೧. ಅತೀ ಪ್ರೀತಿ
ಸುದೀರ್ಘಕಾಲ ಕ್ರಿಯಾಶೀಲ ಜೀವನ ನಡೆಸಿದ್ದ ವಯಸ್ಸಾದ ಸನ್ಯಾಸಿಯೊಬ್ಬನನ್ನು ಬಾಲಕಿಯರ ಶಿಕ್ಷಣ ಕೇಂದ್ರದಲ್ಲಿ ಪ್ರಾರ್ಥನಾ ಮಂದಿರದ ಪಾದ್ರಿಯಾಗಿ ನೇಮಿಸಲಾಯಿತು. ಚರ್ಚಾಗೋಷ್ಟಿಗಳಲ್ಲಿ ಆಗಾಗ್ಗೆ ಪ್ರೀತಿ, ಪ್ರೇಮ ಪ್ರಮುಖ ವಿಷಯವಾಗಿರುತ್ತಿದ್ದದ್ದನ್ನು ಆತ ಗಮನಿಸಿದ.
ಯುವತಿಯರಿಗೆ ಈ ಕುರಿತಾದ ಅವನ ಎಚ್ಚರಿಕೆ ಇಂತಿತ್ತು: “ನಿಮ್ಮ ಜೀವನದಲ್ಲಿ ಯಾವುದೇ ಆಗಿರಲಿ ಅತಿಯಾಗುವುದರ ಅಪಾಯವನ್ನು ತಿಳಿಯಿರಿ. ಅತಿಯಾದ ಕೋಪ ಕಾಳಗದಲ್ಲಿ ಭಂಡಧೈರ್ಯಕ್ಕೆ ಕಾರಣವಾಗಿ ಸಾವಿನಲ್ಲಿ ಅಂತ್ಯಗೊಳ್ಳಬಹುದು. ಮತೀಯ ನಂಬಿಕೆಗಳಲ್ಲಿ ಅತಿಯಾದ ವಿಶ್ವಾಸ ಮುಚ್ಚಿದ ಮನಸ್ಸು ಮತ್ತು ಕಿರುಕುಳ ಕೊಡುವಿಕೆಗೆ ಕಾರಣವಾಗಬಹುದು. ಅತಿಯಾದ ಭಾವೋದ್ರೇಕಯುತ ಪ್ರೀತಿಯು ಪ್ರೀತಿ ಪಾತ್ರರ ಕಾಲ್ಪನಿಕ ಬಿಂಬಗಳನ್ನು ಸೃಷ್ಟಿಸುತ್ತದೆ – ಅಂತಿಮವಾಗಿ ಅವು ಮಿಥ್ಯಾಬಿಂಬಗಳು ಎಂಬುದು ಸಾಬೀತಾಗಿ ಕೋಪ ಉಂಟಾಗುತ್ತದೆ. ಅತಿಯಾಗಿ ಪ್ರೀತಿಸುವುದು ಚಾಕಿನ ಮೊನೆಯಿಂದ ಜೇನು ನೆಕ್ಕಿದಂತೆ.”
“ಬ್ರಹ್ಮಚಾರಿ ಸನ್ಯಾಸಿಯಾಗಿರುವ ನಿಮಗೆ ಗಂಡು ಮತ್ತು ಹೆಣ್ಣಿನ ನಡುವಣ ಪ್ರೀತಿಯ ಕುರಿತು ಗೊತ್ತಿರುವುದು ಹೇಗೆ ಸಾಧ್ಯ?” ಕೇಳಿದಳು ಒಬ್ಬ ಯುವತಿ.
“ಪ್ರಿಯ ಮಕ್ಕಳೇ, ಯಾವಾಗಲಾದರೊಮ್ಮೆ ನಾನೇಕೆ ಸನ್ಯಾಸಿಯಾದೆ ಎಂಬುದನ್ನು ನಿಮಗೆ ಹೇಳುತ್ತೇನೆ,” ಅಂದನಾ ಸನ್ಯಾಸಿ.
*****
೨. ಬದಲಾವಣೆ!
ಬಲು ಕೆಟ್ಟ ಸಿಡುಕಿಗೆ ಖ್ಯಾತನಾಗಿದ್ದ ಚೀನೀ ಚಕ್ರವರ್ತಿಯೊಬ್ಬ ಶೀಘ್ರದಲ್ಲಿಯೇ ಅವನ ವಧುವಾಗಲಿರುವವಳ ಮಲಗುವ ಕೋಣೆಯನ್ನು ಪ್ರವೇಶಿಸಿದ. ಇಡೀ ಚೀನಾದಲ್ಲಿ ಇರುವ ಪರಮ ಸುಂದರಿಯರ ಪೈಕಿ ಅವಳೂ ಒಬ್ಬಳಾಗಿದ್ದಳು. ಅವಳ ಇಚ್ಛೆಗೆ ವಿರುದ್ಧವಾಗಿ ಅವಳ ತಂದೆತಾಯಿಯರು ಬಲವಂತವಾಗಿ ಅವನನ್ನು ವಿವಾಹ ಆಗುವಂತೆ ಮಾಡಿದ್ದರು.
ಚಿಕ್ಕವಳಾಗಿದ್ದಾಗ ಮಹಾಪ್ರಾಜ್ಞರು ಅವಳ ಅಧ್ಯಾಪಕರಾಗಿದ್ದರು ಎಂಬುದು ಚಕ್ರವರ್ತಿಗೆ ತಿಳಿದಿರಲಿಲ್ಲ. ಭಾವಶೂನ್ಯಳಾಗಿ ಗೋಡೆಯನ್ನೇ ದುರುಗುಟ್ಟಿ ನೋಡುತ್ತಾ ಅವಳು ಕುಳಿತಿದ್ದಳು. ಚಕ್ರವರ್ತಿ “ಹಲೋ ಸುಂದರಿ” ಎಂಬುದಾಗಿ ಸಂಬೋಧಿಸಿದರೂ ಆಕೆ ಪ್ರತಿಕ್ರಿಯಿಸಲಿಲ್ಲ.
“ನಾನು ಹಲೋ ಹೇಳಿದ್ದು ನಿನಗೆ. ನಾನು ಸಂಬೋಧಿಸಿದಾಗ ನೀನು ಪ್ರತಿಕ್ರಿಯಿಸಲೇ ಬೇಕು, ತಿಳಿಯಿತೇ?” ಎಂಬುದಾಗಿ ಆತ ಗುರಕಾಯಿಸಿದ. ಆದರೂ ಆಕರ ಪ್ರತಿಕ್ರಿಯಿಸಲಿಲ್ಲ.
ಬಹಳಷ್ಟು ಮಂದಿ ಅವನು ಅಷ್ಟು ಹೇಳಿದಾಗಲೇ ಉತ್ತರಿಸುತ್ತಿದ್ದರಾದ್ದರಿಂದ ಅವನಲ್ಲಿ ಕುತೂಹಲ ಉಂಟಾಯಿತು. “ನೀನೇನು ಆಲೋಚಿಸುತ್ತಿರುವೆ?” ಒರಟಾಗಿ ಕೇಳಿದ.
ಕೊನೆಗೂ ಅವಳು ಉತ್ತರಿಸಿದಳು: “ಎರಡು ವಿಷಯಗಳು. ಮೊದಲನೆಯದಾಗಿ ನಿನ್ನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ. ಏಕೆಂದರೆ ನಿನೊಬ್ಬ ನಿಷ್ಕರುಣಿ ಮತ್ತು ಕೀಳು ಪ್ರವೃತ್ತಿಯವನು. ಮತ್ತಿನ್ನೊಂದು ವಿಷಯ, ನಿರ್ದಿಷ್ಟವಾದ ಏನೋ ಒಂದನ್ನು ಬದಲಾಯಿಸುವ ತಾಕತ್ತು ನಿನಗಿದೆಯೇ ಎಂಬುದರ ಕುರಿತು ಆಲೋಚಿಸುತ್ತಿದ್ದೆ.”
“ಏನು?!” ತೀವ್ರ ಅಸಮಾಧಾನದಿಂದ ಉದ್ಗರಿಸಿದ ಚಕ್ರವರ್ತಿ. “ಏಯ್ ದುಶ್ಶೀಲೆ. ನನ್ನ ಅಧಿಕಾರವನ್ನು ಪ್ರಶ್ನಿಸಲು ನಿನಗೆಷ್ಟು ಧೈರ್ಯ!…. ಆದರೆ…. ನನಗೆ ಕುತೂಹಲ ಉಂಟಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಬೆರಳಿನಿಂದ ಚಿಟಿಕೆ ಹೊಡೆದರೆ ಸಾಕು, ನನ್ನ ರಾಜ್ಯದಲ್ಲಿ ನನ್ನ ಆಜ್ಞೆ ಪಾಲಿಸಲ್ಪಡುತ್ತದೆ. ನನ್ನಿಂದ ಬದಲಾಯಿಸಲು ಸಾಧ್ಯವೇ ಎಂಬುದಾಗಿ ಯಾವುದರ ಕುರಿತು ನೀನು ಆಲೋಚಿಸುತ್ತಿದ್ದೆ?”
ಅವಳು ಉತ್ತರಿಸಿದಳು: “ನಿನ್ನ ಮನೋಧರ್ಮ.” ಅಷ್ಟು ಹೇಳಿ ಅವಳು ಎದ್ದು ಆ ಕೋಣೆಯಿಂದ ಹೊರ ನಡೆದಳು. ಚಕ್ರವರ್ತಿ ಮೌನವಾಗಿ ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದ.
*****
೩. ಸತ್ಯದ ತುಣುಕನ್ನು ಆವಿಷ್ಕರಿಸುವುದು
ದುಷ್ಟ ಮಾರ ಅದೊಂದು ದಿನ ತನ್ನ ಅನುಚರರೊಂದಿಗೆ ಹಳ್ಳಿಗಳ ಮೂಲಕ ಪಯಣಿಸುತ್ತಿದ್ದ. ಆಶ್ಚರ್ಯಚಕಿತ ಮುಖಭಾವದೊಂದಿಗೆ ಧ್ಯಾನ ಮಾಡುತ್ತಾ ನಡೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಅವರು ನೋಡಿದರು. ತನ್ನ ಮುಂದಿದ್ದ ನೆಲದಲ್ಲಿ ಏನನ್ನೋ ಆತ ಆಗ ತಾನೇ ಆವಿಷ್ಕರಿಸಿದಂತಿತ್ತು. ಅದೇನಿರಬಹುದೆಂದು ಅನುಚರನೊಬ್ಬ ಮಾರನನ್ನು ಕೇಳಿದಾಗ ಅವನು ಉತ್ತರಿಸಿದ: “ಸತ್ಯದ ತುಣುಕು.”
“ಓ ದುಷ್ಟನೇ, ಯಾರಾದರೊಬ್ಬ ಸತ್ಯದ ತುಣುಕನ್ನು ಆವಿಷ್ಕರಿಸುವುದು ನಿನ್ನನ್ನು ಚಿಂತೆಗೀಡು ಮಾಡುವುದಿಲ್ಲವೇ?” ಎಂಬುದಾಗಿ ಕೇಳಿದ ಅನುಚರ. ಮಾರ ಉತ್ತರಿಸಿದ: “ಇಲ್ಲ. ಏಕೆಂದರೆ, ಅದನ್ನು ಅವರು ಆವಿಷ್ಕರಿಸಿದ ಕೂಡಲೇ ನಂಬಿಕೆಯಾಗಿ ಪರಿವರ್ತಿಸುತ್ತಾರೆ.”
*****
೪. ಘಂಟೆ ಅಧ್ಯಾಪಕ
ತರಬೇತಿಗೆ ತನ್ನನ್ನು ತಾನು ಹೇಗೆ ಸಿದ್ಧಪಡಿಸಿಕೊಳ್ಳಬೇಕು ಎಂಬುದಾಗಿ ಹೊಸ ವಿದ್ಯಾರ್ಥಿಯೊಬ್ಬ ಝೆನ್ ಗುರುವಿನ ಹತ್ತಿರ ಕೇಳಿದ. ಗುರು ವಿವರಿಸಿದರು: “ನಾನೊಂದು ಘಂಟೆ ಎಂಬುದಾಗಿ ಕಲ್ಪಿಸಿಕೊ. ನನ್ನನ್ನು ಮಿದುವಾಗಿ ತಟ್ಟಿದರೆ ನಿನಗೊಂದು ಕ್ಷೀಣವಾದ ಅನುರಣಿಸುವ ಶಬ್ದ ಕೇಳಿಸುತ್ತದೆ. ಬಲವಾಗಿ ಹೊಡೆದರೆ ಕಿವಿಯಲ್ಲಿ ಮೊರೆಯುವಂಥ ಶಬ್ದ ಗಟ್ಟಿಯಾಗಿ ಕೇಳಿಸುತ್ತದೆ.”
*****
೫. ಪುಸ್ತಕಗಳು
ಹಿಂದೊಮ್ಮೆ ಅನೇಕ ವರ್ಷಗಳ ಕಾಲ ಝೆನ್ ಅಧ್ಯಯನವನ್ನೇ ಮಾಡುತ್ತಿದ್ದ ದಾರ್ಶನಿಕ ಹಾಗೂ ಪಂಡಿತನೊಬ್ಬನಿದ್ದ. ಜ್ಞಾನೋದಯವಾದ ದಿನ ಆತ ತನ್ನ ಹತ್ತಿರವಿದ್ದ ಎಲ್ಲ ಪುಸ್ತಕಗಳನ್ನೂ ಪ್ರಾಂಗಣದಲ್ಲಿ ರಾಶಿ ಮಾಡಿ ಸುಟ್ಟು ಹಾಕಿದ.
*****