೧. ಮಹಾತ್ಮ
ಪರ್ವತದ ತುದಿಯಲ್ಲಿ ಇರುವ ಪುಟ್ಟ ಮನೆಯಲ್ಲಿ ವಿವೇಕಿಯಾದ ಮಹಾತ್ಮನೊಬ್ಬ ವಾಸಿಸುತ್ತಿದ್ದಾನೆ ಎಂಬ ಸುದ್ದಿ ಗ್ರಾಮಾಂತರ ಪ್ರದೇಶದಲ್ಲಿ ಹರಡಿತು. ಹಳ್ಳಿಯ ನಿವಾಸಿಯೊಬ್ಬ ಸುದೀರ್ಘವೂ ಕಠಿಣವೂ ಆದ ಪ್ರಯಾಣ ಮಾಡಿ ಅವನನ್ನು ಭೇಟಿಯಾಗಲು ನಿರ್ಧರಿಸಿದ.
ಆ ಮನೆಯನ್ನು ಅವನು ತಲುಪಿದಾಗ ಒಳಗಿದ್ದ ವೃದ್ಧ ಸೇವಕನೊಬ್ಬ ಬಾಗಿಲಿನಲ್ಲಿ ತನ್ನನ್ನು ಸ್ವಾಗತಿಸಿದ್ದನ್ನು ಗಮನಿಸಿದ.
ಅವನು ಸೇವಕನಿಗೆ ಹೇಳಿದ, “ವಿವೇಕಿಯಾದ ಮಹಾತ್ಮನನ್ನು ನಾನು ನೋಡಬಯಸುತ್ತೇನೆ.”
ಸೇವಕ ನಸುನಕ್ಕು ಅವನನ್ನು ಮನೆಯೊಳಕ್ಕೆ ಕರೆದೊಯ್ದ. ಮನೆಯಲ್ಲಿ ಕೋಣೆಯಿಂದ ಕೋಣೆಗೆ ಹೋಗುತ್ತಿರುವಾಗ ಮಹಾತ್ಮನನ್ನು ಸಂಧಿಸುವ ನಿರೀಕ್ಷೆಯಿಂದ ಅವನು ಸುತ್ತಲೂ ನೋಡುತ್ತಿದ್ದ. ಏನಾಗುತ್ತಿದ್ದೆ ಎಂಬುದು ಅರಿವಿಗೆ ಬರುವುದರೊಳಗಾಗಿ ಅವನನ್ನು ಮನೆಯ ಹಿಂಬಾಗಿಲಿನ ಮೂಲಕ ಹೊರಕ್ಕೆ ಕರೆದೊಯ್ಯಲಾಗಿತ್ತು. ತಕ್ಷಣ ಹಿಂದಕ್ಕೆ ತಿರುಗಿ ಸೇವಕನಿಗೆ ಹೇಳಿದ, “ನಾನು ಮಹಾತ್ಮನನ್ನು ನೋಡಬಯಸುತ್ತೇನೆ!”
ವೃದ್ಧ ಹೇಳಿದ, “ನೀನು ಈಗಾಗಲೇ ನೋಡಿರುವೆ. ಜೀವನದಲ್ಲಿ ಸಂಧಿಸುವ ಪ್ರತಿಯೊಬ್ಬರನ್ನೂ, ಅವರು ಎಷ್ಟೇ ಸಾಮಾನ್ಯರಂತೆಯೋ ಅಮುಖ್ಯರಂತೆಯೋ ಗೋಚರಿಸಿದರೂ, ಮಹಾತ್ಮ ಎಂಬಂತೆಯೇ ನೋಡು. ನೀನು ಹಾಗೆ ಮಾಡಿದರೆ ಇಂದು ನೀನು ಕೇಳಬೇಕೆಂದಿದ್ದ ಸಮಸ್ಯೆ, ಅದು ಏನೇ ಆಗಿರಲಿ, ಪರಿಹಾರವಾಗುತ್ತದೆ.”
*****
೨. ನನಗೆ ಗೊತ್ತಿಲ್ಲ
ಬೌದ್ಧ ಮತಾನುಯಾಯಿಯಾಗಿದ್ದ ಚಕ್ರವರ್ತಿಯು ಬೌದ್ಧ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಲೋಸುಗ ಖ್ಯಾತ ಝೆನ್ ಗುರುವೊಬ್ಬನನ್ನು ಅರಮನೆಗೆ ಆಹ್ವಾನಿಸಿದ.
“ಪವಿತ್ರವಾದ ಬೌದ್ಧ ಸಿದ್ಧಾಂತದ ಪ್ರಕಾರ ಶ್ರೇಷ್ಠ ಸತ್ಯ ಯಾವುದು?” ವಿಚಾರಿಸಿದ ಚಕ್ರವರ್ತಿ.
“ಅತೀ ವಿಶಾಲವಾದ ಶೂನ್ಯತೆ, ಪಾವಿತ್ರ್ಯದ ಕುರುಹೂ ಇಲ್ಲದಿರುವಿಕೆ,” ಉತ್ತರಿಸಿದರು ಗುರುಗಳು.
“ಪಾವಿತ್ರ್ಯವೇ ಇಲ್ಲ ಎಂಬುದಾದರೆ ನೀವು ಯಾರು ಅಥವ ಏನು?” ವಿಚಾರಿಸಿದ ಚಕ್ರವರ್ತಿ.
ಗುರುಗಳು ಉತ್ತರಿಸಿದರು, “ನನಗೆ ಗೊತ್ತಿಲ್ಲ.”
*****
೩. ನಿನ್ನ ಕೈನಲ್ಲಿದೆ
ಯುವಕನೊಬ್ಬ ಪುಟ್ಟ ಪಕ್ಷಿಯೊಂದನ್ನು ಹಿಡಿದು ಅದನ್ನು ತನ್ನ ಬೆನ್ನಿನ ಹಿಂದೆ ಅಡಗಿಸಿ ಹಿಡಿದುಕೊಂಡ. ಆ ನಂತರ ಕೇಳಿದ, “ಗುರುಗಳೇ ನನ್ನ ಕೈಯಲ್ಲಿ ಇರುವ ಪಕ್ಷಿಯು ಜೀವಂತವಾಗಿದೆಯೇ ಅಥವ ಸತ್ತಿದೆಯೇ?” ಗುರುಗಳನ್ನು ಏಮಾರಿಸಲು ಇದೊಂದು ಸುವರ್ಣಾವಕಾಶ ಎಂಬುದಾಗಿ ಅವನು ಆಲೋಚಿಸಿದ್ದ. ಗುರುಗಳು “ಸತ್ತಿದೆ” ಅಂದರೆ ಅದನ್ನು ಹಾರಲು ಬಿಡುವುದೆಂಬುದಾಗಿಯೂ “ಜೀವಂತವಾಗಿದೆ” ಅಂದರೆ ಅದರ ಕತ್ತು ಹಿಸುಕಿ ಸಾಯಿಸಿ ತೋರಿಸುವುದೆಂಬುದಾಗಿಯೂ ನಿರ್ಧಿರಿಸಿದ್ದ.
ಗುರುಗಳು ಉತ್ತರಿಸಿದರು, “ಉತ್ತರ ನಿನ್ನ ಕೈನಲ್ಲಿದೆ.”
*****
೪. ನಿಲುವಂಗಿಯನ್ನು ಆಹ್ವಾನಿಸುವುದು
ಶ್ರೀಮಂತ ಪೋಷಕರು ಇಕ್ಕ್ಯುನನ್ನು ಔತಣಕೂಟಕ್ಕೆ ಆಹ್ವಾನಿಸಿದರು. ಬಿಕ್ಷುಕನ ನಿಲುವಂಗಿ ಧರಿಸಿ ಇಕ್ಕ್ಯು ಆಗಮಿಸಿದ. ಅವನು ಯಾರು ಎಂಬುದನ್ನು ಗುರುತಿಸಲಾಗದೆ ಅತಿಥೇಯ ಅವನನ್ನು ಓಡಿಸಿದ. ಇಕ್ಕ್ಯು ಮನೆಗೆ ಹೋಗಿ ಉತ್ಸವಾಚರಣೆಯಲ್ಲಿ ಧರಿಸುವ ಉಬ್ಬಿ ಕಾಣುವ ಕೆನ್ನೀಲಿ ಬಣ್ಣದ ಕಸೂತಿಯಿಂದ ಅಲಂಕೃತವಾದ ನಿಲುವಂಗಿ ಧರಿಸಿ ಹಿಂದಿರುಗಿದ. ಬಲು ಗೌರವದಿಂದ ಅವನನ್ನು ಸ್ವಾಗತಿಸಿ ಔತಣಕೂಟದ ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಅವನು ತಾನು ಧರಿಸಿದ್ದ ನಿಲುವಂಗಿಯನ್ನು ಕಳಚಿ ಕುಳಿತುಕೊಳ್ಳಲು ಇಟ್ಟಿದ್ದ ಮೆತ್ತೆಯ ಮೇಲಿರಿಸಿ ಹೇಳಿದ, “ನೀವು ಪ್ರಾಯಶಃ ಈ ನಿಲುವಂಗಿಯನ್ನು ಆಹ್ವಾನಿಸಿದ್ದೀರಿ, ಏಕೆಂದರೆ ಸ್ವಲ್ಪ ಕಾಲಕ್ಕೆ ಮೊದಲು ನೀವು ನನ್ನನ್ನು ಇಲ್ಲಿಂದ ಓಡಿಸಿದ್ದಿರಿ.” ಇಂತು ಹೇಳಿದ ಇಕ್ಕ್ಯು ಅಲ್ಲಿಂದ ಹೊರನಡೆದ.
*****
೫. ಅದು ಹೋಗುತ್ತದೆ.
ತನಗೆ ಧ್ಯಾನ ಮಾಡುವುದನ್ನು ಕಲಿಸುತ್ತಿದ್ದ ಗುರುವಿನ ಹತ್ತಿರ ಶಿಷ್ಯನೊಬ್ಬ ಹೋಗಿ ಹೇಳಿದ, “ನನ್ನ ಧ್ಯಾನ ಮಾಡುವಿಕೆ ಅಸಹನೀಯವಾಗಿದೆ. ಮನಸ್ಸು ಬಲು ಚಂಚಲವಾಗುತ್ತದೆ, ಅಥವ ಕಾಲುಗಳು ನೋಯಲಾರಂಭಿಸುತ್ತವೆ, ಅಥವ ಅಗಾಗ್ಗೆ ನಿದ್ದೆ ಮಾಡುತ್ತೇನೆ!”
ಗುರುಗಳು ಹೇಳಿದರು, “ಅದು ಹೋಗುತ್ತದೆ.”
ಒಂದು ವಾರದ ನಂತರ ಆ ಶಿಷ್ಯ ಪುನಃ ಗುರುವಿನ ಹತ್ತಿರ ಬಂದು ಹೇಳಿದ, “ನನ್ನ ಧ್ಯಾನ ಮಾಡುವಿಕೆ ಅದ್ಭುತವಾಗಿದೆ. ತಿಳಿದ ಭಾವನೆ ಮೂಡುತ್ತದೆ, ತುಂಬ ಶಾಂತಿಯ ಅನುಭವ ಆಗುತ್ತದೆ, ಜೀವಕಳೆಯಿಂದ ತುಂಬಿರುತ್ತದೆ, ಅದ್ಭುತವಾಗಿದೆ.”
ಗುರುಗಳು ಪ್ರತಿಕ್ರಿಯಿಸಿದರು, “ಅದು ಹೋಗುತ್ತದೆ.”
*****