ಪಂಜು-ವಿಶೇಷ

ಜ್ಞಾನದ ಹರಿವಿನ ಸ್ಥಿತಿಗತಿ. ಏನು? ಎತ್ತ?: ರಕ್ಷಿತ್ ಶೆಟ್ಟಿ

ಒಂದು ಕಾಲವಿತ್ತು. ಬರಹಗಾರರು ಹಗಲಿರುಳೆನ್ನದೇ ಬರೆದು ತಮ್ಮ ಕೃತಿಗಳನ್ನು ಮುದ್ರಿಸಿ ಉರಿ ಮಳೆ ಚಳಿಯಲ್ಲಿಯೂ ಅಲೆದು ಪ್ರತಿಯನ್ನು ಮಾರುತ್ತಿದ್ದರು. ನಾಡು ನುಡಿಗಾಗಿ ಭಾಷೆಯ ಹಲವು ಮಗ್ಗುಲಲ್ಲಿ ಸಾಹಿತ್ಯ ಕೃಷಿ ಮಾಡಿ ಓದುಗರೊಡನೆ ಭಾವನೆಗಳನ್ನು ಬೆಸೆದುಕೊಳ್ಳುತ್ತಿದ್ದ ಸಮಯವದು. ಇಂಗ್ಲೀಷಿನ ಬರಹಗಾರರಿಗೆ ವಿಶೇಷ ಸ್ಕೋಪ್ ಸಿಗುತ್ತಿದ್ದರೂ ಸ್ವಭಾಷೆಯನ್ನು ಕೃತಿಗಳಲ್ಲಿ ಮೈತಾಳಿಸಿಕೊಂಡು ಭಾಷಾ ಸೇವೆ ಮಾಡಿರವುದು ಕೇವಲ ಕನ್ನಡಕ್ಕಷ್ಟೇ ಸೀಮಿತವಲ್ಲದ್ದು.

ಅಂದಿನ ಓದು :-

ಕೃತಿಯೊಂದನ್ನು ಮನೆಯವರೆಲ್ಲರೂ ಕಿತ್ತಾಡಿಕೊಂಡು ಆದಷ್ಟು ಬೇಗ ಓದುತ್ತಿದ್ದ ಕಾಲವಿತ್ತು. ಕಾಲ ಸಂದರ್ಭವೂ ಪೂರಕವಾಗಿದ್ದುದು ಬೇರೆ ಮಾತು. ವರ್ಷದಲ್ಲಿ ದುಡಿಯೋದನ್ನ ತಿಂಗಳಲ್ಲಿ ದುಡಿಯೋ ಧಾವಂತ ಆಗಿರಲಿಲ್ಲ. ಅನಕ್ಷರತೆಯಿಂದ ಅಕ್ಷರಸ್ಥತೆಯೆಡೆಗೆ ದಾಪುಗಾಲಿಕ್ಕುತ್ತಿದ್ದರೂ ಜ್ಞಾನದ ಒಳ ಹರಿವಿಗೆ ಹಾದಿ ಸುಗಮವಿತ್ತು. ಹೊಸ ಓದಿನ ಕಾಣುವಿಕೆ ಇಲ್ಲದಿರುವಾಗ ಹಳೆಯ ಪುಸ್ತಕಗಳನ್ನೇ ಮರು ತಿರುವಿ ಮುಚ್ಚಿಟ್ಟು ನೆಮ್ಮದಿಯಾಗುತ್ತಿದ್ದರು.

ಪ್ರಸಿದ್ಧತೆಯ ಆತುರ :-

ಬೇರೆ ಕ್ಷೇತ್ರಗಳಂತೆ ಸಾಹಿತ್ಯ ಕ್ಷೇತ್ರದಲ್ಲಿ ಏಕಾಏಕಿ ಪ್ರಸಿದ್ಧಿಯ ಶಿಖರವೇರುವುದು ಅಸಾಧ್ಯವೇನೋ? ಯಾಕೆಂದ್ರೆ ಸಾಹಿತ್ಯ ಕೃಷಿಯಲ್ಲಿ ಹೆಸರು ಮಾಡಲು ಸತತ ಅಧ್ಯಯನ ಮೇಲಾಗಿ ತಾಳ್ಮೆಯ ಅಗತ್ಯವಿದೆ. ಮನಸ್ಸು ಸಾಕಷ್ಟು ಅನುಭವ ಹಾಗೂ ಅನುಭಾವತೆ ಪಡೆದಿರಬೇಕು ಇದನ್ನೇ ಇರಬೇಕು ಅಡಿಗರು ‘ಶ್ರೀರಾಮನವಮಿಯ ದಿವಸ’ ಕವನದಲ್ಲಿ “ಹುತ್ತಗಟ್ಟದೆ ಚಿತ್ತ, ಮತ್ತೆ ಕೆತ್ತಿತೇನು” ಅಂದಿದ್ದು. ವ್ಯಕ್ತಿಯೊಬ್ಬನ ಪ್ರಖಂಡ ಪ್ರತಿಭೆಯ ಗುರುತಿಸುವಿಕೆಗೆ ಕೆಲವೇ ಬರಹಗಳ ಆಧಾರ ಸಾಕಾಗದು. ಏಕೆಂದರೆ ದಿನಕ್ಕೊಂದು ರೂಪದಲ್ಲಿ ಬಿಡುಗಡೆಯಾಗುವ ಕಂಪ್ಯೂಟರ್ ಕಾರು ಟೀವಿಯಂತಹ ವಸ್ತುವಲ್ಲವಲ್ಲ ಅಕ್ಷರಲೋಕ.

ಸಮಕಾಲೀನ ಓದು :-

ಪ್ರಸಕ್ತ ತಲೆಮಾರಿನವರಲ್ಲಿ ಸಮಾನ ಮನಸ್ಕರ ಚರ್ಚಾಯೂತ ಓದಿನ ವಿಸ್ತಾರ ಕಡಿಮೆಗೊಳ್ಳುತ್ತಿದೆ. ಇದಕ್ಕೆ ಜ್ಞಾನದ ವಿತರಣಾ ಸಾಧನಗಳ ವಿಸ್ತಾರವೂ ಕಾರಣವಿರಬಹುದು. ಈ ರೀತಿಯ ಓದಿಸಿಕೊಳ್ಳುವ ಮಾಧ್ಯಮದ ವಿಸ್ತರಣೆಯ ನೇರ ಪ್ರಭಾವ ಬೀರುವುದು ಕನ್ನಡದಂತಹ ಹಳಮೆಯೂತ  ಕಡಿಮೆ ಭಾಷಾ ವಿಸ್ತಾರತೆ ಹೊಂದಿರುವ ಭಾಷೆಯ ಮೇಲೆ. ನಿಂತ ನೀರಾಗದೇ ಸದಾ ಹರಿಯುತ್ತಿರುವ ಅಕ್ಷರ ಲೋಕದಲ್ಲಿ ಇಂಗ್ಲೀಷು ಹೆಚ್ಚಿನವರ ಆಯ್ಕೆಯಾದಂತಿದೆ. ಇದರಿಂದಾಗಿ ಕನ್ನಡದಂತಹ ಹಲವಾರು ಸೃಜನಶೀಲ ಕಲಾತ್ಮಕತೆಯ ಸಾಹಿತ್ಯದ ಕೃತಿಗಳು ಮೂಲೆಗುಂಪಾಗುವ ಸಾಧ್ಯತೆಯಿದೆ. ಹಾಗೆಂದು ಓದುವವರೇ ಇಲ್ಲವೆಂದಲ್ಲ ಜ್ಞಾನದ ಹರಿವಿನ ಮಾರ್ಗ ಬದಲಾಗಿದೆಯಷ್ಟೆ.

ಹುಡುಕಿ ಓದಿಕೊಳ್ಳುವವರಿಲ್ಲ :-

ಕೇವಲ ಕಾಲಹರಣಕ್ಕಾಗಿ ಓದುವ ಅಗತ್ಯತವೂ ಅಭ್ಯಾಸವೂ ಈಗಿಲ್ಲ ಹೊಸ ಸಾಹಿತ್ಯದೆಡೆಗಿನ ತುಡಿತವೂ ಮುಂಚಿನಂತಿಲ್ಲ ಕುವೆಂಪು, ರತ್ನಂ, ಬಿಎಂಶ್ರೀ, ಭೈರಪ್ಪ, ಅಡಿಗ, ರವೀಂದ್ರನಾಥರ ಸಾಹಿತ್ಯವನ್ನು ಹುಡುಕಿ ಓದುತ್ತಿದ್ದ ಕಾಲವಿನ್ನು ಬರಲಾರದೇನೋ ಹಳಗನ್ನಡದ ಸಾಹಿತ್ಯ, ಡಿವಿಜಿ, ಕೆ ಎಸ್ ನ ರ ಕವನಗಳ ಲಯಬದ್ದ ಗೊಣಗಾಟ ಕೇಳಸಿಗದೇನೋ.

ಮುಂದೇನು? :-

ಸಾಹಿತ್ಯದಭಿರುಚಿ ಇನ್ನೊಬ್ಬರಿಂದ ಎರವಲು ಪಡೆಯುವಂತಹದ್ದಲ್ಲ. ಮನದೊಳಗೇ ಒಡಮೂಡಬೇಕು. ಜಾಕ್ಸನ್, ರೆಹಮಾನ್, ಗುರುಕಿರಣ್ ರ ಸಂಗೀತವನ್ನು ಹುಚ್ಚೆದ್ದು ಪ್ರೀತಿಸುವಂತೆ ಇಷ್ಟಪಡಬೇಕು. ಇನ್ನಷ್ಟು ಪ್ರೋತ್ಸಾಹಕ ಪ್ರಕಟಣೆಯ ಅವಕಾಶಗಳು ಬಾಯ್ತೆರೆಯಬೇಕು. ದಲಿತ ಬಂಡಾಯ ಸಾಹಿತ್ಯವು ಓದುಗನ ಮನದಾಳ ಮುಟ್ಟಬೇಕು. ಅಕ್ಷರ ಲೋಕದಿಂದ ವಿಮುಖರಾಗುತ್ತಿರುವವರನ್ನು ಸಾಹಿತ್ಯದ ಮುಂಗಟ್ಟಿನತ್ತ ಧಾಂಗುಡಿಯಿಡುವಂತೆ ಮಾಡಬೇಕು.

ಲೇಖಕನೊಬ್ಬ ಭಾಷೆಯೊಂದರ ಪಾಯದ ಮೇಲೆ ನೆಲೆಯೂರಲು ಕಡಿಮೆಯೆಂದರೂ ಹತ್ತು ವರ್ಷಗಳ ಕಾಲಾವದಿ ಬೇಕು. ಇದಲ್ಲದೇ ಆರ್ಥಿಕತೆ ಜಾತಿಯ ಸೀಮಿತತೆಗಳು ಅದೆಷ್ಟೋ ಅಮೂಲ್ಯ ಬರಹಗಾರರನ್ನು ಮುಖ್ಯವಾಹಿನಿಗೆ ಬರದಂತೆ ತೊಡರುಗಾಲನ್ನಿಕ್ಕಿದ್ದು ಸುಳ್ಳಲ್ಲ. ಪ್ರಕಟಣೆಯ ಅವಕಾಶವಿದ್ದರೂ ಯುವ ಪೀಳಿಗೆಯು ಗುರುತಿಸುವ ದೃಷ್ಠಿ ಸರಿಯಿಲ್ಲವೋ? ಅಥವಾ ಆಮೆಗತಿಯ ನಿದಾನತೆ, ಲಾಭದಾಯಕತೆಯಿಂದಾಗಿ ಸಾಹಿತ್ಯವೇ ಗುರ್ತಿಸಿಕೊಳ್ಳುತ್ತಿಲ್ಲವೊ? ಎಂಬ ಜಿಜ್ಞಾಸೆ ಇಂದಿಗೂ ಉಳಿದಿದೆ.

ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಜ್ಞಾನದ ಹರಿವಿನ ಸ್ಥಿತಿಗತಿ. ಏನು? ಎತ್ತ?: ರಕ್ಷಿತ್ ಶೆಟ್ಟಿ

Leave a Reply

Your email address will not be published. Required fields are marked *