೧. ಆತ್ಮಸಂಯಮ (Self-control)
ಇಡೀ ಝೆನ್ ದೇವಾಲಯ ಅಲುಗಾಡುವಷ್ಟು ತೀವ್ರತೆಯ ಭೂಕಂಪ ಒಂದು ದಿನ ಆಯಿತು. ಅದರ ಕೆಲವು ಭಾಗಗಳು ಕುಸಿದೂ ಬಿದ್ದವು. ಅನೇಕ ಸನ್ಯಾಸಿಗಳು ಭಯಗ್ರಸ್ತರಾಗಿದ್ದರು. ಭೂಕಂಪನ ನಿಂತಾಗ ಗುರುಗಳು ಹೇಳಿದರು, “ಅಪಾಯ ಕಾಲದಲ್ಲಿ ಝೆನ್ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡುವ ಅವಕಾಶ ನಿಮಗೆ ಈಗ ದೊರಕಿತು. ಆತುರದ ವ್ಯವಹಾರಕ್ಕೆ ಎಡೆ ಕೊಡುವ ತೀವ್ರ ಭಯ ನನ್ನನ್ನು ಬಾಧಿಸಲಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ದೇವಾಲಯದ ಅತ್ಯಂತ ಗಟ್ಟಿಮುಟ್ಟಾದ ಭಾಗವಾಗಿರುವ ಅಡುಗೆಮನೆಗೆ ನಿಮ್ಮೆಲ್ಲರನ್ನು ನಾನು ಕರೆದೊಯ್ದೆ. ಅದು ಒಳ್ಳೆಯ ತೀರ್ಮಾನವೇ ಆಗಿತ್ತು. ಎಂದೇ, ಯಾವ ಗಾಯವೂ ಆಗದೆ ನೀವೆಲ್ಲರೂ ಬದುಕಿ ಉಳಿದಿದ್ದೀರಿ. ನನ್ನ ಆತ್ಮಸಂಯಮಕ್ಕೆ ಮತ್ತು ಶಾಂತ ಮನಸ್ಥಿತಿಗೆ ಧಕ್ಕೆಯಗದೇ ಇದ್ದರೂ, ತುಸು ಉದ್ವಿಗ್ನತೆ ಕಾಡಿದ್ದು ನಿಜ – ನಾನು ಒಂದು ದೊಡ್ಡ ಲೋಟದಲ್ಲಿ ನೀರನ್ನು ಕುಡಿದದ್ದನ್ನು ನೋಡಿ ಇದನ್ನು ನೀವು ಊಹಿಸಿರುತ್ತೀರಿ. ಏಕೆಂದರೆ ಸಾಮಾನ್ಯ ಪರಿಸ್ಥಿತಿಗಳಲ್ಲಿ ನಾನು ಅಂತು ಮಾಡುವುದಿಲ್ಲ ಎಂಬುದು ನಿಮಗೆ ಗೊತ್ತಿದೆ.”
ಸನ್ಯಾಸಿಗಳ ಪೈಕಿ ಒಬ್ಬಾತ ಏನೂ ಮಾತನಾಡದೇ ಇದ್ದರೂ ಮುಗುಳುನಗೆ ನಕ್ಕ.
“ನೀನೇಕೆ ನಗುತ್ತಿರುವೆ?” ಕೇಳಿದರು ಗುರುಗಳು.
ಸನ್ಯಾಸಿ ಉತ್ತರಿಸಿದ, “ ನೀವು ಕುಡಿದದ್ದು ನೀರನ್ನಲ್ಲ, ದೊಡ್ಡ ಲೋಟ ಭರ್ತಿ ಸೋಯಾ ಅವರೆಯ ಸಾರನ್ನು.”
*****
೨. ಜೇಡ
ಧ್ಯಾನ ಮಾಡಲು ಕಲಿಯುತ್ತಿದ್ದ ಟಿಬೆಟ್ಟಿನ ವಿದ್ಯಾರ್ಥಿಯೊಬ್ಬನ ಕತೆ ಇದು. ತನ್ನ ಕೊಠಡಿಯಲ್ಲಿ ಧ್ಯಾನ ಮಾಡುತ್ತಿರುವಾಗ ತನ್ನ ಮುಂದೆ ಜೇಡವೊಂದು ಮೇಲಿನಿಂದ ಇಳಿಯುತ್ತಿರುವುದನ್ನು ನೋಡಿರುವುದಾಗಿ ಆತ ನಂಬಿದ್ದ. ಪ್ರತೀ ದಿನ ದಿಗಿಲು ಹುಟ್ಟಿಸುವ ರೀತಿಯಲ್ಲಿ ಅದು ಮರಳಿ ಬರುತ್ತಿತ್ತು. ಅಷ್ಟೇ ಅಲ್ಲ, ಪ್ರತೀ ಸಲ ಬಂದಾಗ ಹಿಂದಿನ ಸಲಕ್ಕಿಂತ ದೊಡ್ಡದಾಗಿರುತ್ತಿತ್ತು. ಈ ವಿದ್ಯಮಾನದಿಂದ ಹೆದರಿದ ಅವನು ಗುರುವಿನ ಹತ್ತಿರ ಹೋಗಿ ತನ್ನ ಸಂಕಟವನ್ನು ಹೇಳಿಕೊಂಡ. ಧ್ಯಾನ ಮಾಡುವಾಗ ಚಾಕು ಇಟ್ಟುಕೊಂಡಿದ್ದು ಜೇಡ ಬಂದಾಗ ಅದನ್ನು ಕೊಲ್ಲುವ ಯೋಜನೆ ಹಾಕಿಕೊಂಡಿರುವುದಾಗಿಯೂ ತಿಳಿಸಿದ. ಈ ಯೋಜನೆಯನ್ನು ಕಾರ್ಯಗತಗೊಳಿಸದೇ ಇರುವಂತೆ ಸಲಹೆ ನೀಡಿದ ಗುರುಗಳು, ಅದಕ್ಕೆ ಬದಲಾಗಿ ಒಂದು ಸೀಮೆಸುಣ್ಣದ ತುಂಡೊಂದನ್ನು ಇಟ್ಟುಕೊಂಡಿದ್ದು ಜೇಡ ಬಂದೊಡನೆ ಅದರ ಉದರ ಬಾಗದ ಮೇಲೆ “×” ಗುರುತು ಮಾಡುವಂತೆಯೂ ತದನಂತರ ವರದಿ ಒಪ್ಪಿಸುವಂತೆಯೂ ಸೂಚಿಸಿದರು.
ವಿದ್ಯಾರ್ಥಿ ಹಿಂದಿರುಗಿ ತನ್ನ ಕೊಠಡಿಗೆ ಹೋಗಿ ಧ್ಯಾನ ಮಾಡಲು ಆರಂಭಿಸಿದನು. ಜೇಡ ಬಂದೊಡನೆ ಮನಸ್ಸಿನಲ್ಲಿ ಮೂಡಿದ ಅದನ್ನು ಕೊಲ್ಲುವ ಬಯಕೆಯನ್ನು ದಮನ ಮಾಡಿ ಗುರುಗಳು ಹೇಳಿದಂತೆ ಮಾಡಿದ. ತದನಂತರ ನಡೆದದ್ದನ್ನು ಗುರುಗಳಿಗೆ ವರದಿ ಮಡಿದ. ಅಂಗಿಯನ್ನು ಮೇಲೆತ್ತಿ ತನ್ನ ಉದರವನ್ನು ನೋಡುವಂತೆ ಗುರುಗಳು ಸೂಚಿಸಿದರು. ಅಲ್ಲಿತ್ತು “×”ಗುರುತು.
*****
೩. ಗುರುವನ್ನು ಚಕಿತಗೊಳಿಸುವುದು
ಆಶ್ರಮವೊಂದರಲ್ಲಿನ ವಿದ್ಯಾರ್ಥಿಗಳು ಹಿರಿಯ ಸನ್ಯಾಸಿಯನ್ನು ಭಯಭಕ್ತಿಯಿಂದ ಗೌರವಿಸುತ್ತಿದ್ದರು. ಅವರು ಇಂತಿದ್ದದ್ದು ಅವನು ಕಠಿನ ಶಿಸ್ತಿನ ಮನುಷ್ಯ ಎಂಬುದಕ್ಕಾಗಿ ಅಲ್ಲ, ಯಾವುದೂ ಅವನ ಮನಸ್ಸನ್ನು ಅಸ್ತವ್ಯಸ್ತಗೊಳಿಸುವಂತೆ ಅಥವ ಕ್ಷೋಭೆಗೊಳಿಸುವಂತೆ ತೋರುತ್ತಿರಲಿಲ್ಲ ಎಂಬುದಕ್ಕಾಗಿ. ಈ ಕಾರಣದಿಂದಾಗಿ ಅವರಿಗೆ ಆತ ತುಸು ಅಲೌಕಿಕನಂತೆ ಕಾಣಿಸುತ್ತಿದ್ದ ಮತ್ತು ಕೆಲವೊಮ್ಮೆ ಅವನನ್ನು ಕಂಡಾಗ ಭಯವೂ ಹುಟ್ಟುತ್ತಿತ್ತು.
ಒಂದು ದಿನ ಅವನನ್ನು ಪರೀಕ್ಷಿಸಲು ಅವರು ತೀರ್ಮಾನಿಸಿದರು. ಹಜಾರದ ಹಾದಿಯೊಂದರ ಕತ್ತಲಾಗಿದ್ದ ಮೂಲೆಯಲ್ಲಿ ಅವರ ಪೈಕಿ ಕೆಲವರು ಅಡಗಿ ಕುಳಿತು ಹಿರಿಯ ಸನ್ಯಾಸಿ ಅಲ್ಲಿಗಾಗಿ ನಡೆದು ಹೋಗುವುದನ್ನು ಕಾಯುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಒಂದು ಕಪ್ ಚಹಾ ಸಮೇತ ಹಿರಿಯ ಸನ್ಯಾಸಿ ಬರುತ್ತಿದ್ದದ್ದು ಗೋಚರಿಸಿತು. ಅವರು ಅಡಗಿ ಕುಳಿತಿದ್ದ ಮೂಲೆಯ ಸಮೀಪಕ್ಕೆ ಅವನು ಬಂದಾಗ ಅವರೆಲ್ಲರೂ ಒಟ್ಟಾಗಿ ಎಷ್ಟು ಸಾಧ್ಯವೋ ಅಷ್ಟೂ ಜೋರಾಗಿ ವಿಕಾರವಾಗಿ ಅರಚುತ್ತಾ ಮೂಲೆಯಿಂದ ಹೊರಗೋಡಿ ಬಂದರು. ಆಗ ಆ ಸನ್ಯಾಸಿಯಾದರೋ ಕಿಂಚಿತ್ತೂ ಪ್ರತಿಕ್ರಿಯೆ ತೋರಲಿಲ್ಲ. ಹಾಜಾರದ ತುದಿಯಲ್ಲಿದ್ದ ಪುಟ್ಟ ಮೇಜಿನ ಹತ್ತಿರಕ್ಕೆ ಶಾಂತವಾಗಿ ಹೋಗಿ ಕಪ್ಪನ್ನು ಮೆಲ್ಲಗೆ ಮೇಜಿನ ಮೇಲೆ ಇಟ್ಟನು. ತದನಂತರ ಗೋಡೆಗೆ ಒರಗಿ ನಿಂತು ಗಟ್ಟಿಯಾಗಿ “ಓ………” ಎಂಬುದಾಗಿ ಕಿರುಚಿ ಘಟನೆಯಿಂದ ಆದ ಆಘಾತವನ್ನು ಪ್ರಕಟಿಸಿದ!
*****
೪. ಕಲ್ಲು ಕುಟಿಗ
ತನ್ನ ಕುರಿತು, ಜೀವನದಲ್ಲಿ ತನ್ನ ಸ್ಥಿತಿಗತಿಯ ಕುರಿತು ಅತೃಪ್ತನಾಗಿದ್ದ ಒಬ್ಬ ಕಲ್ಲು ಕುಟಿಗನಿದ್ದ. ಒಂದು ದಿನ ಅವನು ಒಬ್ಬ ಶ್ರೀಮಂತ ವ್ಯಾಪರಿಯ ಮನೆಯ ಮುಂದಿನಿಂದಾಗಿ ಎಲ್ಲಿಗೋ ಹೋಗುತ್ತಿದ್ದ. ಮನೆಯ ಬಾಗಿಲು ದೊಡ್ಡದಾಗಿ ತೆರೆದಿದ್ದರಿಂದ ಮನೆಯ ಒಳಗೆ ಅನೇಕ ಗಣ್ಯರು ಇರುವುದನ್ನೂ ಸುಂದರ ವಸ್ತುಗಳು ಇರುವುದನ್ನೂ ಅವನು ನೋಡಿದ. “ಆ ವ್ಯಾಪಾರಿ ಅದೆಷ್ಟು ಪ್ರಭಾವಿಯಾಗಿರಬೇಕು” ಎಂಬುದಾಗಿ ಆಲೋಚಿಸಿದ ಕಲ್ಲು ಕುಟಿಗ. ವ್ಯಾಪರಿಯ ಸ್ಥಿತಿಗತಿ ನೋಡಿ ಕರುಬಿದ ಕಲ್ಲ ಕುಟಿಗ ತಾನೂ ಆ ವ್ಯಾಪರಿಯಂತೆಯೇ ಆಗಬೇಕೆಂದು ಆಶಿಸಿದ.
ಅವನಿಗೇ ಆಶ್ಚರ್ಯವಾಗುವ ರೀತಿಯಲ್ಲಿ ಇದ್ದಕ್ಕಿದ್ದಂತೆಯೇ ಕಲ್ಪನೆಗೂ ಮೀರಿದ ಸಿರಿಸಂಪತ್ತು ಮತ್ತು ಪ್ರಭಾವ ಉಳ್ಳ ವ್ಯಾಪಾರಿ ಅವನಾದ. ಆದರೆ, ಅವನಷ್ಟು ಸಿರಿವಂತರಲ್ಲದೇ ಇದ್ದವರು ಅವನನ್ನು ನೋಡಿ ಕರುಬುತ್ತಿದ್ದರು ಮತ್ತು ದ್ವೇಷಿಸುತ್ತಿದ್ದರು. ಅಷ್ಟರಲ್ಲಿಯೇ ಜಾಗಟೆ ಬಾರಿಸುತ್ತಿದ್ದ ಸೈನಿಕರ ಬೆಂಗಾವಲಿನಲ್ಲಿ ಅನುಚರರೊಂದಿಗೆ ಇದ್ದ ಉನ್ನತ ಅಧಿಕಾರಿಯೊಬ್ಬನನ್ನು ಪಲ್ಲಕ್ಕಿ ಕುರ್ಚಿಯಲ್ಲಿ ಒಯ್ಯುತ್ತಿದ್ದದ್ದನ್ನು ನೋಡಿದ. ಎಲ್ಲರೂ, ಅವರು ಎಷ್ಟೇ ಶ್ರೀಮಂತರಾಗಿದ್ದಿರಲಿ, ಆ ಮೆರವಣಿಗೆಯ ಮುಂದೆ ತುಂಬ ಬಾಗಿ ನಮಸ್ಕರಿಸಲೇ ಬೇಕಿತ್ತು. ಆಗ ಅವನು ಅಲೋಚಿಸಿದ, “ಅವನೆಷ್ಟು ಪ್ರಭಾವೀ ಅಧಿಕಾರಿಯಾಗಿರಬೇಕು? ನಾನೂ ಅವನಂತೆಯೇ ಒಬ್ಬ ಪ್ರಭಾವೀ ಅಧಿಕಾರಿಯಾಗಲು ಇಷ್ಟ ಪಡುತ್ತೇನೆ.”
ತಕ್ಷಣ ಆತ ಉನ್ನತಾಧಿಕಾರಿಯಾದ. ಕಸೂತಿ ಕೆಲಸ ಮಾಡಿದ ಮೆತ್ತೆ ಇದ್ದ ಪಲ್ಲಕ್ಕಿ ಕುರ್ಚಿಯಲ್ಲಿ ಎಲ್ಲೆಡಗೂ ಆತನನ್ನು ಒಯ್ಯಲಾಗುತ್ತಿತ್ತು. ಅವನ ಸುತ್ತಲಿನ ಜನ ಅವನಿಗೆ ಹೆದರುತ್ತಿದ್ದರು ಮತ್ತು ಅವನನ್ನು ದ್ವೇಷಿಸುತ್ತಿದ್ದರು. ಸುಡುಬಿಸಿಲಿದ್ದ ಬೇಸಗೆಯ ಒಂದು ದಿನ, ಬೆವರಿನಿಂದಾಗಿ ಅಂಟಂಟಾಗಿದ್ದ ಮೈನಿಂದಾಗಿ ಪಲ್ಲಕ್ಕಿ ಕುರ್ಚಿಯಲ್ಲಿ ಸುಖವಿಲ್ಲದಂತಾಗಿತ್ತು. ತಲೆಯೆತ್ತಿ ಸೂರ್ಯನತ್ತ ನೋಡಿದ. ಅವನ ಇರುವಿಕೆಯಿಂದ ಕಿಂಚಿತ್ತೂ ಪ್ರಭಾವಿತವಾಗದ ಸೂರ್ಯ ಹೆಮ್ಮೆಯಿಂದ ಹೊಳೆಯುತ್ತಿರುವಂತೆ ಭಾಸವಾಯಿತು.
ಆಗ ಅವನು ಅಲೋಚಿಸಿದ, “ಸೂರ್ಯನೆಷ್ಟು ಪ್ರಭಾವಶಾಲಿಯಾಗಿರ ಬೇಕು? ನಾನೇ ಸೂರ್ಯನಾಗಿರಲು ಇಷ್ಟ ಪಡುತ್ತೇನೆ.”
ತಕ್ಷಣ ಅವನು ಸೂರ್ಯನಾದ. ಉಗ್ರ ತೇಜಸ್ಸಿನಿಂದ ಹೊಳೆದು ಪ್ರತಿಯೊಬ್ಬರನ್ನೂ ಸಂಕಟಕ್ಕೀಡು ಮಾಡಿದ, ಹೊಲಗದ್ದೆಗಳನ್ನು ಸುಟ್ಟು ಹಾಕಿದ. ತತ್ಪರಿಣಾಮವಾಗಿ ಕೃಷಿಕರೂ ಕಾರ್ಮಿಕರೂ ಅವನನ್ನು ಶಪಿಸಿದರು. ಆ ವೇಳೆಗೆ ಬೃಹದ್ಗಾತ್ರದ ಕಾರ್ಮುಗಿಲೊಂದು ಅವನಿಗೂ ಭೂಮಿಗೂ ನಡುವೆ ಬಂದಿತು. ತತ್ಪರಿಣಾಮವಾಗಿ ಅವನ ಬೆಳಕು ಭೂಮಿಯನ್ನು ತಲುಪಲೇ ಇಲ್ಲ. ಆಗ ಅವನು ಅಲೋಚಿಸಿದ, “ಕಾರ್ಮುಗಿಲೆಷ್ಟು ಪ್ರಭಾವಶಾಲಿಯಾಗಿರಬೇಕು? ನಾನೇ ಕಾರ್ಮುಗಿಲಾಗಿರಲು ಇಷ್ಟ ಪಡುತ್ತೇನೆ.”
ತಕ್ಷಣ ಅವನು ಕಾರ್ಮುಗಿಲಾದ. ಅಪರಿಮಿತ ಮಳೆ ಸುರಿಸಿ ಹೊಲಗದ್ದೆಗಳೂ ಹಳ್ಳಗಳೂ ಪ್ರವಾಹದಲ್ಲಿ ಮುಳುಗುವಂತೆ ಮಾಡಿದ. ತತ್ಪರಿಣಾಮವಾಗಿ ಎಲ್ಲರೂ ಹಿಡಿ ಶಾಪ ಹಾಕಿದರು. ಆದರೆ ಅಷ್ಟರಲ್ಲೇ ಯಾವುದೋ ಅವನ ಮೇಲೆ ಅತೀ ಹೆಚ್ಚು ಬಲ ಪ್ರಯೋಗಿಸಿ ದೂರಕ್ಕೆ ತಳ್ಳಿತು. ಹಾಗೆ ಮಾಡಿದ್ದು ಗಾಳಿ ಎಂಬುದು ಅವನ ಅರಿವಿಗೆ ಬಂದಿತು. ಆಗ ಅವನು ಅಲೋಚಿಸಿದ, “ಗಾಳಿ ಎಷ್ಟು ಬಲಶಾಲಿಯಾಗಿರಬೇಕು? ನಾನೇ ಗಾಳಿಯಾಗಿರಲು ಇಷ್ಟ ಪಡುತ್ತೇನೆ.”
ತಕ್ಷಣ ಅವನು ಗಾಳಿಯಾದ. ಜೋರಾಗಿ ಬೀಸಿ ಮನೆಗಳ ಮಾಡುಗಳ ಹೆಂಚುಗಳನ್ನು ಹಾರಿಸಿದ, ಮರಗಳನ್ನು ಬೇರು ಸಹಿತ ಉರುಳಿಸಿದ. ಕೆಳಗಿರುವ ಎಲ್ಲರೂ ಅವನಿಗೆ ಹೆದರುತ್ತಿದ್ದರು, ದ್ವೇಷಿಸುತ್ತಲೂ ಇದ್ದರು. ಅನತಿ ಕಾಲದಲ್ಲಿ ಎಷ್ಟು ಜೋರಾಗಿ ಬೀಸಿದರೂ ಒಂದಿನಿತೂ ಅಲುಗಾಡದ ಬೃಹತ್ ಬಂಡೆಯೊಂದು ಎದುರಾಯಿತು. ಆಗ ಅವನು ಅಲೋಚಿಸಿದ, “ಬಂಡೆ ಎಷ್ಟು ಬಲಶಾಲಿಯಾಗಿರಬೇಕು? ನಾನೇ ಬಂಡೆಯಾಗಿರಲು ಇಷ್ಟ ಪಡುತ್ತೇನೆ.”
ತಕ್ಷಣ ಅವನು ಭೂಮಿಯ ಮೇಲಿರುವ ಯಾವುದೇ ವಸ್ತುವಿಗಿಂತ ಹೆಚ್ಚು ಗಟ್ಟಿಯಾದ ಬಂಡೆಯಾದ. ಅವನು ಅಲ್ಲಿ ಬಂಡೆಯಾಗಿ ನಿಂತಿದ್ದಾಗ ತನ್ನ ಗಟ್ಟಿಯಾದ ಮೈಮೇಲೆ ಉಳಿ ಇಟ್ಟು ಯಾರೋ ಸುತ್ತಿಗೆಯಿಂದ ಹೊಡೆಯುತ್ತಿರುವಂತೆಯೂ ತನ್ನ ಆಕಾರವೇ ಬದಲಾಗುತ್ತಿರುವಂತೆಯೂ ಭಾಸವಾಯಿತು. ಅವನು ಆಲೋಚಿಸಿದ, “ಬಂಡೆಯಾಗಿರುವ ನನಗಿಂತ ಬಲಶಾಲಿಯಾದದ್ದು ಏನಿರಬಹುದು?”
ಕೆಳಗೆ ನೋಡಿದಾಗ ಗೋಚರಿಸಿದ್ದು ‘ಒಬ್ಬ ಕಲ್ಲು ಕುಟಿಗ’.
*****
೫. . ಉತ್ತರಾಧಿಕಾರಿ
ವೃದ್ಧ ಝೆನ್ ಗುರುವಿನ ಆರೋಗ್ಯ ಹದಗೆಡುತ್ತಿತ್ತು. ಸಾವು ಸಮೀಪಿಸುತ್ತಿರುವುದನ್ನು ತಿಳಿದ ಆತ ಆಶ್ರಮದ ಮುಂದಿನ ಮುಖ್ಯಸ್ಥನ ನೇಮಕಾತಿ ಮಾಡಲೋಸುಗ ತನ್ನ ನಿಲುವಂಗಿ ಮತ್ತು ಬಟ್ಟಲನ್ನು ಹಸ್ತಾಂತರಿಸುವುದಾಗಿ ಪ್ರಕಟಿಸಿದ. ಒಂದು ಸ್ಪರ್ಧೆಯ ಫಲಿತಾಂಶವನ್ನು ಆಧರಿಸಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದಾಗಿಯೂ ತಿಳಿಸಿದ. ಆ ಹುದ್ದೆಯನ್ನು ಬಯಸುವವರೆಲ್ಲರೂ ಪದ್ಯ ಬರೆಯುವುದರ ಮುಖೇನ ತಮ್ಮ ಆಧ್ಯಾತ್ಮಿಕ ವಿವೇಕವನ್ನು ಪ್ರದರ್ಶಿಸಬೇಕಾಗಿತ್ತು. ಉತ್ತರಾಧಿಕಾರಿಯಾಗುವುದು ಖಚಿತ ಎಂಬುದಾಗಿ ಎಲ್ಲರೂ ನಂಬಿದ್ದ ಸಂನ್ಯಾಸಿಗಳ ತಂಡದ ಮುಖ್ಯಸ್ಥ ಉತ್ತಮ ಒಳನೋಟದಿಂದ ಕೂಡಿದ್ದ ಸುರಚಿತ ಪದ್ಯವನ್ನು ಒಪ್ಪಿಸಿದ. ತಮ್ಮ ನಾಯಕನಾಗಿ ಅವನ ಆಯ್ಕೆಯ ನಿರೀಕ್ಷೆಯಲ್ಲಿ ಇದ್ದರು ಎಲ್ಲ ಸನ್ಯಾಸಿಗಳು. ಆದಾಗ್ಯೂ, ಮರುದಿನ ಬೆಳಗ್ಗೆ ಮುಖ್ಯ ಹಜಾರದ ಹಾದಿಯ ಗೋಡೆಯ ಮೇಲೆ, ಬಹುಶಃ ಮಧ್ಯರಾತ್ರಿಯ ವೇಳೆ ಬರೆದಿರಬಹುದಾಗಿದ್ದ ಪದ್ಯವೊಂದು ಗೋಚರಿಸಿತು. ತನ್ನ ಲಾಲಿತ್ಯ ಮತ್ತು ಜ್ಞಾನದ ಗಹನತೆಯಿಂದಾಗಿ ಅದು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತು. ಅದನ್ನು ಬರೆದವರು ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ಆ ವ್ಯಕ್ತಿ ಯಾರೆಂಬುದನ್ನು ಪತ್ತೆಹಚ್ಚಲೇ ಬೇಕೆಂದು ಸಂಕಲ್ಪಿಸಿದ ವೃದ್ಧ ಗುರು ಎಲ್ಲ ಸನ್ಯಾಸಿಗಳನ್ನು ಪ್ರಶ್ನಿಸಲಾರಂಭಿಸಿದ. ಅವನೇ ಅಚ್ಚರಿ ಪಡುವ ರೀತಿಯಲ್ಲಿ, ಭೋಜನಕ್ಕೆ ಬೇಕಾದ ಅಕ್ಕಿಯನ್ನು ಭತ್ತ ಕುಟ್ಟಿ ಸಿದ್ಧಪಡಿಸುತ್ತಿದ್ದ ಅಡುಗೆಮನೆಯ ನಿರಾಡಂಬರದ ಸಹಾಯಕನತ್ತ ಒಯ್ದಿತು ಅವನ ಅನ್ವೇಷಣೆ. ಈ ಸುದ್ದಿ ಕೇಳಿ ಹೊಟ್ಟೆ ಉರಿ ತಾಳಲಾರದ ಸಂನ್ಯಾಸಿಗಳ ತಂಡದ ಮುಖ್ಯಸ್ಥ ಮತ್ತು ಅವನ ಸಹವರ್ತಿಗಳು ತಮ್ಮ ಎದುರಾಳಿಯನ್ನು ಕೊಲ್ಲಲು ಸಂಚು ರೂಪಿಸಿದರು. ವೃದ್ಧ ಗುರು ಗೌಪ್ಯವಾಗಿ ತನ್ನ ನಿಲುವಂಗಿ ಮತ್ತು ಬಟ್ಟಲನ್ನು ಆ ಸಹಾಯಕನಿಗೆ ಹಸ್ತಾಂತರಿಸಿದ ಮತ್ತು ಅವನ್ನು ಸ್ವೀಕರಿಸಿದ ಆತ ಆಶ್ರಮದಿಂದ ತಪ್ಪಿಸಿಕೊಂಡು ಓಡಿಹೋದ. ತರುವಾಯ ಆತ ಸುವಿಖ್ಯಾತ ಝೆನ್ ಗುರುವಾದ.
*****
ಚೆನ್ನಾಗಿದೆ ಝೆನ್ ಕತೆಗಳು ಗೋವಿಂದರಾವ್ ಅವ್ರೆ. ಜೇಡದ ಕತೆ ಬಹಳ ಇಷ್ಟ ಆಯ್ತು. ಕಲ್ಲುಕುಟ್ಟಿಗನ ಕತೆಯನ್ನು ಬಾಲ್ಯದಲ್ಲಿ ನಾನೂ ಓದಿದ್ದೆ. ಆ ಕತೆ ಝೆನ್ ಕತೆಗಳಲ್ಲೂ ಇದೆ ಅಂದ್ರೆ ಭಾರತ ಮತ್ತು ಝೆನ್ ಪಂಥ ಹೆಚ್ಚಿರುವ ಜಪಾನಿನ ಮಧ್ಯೆ ಆ ಕಾಲದಲ್ಲೇ ಇದ್ದಿರಬಹುದಾದ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯ ನೆನೆದು ಅಚ್ಚರಿಯಾಗುತ್ತದೆ. ಪಂಚತಂತ್ರ ಮತ್ತಿತರ ಕತೆಗಳಲ್ಲಿನ ಸತ್ವಗಳು ಬಾಯಿಂದ ಬಾಯಿಗೆ ಹರಡುವಾಗ ಬೇರೆ ಬೇರೆ ರೂಪ ಪಡೆದಿರುವ ಸಾಧ್ಯತೆಯನ್ನೂ ನಿರಾಕರಿಸುವಂತಿಲ್ಲ.