೧. ನಿನ್ನ ಬಟ್ಟಲನ್ನು ತೊಳೆ
ಹೊಸದಾಗಿ ಸಂನ್ಯಾಸತ್ವ ಸ್ವೀಕರಿಸಿದವನೊಬ್ಬ ಗುರು ಜೋಶುವಿನ ಬಳಿಗೆ ಬಂದು ಕೇಳಿದ, “ನಾನು ಈಗ ತಾನೇ ಈ ಆಶ್ರಮಕ್ಕೆ ಸೇರಿದ್ದೇನೆ. ಝೆನ್‌ನ ಮೊದಲನೇ ತತ್ವವನ್ನು ಕಲಿಯಲು ನಾನು ಕಾತುರನಾಗಿದ್ದೇನೆ.”
ಜೋಶು ಕೇಳಿದ, “ನಿನ್ನ ಊಟವಾಯಿತೇ?”
ನವಶಿಷ್ಯ ಉತ್ತರಿಸಿದ, “ನನ್ನ ಊಟವಾಯಿತು.”
ಜೋಶು ಹೇಳಿದ, “ಸರಿ ಹಾಗದರೆ, ಈಗ ನಿನ್ನ ಬಟ್ಟಲನ್ನು ತೊಳೆ.”
*****
೨. ದಣಿದಾಗ
ವಿದ್ಯಾರ್ಥಿಯೊಬ್ಬ ಗುರುವನ್ನು ಕೇಳಿದ, “ಗುರುಗಳೇ, ನಿಜವಾದ ಅರಿವು ಅಂದರೇನು?”
ಗುರುಗಳು ಉತ್ತರಿಸಿದರು, “ಹಸಿವಾದಾಗ ಊಟ ಮಾಡು, ದಣಿದಾಗ ನಿದ್ದೆ ಮಾಡು.”
*****
೩. ಕಣ್ಣು ಮಿಟುಕಿಸದೆ
ಊಳಿಗಮಾನ್ಯ ಪದ್ಧತಿ ಇದ್ದ ಜಪಾನಿನಲ್ಲಿ ಅಂತರ್ಯುದ್ಧಗಳು ನಡೆಯುತ್ತಿದ್ದಾಗ ಆಕ್ರಮಣ ಮಾಡುತ್ತಿದ್ದ ಸೈನ್ಯ ಬಲು ವೇಗವಾಗಿ ಪಟ್ಟಣವನ್ನು ಆಕ್ರಮಿಸಿ ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿತ್ತು. ಒಂದು ಹಳ್ಳಿಯಲ್ಲಿ ಆಕ್ರಮಣ ಮಾಡುವ ಸೈನ್ಯ ಬರುವುದಕ್ಕೆ ತುಸು ಮೊದಲೇ ಝೆನ್ ಗುರುವೊಬ್ಬನನ್ನು ಬಿಟ್ಟು ಉಳಿದವರೆಲ್ಲರೂ ಪಲಾಯನ ಮಾಡಿದರು.
ಈ ವೃದ್ಧ ಗುರು ಎಂಥ ವ್ಯಕ್ತಿ ಎಂಬುದನ್ನು ಸ್ವತಃ ನೋಡಲೋಸುಗ ಸೇನಾನಿ ಅವನಿದ್ದ ದೇವಾಲಯಕ್ಕೆ ಹೋದ. ಅವನಿಗೆ ರೂಢಿಯಾಗಿದ್ದ ನಮ್ರತೆ ಮತ್ತು ಗೌರವ ಮರ್ಯಾದೆಗಳಿಂದ ಗುರು ಸೇನಾನಿಯೊಂದಿಗೆ ನಡೆದುಕೊಳ್ಳದ್ದರಿಂದ ಆತನಿಗೆ ವಿಪರೀತ ಸಿಟ್ಟು ಬಂದಿತು.
ಸಿಟ್ಟಿನಿಂದ ಸೇನಾನಿ ತನ್ನ ಕತ್ತಿಯನ್ನು ಒರೆಯಿಂದ ಹೊರಗೆಳೆಯುತ್ತಾ ಅಬ್ಬರಿಸಿದ, “ಎಲವೋ ಮೂರ್ಖ, ಕಣ್ಣು ಮಿಟುಕಿಸದೇ ನಿನ್ನ ಮೂಲಕ ಖಡ್ಗವನ್ನು ತೂರಿಸಬಲ್ಲ ವ್ಯಕ್ತಿಯ ಮುಂದೆ ನಿಂತಿದ್ದೇನೆ ಎಂಬ ಅರಿವೂ ನಿನಗಿಲ್ಲವೇ?”
ತಾಳ್ಮೆಯಿಂದ ಗುರುಗಳು ಉತ್ತರಿಸಿದರು, “ಖಡ್ಗ ತೂರಿಸಿದಾಗಲೂ ಕಣ್ಣು ಮಿಟುಕಿಸದೇ ನಿಲ್ಲಬಲ್ಲ ವ್ಯಕ್ತಿಯ ಎದುರು ನಿಂತಿದ್ದೇನೆ ಎಂಬ ಅರಿವು ನಿನಗಿದೆಯೇ?”
*****
೪. ಕೋಡಂಗಿಗಿಂತಲೂ ಕೆಟ್ಟದಾಗಿರು
ಬಲು ಶ್ರದ್ಧೆಯಿಂದ ಧರ್ಮಾನುಷ್ಠಾನ ನಿರತನಾಗಿದ್ದ ಯುವ ಸನ್ಯಾಸಿಯೊಬ್ಬ ಚೀನಾದಲ್ಲಿ ಇದ್ದ. ಒಂದು ಸಲ ಅವನಿಗೆ ಅರ್ಥವಾಗದ ಅಂಶವೊಂದು ಆಕಸ್ಮಿಕವಾಗಿ ಅವನ ಗಮನಕ್ಕೆ ಬಂದಿತು. ಅದರ ಕುರಿತು ಕೇಳಲೋಸುಗ ಅವನು ಗುರುವಿನ ಹತ್ತಿರ ಹೋದ. ಆತನ ಪ್ರಶ್ನೆಯನ್ನು ಗುರು ಕೇಳಿದ ತಕ್ಷಣ ಗಟ್ಟಿಯಾಗಿ ನಗಲಾರಂಭಿಸಿದರು, ಸುದೀರ್ಘ ಕಾಲ ನಗುತ್ತಲೇ ಇದ್ದರು. ಕೊನೆಗೆ ನಗುತ್ತಲೇ ಎದ್ದು ಅಲ್ಲಿಂದ ತೆರಳಿದರು.
ಗುರುವಿನ ಈ ಪ್ರತಿಕ್ರಿಯೆಯು ಯುವ ಸನ್ಯಾಸಿಯಲ್ಲಿ ಮನಃಕ್ಷೋಭೆಯನ್ನು ಉಂಟುಮಾಡಿತು. ಮುಂದಿನ ಮೂರು ದಿನಗಳ ಕಾಲ ಆತನಿಗೆ ಸರಿಯಾಗಿ ತಿನ್ನಲಾಗಲಿಲ್ಲ, ನಿದ್ದೆ ಮಾಡಲಾಗಲಿಲ್ಲ, ಅಷ್ಟೇ ಅಲ್ಲದೆ ಸರಿಯಾಗಿ ಆಲೋಚಿಸಲೂ ಆಗಲಿಲ್ಲ. ಮೂರು ದಿನಗಳ ನಂತರ ಆತ ಪುನಃ ಗುರುವಿನ ಹತ್ತಿರ ಹೋಗಿ ತನ್ನ ದುಸ್ಥಿತಿಯನ್ನು ಹೇಳಿಕೊಂಡ.
ಇದನ್ನು ಕೇಳಿದ ಗುರುಗಳು ಹೇಳಿದರು, “ಅಯ್ಯಾ ಸನ್ಯಾಸಿಯೇ, ನಿನ್ನ ಸಮಸ್ಯೆ ಏನೆಂಬುದು ನಿನಗೆ ಗೊತ್ತಿದೆಯೇ? ನೀನು ಒಬ್ಬ ಕೋಡಂಗಿಗಿಂತಲೂ ಕೀಳುಸ್ಥಿತಿಯಲ್ಲಿರುವುದೇ ನಿನ್ನ ಸಮಸ್ಯೆ.”
ಯುವ ಸನ್ಯಾಸಿಗೆ ಇದನ್ನು ಕೇಳಿ ಆಘಾತವಾಯಿತು. “ಪೂಜ್ಯರೇ, ನೀವು ಹೀಗೆ ಹೇಳಬಹುದೇ? ನಾನು ಕೋಡಂಗಿಗಿಂತಲೂ ಕೀಳುಸ್ಥಿತಿಯಲ್ಲಿರುವುದು ಹೇಗೆ?”
ಗುರುಗಳು ವಿವರಿಸಿದರು, “ಜನ ನಗಾಡುವುದನ್ನು ನೋಡಿ ಕೋಡಂಗಿ ಸಂತೋಷಿಸುತ್ತಾನೆ. ನೀನು? ಇನ್ನೊಬ್ಬ ನಕ್ಕರೆ ನೀನು ಮನಃಕ್ಷೋಭೆಗೀಡಾಗುತ್ತಿರುವೆ. ಈಗ ನೀನೇ ಹೇಳು, ನೀನು ಕೋಡಂಗಿಗಿಂತ ಕೀಳುಸ್ಥಿತಿಯಲ್ಲಿ ಇಲ್ಲವೇ?”
ಇದನ್ನು ಕೇಳಿದ ಯುವ ಸನ್ಯಾಸಿ ತಾನೂ ನಗಲಾರಂಭಿಸಿದ. ಅವನಿಗೆ ಜ್ಞಾನೋದಯವಾಯಿತು, ಅರ್ಥಾತ್ ನಿಜವಾದ ಅರಿವು ಮೂಡಿತು.
*****
೫. ಶಿಗೆನ್‌ನ ಸ್ವಗತ
ಪ್ರತೀ ದಿನ ಶಿಗೆನ್ ತನ್ನೊಂದಿಗೆ ತಾನೇ ಇಂತು ಸಂಭಾಷಿಸುತ್ತಿದ್ದ:
“ಏ ನೈಜ ಆತ್ಮನೇ”
“ಹೇಳಿ, ಸ್ವಾಮಿ”
“ಎದ್ದೇಳು, ಎದ್ದೇಳು”
“ಆಯಿತು, ಎಚ್ಚರವಾಗಿದ್ದೇನೆ”
“ಈ ಕ್ಷಣದಿಂದ ಮುಂದಕ್ಕೆ ಇತರರು ಕೀಳಾಗಿ ನೋಡುವಂತೆ ಮಾಡಿಕೊಳ್ಳಬೇಡ, ಇತರರರು ನಿನ್ನನ್ನು ಮೂರ್ಖನನ್ನಾಗಿಸಲು ಬಿಡಬೇಡ!”
“ಇಲ್ಲ, ಅಂತಾಗಲು ನಾನು ಬಿಡುವುದಿಲ್ಲ.”
*****
ಅರಿವೇ ಗುರು ಎಂಬುದನ್ನು ಕಲಿಸಿಕೋಟ್ಟ ಒಂದು ಆಧ್ಯಾತ್ಮಿಕ ತತ್ವಚಿಂತನೆಯೇ ಈ ಝೆನ್.ಬಹಳ ಒಳ್ಳೆಯ ಬರಹ.