ಜೋಗದ ಜಾಲ: ಪ್ರಶಸ್ತಿ

prashasti

ಮಳೆಗಾಲದಲ್ಲಿನ ಮಲೆನಾಡು ಅಂದ್ರೆ ಎಲ್ಲೆಡೆ ಹಚ್ಚ ಹಸಿರು. ಬಿಟ್ಟೂ ಬಿಡದೇ ಸುರಿಯೋ ಮಳೆಗೆ ಕಗ್ಗಲ್ಲುಗಳ ನಡುವೆ ಬೈತಲೆ ತೆಗೆದಂತಹ ಜಲಪಾತಗಳು, ಹಸಿರು ಹೊದ್ದ ಕಾನನಗಳು. ಇವುಗಳನ್ನು ಕಣ್ತುಂಬಿಕೊಳ್ಳೋಕೆ ಎಲ್ಲೆಡೆಯಿಂದ ಬರ್ತಿರೋ ಪ್ರವಾಸಿಗರಿಗೆ ರೆಕ್ಕೆಬಿಚ್ಚಿದ ನವಿಲುಗಳ, ಇಂಪು ಕಂಠದ ಕೋಗಿಲೆಗಳ ಸ್ವಾಗತ. ಮಳೆ ಹೆಚ್ಚಾದಂತೆಲ್ಲಾ ಹೆಚ್ಚಾಗೋ ಜಲಪಾತಗಳ ಭೋರ್ಗರೆತಕ್ಕೆ ಸುತ್ತಲಿನ ಜಾಗದಲ್ಲೆಲ್ಲಾ ಮಂಜು ಮುಸುಕಿ ಜಲಪಾತದ ನೋಟವೇ ಮುಚ್ಚಿಹೋಗೋದೂ ಉಂಟು. ಅಂತಹ ಸಂದರ್ಭದಲ್ಲೆಲ್ಲಾ ಬೀಸೋ ಗಾಳಿಯ ಜೊತೆ ತೆರೆತೆರೆಯಾಗಿ ಸರಿವ ಮಂಜ ಪರದೆಯ ಹಿಂದಿನ ಜಲಪಾತವನ್ನು ಕಣ್ತುಂಬಿಕೊಳ್ಳೋ ಅನುಭವವೇ ಅದ್ಭುತ. ಹಾಗೇ ಸರಿಯುತ್ತಿದ್ದ ಮಂಜ ನಿರೀಕ್ಷೆಯಲ್ಲಿದ್ದಾಗ ಬೀಸಿದ ಗಾಳಿಗೆ ಹಾರಿತ್ತೊಂದು ವೇಲು. ಅದನ್ನು ಹಿಡಿಯೋಕಂತ ಓಡಿದ ಚೆಲುವೆಯ ಹಿಂದೆಯೇ ಇವನ ಹೃದಯವೂ ಹಾರಿಹೋಗಿತ್ತು.

ಅವಳು ಮಂಜುಳ. ಅವಳ ಕಿಲ ಕಿಲ ನಗು ಮಳೆಗಾಲದ ಝರಿಯಂತೆ. ರೈತರಿಗೆ  ಖುಷಿ ತರೋ ಸ್ವಚ್ಛ,ಶುಭ್ರ ನೀರ ಧಾರೆಯಂತೆ ಅವಳ ಶ್ವೇತ ದಂತಪಂಕ್ತಿಗಳಾಚೆಗಿನ ಮಂದಹಾಸ. ವೇಲು ಸಿಕ್ಕ ಖುಷಿಯೊಂದಿಗೆ ಜಲಪಾತದದೆದುರ ಮಂಜ ಪರದೆ ಸರಿದದ್ದು ಅವಳು ಮತ್ತವಳ ಗೆಳತಿಯರಿಗೆ ಹರ್ಷವಿತ್ತಿದ್ರೆ ಅವರ ನಗುವಲೆ ಅವರಿಗೇ ಅರಿವಿರದಂತೆ ಎಷ್ಟೋ ನೋಟಗಳನ್ನು ತಮ್ಮತ್ತ ಸೆಳೆದಿತ್ತು. ಆ ರೀತಿ ಸೆಳೆಯಲ್ಪಟ್ಟವರಲ್ಲಿ ಮಾಧವನೂ ಒಬ್ಬ. ಮಂಜ ಪರದೆ ಸರಿದು ರಾಜ, ರಾಣಿ, ರೋರರ್, ರಾಕೆಟ್ಟುಗಳ ಸೊಬಗು ಹಂತಹಂತವಾಗಿ ಅನಾವರಣಗೊಳ್ಳುತ್ತಿದ್ದರೂ ಇವನ ದೃಷ್ಟಿ ಮಾತ್ರ ಅವಳತ್ತಲೇ ನೆಟ್ಟಿತ್ತು. ಯಾಕೋ ಇತ್ತ ತಿರುಗಿದ ಅವಳ ದೃಷ್ಟಿ ಇವನೊಂದಿಗೆ ಬೆರೆತಿದ್ದು ಕ್ಷಣಕಾಲ ಮಾತ್ರವೋ ಅಥವಾ ಹಾಗೆ ಅವನಿಗನಿಸಿತ್ತೋ ಗೊತ್ತಿಲ್ಲ. ಕೆಲ ನಿಮಿಷಗಳಲ್ಲೇ ಆ ಗುಂಪು ಅಲ್ಲಿಂದ ಮರೆಯಾಗಿತ್ತಾದ್ರೂ ಅವಳ ಗುಂಗಲ್ಲೇ ಇದ್ದ ಇವನಿಗೆ ಅದರ ಅರಿವಾಗೋದ್ರಲ್ಲಿ ಇನ್ನೊಂದು ಮಂಜ ಪರದೆ ಜಲಪಾತದೆದುರು ಬಂದಾಗಿತ್ತು ! 

ಮಂಜ ತೆರೆ ಇಷ್ಟು ಹೊತ್ತು ಕಣ್ಣಾಮುಚ್ಚಾಲೆಯಾಡುತ್ತಿದ್ದ ಜಲಪಾತವನ್ನಷ್ಟೇ ಅಲ್ಲ,ತನ್ನ ಜೀವನದ ಮಹತ್ವದ ಕ್ಷಣವನ್ನೂ ಮುಚ್ಚುತ್ತಿದೆಯಾ ಅನಿಸಿತ್ತವನಿಗೆ. ಮಂಜ ತೆರೆ ಮತ್ತೆ ತೆರೆಯೋವರೆಗೆ ಕಾದು ಜಲಸಿರಿಯ ಸವಿಯನ್ನನುಭವಿಸಲೇ ಅಥವಾ ಆಗಲೇ ಹೋದವಳು ಎತ್ತ ಹೋದಲೆಂದು ತಿಳಿಯಲೇ ಎಂಬ ದ್ವಂದ್ವ ಕ್ಷಣಕ್ಷಣವೂ ಕಾಡತೊಡಗಿ ಮನಸ್ಸಿನ ಮಾತು ಕೇಳೋ ಬದಲು ಹೃದಯ ಹಾರಿದತ್ತ ಸಾಗಿದನವ. ಅಲ್ಲೆಲ್ಲಿ ಹುಡುಕಿದರೂ ಅವಳ ಸುಳಿವಿಲ್ಲ. ಇಡೀ ಜೋಗಕ್ಕೆ ಅವಳೊಬ್ಬಳೇ ಬಂದಿದ್ದರಾದರೂ ಹೇಗಾದ್ರೂ ಹುಡುಕಬಹುದಿತ್ತೇನೋ. ಬರೋ ನೂರಾರು ಪ್ರವಾಸಿಗರ ಮಧ್ಯೆ ಕಳೆದುಹೋದವಳನ್ನು ಎಲ್ಲಂತ ಹುಡುಕೋದು ? ಜಲಪಾತವನ್ನಾದ್ರೂ ಕಣ್ತುಂಬಿಕೊಳ್ಳೋಣವೆಂದು ವಾಪಾಸ್ಸುಬಂದ್ರೂ ಬೀಳುತ್ತಿದ್ದ ನೀರ ಧಾರೆಯ ಬದಲು ಅವಳ ಮುಖವೇ ಕಂಡಂತಾಗುತ್ತಿತ್ತು ! 

ಆ ಜಾಗದಲ್ಲಿ ಇದ್ದಷ್ಟೂ ಅವಳ ಮುಖವೇ ಕಾಣುತ್ತೆ ಅಂದುಕೊಂಡು ಹೊರಬಂದು ಬೇರೆಲ್ಲಾದರೂ ಹೋಗಬೇಕೆಂದು ಅಂದುಕೊಳ್ಳುವಷ್ಟರಲ್ಲೇ ಜಲಪಾತದಿಂದ ಎಂಟು ಕಿ.ಮೀ ದೂರದಲ್ಲೇ ಕಲ್ಸಂಕ ಅಂತೊಂದು ಜಾಗವಿದೆ ಅಂತ ಗೆಳೆಯನೊಬ್ಬ ಹೇಳಿದ ಮಾತು ನೆನಪಾಯ್ತು. ಹರಿಯೋ ಝರಿಯ ಮೇಲೆ ನಿರ್ಮಿತವಾದ ನೈಸರ್ಗಿಕ ಬ್ರಿಡ್ಜೇ ಕಲ್ಸಂಕ. ಪ್ರಪಂಚದಲ್ಲೇ ಎರಡನೇ ಅತೀ ಉದ್ದದ ನೈಸರ್ಗಿಕ ಬ್ರಿಡ್ಜು ಎಂದು ಎಂದೋ ಪತ್ರಿಕೆಯಲ್ಲಿ ಅದರ ಬಗ್ಗೆ ಓದಿದ್ದ ನೆನಪಾಗಿ ಅದರ ಬಳಿ ಸಾಗೋಕೆ ಬಸ್ಸೋ, ಆಟೋವೋ ಸಿಗುತ್ತೆಂದು ಹುಡುಕಿದ್ರೂ ಏನೂ ಸಿಕ್ಕದೇ ಕೊನೆಗೆ ಆ ಮಾರ್ಗವಾಗಿ ಬೇರೆ ಊರಿಗೆ ಸಾಗುತ್ತಿದ್ದ ಕಾರವರ ಜೊತೆ ಸೇರಿ ಕಲ್ಸಂಕ ತಲುಪಿದ್ದ. ಹೆಸರೇ ಹೇಳುವಂತೆ ನೆಲದಿಂದ ಸುಮಾರು ಹತ್ತು ಹದಿನೈದಡಿ ಎತ್ತರಕ್ಕಿರುವ ನಲವತ್ತೈವತ್ತು ಅಡಿ ಉದ್ದದ ಸೇತುವದು. ಅದರ ಕೆಳಗೆ ನದಿ ಮೆಲುವಾಗಿ ಹರಿಯುತ್ತಿದ್ದರೆ ಅತ್ತಿತ್ತ ಹಸಿರ ರಾಶಿ. ಸೇತುವಿನಾಚೆಯೊಂದು ಗುಡಿ. ಕೆಳಭಾಗದಲ್ಲೂ ಒಂದು ಚೌಡಿಯಿದ್ದಾಳೆಂದು ನಂಬುವ ಜನ ಇಟ್ಟ ಕುಂಕುಮಗಳಿರೋ ಕಲ್ಲುಗಳು. ಆಚೆ ಬದಿ ಹಸಿರ ಹೊನ್ನು ಹೊದ್ದ ಗದ್ದೆಗಳಿದ್ದರೆ ಈಚೆ ಬದಿ ಜಂಬಿಟ್ಟಿಗೆಗಳ ರಾಶಿ ಮತ್ತು ಇಟ್ಟಿಗೆ ತೆಗೆಯೋಕೆಂತಲೇ ಮಾಡಿರುವ ಜಾಗ. ಚೌಡಿಯೋ ದುರ್ಗಿಯೋ ಇದ್ದಾಳೆಂಬ ನಂಬಿಕೆಯಿರದಿದ್ದರೆ ಹಂತಹಂತವಾಗಿ ಕಲ್ಸಂಕವೂ ಯಾರದೋ ಮನೆಯ ಚಪ್ಪಡಿಯಾಗುತ್ತಿತ್ತೇನೋ ಎನಿಸಿತವನಿಗೆ. ಜೋಗದಂತೆ ಭೋರ್ಗರೆಯದೇ ಶಾಂತವಾಗಿ ಹರಿಯುತ್ತಿದ್ದ ಝರಿ ಇಷ್ಟವಾಯ್ತವನಿಗೆ. ಹಾಗೇ ನೀರಿಗಿಳಿದು ಕೊಂಚ ಹೊತ್ತು ಹರಿವ ನೀರಲ್ಲಿ ಕಾಲಾಡಿಸುತ್ತಾ ಕೂತವನಿಗೆ ಸೇತುವಿನ ಮೇಲೊಂದಿಷ್ಟು ಹೊತ್ತು ಕೂತು ಧ್ಯಾನಿಸಿದರೆ ಹೇಗನ್ನಿಸಿತು. ಹೇಗಿದ್ರೂ ಆ ಜಾಗದಲ್ಲಿ ತನ್ನ ಬಿಟ್ಟರೆ ಬೇರ್ಯಾರೂ ಇಲ್ಲ. ಬರುವಾಗ ಇಟ್ಟಿಗೆಗಳ ಪಕ್ಕದಲ್ಲೊಂದು ಸೈಕಲ್ಲು ಕಂಡಿತ್ತಾದರೂ ಸೇತುವಿನ ಬಳಿ ಯಾರೂ ಇರಲಿಲ್ಲ.

ಸೈಕಲ್ಲಿನ ಸವಾರ ಇಲ್ಲ ಸವಾರಿಣಿ ಅಲ್ಲೇ ಎಲ್ಲೋ ಇದ್ದು ಸದ್ಯದಲ್ಲೇ ವಾಪಾಸ್ಸು ಬರಬಹುದೇ ? ಬಂದು ನಿರ್ಜನ ಸೇತುವಿನ ಮೇಲೆ ಧ್ಯಾನಕ್ಕೆ ಕೂತಿರೋ ವಿಚಿತ್ರ ಆಸಾಮಿಯನ್ನು ನೋಡಿ ಗಾಬರಿಗೊಳ್ಳಬಹುದೇ ಎಂದನಿಸಿತೊಮ್ಮೆ. ಜಗಕ್ಕಾಗಿ ತಾನು ಬಾಳಬೇಕೇ ? ತನಗಾಗಿ ಬದುಕಿದರೆ ಸಾಕೆನಿಸಿ ಸೇತುವಿನ ಮೇಲೆ ಹತ್ತಿ ಕೂತ. ಹೊಳೆಯಂಚಲ್ಲಿ ಚಿಗುರಿದ್ದ ಸಂಪಿಗೆಯ ಪರಿಮಳದಲ್ಲಿ, ಕೆಳಗೆ ಹರಿಯುತ್ತಿರುವ ನದಿಯ ನಿನಾದ, ಹಕ್ಕಿಗಳ ಚಿಲಿಪಿಲಿಯ ಪ್ರಶಾಂತ ಪರಿಸರದಲ್ಲಿ ಅದೆಷ್ಟು ಹೊತ್ತು ಹಾಗೇ ಕುಳಿತಿದ್ದನೋ ಗೊತ್ತಿಲ್ಲ. ಕಣ್ಣು ಬಿಟ್ಟು ನೋಡಿದರೆ ಪಕ್ಕದಲ್ಲೇ ಒಬ್ಬ ಹುಡುಗ. ತನ್ನನ್ನೇ ನೋಡುತ್ತಿದ್ದ ಅವನನ್ನು ನೋಡಿ ಇವನಿಗೆ ಹೆದರಿಕೆಯಾಗಿ ಒಮ್ಮೆ ಹಿಂದೆ ಸರಿದ. ಇವನ ದಿಢೀರ್ ಚಲನೆಯನ್ನು ನೋಡಿ ಅವನೂ ಹೆದರಿ ಹಿಂದೆ ಸರಿದ. ಚೂರು ಆಯ ತಪ್ಪಿದ್ರೆ ಸೇತುವೆಯಿಂದ ಕೆಳಗೇ ಬೀಳುತ್ತಿದ್ದ ಅವನ ಅವಸ್ಥೆಯನ್ನು ನೋಡಿ ಇವನಿಗೆ ನಗು ಬಂತು. ನಗುತ್ತಿದ್ದ ಮಾಧವನಿಂದ ತನ್ನ ಮಂಕುತನ ನೆನಪಾಗಿ ಹುಡುಗನಿಗೂ ನಗುವುಕ್ಕಿತು. ಅಚ್ಚರಿ, ನಿರಾಸೆ,ಪ್ರಶಾಂತತೆ, ಭಯ, ನಗು..ಹೀಗೆ ಅದೆಷ್ಟು ಸ್ಥಾಯಿ ಭಾವಗಳು ತನಗೆ ಕೊಂಚ ಕಾಲದಲ್ಲೇ ಕಾಡಿದ ಬಗೆ ಮಾಧವನಿಗೆ ಅಚ್ಚರಿ ಮೂಡಿಸಿತ್ತು. ಅವನೊಂದಿಗೆ ಆ ಸ್ಥಳದ ಬಗ್ಗೆಯೊಂದಿಷ್ಟು ಮಾಹಿತಿ ಕಲೆಹಾಕಿ ಹೊರಡಲನುವಾದ ಮಾಧವನಿಗೆ ಅವನೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳೋ ಮನಸ್ಸಾಯ್ತು. ಏ ತಡೆಯೋ ಹುಡುಗ. ನಿನ್ನೊಂದಿಗೆ ಒಂದು ಫೋಟೋ ತಗೊಳ್ಳೋಣ ಅಂತ ತನ್ನ ಮೊಬೈಲಲ್ಲೊಂದು ಸೆಲ್ಪಿ ತೆಗೆದುಕೊಂಡು ತನ್ನ ಜೇಬಿನಿಂದೊಂದು ಚಾಕಲೇಟು ತೆಗೆದು ಅದನ್ನು ಬೇಡವೆನ್ನುತ್ತಿದ್ದ ಹುಡುಗನ ಕೈಗಿತ್ತು ಹೊರಡಲನುವಾದ ಮಾಧವ. "ನೀವೂ ಆ ಪಿಂಕ್ ಡ್ರೆಸ್ಸಿನ ಅಕ್ಕನ ತರಾನೆ. ಎಷ್ಟು ಸ್ವೀಟ್.." ಹೊರಡಲುವಾಗಿದ್ದ ಮಾಧವನಿಗೆ ಹೆಜ್ಜೆಗಳನ್ನ ಹುಡುಗನ ಈ ಮಾತುಗಳು ತಡೆದು ನಿಲ್ಲಿಸಿದವು. 

"ಏನಂದೆ ? ಯಾವ ಪಿಂಕ್ ಅಕ್ಕ" ಅಂದ. 
"ಈಗ ಸ್ವಲ್ಪ ಹೊತ್ತಿನ ಮುಂಚೆ ಒಂದಿಷ್ಟು ಅಕ್ಕಂದಿರು ಕಲ್ಸಂಕ ಹುಡುಕ್ತಾ  ಬಂದಿದ್ರು . ಅದ್ರಲ್ಲೊಬ್ಳು ಪಿಂಕ್ ಚೂಡಿಧಾರ, ವೇಲು ಹೊದ್ದಿದ್ದ ಅಕ್ಕ ಎಲ್ಲರ ಜೊತೆಗೂ ನಗುನಗುತ್ತಾ ಮಾತಾಡ್ತಿದ್ಳು. ಆಚೆ ದಡದಲ್ಲಿದ್ದ ನಾನೇ ಅವ್ರಿಗೆ ಈ ಸ್ಥಳದ ಬಗ್ಗೆ ಹೇಳಿದ್ದೆ. ಇದ್ನೆಲ್ಲಾ ನೋಡಿದ್ದ ಅವ್ರು ಹೋಗ್ತಾ ಹೋಗ್ತಾ ನಂಗೊಂದು ಚಾಕಲೇಟ್ ಕೊಟ್ಟು ಹೋಗಿದ್ರು. ಸ್ವೀಟ್ ಚಾಕಲೇಟ್. ಸ್ವೀಟ್ ಅಕ್ಕ" ಅಂದ ಆ ಹುಡುಗ. 
ಮಾಧವನಿಗೆ ತನ್ನ ಮನಸೆಳೆದವಳು ನೆನಪಾದಳು. "ಅವ್ರು ಎಷ್ಟು ಜನ ಇದ್ದರು ಅಂದೆ" ?
"ಎಂಟೋ ಒಂಭತ್ತೋ ಜನ ಇದ್ದರು ಅನ್ಸತ್ತೆ" ಅಂತ ಇದ್ದರೆ ಮಾಧವನಿಗೆ ಅವರನ್ನು ನೋಡೋ ಛಾನ್ಸನ್ನು ಎರಡನೇ ಸಲ ಮಿಸ್ ಮಾಡಿಕೊಂಡ ಬೇಜಾರು. 
"ಅವರು ಎಲ್ಲಿ ಹೋದ್ರು ಗೊತ್ತಾ?" ಅಂದ ಮಾಧವ
"ಎಲ್ಲಿ ಅಂತ ಸರಿಯಾಗಿ ಗೊತ್ತಿಲ್ಲ. ಆದ್ರೆ ಜಲಪಾತದ ಬಗ್ಗೆ ಮಾತಾಡ್ತಿದ್ದ ಅವರಿಗೆ ಬ್ರಿಟಿಷ್ ಬಂಗ್ಲೆ ಗೊತ್ತಾ ಅಂತ ಕೇಳಿದ್ದೆ. ಗೊತ್ತಿಲ್ಲ ಅಂದ ಅವರಿಗೆ ಅದ್ರ ಬಗ್ಗೆ ಹೇಳಿದ್ದೆ.ಹತ್ತೂವರೆ ಹನ್ನೊಂದರ ಮೇಲೆ ಬಿಸಿಲು ಜಾಸ್ತಿಯಾಗೋದ್ರಿಂದ ಜಲಪಾತದೆದುರಿನ ಮಂಜು ಕಮ್ಮಿಯಾಗಿ ಅದು ಸರಿಯಾಗಿ ಕಾಣುತ್ತೆ ಅಂತಲೂ ಹೇಳಿದ್ದೆ. ಹೌದಾ ? ಹಾಗಾದ್ರೆ ಅಲ್ಲಿಗೆ ಮತ್ತೆ ಹೋಗೋಣ್ವಾ ಅಂತ ಮಾತಾಡಿಕೊಳ್ತಿದ್ದ ಅವರು ಅಲ್ಲೇ ಎಲ್ಲೋ ಹೋಗಿರಬೇಕು" ಅಂದ ಅವ. ಸರಿ ಅಂತ ಹೊರಬಂದ ಮಾಧವ ಎದ್ದೆನೋ ಬಿದ್ದೆನೋ ಅನ್ನುವಂತೆ ನಡೆಯುತ್ತಾ, ಓಡುತ್ತಾ ಬಂದು ಅಂತೂ ಸಿಕ್ಕ ವಾಹನಗಳ ಹಿಡಿದು ಜಲಪಾತದ ಹತ್ತಿರ ತಲುಪಿದ.

ಮಂಜ ತೆರೆ ಸರಿದಾಗೆಲ್ಲಾ ಜಲಪಾತದ ಹಿಂದೊಂದು ಬಂಗಲೆ ಕಾಣಿಸುತ್ತಿತ್ತು. ಬ್ರಿಟಿಷರ ಕಾಲದಲ್ಲಿ ಕಟ್ಟಿಸಿದ್ದೆಂದು, ಒಂದು ಕಾಲದಲ್ಲಿ ಅವರ ಪ್ರವಾಸಿ ಮಂದಿರವಾಗಿತ್ತೆಂದೂ ಅದಕ್ಕೆ ಬ್ರಿಟಿಷ್ ಬಂಗಲೊ ಎಂದೇ ಹೆಸರು. ಅದರ ಪಕ್ಕದಲ್ಲೇ ಸಾಗಿ ಬರೋ ಶರಾವತಿ ಒಂಭೈನೂರು ಅಡಿಗಳಿಗಿಂತಲೂ ಹೆಚ್ಚಿನ ಆಳಕ್ಕೆ ಧುಮುಕುತ್ತಾಳೆ. ನಿಧಾನವಾಗಿ ಹರಿಯುತ್ತಿರೋ ಶರಾವತಿ ವೇಗ ಪಡೆದುಕೊಂಡು ಆಳಕ್ಕೆ ಧುಮುಕೋ ತಾಣವದು. ಮುಂಗಾರು ಮಳೆ ಚಿತ್ರದಲ್ಲಿ ಹೈ ಜೂಮ್ ಕ್ಯಾಮರಾ ಉಪಯೋಗಿಸಿ, ಕ್ರೇನ್ ಬಳಸಿ ತೆಗೆದ ಚಿತ್ರವನ್ನು ನಿಜವೆಂದೇ ನಂಬಿದ ಕೆಲವರು ಅದೇ ಶೈಲಿಯಲ್ಲಿ ಪೋಸ್ ಕೊಡೋಕೆ ಹೋಗಿ ಪ್ರತಿವರ್ಷವೂ ಪ್ರಾಣ ಕಳೆದುಕೊಳ್ಳೋ ಮೃತ್ಯುಕೂಪವದು. ಆದರೆ ದೂರದಿಂದ ನೋಡುವವರಿಗೆ ತನ್ನತ್ತ ಬರಸೆಳೆವ ಚುಂಬಕವೂ ಹೌದದು.  ಜಲಪಾತದೆದುರು ಹುಡುಕಿ ಹುಡುಕಿ ಅವಳಿರದ ಜಾಗದಲ್ಲಿ ಕುಳಿತಿರೋಕಾಗದೇ ಎದ್ದು ಹೊರಬರುವಾಗ ಜಲಪಾತದ ಹಿಂದಿರುವ ಪ್ರವಾಸಿ ಬಂಗಲೆಯಡೆಗೆ ಹೋಗೋಣವೆನಿಸಿತು.ಆ ಕಡೆ ಕರೆದೊಯ್ಯೋಕೆ ರೆಡಿಯಿದ್ದ ಜೀಪು, ಕಾರಿನವರ ಧ್ವನಿಗಳೂ ಆ ಸಮಯಕ್ಕೆ ಕೇಳಬೇಕೇ ? .ಮುಂಗಾರು ಮಳೆ ಸ್ಪಾಟ್, ಬ್ರಿಟಿಷ್ ಬಂಗಲೋ ಅಂತ ಕೂಗುತ್ತಿದ್ದ ವ್ಯಾನಿನವರ ದನಿ ಕೇಳಿ ತನ್ನ ಮಳೆ ಹುಡುಗಿ ಅಲ್ಲೇನಾದ್ರೂ ಹೋಗಿರಬಹುದಾ ಅನ್ನೋ ಆಲೋಚನೆ ಬಂತು ಮಾಧವನಿಗೆ. ಸಿಕ್ಕರಾಯಿತು. ಸಿಗದಿದ್ದರೂ ನೋಡೋದ್ರಲ್ಲೇನಿದೆ ಅಂದ್ಕೊಂಡವ ಸೀದಾ ಎದುರಿಗಿದ್ದ ವ್ಯಾನು ಹತ್ತಿದ್ದ. ಆ ವ್ಯಾನಿನವ ಇನ್ನೂ ಮತ್ತೂ ಜನ ಬಂದು ಹತ್ತಲಿ ಅಂತ ಸಮಯ ಕಾಯ್ತಾ ಇದ್ರೆ ಒಳಗೆ ಕೂತ ಮಾಧವನ ಅಸಹನೆ ಜಾಸ್ತಿಯಾಗುತ್ತಿತ್ತು. ಅದೆಷ್ಟು ಸಲ ವಾಚು ನೋಡಿಕೊಂಡನೋ ಎಷ್ಟು ಸಲ ಧನಲೋಭಿ ಡ್ರೈವರನಿಗೆ ಶಾಪ ಹಾಕಿದ್ನೋ ಅವನಿಗೇ ಗೊತ್ತು. ವಾಚೇ ನಿಂತುಹೋಗಿದೆಯೇನೋ ಅಂತ ಪರೀಕ್ಷಿಸಬೇಕೆನ್ನುವಷ್ಟರಲ್ಲಿ ಗಾಡಿ ಹೊರಟಿತು. 

ಇದ್ದ ಸಿಕ್ಕಾಪಟ್ಟೆ ಗಾಡಿಗಳ ಮಧ್ಯೆ ಇವನ ಗಾಡಿ ಒಂದಿಷ್ಟು ದಾರಿ ಮಾಡಿಕೊಂಡು ಬ್ರಿಟಿಷ್ ಬಂಗಲೋ ತಲುಪುವಷ್ಟರ ಹೊತ್ತಿಗೆ ಇವನಿಗೆ ಕಣ್ಣೆದುರೇ ವರ್ಷಗಳು ಕಳೆದುಹೋದ ಭಾವ! ಅಲ್ಲಿ ಹೋಗಿದ್ದೇನೋ ಹೌದು. ಆದ್ರೆ ಅಲ್ಲಿ ಏನೂ ನೋಡೋಕಾಗ್ತಿರಲಿಲ್ಲ. ಗುಂಪುಗೂಡಿದ್ದ ಜನರ ಮಧ್ಯೆ ಏನಾಯಿತು ಅಂತ ಹಣುಕಿ ನೋಡೋಕೆ ಪ್ರಯತ್ನಿಸಿದ್ರೂ ಏನೂ ಕಾಣ್ತಿರಲಿಲ್ಲ. ದೂರದಲ್ಲೊಂದಿಷ್ಟು ಜನ ಪೋಲೀಸರನ್ನ ಕರೆಸಿ, ಫೈರಿಂಜವ್ರನ್ನ ಕರೆಸಿ ಅಂತ ಕೂಗ್ತಿದ್ದಿದು ಕೇಳಿಸ್ತಿತ್ತು. ಈಗಾಗಲೇ ನೆರೆದಿದ್ದ ಒಂದಿಷ್ಟು ಪೋಲೀಸರು ಜನರನ್ನ ಮತ್ತೂ ಮುಂದಕ್ಕೆ ಹೋಗದಂತೆ ತಡೆಯುತ್ತಿದ್ದರು. ಯಾರೋ ಒಂದಿಷ್ಟು ಹುಡುಗಿಯರು ನೀರಲ್ಲಿ ಬಿದ್ದು ಕೊಚ್ಚಿಹೋದ್ರಂತೆ. ಫೈರಿಂಜಿನ್ನಿನ ಪ್ರಾಣ ರಕ್ಷಕರು ಹಗ್ಗ ಕಟ್ಟಿಕೊಂಡು ತಮ್ಮ ಜೀವದ ಹಂಗು ತೊರೆದು ಸುತ್ತಲಿನ ಕಲ್ಲುಗಳ ಮಧ್ಯೆಯೋ, ಮರದ ಬೇರುಗಳನ್ನ ಹಿಡಿದೋ ಇನ್ನೂ ಜೀವ ಉಳಿಸಿಕೊಂಡವರನ್ನು ಬದುಕಿಸೋ ಪ್ರಯತ್ನದಲ್ಲಿದ್ದಾರಂತೆ ಅನ್ನೋ ಮಾತುಗಳು ತೇಲಿಬಂದವು. ಬೇಸಿಗೆಯಲ್ಲಾದರೆ ಜಲಪಾತಕ್ಕೆ ಬರೋ ನೀರನ್ನೇ ನಿಲ್ಲಿಸಿ ಮೇಲಿಂದ ಹಗ್ಗ ಕಟ್ಟಿ ಕೆಳಗಿಳಿಯೋ ಅವರು ಬಂಡೆಗಳ ಮಧ್ಯೆ ಸಿಕ್ಕವರನ್ನು ,ಆತ್ಮಹತ್ಯೆ ಮಾಡಿಕೊಳ್ಳೋಕೆ ಹೋಗಿ ಜಲಪಾತದ ರಭಸಕ್ಕೆ ಆದ ಕಲ್ಲಿನ ಮಧ್ಯದ ಕುಳಿಗಳಲ್ಲಿ ಸಿಕ್ಕಿಕೊಂಡವರ ದೇಹಗಳನ್ನ ಹೊರತೆಗೆಯುತ್ತಾರೆ. ಆದರೆ ಈ ನೀರ ಪ್ರವಾಹದೆದುರು ಅವರಿಗೋ ಏನೂ ಮಾಡೋಕಾಗೊಲ್ಲ ಅಂತಿದ್ದರು ಕೆಲವರು. ಕಷ್ಟ ಆಗ್ಬೋದು. ಆದ್ರೂ ಅವರು ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಡೋರಲ್ಲ ಅಂತಿದ್ದರು ಕೆಲೋರು. ಆದ್ರೆ ಇದ್ದ ಜನರಲ್ಲಿ ಮುಕ್ಕಾಲು ಜನ ಅಂತಹ ಮಳೆಗಾಲದಲ್ಲಿ ಬ್ರಿಟಿಷ್ ಬಂಗಲೆಗೆ ಹೋಗಿದ್ದೂ ಅಲ್ಲದೇ , ನಿಷೇಧಿತ ಪ್ರದೇಶವೆಂಬ ಬೋರ್ಡಿನ ಬೇಲಿಯನ್ನು ಹಾರಿ ಜಲಪಾತದ ತುತ್ತತುದಿಗೆ ಬಂದು ಫೋಟೋ ತೆಗೆಸಿಕೊಳ್ಳೋಕೆ ಹೋದ ಹುಡುಗಿಯರ ಹುಚ್ಚುತನಕ್ಕೆ ಬಯ್ಯೋರೆ.  ಅವಳು ತನ್ನ ಮನಸೆಳೆದವಳಾ ಎಂಬ ಭಾವ ಬಂದು ಕಣ್ಣಂಚೊಮ್ಮೆ ಒದ್ದೆಯಾಯ್ತು. ಆ ಗಲಾಟೆಯ ನಡುವೆಯೂ ಬೆಳಗ್ಗೆ ಮನ ಸೆಳೆದಂತಹದೇ ದನಿ ಕೇಳಿದಂತಾಯ್ತೊಮ್ಮೆ. ಅದೇ ದನಿ. ತಲೆ ತಿರುಗಿಸಿದರೆ ಹಿಂದೆಲ್ಲಿಂದಲೋ ಹಾರಿಬಂದ ವೇಲು ಪಕ್ಕದಲ್ಲಿನ ಪೊದೆಯೊಂದಕ್ಕೆ ಸಿಕ್ಕಿಕೊಂಡಿತ್ತು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x