ಪೀಠಿಕೆ:ನಂಬಿಕೆ-ಮೂಡನಂಬಿಕೆಗಳ ನಡುವಿನ ವಾದ ಪ್ರತಿವಾದಗಳೇನೇ ಇರ್ಲಿ. ವಿಜ್ಞಾನದ ಸೂಕ್ಷ್ಮದರ್ಶಕಗಳ , ಪರೀಕ್ಷಾ ವಿಧಾನಗಳ ಕಣ್ಣಿಗೆ ಕಂಡಿದ್ದು ಮಾತ್ರ ಸತ್ಯ ಅನ್ನೋ ವೈಜ್ಞಾನಿಕರು, ನಮ್ಮಲ್ಲಿನ ವಸ್ತು, ವಿದ್ಯೆ, ಜ್ಞಾನಗಳನ್ನೆಲ್ಲಾ ಅವಲಕ್ಷಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳೋ ಪ್ರಾಚೀನರಿಗೂ ಇಂದಿನ ಮಹಾನ್ ಜ್ಞಾನಿ ಬುದ್ದಿಜೀವಿಗಳಿಗೂ ನಡುವೆ ನಡೀತಿರೋ ಸಂಘರ್ಷಗಳೇನೇ ಇದ್ರೂ ಕೆಲವೊಮ್ಮೆ ಈ ಮನಸ್ಸು ಅನ್ನೋದು ಯಾರ ಊಹೆಗೂ ನಿಲುಕದಂತೆ ವರ್ತಿಸುತ್ತಿರುತ್ತೆ. ನಾವು ಫೋನ್ ಮಾಡ್ಬೇಕು ಅಂತಿದ್ದಾಗಲೇ ಆತ್ಮೀಯರೊಬ್ಬರು ಫೋನ್ ಮಾಡೋದು, ಗೆಳತಿಯ ಹತ್ರ ನಾವೇನೋ ಮಾತಾಡಬೇಕು ಅಂತಿರುವಾಗ ಅವಳೇ ಅದ್ರ ಬಗ್ಗೆ ಮಾತಾಡಿಬಿಡೋದು..ಹೀಗೆ ನಮ್ಮ ಮನಸ್ಸಿನ ಭಾವನೆಗಳು ಬೇರೆಯವರಿಗೆ ದಾಟೋದು, ಅವರ ಭಾವಗಳು ನಮಗೆ ಬಂದು ತಲುಪೋದು ಆಗ್ತಿರುತ್ತೆ ಅಂತ ಅನೇಕರ ಅಭಿಪ್ರಾಯ. ಇವೆಲ್ಲಾ ಕಾಕತಾಳೀಯ ಅಂತ ಎಷ್ಟೇ ನಿರಾಕರಿಸಿದ್ರೂ ಪದೇ ಪದೇ ನಡೆಯೋಕೆ ಶುರು ಆದಾಗ ಅದರ ಬಗ್ಗೆ ಆಲೋಚಿಸೋ ಹಾಗೆ ಮಾಡುತ್ತೆ. ವಿಜ್ಞಾನಿಗಳ ಪ್ರಕಾರ ಅದೊಂದು ಭ್ರಮೆ ಅಥವಾ ಮನಸ್ಸಿನ ಅವಸ್ತೆ ಅಷ್ಟೇ. ಉಳಿದವರ ಮಾತಿನಲ್ಲಿ ಹೇಳೋದಾದ್ರೆ ಅದೇ ಟೆಲಿಪತಿ.
ಮುಂಚೆ ಲ್ಯಾಂಡ್ ಲೈನಿದ್ದಾಗ್ಲೇ ಚೆನ್ನಾಗಿತ್ತಪ್ಪ. ಚಿಕ್ಕಪ್ಪನ ಮನೆಗೋ, ದೊಡ್ಡಪ್ಪನ ಮನೆಗೋ ಫೋನ್ ಮಾಡಿದ್ರೆ ಅಲ್ಲಿದ್ದ ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ ಎಲ್ರತ್ರನೂ ಮಾತಾಡತಿದ್ವಿ. ಅವ್ರೂ ಹಾಗೆ, ನಮ್ಮನೆಯಲ್ಲಿರೋ ಎಲ್ರತ್ರನೂ ಮಾತಾಡೋವರ್ಗೂ ಸಮಾಧಾನ ಆಗ್ತಿರಲಿಲ್ಲ. ಫೋನ್ ಬಿಲ್ಲು ಸಿಕ್ಕಾಪಟ್ಟೆ ಬರತ್ತೆ ಬೇಗ ಮಾತಾಡ್ರೋ ಅಂತ ಅಮ್ಮ ಅಂದ್ರೆ, ಹೇ ಹಾಗೇನಿಲ್ಲ. ಮಾತಾಡ್ಲಿ ಬಿಡು. ನಾವು ಅಲ್ಲಿಗೆ ಹೋಗಿ ಬಂದಷ್ಟೇನು ಖರ್ಚಾಗಲ್ಲ. ಈ ಫೋನಲ್ಲಿ ಮಾತಾಡ್ತಾ ಇದ್ರೆ, ಅಲ್ಲಿಗೆ ಹೋಗಿ ಬಂದಂಗೇ ಆಗತ್ತೆ ಅಂತ ಸಮಾಧಾನ ಮಾಡ್ತಿದ್ರು ಅಪ್ಪ. ಈಗ ಎಲ್ರ ಕೈಗೊಂದು ಮೊಬೈಲು ಬಂದ್ರೂ ಯಾರೂ ಮಾತಿಗೆ ಸಿಗಲ್ಲ. ಎಲ್ಲಿಗಾದ್ರೂ ಫೋನ್ ಮಾಡಿದ್ರೂ ಅವ್ರ ಮಕ್ಕಳೋ, ಮನೆಯವ್ರೋ ಸಿಗಲ್ಲ. ಹೇ ಹೊರಗಿದೀನಿ ಕಣೋ ಅಂತನೋ, ಅವ್ರು ಇನ್ನೇನೋ ಬಿಸಿ ಇದಾರೆ ಕಣೋ ಅಂತಾನೋ ಉತ್ರ ಬರತ್ತೆ. ಮುಂಚೆಯಾದ್ರೂ ಫ್ರೀಯಾದ ಮೆಸ್ಸೇಜುಗಳಾದ್ರೂ ಇರ್ತಿತ್ತು. ಈಗ ಅದಕ್ಕೂ ಕತ್ರಿ ಹಾಕಿದ ಮೇಲೆ ಗೆಳೆಯ ಗೆಳೆಯರ ನಡುವಿನ ಬಂಧನೇ ದೂರಾಗ್ತಿರೋ ಹಾಗೆ ಅನಿಸುತ್ತಿದೆ. ಈ ಫೇಸ್ಬುಕ್ಕು, ವಾಟ್ಸಾಪುಗಳಿದ್ರೂ ಎಲ್ಲಕ್ಕೂ ನೆಟ್ಟು ಬೇಕು.. ಆಗೆಲ್ಲಾ ಅನಿಸೋದು ಒಂದೇ. ನಾವು ಮತ್ತೊಬ್ರ ಮನಸ್ಸಿನ ಜೊತೆ ಸೀದಾ ಮಾತಾಡೋ ಹಾಗಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತಾ… ಹೂಂ. ಈ ತರ ಅನ್ಕೊಂಡಿದ್ದು ನಾವು ನೀವುಗಳಷ್ಟೇ ಅಲ್ಲ. ನಮ್ಮ X-Men ಸೀರೀಸ್ ಅಲ್ಲಿ ಬರೋ ಪ್ರೊಫೆಸರ್ ಎಕ್ಸ್(ಮಾರ್ವೆಲ್), ಗೀತಾ ಮತ್ತು ಶಕ್ತಿಮಾನ್, ಮಹಾ ಗುರುಗಳ ಮಧ್ಯೆಯ ಟೆಲಿಪತಿಕ್ ಸಂಭಾಷಣೆ, Shiva Tilogyಯ Secret of Nagas ಅಲ್ಲಿ ಎದುರಿಗಿರುವವರ ಮನಸ್ಸಿನಲ್ಲಿರೋದನ್ನ ಅರಿತಿದ್ದ ಭೃಗು ಮಹರ್ಷಿ, ದ್ರೌಪದಿ ಸಭೆಯೊಳಗಿಂದ ಕೃಷ್ಣಾ ಅಂದಿದ್ದನ್ನು ಎಲ್ಲೋ ಇದ್ದ ತನ್ನ ಅಂತಃಪುರದಿಂದ ಕೇಳಿಸಿಕೊಂಡ ಮುರಾರಿ.. ಹೀಗೆ ನಮ್ಮ ಕಥಾ ಹಂದರಗಳಲ್ಲಿ, ಶತ ಶತಮಾನಗಳ ಹಿಂದಿನಿಂದಲೇ ಈ ತರದ ಪ್ರಯತ್ನಗಳೂ, ಇತ್ತೀಚೆಗೆ ಅವುಗಳ ಸತ್ಯಾಸತ್ಯತೆಯನ್ನು ಪ್ರಮಾಣಿಸಲು ಅನೇಕ ಪ್ರಯೋಗಗಳೂ ನಡೆದೇ ಇದೆ.ಬನ್ನಿ ಈ ಮನೋಲೋಕದಲ್ಲೊಂದು ಸುತ್ತು ಹಾಕಿ ಬರೋಣ.
ಈಗಿನ ಹಲವರಿಗೆ ವಿಜ್ಞಾನ ಅಂದರೆ ಪಾಶ್ಚಾತ್ಯ ಜಗತ್ತಿನದು ಮಾತ್ರ. ಉಳಿದದ್ದೆಲ್ಲಾ ಮೂಢನಂಬಿಕೆ. ಹಾಗಾಗಿ ಈ ಟೆಲಿಪತಿಯ ಬಗ್ಗೆ ಅಲ್ಲಿಂದಲೇ ಶುರು ಮಾಡೋಣ. ಟೆಲಿಪತಿ ಅನ್ನೋದು ಟೆಲಿ(ದೂರ), ಪ್ಯಾಥಿಯೋಸ್(ಸಂವೇದನೆ, ಭಾವನೆ, ಅನುಭವ) ಅನ್ನೋ ಎರಡು ಗ್ರೀಕ್ ಪದಗಳ ಸಂಯೋಗದಿಂದ ಉದ್ಭವಿಸಿದ್ದು. ಅಂದಾಗೆ ಈ ಪದವನ್ನು ೧೮೮೨ ರಲ್ಲಿ ಫೆಡರಿಕ್ ಮೈರಿಸ್ ಅನ್ನೋ ಲೇಖಕ ಬಳಸಿದನಂತೆ. ಅದಕ್ಕಿಂತ ಮುಂಚೆ ಇದು ಇರಲಿಲ್ಲವೇ ಅನ್ನೋದು ಮತ್ತೊಂದು ವಾದ. ಅದಕ್ಕೆ ಆಮೇಲೆ ಬರೋಣ. ಇದನ್ನು ಪ್ರಮಾಣಿಕರಿಸಲು ನಡೆದ ವೈಜ್ಞಾನಿಕ(?) ಪ್ರಯೋಗಗಳಲ್ಲಿ ಮೊದಲನೆಯದು ಅಮೇರಿಕನ್ ಲೇಖಕ ಉಂಪ್ಟನ್ ಸಿಂಕ್ಲೇರ್(umpton sinclair) ನ ಮೆಂಟನ್ ರೇಡಿಯೋ ಎಂಬ ಪುಸ್ತಕದಲ್ಲಿನ ಪ್ರಯೋಗ. ಅದರಲ್ಲಿ ಆತ ತನ್ನ ಎರಡನೇ ಹೆಂಡತಿ ಮೇರಿಗೆ ತಾನು ಬರೆದಿದ್ದ, ಆದರೆ ಆಕೆಗೆ ತೋರಿಸದಿದ್ದ ೨೨೫ ಚಿತ್ರಗಳನ್ನು ಈ ಟೆಲಿಪತಿಯ ಮೂಲಕ ಪುನಃ ಬಿಡಿಸಲು ಕೊಡುತ್ತಾನೆ. ಅದರಲ್ಲಿ ಆಕೆ ೬೫ನ್ನು ಯಥಾವತ್ ಬಿಡಿಸುತ್ತಾಳೆ. ೧೫೫ ಭಾಗಷಃ ಸರಿ, ೭೦ ರಲ್ಲಿ ಫೇಲ್ ಆಗ್ತಾಳೆ ಅಂತ ಬರೆದುಕೊಳ್ತಾನೆ ಲೇಖಕ. ಆದರೆ ಇದನ್ನು ಯಾವುದೇ ವೈಜ್ಞಾನಿಕ ವಿಧಾನದಲ್ಲಿ ಮಾಡಲಾಗದೇ ಇದ್ದಿದ್ರಿಂದ ಇದನ್ನು ಒಪ್ಪಲಾಗದು ಅಂತ ವಿಜ್ಞಾನಿಗಳು ತಳ್ಳಿ ಹಾಕಿ ಬಿಡ್ತಾರೆ. ನಂತರ ನಡೆದ ಪ್ರಯೋಗ ಅಕ್ಟೋಬರ್ ೧೯೩೭ರಲ್ಲಿ ನಡೆದ ಲೇಖಕ ಹೆರಾಲ್ಡ್ ಶೆರ್ಮಾನ್ ಮತ್ತು ಹ್ಯೂಬರ್ಟ್ ವಿಲ್ಕಿನ್ಸನ ನಡುವಿನದು. ಶೆರ್ಮಾನ್ ನ್ಯೂಯಾರ್ಕಿನಲ್ಲಿದ್ದರೆ, ವಿಲ್ಕಿನ್ಸ್ ಆರ್ಕಟಿಕ್ ಧೃವ ಪ್ರದೇಶದಲ್ಲಿ ಸಂಶೋಧನೆಯಲ್ಲಿ ತೊಡಗಿರುತ್ತಾನೆ. ಪ್ರತಿ ನಿತ್ಯ ಅವರು ತಮಗನಿಸಿದ ಭಾವಗಳನ್ನ ಒಂದು ಡೈರಿಯಲ್ಲಿ ದಾಖಲಿಸುತ್ತಾ, ಅದರ ಒಂದು ಪ್ರತಿಯನ್ನು ಕೊಲಂಬಿಯಾ ಯೂನಿವರ್ಸಿಟಿಯ ಒಬ್ಬ ಸೈಕಾಲಜಿ ಪ್ರೊಫೆಸರ್ ಗಾರ್ಡನರ್ ಮರ್ಫಿಗೆ ಕಳುಹಿಸುತ್ತಾ ಇರುತ್ತಾರೆ. ಐದೂವರೆ ತಿಂಗಳ ನಂತರ ಅವರು ಸಿಕ್ಕಾಗ ನೋಡಿದರೆ ೭೫% ಭಾವಗಳು ಒಂದೇ ಇರುತ್ತದೆ. ಅದರಲ್ಲಿರೋ ಕೆಲವೊಂದು ಒಂದು ದಿನದ ಟೆಲಿಪತಿಗಳು ಅಥವಾ ಇನ್ನೊಂದು ಗುಂಪಿನವರ ಪ್ರಕಾರ ಕಾಕತಾಳೀಯತೆಗಳು ಹೀಗಿವೆ ನೋಡಿ. ಒಂದೇ ದಿನ ಇಬ್ಬರಿಗೂ ಕೆಟ್ಟ ಹವಾಮಾನದ ಕಾರಣದಿಂದ ಕೆಲಸ ಕೆಟ್ಟಿರುತ್ತೆ, ಯಾರದೋ ಕೈ ಚರ್ಮ ಉಗುರಿನ ಬಳಿ ಕಿತ್ತು ಬಂದಿರೋದು ನೋಡಿರ್ತಾರೆ, ಚೆನ್ನಾಗಿ ಕುಡಿದಿರ್ತಾರೆ, ಸಿಗಾರ್ ಪೆಟ್ಟಿಗೆ ಇವರು ಬರೋ ದಾರಿಯಲ್ಲಿ ಎದುರಾಗಿರುತ್ತೆ.ಮತ್ತೊಂದು ಪ್ರಸಂಗ ನೋಡಿ. ಆರ್ಕಟಿಕ್ ನಲ್ಲಿದ್ದ ವಿಲ್ಕಿನ್ಸ್ ಅಮೇರಿಕನ್ ಸೇನಾಧಿಕಾರಿಗಳ ಜೊತೆಗೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿರತ್ತೆ. ಆದ್ರೆ ಕೆಟ್ಟ ಹವೆಯ ಕಾರಣದಿಂದ ಆತನ ವಿಮಾನವನ್ನ ಮಧ್ಯೆಯೇ ಒಂದು ಕಡೆ ನಿಲ್ಲಿಸಬೇಕಾಗಿರತ್ತೆ. ಅಂದು ಕಾರ್ಯಕ್ರಮಕ್ಕೆ ಒಳ್ಳೆಯ ಕೋಟನ್ನೂ ಹಾಕಿಲ್ಲವಲ್ಲಪ್ಪ. ನನ್ನ ಸಂಜೆಯ ಕೋಟು ಗಿಡ್ಡವಾಗುತ್ತಿದೆ ಎಂಬ ವೇದನೆಯಲ್ಲಿರುತ್ತಾನೆ ವಿಲ್ಕಿನ್ಸ್. ಇತ್ತ ಕೂತಿರೋ ಶರ್ಮನ್ ಕವಿ ಮಹಾಶಯ ಬರೆದಿರುತ್ತಾನೆ. ನೀನು ಮಿಲಿಟರಿ ಡ್ರೆಸ್ಸಿನಲ್ಲಿರೋ ಜನರೊಂದಿಗೆ ಇದ್ದೀಯ. ಸಖತ್ತಾದ ಮಾತುಕತೆಗಳು ನಡಿತಾ ಇದೆ. ನೀನಿನ್ನು ಸಂಜೆಯ ಡ್ರೆಸ್ಸಿನಲ್ಲೇ ಇದೀಯ… ಅಂತ !! ಯಪ್ಪಾ.. ಕೆಲವೊಂದು ಕಾಕತಾಳೀಯಗಳು ಇದ್ದರೂ ಇಷ್ಟೆಲ್ಲಾ ಸಮಾನತೆಗಳಿರಲು ಸಾಧ್ಯವೇ ಇಲ್ಲ. ಐದೂವರೆ ತಿಂಗಳುಗಳ ನಂತರ ಇವರ ಡೈರಿಗಳನ್ನ, ಇವರು ತಮಗೆ ಕಳುಹಿಸಿದ ದಾಖಲೆಗಳನ್ನ ಪರಾಮರ್ಶಿಸಿದ ಕೊಲಂಬಿಯಾ ಯೂನಿವರ್ಸಿಟಿಯ ಪ್ರೊಫೆಸರ್ ದಂಗಾಗುತ್ತಾರೆ. ಇಲ್ಲಿಯವರಿಗೆ ಪ್ರಮಾಣೀಕರಿಸದ “ಏನೋ” ಸತ್ಯ ಇದೆ ಎಂದು ಆ ಯೂನಿವರ್ಸಿಟಿ ಪ್ರೊಫೆಸರ್ ಅಭಿಪ್ರಾಯ ಪಡುತ್ತಾರೆ.
ಈ ತರದ ಅಸಂಖ್ಯ ಪ್ರಯೋಗಗಳು ನಡೆದಿರಬಹುದು. ಈ “ಟೆಲಿಪತಿ”ಯನ್ನು ವೈಜ್ಞಾನಿಕವಾಗಿ ವಿವರಿಸಲೂ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ವಿಲಿಯಮ್ ಕ್ರೂಕನ ಮನೋಅಲೆ(ಬ್ರೈನ್ ವೇವ್) ಸಿದ್ದಾಂತ. ಮೆದುಳಿನಲ್ಲಿನ ಈಥರ್ನ ವೈಬ್ರೇಶನ್ಗಳಿಂದ ಉಂಟಾಗೋ ಅಲೆಗಳೇ ಈ ಟೆಲಿಪತಿಗೆ ಕಾರಣ ಇರಬಹುದೆಂದು ಆತ ಪ್ರತಿಪಾದಿಸಿದ್ದ. ಇಪ್ಪತ್ತನೆಯ ಶತಮಾನದ ಹೊತ್ತಿಗೆ ಇನ್ನೊಂದಿಷ್ಟು ಸಿದ್ದಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ದೈವಿಕ ಸಿದ್ದಾಂತ(spiritual theory). ಇದರ ಪ್ರಕಾರ ಹೊರಗ್ರಹದಿಂದ ಬಂದ ಜೀವಿಗಳು, ಮಾನವಾತೀತ ಶಕ್ತಿಗಳು, ದೈವೀಕ ಶಕ್ತಿಗಳು ನಮ್ಮ ಯೋಚನೆಗಳನ್ನು ನಿಯಂತ್ರಿಸುತ್ತವೆ! ನಂತರ ವಿಜ್ಞಾನಿಗಳು ಇದನ್ನು ಅಲ್ಲಗಳೆದು ಈ ತರ ಅಂದುಕೊಳ್ಳೋ ಮನಸ್ಥಿತಿಯನ್ನೇ ಒಂದು ಖಾಯಿಲೆ ಅಂತ ಹೆಸರಿಟ್ಟಿದ್ದು ಇತಿಹಾಸ !! ಸ್ಕ್ರೀಜೋಫೀನಿಯಾ ಎಂಬ ಮಾನಸಿಕ ಅವಸ್ಥೆ(ಖಾಯಿಲೆ ಅನ್ನೋದು ತಪ್ಪಾಗಬಹುದೇನೋ)ಯ ಜನರಿಗೆ ನಮ್ಮ ಆಲೋಚನೆಗಳು ನಮ್ಮದಲ್ಲ. ಇದು ಯಾವುದೋ ದೆವ್ವ, ಪ್ರೇತ, ದಯ್ಯ, ಅಪ್ಸರೆ, ಅಥವಾ ಇನ್ಯಾವುದೋ ಮಾನವಾತೀತ ಶಕ್ತಿಯದು. ಇದನ್ನ ಯಾರೋ ತಮ್ಮ ಮನಸ್ಸಿನೊಳಗೆ ತುರುಕುತ್ತಿದ್ದಾರೆ ಅನ್ನಿಸುತ್ತಂತೆ. ಇನ್ನು ಕೆಲವರಿಗೆ ತಮ್ಮ ಭಾವನೆ, ಕಲ್ಪನೆಗಳನ್ನ ಯಾರೋ ತಮ್ಮ ಮನಸ್ಸಿನಿಂದ ಕಿತ್ತು ಹೊರಗೆ ಹಾಕುತ್ತಿದ್ದಾರೆ ಅಂತಲೂ ಅನಿಸುತ್ತಂತೆ. ಈ ತರಹದ ಭಾವಗಳ ಬಗ್ಗೆ ಮೆಲನಿ ಕ್ಲೈನ್ ಅನ್ನೋ ಮನೋವಿಜ್ಞಾನಿ ಬರೀತಾ ಹೋಗ್ತಾಳೆ. ತಾಯಿಯ ಹೊಟ್ಟೆಯೊಳಗಿರೋ ಮಗುವಿಗೆ ಅದರ ಮನಸ್ಸಿನಲ್ಲಿ ನಡಿತಿರೋ ಭಾವಗಳಿಗೂ ಅದನ್ನು ಹೊತ್ತಿರೋ ತಾಯಿಯ ಮನಸ್ಸಿನ ಭಾವಗಳಿಗೂ ನಡುವಿನ ವ್ಯತ್ಯಾಸ ತಿಳಿಯಲು ಆಗೋದಿಲ್ಲ. ಆದರೆ ಬೆಳಿತಾ ಬೆಳಿತಾ ಮಗು ತನ್ನದೇ ಆದ ಭಾವಗಳನ್ನ ಹೊಂದುತ್ತಾ ಹೋಗುತ್ತೆ. ಇದು ಸಾಧ್ಯವಾಗದಂತಹ ವ್ಯಕ್ತಿಗಳು ಈ ಸ್ಕ್ರೀಜೋಫೀನಿಯಾ ಅಂತ ಆ ಮಾನಸಿಕ ಅವಸ್ಥೆಯನ್ನು ವರ್ಣಿಸಲು ಪ್ರಯತ್ನಿಸ್ತಾ ಹೋಗ್ತಾಳೆ.
ನಂತರ ಬಂದ ವಿಜ್ಞಾನಿಗಳು ಈ ಮನೋ ಅಲೆಗಳೆಂಬುದು ಇದ್ರೂ ಅವು ತುಂಬಾ ಕ್ಷೀಣವಾಗಿದ್ದು ಇದರಿಂದ ಯಾವುದೇ ತರಹದ ಮಾಹಿತಿ ವಿನಿಮಯ ಸಾಧ್ಯವಿಲ್ಲವೆಂದು ತಳ್ಳಿ ಹಾಕಿದ್ರು. ಆದ್ರೂ ಈ ಟೆಲಿಪತಿಯನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸೋ/ಅಲ್ಲಗಳೆಯೋ ಯಾವ ಪ್ರಯೋಗಗಳೂ ಇದ್ದಿರಲಿಲ್ಲ. ಆಗ ಬಂದಿದ್ದು ಎರಡು ಪ್ರಸಿದ್ದ ಪ್ರಯೋಗಗಳು. ಮೊದಲನೆಯದು “ಜೀನರ್ ಕಾರ್ಡ್ ಪ್ರಯೋಗ”. ಒಬ್ಬನಿಗೆ ಸಂದೇಶ ಕಳುಹಿಸುವವನು ಎಂದು ಅವನಿಗೆ ಐದು ಜೀನರ್ ಕಾರ್ಡುಗಳಲ್ಲಿ ಯಾವದಾದರೂ ಒಂದನ್ನು ತನ್ನ ಮನಸ್ಸಿನಲ್ಲೇ ಕಲ್ಪಿಸಿಕೊಂಡು ಅದನ್ನು ಮತ್ತೊಬ್ಬನಿಗೆ ಈ “ಟೆಲಿಪತಿ”ಯ ಮೂಲಕ ತಿಳಿಸಬೇಕು. ಅದನ್ನು ಅರಿತ ಆತ ಮೊದಲನೆಯವನು ಯಾವ ಕಾರ್ಡನ್ನು ಆರಿಸಿದ್ದಾನೆ ಎಂದು ತಿಳಿಸಬೇಕು. ಸುಮ್ಮನೇ ಊಹಿಸಿದರೂ ೨೦% ಸತ್ಯ ಹೇಳೋ ಸಾಧ್ಯತೆಯಿರೋದ್ರಿಂದ ೨೦% ಗಿಂತ ಜಾಸ್ತಿ ಸರಿಯಾದರೆ ಮಾತ್ರ ಇದು “ಟೆಲಿಪತಿ” ಎಂಬುದು ಇರುವುದರ ಸಾಧ್ಯತೆಯನ್ನು ಸಾರುತ್ತದೆ ಎಂದು ಇದರ ಹೇಳಿಕೆ. ಆದರೆ ಮೊದಲನೆಯವ ಗ್ಲಾಸ್ ಹಾಕಿಕೊಂಡಿದ್ರೆ ಅವನ ಗ್ಲಾಸುಗಳನ್ನ ನೀಟಾಗಿ ಗಮನಿಸ್ತಾ ಇದ್ರೆ ಅವನು ನೋಡುತ್ತಿರೋ ಕಾರ್ಡುಗಳು ಯಾವುದು ಎಂದು ಗಮನಿಸಬಹುದು ! ಈ ತರಹದ್ದೇ ಹಲವು ಮೋಸಗಳಾಗೋ ಸಾಧ್ಯತೆಯಿದ್ದಿದ್ರಿಂದ ಬಂದ ಮತ್ತೊಂದು ಪ್ರಯೋಗ ಗ್ಯಾಂಗ್ ಫೆಲ್ಡ್ ಪ್ರಯೋಗ. ಇದರಲ್ಲಿ ಇಬ್ಬರನ್ನು ಯಾವ ತರದಲ್ಲೂ ಸಂಪರ್ಕಿಸಲು ಸಾಧ್ಯವೇ ಆಗದಂತಹ ಎರಡು ಪ್ರತ್ಯೇಕ ಕೋಣೆಗಳಲ್ಲಿ ಕುಳ್ಳಿರಿಸಿ ಮೊದಲನೆಯ ಪ್ರಯೋಗವನ್ನು ನಡೆಸುತ್ತಾರೆ.
ತದನಂತರ ಇನ್ನೂ ಹಲವು ಸಿದ್ದಾಂತಗಳು ಬಂದವು. ಕೆಲವರು ಇದನ್ನೂ ಒಂದು ಪ್ರಕಾರದ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳು( ನಿರ್ವಾತ(vacuum) ಮೂಲಕವೂ ಹಾದು ಹೋಗಬಹುದಾದ ಬೆಳಕು, xray , gamma ರೇ ನಂತಹವು ) ಎಂದರೆ ಗೆರಾಲ್ಡ್ ಫಿನ ಬರ್ಗ್ ಅನ್ನೋನು ಇದು ಇನ್ನೂ ಕಂಡು ಹಿಡಿಯಲಾಗದ “ಸೈಕಾನ್” ಅಥವಾ “ಮೈಂಡಾನ್” ಅನ್ನೋ ಕಣಗಳಿಂದ ಆಗುತ್ತವೆ ಅಂತ ಪ್ರತಿಪಾದಿಸಿದ. ಇತ್ತೀಚಿನ ವಿಜ್ಞಾನಿಗಳಾದ ಚಾರ್ಲ್ಸ್ ಟಾರ್ಟ್ ಅಂತಹ ಕೆಲವರು ಈ “ಟೆಲಿಪತಿ” ಅನ್ನೋದು ಒಂದು ಇದೆ ಅಂತ ಒಪ್ಪಿಕೊಂಡರೂ ಅದು ಭೌತಿಕವಾಗಿಲ್ಲ. ಆದರೆ ಮಾನಸಿಕವಾದ ಸಿದ್ದಾಂತಗಳಿಂದ ಅದನ್ನು ಪ್ರಮಾಣಿಸಬಹುದೇನೋ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ತರಹದ ನಂಬಿಕೆಗಳು ಬೆಳೆಯುತ್ತಾ ಮನೋಸಾರಿಗೆ (ಟೆಲಿ ಟ್ರಾನ್ಸಪೋರ್ಟ್) ಅನ್ನೋ ಕಲ್ಪನೆ ಕೂಡ ಬರ್ತಾ ಇದೆ. ಅಂದ್ರೆ ವಸ್ತುಗಳನ್ನೇ ಅಣು ಅಣುಗಳಾಗಿ ವಿಭಜಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಗಳ ಮೂಲಕ ಸಾಗಿಸಿ ಅಲ್ಲಿ ಮತ್ತೆ ಜೋಡಿಸೋದು !. ಕಲ್ಪನೆಗೆ ಬರ್ತಿಲ್ವಾ ?
ಸುಮ್ನೇ ಹಿಂಗೆ ಊಹಿಸಿ. ನೀವು ನಿಮ್ಮ ಸ್ನೇಹಿತನ ಜೊತೆಗೆ ಒಂದು ಫೋನಿನಲ್ಲಿ ಮಾತಾಡ್ತಿರೀರಿ. ಸದ್ಯಕ್ಕೆ ಲ್ಯಾಂಡ ಲೈನೇ ಅಂತಿಟ್ಕೊಳ್ಳಿ. ಆ ಲ್ಯಾಂಡ್ ಲೈನಿನ ಮೂಲಕವೇ ನೀವು ತೂರಿ ಹೋಗಿ, ಆ ಕಡೆಯ ಫೋನಿನಿಂದ ಆಚೆ ಬಂದ್ರೆ ಹೇಗಿರುತ್ತೆ ? ಅದೂ ಕ್ಷಣ ಮಾತ್ರದಲ್ಲಿ .. ಸೂಪರ್ ಅಲ್ವಾ ? 🙂 ಈ ಬಸ್ಸು, ಆಟೋ, ರೈಲುಗಳಿಗೆ ಕಾಯೋ ಜಂಜಾಟ, ಟ್ರಾಫಿಕ್ ತಲೆನೋವುಗಳೇ ಇಲ್ಲ ! ಲ್ಯಾಂಡ್ ಲೈನ್ ಓಕೆ. ಮೊಬೈಲಾದ್ರೆ .. ? ಆಗ ತರಂಗಾಂತರಗಳಲ್ಲಿ ಒಂದಾಗಿ ಆಕಾಶ ಮಾರ್ಗದಲ್ಲಿ ಹಾದು ಮತ್ತೆ ಆಚೆ ಕಡೆ ಪಂಚಭೂತಗಳಲ್ಲಿ ಒಂದಾದ ದೇಹದಲ್ಲಿ ಬದಲಾಗೋದು.. ಹೇಳೋಕೆ ಕೇಳೋಕೆ ಚೆನ್ನಾಗೇ ಇದೆ. ಆದ್ರೆ ಫುಲ್ಲು ಕಾಗೆ ಅಂದ್ರಾ ? ಇಲ್ಲಪ್ಪ. ಆ ತರಹದ ಪ್ರಯೋಗಗಳು ನಡೀತಾ ಇದೆ. ನಿಜವಾಗ್ಲೂ. ಈಗಾಗ್ಲೇ ನಮ್ಮ ಪುರಾಣಗಳಲ್ಲಿ ಬಂದ ಕ್ಷಣಮಾತ್ರದಲ್ಲಿ ಎಲ್ಲಿಗೆ ಬೇಕಾದ್ರೂ ಸಂಚರಿಸೋ ಪರಶುರಾಮ, ನಾರದರಂತ ಎಷ್ಟೋ ಉದಾಹರಣೆಗಳಿವೆ ಅಂದ್ರಾ ? ಹೂಂ ಸರ್.. ಸ್ಟಾರ್ ಟ್ರೆಕ್ಕುಗಳಂತ ಕತೆಗಳಲ್ಲಿ ಇದು ಆಗ್ಲೇ ಬಂದೋಗಿದೆ ಅಂದ್ರಾ.. ಅದೂ ಹೌದು ಸಾರ್.. ಆದ್ರೆ ವೈಜ್ನಾನಿಕವಾಗಿ, ಪ್ರಾಕ್ಟಿಕಲ್ಲಾಗಿ ಇದನ್ನು ಸಾಧ್ಯವಾಗಿಸೋ ಪ್ರಯತ್ನಗಳು ಇನ್ನೂ ನಡೀತಾ ಇದೆ ಅಂದೆ ಅಷ್ಟೇ,,
ಮುಗಿಸೋ ಮೊದಲು:ನನ್ನ ಗೆಳೆಯರೊಬ್ರು ಕೇಳ್ತಾ ಇದ್ರು . ಈ ಭೂತ ಕೋಲ, ದೇವರು ಅನ್ನದೆಲ್ಲಾ ನೀನು ನಂಬ್ತೀಯ ಅಂತ. ಅಲ್ಲ ಕಣೋ ಈ ರೇಖಿ, ಪ್ರಾಣಿಕ್ ಹೀಲಿಂಗ್, ಸಿದ್ದಿ ಸಮಾಧಿ, ಸುದರ್ಶನ ಕ್ರಿಯೆ ಎಲ್ಲಾ ಸತ್ಯ ಅಂತಾದ್ರೆ ಟೆಲಿಪತಿ, ಭೂತ ಕೋಲ, ದೇವರೂ ಯಾಕಿರ್ಬಾದ್ರು ? ವರ್ಣಿಸಲಾಗದ, ಅನುಭವಕ್ಕೆ ಬರದ ಶಕ್ತಿಯೊಂದು ಇದೆ. ಅದು ಒಳ್ಳೆಯದೇ ಮಾಡುತ್ತೆ ಅನ್ನೋ ನಂಬಿಕೆಯಿಂದ ಅದನ್ನ ಕರೆಯೋ ಹೆಸರುಗಳು ಬೇರೆ ಇರ್ಬೋದು. ಆದರೆ ನನ್ನೊಬ್ಬನ್ನ ಕಣ್ಣಿಗೆ ಕಂಡಿಲ್ಲ ಅಂದ ಮಾತ್ರಕ್ಕೆ ಅದು ಇಲ್ಲ ಅಂತಲೇ ಯಾಕೆ ಅಂದುಕೊಳ್ಳಬೇಕು ? ನಮಗೆ ತಿಳಿದದ್ದೊಂದೇ ಸತ್ಯ ಆಗಿರಬೇಕು. ನಮ್ಮ ಗ್ರಹಿಕೆಗೆ ಬರದ ಪ್ರಪಂಚದ ಉಳಿದೆಲ್ಲಾ ಸಂಗತಿಗಳು ಶುದ್ದ ಸುಳ್ಳೆನ್ನುವುದು ಎಷ್ಟರ ಮಟ್ಟಿಗೆ ಸರಿ ಅಂತ ಕೇಳಿದೆ.. ಅಲ್ವಾ ? ಇದೇ ಸತ್ಯ ಅಂತಲ್ಲ. ಆಗಿರಬಾರದೇಕೆ ಅನ್ನೋ ಅಭಿಪ್ರಾಯವಷ್ಟೇ.
*****