ನಮ್ಮ ಕಥಾನಾಯಕ ರವಿ ಕಳೆದ ದೀಪಾವಳಿಯ ವೇಳೆ ತನ್ನವ್ವನಿಗೆ ಟೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಾಲ್ಕೈದು ದಿನ ನಾಪತ್ತೆಯಾಗಿದ್ದ. ಮಧ್ಯೆ ಮಧ್ಯೆ ಮನೆಗೆ ಫೋನ್ ಮಾಡಿ ತಾನು ಎಲ್ಲಿದ್ದೇನೆ ಯಾವಾಗ ಮನೆಗೆ ಬರುತ್ತೇನೆ ಎಂಬುದನ್ನು ಅವನು ಹೇಳುತ್ತಿದ್ದ ಕಾರಣ ಮನೆಯವರಿಗೆ ಹಬ್ಬದ ಸಮಯದಲ್ಲಿನ ಅವನ ಟೂರಿನ ಉದ್ದೇಶದ ಅರಿವಾಗಿರಲಿಲ್ಲ. ಟೂರಿನಿಂದ ಮನೆಗೆ ವಾಪಸ್ಸು ಬಂದವನು ಒಂದು ದಿನ ರಾತ್ರಿ ಅವ್ವನ ಎದುರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಆತನ ದುಃಖದ ಹಿಂದಿನ ಸತ್ಯ ಮತ್ತು ಆ ಟೂರಿನ ಉದ್ದೇಶ ರವಿಯ ತಾಯಿಗೆ ಅವತ್ತೇ ಗೊತ್ತಾಗಿದ್ದು. ಆ ರಾತ್ರಿಯ ನಂತರ ದಿನಾ ಕೆಲಸಕ್ಕೆ ಹೋಗುತ್ತಿದ್ದ ರವಿ ಅಲ್ಲಿ ಇಲ್ಲಿ ಒಂದೆರಡು ದಿನ ಸುತ್ತಿದನಾ ಹೊರತು ಮತ್ತೆ ಎಂದಿನಂತೆ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅವನ ದಿನಚರಿ ಮನೆಯ ಉಳಿದ ಸದಸ್ಯರ ಕಣ್ಣಿಗೆ ಬಿದ್ದರೂ ಅವನಿಗೆ ಬಹುಶಃ ದೀಪಾವಳಿ ರಜೆ ಇರಬಹುದೇನೋ ಎಂದು ಸುಮ್ಮನಾಗಿದ್ದರು. ಅವನ ತಾಯಿಯೂ ಸಹ ಮನೆಯ ಉಳಿದ ಸದಸ್ಯರ ಜೊತೆ ಅವನ ಕುರಿತು ಮಾತನಾಡಿರಲಿಲ್ಲ. ಹೀಗಿರುವಾಗ ರವಿ ಮತ್ತೊಂದು ಟೂರಿಗೆ ಅಣಿಯಾದ. ಅವನು ಮತ್ತೊಂದು ಟೂರಿಗೆ ಅಣಿಯಾದವನು ಒಂದು ದಿನದಲ್ಲಿ ವಾಪಸ್ಸು ಬರುವೆನೆಂದಿದ್ದವನು ಮೂರು ದಿನವಾದರೂ ಹಿಂತಿರುಗಿರಲಿಲ್ಲ. ಗಾಬರಿಗೊಂಡ ರವಿಯ ತಾಯಿ ತನ್ನ ಹಿರಿ ಮಗನಿಗೆ ರವಿಯನ್ನು ಕೆಲಸದಿಂದ ತೆಗೆದಿದ್ದಾರಂತೆ. ಅದಕ್ಕೆ ಆತ ಸಿಕ್ಕಾಪಟ್ಟೆ ನೊಂದುಕೊಂಡಿದ್ದಾನೆ ಎನ್ನುವ ಸುದ್ದಿಯನ್ನು ಮುಟ್ಟಿಸಿದರು. ತಕ್ಷಣ ರವಿಗೆ ಕರೆ ಮಾಡಿದ ರವಿಯ ಅಣ್ಣ "ಲೋ ಮಗ. ಒಂದು ಕೆಲಸ ಹೋದರೆ ಇನ್ನೊಂದು ಕಣಪ್ಪ. ಅದಕ್ಯಾಕೆ ಯೋಚನೆ ಮಾಡ್ತೀಯ. ಎಲ್ಲಿದ್ದೀಯ ಈಗ? ಬೇಗ ಮನೆಗೆ ಬಾ. ನೀನೇ ಏನಾದ್ರು ಬ್ಯುಸಿನೆಸ್ ಮಾಡುವೆ." ಎಂದಿದ್ದರು. ರವಿಗೆ ಅಣ್ಣನ ಮಾತಿನಲ್ಲಿ ನಂಬಿಕೆ ಬಂತು ಎನಿಸುತ್ತೆ. ಅಲ್ಲೆಲ್ಲೋ ಯಾವುದೋ ಊರಿನಲ್ಲಿ ಸುಮ್ಮನೆ ಟೈಮ್ ಪಾಸ್ ಮಾಡುತ್ತಿದ್ದವನು ವಾಪಸ್ಸು ಮನೆಗೆ ಬಂದಿದ್ದ.
ರವಿ ಒಬ್ಬ ಮಲಯಾಳಂ ವ್ಯಕ್ತಿಯ ಬಳಿ ಟೀ ಮಾರುವ ಕೆಲಸ ಮಾಡುತ್ತಿದ್ದ. ಆ ಮಲಯಾಳಂನವನು ರವಿಗೆ ಯಾವ ರೀತಿ ಮಂಕುಬೂದಿ ಎರಚಿದ್ದ ಎಂದರೆ ತಾನು ಬೆಂಗಳೂರಿನಲ್ಲಿ ಶಾಶ್ವತವಾಗಿ ನೆಲೆಯೂರುವುದಿಲ್ಲ. ಒಂದತ್ತು ವರ್ಷ ಆದ ಮೇಲೆ ನಿನಗೆ ನನ್ನೆಲ್ಲಾ ವ್ಯಾಪಾರ ವಹಿವಾಟನ್ನು ವಹಿಸಿ ತನ್ನ ಸ್ವಂತ ಊರಿಗೆ ಹೊರಟು ಹೋಗುತ್ತೇನೆ ಎಂದು ನಂಬಿಸಿಬಿಟ್ಟಿದ್ದ. ಅವನ ಮಾತನ್ನು ನಂಬಿ ರವಿ ಅದೆಷ್ಟು ಶ್ರದ್ಧೆಯಿಂದ ಕೆಲಸ ಮಾಡತೊಡಗಿದ್ದನೆಂದರೆ ರವಿಯ ಮೂರು ವರ್ಷದ ಶ್ರಮ ಆ ಮಲಯಾಳಂ ಓನರ್ ಗೆ ಒಳ್ಳೆಯ ಆದಾಯ ತಂದುಕೊಡುವುದರ ಜೊತೆಗೆ ಲಾಸ್ ನಲ್ಲಿದ್ದ ಆ ಬ್ಯುಸಿನೆಸ್ ಒಂದೊಳ್ಳೆ ಹಂತಕ್ಕೆ ತಲುಪಿತ್ತು. ಮಲಯಾಳಿ ಓನರ್ ಒಟ್ಟಾಗಿ ರವಿಯನ್ನು ಚೆನ್ನಾಗಿ ದುಡಿಸಿಕೊಂಡಿದ್ದ. ಹೀಗಿರುವಾಗ ಒಂದು ದಿನ ರವಿಯ ಗಾಡಿಯ ಪೆಟ್ರೋಲ್ ಮತ್ತು ಅವನಿಗೆ ನೀಡಬೇಕಾದ ಸಂಬಳವನ್ನು ಲೆಕ್ಕ ಹಾಕಿದ ಓನರ್ ತನ್ನ ಹೆಂಡತಿಯ ತಮ್ಮನನ್ನು ರವಿಯ ಜಾಗಕ್ಕೆ ಕರೆ ತರಲು ಪ್ಲಾನ್ ಮಾಡಿದ. ಆ ಪ್ಲಾನಿನಂತೆ ರವಿಯನ್ನು ದೀಪಾವಳಿಯ ಸಮಯದಿ ಹಠಾತ್ ಒಂದು ದಿನ ಮನೆಗೆ ಕರೆದು ನೀನು ನಾಳೆಯಿಂದ ಕೆಲಸಕ್ಕೆ ಬರೋದು ಬೇಡ ಎಂದು ಅವನ ಲೆಕ್ಕಾ ಚುಕ್ತಾ ಮಾಡಿ ಕಳಿಸಿದ್ದ. ಕೆಲಸವೆಂದರೆ ದೇವರು ಎಂದು ನಂಬಿದ್ದ ರವಿಯ ನಂಬಿಕೆಗೆ ಹೀಗೆ ಹಠಾತ್ ಬಿದ್ದ ಪೆಟ್ಟಿಗೆ ರವಿ ನಿಜಕ್ಕೂ ತತ್ತರಿಸಿದ್ದ. ಅಟ್ ಲೀಸ್ಟ್ ಒಂದು ತಿಂಗಳ ಮುಂಚೆ ಹೇಳಿದ್ದರೆ ಬೇರೆ ಕೆಲಸ ಹುಡುಕಿಕೊಳ್ಳುತ್ತಿದ್ದೆ, ನಾನು ಇಷ್ಟು ವರ್ಷ ನಿಯತ್ತಿನಿಂದ ಕೆಲಸ ಮಾಡಿದ ಮೇಲೂ ಓನರ್ ನನಗೆ ಈ ತರಹ ಕೆಲಸದಿಂದ ತೆಗೆದು ಹಾಕಿದನಲ್ಲ ಎನ್ನುವುದು ರವಿಯನ್ನು ಗಾಢವಾಗಿ ಕಾಡತೊಡಗಿದಾಗ ದೀಪಾವಳಿ ಸಮಯದಿ ತನ್ನ ಗೆಳೆಯರ ಜೊತೆ ಆ ರೀತಿ ಬೇಸರ ಕಳೆಯಲು ಟೂರಿಗೆ ಹೋಗಿದ್ದ. ಜೊತೆಗೆ ಸಿಕ್ಕಾಪಟ್ಟೆ ಖಿನ್ನತೆಗೆ ಒಳಗಾಗಿದ್ದ.
ರವಿ ಟೂರಿನಿಂದ ಬಂದ ಮೇಲೆ ಅವನನ್ನು ಕುಳ್ಳರಿಸಕೊಂಡು ರವಿಯ ಅಷ್ಟೂ ಕತೆಯನ್ನು ಶ್ರದ್ದೆಯಿಂದ ಕೇಳಿದ ಅವನ ಅಣ್ಣ ರವಿಯ ಕೈಗೊಂದು ನೋಟ್ ಬುಕ್ ಮತ್ತು ಪೆನ್ನು ಕೊಟ್ಟು ಆಕಸ್ಮಾತ್ ನಿನ್ನ ಓನರ್ ಹತ್ತಿರ ನೀನು ಮಾಡುತ್ತಿದ್ದ ಕೆಲಸವನ್ನು ನೀನೆ ಸ್ವಂತಃ ಶುರು ಮಾಡುತ್ತೇನೆ ಎಂದು ನೀನು ಅಂದುಕೊಳ್ಳೋದಾದರೆ ನಿನಗೆ ಏನೇನು ಬೇಕಾಗಬಹುದು ಎಂದು ಲಿಸ್ಟ್ ಮಾಡು ಎಂದ. ರವಿ ತಾನು ನಿತ್ಯ ಮಾರಬಹುದಾದ ಟೀ, ಕಾಫಿ ಮತ್ತು ಬಾದಾಮಿ ಹಾಲುಗಳ ಸಂಖ್ಯೆಯನ್ನು ಲೆಕ್ಕ ಹಾಕಿ ಅದಕ್ಕೆ ತಕ್ಕಂತೆ ಹಾಲು, ಟೀ ಪುಡಿ, ಕಾಫಿ ಪುಡಿ, ಸಕ್ಕರೆ, ಪ್ಲಾಸ್ಕು, ಪ್ಲಾಸ್ಟಿಕ್ ಕಪ್ ಎಲ್ಲದರ ಲೆಕ್ಕವನ್ನು ಬರೆದಿಟ್ಟ. ದಿನಕ್ಕೆ ಎಷ್ಟು ಖರ್ಚಾಗಬಹುದು. ವಾರಕ್ಕೆ ಎಷ್ಟು ಖರ್ಚಾಗಬಹುದು ಎಂಬ ಲೆಕ್ಕ ಪುಸ್ತಕ ಮೇಲೆ ಮೂಡಿದ ಮೇಲೆ ಅದರಿಂದ ಆಗಬಹುದಾದ ಲಾಭ ನಷ್ಟದ ಲೆಕ್ಕಾಚಾರವೂ ಸ್ಪಷ್ಟವಾಗಿ ಕಾಗದದ ಮೇಲೆ ಮೂಡಿತು. "ನೋಡು ರವಿ. ನಿನಗೆ ಮೂರು ವರ್ಷ ಟೀ, ಕಾಫಿ, ಮಾರಿದ ಅನುಭವವಿದೆ. ನಿನ್ನ ಅನುಭವದ ಮೇಲೆ ದಿನಕ್ಕೆ ಇಷ್ಟು ಅಂತ ನೀನು ಟೀ ಕಾಫಿ ಮಾರ್ತೀಯ ಅಂದ್ರೆ ನಿನ್ನ ಆದಾಯ ಇಷ್ಟು." ಅಂತ ರವಿಯ ಅಣ್ಣ ರವಿಗೆ ಬ್ಯುಸಿನೆಸ್ ನ ಸ್ಪಷ್ಟ ಬಡ್ಜೆಟ್ ತಯಾರಿಸಿ ರವಿಯ ಮುಂದಿಟ್ಟ. ಶುರುವಿನಲ್ಲಿ ಪ್ಲಾಸ್ಕು, ಟೀ ಪುಡಿ, ಕಾಫಿ ಪುಡಿ, ಲೋಟ ಅವು ಇವು ಸಣ್ಣಪುಟ್ಟ ವಸ್ತುಗಳನ್ನು ಕೊಳ್ಳಲು ಎಷ್ಟು ಬೇಕೋ ಅಷ್ಟು ದುಡ್ಡನ್ನು ರವಿಯ ಕೈಗಿಟ್ಟು ಆಲ್ ದ ಬೆಸ್ಟ್ ಎಂದುಬಿಟ್ಟ.
ಯಾರ ಬಳಿಯೋ ಆಳಾಗಿ ದುಡಿದು ಅಭ್ಯಾಸವಿರುವವನಿಗೆ ನೀನೇ ನಾಳೆಯಿಂದ ಓನರ್ ಆಗುತ್ತೀಯ ಎಂಬ ಭರವಸೆಯ ಮಾತನಿತ್ತರೆ ಮೊದಲಿಗೆ ಒಂಚೂರು ಯೋಚಿಸುವ ವ್ಯಕ್ತಿ ಓನರ್ ನ ಜಾಗದಲ್ಲಿ ತನ್ನನ್ನು ಕಲ್ಪಿಸಿಕೊಂಡು ಪುಳಕನಾಗುತ್ತಾನೆ ಎನ್ನುವುದೂ ನಿಜ. ರವಿಯ ವಿಷಯದಲ್ಲೂ ಅದೇ ಆಯಿತು. ಮೊದಲಿಗೆ ತನ್ನದೇ ಸ್ವಂತ ಬ್ಯುಸಿನೆಸ್ ಶುರುಮಾಡಲು ಒಂಚೂರು ಹಿಂಜರಿದ ರವಿ ಕೊನೆಗೆ ಒಂದೆರಡು ದಿನ ಚಿಂತೆ ಮಾಡಿ ಒಬ್ಬನೇ ಇದ್ದಾಗ ತನ್ನ ಬಳಿ ಇದ್ದ ನೋಟ್ ಬುಕ್ ನಲ್ಲಿ ಇನ್ನೊಂದಷ್ಟು ಕೂಡಿ ಕಳೆಯೋ ಲೆಕ್ಕ ಮಾಡಿ ತಾನು ಬ್ಯುಸಿನೆಸ್ ಶುರು ಮಾಡೋದು ಒಳಿತು ಎನ್ನುವುದ ಅರಿತ್ತಿದ್ದ. ಇತ್ತ ರವಿಯ ಮನೆಯಲ್ಲಿ ಅಪರೂಪಕ್ಕೆ ಕಾಫಿ ಟೀ ಮಾಡಿ ಅಭ್ಯಾಸವಿತ್ತಾ ಹೊರತು ಬ್ಯುಸಿನೆಸ್ ಗಾಗಿ ಕಾಫಿ ಟೀ ಮಾಡುವುದು ತಿಳಿದಿರಲಿಲ್ಲ. ರವಿ ತನ್ನ ಕಂಪನಿಯಲ್ಲೇ ಮೊದಲು ಕೆಲಸ ಮಾಡುತ್ತಿದ್ದ ಗೆಳೆಯನೊಬ್ಬನಿಗೆ ತಾನೇ ಹೊಸದಾಗಿ ಬ್ಯುಸಿನೆಸ್ ಶುರು ಮಾಡುತ್ತೇನೆ ಎನ್ನುವುದ ತಿಳಿಸಿದಾಗ ಅವನ ಗೆಳೆಯ ರವಿಗೆ ಸಹಾಯ ಮಾಡಲು ನಿಂತ. ಯಾವ ಅಂಗಡಿಯಲ್ಲಿ ಪ್ಲಾಸ್ಕ್ ಸಿಗುತ್ತೆ. ಎಲ್ಲಿ ಒಳ್ಳೆಯ ಟೀ ಪುಡಿ ಸಿಗುತ್ತೆ. ಎಲ್ಲಿ ಒಳ್ಳೆಯ ಕಾಫಿ ಪುಡಿ ಸಿಗುತ್ತೆ. ಬಾದಾಮಿ ಪುಡಿ ಎಲ್ಲಿ ಸಿಗುತ್ತೆ ಎಲ್ಲವನು ಆ ಹುಡುಗನೇ ರವಿಗೆ ಕರೆದೊಯ್ದು ತೋರಿಸಿದ್ದೇ ಅಲ್ಲದೇ ಅವೆಲ್ಲವನ್ನೂ ಖರೀದಿಸಿ ಇಬ್ಬರೂ ಮನೆಗೆ ತಂದರು. ಒಂದು ಶುಭ ಮುಂಜಾನೆ ರವಿಯ ಮನೆಗೆ ಆ ಹುಡುಗ ಬಂದು ಸ್ವಂತಃ ಕಾಫಿ ಟೀ ಹೇಗೆ ಮಾಡುವುದು ಎನ್ನುವುದನ್ನು ರವಿಯ ತಾಯಿಗೆ ತೋರಿಸಿಕೊಟ್ಟ. ಅಲ್ಲಿಂದ ರವಿಯ ಹೊಸ ಬ್ಯುಸಿನೆಸ್ ಶುರುವಾಯಿತು. ಪ್ಯಾಕ್ಟರಿಗಳಲ್ಲಿ, ಬಿಲ್ಡಿಂಗ್ construction ಸೈಟ್ ಗಳಲ್ಲಿ, ತರಕಾರಿ ಮಾರ್ಕೆಟ್ ಗಳಲ್ಲಿ ಹೀಗೆ ಜನರಿಗೆ ಟೀ ಕಾಫಿ ಮಾರುವುದು ರವಿಯ ನಿತ್ಯದ ಕಾಯಕವಾಯಿತು. ದೊಡ್ಡ ದೊಡ್ಡ ಕಂಪನಿಗಳನ್ನು ಆಗಾಗಲೇ ಆ ಮಲಯಾಳಿ ಆಕ್ರಮಿಸಿಕೊಂಡಿರುವ ಕಾರಣ ರವಿ ಅಲ್ಲೆಲ್ಲಾ ತನ್ನ ಪುಟ್ಟ ಬ್ಯುಸಿನೆಸ್ ಅನ್ನು ಹರಡಲು ಇನ್ನೂ ಸಾಧ್ಯವಾಗದಿದ್ದರೂ ತನ್ನ ಪುಟ್ಟ ಪರಿಧಿಯಲ್ಲೇ ಆತ ತನ್ನ ಅನ್ನ ಕಂಡುಕೊಳ್ಳುತ್ತಿದ್ದಾನೆ.
ಎಸ್ ಎಸ್ ಎಲ್ ಸಿ, ಪಿಯುಸಿ, ಕೊನೆ ಪಕ್ಷ ಏಳನೇ ಕ್ಲಾಸಿನ ಮೆಟ್ಟಿಲು ಸಹ ಏರದ ಎಷ್ಟೋ ಜನ ನಮ್ಮ ರವಿಯಂತೆಯೇ ದೂರದ ತಮ್ಮ ಊರುಗಳಿಂದ ಬೆಂಗಳೂರೆಂಬ ಮಹಾನಗರಗಳಿಗೆ ಪುಟ್ಟ ಪುಟ್ಟ ಕೆಲಸಗಳನ್ನು ಹುಡುಕಿ ಬಂದಿರುತ್ತಾರೆ. ತಿಂಗಳು ತಿಂಗಳು ತಪ್ಪದೇ ಸಂಬಳ ಎಣಿಸುವ ಎಷ್ಟೋ ಆಫೀಸರ್ ಗಳ ಮಧ್ಯೆ ನಾವು ಒಂಚೂರು ಕಣ್ಣರಳಿಸಿ ನೋಡಿದರೆ ಇಂತಹ ಅಸಂಖ್ಯಾತ ರವಿಗಳು ನಮಗೆ ಕಾಣಸಿಗುತ್ತಾರೆ. ಇಂತಹವರಿಗೆ ಒಂಚೂರು ಸರಿಯಾದ ಮಾರ್ಗದರ್ಶನ ಮತ್ತು ಹಣ ಸಹಾಯ ದೊರೆತರೆ ತಮ್ಮದೇ ಆದ ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳಬಲ್ಲರು. ಅನ್ಯ ಭಾಷೀಯರು ನಮ್ಮದೇ ನೆಲದಲ್ಲಿ ಎಂತೆಂಥಹ ಬ್ಯುಸಿನೆಸ್ ಗಳನ್ನು ಮಾಡಿ ಎಷ್ಟೆಲ್ಲಾ ಎತ್ತರಕ್ಕೆ ಬೆಳೆದುಬಿಡುತ್ತಾರೆ. ಅಂತಹವರ ಮಧ್ಯೆ ಅವನ ಅನ್ನ ಅವನು ಕಂಡುಕೊಳ್ಳುತ್ತೇನೆಂಬ ಪಣ ತೊಟ್ಟಿರುವ ರವಿಯಂತಹ ನಮ್ಮದೇ ಹುಡುಗರು ನನಗೆ ತುಂಬಾ ಇಷ್ಟವಾಗಿಬಿಡುತ್ತಾರೆ. ಯಾವುದೇ ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ತಿರುವಿದರೂ ಅಲ್ಲಿನ ಹೆಚ್ಚಿನ ಸಕ್ಸಸ್ ಸ್ಟೋರಿಗಳು ಚಿಕ್ಕ ಮಟ್ಟದಿಂದ ಮಿಲೇನಿಯರ್ ಬಿಲೇನಿಯರ್ ಆದವರ ಉದಾಹರಣೆಗಳಿಂದಲೇ ತುಂಬಿ ಹೋಗಿರುತ್ತವೆ. ಯಾಕೋ ಗೊತ್ತಿಲ್ಲ ರವಿಯಂತಹವರ ಪುಟ್ಟ ಸಂಕಲ್ಪಗಳನ್ನು ಸಹ ಬದುಕು ಕಟ್ಟಿಕೊಳ್ಳಲು ಹೆಣಗುವ ಜೀವಗಳಿಗೆ ವ್ಯಕ್ತಿತ್ವ ವಿಕಸನದ ಉದಾಹರಣೆಯಾಗಿ ಉದಾಹರಿಸಬೇಕು ಎಂದು ಪದೇ ಪದೇ ಅನಿಸುತ್ತೆ.
ಮತ್ತೆ ಸಿಗೋಣ
ನಿಮ್ಮ ಪ್ರೀತಿಯ
ನಟರಾಜು
*****
Great!!!
ನಾನು ಈ ಹಿಂದೆ ಬರೆದ "ವಿಷ್ಟ್ಣು ದಿ ಚಾಯ್ವಾಲಾ" ನೆನಪಿಸಿತು……ನಟ್ಟು…..ರವಿಗೆ ಶುಭವಾಗಲಿ…..
You can do it ಎಂದು ಸ್ವತಃ ವ್ಯಾಪಾರ ಮಾಡಲು ರವಿಯನ್ನು ಪ್ರೇರೇಪಿಸಿದ ಅವನ ಅಣ್ಣನಂತವರು ಯಾವುದೇ motivational ಗುರುಗಳಿಗಿಂತ ಕಡಿಮೆಯಿಲ್ಲ!
inspirational story…