೧. ಜ್ಞಾನೋದಯವಾದವ
ಯುವ ಸನ್ಯಾಸಿಯೊಬ್ಬ ಜ್ಞಾನೋದಯದ ಅತ್ಯುನ್ನತ ಮಟ್ಟವನ್ನು ತಲುಪಿದ್ದಾನೆಂದು ಗುರುಗಳು ಒಂದು ದಿನ ಘೋಷಿಸಿದರು. ಈ ವಾರ್ತೆ ಸಂಭ್ರಮಕ್ಕೆ ಕಾರಣವಾಯಿತು. ಯುವ ಸನ್ಯಾಸಿಯನ್ನು ನೋಡಲು ಕೆಲವು ಸನ್ಯಾಸಿಗಳು ಹೋದರು.
“ನಿನಗೆ ಜ್ಞಾನೋದಯವಾಗಿದೆ ಎಂಬ ಸುದ್ದಿ ಕೇಳಿದೆವು. ಅದು ನಿಜವೇ?” ಕೇಳಿದರು ಸನ್ಯಾಸಿಗಳು.
“ಅದು ನಿಜ,” ಉತ್ತರಿಸಿದ ಯುವ ಸಂನ್ಯಾಸಿ.
“ಈಗ ನೀನು ಹೇಗಿರುವೆ?” ವಿಚಾರಿಸಿದರು ಸಂನ್ಯಾಸಿಗಳು.
“ಎಂದಿನಂತೆ ದುಃಖಾರ್ತ,” ಪ್ರತಿಕ್ರಿಯಿಸಿದ ಯುವ ಸಂನ್ಯಾಸಿ
*****
೨. ಸಭ್ಯಾಚಾರ
ಒಂದು ದಿನ ಆ ಪ್ರಾಂತ್ಯದ ಆಡಳಿತದ ಜವಾಬ್ದಾರಿ ಹೊತ್ತಿದ್ದ ರಾಜಕುಮಾರನೂ ಅವನೊಂದಿಗೆ ಇನನ್ನುಳಿದ ರಾಜಕುಮಾರರೂ ಪಂಡಿತೋತ್ತಮರೂ ದೇವಾಲಯಕ್ಕೆ ಭೇಟಿ ನೀಡಿದರು. ಗುರುಪೀಠದಲ್ಲಿ ಆಸೀನರಾಗಿದ್ದ ಗುರುಗಳು ಕೇಳಿದರು, “ಅಯ್ಯಾ ಹಿರಿಯ ರಾಜಕುಮಾರನೇ ನಿನಗೆ ಚಾನ್‌ನ (ಝೆನ್‌ನ ಚೀನೀ ರೂಪಾಂತರ) ತಿಳಿವಳಿಕೆ ಇದೆಯೇ?.” ರಾಜಕುಮಾರ ಉತ್ತರಿಸಿದ, “ಇಲ್ಲ, ನಾನು ಅದನ್ನು ಗ್ರಹಿಸಲಾರೆ.”
ಗುರುಗಳು ಹೇಳಿದರು, “ನಾನು ಚಿಕ್ಕಂದಿನಿಂದಲೇ ಸಸ್ಯಾಹಾರಿ. ನನ್ನ ದೇಹಕ್ಕೆ ವಯಸ್ಸಾಗಿದೆ. ಜನಗಳನ್ನು ನಾನು ಭೇಟಿ ಮಾಡುತ್ತೇನಾದರೂ ಗುರುಪೀಠದಿಂದ ಕೆಳಕ್ಕಿಳಿದು ಬರುವಷ್ಟು ತಾಕತ್ತು ನನ್ನಲ್ಲಿಲ್ಲ.”
ರಾಜಕುಮಾರನಿಗೆ ಗುರುವಿನ ಮೇಲೆ ಆದರಪೂರ್ವಕವಾದ ಗೌರವ ಮೂಡಿತು. ಅವನು ಮಾರನೆಯ ದಿನ ತನ್ನ ಸೈನ್ಯದ ಜನರಲ್ ಮುಖೇನ ಸಂದೇಶವೊಂದನ್ನು ಗುರುಗಳಿಗೆ ಕಳುಹಿಸಿದ. ಜನರಲ್‌ಅನ್ನು ಸ್ವಾಗತಿಸಲು ಗುರುಗಳು ಗುರುಪೀಠದಿಂದ ಕೆಳಕ್ಕಿಳಿದು ಬಂದರು. ಜನರಲ್ ಹಿಂದಿರುಗಿದ ನಂತರ ಗುರುಗಳ ಅನುಚರನೊಬ್ಬ ಕೇಳಿದ, “ನಿನ್ನೆ ರಾಜಕುಮಾರ ಭೇಟಿಗಾಗಿ ಬಂದಾಗ ನೀವು ಗುರುಪೀಠದಿಂದ ಕೆಳಕ್ಕಿಳಿದು ಬರಲಿಲ್ಲ. ಇಂದು ಜನರಲ್ ನಿಮ್ಮನ್ನು ಕಾಣಲು ಬಂದಾಗ ನೀವೇಕೆ ಗುರುಪೀಠದಿಂದ ಕಳಗೆ ಇಳಿದಿರಿ?”
ಗುರುಗಳು ಉತ್ತರಿಸಿದರು, “ನನ್ನ ಸಭ್ಯಾಚಾರ ನಿನ್ನ ಸಭ್ಯಾಚಾರದಿಂದ ಭಿನ್ನವಾದದ್ದು. ಮೇಲ್ವರ್ಗದ ವ್ಯಕ್ತಿ ಬಂದಾಗ ನಾನು ಅವರೊಂದಿಗೆ ಗುರುಪೀಠದಿಂದಲೇ ವ್ಯವಹರಿಸುತ್ತೇನೆ. ಮಧ್ಯಮ ವರ್ಗದ ವ್ಯಕ್ತಿ ಬಂದಾಗ ನಾನು ಗುರುಪೀಠದಿಂದ ಕೆಳಕ್ಕಿಳಿದು ಅವನೊಂದಿಗೆ ವ್ಯವಹರಿಸುತ್ತೇನೆ. ಕೆಳವರ್ಗದ ವ್ಯಕ್ತಿಯೊಂದಿಗೆ ವ್ಯವಹರಿಸಲು ನಾನೇ ದೇವಾಲಯದ ದ್ವಾರ ದಾಟಿ ಆಚೆ ಹೋಗುತ್ತೇನೆ.”
ಯಾರೋ ಕೇಳಿದರು, “ಗುರುಗಳೇ ತಾವು ನರಕವನ್ನು ಪ್ರವೇಶಿಸುವಿರಾ?”
ಗುರುಗಳು ಉತ್ತರಿಸಿದರು, “ನಾನು ಅದನ್ನು ಪ್ರವೇಶಿಸುವವರ ಪೈಕಿ ಮದಲನೆಯವನಾಗಿರುತ್ತೇನೆ.”
ಆ ವ್ಯಕ್ತಿ ಪುನಃ ಕೇಳಿದ, “ಚಾನ್‌ನ ನಿಮ್ಮಂಥ ಉತ್ತಮ ಗುರುಗಳು ನರಕವನ್ನು ಏಕೆ ಪ್ರವೇಶಿಸಬೇಕು?”
ಗುರುಗಳು ಕೇಳಿದರು, “ನಾನು ಅದನ್ನು ಪ್ರವೇಶಿಸದೇ ಇದ್ದರೆ ನಿನ್ನನ್ನು ಬೋಧನೆಯ ಮುಖೇನ ಪರಿವರ್ತಿಸುವವರು ಯಾರು?”
*****
೩. ಮೂದಲಿಕೆಗಳ ಉಡುಗೊರೆ
ಒಂದಾನೊಂದು ಕಾಲದಲ್ಲಿ ಮಹಾನ್ ಯೋಧನೊಬ್ಬನಿದ್ದ. ಬಹಳ ವಯಸ್ಸಾಗಿದ್ದರೂ ಸಾವಲೆಸೆಯುವ ಯಾರನ್ನೇ ಆಗಲಿ ಸೋಲಿಸುತ್ತಿದ್ದ. ಅವನ ಖ್ಯಾತಿ ಬಹು ದೂರದ ವರೆಗೆ ಪಸರಿಸಿತ್ತು. ಎಂದೇ, ಅನೇಕ ವಿದ್ಯಾರ್ಥಿಗಳು ಅವನ ಮಾರ್ಗದರ್ಶನದಲ್ಲಿ ಅಭ್ಯಸಿಸಲು ಅವನ ಹತ್ತಿರ ಸೇರುತ್ತಿದ್ದರು. ಒಂದು ದಿನ ಆ ಹಳ್ಳಿಗೆ ಕುಖ್ಯಾತ ಯುವ ಯೋಧನೊಬ್ಬ ಬಂದನು. ಮಹಾನ್ ಗುರುವನ್ನು ಸೋಲಿಸಿದ ಮೊದಲನೆಯವ ತಾನಾಗಬೇಕೆಂದು ಆತ ತೀರ್ಮಾನಿಸಿದ್ದ. ಅವನಲ್ಲಿ ಬಲವೂ ಇತ್ತು, ಎದುರಾಳಿಯ ದ್‌ಔರ್ಬಲ್ಯವನ್ನು ನಿಖರವಾಗಿ ಗುರುತಿಸಿ ಅದರ ಲಾಭಪಡೆಯುವ ಅಸ್ವಾಭಾವಿಕ ಸಾಮರ್ಥ್ಯವೂ ಇತ್ತು. ಎದುರಾಳಿ ಮೊದಲ ಹೆಜ್ಜೆ ಇಡುವ ವರೆಗೆ ಕಾಯುತ್ತಿದ್ದು ಅದರಲ್ಲಿ ಅವನ ದೌರ್ಬಲ್ಯ ಗುರುತಿಸಿದ ನಂತರ ಅವನು ಮಿಂಚಿನ ವೇಗದಲ್ಲಿ ದಯಾಶೂನ್ಯನಾಗಿ ಪ್ರಹಾರ ಮಾಡುತ್ತಿದ್ದ. ಮೊದಲನೇ ಹೆಜ್ಜೆಗಿಂತ ಹೆಚ್ಚು ಕಾಲ ಅವನೊಂದಿಗೆ ಯಾರೂ ಸೆಣಸಲು ಸಾಧ್ಯವಾಗಿರಲಿಲ್ಲ.
ಶಿಷ್ಯರ ವಿರೋಧವಿದ್ದಾಗ್ಯೂ ವೃಧ್ದ ಗುರು ಯುವ ಯೋಧನ ಸವಾಲನ್ನು ಸಂತೋಷದಿಂದಲೇ ಸ್ವೀಕರಿಸಿದ. ಇಬ್ಬರೂ ಎದರುಬದುರಾಗಿ ನಿಂತು ಯುದ್ಧಕ್ಕೆ ಅಣಿಯಾಗುತ್ತಿರುವಾಗ ಯುವ ಯೋಧ ವೃದ್ಧ ಯೋಧನನ್ನು ಮೂದಲಿಸಲು ಆರಂಭಿಸಿದ. ವೃದ್ಧ ಯೋದನ ಮುಖಕ್ಕೆ ಮಣ್ಣೆರಚಿದ, ಉಗಿದ. ಮನುಕುಲಕ್ಕೆ ಗೊತ್ತಿದ್ದ ಎಲ್ಲ ಬಯ್ಗಳನ್ನೂ ಶಾಪಗಳನ್ನೂ ಅನೇಕ ಗಂಟೆಗಳ ಕಾಲ ಪ್ರಯೋಗಿಸಿದ. ವೃದ್ಧ ಯೋಧನಾದರೋ ಒಂದಿನಿತೂ ಅಲುಗಾಡದೆ ಪ್ರಸಾಂತವಾಗಿ ಅಷ್ಟೂ ಸಮಯ ನಿಂತೇ ಇದ್ದ. ಕೊನೆಗೆ ಯುವ ಯೋಧ ಸುಸ್ತಾಗಿ ನಿಂತದ್ದಷ್ಟೇ ಅಲ್ಲದೆ ತಾನು ಸೋಲುವುದು ಖಚಿತ ಎಂಬುದನ್ನು ಅರಿತು ನಾಚಿಕೆಯಿಂದ ಅಲ್ಲಿಂದ ಹೊರಟುಹೋದ.
ದುರಹಂಕಾರಿ ಯುವ ಯೋಧನೊಂದಿಗೆ ತಮ್ಮ ಗುರು ಸೆಣಸಾಡದೇ ಇದ್ದದ್ದರಿಂದ ನಿರಾಶರಾದ ವೃದ್ಧ ಗುರುವಿನ ಶಿಷ್ಯರು ಅವನನ್ನು ಸುತ್ತುವರಿದು ಕೇಳಿದರು, “ಅಂಥ ಅನುಚಿತ ವರ್ತನೆಯನ್ನು ನೀವು ಹೇಗೆ ಸಹಿಸಿಕೊಂಡಿರಿ? ಅವನನ್ನು ಓಡಿಸಿದ್ದು ಹೇಗೆ?”
ಗುರು ಉತ್ತರಿಸಿದರು, “ನಿಮಗೆ ಯಾರೋ ಒಬ್ಬರು ಕೊಡುವ ಉಡುಗೊರೆಯನ್ನು ನೀವು ಸ್ವೀಕರಿಸದೇ ಇದ್ದರೆ ಅದು ಯಾರದ್ದಾಗಿ ಉಳಿಯುತ್ತದೆ?”
*****
೪. ಹರಿವಿನೊಂದಿಗೆ ಹೋಗುವುದು
ಮೂಲತಃ ಇದೊದು ಟಾವೋ ಸಿದ್ಧಾಂತದ ಕತೆ. ವೃದ್ಧನೊಬ್ಬ ಎತ್ತರವೂ ಅಪಾಯಕಾರಿಯೂ ಆಗಿದ್ದ ಜಲಪಾತದತ್ತ ಸಾಗುತ್ತಿದ್ದ ನದಿಯ ರಭಸದ ಹರಿವಿಗೆ ಆಕಸ್ಮಿಕವಾಗಿ ಬಿದ್ದ. ಅವನಿಗೆ ಪ್ರಾಣಾಪಾಯವಾಗುತ್ತದೆಂದು ನೋಡುಗರು ಹೆದರಿದರು. ಪವಾಡ ಸದೃಶ ರೀತಿಯಲ್ಲಿ ಅವನು ಜಲಪಾತದ ಬುಡದಿಂದ ಏನೂ ಅಪಾಯವಿಲ್ಲದೆ ಜೀವಂತವಾಗಿ ಹೊರಬಂದನು. ಬದುಕಿ ಉಳಿದದ್ದು ಹೇಗೆಂಬುದಾಗಿ ಎಲ್ಲರೂ ಅವನನ್ನು ಕೇಳಿದರು.
“ನಾನು ನೀರಿನೊಂದಿಗೆ ಹೊಂದಿಕೆ ಮಾಡಿಕೊಂಡೆ, ನೀರು ನನ್ನೊಂದಿಗಲ್ಲ. ಒಂದಿನಿತೂ ಚಿಂತೆ ಮಾಡದೆ ಅದು ತನಗೆ ಬೇಕಾದಂತೆ ನನ್ನನ್ನು ರೂಪಿಸಲು ಆಸ್ಪದ ನೀಡಿದೆ. ಸುಳಿಯಲ್ಲಿ ಮುಳುಗಿ ಸುಳಿಯೊಂದಿಗೆ ಹೊರಬಂದೆ. ನಾನು ಬದುಕಿದ್ದು ಹೀಗೆ.”
*****
೫. ಅತೀ ಶ್ರೇಷ್ಠ ಬೋಧನೆ
ಪ್ರಖ್ಯಾತ ಝೆನ್ ಗುರುವೊಬ್ಬ ತನ್ನ ಅತೀ ಶ್ರೇಷ್ಠ ಬೋಧನೆ ಎಂಬುದಾಗಿ ಹೇಳಿಕೊಂಡದ್ದು ಇದನ್ನು: ’ನಿಮ್ಮ ಮನಸ್ಸೇ ಬುದ್ಧ.’ ಅಧ್ಯಯನ ಮತ್ತು ಚಿಂತನಗಳನ್ನು ಕೋರುವ ಗಹನವಾದ ಆಲೋಚನೆ ಇದು ಎಂಬುದಾಗಿ ಭಾವಿಸಿದ ಸನ್ಯಾಸಿಯೊಬ್ಬ ಆಶ್ರಮವನ್ನು ಬಿಟ್ಟು ಕಾಡಿಗೆ ಹೋಗಿ ಈ ಒಳನೋಟದ ಕುರಿತು ಧ್ಯಾನ ಮಾಡಲು ನಿರ್ಧರಿಸಿದ. ಅಂತೆಯೇ ೨೦ ವರ್ಷ ಕಾಲ ಏಕಾಂತವಾಸಿಯಾಗಿದ್ದುಕೊಂಡು ಆ ಶ್ರೇಷ್ಠ ಬೋಧನೆಯ ಕುರಿತು ಆಳವಾದ ಚಿಂತನೆ ಮಾಡಿದ. ಒಂದು ದಿನ ಕಾಡಿನ ಮೂಲಕ ಪಯಣಿಸುತ್ತಿದ್ದ ಇನ್ನೊಬ್ಬ ಸನ್ಯಾಸಿಯನ್ನು ಸಂಧಿಸಿದ. ಆ ಸನ್ಯಾಸಿಯೂ ತನ್ನ ಗುರುವಿನ ಶಿಷ್ಯನಾಗಿದ್ದ ಎಂಬುದು ತಿಳಿದ ನಂತರ ಅವನನ್ನು ಕೇಳಿದ, “ ನಮ್ಮ ಗುರುವಿನ ಅತೀ ಶ್ರೇಷ್ಠ ಬೋಧನೆಯ ಕುರಿತು ನಿನಗೇನು ತಿಳಿದಿದೆ ಎಂಬುದನ್ನು ದಯವಿಟ್ಟು ಹೇಳು.” ಪ್ರಯಾಣಿಕನ ಕಣ್ಣುಗಳು ಹೊಳೆಯತೊಡಗಿದವು, “ಆಹಾ, ಈ ವಿಷಯದ ಕುರಿತು ಬಲು ಸ್ಪಷ್ಟವಾಗಿ ತಿಳಿಸಿದ್ದಾರೆ. ತನ್ನ ಅತೀ ಶ್ರೇಷ್ಠ ಬೋಧನೆ ಇಂತಿದೆ ಎಂಬುದಾಗಿ ಅವರು ಹೇಳಿದ್ದಾರೆ: ’ನಿಮ್ಮ ಮನಸ್ಸು ಬುದ್ಧ ಅಲ್ಲ.’
******