನು ಬ್ಯಾಲೆನ್ಸ್ ಮಾಡುತ್ತಾ  ಇನ್ನೊಂದು ಕೈಯಲ್ಲಿ ಅಂಗೈ ತುಂಬುವಷ್ಟು ಚಿಪ್ಸನ್ನು ಹಿಡಿದುಕೊಂಡು ನೆಟ್ಟ ಕಣ್ಣಿನಲ್ಲಿ ಟಿ ವಿ ಯಲ್ಲಿ ತೋರಿಸುತ್ತಿದ್ದ ಫಿಟ್ ನೆಸ್ ಕಾರ್ಯಕ್ರಮವನ್ನು ಸೋಫಾದ ಮೇಲೆ ಮಲಗು ಭಂಗಿಯಲ್ಲಿ ಕುಳಿತು ವೀಕ್ಷಿಸುತ್ತಿರುವ ಸಮಯದಲ್ಲಿ  ’ಅವ್ವಾ ಲಂಗರು ಕೊಡಿ’ ಅಂದಳು ನಮ್ಮ ಮನೆಯ ಹೊಸ  ಸಹಾಯಕಿ.

ಇದ್ದಕ್ಕಿದ್ದ ಹಾಗೆ ಕೇಳಿದ  ಅವಳ ಮಾತು ಕಿವಿಯೊಳಗೆ ಹೊಕ್ಕರೂ ಅರ್ಥವಾಗದೇ ಕಣ್ಣುಗಳನ್ನು ಟಿ ವಿ ಯ ಕಡೆಯಿಂದ ಬಲವಂತವಾಗಿ ತಿರುಗಿಸಿ ಅತ್ತ ಕಡೆ ನೋಡಿದೆ. ನೋಡುವುದೇನು .. ಎತ್ತ ನೋಡಿದರತ್ತ ನೀರು.. ಇದ್ದಕ್ಕಿದ್ದಂತೆ ಜಲಪ್ರಳಯವಾಯಿತೇ? ನಾನೆಲ್ಲಾದರೂ ನೀರೊಳಗೆ ತೇಲಿ ಬಿಟ್ಟ ಹಡಗಿನೊಳಗಿದ್ದೇನೆಯೇ? ಎಂಬೆಲ್ಲ ಪ್ರಶ್ನೆಗಳು ಮನದೊಳಗಿ ಮೂಡಿ ಮರೆಯಾಯಿತು.  ಜಲ ಪ್ರಳಯ ಆಗಿದ್ದೇನೋ ನಿಜ. ಬಟ್ಟೆ ಒಗೆಯುವ ಸ್ಥಳದಿಂದ ಹಿಡಿದು ನಡುಮನೆ ದಾಟಿ ಹೊರಗಿನ ಚಾವಡಿಯವರೆಗೆ  ಒದ್ದೆ ಒದ್ದೆ. ಆಗಷ್ಟೇ ಅವಳೇ ಎಲ್ಲಾ ಕಡೆ ಗುಡಿಸಿ ಒರೆಸಿದ್ದ ಜಾಗವೆಲ್ಲ ಈಗ ಮತ್ತೊಮ್ಮೆ ನೀರುಮಯವಾಗಿತ್ತು. ಅವಳು ಕೈಯಲ್ಲಿ ನೀರಿಳಿಯುವ ಬಟ್ಟೆಗಳನ್ನು ಹಾಗೇ ಹಿಡಿದು ನಿಂತಿದ್ದಳು. ಸರ್ರನೇ ನನ್ನ ಬಿ ಪಿ ರೈಸಾಗಿ ’ಏನೇ ಇದು ನೀರಿಳಿತಾ ಇದೆ.. ಇಡೀ ಮನೆ ಗಲೀಜಾಯ್ತು ಇನ್ನೊಮ್ಮೆ ಒರೆಸ್ಬೇಕಷ್ಟೇ ಎಂದೆ. 

’ಅದಕ್ಕೇ ಮತ್ತೆ ನಿಮ್ಮನ್ನು ಆಗಿನಿಂದ ಲಂಗರ್ ಕೊಡಿ ಅಂತ ಕೇಳ್ತಿರೋದು. ನೀವು ಏನೋ ಆಲೋಚನೆಲಿ ಮುಳುಗಿದ್ದೀರಿ..’ ಎಂದಳಾಕೆ
ನನಗೆ ಅಯೋಮಯವಾದಂತನಿಸಿತು. ನಮ್ಮದು ಸಮುದ್ರ ಕರಾವಳಿಯಲ್ಲಿರೋ ಮನೆಯೇನೋ ಸರಿ ಆದರೆ ಮನೆ ಮನೆಯಲ್ಲಿ ದೋಣಿಗಳು, ಮೋಟಾರ್ ಬೋಟುಗಳು, ಹಡಗುಗಳು, ಅದನ್ನು ಸಮುದ್ರ ಮಧ್ಯದಲ್ಲಿ ನಿಲ್ಲಿಸುವ ಲಂಗರು ಇರಲು ಸಾಧ್ಯವೇ? 

’ಲಂಗರಾ? ಅದ್ಯಾಕೆ ಬೇಕು ನಿಂಗೆ? ಅದೆಲ್ಲಾ ಇಲ್ಲ ನಮ್ಮಲ್ಲಿ .. ಅದಕ್ಕೂ ಬಟ್ಟೆಗೂ ಏನು ಸಂಬಂಧ’ ಅಂದೆ. 
’ಅಯ್ಯೋ.. ಅಷ್ಟೂ ಗೊತ್ತಿಲ್ವಾ.. ಈ ಬಟ್ಟೆಯೆಲ್ಲಾ ನೇತು ಹಾಕೋಕೆ ಲಂಗರ್ ಕೊಡಿ’ ಅಂದೆ. ಅದೂ ಇಲ್ವಾ ನಿಮ್ಮಲ್ಲಿ ಎಂಬಂತೆ ನನ್ನ ಕಡೆಗೆ ಅನುಕಂಪದ ನೋಟ ಎಸೆದಳು. ಈಗ ನನ್ನ  ಮಂದಬುದ್ದಿಗೆ ಲಂಗರು ಎಂದರೆ ನಿಜವಾದ ಲಂಗರು ಅಲ್ಲ. ಲಂಗ ಪ್ಯಾಂಟ್ ಶರಟುಗಳನ್ನು ನೇತು ಹಾಕುವ ಹ್ಯಾಂಗರ್ ಎಂದು ಹೊಳೆಯಿತು. ಯುರೇಕಾ ಎಂದು ಕೂಗುತ್ತಾ ಅವಳಿಗೆ ಹ್ಯಾಂಗರುಗಳನ್ನು ಹಸ್ತಾಂತರಿಸಿದೆ. 

’ಆವ್ವೋರೆ .. ನಾಳೆಯಿಂದ ನಾನು ಬರುವ ಮೊದಲೇ ಬಟ್ಟೆಯನ್ನು ಸೋಪಿನ ಪೌಡರಲ್ಲಿ ಸ್ವಾಕ್ ಮಾಡಿಡಿ.  ಬಟ್ಟೆಗೆ ಹಾಕುವ ಕಿಲಿಪ್ಪು, ಲಂಗರು ಎಲ್ಲಾ ಎದುರಲ್ಲೇ ಇಡಿ. ಹೀಗೆಲ್ಲಾ ಟೇಮು ವ್ಯಾಷ್ಟು ಆದ್ರೆ ನಂಗೆ ಕಷ್ಟ. ಈಗ ನೋಡಿ ಜಾನಕಮ್ಮನವರ ಮನೆಗೆ ಅಕ್ಕಿ ಕ್ವೀನ್ ಮಾಡಕ್ಕೆ ಬರ್ತೀನಿ ಅಂದಿದ್ದೆ. ಹೊತ್ತು ಆಗೇ ಹೋಯಿತು. ಹಾಗೆಲ್ಲಾ ಹೇಳಿದ ಮಾತು ತಪ್ಪಿದ್ರೆ ನಮ್ಮ ಕೆಲ್ಸಕ್ಕೆ ನಾವೇ ಕಲ್ಲು ಹಾಕ್ಕೋಂಡಂಗೆ.. ನಮ್ಗೆ ಮಾತು ಮುಖ್ಯ.. ತೆಗೊಳ್ಳಿ.. ಈ ಬಟ್ಟೆ ನೀವೇ ನೇತಾಕಿ ಬಿಡಿ. ಇನ್ನು ಮನೆ ಒಳಗಿನ ನೀರು ಸ್ವಲ್ಪ ಹೊತ್ತಲ್ಲೇ ಒಣ್ಗುತ್ತೆ. ಅದಕ್ಯಾಕೆ ತಲೆಬಿಸಿ ಮಾಡ್ಕೋತೀರಿ? ನಾನು ನಾಳೆ ಸರೀ ಟೇಮ್ಗೆ ಬರ್ತೀನಿ. ಒಂಚೂರು ಹಿಂದಿಲ್ಲ ಮುಂದಿಲ್ಲ. ಹಂಗೇ ನನ್ನ ಅಡ್ವಾನ್ಸ್ ಹಣ ಕೊಟ್ಬಿಡಿ ಈಗ್ಲೇ ಎಂದು ಅವಸರಿಸಿ ತೆಗೆದುಕೊಂಡು ನನ್ನನ್ನು ನನ್ನ ಕೆಲಸದ ಸಮೇತ ಬಿಟ್ಟು ನಡೆದೇ ಬಿಟ್ಟಳು. 
ಮೊದಲ ದಿನ ಅಲ್ವೇ.. ಅಳು ತುಟಿಗೆ ಬಂದರೂ ತಡೆದುಕೊಂಡೆ. 

ಮೊದಲಿದ್ದ ನಮ್ಮ ಮನೆಯ ಸಹಾಯಕಿ ಮದುವೆಯಾಗಿ ಹೋದ ನಂತರ  ತಿಂಗಳಾನು ಗಟ್ಟಲೆ  ಸಹಾಯಕಿಗಾಗಿ ತಪಸ್ಸು ಮಾಡಿದ್ದೆ. ನನ್ನ ಭಕ್ತಿಗೆ ಮೆಚ್ಚಿ   ಒಲಿದವಳು ಇವಳು. ಇಂತಹ ಭಕ್ತಿಯನ್ನು ದೇವರ ಮೇಲೇನಾದರೂ ತೋರಿಸಿದ್ದರೆ ಆತ ತನ್ನ ಬಳಗದ ಮುಕ್ಕೋಟಿ ದೇವತೆಗಳನ್ನು ಕರೆದುಕೊಂಡು ಬಂದು ನನ್ನೆದುರು  ನಿಲ್ಲುತ್ತಿದ್ದನೋ ಏನೋ.. ಆದರೆ ದೇವರ ಭಾಷೆಗಿಂತಲೂ ಕಠಿಣವಾದ ಇವಳ ಭಾಷಾವೈಭವವನ್ನು ಅನುಭವಿಸುವ ಮಹಾಭಾಗ್ಯ ದಕ್ಕುತ್ತಿರಲಿಲ್ಲ. 

ಮರುದಿನ ಸರಿಯಾದ ಹೊತ್ತಿನಲ್ಲೇ ಕರೆಗಂಟೆ ಸದ್ದಾಯಿತು. ಸರ್ವಾಲಂಕಾರಭೂಷಿತೆಯಾಗಿ ನನ್ನೆದುರು ನಿಂತಿದ್ದಳವಳು. ’ಅವ್ವಾ.. ಇವತ್ತು ನಾನು ಪಕ್ಕದ ಬಿಲ್ಡಿಂಗ್ನಲ್ಲಿರೋ ಮನೇಗೆ ಹೋಗ್ತಾ ಇದ್ದೀನಿ. ಅಲ್ಲಿಯೂ  ಕೆಲ್ಸ ಮಾಡ್ತೀನಲ್ಲಾ.. ಆ ಮನೇಲಿ ಅವ್ರ ಡಾಕ್ಟರಿಗೆ ಮ್ಯಾರೇಜು. ಇವತ್ತು ಕೆಲಸಕ್ಕೆ ಬರೋದಿಕ್ಕೆ ಆಗೋದಿಲ್ಲ. ಹೇಳ್ಬಿಟ್ಟು ಹೋಗೋಣ ಅಂತ ಬಂದೆ. ನೋಡಿ ಕರೆಟ್ಟು ಟೇಮಿಗೆ ಬಂದಿದ್ದೀನಿ.’  ಎಂದಳು.

’ಅಲ್ವೇ .. ಅವರ ಡಾಕ್ಟರಿಗೆ ಮದುವೆಯಾದ್ರೆ ನೀನ್ಯಾಕೆ ಹೋಗ್ಬೇಕು’ ಅಂದೆ. 
’ಅಯ್ಯೋ.. ನೀವೇನವ್ವಾ.. ಆ ಮಗೂನಾ ಇಷ್ಟುದ್ದ ಇದ್ದವಳನ್ನು ಅಷ್ಟುದ್ದ ಆಗುವಷ್ಟು ಬೆಳೆಸಿದ್ದು ನಾನೇ.. ಈಗ  ಅವ್ಳ ಮದುವೆಗೆ ಹೋಗ್ಲಿಲ್ಲ ಅಂದ್ರೆ ಚೆನ್ನಾಗಿರುತ್ತಾ.. ನೋಡಿ ಈ ಸೀರೆ ಅವ್ರೇ ಕೊಡ್ಸಿದ್ದು..’ ಎಂದು ತಾನುಟ್ಟಿದ್ದ ಗೇಣಗಲ ಜರಿಯ ಸೀರೆಯ ಕಡೆಗೆ ಕೈ ತೋರಿಸಿದಳು. 
’ಹೋ.. ಅಂದ್ರೆ ಅವರ ಮಗಳ ಮದುವೆಯಾ’ ಅಂದೆ. 
’ಹೂಂ ಹೌದು ಮತ್ತೇ.. ಅದನ್ನೇ ಅಲ್ವಾ ಹೇಳಿದ್ದು ನಾನು..’ ಅಂದಳು.

ಎರಡನೆಯ ದಿನ ನಾನೊಬ್ಬಳೇ ಮೌನವಾಗಿ  ಬಟ್ಟೆ ಒಗೆದು ಪಾತ್ರೆ ತೊಳೆದು, ನೆಲ ಗುಡಿಸಿ ಒರೆಸಿದೆ. ಇವತ್ತೊಂದು ದಿನ ತಾನೇ.. ನಾಳೆ ಬರ್ತಾಳಲ್ವಾ ಎಂಬ ಧನಾತ್ಮಕ ಧೋರಣೆ ನನ್ನದಾದ ಕಾರಣ ಕೆಲಸಗಳೆಲ್ಲಾ ಮುಗಿದೇ ಬಿಟ್ಟವು. 

ಮೂರನೆಯ ದಿನ ಅವಳ ಕರೆಟ್ಟು ಟೇಮು ಮುಗಿದು ಎಷ್ಟೊತ್ತಾದರೂ ಅವಳ ಪತ್ತೆಯೇ ಇಲ್ಲ. ಮನೆಯೊಳಗಿನ ಕೆಲಸಗಳನ್ನೆಲ್ಲಾ ಅವಳಿಗಾಗಿ ಕಾಪಿರಿಸಿದ್ದೆ. ಮಾಡ ಹೊರಟಾಗ ಎಲ್ಲಾದರೂ ಅವಳು ಬಂದರೆ ಅವಳಿಗೆ ಸಂಬಳ ಕೊಟ್ಟು ನಾನು ಕೆಲಸ ಮಾಡಿದಂತಾಗೋಲ್ವೇ ಎಂಬ ಸ್ವಕಾಳಜಿಯಿಂದ ಎಲ್ಲವನ್ನೂ ಹಾಗೇ ಬಿಟ್ಟು ಮನೆಯನ್ನು ಗೊಬ್ಬರ ಗುಂಡಿಯಂತೆ ಅಲಂಕರಿಸಿ ಇರಿಸಿದ್ದೆ. ಡೋರ್ ಬೆಲ್ಲಿನ ಕಡೆಗೆ ಕಿವಿಯೆಲ್ಲಾ.. ಉಹೂಂ.. ಅವಳ ಸುಳಿವೇ ಇಲ್ಲ. ಮೆತ್ತಗೆ ಬಾಗಿಲು ಸರಿಸಿ ಬೀದಿ ಕಡೆಗೆ ನೋಡುವ ಎಂದೆನ್ನಿಸಿ ಬಾಗಿಲು ತೆರೆದರೆ ಅಲ್ಲೇ ಸ್ಥಂಬದಂತೆ ನಿಂತಿದ್ದಾಳವಳು. ’ಅಲ್ವೇ.. ಇಲ್ಲೇನು ಮಾಡ್ತಿದ್ದೀಯಾ?’ ಎಂದೆ. 

’ಆಗಿಂದ ನಿಮ್ಮ ಡ್ವಾರ್ ಬೆಲ್ಲ ಮಾಡ್ತಾ ಇದ್ದೀನಿ ಬಾಗ್ಲು ತೆಗೀಬಾರ್ದಾ’ ಎಂದಳು. 
’ಹೌದಾ .. ಒಳಗೇನು ಶಬ್ದವೇ ಕೇಳಿಸ್ಲಿಲ್ಲ.. ಎಂದು ನಾನು ಒಂದೆರಡು ಬಾರಿ ಒತ್ತಿ ನೋಡಿದೆ. ಸದ್ದೇ ಇಲ್ಲ. ಸ್ವಿಚ್ ಹಾಳಾಗಿದೆ  ಅನ್ಸುತ್ತೆ.. ಬಾಗಿಲು ತಟ್ಟೋದಲ್ವಾ..’ ಎಂದೆ.
’ಅದೆಲ್ಲಾ ನಂಗೆ ಗೊತ್ತಿಲ್ಲ.. ಅದ್ರ ಸ್ವಿಚ್ ಕಲೆಕ್ಷನ್ ಸರೀಗಿದೆಯ ಇಲ್ವಾ ಅಂತ ನೀವೇ ತಾನೇ ಚೆಕಿಂಗ್ ಮಾಡಿಟ್ಕೋಬೇಕು.. ಈಗ ನನ್ನತ್ರ ರೇಗಿದ್ರೆ.. ನಾನು ನನ್ನ ಟೇಮಿಗೆ ಬಂದು ನಿಮ್ಮ ಮನೇ ಮುಂದೆ ನಿಂತಿದ್ದೀನಿ. ಈಗ ಇನ್ನೊಂದು ಮನೆಗೆ ಹೋಗುವ ಹೊತ್ತಾಯಿತು. ನಂದು ಟೇಮು ಅಂದ್ರೆ ಟೇಮು.. ಅದ್ರಲ್ಲೆಲ್ಲಾ ಮೋಸ ಮಾಡೋ ಹಂಗೇ ಇಲ್ಲ ..’ ಅಂತ ಹೊರಟೇ ಹೋದಳು. 
ಮತ್ತೆ ನನ್ನ ಪಾಡು ನನ್ನ ಶತ್ರುವಿಗೂ ಬೇಡ. ಕೆಲವೊಮ್ಮೆ ನಿರ್ಧಾರಗಳು ಗಟ್ಟಿಯಾಗುವುದು ಇಂತಹ ಸಂಕಟದ ಸಮಯದಲ್ಲೇ ಏನೋ..
ನಾಲ್ಕನೆಯ ದಿನ ಅವಳು ಬರುವ ಹೊತ್ತಿಗೆ ಬಾಗಿಲು ತೆಗೆದಿಟ್ಟು ನೆಪಮಾತ್ರಕ್ಕೆ  ಕೈಯಲ್ಲೊಂದು ಪೇಪರ್ ಹಿಡಿದು ಅವಳಿಗಾಗಿ  ಕಾಯುತ್ತಾ ಕುಳಿತೆ. 

ಅವಳು ಸರಿಯಾದ ಸಮಯಕ್ಕೆ ಬಂದಳು. ಸ್ವಿಚ್ ಕಲೆಕ್ಷನ್ ಸರಿ ಮಾಡ್ಸಿದ್ರಿ ತಾನೆ ಎನ್ನುತ್ತಲೇ ಅಡುಗೆ ಮನೆಗೆ ಪಾತ್ರೆ ತೊಳೆಯಲು ನುಗ್ಗಿದಳು. ಅಲ್ಲಿ ಖಾಲಿ ಸಿಂಕ್ ಅವಳ ಕಣ್ಣು ಕುಕ್ಕಿತು. ಹಿಂದಿನ ಅಂಗಳದಲ್ಲಿ ನೇತು ಹಾಕಿದ್ದ ಬಟ್ಟೆಗಳು, ಒಳಗೆ ಥಳ ಥಳನೆ ಹೊಳೆಯುತ್ತಿದ್ದ ನೆಲವೂ ಅಚ್ಚರಿ ಮೂಡಿಸಿತು. ಏನೋ ದೊಡ್ಡ ದನಿಯಲ್ಲಿ ಹೇಳಲು ಬಾಯಿ ತೆಗೆದವಳು ಮಾತನಾಡದೇ ಸ್ವಲ್ಪ ಸಂದೇಹದಿಂದಲೇ ನನ್ನ ಬಳಿಗೆ ಬಂದಳು. ಅದಕ್ಕೇ ಕಾಯುತ್ತಿದ್ದ ನಾನು, ’ಇವತ್ತಿನಿಂದ ನಿನ್ನ ಟೇಮು ನೀನೇ ಇಟ್ಕೊಂಬಿಡು, ಇನ್ಮೇಲೆ ನನ್ನ ಕೆಲಸ ನಾನೇ ನೋಡ್ಕೋತೀನಿ… ನಿಂಗೆ ಕೊಟ್ಟ ಅಡ್ವಾನ್ಸಿನಲ್ಲಿ ಈ ಮೂರು ದಿನದ ಸಂಬಳವನ್ನು ಕಳೆದು ಉಳಿದ ದುಡ್ಡು ಇಲ್ಲಿಟ್ಟು ಹೋಗು’ ಎಂದೆ. 

’ಅಯ್ಯೋ ಅದೆಂಗಾಯ್ತದೆ.. ನೀವು ಕರೆದ್ರಿ ಅಂತ ಹೆಂಗೋ ನನ್ನ ಟೇಮು  ಎಜೆಸ್ಟ್ ಮಾಡ್ಕೊಂಡು ಇಲ್ಲಿಗೆ ಬರ್ತಾ ಇದ್ದೆ. ಹಂಗೆಲ್ಲಾ ದುಡ್ಡು ವಾಪಸ್ ಮಾಡು ಅಂದ್ರೆ ನಾನು ನಿಮ್ ಮ್ಯಾಲೆ ಕಾಸ್ ಹಾಕಿ ಕೋಲ್ಟಿಗೆ ಹೋಗಬೇಕಾಯ್ತದೆ. ಲವ್ ಅಂದ್ರೆ ಏನಂತ ನಂಗೂ ಗೊತ್ತದೆ .. ನಾ ಕೆಲ್ಸಕ್ಕೆ ಹೋಗೋ ಎಷ್ಟೋ ಮನೆಗಳಲ್ಲಿ ಲವ್ವರ್ ಗಳು ಇದ್ದಾರೆ ಗೊತ್ತಾ’ ಅಂದಳು.


ಈ ಮೂರು ದಿನಗಳಲ್ಲೇ ನಾನು ಬಹು ಮಟ್ಟಿಗೆ ಅವಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಹಂತ ಮುಟ್ಟಿದ್ದ ಕಾರಣ  ’ಸರಿ ತಾಯಿ ಆ ದುಡ್ಡು ನಿಂಗೇ ಆಯ್ತು ಬಿಡು. ಬೇರೆ ಮನೇಲೂ ಹೀಗೇ ಕೆಲಸದಿಂದ ಓಡಿಸಿದಾಗ ನೀನು ಕಾಸು ಹಾಕಿದ್ರೆ ನಿನ್ನ ಲವ್ವರುಗಳಿಗೆ ಕೊಡ್ಬೇಕಾಗುತ್ತಲ್ಲಾ.. ಅದಕ್ಕಾಯ್ತು’ ಅಂತ ಹೇಳಿ ಬಾಗಿಲಿನ ಕಡೆ ಕೈ ತೋರಿದೆ. ಸ್ವಲ್ಪ ಹೊತ್ತು ಬೊಂಬೆಯಂತೆ ನಿಂತಲ್ಲೇ ನಿಂತು ಮತ್ತೆ ತನ್ನ ವಾಚ್ ನೋಡಿಕೊಂಡು.. ಈಗ ನನ್ನ ಟೇಮ್ ಆಯ್ತು..ಹೊರಡ್ತೀನೀಗ .. ನಾಳೆಯಿಂದ ಬರಾಕಿಲ್ಲ ಈ ಮನೆಗೆ …   ಅಂತ ಸೆರಗು ಹಾರಿಸಿಕೊಂಡು ನಡೆದೇ ಬಿಟ್ಟಳು. 

******

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on “ಟೇಮು ಅಂದ್ರೆ ಟೇಮು: ಅನಿತಾ ನರೇಶ್ ಮಂಚಿ

  1. ಹ್ಹ ಹ್ಹ ಹ್ಹೊ ಹ್ಹೊ.. ಹೀಗೆ ಪ್ರತಿಯೊಂದು ಮನೆಯವರಿಂದ ತೆಗೆದುಕೊಂಡ ಹಣ ಲವ್ವರಗಳ ಮೇಲೆ ಸುರಿಯುತ್ತಾಳೆ ಅಷ್ಟೇ! ಲವ್ವರ್..  ಇನ್ನೂ ನಗ್ತಿದ್ದಿನಿ ಅನಿತಾ!  ಚೆನ್ನಾಗಿ  ಅರೆರೆ.. ಬರೆ ಚೆನ್ನಾಗಿದೆ ಅಂದ್ರೆ ಜಸ್ತೀಸ್ ಆಗುತ್ತಾ.. ತುಂಬ ತುಂಬ ಚೆನ್ನಾಗಿದೆ ಅನಿತಾ!

  2. ಚೆನ್ನಾಗಿದೆ! 'ಕೊಕೋ ಕೋಲಾ, ಚಿಪ್ಸಿನೊಂದಿಗೆ ಫಿಟ್ ನೆಸ್ ಪ್ರೋಗ್ರಾಮ್' ನಗೆ ತರಿಸುತ್ತದೆ.

  3. "ನಮ್ಮ ಹತ್ರನೂ ಕಾಸು ಹಾಕೋ ಲವ್ವರುಗಳು ತುಂಬಾ ಜನ ಬತ್ತಾರೆ… ಆದ್ರೆ ಟೇಮು ಮಾತ್ರ ಮೌಂಟೇನ್ ಮಾಡಕಿಲ್ಲ, ನಿಮ್ ಕೆಲ್ಸದಾಕಿಯಷ್ಟು….. ಭೋ ಚೆನ್ನಾಗದೆ". ಸಖತ್ ಕಾಮಿಡಿಯಾಗಿದೆ  ಈಗಿನ ಮನೆ ಕೆಲ್ಸಗಾರರ ವಾಸ್ತವ ನಡವಳಿಕೆಯ ಸಹಜ ಚಿತ್ರಣದೊಂದಿಗೆ…

  4. ವಾಸ್ತವಕ್ಕೆ ತೀರಾ ಹತ್ತಿರ. ಚೆನ್ನಾಗಿದೆ.

Leave a Reply

Your email address will not be published. Required fields are marked *