ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅಂಟಿಕೊಳ್ಳದಿರುವಿಕೆ (Non-attachment)

ಐಹೈ ದೇವಾಲಯದ ಅಧಿಪತಿ ಕಿಟಾನೋ ಗೆಂಪೊ ೧೯೩೩ ರಲ್ಲಿ ವಿಧಿವಶನಾದಾಗ ೯೨ ವರ್ಷ ವಯಸ್ಸು ಆಗಿತ್ತು. ಯಾವುದಕ್ಕೂ ಅಂಟಿಕೊಳ್ಳದಿರಲು ತನ್ನ ಜೀವನದುದ್ದಕ್ಕೂ ಆತ ಪ್ರಯತ್ನಿಸಿದ್ದ. ೨೦ ವರ್ಷ ವಯಸ್ಸಿನ ಅಲೆಮಾರಿ ಬೈರಾಗಿಯಾಗಿದ್ದಾಗ ತಂಬಾಕಿನ ಧೂಮಪಾನ ಮಾಡುತ್ತಿದ್ದ ಯಾತ್ರಿಕನೊಬ್ಬನನ್ನು ಸಂಧಿಸಿದ್ದ. ಒಂದು ಪರ್ವತಮಾರ್ಗದಲ್ಲಿ ಅವರೀರ್ವರೂ ಜೊತೆಯಾಗಿ ಕೆಳಕ್ಕೆ ಇಳಿಯುತ್ತಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲೋಸುಗ ಒಂದು ಮರದ ಕೆಳಗೆ ಕುಳಿತರು. ಯಾತ್ರಿಕ ಧೂಮಪಾನ ಮಢಲೋಸುಗ ತಂಬಾಕನ್ನು ಕಿಟಾನೋಗೆ ನೀಡಿದ. ಆ ಸಮಯದಲ್ಲಿ ತುಂಬಾ ಹಸಿದಿದ್ದ ಕಿಟಾನೋ ಅದನ್ನು ಸ್ವೀಕರಿಸಿದ.

“ಧೂಮಪಾನ ಎಂಥ ಹಿತಾನುಭವ ನೀಡುತ್ತದೆ,” ಉದ್ಗರಿಸಿದ ಕಿಟಾನೋ. ಅವರೀರ್ವರೂ ಬೇರೆಬೇರೆ ಆಗಬೇಕಾದಾಗ ಯಾತ್ರಿಕ ತುಸು ತಂಬಾಕು ಮತ್ತು ಧುಮಪಾನ ಮಾಡುವ ಕೊಳವೆಯೊಂದನ್ನು ಕಿಟಾನೋಗೆ ನೀಡಿದ.
ತುಸು ಸಮಯದ ನಂತರ ಕಿಟಾನೋಗೆ ಅನ್ನಿಸಿತು: “ಇಂಥ ಆಪ್ಯಾಯಮಾನವಾದ ವಸ್ತುಗಳು ಧ್ಯಾನಕ್ಕೆ ಅಡ್ಡಿ ಉಂಟು ಮಾಡಬಹುದು. ಈ ಅಭ್ಯಾಸ ಬೇರೂರುವ ಮೊದಲೇ, ಈಗಲೇ ನಾನು ಇದನ್ನು ನಿಲ್ಲಿಸಬೇಕು.” ಆದ್ದರಿಂದ ಧೂಮಪಾನ ಮಾಡುವ ಸಾಮಗ್ರಿಗಳನ್ನು ಬಿಸಾಡಿದ.

೨೩ ವರ್ಷ ವಯಸ್ಸಾಗಿದ್ದಾಗ ಆಳವಾದ ಅಧ್ಯಯನ ಮತ್ತು ಚಿಂತನಗಳನ್ನು ಕೋರುವ ವಿಶ್ವ ಸಿದ್ಧಾಂತ ’ಐ-ಕಿಂಗ್’ ಅನ್ನು ಅಧ್ಯಯಿಸಿದ. ಆಗ ಚಳಿಗಾವಾಗಿದ್ದದ್ದರಿಂದ ಅವನಿಗೆ ಬೆಚ್ಚನೆಯ ಉಡುಪುಗಳ ಆವಶ್ಯಕತೆ ಇತ್ತು. ಒಂದುನೂರು ಮೈಲಿ ದೂರದಲ್ಲಿ ವಾಸಿಸುತ್ತಿದ್ದ ತನ್ನ ಗುರುವಿಗೆ ತನ್ನ ಆವಶ್ಯಕತೆಯನ್ನು ವಿವರಿಸಿ ಪತ್ರವೊಂದನ್ನು ಬರೆದು ಅದನ್ನು ತಲುಪಿಸುವಂತೆ ಯಾತ್ರಿಕನೊಬ್ಬನ ಕೈನಲ್ಲಿ ಕೊಟ್ಟ. ಚಳಿಗಾಲ ಕಳೆಯಿತಾದರೂ ಪತ್ರಕ್ಕೆ ಉತ್ತರವೂ ಬರಲಿಲ್ಲ ಅಪೇಕ್ಷಿತ ಉಡುಪುಗಳೂ ಬರಲಿಲ್ಲ. ಆದ್ದರಿಂದ ಅರಿವಿಗೆ ಎಟಕದ್ದನ್ನು ಅರಿಯುವ ಕಲೆಯನ್ನು ಕಲಿಸುವ ವಿಭಾಗವಿದ್ದ ಐ-ಕಿಂಗ್‌ನ ಮುನ್ನರಿವು ತಂತ್ರವನ್ನು ತನ್ನ ಪತ್ರ ತಲುಪಿದೆಯೋ ಇಲ್ಲವೋ ಎಂಬುದನ್ನು ತಿಳಿಯಲೋಸುಗ ಆಶ್ರಯಿಸಿದ. ಪತ್ರ ತಲುಪಿಲ್ಲ ಅನ್ನುವುದು ಅವನಿಗೆ ತಿಳಿಯಿತು. ಅವನ ಗುರುವಿನಿಂದ ಆನಂತರ ಬಂದ ಪತ್ರದಲ್ಲಿ ಉಡುಪಿನ ಉಲ್ಲೇಖವೇ ಇರಲಿಲ್ಲ.

“ಐ-ಕಿಂಗ್‌ನ ನೆರವಿನಿಂದ ಅರಿವಿಗೆ ಎಟಕದ್ದನ್ನು ಇಷ್ಟು ನಿಖರವಾಗಿ ತಿಳಿಯುವ ಕಾರ್ಯ ನಾನು ಮಾಡಲಾರಂಭಿಸಿದರೆ ಧ್ಯಾನ ಮಾಡುವಿಕೆಯನ್ನು ನಿರ್ಲಕ್ಷಿಸಲೂ ಬಹುದು,” ಎಂಬುದಾಗಿ ಆಲೋಚಿಸಿದ ಕಿಟಾನೋ. ಎಂದೇ, ಅವನು ಈ ಅದ್ಭುತ ಕಲಿಕೆಯನ್ನು ಕೈಬಿಟ್ಟನು ಮತ್ತು ಮುಂದೆಂದೂ ಅದರ ಸಾಮರ್ಥ್ಯವನ್ನು ಪ್ರಯೋಗಿಸಲಿಲ್ಲ.
೨೮ ವರ್ಷ ವಯಸ್ಸು ಆಗಿದ್ದಾಗ ಚೀನೀ ಆಲಂಕಾರಿಕ ಕೈಬರೆಹದ ಕಲೆಯನ್ನೂ ಕಾವ್ಯಗಳನ್ನೂ ಅಧ್ಯಯಿಸಿದ. ಅಧ್ಯಾಪಕರು ಬಹುವಾಗಿ ಹೊಗಳುವಷ್ಟರ ಮಟ್ಟಿಗೆ ಈ ಕಲೆಗಳಲ್ಲಿ ಅವನು ಕುಶಲಿಯಾದ. ಆಗ ಕಿಟಾನೋ ಇಂತು ಆಲೋಚಿಸಿದ: “ಈಗ ಇದನ್ನು ನಾನು ನಿಲ್ಲಿಸದಿದ್ದರೆ ಝೆನ್‌ ಗುರುವಾಗುವ ಬದಲು ಕವಿಯಾಗುತ್ತೇನೆ.” ಮುಂದೆಂದೂ ಅವನು ಪದ್ಯ ಬರೆಯಲಿಲ್ಲ.

*****

೨. ತೋಸುಯ್‌ನ ವಿನಿಗರ್‌

ಭಿಕ್ಷುಕರೊಟ್ಟಿಗೆ ಒಂದು ಸೇತುವೆಯ ಅಡಿಯಲ್ಲಿ ವಾಸಿಸಲೋಸುಗ ದೇವಾಲಯಗಳ ಔಪಚಾರಿಕತೆಗಳನ್ನು ತ್ಯಜಿಸಿದವ ಝೆನ್‌ ಗುರು ತೋಸುಯ್‌. ತುಂಬಾ ವಯಸ್ಸು ಆದಾಗ ಭಿಕ್ಷೆ ಬೇಡದೆಯೇ ಜೀವಿಸಲು ಅಗತ್ಯವಾದ ಹಣ ಸಂಪಾದಿಸಲು ಅವನ ಮಿತ್ರನೊಬ್ಬ ಸಹಾಯ ಮಾಡಿದ. ಅಕ್ಕಿಯನ್ನು ಹೇಗೆ ಸಂಗ್ರಹಿಸಬೇಕು ಮತ್ತು ಅದರಿಂದ ವಿನಿಗರ್‌ ಉತ್ಪಾದಿಸುವುದು ಹೇಗೆ ಎಂಬುದನ್ನು ಅವನು ತೋರಿಸಿದ. ವಿಧಿವಶನಾಗುವ ವರೆಗೆ ತೋಸುಯ್‌ ಅದನ್ನೇ ಮಾಡುತ್ತಿದ್ದ.

ತೋಸುಯ್‌ ವಿನಿಗರ್‌ ತಯಾರಿಸುತ್ತಿದ್ದಾಗ ಭಿಕ್ಷುಕನೊಬ್ಬ ಅವನಿಗೆ ಬುದ್ಧನ ಚಿತ್ರವೊಂದನ್ನು ಕೊಟ್ಟ, ತೋಸುಯ್‌ ಅದನ್ನು ಗೋಡೆಯ ಮೇಲೆ ನೇತು ಹಾಕಿ ಪಕ್ಕದಲ್ಲಿ ಒಂದು ಮಾಹಿತಿಫಲಕವನ್ನೂ ಇಟ್ಟ. ಅದರಲ್ಲಿ ಇಂತು ಬರೆದಿತ್ತು:

ಶ್ರೀ ಅಮಿದಾ ಬುದ್ಧ: ಈ ಚಿಕ್ಕ ಕೋಣೆ ತುಂಬಾ ಇಕ್ಕಟ್ಟಾಗಿದೆ. ನೀನು ಸ್ವಲ್ಪಕಾಲ ಮಾತ್ರ ಇಲ್ಲಿ ಇರಲು ಅವಕಾಶ ನೀಡಬಲ್ಲೆ. ಅಂದ ಮಾತ್ರಕ್ಕೆ ನಿನ್ನ ಸ್ವರ್ಗದಲ್ಲಿ ಪುನಃ ಜನಿಸುವಂತೆ ನಿನ್ನನ್ನುಕೇಳುತ್ತಿದ್ದೇನೆ ಎಂಬುದಾಗಿ ಭಾವಿಸಬೇಡ.

*****

೩. ಇನ್ನೊಂದು ದಡ
ಯುವ ಬೌದ್ಧಪಂಥೀಯೊಬ್ಬ ಒಂದು ದಿನ ತನ್ನ ಮನೆಯತ್ತ ಪಯಣಿಸುತ್ತಿರುವಾಗ ಅಗಲವಾದ ನದಿಯ ದಡಕ್ಕೆ ಬಂದನು. ತನ್ನ ಎದುರು ಇರುವ ಬೃಹತ್‌ ಅಡಚಣೆಯನ್ನು ನಿರಾಸೆಯಿಂದ ದಿಟ್ಟಿಸಿ ನೋಡುತ್ತಾ ಅದನ್ನು ದಾಟುವುದು ಹೇಗೆಂಬುದರ ಕುರಿತು ಗಂಟೆಗಟ್ಟಲೆ ಆಲೋಚಿಸಿದ. ಕೊನೆಗೆ ಆ ಪ್ರಯತ್ನವನ್ನು ಕೈಬಿಟ್ಟು ಬೇರೊಂದು ಮಾರ್ಗವಾಗಿ ಪ್ರಯಾಣ ಮುಂದುವರಿಸುಲು ಆರಂಭಿಸುವಷ್ಟರಲ್ಲಿ ನದಿಯ ಇನ್ನೊಂದು ದಡದಲ್ಲಿ ಖ್ಯಾತ ಅಧ್ಯಾಪಕನೊಬ್ಬನನ್ನು ನೋಡಿದ. ಯುವ ಬೌದ್ಧಪಂಥೀಯನು ತಾನಿರುವಲ್ಲಿಂದಲೇ ಆ ಅಧ್ಯಾಪಕನಿಗೆ ಕೇಳುವಂತೆ ಕಿರುಚಿದ: “ಓ ಜ್ಞಾನಿಯೇ, ನದಿಯ ಇನ್ನೊಂದು ದಡಕ್ಕೆ ಹೇಗೆ ದಾಟಬಹುದೆಂಬುದನ್ನು ನೀವು ನನಗೆ ಹೇಳಬಲ್ಲಿರಾ?”
ಅಧ್ಯಾಪಕ ಒಂದು ಕ್ಷಣ ಆಲೋಚಿಸಿ ತದನಂತರ ನದಿಯನ್ನು ಅದರ ಉದ್ದಗಲಕ್ಕೂ ವೀಕ್ಷಿಸಿ ಕಿರುಚಿದ: “ಮಗೂ ನೀನು ಇನ್ನೊಂದು ದಡದಲ್ಲಿಯೇ ಇರುವೆ.”

*****

೪. ಇರಬಹುದು

ಒಂದಾನೊಂದು ಕಾಲದಲ್ಲಿ ಅನೇಕ ವರ್ಷಗಳಿಂದ ಕೃಷಿಯನ್ನೇ ವೃತ್ತಿಯಾಗಿಸಿಕೊಂಡಿದ್ದ ಮುದಿ ಕೃಷಿಕನೊಬ್ಬನಿದ್ದ. ಒಂದು ದಿನ ಅವನ ಕುದುರೆ ಓಡಿ ಹೋಯಿತು. ಸುದ್ದಿ ತಿಳಿದ ನೆರೆಹೊರೆಯವರು ಬಂದು “ಎಂಥಾ ದುರದೃಷ್ಟ” ಎಂಬುದಾಗಿ ಸಹಾನುಭೂತಿ ವ್ಯಕ್ತಪಡಿಸಿದರು.
ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.” 
ಮರುದಿನ ಬೆಳಗ್ಗೆ ಆ ಕುದುರೆ ಹಿಂದಿರುಗಿತು. ಬರುವಾಗ ತನ್ನೊಂದಿಗೆ ಮೂರು ಕಾಡು ಕುದುರೆಗಳನ್ನೂ ಕರೆತಂದಿತು.
ನೆರೆಹೊರೆಯವರು ಉದ್ಗರಿಸಿದರು: “ಎಂಥಾ ಅದ್ಭುತ.”
ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.” 
ಮರುದಿನ ಅವನ ಮಗ ಪಳಗಿಸದೇ ಇದ್ದ ಕಾಡುಕುದುರೆಯೊಂದನ್ನು ಸವಾರಿ ಮಾಡಲು ಪ್ರಯತ್ನಿಸಿದ. ಅದು ಅವನನ್ನು ಎಸೆದದ್ದರಿಂದ ಅವನ ಕಾಲು ಮುರಿಯಿತು. ಅವನ ದುರದೃಷ್ಟಕ್ಕೆ ಸಹಾನುಭೂತಿ ವ್ಯಕ್ತಪಡಿಸಿದರು ನೆರೆಹೊರೆಯವರು.
ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.” 
ಅದರ ಮರುದಿನ ಸೈನ್ಯಕ್ಕೆ ಯುವಕರನ್ನು ಭರ್ತಿ ಮಾಡಿಕೊಳ್ಳಲೋಸುಗ ಸೇನಾಧಿಕಾರಿಗಳು ಆ ಹಳ್ಳಿಗೆ ಬಂದರು. ಮುದಿ ಕೃಷಿಕನ ಮಗನ ಕಾಲು ಮುರಿದಿರುವುದನ್ನು ನೋಡಿ ಅವನನ್ನು ಬಿಟ್ಟು ತೆರಳಿದರು. ನೆರೆಹೊರೆಯವರು ಬಂದು ಅವನ ಈ ಅದೃಷ್ಟಕ್ಕೆ ಅಭಿನಂದಿಸಿದರು.
ಕೃಷಿಕ ಪ್ರತಿಕ್ರಿಯಿಸಿದ: “ಇರಬಹುದು.”

*****

೫. ಕುರುಡರು ಮತ್ತು ಆನೆ.

ವಿಭಿನ್ನ ಮತಗಳ ಮತ್ತು ದೇವರ ಕುರಿತಂತೆ ಹಲವು ಮಂದಿ ಪ್ರಜೆಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯಿತಾದರೂ ಸರ್ವಸಮ್ಮತವಾದ ಉತ್ತರವೊಂದು ಸಿಕ್ಕಲಿಲ್ಲ. ಎಂದೇ, ಅವರು ದೇವರು ನೋಡಲು ಹೇಗಿರುತ್ತದೆ ಎಂಬುದನ್ನು ತಿಳಿಯಲು ಬುದ್ಧನ ಬಳಿ ಬಂದರು.
ಒಂದು ಭವ್ಯವಾದ ಆನೆಯನ್ನೂ ನಾಲ್ವರು ಕುರುಡರನ್ನೂ ಕರೆ ತರುವಂತೆ ಬುದ್ಧ ತನ್ನ ಶೀಷ್ಯರಿಗೆ ಆದೇಶಿಸಿದ. ಅವರು ಅಂತೆಯೇ ಮಾಡಿದ ನಂತರ ಅವನು ನಾಲ್ವರು ಕುರುಡರನ್ನು ಅನೆಯ ಹತ್ತಿರ ಕರೆತಂದು ಆನೆ ’ನೋಡಲು’ ಹೇಗಿರುತ್ತದೆ ಎಂಬುದನ್ನು ಪತ್ತೆಹಚ್ಚಲು ಹೇಳಿದ.
ಮೊದಲನೆಯ ಕುರುಡ ಆನೆಯ ಕಾಲನ್ನು ಮುಟ್ಟಿ ಆನೆ ’ನೋಡಲು’ ಕಂಭದಂತಿದೆ ಎಂಬುದಾಗಿ ವರದಿ ಮಾಡಿದ. ಎರಡನೆಯವನು ಹೊಟ್ಟೆಯನ್ನು ಮುಟ್ಟಿ ಹೇಳಿದ: “ಗೋಡೆಯಂತಿದೆ.” ಮೂರನೆಯವನು ಕಿವಿಯನ್ನು ಮುಟ್ಟಿ ಹೇಳಿದ: “ಬಟ್ಟೆಯ ಚೂರಿನಂತಿದೆ.” ನಾಲ್ಕನೆಯವನು ಬಾಲವನ್ನು ಮುಟ್ಟಿ ಹೇಳಿದ: “ಹಗ್ಗದಂತಿದೆ.” ತತ್ಪರಿಣಾಮವಾಗಿ ಆನೆ ಹೇಗೆ ಗೋಚರಿಸುತ್ತದೆ ಎಂಬುದರ ಕುರಿತು ಬಿಸಿಬಿಸಿ ಚರ್ಚೆ ಆಯಿತು.
ಬುದ್ಧ ಪ್ರಜೆಗಳನ್ನೂ ಕೇಳಿದ: “ಪ್ರತೀ ಕುರುಡನೂ ಆನೆಯನ್ನು ಮುಟ್ಟಿದ್ದಾನಾದರೂ ಅವರು ಆನೆಯನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ಉತ್ತರಗಳ ಪೈಕಿ ಯಾವುದು ಸರಿ?”

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x