ಟೀನೇಜಿನಲ್ಲಿ ಲವ್ ಮಾಡದಿದ್ದರೆ ಆತ ಅಂಜುಬುರುಕ, ಸಿಗರೇಟು ಸೇದದಿದ್ದರೆ ಈ ಶತಮಾನದಲ್ಲಿ ಆತ ಬದುಕುವುದಕ್ಕೇ ನಾಲಾಯಕ್ಕು, ಗುಂಡು ಹಾಕಿ ಗಲಾಟೆ ಎಬ್ಬಿಸಿ ಹೊಡೆದಾಟ ಮಾಡದಿದ್ದರೆ ಆತ ಗಂಡಸೇ ಅಲ್ಲ, ರಸ್ತೆಯಲ್ಲಿ ಹುಡುಗಿಯರಿಗೆ ಕಾಮೆಂಟ್ ಪಾಸ್ ಮಾಡಿ ಚುಡಾಯಿಸದಿದ್ದರೆ ಅವ ದಂಡ ! ಇದು ನಮ್ಮ ಟೀನೇಜ್ ಹುಡುಗರ ಮನದಿಂಗಿತ. ಕಾರಣ ಇವೆಲ್ಲಾ ಪೌರುಷದ ಸಂಕೇತ.
ಇನ್ನು ಹುಡುಗಿಯರೂ ಇದಕ್ಕೆ ಹೊರತಾಗಿಲ್ಲ ಬಿಡಿ. ತನ್ನ ಹಿಂದೆ ಒಬ್ಬ ಹುಡುಗನಾದರೂ ಓಡಾಡದಿದ್ದರೆ ಆಕೆ ಕಾಲೇಜು ಹಂತಕ್ಕೆ ತಲುಪಿದ್ದೇ ವೇಸ್ಟ್, ನೀಟಾಗಿ, ಮೈ ಮುಚ್ಚಿಕೊಂಡು ಬಟ್ಟೆ ಧರಿಸಿದರೆ ಆಕೆ ಸತಿ ಸಾವಿತ್ರಿ. ಇಲ್ಲಾ ಆಕೆ ತೀರಾ ಹಳ್ಳಿ ಹುಡುಗಿ ಗೌರಮ್ಮ. ಬದಲಾಗಿ ಮಿನಿ ಸ್ಕರ್ಟ್ ಹಾಕಿ ಜೀನ್ಸ್ ತೊಟ್ಟು ಬಟ್ಟೆಗೂ ಬರಗಾಲ ಬಂದಂತೆ ಅರೆ ಬರೆ ಬಟ್ಟೆ ಧರಿಸಿದರೆ ಆಕೆ ಮಾಡರ್ನ್ (ಮಾಡೆಲ್)ಲೇಡಿ.
ಕ್ಲಾಸ್ ಗೆ ಬಂಕ್ ಮಾಡಿ ಹುಡುಗ -ಹುಡುಗಿಯರೆಲ್ಲಾ ಸೇರಿ ಮಜಾ ಉಡಾಯಿಸಿದರೆ ಅವರ ಜನ್ಮ ಧನ್ಯ. ಹಿರಿಯರ ಮಾತಿಗೆ ತಗ್ಗಿ ಬಗ್ಗಿ ನಡೆದರೆ ಇವರ ಮರ್ಯಾದೆಗೆ ಕಡಿಮೆ. ತಾನೊಂದು ಸೆಂಟರ್ ಆಫ್ ಅಟ್ರಾಕ್ಷನ್ ಆಗಿರಬೇಕೆಮ್ಬುದೆ ಇವರಿಗೆ ಫ್ಯಾಶನ್.
ಇದು ಇಂದಿನ ಯುವಜನರ ಸ್ಥಿತಿ. ಹೆತ್ತ ತಂದೆ ತಾಯಿ ತಲೆ ಮೇಲೆ ಕೈ ಹೊತ್ತು ತಮ್ಮ ಮಗ/ಮಗಳು ಹೀಗೇಕೆ ಆಡ್ತಿದಾರೆ ? ನಾವೆಲ್ಲಿ ಎಡವಿದ್ದೇವೆ ಎಂದು ಮಕ್ಕಳ ಬಗ್ಗೆ ಯೋಚಿಸಿ ಕೊರಗುತ್ತಾರೆ. ಕಾರಣ ಅವರು ತಮ್ಮ ಮಕ್ಕಳ ಮೇಲೆ ನೂರಾಸೆ, ಕನಸು ಹೊತ್ತಿರುತ್ತಾರೆ. ಅವರನ್ನು ಓದಿಸಿ ಸಮಾಜ ಗುರುತಿಸುವಂತ ಉತ್ತಮ ನಾಗರೀಕನನ್ನಾಗಿ ಮಾಡಬೇಕೆಂಬ ಭಾವನೆ ಇರುತ್ತೆ. ಆದರೆ ಅವರಿಗೇ ತಿಳಿಯದಂತೆ ಗುರುತಿಸಲ್ಪಟ್ಟಿರುತ್ತಾನೆ. ಒಳ್ಳೆಯ ರೀತಿಯಿಂದಲ್ಲ ಅಷ್ಟೇ !
ಈ ಟೀನೆಜೆ ಹೀಗೆ. ಕಡಿವಾಣವಿಲ್ಲದ ಕುದುರೆಯಂತೆ ಎಲ್ಲೆಲ್ಲೋ ಓಡುತ್ತಿರುತ್ತದೆ. ಆ ಏಜು ದಾಟಿ ಮುಂದೆ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡು ಈಗ ಕಣ್ಣೀರಿಡುವವರೂ ಇದ್ದಾರೆ. ಛೆ, ಅಂದು ನಾನು ಮಂಗನಾಟ ಆಡದೆ ಸರಿಯಾಗಿ ಓದಿದ್ದಿದ್ದರೆ ಇಂದು ಒಳ್ಳೆಯ ಪೊಸಿಷನ್ನಲ್ಲಿರಬಹುದಿತ್ತು. ಅಂತ ಆ ದಿನಗಳನ್ನು ಶಪಿಸುವವರೂ ಇದ್ದಾರೆ. ಆ ದಿನಗಳ ಪ್ರಭಾವದಿಂದ ಹೆತ್ತವರಿಂದ, ಗೆಳೆಯರಿಂದ ದೂರಾಗಿ ಇಂದು ಮರುಗುತ್ತಿರುವವರೂ ನಮ್ಮ ಮಧ್ಯೆ ಇದ್ದಾರೆ.
ಇವೆಲ್ಲಾ ನಾವು 'ನಾಗರೀಕ ', 'ವಿದ್ಯಾವಂತ'ರಾಗುತ್ತಿರುವುದರ ಸಂಕೇತವೇ ? ಅನಾಗರಿಕ ರೀತಿಯಿಂದ ವರ್ತಿಸಿ ಬೇರೆಯವರಿಗೆ ನೋವು ಕೊಟ್ಟು ಸಂತೋಷ ಅನುಭವಿಸುವ ಇಂಥವರದ್ದೂ ಒಂದು ಮನುಷ್ಯ ಜನ್ಮವಾ ? ಇದೆ ವಿದ್ಯಾವಂತ ವಿಚಾರವಂತ ಯುವಜನಾಂಗದ ವರ್ತನೆನೆನಾ?
ಲವ್ ಡವ್ ಅಂತ ಹಿಂದೆ ಮುಂದೆ ನೋಡದೆ ಟೀನೇಜಿನ ಅಮಲಿನಲ್ಲಿ ತಪ್ಪು ಮಾಡಿ ಮುಂದೆ ತಮ್ಮ ಅಮೂಲ್ಯ ಜೀವನವೇ ನರಕಸದ್ರುಶ್ಯವಾದ ಉದಾಹರಣೆಗಳಿವೆ. ಗೆಳೆಯರ ಮಾತಿಗೆ ತಲೆಯಾಡಿಸಿ ಕೆಟ್ಟ ಚಟ ಬೆಳೆಸಿ ಆರೋಗ್ಯ ಕೆಡಿಸಿಕೊಂಡ ಘಟನೆಗಳಿವೆ. ಮನಸ್ಸು ಹೇಳುತ್ತಿರುತ್ತದೆ ''ನೀನು ಕ್ರೂರಿ, ನಿನ್ನಿಂದ ಒಂದು ಮುಗ್ಧ ಜೀವ ಬಲಿಯಾಯ್ತು, ನೀನು ಹೆತ್ತ ತಂದೆ ತಾಯಿಗೆ ಮೋಸ ಮಾಡಿದ್ದಿ. ಬೇರೆಯವರಿಗೆ ನೋವು ಹಿಂಸೆ ನೀಡಿದ್ದಿ, ಈಗ ಈ ಜಗತ್ತಿನಲ್ಲಿ ಎಲ್ಲವೂ ಎಲ್ಲರೂ ಇದ್ದರೂ ನೀನು ಒಂಟಿ. ನಿನಗೆ ಖಂಡಿತಾ ನೆಮ್ಮದಿ ಇಲ್ಲ. '' ಆತನ ಮಕ್ಕಳು ಮುಂದೆ ಈ ಎಜಿನಲ್ಲಿ ದಾರಿ ತಪ್ಪಿದರೆ ಅವರಿಗೆ ತಿಳಿ ಹೇಳಲು ನಾಲಿಗೆಗೆ ಶಕ್ತಿ ಇರಲ್ಲ ಕಾರಣ. . . .
ಈ ಟೀನೇಜು ಪೊಲಿತನ ತೋರಿಸಲು ಇರುವುದಲ್ಲ. ಇದು ಮುಂದಿನ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಕಲಿಯುವ ಎಜು. ಹುಡುಗ ಹುಡುಗಿಯರೊಂದಿಗೆ ಬೆರೆತು ಜ್ಞಾನಾರ್ಜನೆ ಮಾಡಿ ಉತ್ತಮ ಗೆಳೆತನ, ಗುಣ, ನಡತೆ ಕಲಿಯಬೇಕಾದ ಸಮಯವಿದು. ಬದಲಾಗಿ ಎಂಜಾಯ್ ಮಾಡುತ್ತಾ ಟೈಂ ಪಾಸ್ ಮಾಡಬೇಕಾದದ್ದಲ್ಲ.
ಗೆ
ಳೆಯರೇ ನೀವೇ ಯೋಚಿಸಿ ನೋಡಿ, ಈ ಟೀನೇಜೆಂದರೆ ಬರಿಯ ಮೋಜಲ್ಲ, ಅದು ಭವಿಷ್ಯತ್ತಿನ ಅಡಿಪಾಯ. ನೀವೇ ರೂಪಿಸಿದ ಗುರಿಯೆಡೆಗೆ ನಿಮ್ಮನ್ನು ನಡೆಸಿ, ಬದಲಾಗಿ ನಿಮ್ಮ ತನವನ್ನೇ ಕಳೆದುಕೊಂಡು ಎಲ್ಲೆಲ್ಲಿಗೋ ಪಯಣಿಸಬೇಡಿ. ನಾನು ಲವ್ ಮಾಡುವುದು ತಪ್ಪು ಎನ್ನಲಾರೆ ಆದರೆ ಅದಕ್ಕೂ ಒಂದು ಸಮಯವಿದೆ. ಒಂದು ವೇಳೆ ನೀವು ನಿಮ್ಮನ್ನು ನಿಯಂತ್ರಿಸದಿದ್ದರೆ ಮುಂದೆ ಪಾಶ್ಚಾತ್ತಾಪ ಪಡಬೇಕಾದೀತು, ಜೋಕೆ ! ಅದಕ್ಕೇ ಹೇಳೋದು ಈಗ ಸೂಕ್ಷ್ಮತೆ ಬುದ್ಧಿವಂತಿಕೆಯಿಂದ ವರ್ತಿಸಿದರೆ ಮುಂದೆ ದುಃಖಿ ಸುವುದು ಬೇಡ ಅಂತ.
ಅದೂ ಅಲ್ಲದೇ ನಿಮ್ಮ ಜೂನಿಯರ್ಸ್ ನ ಅರ್ಥಮಾಡಿಕೊಳ್ಳಿ. ನಿಮ್ಮಂತೆ ಅವರಿಗೂ ಕನಸಿರುತ್ತದೆ. ಬೇರೆ ಕ್ಲಾಸ್ ಮೇಟ್ಗಳನ್ನೂ ಗೇಲಿ ಮಾಡಬೇಡಿ. ಅವರಿಗೂ ನಿಮ್ಮ ಹಾಗೆ ಒಂದು ಪುಟ್ಟ ಮನಸ್ಸು ಹೃದಯ ಇರುತ್ತದೆ. ಅದು ಮುದುಡುವಂತೆ ಮಾಡಿ ನಿಮಗೆನಾಗ ಬೇಕು ? ನಿಮ್ಮ ಸಹೋದರ / ಸಹೋದರಿಯರು, ಹೆತ್ತವರು ನಿಮ್ಮ ಮೇಲಿಟ್ಟಿರುವ ಭರವಸೆಯನ್ನು ಹುಸಿಯಾಗಿಸಬೇಡಿ. ಉತ್ತಮ ಜೀವನ ನಡೆಸಿ.
ಈಗ ಒಮ್ಮೆ ಯೋಚಿಸಿ, ನಿಮ್ಮ ಟೀನೇಜು ಹೇಗಿರಬೇಕು ? ಈಗ ಕೆಟ್ಟದ್ದಾಗಿ ಗುರುತಿಸಿಕೊಂಡು ಮುಂದೆ ಕೊರಗುವಂತಿರಬೇಕೋ ಅಥವಾ ಜೇವನಪೂರ್ತಿ ಒಳ್ಳೆಯದಾಗಿ ಗುರುತಿಸಿಕೊಂಡ ನೆಮ್ಮದಿಯುತ ಜೀವನ ನಿಮ್ಮದಾಗಬೇಕೋ ?
ಆಯ್ಕೆ ನಿಮಗೆ ಬಿಟ್ಟದ್ದು.
ತುಂಬಾ ಅರ್ಥಪೂರ್ಣವಾದ ಬರಹ