೧. ಶಿಷ್ಯನಾದ ಕಳ್ಳ
ಒಂದು ಸಂಜೆ ಶಿಚಿರಿ ಕೋಜುನ್ ಶ್ಲೋಕಗಳನ್ನು ಪಠಿಸುತ್ತಿದ್ದಾಗ ಹರಿತವಾದ ಖಡ್ಗಧಾರೀ ಕಳ್ಳನೊಬ್ಬ ಒಳಕ್ಕೆ ಪ್ರವೇಶಿಸಿ ಹಣ ಅಥವ ಪ್ರಾಣ ಎರಡರಲ್ಲೊಂದು ನೀಡಬೇಕೆಂಬ ಒತ್ತಾಯಪೂರ್ವಕ ಬೇಡಿಕೆ ಮುಂದಿಟ್ಟ.
ಶಿಚಿರಿ ಅವನಿಗೆ ಇಂತು ಹೇಳಿದ: “ನನ್ನ ನೆಮ್ಮದಿ ಕೆಡಿಸಬೇಡ. ಆ ಪೆಠಾರಿಯ ಒಳಗೆ ಹಣವಿದೆ, ನೋಡು.” ಆನಂತರ ಅವನು ಪಠನವನ್ನು ಮುಂದಿವರಿಸಿದ.
ತುಸು ಸಮಯದ ನಂತರ ಪಠನ ನಿಲ್ಲಿಸಿ ಕರೆದು ಇಂತು ಹೇಳಿದ: “ಅಲ್ಲಿರುವುದೆಲ್ಲವನ್ನೂ ತೆಗೆದುಕೊಳ್ಳ ಬೇಡ. ನಾಳೆ ತೆರಿಗೆ ಕಟ್ಟಲೋಸುಗ ನನಗೆ ಸ್ವಲ್ಪ ಹಣ ಬೇಕಾಗುತ್ತದೆ.”
ಅತಿಕ್ರಮ ಪ್ರವೇಶ ಮಾಡಿದವ ಇದ್ದ ಹಣದ ಹೆಚ್ಚಿನ ಭಾಗವನ್ನು ತೆಗೆದುಕೊಂಡು ಹೊರಟ. “ಒಂದು ಕೊಡುಗೆಯನ್ನು ಪಡೆದಾಗ ಅದನ್ನು ಕೊಟ್ಟವರಿಗೆ ಧನ್ಯವಾದಗಳನ್ನು ಅರ್ಪಿಸು” ಸಲಹೆ ನೀಡಿದ ಶಿಚಿರ. ಆ ಮನುಷ್ಯ ಧನ್ಯವಾದಗಳನ್ನು ಅರ್ಪಿಸಿ ಹೊರಟು ಹೋದ.
ಕೆಲವು ದಿನಗಳ ನಂತರ ಆ ಕಳ್ಳ ಹಿಡಿಯಲ್ಪಟ್ಟ ಮತ್ತುಇತರ ಅಪರಾಧಗಳ ಜೊತೆಗೆ ಶಿಚಿರಿ ವಿರುದ್ಧ ಮಾಡಿದ ಅಪರಾಧವನ್ನೂ ಒಪ್ಪಿಕೊಂಡ. ಸಾಕ್ಷಿ ಹೇಳಲು ಶಿಚಿರಿಯನ್ನು ಕರೆಸಿದಾಗ ಆತ ಹೇಳಿದ: “ಕೊನೆಯ ಪಕ್ಷ ನನಗೆ ಸಂಬಂಧಿಸಿದಂತೆ ಈ ಮನುಷ್ಯ ಕಳ್ಳನಲ್ಲ. ನಾನು ಅವನಿಗೆ ಹಣ ಕೊಟ್ಟೆ ಮತ್ತು ಅದಕ್ಕವನು ಧನ್ಯವಾದಗಳನ್ನೂ ಅರ್ಪಿಸಿದ.”
ಸೆರೆವಾಸದ ಅವಧಿಯನ್ನು ಆತ ಮುಗಿಸಿದ ನಂತರ ಶಿಚಿರಿ ಬಳಿಗೆ ಹೋಗಿ ಆತನ ಶಿಷ್ಯನಾದ.
*****
೨. ಜೋಶುನ ಝೆನ್
ತನಗೆ ೬೦ ವರ್ಷ ವಯಸ್ಸು ಆದಾಗ ಜೋಶು ಝೆನ್‌ಅನ್ನು ಅಧ್ಯಯಿಸಲು ಆರಂಭಿಸಿ ೮೦ ವರ್ಷ ವಯಸ್ಸು ಆಗುವ ವರೆಗೆ ಅಧ್ಯಯನವನ್ನು ಮುಂದುವರಿಸಿದ. ಆಗ ಅವನಿಗೆ ಝೆನ್‌ನ ಅರಿವು ಉಂಟಾಯಿತು.
೮೦ ವರ್ಷ ವಯಸ್ಸು ಆದಾಗಿನಿಂದ ಆರಂಭಿಸಿ ೧೨೦ ವರ್ಷ ವಯಸ್ಸು ಆಗುವ ವರೆಗೆ ಆತ ಝೆನ್‌ಅನ್ನು ಬೋಧಿಸಿದ.
ಒಮ್ಮೆ ವಿದ್ಯಾರ್ಥಿಯೊಬ್ಬ ಕೇಳಿದ: “ನನ್ನ ಮನಸ್ಸಿನಲ್ಲಿ ಏನೂ ಇಲ್ಲದಿದ್ದರೆ ನಾನೇನು ಮಾಡಬೇಕು?”
ಜೋಶು ಉತ್ತರಿಸಿದ: “ಅದನ್ನು ಹೊರಕ್ಕೆ ಎಸೆ.”
ಪ್ರಶ್ನಿಸಿದಾತ ಮುಂದುವರಿಸಿದ: “ನನ್ನ ಮನಸ್ಸಿನಲ್ಲಿ ಏನೂ ಇಲ್ಲವೆಂದಾದರೆ, ಅದನ್ನು ನಾನು ಎಸೆಯುವುದು ಹೇಗೆ?”
ಜೋಶು ಹೇಳಿದ: “ಸರಿ, ಹಾಗಾದರೆ ಅದನ್ನು ಕಾರ್ಯರೂಪಕ್ಕೆ ತಾ.”
*****
೩. ಸ್ವರ್ಗದ ಮಹಾದ್ವಾರ
ನೊಬುಶಿಗೆ ಎಂಬ ಹೆಸರಿನ ಯೋಧನೊಬ್ಬ ಹಕುಇನ್ ಬಳಿ ಬಂದು ಕೇಳಿದ: “ನಿಜವಾಗಿಯೂ ಸ್ವರ್ಗ ಮತ್ತು ನರಕಗಳು ಇವೆಯೇ?”
“ನೀನು ಯಾರು?”; ವಿಚಾರಿಸಿದ ಹಕುಇನ್.
“ನಾನೊಬ್ಬ ಸ್ಯಾಮುರೈ” ಉತ್ತರಿಸಿದ ಯೋಧ.
“ನೀನು, ಒಬ್ಬ ಯೋಧ!” ಉದ್ಗರಿಸಿದ ಹಕುಇನ್, “ನಿನ್ನನ್ನು ಯಾವ ದೊರೆ ರಕ್ಷಕನಾಗಿ ಇಟ್ಟುಕೊಂಡಾನು. ನಿನ್ನ ಮುಖ ಒಬ್ಬ ಭಿಕ್ಷುಕನ ಮುಖದಂತಿದೆ.”
ನೊಬುಶಿಗೆಗೆ ಎಷ್ಟು ಕೋಪ ಬಂದಿತೆಂದರೆ ಆತ ತನ್ನ ಖಡ್ಗವನ್ನು ಒರೆಯಿಂದ ಹೊರಕ್ಕೆಳೆಯಲಾರಂಭಿಸಿದ. ಆದರೂ ಹಕುಇನ್ ಮುಂದುವರಿಸಿದ: “ ಓ. ಹಾಗಾದರೆ ನಿನ್ ಹತ್ತಿರ ಒಂದು ಖಡ್ಗವೂ ಇದೆ! ನಿನ್ನ ಆಯುಧ ನನ್ನ ತಲೆಯನ್ನು ಕತ್ತರಿಸಲಾಗದಷ್ಟು ಮೊಂಡಾಗಿದೆ.”
ನೊಬುಶಿಗೆ ಖಡ್ಗವನ್ನು ಪೂರ್ತಿಯಾಗಿ ಹೊರಕ್ಕೆಳೆದಾಗ ಹಕುಇನ್ ಹೇಳಿದ: “ಯಾರಲ್ಲಿ, ನರಕದ ಮಹಾದ್ವಾರವನ್ನು ತೆರೆಯಿರಿ.”
ಈ ಪದಗಳನ್ನು ಕೇಳಿದ ಸ್ಯಾಮುರೈ ಗುರುವಿನ ಸಂಯಮ ಮತ್ತು ಶಿಸ್ತನ್ನು ಗ್ರಹಿಸಿ, ಖಡ್ಗವನ್ನು ಪುನಃ ಒರೆಯೊಳಕ್ಕೆ ತಳ್ಳಿದ.
ಆಗ ಹಕುಇನ್ ಇಂತೆಂದ:“ಯಾರಲ್ಲಿ, ಸ್ವರ್ಗದ ಮಹಾದ್ವಾರವನ್ನು ತೆರೆಯಿರಿ.”
*****
೪. ಮಾನವೀಯತೆಯ ಸಿಪಾಯಿಗಳು
ಒಮ್ಮೆ ಜಪಾನೀ ಸೈನ್ಯದ ತುಕಡಿಯೊಂದು ಕೃತ್ರಿಮ ಯುದ್ಧದಲ್ಲಿ ತೊಡಗಿಸಿಕೊಂಡಿತ್ತು. ಆ ತುಕಡಿಯ ಕೆಲ ಅಧಿಕಾರಿಗಳಿಗೆ ಗಾಸನ್‌ನ ದೇವಾಲಯದಲ್ಲಿ ತಮ್ಮ ಪ್ರಧಾನ ಕಚೇರಿ ಸ್ಥಾಪಿಸಿಕೊಳ್ಳುವುದು ಅಗತ್ಯ ಅನ್ನಿಸಿತು.
ಗಾಸನ್ ತನ್ನ ಅಡುಗೆಯವನಿಗೆ ಇಂತೆಂದ: “ನಾವು ತಿನ್ನುವ ಸರಳ ಆಹಾರವನ್ನೇ ಅಧಿಕಾರಿಗಳಿಗೂ ಕೊಡಬೇಕು.”
ಗೌರವದ ಉಟೋಪಚಾರ ರೂಢಿಯಾಗಿದ್ದ ಸೈನ್ಯದವರಿಗೆ ಇದರಿಂದ ಕೋಪ ಬಂದಿತು. ಅವರ ಪೈಕಿ ಒಬ್ಬ ಗಾಸನ್ ಬಳಿ ಬಂದು ಇಂತೆಂದ: “ನಾವು ಯಾರೆಂದು ನೀನು ತಿಳಿದಿರುವೆ? ನಾವು ಸೈನಿಕರು, ನಮ್ಮ ದೇಶಕ್ಕಾಗಿ ನಮ್ಮ ಜೀವವನ್ನೇ ತ್ಯಾಗ ಮಾಡುವವರು. ಅಂಥವರಿಗೆ ತಕ್ಕುದಾದ ರೀತಿಯಲ್ಲಿ ನಮ್ಮನ್ನು ನೀನು ಏಕೆ ಉಪಚರಿಸಬಾರದು?”
ನಿರ್ದಾಕ್ಷಿಣ್ಯದ ಗಡಸು ಧ್ವನಿಯಲ್ಲಿ ಗಾಸನ್ ಉತ್ತರಿಸಿದ: “ನಾವು ಯಾರೆಂದು ನೀನು ತಿಳಿದಿರುವೆ? ಇಂದ್ರಿಯ ಗ್ರಹಣ ಸಾಮರ್ಥ್ಯ ಉಳ್ಳ ಎಲ್ಲ ಜೀವಿಗಳನ್ನೂ ಕಾಪಾಡುವ ಮಾನವೀಯತೆಯ ಸೈನಿಕರು ನಾವು.”
*****
೫. ಕೊಲ್ಲುವುದು
ಗಾಸನ್ ತನ್ನ ಅನುಯಾಯಿಗಳಿಗೆ ಒಂದು ದಿನ ಇಂತು ಉಪದೇಶಿಸಿದ:
“ಯಾರು ಕೊಲ್ಲುವುದರ ವಿರುದ್ಧ ಮಾತನಾಡುತ್ತಾರೋ ಯಾರು ಎಲ್ಲ ಜೀವಿಗಳ ಪ್ರಾಣ ಉಳಿಸಲು ಬಯಸುತ್ತಾರೋ ಅವರೇ ಸರಿಯಾದವರು.
ಪ್ರಾಣಿಗಳನ್ನು ಮತ್ತು ಕೀಟಗಳನ್ನು ಸಂರಕ್ಷಿಸುವುದೂ ಒಳ್ಳೆಯದೆ. ಆದರೆ ಸಮಯವನ್ನು ಕೊಲ್ಲುವವರ ವಿಷಯ ಏನು, ಸಂಪತ್ತನ್ನು ನಾಶ ಮಾಡುವವರ ವಿಷಯ ಏನು, ರಾಜಕೀಯ ಆರ್ಥಿಕತೆಯನ್ನು ನಾಶ ಮಾಡುವವರ ವಿಷಯ ಏನು?
ಅವರನ್ನು ನಾವು ಉಪೇಕ್ಷಿಸಕೂಡದು. ಇಷ್ಟೇ ಅಲ್ಲದೆ, ಜ್ಞಾನೋದಯವಾಗದೆ ಉಪದೇಶ ಮಾಡುವವನ ವಿಷಯ ಏನು? ಅವನು ಬೌದ್ಧ ಸಿದ್ಧಾಂತವನ್ನೇ ಕೊಲ್ಲುತ್ತಿದ್ದಾನೆ.”
******