ಜೋಕರ್ ಮತ್ತು ಅವನ ಹಿಂದಿನ ತಲೆಮಾರಿನವರು!!: ಸಂತೋಷ್ ಕುಮಾರ್ ಎಲ್.ಎಂ.

೨೦೧೯ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದು, ವಿಮರ್ಶಕರಿಂದ ಶಹಬ್ಬಾಷ್ ಅನ್ನಿಸಿಕೊಂಡ ಇಂಗ್ಲೀಷ್ ಸಿನಿಮಾ “ಜೋಕರ್”. ಈ ಸಿನಿಮಾ ನೋಡಿದ ಮೇಲೆಯೂ ಸಿಕ್ಕಾಪಟ್ಟೆ ಕಾಡುತ್ತದೆ. ಅಸಹಾಯಕತೆ, ಅವಮಾನ, ಹಿಂಸೆ, ತಾನು ಬೆಳೆದ ರೀತಿ, ಕೆಟ್ಟ ಬಾಲ್ಯ.. ಎಲ್ಲವೂ ಒಬ್ಬನನ್ನು ಹೇಗೆ ಹಿಂಸೆಗೆ ತಳ್ಳುತ್ತದೆ ಅನ್ನುವ ಸಿನಿಮಾ. ಗಮನಿಸಿದರೆ ಜೋಕರ್ ಮಾಡುವ ಪ್ರತೀ ಕೊಲೆಗೂ ಒಂದೊಂದು ಕಾರಣವಿದೆ

ಈ ಸಿನಿಮಾ ನೋಡಿದ ಮೇಲೆ ಅದರ ವಿವರಗಳ ಬಗ್ಗೆ ಕಣ್ಣಾಯಿಸಿದಾಗ ಸಿಕ್ಕ ಎರಡು ಸಿನಿಮಾಗಳು “ಟ್ಯಾಕ್ಸಿ ಡ್ರೈವರ್(೧೯೭೬)” ಮತ್ತು “ದ ಕಿಂಗ್ ಆಫ್ ಕಾಮೆಡಿ(೧೯೮೨)”. ಈ ಎರಡೂ ಸಿನಿಮಾಗಳ ಪ್ರಭಾವ ಜೋಕರ್ ಮೇಲಿದೆಯಂತೆ. ಇದನ್ನು ಜೋಕರ್ ಸಿನಿಮಾದ ನಿರ್ದೇಶಕ ಟಾಡ್ ಫಿಲಿಪ್ಸ್ ಸ್ವತಃ ಹೇಳಿಕೊಂಡಿದ್ದಾರೆ. ಹಾಗಾಗಿ ಈ ಎರಡೂ ಸಿನಿಮಾಗಳನ್ನು ನೋಡುವ ಕುತೂಹಲವಾಯಿತು. ಆ ಸಿನಿಮಾಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.


೧೯೭೬ರಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಗಳಿಸಿದ ಚಿತ್ರ “ಟ್ಯಾಕ್ಸಿ ಡ್ರೈವರ್”. ಚಿತ್ರ ನೋಡುವಾಗ ಜೋಕರ್ ಸಿನಿಮಾಗೂ ಈ ಸಿನಿಮಾಗೂ ಅನೇಕ ಸಾಮ್ಯತೆಗಳು ಕಾಣಸಿಗುತ್ತವೆ.

ವಿಯೆಟ್ನಾಂ ಯುದ್ಧದ ನಂತರ ಅರಾಜಕತೆ ತಾಂಡವವಾಡುತ್ತಿದ್ದ ನ್ಯೂಯಾರ್ಕ್ ನಗರದಲ್ಲಿ ಸಿನಿಮಾದ ನಾಯಕ ಟ್ರಾವಿಸ್ ಟ್ಯಾಕ್ಸಿಯೊಂದನ್ನು ಓಡಿಸುತ್ತ ಒಂಟಿ ಜೀವನ ಸಾಗಿಸುತ್ತಿದ್ದಾನೆ. ಅವನಿಗೆ ನಿದ್ರಾಹೀನತೆಯ ಸಮಸ್ಯೆಯಿದೆ. ಹಾಗಾಗಿ ಉದ್ದೇಶಪೂರ್ವಕವಾಗಿಯೇ ರಾತ್ರಿಯಲ್ಲಿ ಟ್ಯಾಕ್ಸಿ ಓಡಿಸುತ್ತಾನೆ. ಆಗಾಗ್ಗೆ ಪೋರ್ನ್ ಸಿನಿಮಾ ಥಿಯೇಟರುಗಳ ಒಳಹೊಕ್ಕು ಸಮಯ ಕಳೆಯುತ್ತಾನೆ. ಅವನಿಗೆ ಅಂತ ಯಾರೂ ಇಲ್ಲ. ರಾತ್ರಿಯಾದ್ದರಿಂದ ಅವನ ಟ್ಯಾಕ್ಸಿಗೆ ಎಲ್ಲ ಬಗೆಯ ಗ್ರಾಹಕರೂ ಬರುತ್ತಾರೆ.

ಅದೊಂದು ದಿನ ಬೆಟ್ಸಿ ಅನ್ನುವ ಸುಂದರ ಯುವತಿ ಅವನ ಕಣ್ಣಿಗೆ ಬೀಳುತ್ತಾಳೆ. ಅವಳು ಸದ್ಯಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಚಾರ್ಲ್ಸ್ ಪ್ಯಾಲಂಟೈನ್ ಪರವಾಗಿ ಪ್ರಚಾರದಲ್ಲಿ ನಿರತಳಾಗಿದ್ದಾಳೆ. ಅವಳ ಜೊತೆ ಸ್ನೇಹ ಸಂಪಾದಿಸಲು ಹೆಣಗುವ ಟ್ರಾವಿಸ್, ಅವಳನ್ನು ಸಿನಿಮಾವೊಂದಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ವಿವರ ಗೊತ್ತಿಲ್ಲದೆ ಪೋರ್ನ್ ಸಿನಿಮಾವೊಂದಕ್ಕೆ ಕರೆದುಕೊಂಡು ಹೋಗಿ ಅವಳಿಗೆ ಕೋಪ ತರಿಸಿ ಅವಳಿಂದ ತಿರಸ್ಕೃತನಾಗುತ್ತಾನೆ. ಆಮೇಲೆ ಆತ ಏನೇ ಮಾಡಿದರೂ ಆಕೆ ಪ್ರತಿಕ್ರಿಯಿಸುವುದಿಲ್ಲ. ಮೊದಲೇ ಒಂಟಿತನದಿಂದ ಬೇಸತ್ತ ಟ್ರಾವಿಸ್ ಬೆಟ್ಸಿಯ ಘಟನೆಯಿಂದ ಮತ್ತೆ ಜರ್ಜರಿತನಾಗುತ್ತಾನೆ.

ಈ ಮಧ್ಯೆ ಪರಿಚಯದವನೊಬ್ಬನಿಂದ ಈತನಿಗೆ ಒಂದಷ್ಟು ಪಿಸ್ತೂಲುಗಳು ದೊರಕುತ್ತವೆ. ಸೂಪರ್ ಮಾರ್ಕೆಟ್ಟೊಂದರಲ್ಲಿ ದರೋಡೆ ಮಾಡಲು ಪ್ರಯತ್ನಿಸುತ್ತಿದ್ದ ಕಳ್ಳನೊಬ್ಬನನ್ನು ಹಿಂದೆ ಮುಂದೆ ನೋಡದೆ ಶೂಟ್ ಮಾಡುತ್ತಾನೆ. ಆ ಮಾಲೀಕ ಕೂಡ ಈತನಿಗೆ ಕೃತಜ್ಞತೆ ಹೇಳಿ ಇವನ ಮೇಲೆ ಆರೋಪ ಬರದ ಹಾಗೆ ನೋಡಿಕೊಳ್ಳುತ್ತಾನೆ. ಇದರ ನಂತರ ಟ್ರಾವಿಸ್ ತನ್ನ ಇರುವಿಕೆಯ ಬಗ್ಗೆಯೇ ಪ್ರಶ್ನೆ ಮಾಡಿಕೊಳ್ಳುತ್ತಾನೆ

ನಂತರ ಅದೇಕೋ ಪ್ಯಾಲಂಟೈನ್`ನನ್ನು ಹತ್ಯೆ ಮಾಡುವ ಪ್ರಯತ್ನ ಮಾಡಿ ಅದರಲ್ಲಿ ವಿಫಲನಾಗುತ್ತಾನೆ. ಜೊತೆಯಲ್ಲಿ ನಗರದಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆಯ ಬಗ್ಗೆ ಬೇಸರ, ತಿರಸ್ಕಾರ ಮೂಡಿ ತನಗೆ ಪರಿಚಯವಾದ 12 ವರ್ಷ ವಯಸ್ಸಿನ ವೇಶ್ಯಾವಾಟಿಕೆಗೆ ಬಿದ್ದ ಹುಡುಗಿಯೊಬ್ಬಳನ್ನು ಮನ:ಪರಿವರ್ತನೆ ಮಾಡಿ ಅವಳ ಪೋಷಕರ ಬಳಿ ಕಳುಹಿಸಲು ಪ್ರಯತ್ನ ಮಾಡುತ್ತಾನೆ. ಆಗ ನಡೆಯುವ ಹೋರಾಟದಲ್ಲಿ ಈತನ ಪಿಸ್ತೂಲಿಗೆ ಆ ಹುಡುಗಿಯನ್ನು ಮಾರಾಟ ಮಾಡುತ್ತಿದ್ದ ಪಿಂಪ್, ಒಬ್ಬ ಗ್ಯಾಂಗ್’ಸ್ಟರ್ ಮತ್ತು ಗ್ರಾಹಕನಾಗಿ ಬಂದಿದ್ದ ಮಾಫಿಯಾದವನೊಬ್ಬ ಬಲಿಯಾಗುತ್ತಾರೆ.

ಪೊಲೀಸರು ಸ್ಥಳಕ್ಕೆ ಬರುತ್ತಾರಾದರೂ ಟ್ರಾವಿಸ್ ಮೇಲೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಬದಲಿಗೆ ಆತ ಮರುದಿನದ ಪತ್ರಿಕೆಗಳಲ್ಲಿ ದುಷ್ಕರ್ಮಿಗಳನ್ನು ಮಣಿಸಿದ ಹೀರೋ ಅಂತ ಚಿತ್ರಿಸಲಾಗುತ್ತದೆ. ಅದೇ ದಿನ ಬೆಟ್ಸಿ ಇವನ ಟ್ಯಾಕ್ಸಿಯಲ್ಲಿ ಬಂದು ತನ್ನ ಮನೆಯವರೆಗೆ ಡ್ರಾಪ್ ತೆಗೆದುಕೊಳ್ಳುತ್ತಾಳೆ. ಟ್ರಾವಿಸ್ ಮುಗುಳ್ನಗುತ್ತಾನೆ. ಆಕೆ ಇಳಿದು ಹೋದ ನಂತರ ಮತ್ತೆ ರೇರ್ ಮಿರರ್’ನಲ್ಲಿ ಯಾವುದೋ ದೃಶ್ಯವನ್ನು ನೋಡಿ ಟ್ರಾವಿಸ್ ಮುಖ ಗಂಟಿಕ್ಕುವುದರೊಂದಿಗೆ ಸಿನಿಮಾ ಮುಕ್ತಾಯವಾಗುತ್ತದೆ.

ಸಿನಿಮಾದಲ್ಲಿ ಎಲ್ಲಿಯೂ ಟ್ರಾವಿಸ್ ಬೆಟ್ಸಿ ಬೆಂಬಲಿಸುತ್ತಿದ್ದ ಚುನಾವಣಾ ಅಭ್ಯರ್ಥಿಯನ್ನು ಕೊಲ್ಲಲು ಪ್ರಯತ್ನಿಸುತ್ತಾನೆ ಅನ್ನುವುದನ್ನು ಹೇಳುವುದಿಲ್ಲ. ಆದರೆ ಇಡೀ ಸಿನಿಮಾದಲ್ಲಿ ಜೋಕರ್ ಸಿನಿಮಾದಲ್ಲಿ ಆದಂತೆಯೇ ನಾಯಕನಿಗೆ ಒಂಟಿತನ ಕಾಡುತ್ತದೆ.

ಕಾಕತಾಳೀಯವೆಂದರೆ ಜೋಕರ್ ಸಿನಿಮಾದಂತೆಯೇ “ಟ್ಯಾಕ್ಸಿ ಡ್ರೈವರ್” ಸಿನಿಮಾ ಕೂಡ ವಿವಿಧ ವಿಭಾಗಗಳಲ್ಲಿ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಪ್ರಖ್ಯಾತ ನಟ ರಾಬರ್ಟ್ ಡಿ ನಿರೋ ಎರಡರಲ್ಲಿಯೂ ಅಂದರೆ “ಜೋಕರ್” ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಮತ್ತು “ಟ್ಯಾಕ್ಸಿ ಡ್ರೈವರ್” ನಲ್ಲಿ ನಾಯಕನಾಗಿ ನಟಿಸಿದ್ದಾರೆ. ಟ್ಯಾಕ್ಸಿ ಡ್ರೈವರ್ ಸಿನಿಮಾದಲ್ಲಿ ನ್ಯೂಯಾರ್ಕ್ ನಗರ ಮತ್ತು ಜೋಕರ್ ಚಿತ್ರದಲ್ಲಿ ಗಾಥಮ್ ನಗರಗಳಲ್ಲಿ ಅರಾಜಕತೆ ಮಡುಗಟ್ಟಿರುತ್ತದೆ. ಜೋಕರ್ ಮತ್ತು ಟ್ಯಾಕ್ಸಿ ಡ್ರೈವರ್ ಇಬ್ಬರೂ ಮೊದಲ ಕೊಲೆ ಮಾಡುವುದು ಅನಿರೀಕ್ಷಿತ ಸಂದರ್ಭಗಳಲ್ಲಿಯೇ, ಅದರಲ್ಲೂ ಇನ್ನೊಬ್ಬರನ್ನು ಉಳಿಸಲು!

೧೯೮೨ ರಲ್ಲಿ ಬಿಡುಗಡೆಯಾದ “ದ ಕಿಂಗ್ ಆಫ್ ಕಾಮೆಡಿ” ಸಿನಿಮಾದಲ್ಲೂ ಸಹ ರಾಬರ್ಟ್ ಡಿ ನಿರೋ ನಾಯಕ. ಆತನಿಗೆ ತಾನೊಬ್ಬ ಸ್ಟಾಂಡಪ್ ಕಾಮೆಡಿಯನ್ ಆಗಬೇಕು ಅನ್ನುವ ಮಹಾಭಿಲಾಷೆಯಿರುತ್ತದೆ. ತನ್ನ ಭ್ರಮೆಯಲ್ಲಿಯೇ ಪ್ರಸಿದ್ಧ ಹಾಸ್ಯ ಕಲಾವಿದನೊಬ್ಬ ತನ್ನ ಸ್ನೇಹಿತ ಅನ್ನುವಂತೆ ಕನಸು ಕಾಣುತ್ತಾನೆ. ಅಷ್ಟೇ ಅಲ್ಲ, ಇಡೀ ಸುತ್ತಮುತ್ತಲಿನ ಜನರಿಗೆಲ್ಲ ಆ ಕಲಾವಿದ ತನಗೆ ಸಿಕ್ಕಾಪಟ್ಟೆ ಪರಿಚಯ ಎಂಬಂತೆ ತೋರಿಸಿಕೊಳ್ಳುತ್ತಾನೆ. ಆ ಕಲಾವಿದನ ಹಿಂದೆ ದಂಬಾಲು ಬಿದ್ದು ತನ್ನನ್ನು ಒಮ್ಮೆ ನಿಮ್ಮ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಹ್ವಾನಿಸಿ ಅಂತ ಗೋಗರೆಯುತ್ತಾನೆ. ಆದರೆ ಎಲ್ಲ ಕಡೆ ಆತನಿಗೆ ಅವಮಾನವಾಗುತ್ತದೆ. ಕಡೆಗೆ ಆ ಹಾಸ್ಯ ಕಲಾವಿದನನ್ನೇ ಅಪಹರಿಸಿ, ಆ ಕಾರ್ಯಕ್ರಮದ ಆಯೋಜಕರಿಗೆ ತನಗೆ ಅವಕಾಶ ಕೊಟ್ಟರೆ ಮಾತ್ರ ಬಿಡುಗಡೆ ಮಾಡುವುದಾಗಿ ಬೇಡಿಕೆ ಇಡುತ್ತಾನೆ. ಒಟ್ಟಿನಲ್ಲಿ ಜೋಕರ್ ಸಿನಿಮಾದಂತೆ ಇಲ್ಲಿಯೂ ಮಹತ್ವಾಕಾಂಕ್ಷೆ, ಅವಮಾನ, ಭ್ರಮಾಲೋಕದಲ್ಲಿರುವುದು, ಒಂಟಿತನವಿದೆ.

ಜೋಕರ್ ಸಿನಿಮಾ ನೋಡಿದವರಿಗೆ ಈ ಎರಡು ಸಿನಿಮಾಗಳ ಮಾಹಿತಿ ಈಗಾಗಲೇ ಪರಿಚಯವಿದೆಯೆನಿಸುತ್ತದೆ. ಅದಿರಲಿ. ಜೋಕರ್ ಸಿನಿಮಾ ಆಸ್ಕರ್ ಪ್ರಶಸ್ತಿಯ ಕೊನೆಯ ಮೆಟ್ಟಿಲಲ್ಲಿ ನಿಂತಿದೆ. ಫೆಬ್ರುವರಿ ೧೦ನೇ ತಾರೀಖು ಯಾವ ಸಿನಿಮಾ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂಬುದು ತಿಳಿಯಲಿದೆ. ಈಗಾಗಲೇ ನೋಡಿರದಿದ್ದರೆ ಈ ಸಿನಿಮಾವನ್ನು ಒಮ್ಮೆ ನೋಡಿಬಿಡಿ.

ಸಂತೋಷ್ ಕುಮಾರ್ ಎಲ್.ಎಂ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
CHANDRASHEKARA n s
CHANDRASHEKARA n s
4 years ago

ವಿಮರ್ಶೆ ವಸ್ತು ನಿಷ್ಠವಾಗಿದೆ… ಸಂತೋಷ್ ಸಾರ್

Santhoshkumar LM
4 years ago

Thank u sir 🙂

2
0
Would love your thoughts, please comment.x
()
x