ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ: ಮೊಕಾಶಿ ಎಂ.ಎಚ್.


“ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂದು ಸಂಸ್ಕøತ ಶ್ಲೋಕದಲ್ಲಿ ತಿಳಿಸಲಾಗಿದೆ. ಇದರರ್ಥ ಜ್ಞಾನಕ್ಕಿಂತ ಮಿಗಿಲಾದುದು ಮತ್ತು ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನವೊಂದು ಸಾರ್ವತ್ರಿಕ ಶಕ್ತಿಯಾಗಿದೆ. ಶಿಕ್ಷಣದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ. ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳನ್ನು ಬೆಳಗಿಸಬಹುದಾಗಿದೆ. “ಜ್ಞಾನವೇ ಶಕ್ತಿಯಾಗಿದ್ದು ಅದರಿಂದಲೇ ಎಲ್ಲ ಕೆಲಸಕಾರ್ಯಗಳು ಸಾಧ್ಯ” ಎಂದು ಸಾಕ್ರೆಟಿಸ್ ಹೇಳಿದ್ದಾನೆ.

ಜ್ಞಾನವೆಂಬುದು ಕೇವಲ ಮಾಹಿತಿ ಸಂಗ್ರಹಣೆಯಲ್ಲ ಇದು ಮಾನವ ಜನಾಂಗದ ಅನುಭವಗಳ ಸಾರವಾಗಿದೆ. ಯಾವುದೇ ವಸ್ತು ಘಟನೆಯನ್ನು ವಸ್ತು ನಿಷ್ಠೆಯಿಂದ ಪರಾಮರ್ಶಿಸಿ ನೋಡುವ ರೀತಿಯೇ ಜ್ಞಾನವಾಗಿದೆ. ಯಾವುದೇ ವಿಷಯದ ಸರಿ – ತಪ್ಪನ್ನು ತಿಳಿಯುವ ಮಾನಸಿಕ ಸಾಮಥ್ರ್ಯವಾಗಿದೆ. ಹೀಗಾಇ ಜ್ಞಾನದಿಂದ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಆಶಾವಾದಿತನ,ಕ್ರಿಯಾಶೀಲತೆ ಹಾಗೂ ನಿರ್ಧಾರ ಸಾಮಥ್ರ್ಯಗಳು ಮೂಡಿ ಬರುತ್ತವೆ. ಇಂತಹ ಜ್ಞಾನರ್ಜನೆಯ ಗುರಿ ಶಿಕ್ಷಣದ್ದಾಗಿದೆ. ಶಿಕ್ಷಣವು ಮಗುವಿನಲ್ಲಿ ಜ್ಞಾನವನ್ನು ಮೂಡಿಸುವ ಗುರಿಹೊಂದಿದೆ. ಶಿಕ್ಷಣ ಚಿಂತಕರು ಹೇಳುವಂತೆ ‘ಜ್ಞಾನವು ಕೇವಲ ವಿಷಯ ಸಂಗ್ರಹಣೆಯಲ್ಲ. ಬದುಕನ್ನು ರೂಪಿಸುವಂತಹ ಮಾನವ ಜನಾಂಗದ ಅತ್ಯುನ್ನತ ಪ್ರಗತಿಗೆ ಪೂರಕವಾಗಬಲ್ಲ ಜ್ಞಾನ ನಿಜವಾದ ಜ್ಞಾನವಾಗಿದೆ’ ಎಂದಿದ್ದಾರೆ. ಹೀಗಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅವಶ್ಯಕವಾದ ಜ್ಞಾನವನ್ನು ನೀಡುವುದು ಶಿಕ್ಷಕರ ಹಾಗೂ ಪಾಲಕರ ಆಧ್ಯ ಕರ್ತವ್ಯವಾಗಿದೆ.

ಸ್ವಾಮಿ ವಿವೇಕಾನಂದರು ಶಿಕ್ಷಣದ ಪ್ರಮುಖ ಗುರಿಗಳಲ್ಲಿ ಜ್ಞಾನವೂ ಒಂದಾಗಿದೆ ಎಂದಿದ್ದಾರೆ. ಅಲ್ಲದೇ ನಾವು ಪಡೆದ ಜ್ಞಾನವನ್ನು ವಿಚಾರದ ಮೂಲಕ ಮೆಲುಕು ಹಾಕಬೇಕು, ಅದು ನಮ್ಮ ವ್ಯಕ್ತಿತ್ವದೊಡನೆ ಒಂದಾಗಬೇಕು, ನಮ್ಮ ನಡೆನುಡಿಗಳಲ್ಲಿ ಪ್ರತಿಫಲಿಸಬೇಕು, ಪ್ರಶ್ನಿಸುವ ಮನೋಭಾವವನ್ನು ಮೂಡಿಸಬೇಕು, ಇದರಿಂದ ಪಡೆದ ಜ್ಞಾನವು ಸರಿಯಾಗಿ ಮಧಿಸಲ್ಪಟ್ಟು, ಅದು ನಮ್ಮ ವ್ಯಕ್ತಿತ್ವ ವ್ಯವಸ್ಥೆಯೊಂದಿಗೆ ಒಂದಾಗುತ್ತದೆ. ಮನಃಶಕ್ತಿ ವೃದ್ಧಿಯಾಗುತ್ತದೆ. ಆಗ ಜ್ಞಾನಾಹಾರ ಬೆಳೆದು ಮಗುವಿನಲ್ಲಿನ ಶೈಕ್ಷಣಿಕ ಗುಣಗಳು ಪ್ರಕಾಶಿಸುತ್ತವೆ ಎಂದಿದ್ದಾರೆ. ಸರ್ವಜ್ಞನೂ ಕೂಡ ಜ್ಞಾನದ ಬಗ್ಗೆ ಈ ರೀತಿಯಾಗಿ ಹೇಳಿದ್ದಾನೆ.

ಜ್ಞಾನದಿಂ ಮೇಲಿಲ್ಲ |ಶ್ವಾನದಿಂ ಕೀಳಿಲ್ಲ
ಭಾನುಮಂಡಲದಿಂ ಬೆಳಗಿಲ್ಲ ಜಗದೊಳಗೆ |
ಜ್ಞಾನವೇ ಮೇಲು ಸರ್ವಜ್ಞ | ಎಂದಿದ್ದಾನೆ.

ಮಗುವಿನ ಗುರಿಯನ್ನು ತಲುಪಿಸುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿದೆ. ಸಾಮಾನ್ಯ ಶಿಕ್ಷಕ ಬೋಧಿಸುತ್ತಾನೆ. ಉತ್ತಮ ಶಿಕ್ಷಕ ನೀಡುತ್ತಾನೆ, ಮತ್ತು ಶ್ರೇಷ್ಠ ಶಿಕ್ಷಕ ಸ್ಪೂರ್ತಿಯನ್ನೀಯುತ್ತಾನೆ. ಎಂಬ ಹೇಳಿಕೆ ಪ್ರಸಿದ್ಧಿಯಾಗಿದೆ. ಉತ್ತಮ ಶಿಕ್ಷಕನು ವಿದ್ಯಾರ್ಥಿಗಳ ಜ್ಞಾನಾಕಾಂಕ್ಷೆಯನ್ನು ಕೆರಳಿಸುವಂತೆ ಮಾಡುತ್ತಾನೆ. “ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲವನ್ನು ಕೆರಳಿಸದೇ ಬೋಧಿಸುವ ಶಿಕ್ಷಕನು ತಣ್ಣನೆಯ ಕಬ್ಬಿಣವನ್ನು ಬಡಿಯುತ್ತಿರುತ್ತಾನೆ” ಎಂದು ಹೇಳಲಾಗಿದೆ. ತಣ್ಣನೆಯ ಕಬ್ಬಿಣ ಬಡಿದರೆ ಯಾವ ರೂಪವನ್ನು ನೀಡಲಾಗದು ಕಾದ ಕಬ್ಬಿಣವನ್ನು ಬಡಿದರೆ ಅದಕ್ಕೆ ಬೇಕಾದ ರೂಪವನ್ನು ಕೊಡಬಹುದಾಗಿದೆ. ಹಾಗೆಯೇ ವಿದ್ಯಾರ್ಥಿಗಳು ಜ್ಞಾನದ ಹಂಬಲದಿಂದ ಕಾದಿರುವಾಗಲೇ ಅವರ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಜ್ಞಾನದ ಹಂಬಲ ಕೆರಳಿದರೆ ಅವರೇ ಜ್ಞಾನವನ್ನು ಅರಸಿಕೊಂಡು ಹೋಗುತ್ತಾರೆ. ಸ್ವತಂತ್ರವಾಗಿ ಆಲೋಚಿಸಿ ಹೆಚ್ಚು-ಹೆಚ್ಚು ಜ್ಞಾನವನ್ನು ಸಂಪಾದಿಸುತ್ತಾರೆ. ಜ್ಞಾನಾರ್ಜನೆಯ ಸಾಮಥ್ರ್ಯವನ್ನು ವಿದ್ಯಾರ್ಥಿಗಳಿಗೆ ನೀಡುವುದು ಶಿಕ್ಷಕನ ಪ್ರಮುಖ ಕರ್ತವ್ಯವಾಗಿದೆ. ಆದುದರಿಂದ “ಉತ್ತಮ ಶಿಕ್ಷಕರು ಕುಡಿಯುವುದಕ್ಕೆ ಏನನ್ನಾದರೂ ನೀಡುವುದಿಲ್ಲ ಬದಲಾಗಿ ನಿಮ್ಮ ಬಾಯಾರಿಕೆಯನ್ನು ಹೆಚ್ಚಿಸುತ್ತಾರೆ” ಎಂದು ಹೇಳಲಾಗಿದೆ.

ಶ್ರೇಷ್ಠ ಶಿಕ್ಷಕನು ಜೀವನದ ಉದಾತ್ತ ಸ್ಪೂರ್ತಿಯನ್ನು ನೀಡುತ್ತಾನೆ. “ಜ್ಞಾನವೆಂಬುದು ಒಂದು ಶಕ್ತಿ, ಅದೊಂದು ಮಾರಕಾಸ್ತ್ರವಿದ್ದಂತೆ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಜ್ಞಾನವು ದುಷ್ಟ ವ್ಯಕ್ತಿಯ ಕೈಗೆ ಸಿಕ್ಕರೆ ಅದನ್ನು ನಾಶಮಾಡುವುದಕ್ಕೆ ಉಪಯೋಗಿಸುತ್ತಾನೆ. ಅದೇ ಅಸ್ತ್ರವನ್ನು ಸದ್ಗುಣಸಂಪನ್ನ ಸಭ್ಯ ವ್ಯಕ್ತಿಯು ರಚನಾತ್ಮಕ ಕಾರ್ಯಕ್ಕೆ ಉಪಯೋಗಿಸುತ್ತಾನೆ. ಒಂದು ಮಗುವಿಗೆ ಆಯುಧವನ್ನು ಕೊಟ್ಟರೆ ಅದು ಎಲ್ಲವನ್ನು ಕತ್ತರಿಸಿ ತನ್ನ ಕೈಯನ್ನು ಕತ್ತರಿಸಿಕೊಳ್ಳುತ್ತದೆ. ಏಕೆಂದರೆ ಯಾವುದೇ ಜವಾಬ್ದಾರಿಯ ಪ್ರಜ್ಞೆ ಅದಕ್ಕಿರುವುದಿಲ್ಲ. ಜ್ಞಾನಹೊಂದಿದ ಮಗುವು ಹಾಗೆಯೇ ಇದ್ದರೆ ಅವನಿಂದ ಸಮಾಜಕ್ಕಾಗುವ ಹಾನಿಯನ್ನು ಊಹಿಸಿಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕನ ಪ್ರಮುಖ ಗುರಿಯಾಗಿದೆ. ಇಂತಹ ಗುರಿಯನ್ನು ಆದರ್ಶ ಶಿಕ್ಷಕನೇ ತಲುಪಬಲ್ಲನು.

ಶೇಕ್ಸ್‍ಪೀಯರ್ ಜ್ಞಾನವನ್ನು ಕುರಿತು ‘ಅಜ್ಞಾನವೆನ್ನುವುದು ದೆವರು ಕೊಟ್ಟ ಶಾಪ, ಜ್ಞಾನವೆನ್ನುವುದು ಒಂದು ರೆಕ್ಕೆ ಅದರ ಮೂಲಕ ನಾವು ಸ್ವರ್ಗಕ್ಕೆ ಹಾರಬಹುದು’ ಎಂದಿದ್ದಾನೆ. ಇತ್ತೀಚಿನ ದಿನಗಳಲ್ಲಿ ಜ್ಞಾನ ನಿರ್ಧಾರ ಬಹುಮಟ್ಟಿಗೆ ಪಠ್ಯಪುಸ್ತಕಗಳಲ್ಲಿ ನಮೂದಿತ ಮಾಹಿತಿಯ ಬಿಂದುಗಳಿಗೆ ಸೀಮಿತವಾಗುತ್ತಿದೆ ಮಕ್ಕಳ ಕಲಿಕೆಯ ಮಟ್ಟವನ್ನು ನಿರ್ಧರಿಸುವಾಗ ಅವರ ಜ್ಞಾನದ ಮಟ್ಟ, ಗ್ರಹಣಶಕ್ತಿ, ಅಭಿವ್ಯಕ್ತಿ ಸಾಮಥ್ರ್ಯ ಪ್ರಶಂಸಾಮಟ್ಟ, ಕೌಶಲ್ಯಗಳು ಹಾಗೂ ಈ ಕೌಶಲ್ಯಗಳನ್ನು ಜೀವನದಲ್ಲಿ ಆಚರಣೆಗೆ ತರುವ ಸಾಮಥ್ರ್ಯಗಳ್ನು ತಿಳಿದು ಜ್ಞಾನ ಸಾಮಥ್ರ್ಯವನ್ನು ನಿರ್ಧರಿಸಬೇಕಾಗಿದೆ. ಅಂದಾಗ ಮಾತ್ರ ಶಿಕ್ಷಣದ ಪರಿಣಾಮವಾಗಿ ವ್ಯಕ್ತಿ ಜೀವನ ರಂಗವನ್ನು ಪ್ರವೇಶಿಸಿದಾಗ ಬರುವ ಸಮಸ್ಯೆಗಳನ್ನು ಸ್ವ-ಸಾಮಥ್ರ್ಯದಿಂದ ಎದುರಿಸುವ ಶಕ್ತಿ ಪಡೆಯಲು ಸಾಧ್ಯ.

“ಜ್ಞಾನಕ್ಕೆ ವಿದ್ಯೆಯೂ, ವಿದ್ಯೆಗೆ ಓದು ಬರಹವು ತಳಹದಿ” ಎಂದು ಶ್ರೀ.ಬಿ.ಎಂ.ಶ್ರೀಕಂಠಯ್ಯನವರು ಹೇಳಿದ್ದಾರೆ. ಜ್ಞಾನವು ಕದಿಯಲು ಸಾದ್ಯವಿರದ ವಸ್ತುವಾಗಿದೆ. ಬೆಳಕು, ಜ್ಞಾನದ ಸಂಕೇತವಾದರೆ ಕತ್ತಲೆಯು ಅಜ್ಞಾನದ ಕುರುಹಾಗಿದೆ. ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲು ಹರಿಯುತ್ತದೆ. ಜ್ಞಾನದಿಂದ ಬುದ್ದಿಮಾತ್ರವಲ್ಲದೇ ಮೋಕ್ಷಕೂಡ ಪಡೆಯಬಹುದಾಗಿದ. ಮೋಕ್ಷಸಂಪಾದನೆಯ 4 ಮಾರ್ಗಗಳಲ್ಲಿ (ಯೋಗ, ಭಕ್ತಿ, ಜ್ಞಾನ, ಮತ್ತು ಕರ್ಮ) ಜ್ಞಾನವೂ ಒಂದಾಗಿದೆ. ಆದುದರಿಂದ “ಸ ವಿಧ್ಯಾಯಾ ವಿಮುಕ್ತಯೇ” ಅಂದರೆ ಜ್ಞಾನ ಪಡೆದು ಅಜ್ಞಾನದಿಂದ ಮುಕ್ತವಾಗುವುದೇ ಮೋಕ್ಷವಾಗಿದೆ. ಹೀಗಾಗಿ ಮಗುವಿನ ಸರ್ವತೋಮುಖ ಅಭಿವೃದ್ದಿಯಲ್ಲಿ ಜ್ಞಾನವು ಮಹತ್ವದ ಪಾತ್ರ ವಹಿಸುವದು ಎಂದರೆ ತಪ್ಪಾಗಲಾರದು. ಯಾರು ಶ್ರಧ್ಧೆಯಿಂದ ನಿರಂತರ ಪ್ರಯತ್ನ ಮಾಡುತ್ತಾರೆ ಅವರಿಗೆ ಜ್ಞಾನ ಲಭಿಸುತ್ತದೆ ಹೀಗಾಗಿ ‘ಶ್ರದ್ಧಾವಾನೇ ಲಭ್ಯತೇ ಜ್ಞಾನಂ’ ಎಂದು ಹೇಳಲಾಗಿದೆ.
-ಮೊಕಾಶಿ ಎಂ ಎಚ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ
1 1 vote
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x