೧. ಮೀನಿನ ಕುರಿತು ತಿಳಿಯುವುದು.
ಚುಆಂಗ್ ಝು ಒಂದು ದಿನ ತನ್ನ ಮಿತ್ರನೊಂದಿಗೆ ನದೀ ತಟದಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಚುಆಂಗ್ ಝು ತನ್ನ ಮಿತ್ರನಿಗೆ ಹೇಳಿದ, “ಮೀನುಗಳು ಈಜಾಡುತ್ತಿರುವುದನ್ನು ನೋಡು. ಅವು ಅದರಿಂದ ನಿಜವಾಗಿಯೂ ಸುಖಿಸುತ್ತಿವೆ.”
“ನೀನು ಮೀನಲ್ಲವಲ್ಲ, ಆದ್ದರಿಂದ ಅವು ಸುಖಿಸುತ್ತಿವೆಯೋ ಇಲ್ಲವೋ ಎಂಬುದನ್ನು ನೀನು ನಿಜವಾಗಿಯೂ ತಿಳಿಯಲು ಸಾಧ್ಯವಿಲ್ಲ,” ಪ್ರತಿಕ್ರಿಯಿಸಿದ ಆ ಮಿತ್ರ.
ಚುಆಂಗ್ ಝು ಹೇಳಿದ, “ನೀನು ನಾನಲ್ಲ. ಅಂದ ಮೇಲೆ ಮೀನುಗಳು ಸುಖಿಸುತ್ತಿವೆ ಎಂಬುದು ನನಗೆ ತಿಳಿದಿಲ್ಲ
ಎಂಬುದು ನಿನಗೆ ಹೇಗೆ ತಿಳಿಯಿತು?”
*****
೨. ಟಾವೋ ಅನುಯಾಯಿ.
ವಿದ್ಯಾರ್ಥಿಯೊಬ್ಬ ಒಮ್ಮೆ ಕೇಳಿದ, “ಟಾವೋ ಅನುಯಾಯಿಗೂ ಸಣ್ಣ ಮನುಷ್ಯನಿಗೂ ನಡುವಣ ವ್ಯತ್ಯಾಸ ಏನು?”
ಝೆನ್ ಗುರು ಉತ್ತರಿಸಿದರು, “ಅದು ಬಹಳ ಸರಳವಾಗಿದೆ. ಸಣ್ಣ ಮನುಷ್ಯ ವಿದ್ಯಾರ್ಥಿಯಾದಾಗ ಮನೆಗೆ ಓಡಿ ಹೋಗಿ ಸಾಧ್ಯವಿರುವಷ್ಟು ದೊಡ್ಡ ದನಿಯಲ್ಲಿ ಎಲ್ಲರಿಗೂ ಅದನ್ನು ಹೇಳಲು ಇಚ್ಛಿಸುತ್ತಾನೆ. ಗುರುವಿನ ಮಾತುಗಳನ್ನು ಕೇಳಿದ ನಂತರ ಮನೆಯ ಮೇಲೆ ಹತ್ತಿ ಜನಗಳಿಗೆ ಕೇಳುವಂತೆ ಅದನ್ನು ಬೊಬ್ಬೆ ಹೊಡೆದು ಹೇಳುತ್ತಾನೆ. ಗುರುವಿನ ವಿಧಾನಗಳನ್ನು ತಿಳಿದ ನಂತರ ಪಟ್ಟಣದಲ್ಲಿ ಭೇಟಿಯಾಗುವ ಪ್ರತಿಯೊಬ್ಬರ ಮುಂದೆಯೂ ತಾನು ಗಳಿಸಿದ ಹೊಸ ಜ್ಞಾನವನ್ನು ಆಡಂಬರದಿಂದ ಪ್ರದರ್ಶಿಸುತ್ತಾನೆ.”
ಝೆನ್ ಗುರು ಮುಂದುವರಿದು ಹೇಳುತ್ತಾನೆ, “ಟಾವೋ ಅನುಯಾಯಿ ವಿದ್ಯಾರ್ಥಿಯಾದಾಗ ಕೃತಜ್ಞತೆಯಿಂದ ತಲೆ ಬಾಗಿಸಿ ವಂದಿಸುತ್ತಾನೆ. ಗುರುವಿನ ಮಾತುಗಳನ್ನು ಕೇಳಿದ ನಂತರ ತಲೆ ಮತ್ತು ಭುಜಗಳನ್ನು ಬಾಗಿಸಿ ವಂದಿಸುತ್ತಾನೆ. ಗುರುವಿನ ವಿಧಾನಗಳನ್ನು ತಿಳಿದ ನಂತರ ಸೊಂಟ ಬಾಗಿಸಿ ವಂದಿಸುತ್ತಾನೆ, ಜನ ತನ್ನನ್ನು ಗಮನಿಸದ ರೀತಿಯಲ್ಲಿ ಗೋಡೆಯಪಕ್ಕದಲ್ಲಿ ಸದ್ದಿಲ್ಲದೆ ನಡೆಯುತ್ತಾನೆ.”
*****
೩. ಚಲಿಸುವ ಮನಸ್ಸು.
ಗಾಳಿಯಲ್ಲಿ ಹಾರಾಡುತ್ತಿರುವ ಬಾವುಟವೊಂದರ ಕುರಿತು ಇಬ್ಬರ ನಡುವೆ ಉದ್ರಿಕ್ತ ಚರ್ಚೆ ನಡೆಯುತ್ತಿತ್ತು.
ಮೊದಲನೆಯವ ಹೇಳಿದ, “ನಿಜವಾಗಿ ಚಲಿಸುತ್ತಿರುವುದು ಗಾಳಿ.”
ಎರಡನೆಯವ ಹೇಳಿದ, :ಇಲ್ಲ ಇಲ್ಲ. ನಿಜವಾಗಿ ಚಲಿಸುತ್ತಿರುವುದು ಬಾವುಟ.”
ಅವರ ಸಮೀಪದಲ್ಲಿ ಹಾದು ಹೋಗುತ್ತಿದ್ದ ಝೆನ್ ಗುರುವಿಗೆ ಈ ವಾದವಿವಾದ ಕೇಳಿಸಿ, ಅವರು ಮಧ್ಯಪ್ರವೇಶ ಮಾಡಿ ಹೇಳಿದರು, “ಚಲಿಸುತ್ತಿರುವುದು ಮನಸ್ಸು”
*****
೪. ಸಹಜ ಸ್ವಭಾವಗಳು.
ಇಬ್ಬರು ಸನ್ಯಾಸಿಗಳುನದಿಯಲ್ಲಿ ತಮ್ಮ ಬಟ್ಟಲುಗಳನ್ನು ತೊಳೆಯುತ್ತಿದ್ದಾಗ ಮುಳುಗುತ್ತಿರುವ ಚೇಳೊಂದನ್ನು ನೋಡಿದರು. ತಕ್ಷಣ ಒಬ್ಬ ಸನ್ಯಾಸಿ ಅದನ್ನು ಮೊಗೆದು ತೆಗೆದು ದಡದಲ್ಲಿ ನೆಲದ ಮೇಲೆ ಬಿಟ್ಟನು. ಈ ಪ್ರಕ್ರಿಯೆಯಲ್ಲಿ ಅವನಿಗೆ ಅದು ಕುಟುಕಿತ್ತು. ಅವನು ಪುನಃ ತನ್ನ ಬಟ್ಟಲು ತೊಳೆಯುವ ಕಾಯಕ ಮುಂದುವರಿಸಿದನು. ಚೇಳು ಪುನಃ ನೀರಿಗೆ ಬಿದ್ದಿತು. ಆ ಸನ್ಯಾಸಿ ಪುನಃ ಅದನ್ನು ರಕ್ಷಸಿದನು ಮತ್ತು ಅದು ಅವನಿಗೆ ಪುನಃ ಕುಟುಕಿತು.
ಇನ್ನೊಬ್ಬ ಸನ್ಯಾಸಿ ಕೇಳಿದ, “ಮಿತ್ರನೇ, ಕುಟುಕುವುದು ಚೇಳಿನ ಸಹಜ ಸ್ವಭಾವ ಎಂಬುದು ತಿಳಿದಿದ್ದರೂ ಅದನ್ನು ರಕ್ಷಿಸುವುದನ್ನು ಮುಂದುವರಿಸಿದ್ದು ಏಕೆ?”
ಮೊದಲನೆಯ ಸನ್ಯಾಸಿ ಉತ್ತರಿಸಿದ, “ಏಕೆಂದರೆ, ಅದನ್ನು ರಕ್ಷಿಸುವುದು ನನ್ನ ಸಹಜ ಸ್ವಭಾವ.”
*****
೫. ನಿಸರ್ಗದ ಸೌಂದರ್ಯ.
ಒಂದು ಖ್ಯಾತ ಝೆನ್ ದೇವಾಲಯದ ಉದ್ಯಾನದ ಹೊಣೆಗಾರಿಕೆ ಪೂಜಾರಿಯೊಬ್ಬನದಾಗಿತ್ತು. ಅವನು ಹೂವುಗಳನ್ನು, ಪೊದೆಗಳನ್ನು ಮತ್ತು ಮರಗಳನ್ನು ಪ್ರೀತಿಸುತ್ತಿದ್ದದ್ದರಿಂದ ಅವನಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಈ ದೇವಾಲಯದ ಪಕ್ಕದಲ್ಲಿ ಇದ್ದ ಪುಟ್ಟ ದೇವಾಲಯದಲ್ಲಿ ಒಬ್ಬ ತುಂಬ ವಯಸ್ಸಾಗಿದ್ದ ಝೆನ್ ಗುರು ವಾಸಿಸುತ್ತಿದ್ದ. ಒಂದು ದಿನ ವಿಶೇಷ ಅತಿಥಿಗಳು ಬರುವ ನಿರೀಕ್ಷೆ ಇದ್ದದ್ದರಿಂದ ಪೂಜಾರಿಯು ಉದ್ಯಾನ ನೋಡಿಕೊಳ್ಳುವುದರ ಕಡೆಗೆ ವಿಶೇಷ ಗಮನ ನೀಡಿದ. ಕಳೆಗಳನ್ನು ಕಿತ್ತೆಸೆದ, ಪೊದೆಗಳನ್ನು ಕತ್ತರಿಸಿ ಒಪ್ಪಮಾಡಿದ, ಹಾವಸೆಯನ್ನು ತೆಗೆದು ಹಾಕಿದ. ಸುಮಾರು ಸಮಯವನ್ನು ಬಿದ್ದಿದ್ದ ಶರತ್ಕಾಲದ ಒಣ ಎಲೆಗಳನ್ನು ಅತ್ಯಂತ ಜಾಗರೂಕತೆಯಿಂದ ಒಟ್ಟುಗೂಡಿಸಿ ರಾಶಿ ಮಾಡಲು ವಿನಿಯೋಗಿಸಿದ. ಆತ ಕೆಲಸ ಮಾಡುತ್ತಿರುವುದನ್ನು ಎರಡು ದೇವಾಲಯಗಳ ನಡುವೆ ಇದ್ದ ಗೋಡೆಯ ಆಚೆ ಬದಿಯಿಂದ ವೃದ್ಧ ಗುರು ಬಲು ಆಸಕ್ತಿಯಿಂದ ನೋಡುತ್ತಿದ್ದ.
ತನ್ನ ಕೆಲಸ ಮುಗಿಸಿದ ನಂತರ ಪೂಜಾರಿ ಸುಮ್ಮನೆ ನಿಂತು ತನ್ನ ಶ್ರಮದ ಫಲದತ್ತ ಮೆಚ್ಚುಗೆಯ ನೋಟ ಬೀರಿದ. “ಈಗ ಇದು ಬಲು ಸುಂದರವಾಗಿದೆಯಲ್ಲವೇ? ಎಂಬುದಾಗಿ ವೃದ್ಧ ಗುರುವನ್ನು ಕರೆದು ಕೇಳಿದ. ವೃದ್ಧ ಉತ್ತರಿಸಿದ, “ಹೌದು. ಆದರೂ ಏನೋ ಕೊರತೆ ಕಾಣಿಸುತ್ತಿದೆ. ಈ ಗೋಡೆ ದಾಟಲು ನನಗೆ ನೀನು ಸಹಾಯ ಮಾಡಿದರೆ ಆ ಕೊರತೆಯನ್ನು ನೀಗಿಸುತ್ತೇನೆ.” ತುಸು ಹಿಂದುಮುಂದು ನೋಡಿ, ಪೂಜಾರಿ ವೃದ್ಧನ್ನು ಎತ್ತಿ ಗೊಡೆಯ ಈ ಬದಿಗೆ ಇಳಿಸಿದ. ಗುರು ನಿಧಾನವಾಗಿ ಉದ್ಯಾನದ ಮಧ್ಯದಲ್ಲಿ ಇದ್ದ ಪುಟ್ಟ ಮರದ ಹತ್ತಿರ ಹೋಗಿ ಅದರ ಕಾಂಡವನ್ನು ಹಿಡಿದು ಜೋರಾಗಿ ಅಲುಗಾಡಿಸಿದ. ಉದ್ಯಾನದೆಲ್ಲೆಡೆ ಆ ಮರದ ಒಣಗಿದ ಎಲೆಗಳು ಬಿದ್ದವು. “ಹಾಂ, ಈಗ ಸರಿಯಾಯಿತು. ನನ್ನನ್ನು ಈಗ ನೀನು ಹಿಂದಕ್ಕೆ ರವಾನಿಸಬಹುದು,” ಎಂಬುದಾಗಿ ಹೇಳಿದ ವೃದ್ಧ ಗುರು.
*****