ಝೆನ್-ಸೂಫಿ ಕತೆಗಳು

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ


೧. ಚಹಾ ಕಪ್‌ಗಳು
ಸುಝುಕಿ ರೋಶಿಯನ್ನು ವಿದ್ಯಾರ್ಥಿಯೊಬ್ಬ ಕೇಳಿದ, “ಜಪಾನೀಯರು ಸುಲಭವಾಗಿ ಒಡೆದು ಹೋಗುವಷ್ಟು ತೆಳುವಾಗಿಯೂ ನಾಜೂಕಾಗಿಯೂ ಇರುವಂತೆ ತಮ್ಮ ಚಹಾ ಕಪ್‌ಗಳನ್ನೇಕೆ ತಯಾರಿಸುತ್ತಾರೆ?” 
ರೋಶಿ ಉತ್ತಿರಿಸಿದರು, “ಅವು ಅತೀ ನಾಜೂಕಾಗಿವೆ ಅನ್ನುವುದು ವಿಷಯವಲ್ಲ. ಅವನ್ನು ಸರಿಯಾಗಿ ಬಳಕೆ ಮಾಡುವುದು ಹೇಗೆಂಬುದು ನಿನಗೆ ತಿಳಿದಿಲ್ಲ ಅನ್ನುವುದು ವಿಷಯ. ನೀನು ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳ ಬೇಕೇ ವಿನಾ ಪರಿಸರ ನಿನ್ನೊಂದಿಗೆ ಅಲ್ಲ.”

*****

೨. ಹಂಗಾಮಿ ಅತಿಥಿ
ಖ್ಯಾತ ಆಧ್ಯಾತ್ಮಿಕ ಗುರುವೊಬ್ಬ ರಾಜನ ಅರಮನೆಯ ಮುಂದಿನ ಮಹಾದ್ವಾರದ ಬಳಿಗೆ ಬಂದ. ಆ ಬಾಗಿಲಿನ ಮೂಲಕ ಒಳಪ್ರವೇಶಿಸಿದಾಗ ಯಾವ ಕಾವಲುಗಾರನೂ ಅವನನ್ನು ತಡೆಯಲ್ಲು ಪ್ರಯತ್ನಿಸಲಿಲ್ಲ. ಅವನು ನೇರವಾಗಿ ಸಿಂಹಾಸನದ ಮೇಲೆ ರಾಜ ಕುಳಿತ ಸ್ಥಳಕ್ಕೆ ಬಂದ. ಇಂತು ಭೇಟಿ ಮಾಡಿದವ ಯಾರೆಂಬುದನ್ನು ಗುರುತಿಸಿದ ರಾಜ ಕೇಳಿದ, “ನಿಮಗೇನು ಬೇಕು?”
“ಪ್ರವಾಸಿಗಳ ಈ ವಸತಿಗೃಹದಲ್ಲಿ ಮಲಗಲು ನನಗೆ ಸ್ಥಳ ಬೇಕು,” ಉತ್ತರಿಸಿದರು ಗುರುಗಳು.
ರಾಜ ಹೇಳಿದ, “ಆದರೆ ಇದು ನನ್ನ ಅರಮನೆ, ಪ್ರವಾಸಿಗಳ ವಸತಿಗೃಹವಲ್ಲ.”
“ನಿನಗಿಂತ ಮೊದಲು ಇದು ಯಾರ ವಶದಲ್ಲಿತ್ತು ಎಂಬುದನ್ನು ಕೇಳಬಹುದೇ?”
“ನನ್ನ ತಂದೆಯವರ ವಶದಲ್ಲಿತ್ತು ಅವರು ಈಗಿಲ್ಲ.”
“ಅವರಿಗಿಂತ ಮೊದಲು ಇದು ಯಾರ ವಶದಲ್ಲಿತ್ತು?”
“ನನ್ನ ಅಜ್ಜನ ವಶದಲ್ಲಿತ್ತು.”
“ಜನ ಸ್ವಲ್ಪ ಕಾಲ ಇಲ್ಲಿದ್ದು ಮುಂದಕ್ಕೆ ಹೋಗುವ ಈ ಸ್ಥಳ ಪ್ರವಾಸಿಗರ ವಸತಿಗೃಹ ಅಲ್ಲ ಎಂಬುದಾಗಿ ನೀನು ಹೇಳಿದಂತಿತ್ತಲ್ಲ?”

***** 

೩. ನಿಜವಾದ ನಾನು
ಮನಃಕ್ಷೋಭೆಗೀಡಾಗಿದ್ದ ವ್ಯಕ್ತಿಯೊಬ್ಬ ಝೆನ್‌ ಗುರುವಿನ ಹತ್ತಿರ ಬಂದು ಹೇಳಿದ, “ದಯವಿಟ್ಟು ಗುರುಗಳೇ, ನಾನು ಕಳೆದುಹೋಗಿದ್ದೇನೆ ಅನ್ನಿಸುತ್ತಿದೆ, ನಾನು ಹತಾಶನಾಗಿದ್ದೇನೆ. ನಿಜವಾದ ನಾನು ಯಾರು ಎಂಬುದನ್ನು ದಯವಿಟ್ಟು ತೋರಿಸಿಕೊಡಿ!” ಗುರುಗಳಾದರೋ ಏನೂ ಪ್ರತಿಕ್ರಿಯಿಸದೆ ಬೇರೆಲ್ಲೊ ನೋಡಿದರು. ಆ ವ್ಯಕ್ತಿ ಪರಿಪರಿಯಾಗಿ ಕೇಳಿಕೊಂಡ, ಬೇಡಿಕೊಂಡ, ಆದರೂ ಗುರುಗಳು ಉತ್ತರಿಸಲೇ ಇಲ್ಲ. ಕೊನೆಗೆ ನಿರಾಶನಾದ ಆತ ಅಲ್ಲಿಂದ ತೆರಳಲೋಸುಗ ಹಿಂದಕ್ಕೆ ತಿರುಗಿದ. ಆ ಕ್ಷಣದಲ್ಲಿ ಗುರುಗಳು ಅವನ ಹೆಸರು ಹೇಳಿ ಕರೆದರು. “ಗುರುಗಳೇ!” ಅನ್ನುತ್ತಾ ಕೂಡಲೇ ಗುರುಗಳತ್ತ ಆತ ತಿರುಗಿದ. “ಅದು ಅಲ್ಲಿದೆ!” ಉದ್ಗರಿಸಿದರು ಗುರುಗಳು.

*****

೪. ನಿಷ್ಪ್ರಯೋಜಕ ಜೀವನ
ವಯಸ್ಸು ಆದದ್ದರಿಂದ ಕೃಷಿಕನೊಬ್ಬನಿಗೆ ಜಮೀನಿನಲ್ಲಿ ದುಡಿಯಲು ಆಗುತ್ತಿರಲಿಲ್ಲ. ಮನೆಯ ಮುಖಮಂಟಪದಲ್ಲಿ ದಿನವಿಡೀ ಸುಮ್ಮನೆ ಕುಳಿತುಕೊಂಡು ಕಾಲಕಳೆಯತ್ತಿದ್ದ. ತಂದೆ ಮುಖಮಂಟಪದಲ್ಲಿ ಕುಳಿತಿರುವುದನ್ನು ತಾನು ಜಮೀನಿನಲ್ಲಿ ದುಡಿಯುತ್ತಿರುವಾಗ ಅವನ ಮಗ ಆಗಾಗ ತಲೆಯೆತ್ತಿ ನೋಡುತ್ತಿದ್ದ. ಮಗ ಆಲೋಚಿಸಿದ, “ಅವನಿಂದ ಇನ್ನೇನೂ ಉಪಯೋಗವಿಲ್ಲ. ಅವನೇನ್ನನೂ ಮಾಡುವುದಿಲ್ಲ.” ಕೊನೆಗೊಂದು ದಿನ ಹತಾಶನಾದ ಮಗ ಮರದ ಶವಪೆಟ್ಟಿಗೆಯೊಂದನ್ನು ಮಾಡಿ, ಅದನ್ನು ಮುಖಮಂಟಪದ ಸಮೀಪಕ್ಕೆ ಎಳೆದು ತಂದು ಅಪ್ಪನಿಗೆ ಅದರೊಳಕ್ಕೆ ಹೋಗುವಂತೆ ಹೇಳಿದ. ಏನನ್ನೂ ಹೇಳದೆ ಅಪ್ಪ ಶವಪೆಟಿಗೆಯೊಳಕ್ಕೆ ಹೋದ. ಮುಚ್ಚಳ ಮುಚ್ಚಿ ಶವಪೆಟ್ಟಿಗೆಯನ್ನು ಜಮೀನಿನ ಒಂದು ಅಂಚಿನಲ್ಲಿ ಇದ್ದ ಕಡಿದಾದ ಪ್ರಪಾತದಂಚಿಗೆ ಎಳೆದುಕೊಂಡು ಹೋದ. ಪ್ರಪಾತದಂಚನ್ನು ಸಮೀಪಿಸುತ್ತಿದ್ದಾಗ ಶವಪೆಟ್ಟಿಗೆಯನ್ನು ಒಳಗಿನಿಂದ ಮಿದುವಾಗಿ ತಟ್ಟಿದ ಶಬ್ದ ಕೇಳಿಸಿತು. ಮಗ ಶವಪೆಟ್ಟಿಗೆಯ ಮುಚ್ಚಳ ತೆರೆದ. ಅದರೊಳಗೆ ಶಾಂತವಾಗಿ ಮಲಗಿದ್ದ ಅಪ್ಪ ಮಗನತ್ತ ನೋಡಿ ಹೇಳಿದ, “ನೀನು ನನ್ನನ್ನು ಪ್ರಪಾತದಂಚಿನಿಂದ ಕೆಳಕ್ಕೆ ತಳ್ಳಲಿರುವೆ ಎಂಬುದು ನನಗೆ ತಿಳಿದಿದೆ. ನೀನು ಅಂತು ಮಾಡುವ ಮೊದಲು ನಾನೊಂದು ಸಲಹೆ ನೀಡಬಹುದೇ?” “ಏನದು?” ಕೇಳಿದ ಮಗ. ಅಪ್ಪ ಹೇಳಿದ, “ಪ್ರಪಾತದಂಚಿನಿಂದ ನನ್ನನ್ನು ಕೆಳಕ್ಕೆ ತಳ್ಳ ಬಯಸಿದರೆ ಅಂತೆಯೇ ಮಾಡು. ಆದರೆ ಈ ಒಳ್ಳೆಯ ಶವಪೆಟ್ಟಿಗೆಯನ್ನು ಹಾಗೆಯೇ ಉಳಿಸಿಕೋ, ಮುಂದೊಂದು ದಿನ ನಿನ್ನ ಮಕ್ಕಳಿಗೆ ಅದನ್ನು ಉಪಯೋಗಿಸುವ ಆವಶ್ಯಕತೆ ಉಂಟಾಗಬಹುದು.”

*****

೫. ದೇವರನ್ನು ನೋಡುವ ಬಯಕೆ
ಸನ್ಯಾಸಿಯೊಬ್ಬ ನದೀ ತಟದಲ್ಲಿ ಧ್ಯಾನ ಮಾಡುತ್ತಿದ್ದ. ಯುವಕನೊಬ್ಬ ಅವನ ಧ್ಯಾನಕ್ಕೆ ಭಂಗ ಉಂಟುಮಾಡಿ ಕೇಳಿದ, “ಗುರುಗಳೇ, ನಾನು ನಿಮ್ಮ ಶಿಷ್ಯನಾಗಲಿಚ್ಛಿಸುತ್ತೇನೆ. “ಏಕೆ?” ಕೇಳಿದ ಸನ್ಯಾಸಿ. ಒಂದು ಕ್ಷಣ ಆಲೋಚಿಸಿ ಯುವಕ ಹೇಳಿದ, “ಏಕೆಂದರೆ ನನಗೆ ದೇವರನ್ನು ಹುಡುಕಿ ನೋಡಬೇಕೆಂದು ಬಯಸುತ್ತೇನೆ.”

ಗುರುಗಳು ದಢಕ್ಕನೆ ಎದ್ದವರೇ ಯುವಕನ ಕತ್ತಿನ ಪಟ್ಟಿ ಹಿಡಿದು ನದಿಗೆ ಎಳೆದೊಯ್ದು ಅವನ ತಲೆಯನ್ನು ನೀರನಲ್ಲಿ ಮುಳುಗಿಸಿ ಅದುಮಿ ಹಿಡಿದರು. ಬಿಡಿಸಿಕೊಳ್ಳಲು ಕೈಕಾಲು ಬಡಿಯುತ್ತಾ ಪರದಾಡುತ್ತಿದ್ದ ಅವನನ್ನು ಒಂದು ಒಂದು ನಿಮಿಷ ಕಾಲ ಅಂತೆಯೇ ಹಿಡಿದಿದ್ದು ತದನಂತರ ನೀರಿನಿಂದ ಹೊರಕ್ಕೆಳೆದು ಬಿಟ್ಟರು. ಯುವಕ ಏದುಸಿರು ಬಿಡುತ್ತಾ ಕೆಮ್ಮುತ್ತಾ ತುಸು ನೀರನ್ನು ಉಗುಳಿದನು. ಅವನು ಶಾಂತನಾದ ನಂತರ ಗುರುಗಳು ಮಾತನಾಡಿದರು, “ನಿನ್ನ ತಲೆ ನೀರಿನಲ್ಲಿ ಮುಳುಗಿದ್ದಾಗ ನೀನು ಬಹುವಾಗಿ ಬಯಸುತ್ತಿದ್ದದ್ದು ಏನನ್ನು ಎಂಬುದನ್ನು ಹೇಳು.” ಯುವಕ ಉತ್ತರಿಸಿದ, “ವಾಯು.” ಗುರುಗಳು ಪ್ರತಿಕ್ರಿಯಿಸಿದರು, “ಬಹಳ ಒಳ್ಳೆಯದು. ಈಗ ಮನೆಗೆ ಹೋಗು. ವಾಯುವನ್ನು ಮಾತ್ರ ನೀನು ಬಯಸುತ್ತಿದ್ದಷ್ಟೇ ತೀವ್ರತೆಯಿಂದ ದೇವರನ್ನು ಬಯಸಲಾರಂಭಿಸಿದಾಗ ನನ್ನ ಹತ್ತಿರಕ್ಕೆ ಮರಳಿ ಬಾ.”

*****

 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *