ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಇನ್ನೇನೂ ಪ್ರಶ್ನೆಗಳಿಲ್ಲ.

ಸಾಮಾಜಿಕ ಸಮಾರಂಭವೊಂದರಲ್ಲಿ ಝೆನ್‌ ಗುರುವನ್ನು ಸಂಧಿಸಿದ ಮನೋವೈದ್ಯನೊಬ್ಬ ತನ್ನನ್ನು ಕಾಡುತ್ತಿದ್ದ ಪ್ರಶ್ನೆಯೊಂದನ್ನು ಕೇಳಲು ತೀರ್ಮಾನಿಸಿದ. “ನಿಜವಾಗಿ ನೀವು ಜನರಿಗೆ ಹೇಗೆ ಸಹಾಯ ಮಾಡುತ್ತೀರಿ?” ವಿಚಾರಿಸಿದ ಮನೋವೈದ್ಯ.

“ಇನ್ನೇನೂ ಪ್ರಶ್ನೆಗಳನ್ನು ಕೇಳಲಾಗದ ಸ್ಥಿತಿಗೆ ಅವರನ್ನು ಕೊಂಡೊಯ್ಯುತ್ತೇನೆ,” ಉತ್ತರಿಸಿದರು ಝೆನ್‌ ಗುರುಗಳು.

*****

೨. ಸ್ವರ್ಗ.

ಮರುಭೂಮಿಯಲ್ಲಿ ಇಬ್ಬರು ದಾರಿ ತಪ್ಪಿ ಅಸಹಾಯಕರಗಿದ್ದಾರೆ. ಹಸಿವು ಮತ್ತು ಬಾಯಾರಿಕೆಯಿಂದ ಶಯುವಂತಾಗಿದ್ದಾರೆ. ಕೊನೆಗೆ ಅವರು ಅತೀ ಎತ್ತರವಾಗಿದ್ದ ಗೋಡೆಯೊಂದರ ಸಮೀಪಕ್ಕೆ ಬರುತ್ತಾರೆ. ಗೋಡೆಯ ಆಚೆ ಬದಿಯಲ್ಲಿ ಜಲಪಾತದ ಸದ್ದು ಮತ್ತು ಪಕ್ಷಿಗಳ ಇಂಚರ ಕೇಳುತ್ತಿದೆ. ಮೇಲೆ ಹುಲುಸಾಗಿ ಬೆಳೆದ ಮರದ ಕೊಂಬೆಗಳು ಕಾಣಿಸುತ್ತಿವೆ. ಅದರ ಹಣ್ಣುಗಳು ರಸವತ್ತಾಗಿರುವಂತೆ ಕಾಣುತ್ತಿವೆ.

ಅವರ ಪೈಕಿ ಒಬ್ಬ ಕಷ್ಟಪಟ್ಟು ಹೇಗೋ ಗೋಡೆ ಹತ್ತಿ ಆಚೆಕಡೆಗೆ ಇಳಿದು ಕಾಣದಾಗುತ್ತಾನೆ. ಇನ್ನೊಬ್ಬ ಅಂತೆಯೇ ಮಾಡುವುದಕ್ಕೆ ಬದಲಾಗಿ ಕಳೆದು ಹೋದ ಇತರ ಪ್ರಯಾಣಿಕರು ಓಯಸಿಸ್‌ನತ್ತ ಬರಲು ಸಹಾಯ ಮಾಡಲೋಸುಗ ಮರುಭೂಮಿಗೆ ಹಿಂದಿರುಗುತ್ತಾನೆ.

*****

೩. ಅಭ್ಯಾಸದಿಂದ ಪರಿಪೂರ್ಣತೆ.

ಅಭಿನಯಾತ್ಮಕ ಹಾಡುಕತೆ ಗಾಯಕನೊಬ್ಬ ಕಠಿನ ಶಿಸ್ತುಪ್ರಿಯನಾಗಿದ್ದ ಶಿಕ್ಷಕನ ಹತ್ತಿರ ತನ್ನ ಕಲೆ ಅಧ್ಯಯಿಸುತ್ತಿದ್ದ. ಆ ಶಿಕ್ಷಕನಾದರೋ ತಿಂಗಳುಗಟ್ಟಳೆ ಕಾಲ ಪ್ರತೀ ದಿನ ಒಂದು ಹಾಡಿನ ಒಂದು ಚರಣವನ್ನು ಮಾತ್ರ ಅಭ್ಯಾಸ ಮಾಡಿಸುತ್ತಿದ್ದನೇ ವಿನಾ ಮುಂದುವರಿಯಲು ಬಿಡಲಿಲ್ಲ. ಕೊನೆಗೆ ಹತಾಶೆ, ಆಶಾಭಂಗಗಳಿಂದ ಚಿತ್ತಸ್ಥೈರ್ಯ ಕಳೆದುಕೊಂಡ ಆ ಯುವ ವಿದ್ಯಾರ್ಥಿ ಬೇರೆ ಯಾವುದಾದರೂ ವೃತ್ತಿಯನ್ನು ಅವಲಂಬಿಸಲು ತೀರ್ಮಾನಿಸಿ ಅಲ್ಲಿಂದ ಓಡಿಹೋದ. ಒಂದು ರಾತ್ರಿ ವಸತಿಗೃಹವೊಂದರಲ್ಲಿ ತಂಗಿದಾಗ ಆಕಸ್ಮಿಕವಾಗಿ ಬಾಯಿಪಾಠ ಸ್ಪರ್ಧೆಯೊಂದನ್ನು ನೋಡುವ ಅವಕಾಶ ಸಿಕ್ಕಿತು. ಕಳೆದುಕೊಳ್ಳುವಂಥದ್ದು ಏನೂ ಇರಲಿಲ್ಲವಾದ್ದರಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ. ತನಗೆ ಬಲು ಚೆನ್ನಾಗಿ ತಿಳಿದಿದ್ದ ಒಂದೇ ಒಂದು ಚರಣವನ್ನು ಹಾಡಿದ. ಅವನ ಪ್ರದರ್ಶನ ಮುಗಿದ ಕೂಡಲೆ ಆ ಸ್ಪರ್ಧೆಯ ಪ್ರಾಯೋಜಕ ಅದನ್ನು ಬಹುವಾಗಿ ಹೊಗಳಿದ. ಮುಜುಗರಕ್ಕೀಡಾದ ಯುವಕ ತಾನೊಬ್ಬ ಆರಂಭಿಕ ಗಾಯಕ ಎಂಬುದಾಗಿ ಹೇಳಿದರೂ ಅದನ್ನು ಒಪ್ಪಿಕೊಳ್ಳಲು ಪ್ರಾಯೋಜಕ ನಿರಾಕರಿಸಿದ. ಪ್ರಾಯೋಜಕ ಕೇಳಿದ, “ನಿನಗೆ ಹೇಳಿಕೊಟ್ಟವರು ಯಾರೆಂಬುದನ್ನು ಹೇಳು. ಆತನೋರ್ವ ಮಹಾನ್‌ ಗುರುವಾಗಿದ್ದಿರಲೇ ಬೇಕು.” ಆ ವಿದ್ಯಾರ್ಥಿಯೇ ಮುಂದೆ ಕೊಶಿಜಿ ಎಂಬ ಹೆಸರಿನ ಮಹಾನ್‌ ಗಾಯಕನಾದ.

*****

೪. ಸಿದ್ಧತೆ.

ಪೂರ್ವ ಕರಾವಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೇಂಬ್ರಿಜ್‌ ಬೌದ್ಧ ಸಂಘದ ಸಭಾಂಗಣಕ್ಕೆ ಸುಝುಕಿ ರೋಶಿ ಆಗಮಿಸಿದಾಗ ಅಲ್ಲಿನ ಪ್ರತಿಯೊಬ್ಬರೂ ಅವನ ಭೇಟಿಯ ನಿರೀಕ್ಷೆಯಲ್ಲಿ ಒಳಭಾಗವನ್ನು ತಿಕ್ಕಿ ತೊಳೆಯುತ್ತಿದ್ದದ್ದನ್ನು ನೋಡಿದ. ಅವರೆಲ್ಲರಿಗೂ ಅವನನ್ನು ಕಂಡು ಆಶ್ಚರ್ಯವಾಯಿತು. ಏಕೆಂದರೆ ಅವನು ಮರುದಿನ ಬರುವುದಾಗಿ ಪತ್ರ ಬರೆದಿದ್ದ. ಸುಝುಕಿ ರೋಶಿ ತನ್ನ ನಿಲುವಂಗಿಯ ತೋಳುಗಳನ್ನು ಮಡಚಿ “ನನ್ನ ಆಗಮನದ ಮಹಾದಿನ”ದ ಸಿದ್ಧತೆಯಲ್ಲಿ ಪಾಲ್ಗೊಳ್ಳುವುದಾಗಿ ಪಟ್ಟು ಹಿಡಿದ.

*****

೫. ಮತಕ್ರಿಯಾ ವಿಧಿ (Ritual).

ಆಧ್ಯಾತ್ಮಿಕ ಗುರು ಮತ್ತು ಶಿಷ್ಯರು ಸಂಜೆಯಲ್ಲಿ ಎಂದಿನಂತೆ ಮಾಡಬೇಕಾಗಿದ್ದ ಧ್ಯಾನ ಮಾಡಲು ಆರಂಭಿಸುವ ಸಮಯಕ್ಕೆ ಸರಿಯಾಗಿ ಆಶ್ರಮದಲ್ಲಿದ್ದ ಬೆಕ್ಕು ಅವರ ಏಕಾಗ್ರತೆಗೆ ಅಡ್ಡಿಯಾಗುವಷ್ಟು ಗದ್ದಲ ಮಾಡುತ್ತಿತ್ತು. ಸಂಜೆಯ ಧ್ಯಾನಾಭ್ಯಾಸದ ಸಮಯದಲ್ಲಿ ಆ ಬೆಕ್ಕನ್ನು ಕಟ್ಟಿ ಹಾಕುವಂತೆ ಒಂದು ದಿನ ಗುರುಗಳು ಆದೇಶಿಸಿದರು. ಎಷ್ಟೋ ವರ್ಷಗಳ ನಂತರ ಆ ಗುರು ಸತ್ತರೂ ಸಂಜೆಯ ಧ್ಯಾನಾಭ್ಯಾಸ ಸಮಯದಲ್ಲಿ ಬೆಕ್ಕನ್ನು ಕಟ್ಟಿ ಹಾಕುವ ಪದ್ಧತಿ ಮುಂದುವರಿಯಿತು. ಆ ಬೆಕ್ಕು ಸತ್ತು ಹೋದಾಗ ಆಶ್ರಮಕ್ಕೆ ಇನ್ನೊಂದು ಬೆಕ್ಕನ್ನು ತಂದು ಕಟ್ಟಿ ಹಾಕುವುದನ್ನು ಮುಂದುವರಿಸಿದರು. ಶತಮಾನಗಳು ಉರಳಿದ ನಂತರ ಆಧ್ಯಾತ್ಮಿಕ ಗುರುವಿನ ವಂಶಸ್ಥರು ಧ್ಯಾನ ಮಾಡುವ ಸಮಯದಲ್ಲಿ ಬೆಕ್ಕನ್ನು ಕಟ್ಟಿ ಹಾಕುವುದರ ಮತೀಯ (ಧಾರ್ಮಿಕ!)  ಮಹತ್ವದ ಕುರಿತು ಪಾಂಡಿತ್ಯಪೂರ್ಣ ಗ್ರಂಥಗಳನ್ನು ಬರೆದರು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x