ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಮಾರ್ಗ
ನಿನಕಾವಾ ಸಾಯುವುದಕ್ಕೆ ತುಸು ಮುನ್ನ ಝೆನ್‌ ಗುರು ಇಕ್ಕ್ಯು ಅವನನ್ನು ಭೇಟಿ ಮಾಡಿದ. “ನಾನು ನಿನಗೆ ದಾರಿ ತೋರಿಸಲೇನು?” ಕೇಳಿದ ಇಕ್ಕ್ಯು.
ನಿನಕಾವಾ ಉತ್ತರಿಸಿದ: “ನಾನು ಇಲ್ಲಿಗೆ ಒಬ್ಬನೇ ಬಂದೆ ಮತ್ತು ಒಬ್ಬನೇ ಹೋಗುತ್ತೇನೆ. ನೀನು ನನಗೆ ಏನು ಸಹಾಯ ಮಾಡಬಲ್ಲೆ?”
ಇಕ್ಕ್ಯು ಉತ್ತರಿಸಿದ: “ ನಿಜವಾಗಿಯೂ ನೀನು ಬಂದಿದ್ದೇನೆ ಮತ್ತು ಹೋಗುತ್ತೇನೆ ಎಂಬುದಾಗಿ ಆಲೋಚಿಸುತ್ತಿರುವೆಯಾದರೆ ಅದು ನಿನ್ನ ಭ್ರಮೆ. ಬರುವಿಕೆ ಮತ್ತು ಹೋಗುವಿಕೆ ಇಲ್ಲದೇ ಇರುವ ದಾರಿಯನ್ನು ತೋರಿಸಲು ನನಗೆ ಅವಕಾಶ ಕೊಡು.”
ಈ ಪದಗಳನ್ನು ಹೇಳುವುದರ ಮುಖೇನ ಇಕ್ಕ್ಯು ದಾರಿಯನ್ನು ಎಷ್ಟು ಸ್ಪಷ್ಟವಾಗಿ ತೋರಿಸಿದನೆಂದರೆ ನಿನಕಾವಾ ಮುಗುಳ್ನಗೆ ಬೀರಿ ಸತ್ತನು.

*****

೨. ಗೂಡೋ ಮತ್ತು ಚಕ್ರವರ್ತಿ
ಚಕ್ರವರ್ತಿ ಗೋಯೋಝೈ  ಗುರು ಗೂಡೋ ಮಾರ್ಗದರ್ಶನದಲ್ಲಿ ಝೆನ್‌ಅನ್ನು ಅಧ್ಯಯಿಸುತ್ತಿದ್ದ. 
ಚಕ್ರವರ್ತಿ ವಿಚಾರಿಸಿದ: “ಝೆನ್‌ನಲ್ಲಿ ಈ ಮನಸ್ಸೇ ಬುದ್ಧ. ಇದು ಸರಿಯಷ್ಟೆ?”
ಗೂಡೋ ಉತ್ತರಿಸಿದ: “ನಾನು ಹೌದು ಎಂಬುದಾಗಿ ಹೇಳಿದರೆ ಅರ್ಥ ಮಾಡಿಕೊಳ್ಳದೆಯೇ ಅರ್ಥವಾಗಿದೆ ಎಂಬುದಾಗಿ ನೀನು ಆಲೋಚಿಸುವೆ. ಇಲ್ಲ ಎಂಬುದಾಗಿ ನಾನು ಹೇಳಿದರೆ, ನೀನು ಚೆನ್ನಾಗಿ ಅರ್ಥ ಮಾಡಿಕೊಳ್ಳ ಬಹುದಾದ ತಥ್ಯವನ್ನು ಅಲ್ಲಗಳೆದಂತಾಗುತ್ತದೆ”
ಇನ್ನೊಂದು ದಿನ ಗೂಡೋವನ್ನು ಚಕ್ರವರ್ತಿ ಕೇಳಿದ: “ಜ್ಞಾನೋದಯವಾದ ಮನುಷ್ಯ ಸತ್ತ ನಂತರ ಎಲ್ಲಿಗೆ ಹೋಗುತ್ತಾನೆ?”
ಗೂಡೋ ಉತ್ತರಿಸಿದ: “ನನಗೆ ಗೊತ್ತಿಲ್ಲ.”
ಚಕ್ರವರ್ತಿ ಕೇಳಿದ: “ನಿಮಗೆ ಏಕೆ ಗೊತ್ತಿಲ್ಲ?”
ಗೂಡೋ ಉತ್ತರಿಸಿದ: “ಏಕೆಂದರೆ ನಾನಿನ್ನೂ ಸತ್ತಿಲ್ಲ.”
ತದನಂತರ ತನ್ನ ಮನಸ್ಸಿನಿಂದ ಗ್ರಹಿಸಲಾಗದ ಇಂಥ ವಿಷಯಗಳ ಕುರಿತು  ಹೆಚ್ಚು ವಿಚಾರಿಸಲು ಚಕ್ರವರ್ತಿ ಹಿಂದೇಟು ಹಾಕಿದ. ಆದ್ದರಿಂದ ಅವನನ್ನು ಜಾಗೃತಗೊಳಿಸಲೋ ಎಂಬಂತೆ ಗೂಡೋ ತನ್ನ ಕೈನಿಂದ ನೆಲಕ್ಕೆ ಹೊಡೆದ. ಚಕ್ರವರ್ತಿಗೆ ಜ್ಞಾನೋದಯವಾಯಿತು!
ಜ್ಞಾನೋದಯವಾದ ನಂತರ ಚಕ್ರವರ್ತಿಯು ಝೆನ್‌ ಅನ್ನೂ ಗೂಡೋವನ್ನೂ ಮೊದಲಿಗಿಂತ ಹೆಚ್ಚು ಗೌರವಿಸತೊಡಗಿದ. ತನ್ನ ಚಳಿಗಾಲದಲ್ಲಿ ಅರಮನೆಯ ಒಳಗೆ ಟೊಪ್ಪಿ ಧರಿಸಲು ಅನುಮತಿಯನ್ನೂ ಗೂಡೋನಿಗೆ ನೀಡಿದ.೮೦ ವರ್ಷಕ್ಕಿಂತ ಹೆಚ್ಚು ವಯಸ್ಸು ಆದ ನಂತರ ಗೂಡೋ ತಾನು ಭಾಷಣ ಮಾಡುತ್ತಿರುವಾಗಲೇ ನಿದ್ದೆಗೆ ಜಾರುತ್ತಿದ್ದ. ಅಂಥ ಸನ್ನಿವೇಶಗಳಲ್ಲಿ ತನ್ನ ಪ್ರೀತಿಯ ಶಿಕ್ಷಕ ತನ್ನ ವಯಸ್ಸಾಗುತ್ತಿರುವ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ಅನುಭವಿಸಲಿ ಎಂಬ ಕಾರಣಕ್ಕಾಗಿ ಚಕ್ರವರ್ತಿ ತಾನೇ ಸದ್ದು ಮಾಡದೆಯೇ ಇನ್ನೊಂದು ಕೊಠಡಿಗೆ ತೆರಳುತ್ತಿದ್ದ.

*****

೩. ವಿಧಿಯ ಕೈಗಳಲ್ಲಿ
ನೊಬುನಾಗ ಎಂಬ ಹೆಸರಿನ ಜಪಾನಿನ ಮಹಾಯೋಧನೊಬ್ಬ ತನ್ನ ಶತ್ರು ಪಾಳೆಯದಲ್ಲಿದ್ದ ಸೈನಿಕರ ಸಂಖ್ಯೆಯ ಹತ್ತನೇ ಒಂದು ಭಾಗದಷ್ಟು ಮಂದಿ ತನ್ನ ಅಧೀನದಲ್ಲಿ ಇಲ್ಲದಿದ್ದರೂ ಧಾಳಿ ಮಾಡಲು ನಿರ್ಧರಿಸಿದ. ತನ್ನ ಗೆಲ್ಲುವು ಖಚಿತ ಎಂಬುದು ಅವನಿಗೆ ಗೊತ್ತಿದ್ದರೂ ಅವನ ಸೈನಿಕರಿಗೆ ಈ ಕುರಿತು ಸಂಶಯವಿತ್ತು.
ಹೋಗುವ ದಾರಿಯಲ್ಲಿ ಇದ್ದ ಶಿಂಟೋ ಪೂಜಾಸ್ಥಳದ ಬಳಿ ಆತ ನಿಂತು ತನ್ನ ಸೈನಿಕರಿಗೆ ಇಂತು ಹೇಳಿದ: “ಪೂಜಾಸ್ಥಳದೊಳಕ್ಕೆ ಹೋಗಿ ಬಂದ ನಂತರ ನಾನು ನಾಣ್ಯವೊಂದನ್ನು ಮೇಲಕ್ಕೆ ಚಿಮ್ಮುತ್ತೇನೆ. ಮುಮ್ಮುಖ ಮೇಲೆ ಇರುವಂತೆ ನಾಣ್ಯ ಕೆಳಗೆ ಬಿದ್ದರೆ ನಾವು ಗೆಲ್ಲುತ್ತೇವೆ, ಹಿಮ್ಮುಖ ಮೇಲೆ ಇರುವಂತೆ ಬಿದ್ದರೆ ನಾವು ಸೋಲುತ್ತೇವೆ. ನಮ್ಮನ್ನು ವಿಧಿ ಅದರ ಕೈಗಳಲ್ಲಿ ಹಿಡಿದುಕೊಂಡಿದೆ.”
ನೊಬುನಾಗ ಪೂಜಾಸ್ಥಳವನ್ನು ಪ್ರವೇಶಿಸಿ ಮೌನ ಪ್ರಾರ್ಥನೆ ಸಲ್ಲಿಸಿದ. ಹೊರಬಂದು ನಾಣ್ಯವನ್ನು ಮೇಲಕ್ಕೆ ಚಿಮ್ಮಿದ, ಮುಮ್ಮುಖ ಮೇಲೆ ಇತ್ತು. ಯುದ್ಧ ಮಾಡಲು ಅವನ ಸೈನಿಕರು ಎಷ್ಟು ಉತ್ಸುಕರಾಗಿದ್ದರೆಂದರೆ ಯುದ್ಧದಲ್ಲಿ ಅವರು ಬಲು ಸುಲಭವಾಗಿ ಜಯ ಗಳಿಸಿದರು.
ಯುದ್ಧ ಮುಗಿದ ನಂತರ ನೊಬುನಾಗನ ಅನುಚರ ಅವನಿಗೆ ಇಂತೆಂದ: “ವಿಧಿಯ ತೀರ್ಪನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ.”
“ಖಂಡಿತ ಸಾಧ್ಯವಿಲ್ಲ” ಎಂಬುದಾಗಿ ಉದ್ಗರಿಸಿದ ನೊಬುನಾಗ ತಾನು ಚಿಮ್ಮಿದ ನಾಣ್ಯವನ್ನು ತೋರಿಸಿದ. ಅದರ ಎರಡೂ ಪಾರ್ಶ್ವಗಳಲ್ಲಿ ಮುಮ್ಮುಖದಲ್ಲಿರಬೇಕಾದ ಚಿತ್ರವೇ ಇತ್ತು.

*****

೪. ಕಾಸನ್‌ ಬೆವರಿದ
ಪ್ರಾಂತೀಯ ಪ್ರಭುವಿನ ಶವಸಂಸ್ಕಾರವನ್ನು ಅಧಿಕೃತವಾಗಿ ನೆರವೇರಿಸುವಂತೆ ಕಾಸನ್‌ಗೆ ಹೇಳಲಾಯಿತು.
ಆ ವರೆಗೆ ಅವನು ಪ್ರಭುಗಳನ್ನೇ ಆಗಲಿ ಶ್ರೇಷ್ಠರನ್ನೇ ಆಗಲಿ ಸಂಧಿಸಿಯೇ ಇರಲಿಲ್ಲವಾದ್ದರಿಂದ ಅಧೀರನಾಗಿದ್ದ. ಶವ ಸಂಸ್ಕಾರದ ಕರ್ಮಾಚರಣೆ ಆರಂಭವಾದಾಗ ಅವನು ಬೆವರಿದ.
ತರುವಾಯ, ಅವನು ಹಿಂದಿರುಗಿ ಬಂದ ನಂತರ, ತನ್ನ ಶಿಷ್ಯರನ್ನು ಒಂದೆಡೆ ಸೇರಿಸಿದ. ವಿಜನ ಪ್ರದೇಶದಲ್ಲಿರುವ ದೇವಾಲಯದಲ್ಲಿ ತನ್ನ ನಡೆನುಡಿ ಹೇಗಿರುತ್ತದೋ ಅಂತೆಯೇ ಖ್ಯಾತರ ಜಗತ್ತಿನಲ್ಲಿಯೂ ಇರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಶಿಕ್ಷಕನಾಗುವ ಅರ್ಹತೆ ಈಗ ತನಗಿಲ್ಲವೆಂಬುದನ್ನು ಒಪ್ಪಿಕೊಂಡ.
ಆನಂತರ ಕಾಸನ್‌ ರಾಜೀನಾಮೆ ಸಲ್ಲಿಸಿ ಇನ್ನೊಬ್ಬ ಗುರುವಿನ ಶಿಷ್ಯನಾದ. ೮ ವರ್ಷಗಳ ತರುವಾಯ ಜ್ಞಾನಿಯಾಗಿ ತನ್ನ ಹಿಂದಿನ ಶಿಷ್ಯರ ಬಳಿಗೆ ಹಿಂದಿರುಗಿದ.

*****

೫. ಕಲ್ಲು ಮನಸ್ಸು
ಚೀನೀ ಝೆನ್‌ ಗುರು ಹೋಗೆನ್‌ ಗ್ರಾಮಾಂತರ ಪ್ರದೇಶದ ಒಂದು ಸಣ್ಣ ದೇವಾಲಯದಲ್ಲಿ ಏಕಂಗಿಯಾಗಿ ವಾಸಿಸುತ್ತಿದ್ದ. ಅದೊಂದು ದಿನ ಯಾತ್ರೆ ಹೋಗುತ್ತಿದ್ದ ನಾಲ್ಕು ಮಂದಿ ಸನ್ಯಾಸಿಗಳು ಬಂದು ಅವನ ನಿವಾಸದ ಪ್ರಾಂಗಣದಲ್ಲಿ ಬೆಂಕಿ ಹಾಕಿ ತಾವು ಮೈ ಬೆಚ್ಚಗೆ ಮಾಡಿಕೊಳ್ಳಬಹುದೇ ಎಂಬುದಾಗಿ ಕೇಳಿದರು.
ಬೆಂಕಿ ಹಾಕುತ್ತಿರುವಾಗ ವ್ಯಕ್ತಿನಿಷ್ಠತೆ ಮತ್ತು ವಿಷಯನಿಷ್ಠತೆ ಕುರಿತು ಅವರು ಚರ್ಚಿಸುತ್ತಿರುವುದು ಹೋಗೆನ್‌ಗೆ ಕೇಳಿಸಿತು. ಅವನು ಅವರ ಜೊತೆ ಸೇರಿ ಕೇಳಿದ: “ಅಲ್ಲೊಂದು ದೊಡ್ಡ ಕಲ್ಲು ಇದೆ. ಅದು ನಿಮ್ಮಮನಸ್ಸಿನ ಒಳಗಿದೆ ಎಂಬುದಾಗಿ ಪರಿಗಣಿಸುತ್ತಿರೋ ಅಥವ ಹೊರಗಿದೆ ಎಂಬುದಾಗಿ ಪರಿಗಣಿಸುತ್ತೀರೋ?”
ಅವರ ಪೈಕಿ ಒಬ್ಬ ಸನ್ಯಾಸಿ ಇಂತು ಉತ್ತರಿಸಿದ: “ಬೌದ್ಧಸಿದ್ಧಾಂತದ ದೃಷ್ಟಿಕೋನದಿಂದ ನೋಡುವುದಾದರೆ ಪ್ರತಿಯೊಂದೂ ಮನಸ್ಸಿನ ಮೂರ್ತೀಕರಣವೇ ಆಗಿರುತ್ತದೆ. ಆದ್ದರಿಂದ ಕಲ್ಲು ನನ್ನ ಮನಸ್ಸಿನ ಒಳಗಿದೆ ಎಂಬುದಾಗಿ ನಾನು ಹೇಳುತ್ತೇನೆ.”
ಅದಕ್ಕೆ ಹೋಗೆನ್‌ ಇಂತು ಪ್ರತಿಕ್ರಿಯಿಸಿದ: “ಅಂಥ ಕಲ್ಲನ್ನು ನಿನ್ನ ಮನಸ್ಸಿನಲ್ಲಿ ಎಲ್ಲೆಡೆಗೂ ಹೊತ್ತೊಯ್ಯುತ್ತಿದ್ದರೆ ನಿನ್ನ ತಲೆ ಬಲು ಭಾರವಾಗಿರುವಂತೆ ಭಾಸವಾಗುತ್ತಿರಬೇಕು.”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *