ಜೈನಾಬಿ, ರೋಸ್ ಮೇರಿ, ಮತ್ತು ಮಾಯಾ ಬಾರ್:  ವಸುಧಾ ಪ್ರಭು

ಟಕ್-ಟಕ್-ಟಕ್
ಮಾಯಾ ಬಾರಿನ ಮೇಲೆ ನಿನ್ನೆ ಮುನ್ಸಿಪಾಲಿಟಿಯವರು ಮಾಡಿದ ದಾಳಿಯಿಂದಾಗಿ ಎಂದಿಗಿಂತ ಒಂದೂವರೆ ಗಂಟೆಯ ಮೊದಲೇ ಫ್ಲ್ಯಾಟಿಗೆ ಬಂದರೆ, ನೆರೆಯ ಫ್ಲ್ಯಾಟ್ ನಲ್ಲಿರುವ ಅಮ್ಮಿ ಬಾಗಿಲು ಬಡಿದಾಗಲೇ ಜೈನಾಬಿಗೆ ಎಚ್ಚರವಾಯಿತು. ಕಣ್ಣು ಸರಿಯಾಗಿ ಬಿಡುತಿದ್ದಂತೆಯೇ ಎದ್ದು ಮೊದಲು ಬಚ್ಚಲಿಗೆ ಧಾವಿಸಿದಳು. ಒಂದರ ಮೇಲೊಂದು ಬಾಲ್ದಿ ಇಟ್ಟಂತೆ ಬಾಲ್ದಿಯನ್ನು ನಲ್ಲಿ ಕೆಳಗೆ ನೀರು ತುಂಬಲು ಇಟ್ಟು ಟೂತ್ ಪೇಸ್ಟ್ ಬ್ರಶ್ ಹಿಡಿದು ಹಲ್ಲುಜ್ಜತೊಡಗಿದಳು. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನಾಲ್ಕನೇ ಅಂತಸ್ತಿನಲ್ಲಿರುವ ಇರುವ ಇವಳ  ಮನೆಯ ನಲ್ಲಿಯಲ್ಲಿ ಸಪೂರವಾಗಿ ಕೇವಲ ಹದಿನೈದು ನಿಮಿಷ ಬರುವ ನೀರಿನಲ್ಲಿ ಸ್ನಾನವನ್ನು ಮುಗಿಸಿ  ಎರಡು ಬಾಲ್ದಿ ನೀರನ್ನು ತುಂಬಿಸಿಟ್ಟಳು.

ಒಂದು ಕೋಣೆಯ ಫ್ಲ್ಯಾಟಿನಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಸೊಸೆಯಂದಿರೊಟ್ಟಿಗೆ ವಾಸಿಸುವ ಅಮ್ಮಿಗೆ ಒಂದು ಮಧ್ಯಾಹ್ನ ಬುರ್ಖಾ ಹಾಕಿ ಕೆಲಸಕ್ಕೆ ಹೋಗಿ ಮಧ್ಯರಾತ್ರಿ ಮನೆಗೆ ಹಿಂತಿರುಗುವ ಜೈನಾಬಿಯ ಮೇಲೆ ಒಂಥರಾ ಪ್ರೀತಿ. ಬೆಳಿಗ್ಗೆ ಹಾಗೂ ಸಾಯಂಕಾಲ ಆರೂವರೆಯಿಂದ ಏಳು ಗಂಟೆಯ ವರೆಗೆ ಮುನ್ಸಿಪಾಲಿಟೀ ನೀರು ಬರುತಿದ್ದರೂ ಬೆಳಿಗ್ಗೆ ಜೈನಾಬಿ ನಿದ್ದೆಯಲ್ಲಿ, ಸಾಯಂಕಾಲ ಆಕೆ ಮನೇಲೇ ಇರುತ್ತಿರಲಿಲ್ಲ.
ಆಗಾಗ ಮೀನು ಮಾರುವವರು, ಹಣ್ಣು ಹಂಪಲು ಮಾರುವವರು ಭಿಕ್ಷೆ ಬೇಡುವವರು ಇವರೆಲ್ಲರ ಉಪಟಳದಿಂದ ಪಾರಾಗಲು ಆಕೆ ತನ್ನ ಮನೆಯ ಕರೆಗಂಟೆಯನ್ನು  ಸದಾ ಬಂದ್ ಮಾಡುತಿದ್ದಳು. ಮಧ್ಯಹ್ನ ಹನ್ನೆರಡು ಮುಕ್ಕಾಲು ಗಂಟೆಯಿಂದ ಒಂದು ಗಂಟೆಯ ತನಕ ಬರುವ ನೀರಿಗಾಗಿ ಅಮ್ಮಿಯ ಕದವನ್ನು ಬಡಿಯುತಿದ್ದಳು.

ಕಳೆದ ನಾಲ್ಕೂವರೆ ವರ್ಷದಿಂದ ಜೈನಾಬಿಗೆ ಇದು ನಿತ್ಯದ ಕೆಲಸವಾಗಿತ್ತು. ಮೀರಾರೋಡಿನ ಒಳ್ಳೊಳ್ಳೆಯ ಸೊಸೈಟಿನಲ್ಲಿ ಮುಸ್ಲಿಮರಿಗೆ, ಒಂಟಿ ಹೆಣ್ಮಕ್ಕಳಿಗೆ, ಬಾಡಿಗೆ ಮನೆ ಸಿಗುವುದೇ ಕಷ್ಟ ವಾಗಿತ್ತು. ಮೀರಾರೋಡ್ ಸ್ಟೇಶನ್ನಿಂದ ಸುಮಾರು ಅರ್ಧ ಮೈಲು ಅಂತರದಲ್ಲಿರುವ ಇರುವ ಈ ಕಟ್ಟಡ ದಲ್ಲಿ ‘ಪಕಿಯಾ’ ನ ದೂರದ ಸಂಬಂದಿಯಾದ ಚಿಕ್ಕಮ್ಮನ ಹೆಸರಿನಲ್ಲಿರುವ ಈ ಫ್ಲ್ಯಾಟಿನಲ್ಲಿ ನಿಲ್ಲುವ ವ್ಯವಸ್ಥೆಯನ್ನು ‘ಪಕಿಯಾ’ನೇ ಮಾಡಿದ್ದನು. ಆಗ ಇಲ್ಲಿ ಹೆಚ್ಚು ಕಟ್ಟಡ ಗಳೇ ಇರಲಿಲ್ಲವಾದ ಕಾರಣ ಈ ಕಟ್ಟಡದಲ್ಲಿ ವಾಸಿಸಲು ಯಾರೂ ತಯಾರಿರಲಿಲ್ಲ. ಇದೇ ಸಂದರ್ಭದಲ್ಲಿ’ಪಕಿಯಾ’ ಜೈನಾಬಿಗೆ ಹಾಗೂ ಇತರ ಹೆಣ್ಣು ಮಕ್ಕಳಿಗೆ ಈ ನಿರ್ಜನ ಪ್ರದೇಶದ ಬೇರೆ ಬೇರೆ ಕಟ್ಟಡಗಳಲ್ಲಿ ವಾಸಿಸಲು ಅವಕಾಶ ವನ್ನು ಮಾಡಿ ಕೊಟ್ಟಿದ್ದನು.

ಆಯಾಸಗೊಂಡ ಹೆಣ್ಣು ಮಕ್ಕಳಿಗೆ ವಿಶ್ರಾಂತಿಗೆಂದು ಮಾತ್ರವಲ್ಲ ಈ ಫ್ಲ್ಯಾಟುಗಳು ತಿನ್ನಲು, ಉಣ್ಣಲು ಮಾತ್ರವಲ್ಲ ಬಟ್ಟೆಗಳನ್ನು ಲಾಂಡ್ರಿಗೆ ಕೊಟ್ಟು ಇಸ್ತ್ರಿ ಮಾಡಿ ವಾಪಸು ತಂದು ಕೊಡುವ ಜವಾಬ್ದಾರಿಯನ್ನು ಖುದ್ದಾಗಿ ತಾನೇ ಮಾಡುತಿದ್ದ. ಮಾಯಾ ಬಾರ್ ನ ಮೂಲಕ “ಅಣ್ಣ ನ” ಬಿಳೀ ಬಣ್ಣದ ಲ್ಯಾಂಡ್ ರೋವರ್ ಗಾಡಿಯ ಮುಂದಿನ ಡ್ಯಾಶ್ ಬೋರ್ಡಿನ ಮೇಲೆ ಲೈಸನ್ಸ ಇರುವ ರಿವಾಲ್ವರ್ ಇದ್ದರೂ ಹೆಚ್ಚಿನ ಹವಾಲ್ದಾರ್ ಪೋಲೀಸರಿಗೆ ಪಕಿಯನ ಹಾಗೂ ಗಾಡಿಯ ಪರಿಚಯ ಇದ್ದ ಕಾರಣ ಬೋರಿವಿಲಿಯಿಂದ ಮೀರಾರೋಡ್ ವರೆಗೂ ಆಗುವ ಪ್ರಯಾಣದಲ್ಲಿ ಅವನನ್ನು ಯಾರೂ ಎಂದೂ ನಿಲ್ಲಿಸಿರಲಿಲ್ಲ. ಇಷ್ಟೇ ಅಲ್ಲದೆ ಮೀರಾರೋಡ್ ನಲ್ಲಿರುವ ಪ್ರತಿಒಬ್ಬ ಅಂಗಡಿಕಾರರೂ ಇವನಿಗೆ ಸಲಾಂ ಮಾಡುತಿದ್ದರು. ಪ್ರಾಪರ್ಟಿ ಏಜಂಟರೇ ಇರಲಿ, ಎಸ್. ಟಿ. ಡಿ. ಬೂತ್ ನವರೇ ಇರಲೀ ಎಲ್ಲಾ ಅಂಗಡಿಯವರು, ಮಾರ್ವಾಡಿಗಳು, ಹಾಲಿನವರು, ಲಾಂಡ್ರಿಯವರು, ಬೇಕರಿಯವರು, ತರಕಾರಿ ಮಾರುವವರು ಹಾಗೂ ‘ಪಕಿಯಾ’ರಸ್ತೆಯ ಬದಿಯಲ್ಲಿ ಟಪ್ರಿಚಾಯ್ ಕುಡಿದು, ಸಿಗರೇಟು ಸೇದುವ ತನಕದ ಆ ಹದಿನೈದು ನಿಮಿಷದಲ್ಲಿ ಎಲ್ಲಾ ಸುದ್ದಿ ಗಳನ್ನು ಪಕಿಯಾನಿಗೆ ತಲುಪಿಸುತಿದ್ದರು. ಯಾರು ಮುಂಬೈಗೆ ಹೊಸಬರು ಬಂದಿದ್ದಾರೆ ಏನು ಕೆಲಸ ಮಾಡುತ್ತಾರೆ, ಯಾರು ಕೆಲಸವನ್ನು ಹುಡುಕುತ್ತಾರೆ ಯಾರು ಹೇಗೆ ಕಾಣಿಸ್ತಾರೆ, ಮತ್ತೆ ಭೇಟಿಯಾಗಲು ಬರುವ ಭಡವಾಗಳ ಬಗ್ಗೆ  ಎಲ್ಲಾ ತಿಳಿಸುತಿದ್ದರು.

ಒಂದೂವರೆ ಗಂಟೆ ಆಗುತ್ತಲೇ ಒಬ್ಬೊಬ್ಬರೇ ಹುಡುಗಿಯರು ಪಕಿಯಾನ ಗಾಡಿಯ ಹತ್ತಿರ ಬಂದು ಎ. ಸಿ. ಚಾಲು ಇರುವ ಕಾರಿನೊಳಗೆ ನುಸುಳುತಿದ್ದರು. ಹಾಗೂ ಚೀಲದಲ್ಲಿ ಕಟ್ಟಿ ತಂದ ವಸ್ತುಗಳನ್ನು ಡಿಕ್ಕಿ ಯಲ್ಲಿ ಇಡುತಿದ್ದರು. ಸ್ವಲ್ಪ ಬುರ್ಖಾ ಹಾಕಿದವರು, ಮತ್ತೆ ಕೆಲವರು ಮೇಕಪ್ಪಿನಲ್ಲಿ, ಮತ್ತೆ ಸಲೂನ್ ಒಳಗಿದ್ದವರು, ಎಸ್ಟೇಟ್ ಏಜಂಟರು ಕೂಡಾ ಹೆಚ್ಚಾಗಿ ಇದೇ ಸಮಯದಲ್ಲಿ ಕೈಯಲ್ಲಿ ಮೊಬೈಲು ಹಿಡಿದು ತಮ್ಮ ಕೆಲಸವನ್ನು ಮಾಡುವವರಂತೆ ನಟಿಸಿ ಮೈಯೆಲ್ಲಾ ಕಣ್ಣಾಗಿಸಿ  ಪಕಿಯಾನ ಕಾರಿನ ಬಳಿ ಬರುವ ಹೆಣ್ಣು ಮಕ್ಕಳನ್ನು ಮೇಲಿಂದ ಕೆಳಗಿನ ತನಕ ವೀಕ್ಷಿಸಿ  ಅವರು ಮೈಮೇಲೆ ಸುರಿದ ಸುಗಂಧ ದ್ರವ್ಯಗಳನ್ನು ಆಘ್ರಾಣಿಸಿ ಕೊಳ್ಳುತಿದ್ದರು.

ಒಂದೂವರೆ ಗಂಟೆ ಕಳೆದು ಐದು ನಿಮಿಷದಲ್ಲಿ ಬಿಳೀ ಪ್ಯಾಂಟ್, ಬಿಳೀ ಶರ್ಟ ತೊಟ್ಟ ‘ಪಕಿಯಾ’ನ ಗಾಡಿ ಚಲಿಸಲು ಸುರುವಾಗಿ ಒಂದೆರಡು ಸಲ ಹಿಂದೆ, ಮುಂದೆ ತಿರುಗುತ್ತಲೇ ನಿಲ್ಲದೇ ಓಡುತಿತ್ತು. ಮೀರಾರೋಡ್ ನಿಂದ ಬೋರಿವಿಲಿಗೆ ಹೋಗುವ ಮುಕ್ಕಾಲು ಗಂಟೆ ಸಮಯದ ಪ್ರಯಾಣದಲ್ಲಿ ‘ಪಕಿಯಾ’ನ ‘ಬಾತ್ಮಿ’ ಶುರು ಆಗುತಿತ್ತು. ನಿನ್ನೆ ಮುನ್ಸಿಪಾಲಿಟಿಯವರು ಎಲ್ಲಿ ದಾಳಿ ಮಾಡಿ ಏನೆಲ್ಲಾ ಮುರಿದು ಹಾಕಿದರು, ಯಾವ ಪತ್ರಿಕೆಯಲ್ಲಿ ಈ ಬಗ್ಗೆ ಬರೆದಿದೆ ಮತ್ತೆ ಮುಂದಿನ ದಾಳಿ ಯಾವಾಗ ಎಂಬೆಲ್ಲಾ ಸುದ್ದಿ ಹುಡುಗಿಯರಿಗೆ ಸಿಗುತಿತ್ತು.

ಮುಂದಿನ ದಾಳಿ ಆಗುವ ಮುಂಚೆಯೇ ‘ಅಣ್ಣ’ ನಿಗೆ ಮಾಹಿತಿ ಸಿಗುತಿತ್ತು‌. ಆ ರಾತ್ರಿ ಮಾತ್ರ ಮಾಯಾ ಬಾರ್ನಲ್ಲಿ ಹೆಣ್ಣು ಮಕ್ಕಳು ಕೆಲಸವನ್ನು ಮಾಡುತ್ತಿರಲಿಲ್ಲ. ಅಲ್ಲಿ ಕೇವಲ ಸಂಗೀತ ಇರುತಿತ್ತು. ಬಣ್ಣದ ದೀಪಗಳೂ ಇರುತ್ತಿರಲಿಲ್ಲ. ನಿತ್ಯಕ್ಕೆ ಮನೆ ಮುಟ್ಟುವಾಗ ರಾತ್ರಿಯ ಎರಡೂವರೆ, ಮೂರು ಗಂಟೆ ಆದರೆ, ದಾಳಿ ಆದಾಗ ರಾತ್ರಿ ಹನ್ನೆರಡಕ್ಕೇ ಮನೆ ತಲುಪ ಬಹುದಾದರೂ ಆ ದಿನ ಗಳಿಕೆ ಮಾತ್ರ ಇರುತ್ತಿರಲಿಲ್ಲ. ಉಳಿದ ದಿನ. ಡ್ಯಾನ್ಸ್, ಸ್ಮೈಲ್, ಸೆಟ್ಟಿಂಗ್, ಕಿಸ್ಸಿಂಗ್ ಅಂತ ಗಳಿಕೆ ಜೋರಾಗಿಯೇ ಇರುತಿತ್ತು.

******
ರೋಜ್ಮೇರಿಯ ಕುಟುಂಬ ದಲ್ಲಿರುವ ಇತರರು ಅಂದರೆ ಹಿರಿ ಮಗಳು ದೊಡ್ಡ ಅಣ್ಣ ಮೇಟ್ರಿಕ್ ಫೇಲ್ ಆಗಿ ಗ್ಯಾರೇಜಿನಲ್ಲಿ ದುಡಿಯುತಿದ್ದರೂ ಮವಾಲಿಗಳ ಸಹವಾಸದಿಂದ ಕುಡುಕನೂ, ಗೂಂಡಾನೂ ಆಗಿದ್ದ. ಬೇಜವಾಬ್ದಾರಿಯವನಾದ. ರೋಜ್ಮೇರಿಯ ಹಿಂದೆ ಸಾಲಾಗಿ ಮೂವರು ಹೆಣ್ಣು ಮಕ್ಕಳಿದ್ದರು. ಮತ್ತೊಬ್ಬ ಗಂಡು ಹುಡುಗ ಹತ್ತಿರದ ಸರ್ಕಾರಿ ಶಾಲೆಗೆ ಹೋಗುತಿದ್ದ. ಅವನು ಸರ್ಕಾರಿ ಶಾಲೆ ಸೇರಿದ ಮೇಲೇ ತೋಟದ ಕೆಲಸ ಮಾಡುತಿದ್ದ ತಂದೆ ತೆಂಗಿನ ಮರ ಏರಿ ಸೋಗೆ ಕಡಿಯುತಿದ್ದಾಗಲೇ ಕಾಲು ಜಾರಿ ಬಿದ್ದು ಬೆನ್ನಿನ ಮೂಳೆ ಮುರಿದು ಮನೆಯಲ್ಲಿ ಚಾಪೆ ಹಿಡಿದಿದ್ದ. ತಾಯಿ ಅಲ್ಲಿ ಇಲ್ಲಿ ಕೆಲಸ ಮಾಡಿ ಕಷ್ಟದಿಂದಲೇ ಸಂಸಾರವನ್ನು ನಡೆಸುತಿದ್ದಳು.

ಪ್ರತೀ ವರ್ಷ ಕುಕ್ಕೆಹಳ್ಳಿಯಲ್ಲಿ ವರ್ಷದ ಕೋಲ ವಿಜೃಂಭಣೆಯಿಂದಲೇ ನಡೆಯುತಿತ್ತು. ಭುಜಂಗ ಶೆಟ್ಟಿ ಕುಕ್ಕೆಹಳ್ಳಿಯಲ್ಲೇ ಬಹು ಪ್ರಖ್ಯಾತ, ಈಗ ಅವನು ತೀರಿ ಹೋದ ಮೇಲೆ ಅವನ ಮಗ ಸುರೇಶ ಶೆಟ್ಟಿ ತಂದೆಯ ಮುಂಬೈ ಕಾರುಬಾರನ್ನು ನಡೆಸುತಿದ್ದ. ಪ್ರತೀ ಆರು ತಿಂಗಳಿಗೊಮ್ಮೆ ಆತ ಕಾರಿನಲ್ಲಿ ಕುಕ್ಕೇಹಳ್ಳಿಗೆ ಬರುತಿದ್ದ. ಶಾಲೆಗೆ, ದೇವಸ್ಥಾನಕ್ಕೆ, ಮಸೀದಿ, ಚರ್ಚಿಗೆ ದಾನ ಮಾಡುತಿದ್ದನಾದುದರಿಂದ ಜನರು ಅವನನ್ನು’ಅಣ್ಣಾ ಶೇಠ್’ ಎಂದು ಕರೆಯುತಿದ್ದರು. ಕುಕ್ಕೇಹಳ್ಳಿಯಲ್ಲಿ ಆಗುವ ಕೋಲಕ್ಕೆ ಈಗೀಗ ಚಲನಚಿತ್ರ ನಟ, ನಟಿಯರು ಬರುತಿದ್ದ ಕಾರಣ ಕೋಲಕ್ಕೆ ತುಂಬಾ ಜನ ಬರುತಿದ್ದರು.

ಒಂದು ದಿನ ಪೇಟೆಗೆ ಹೋದ ರೋಸ್ ಮೇರಿ ಬಿಸಿಲಿನಲ್ಲಿ ನಿಂತು ಬಸ್ಸಿನ ದಾರಿ ಕಾಯುತಿದ್ದಾಗ  ಆಕೆಯನ್ನು ನೋಡಿದ ಅಣ್ಣಾ ಶೇಠ್ ತನ್ನ ಕಾರಿನಲ್ಲಿ ಕೂರಿಸಿ ಕುಕ್ಕೇಹಳ್ಳಿಗೆ ತಂದು ಬಿಟ್ಟಿದ್ದ. ದಾರಿಯಲ್ಲಿ ಮಾತನಾಡುತ್ತಲೇ ಸುರೇಶನು ಆಕೆಗೆ ಸೀದಾ ಹೇಳಿದ್ದ”ಇಲ್ಲಿ ಊರಿನಲ್ಲಿ ಯಾವ ಉತ್ಪತ್ತಿ ಇದೆ? ನೀನು ಮೇಟ್ರಿಕ್ ಮುಗಿಯುತ್ತಲೇ ಮುಂಬೈಗೆ ಬಾ, ನಾನು ನಿನಗೆ ಕೆಲಸ ಕೊಡಿಸುತ್ತೇನೆ. ರೋಸ್ ಮೇರಿಗೂ ಅವಳ ತಾಯಿಗೂ ತುಂಬಾ ಖುಷಿ ಆಗಿತ್ತು. ಆದರೂ ಅಷ್ಟೇ ಚಿಂತೆಯೂ. ಅರಳುತಿದ್ದ ಸುಂದರ ಹೆಣ್ಣು ಮಗಳು, ಎಲ್ಲಿಯಾದರೂ ಯಾರದಾದರೂ ಕೆಟ್ಟ ಕಣ್ಣು ಬಿದ್ದರೆ?ಎಂಬ ಚಿಂತೆಯೂ ಹತ್ತಿತು. ಇಲ್ಲಿ ಕುಟುಂಬವನ್ನು ನಡೆಸುವುದೂ ದುಸ್ತರವಾಗಿತ್ತು. ಹಣದ ಅವಶ್ಯಕತೆಯೂ ಇತ್ತು. ಒಂದು ಕಡೆ ಚಾಪೆ ಮೇಲೆ ಬಿದ್ದ ತಂದೆಗೆ ಔಷಧಿ ಕೊಡಿಸಬೇಕಿತ್ತು. ಮಕ್ಕಳ ಶಾಲೆಗೆ, ನಿತ್ಯದ ಖರ್ಚಿಗೆ ಊಟಕ್ಕೆ ಹಣದ ಅವಶ್ಯಕತೆ ತುಂಬಾ ಇತ್ತು. ರೋಜ್ಮೇರಿ ಗಟ್ಟಿ ಮನಸ್ಸು ಮಾಡಿದಳು. ಆ ವಯಸ್ಸಿನಲ್ಲಿ ಮುಂಬೈಗೆ ಹೋಗಲೂ ತಯಾರಾದಳು.

ಮುಂಬೈನಲ್ಲಿ ಅಣ್ಣ ರೋಸ್ ಮೇರಿಗೆ ಪಕಿಯಾನನ್ನು ಪರಿಚಯಿಸಿ ಅಗತ್ಯ ಬಿದ್ದಾಗ ಇವನು ಎಲ್ಲಾ ಸಹಾಯವನ್ನೂ ಮಾಡುತ್ತಾನೆಂದು ಹೇಳಿದ. ‘ಪಕಿಯಾ’ ಬೆಂಗಾಲಿ, ತೆಲುಗು, ಮಲಯಾಳಂ, ತುಳು, ಕನ್ನಡ, ಹಿಂದಿ, ಮರಾಠಿ ಹೀಗೆ ಏಳೆಂಟು ಭಾಷೆಗಳನ್ನು ತುಂಡು ತುಂಡಾಗಿಸಿ ಮಾತನಾಡುತಿದ್ದ. ಮೊದಲು ರೋಸ್ ಮೇರಿಗೆ  ನಂತರ ಆಂಧ್ರದಿಂದ ಬಂದ ಇಬ್ಬರು  ಹೆಣ್ಣು ಮಕ್ಕಳಿಗೆ ಒಂದು ಫ್ಲ್ಯಾಟ್ ನಲ್ಲಿ  ಉಳಕೊಳ್ಳುವ ವ್ಯವಸ್ಥೆಯನ್ನು ಮಾಡಿದ. ಅವರಿಗೆ ತಿನ್ನಲು, ಉಣ್ಣಲು ಅಣ್ಣನ ಹೋಟೇಲಿನಲ್ಲಿಯೇ ಬಂದೋಬಸ್ತ ಮಾಡಿದ್ದ ಕಾರಣ ಕೆಲಸ ಹುಡುಕಿ ಬಂದ ಹೆಣ್ಣು ಮಕ್ಕಳು ಮೊದಲು ಚಿಲ್ಲರೆ ಕೆಲಸವನ್ನು ಮಾಡುತಿದ್ದರು.

ಬೊಂಬಾಯಿ ಸ್ವರ್ಗ, ಮಾಯಾನಗರಿ ಎಂದೆಲ್ಲಾ ಕೇಳಿದ ರೋಸ್ ಮೇರಿಗೆ ಹಿಂದಿ, ಮರಾಠಿ ಸರಿಯಾಗಿ ಬಾರದಿದ್ದರೂ ಸ್ವಲ್ಪ ಶಬ್ದಗಳನ್ನು ಅರ್ಥ ಮಾಡಿಕೊಳ್ಳ ತೊಡಗಿದಳು. ದಾರಿಯಲ್ಲಿ ಬಿದ್ದ ಬೆಲ್ಲದ ತುಂಡಿಗೆ ಮುತ್ತಿಗೆ ಹಾಕಿದ ರಾಶಿ ಇರುವೆಗಳಂತೆ, ಬೊಂಬಾಯಿಯಲ್ಲಿ ಜನ ತುಂಬಿದ್ದರು.
ವಿವಿಧ ಜಾತಿ, ವರ್ಣದ ಜನರು ಎಲ್ಲೆಲ್ಲೂ ಕಾಣುವ ಕೊಳಕು, ರೈಲ್ವೇ ಟ್ರ್ಯಾಕಿನ ಬದಿಯಲ್ಲೇ ಡಬ್ಬ ಹಿಡಿದು ಕಕ್ಕಸಿಗೆ ಕೂರುವ ಜನ, ಅಲ್ಲೇ ಬದಿಯಲ್ಲಿ ಮಾರುತ್ತಿರುವ ವಡಾಪಾವ್ ಒಟ್ಟಿಗೆ ಶುಂಠಿ ಹಾಕಿದ ಚಹಾವನ್ನು ಹೀರುತ್ತಿರುವ ಜನ ಕಂಡು ಹೇಸಿಗೆಯಾದರೂ ಯೋಚನೆಯೊಂದನ್ನು ಬಿಟ್ಟು ಏನೂ ಮಾಡಲಾಗುತ್ತಿರಲಿಲ್ಲ.

ದಿನ  ಕಳೆದಂತೆ ಮೇರಿ ತಾಯಿಗೆ ಕಾಗದವನ್ನು ಬರೆದಳು. ತನ್ನ ಸೌಖ್ಯದ ಬಗ್ಗೆ ಬರೆದಳು, ಇನ್ನೂ ತನಗೆ ಕೆಲಸ ಸಿಗಲಿಲ್ಲವೆಂದೂ ಅಣ್ಣ ಶೇಠು ನೋಡಲು ಬರುತ್ತಿಲ್ಲವೆಂದೂ ಬರೆದಳು.

ರೋಸ್ ಮೇರಿ ಒಂದೆರಡು ಸಲ’ಪಕಿಯಾ’ ನಿಗೆ ಕೆಲಸದ ಬಗ್ಗೆ ಕೇಳಿದಳು. ಆಗ ಪಕಿಯಾ ನಾಲ್ಕೈದು  ದೊಡ್ಡ ನೋಟುಗಳನ್ನು ಕೊಟ್ಟು “ನಿನ್ನ ಹತ್ತಿರ ಇರಲಿ, ನಮ್ಮ ಲೆಕ್ಕವನ್ನು ನಂತರ ನೋಡುವ” ಎಂದು ಹೇಳಿದನು. ಆ ನೋಟುಗಳನ್ನು ರೋಸ್ ಮೇರಿ ಆಂಧ್ರದ ಹುಡುಗಿಯರ ಸಹಾಯದಿಂದ  ಪೋಸ್ಟ್ ಮೂಲಕ ಊರಿಗೆ ಕಳುಹಿಸಿದಳು. ಅವಳು ಬೊಂಬಾಯಿನಲ್ಲಿದ್ದರೂ ಅವಳ ದೇಹ, ಮನಸ್ಸು ಎಲ್ಲಾ ಊರಿನಲ್ಲೇ ಇತ್ತು‌. ಕಷ್ಟ ಪಡುವ ತಾಯಿ, ಚಾಪೆ ಹಿಡಿದ ತಂದೆ, ಶಾಲೆಯಲ್ಲಿ ಕಲಿಯುತ್ತಿರುವ ತಮ್ಮ ತಂಗಿಯಂದಿರು.

ಬೆಳಗಿನಿಂದ ರಾತ್ರಿ ತನಕ ಹೋಟೇಲಿನಲ್ಲಿ ಕುಳಿತು ಹೆಣ್ಮಕ್ಕಳಿಗೆ ಬೇಸರವಾದಾಗ ‘ಪಕಿಯಾ’ ಅವರಿಗೆ ಬೊಂಬಾಯಿ ತೋರಿಸಿದ. ಹ್ಯಾಂಗಿಂಗ್ ಗಾರ್ಡನ್, ಗೇಟ್ ವೇ, ಕೊಲಾಬಾ, ಚೌಪಾಟಿ ಬೀಚ್, ಭಾಯ್ಕಲಾ, ರಾಣಿಬಾಗ್ ಕಾರು ಅಲ್ಲದೇ ಟ್ರೈನು, ಬಸ್ಸು, ಅಟೋ, ಟ್ಯಾಕ್ಸಿ ಯಲ್ಲಿ ಕುಳ್ಳಿರಿಸಿ ತಿರುಗಾಡಿಸಿದ. ರೋಸ್ ಮೇರಿಗೆ  ಪ್ರಾಯ ಹದಿನಾರಾದರೂ ಆಕೆ ಹದಿನೆಂಟರ ಸುಂದರ ಯುವತಿಯಂತೆ ಕಾಣುತಿದ್ದಳು. ಆಕರ್ಷಕ ಬಿಳೀ ಬಣ್ಣ, ಉದ್ದ ಕಪ್ಪು ಕೂದಲು, ಮೇಕಪ್ಪಿನ ಅಗತ್ಯವೇ ಇರಲಿಲ್ಲ ಆಕೆಗೆ.
ಯಾವುದೇ ಗಂಡಸಿನ ದೃಷ್ಟಿ ಒಂದು ಬಾರಿ ಅವಳ ಮೇಲೆ ಬಿದ್ದರೆ ಪುನಃ ಪುನಃ ತಿರುಗಿ ನೋಡುವಷ್ಟು ಆಕೆ ಸುಂದರವಾಗಿದ್ದಳು. ಇದು
ಪಕಿಯಾನ ಗಮನಕ್ಕೂ ಬಂದಿತ್ತು. ಆದರೆ ದಿನವಿಡೀ ಅವರನ್ನು ಕಾಯುತಿದ್ದ ಪಕ್ಯಾನ ಮುಂದೆ ಯಾರ ಆಟವೂ ನಡೆಯುತ್ತಿರಲಿಲ್ಲ.

*****
ರೋಸ್ ಮೇರಿ ಊರಿನಲ್ಲಿರುವಾಗ ಅವಳಿಗೊಂದು ಪ್ರಶ್ನೆ ಕಾಡುತಿತ್ತು. ಶಾಲಾ ದಿನಗಳಲ್ಲಿ ನಮಗಿಂತ ದೊಡ್ಡ ಹೆಣ್ಣು ಮಕ್ಕಳು ಬೊಂಬಾಯಿಗೆ ಹೋದವರೆಲ್ಲಾ ಎಲ್ಲಿರುವರು? ಹಾಲು ಮಾರುವ ಆಂಟಿ ಮಗಳು ಸಿಂತಿ, ಮತ್ತೆ ಎಲ್ಲಿ ಹೋದಳು ಅಬೆಲಮ್ಮನ ಮಗಳು ಫೆಲ್ಸಿ, ಆದರೆ ಊರಿನಲ್ಲಿ ಅವರವರ ಮನೆಗೆ ಹಣ ಮಾತ್ರ ಸರಾಗವಾಗಿ ಬರುತಿತ್ತು.

ರೋಸ್ ಮೇರಿ ಮುಂಬೈಗೆ ಬಂದು ಐದಾರು ತಿಂಗಳುಗಳು ಕಳೆದಿರಬಹುದು. ಮೆಲ್ಲನೆ ಆದರೂ ಒಂದೊಂದೇ ತಿಳಿಯಲು ಆಕೆಗೆ ಹೆಚ್ಚು ಸಮಯ ತಾಗಲೇ ಇಲ್ಲ. ನಾವು ಏನು ನೋಡುತ್ತೇವೆಯೋ ಅದು ಹಾಗೇ ಇರುವುದಿಲ್ಲ. ಪ್ರತೀ ಒಂದರಲ್ಲಿ ಒಂದು ರಹಸ್ಯ ಅಡಗಿದೆ ಎಂದು ಆಕೆಗೆ ಗೊತ್ತಾಯಿತು.

ಏನೂ ಕೆಲಸವನ್ನು ಮಾಡದೇ ಆಕೆ ತಿಂಗಳಿಗೆ ಎರಡೂ ವರೆ, ಮೂರು ಸಾವಿರ ಊರಿಗೆ ಕಳುಹಿಸುತಿದ್ದಳು. ಇವಳು ಮಾತ್ರವಲ್ಲ, ಆ ಆಂಧ್ರದ ಹೆಣ್ಣು ಮಕ್ಕಳು ಕೂಡಾ ಊರಿಗೆ ಹಣ ಕಳುಹಿಸುತಿದ್ದರು. ಅಣ್ಣಾ ಶೇಠ್ ನ ಒಳ್ಳೆಯ ಮನಸ್ಸಿನ ಲಾಭ ವನ್ನುಪಡೆಯುವ ಆಸೆ ರೋಸ್ ಮೇರಿಗೆ ಇರಲಿಲ್ಲ. ಹೇಗಾದರೂ ಕೆಲಸ ಹಿಡಿದು ಅದನ್ನು ಪಾವತಿಸುವ ಯೋಜನೆಯಲ್ಲಿದ್ದಳು. ಒಂದು ದಿನ ಆಕೆ ತನ್ನ ಮನದಿಂಗಿತವನ್ನು ಪಕಿಯಾನಿಗೆ ತಿಳಿಸಿದಳು. ಸ್ವಲ್ಪ ಹೊತ್ತುಆಲೋಚಿಸಿ ಪಕ್ಯಾ ರೋಸ್ ಮೇರಿಗೆ ಹೇಳಿದ.

ಅಣ್ಣನ ಕಾರುಬಾರು ನಿನಗೆ ಗೊತ್ತು. ಅವನು ಒಂದು ಹೋಟೇಲನ್ನು ನಡೆಸುತಿದ್ದಾನೆ. ಇಲ್ಲಿ ವೇಯ್ಟರ್, ಡ್ಯಾನ್ಸ್, ಅಡುಗೆ ಬಿಟ್ಟರೆ ಬೇರೇನೂ ಕೆಲಸ ಇಲ್ಲ. ನಿನಗೆ ಸಂತೋಷವಾಗುವುದೆಂದಿದ್ದರೆ ಡ್ಯಾನ್ಸ್ ಮಾಡು. ಅದರಲ್ಲಿ ನಿನಗೆ ಸಂಬಳವೂ ಇದೆ, ಹಾಗೂ ಗಿರಾಕಿಗಳು ಕೊಡುವ ಟಿಪ್ಸೂ ಇದೆ, ಪಕಿಯಾ ಹೇಳಿದ.

ಮಾಯಾ ಬಾರ್ ನಲ್ಲಿ ಮೂರು ಪ್ರಕಾರದ ಹೋಟೇಲುಗಳಿದ್ದವು. ಮುಂದೆ ರಸ್ತೆಗೆ ಮುಖ ಮಾಡಿ ಮಾಯಾ ಫೇಮಿಲಿ ರೆಸ್ಟೋರೆಂಟ, ನಾಲ್ಕು ರಸ್ತೆಯ ಸಿಗ್ನಲಿನಲ್ಲಿರುವ ಈ ಹೋಟೇಲಿನ ಎಡ ಬದಿಯಲ್ಲಿ ಫುಟ್ ಪಾತಿನಲ್ಲಿ  ನಾಲ್ಕು ಕಂಬಗಳನ್ನು ಹಾಕಿ ಸಾಯಂಕಾಲ ಅಲ್ಲಿ ಕಂಬಗಳನ್ನು ಹಾಕಿ ಕಬಾಬ್, ತಂದೂರಿ ರೆಸ್ಟೋರೆಂಟ್, ಯಾವುದೇ ಪರ್ಮಿಟ್ ಇಲ್ಲದ ಕಾರಣ ಅಣ್ಣಾ ಶೇಠು ಮುನ್ಸಿಪಾಲಿಟಿಯವರಿಗೆ ಭಾರೀ ಮೊತ್ತವನ್ನು ತಿನ್ನಿಸುತಿದ್ದ. ಮಧ್ಯದಲ್ಲಿ ಮಾಧ್ಯಮದವರಿಗೆ ತೋರಿಸಲು ಈ ನಾಲ್ಕು ಕಂಭ ಹಾಗೂ ಹೊದಿಸಿದ ಮೇಲಿನ ತಗಡು ಮುನ್ಸಿಪಾಲಿಟಿಯ ಬುಲ್ಡೋಝರ್ ಬಂದು ಕೆಡವುತಿತ್ತು. ಏನೋ ಸ್ವಲ್ಪ ಸಾವಿರ ನಷ್ಟ, ಕೆಲವೇ ದಿನಗಳಲ್ಲಿ ವಸೂಲಿ ಆಗುತಿತ್ತು. ಇದೆಲ್ಲಾ ಎಚ್ಚರಿಕೆ ನೀಡಿದ ನಂತರವೇ ನಡೆಯುತಿತ್ತು. ರೈಲ್ವೇ ಸ್ಟೇಶನ್ ನ್ನಿಂದ ಒಂದೂವರೆ ಫರ್ಲಾಂಗು ದೂರ ಇರುವ ಈ ಹೋಟೇಲಿನಲ್ಲಿ ಗಿರಾಕಿಗಳ ಗೌಜಿಯೇನೂ ಇರಲಿಲ್ಲ.

ಆದರೆ ಪ್ರಮುಖ ಆಕರ್ಷಣೆ ಎಂದರೆ ತಳಮಜಲಿನಲ್ಲಿರುವ “ಮಾಯಾ ಡ್ಯಾನ್ಸ್ ಬಾರ್” ಸಾಯಂಕಾಲದ ಏಳು ಗಂಟೆಗೇನೇ ಗಿರಾಕಿಗಳು ಬರುತಿದ್ದರು. ಅಧಿಕ ಬೆಲೆಯ ಕಾರುಗಳಲ್ಲಿ ಬರುತಿದ್ದವರು ಕತ್ತಲಲ್ಲಿ ತಮ್ಮ ತಮ್ಮ ಮೇಜಿನ ಮುಂದೆ ಕುಳಿತಿರುತಿದ್ದರು.
ಇವರಿಗೆ ಕುಡಿಯುವ ನೀರು ಕೊಡುವುದು ಬಿಯರ್, ವ್ಹಿಸ್ಕಿ, ಬ್ರಾಂಡಿ, ಸ್ಕೋಚ್ ಎಲ್ಲಾ ಕೊಡಲು ಹೆಣ್ಣು ಮಕ್ಕಳಿದ್ದರು. ಮೆಲ್ಲನೆ ವೇದಿಕೆಯ ಮೇಲಿನ ಬಣ್ಣ ಹೆಚ್ಚಾಗುತಿತ್ತು. ಮ್ಯೂಜಿಕ್ ಶುರು ಆಗುತಿತ್ತು. ದ್ವಂದಾರ್ಥದ ಭೋಜಪುರಿ ಪದ್ಯಗಳಿಗೆ ಡ್ಯಾನ್ಸ್ ಮಾಡುವ ಹೆಣ್ಣು ಮಕ್ಕಳು ಉದ್ದದ ಕೂದಲನ್ನು ಅಲುಗಾಡಿಸುತ್ತಾ ಸೊಂಟ ತಿರುಗಿಸಿ ವಿವಿಧ ಭಂಗಿಗಳಲ್ಲಿ  ತೋರಿಸುತ್ತಿರುವ ಹೆಣ್ಣು ಮಕ್ಕಳನ್ನು ಪ್ರಥಮ ಬಾರಿಗೆ ನೋಡುತಿದ್ದ ರೋಸ್ ಮೇರಿಗೆ ಒಂದು ರೀತಿಯ ಬೇಸರವೇ ಆಯಿತು. ಅಲ್ಲದೆ ಗಿರಾಕಿಗಳು ಪುನಃ ಪುನಃ ಅವೇ ಹಾಡುಗಳನ್ನು ಕೇಳಲು ಇಷ್ಟ ಪಡುತಿದ್ದರು. ಮತ್ತೆ ಡಿ. ಜೆ ಗಳೂ ಅವನ್ನೇ ಹಾಕುತಿದ್ದರು. ಹೆಣ್ಣುಗಳು ಅದೇ ರೀತಿ ನಲಿಯುತಿದ್ದರು.

ಸ್ವಲ್ಪ ಚಿತ್ರ ನಿರ್ಮಾಪಕರೂ ಬರುತಿದ್ದರು ಸ್ವಲ್ಪ ಇವರ ದಲ್ಲಾಳಿಗಳು ಫಿಲಂ ನಲ್ಲಿ ಕೆಲಸ ಕೊಡಿಸುತ್ತೇವೆಂದು ಪುಸಲಾಯಿಸುತಿದ್ದರು. ಮತ್ತೆ ಅವರೊಟ್ಟಿಗೆ ಹೋದವರು ಯಾರೂ ಮಾಯಾಬಾರಿಗೆ ಹಿಂತಿರುಗಿ ಬರಲಿಲ್ಲ. ಮೇಲೆ ಬೇರೆ ಬೇರೆ ಸುದ್ದಿಗಳು, ಹೀಗಾಯಿತು ಹಾಗಾಯಿತು ಎಂದು, ವೆಯ್ಟರ್, ಡ್ಯಾನ್ಸರ್, ಮತ್ತು ಕ್ಲೀನರ್ ಎಂದು ಸುಮಾರು ಮೂವ್ವತ್ತೈದು ಜನ ಕೆಲಸ ಮಾಡುತಿದ್ದರು. ಊಟಕ್ಕೆ ಸ್ಟಾಫ್ ಊಟ ಸಿಗುತಿತ್ತು. ಹಾಗಾಗಿ ಕೆಲವು ಕೆಲಸವಿಲ್ಲದವರೂ ಅಲ್ಲಿದ್ದರು. ಕೆಲವರು ಕೆಲಸವನ್ನು ಕಲಿಯುತಿದ್ದರು.

ಆದರೆ ಕೆಲಸವನ್ನು ಕಲಿಯುವ ಹುಮ್ಮಸ್ಸಿನಲ್ಲಿರುವ  ರೋಸ್ ಮೇರಿಗೆ ಬೇರೆ ಉಪಾಯ ಇರಲಿಲ್ಲ. ಅವಳು ಗಿರಾಕಿಗಳಿಗೆ ಮೆನು ಹಾಗೂ ನೀರು ಕೊಡುವ ಕೆಲಸವನ್ನು ಮಾಡುತಿದ್ದಳು. ಮತ್ತೆ ಗಿರಾಕಿಗಳ ಆರ್ಡರ್ ತೆಗೆದುಕೊಳ್ಳಲು ಬೇರೆ ಹುಡುಗಿಯರಿದ್ದರು. ಅವರಿಗೆ ಯಾರನ್ನು ಪುಸಲಾಯಿಸಬೇಕು, ಹಣ ಹೇಗೆ ಕೀಳಬೇಕು ಎಂದು ಚೆನ್ನಾಗಿ ತಿಳಿದಿತ್ತು. ಬಿಲ್ಲು ಪಾವತಿಸುವಾಗ ಟಿಪ್ಸ ಕೊಡುವ ನೆಪದಲ್ಲಿ ಕೆಲವು ಗಿರಾಕಿಗಳು ಹುಡುಗಿಯರ ನಂಬರನ್ನು ಕೇಳಿ ಪಡಕೊಳ್ಳುತಿದ್ದರು. ಮತ್ತೆ ಹಣದ ಆಸೆಗಾಗಿ ಕೆಲ ಹೆಣ್ಣು ಮಕ್ಕಳು ಎಲ್ಲೆಲ್ಲಿಗೋ ಹೋಗುತಿದ್ದರು. ಮತ್ತೆ ಏನೇನು ಮಾಡಿದರು ಎಂಬ ಸುದ್ದಿ ಪಕಿಯಾನ ಕಿವಿಗಳ ಮೇಲೂ ಬೀಳುತಿತ್ತು.

ಒಮ್ಮೆ ಒಬ್ಬ ಗಿರಾಕಿ ರೋಸ್ ಮೇರಿಗೆ ಬಾ ಎಂದು ಸನ್ನೆ ಮಾಡಿದ. ರೋಸ್ ಮೇರಿಗೆ‌ ಇದು ನಿತ್ಯದ ಕೆಲಸವಾದುದರಿಂದ ಅವಳು ಗೊತ್ತಿಲ್ಲ ದಂತೆ ಮಾಡಿ ಹೋಗಲೇ ಇಲ್ಲ. ಸ್ವಲ್ಪ ಸಮಯದ ನಂತರ ಕುಡಿತದ ಅರ್ಡರ್ ತೆಗೆದುಕೊಳ್ಳುತಿದ್ದ ಹುಡುಗಿ ಬಂದು ರೋಸ್ ಮೇರಿಗೆ “ಆ ಕಸ್ಟಮರ್ ನೋಡು ನಿನ್ನನ್ನು ಕರೀತಾನೆ, ಹೆದರಬೇಡ ಹೋಗು ನಾವಿದ್ದೇವೆ ಅಂದಾಗ ಉಪಾಯ ಇಲ್ಲದೆ ಅವನ ಬಳಿಗೆ ಹೋದಳು.

“ನಿನ್ನ ಹೆಸರೇನು? ಗಿರಾಕಿ ಮದ್ಯದ ಅಮಲಿನಲ್ಲಿ ರೋಸ್ ಮೇರಿಯ ಎದೆ ನೋಡುತ್ತಾ ಕೇಳಿದನು.
“ರೋಸ್ ಮೇರಿ”
“ಓಹ್ ಕ್ಯಾಥಲಿಕ್! . . . ವೆರ್ರಿ ಗುಡ್. . ಅದನ್ನೇ ಎಣಿಸುತ್ತಾ ಇದ್ದೆ. . . ಕ್ಯಾಥಲಿಕ್ ಹೆಣ್ಣು ಮಕ್ಕಳು ಮಾತ್ರ ಸೆಕ್ಸಿ ಕಾಣುತ್ತಾರೆ. . . ನಿನ್ನ ಊರು ಯಾವುದು?”
“ಮಂಗ್ಳೂರು”
ಅರ್ರೇ. . . . ತುಳು ಬರುತ್ತದೆಯಾ? ಆತ ತುಳುವಿನಲ್ಲಿ ಮತನಾಡತೊಡಗಿದ.
“ಹೌದು”
ಅಷ್ಟರಲ್ಲಿ ತಿನಿಸು ಹಾಗೂ ಬಿಯರ್ ಬಾಟಲ್ ತಂದ ಹೆಣ್ಣು ಮಗಳು “ನಿನ್ನನ್ನು ಅಣ್ಣಾ ಕರೀತಾರೆ ಹೋಗು” ಎಂದಳು. ಹಾಗೂ ರೋಸ್ ಮೇರಿಯನ್ನು ಒಳಗೆ ಕಳುಹಿಸಿದಳು.
ಒಳಗೆ ಬಂದ ರೋಸ್ ಮೇರಿಗೆ ಹೆಣ್ಣು ಗಳು “ಯಾವುದೇ ಗಿರಾಕಿಗೆ ಯಾವತ್ತೂ ನಿನ್ನ ಹೆಸರು ಹಾಗೂ ವಿಳಾಸ ಕೊಡಲೇ ಬಾರದೆಂದು ಸಮಜಾಯಿಷಿ ಹೇಳಿದರು.
ರಾತ್ರಿ ಹಿಂತಿರುಗುವಾಗ ಪಕಿಯಾ ರೋಸ್ ಮೇರಿಯ ಹೆಸರನ್ನು”ಜೈನಾಬಿ” ಎಂದು ಪರಿವರ್ತಿಸಿದ.
“ಜೈನಾಬಿ” ಆದ ರೋಸ್ ಮೇರಿಗೆ ಈಗ ಗೊತ್ತಾಯಿತು ಎಲ್ಲರ ಹೆಸರು” ಮಾಧುರಿ” “ಹೇಮಾ” ಜೂಹಿ” “ಸಿಮ್ರನ್” “ಕಾಜಲ್” “ಸಿಮೋನಾ” “ರೂಪಾ”ಹೇಗಾಯಿತೆಂದು ಗೊತ್ತಾಯಿತು.

ರೋಸ್ ಮೇರಿ ಬೊಂಬಾಯಿಗೆ ಬಂದು ಸುಮಾರು ಒಂದು ವರ್ಷ ಆಯಿತು. ಅವಳು ಕೂಡಾ ಬೊಂಬಾಯಿ ಎಂಬ ಸ್ವರ್ಗ ದಲ್ಲಿ ಗಳಿಸುವ ದಾರಿಯನ್ನು ಕಂಡುಕೊಂಡಳು. ಈ ಲಜ್ಜೆ, ಮಾನ, ಮರ್ಯಾದೆ ಎಲ್ಲಾ ಒಂದು ರೀತಿಯ ಅಡಚಣೆಗಳು. ಜೀವಿಸಲು, ಎಲ್ಲವನ್ನೂ ಖರೀದಿ ಮಾಡಲು ಕೇವಲ ಹಣ ಬೇಕಾಗುತ್ತದೆ. ಹಣದ ಮುಂದೆ ಎಲ್ಲವೂ ಶೂನ್ಯ. ಮನುಷ್ಯತ್ವ ಕೂಡಾ.

ಜೈನಾಬಿ ಆದ ರೋಸ್ ಮೇರಿ ಈಗ ಫ್ಲ್ಯಾಟ್ನಲ್ಲಿ ಒಬ್ಬಳೇ ಇರುತಿದ್ದಳು. ಪ್ರತೀ ತಿಂಗಳು ತಪ್ಪದೇ ಮನೆಗೆ ಹಣವನ್ನು ಕಳುಹಿಸುತಿದ್ದಳು. ಒಂದೆರಡು ಸಲ ಅವಳ ಡ್ಯಾನ್ಸ್ ನೋಡಿ ಬಕ್ಷೀಸು ಕೊಡುವ ನೆಪದಲ್ಲಿ ಗಿರಾಕಿಗಳು ಅವಳ ಮೈ ಕೈ ಮುಟ್ಟಿದಾಗ ಹೇಸಿಗೆಯಾದರೂ ಉಳಿದ ಹೆಣ್ಣು ಮಕ್ಕಳು ಅವಳನ್ನು ಸಂಭಾಳಿಸಿದರು.

ಬಂಗಾಲದಿಂದ ಬಂದ ಒಬ್ಬ ಕಾಸ್ಟಿಂಗ್ ಡೈರೆಕ್ಟರ್ “ಊರ್ಮಿಲಾ” ಎಂಬ ಹೆಣ್ಣು ಮಗಳನ್ನು ಚಿತ್ರದಲ್ಲಿ ಡ್ಯಾನ್ಸ್ ಮಾಡಲು ಛಾನ್ಸ ಕೊಡುತ್ತೇನೆಂದು ಕರೆದುಕೊಂಡು ಹೋದ. ನೋಡಲು ಚಿತ್ರದ ನಾಯಕಿಯಂತಿದ್ದ ಊರ್ಮಿಲಾ ಸುಮಾರು ತಿಂಗಳಿನ ನಂತರ ಕೆಲಸ ಬೇಕೆಂದು ಇಲ್ಲಿಗೇ ಬಂದಿದ್ದಳು. ಆಗ ಆಕೆಯಲ್ಲಿ ಮುಂಚಿನ ಚೆಲುವು ಇರಲಿಲ್ಲ. ಯಾರ ಹತ್ತಿರವೂ ಆಕೆ ಮಾತನಾಡದಿದ್ದರೂ ಮದುವೆ ಮಾಡಿಕೊಳ್ಳುತ್ತೇನೆಂದು ಕರೆದುಕೊಂಡು ಹೋದ ಡೈರೆಕ್ಟರ್ ಇವಳ ಗರ್ಭವನ್ನು ತೆಗೆಸಿದ ಸಂಗತಿ ಪಕಿಯಾಳಿಂದ ತಿಳಿದ ಜೈನಾಬಿ ಅವಾಕ್ಕಾದಳು.

ಆದರೆ ಸ್ವಲ್ಪ ದಿವಸದ ನಂತರ ಊರ್ಮಿಳಾಳಿಂದ ಬೇರೆಯೇ ಕಥೆಯನ್ನು ಕೇಳಿದ ಜೈನಾಬಿಗೆ ಅದನ್ನು ಅರಗಿಸಲು ಕಷ್ಟವಾಯಿತು. “ಇವರೆಲ್ಲ ದಂಧೆ ಮಾಡುವವರು. ಹೆಣ್ಮಕ್ಕಳನ್ನು ಮಾರುವವರು, ಇದೂ ಒಂದು ರೀತಿಯ ವ್ಯಾಪಾರ ವ್ಯವಸ್ಥಿತವಾಗಿಯೇ ನಡೆಯುತ್ತಿದೆ. ಈ ಹೋಟೇಲು ಒಂದು ನೆಪ, ಇಲ್ಲಿ ಇರುವವರೆಲ್ಲಾ ದಲ್ಲಾಳಿಗಳೇ ಇದು ಸತ್ಯ. ನನ್ನನ್ನುಆ ಕಾಸ್ಟಿಂಗ್ ಡೈರೆಕ್ಟರನಿಗೆ ಮಾರಿದವನೂ ಇವನೇ, ನಾನು ಮೊದಲೇ ಜೀವನದಲ್ಲಿ ಸೋತು ಹೋದವಳು, ಕಾವಲಿಯಲ್ಲಿ ಬೇಯುತಿದ್ದವಳನ್ನು ಬೆಂಕಿಯಲ್ಲಿ ದೂಡಿದರು. ನನ್ನಂತಹವರನ್ನು, ನಿನ್ನಂತಹವರನ್ನು ಇವರು ಈ ಕಾರಣಕ್ಕಾಗಿಯೇ ಸಾಕುತ್ತಾರೆ, ಅವರಿಗೆ ಬೇಕಾದವರ ಹಸಿವನ್ನು ನೀಗಿಸಲು, , , , ಊರ್ಮಿಳಾ ಮಾತನಾಡುತ್ತಲೇ ಇದ್ದಳು.

“ಆದರೆ ನಿನಗೆ ಇವರು ಇಷ್ಟು ಮೋಸಗಾರರೆಂದು ತಿಳಿದರೂ ನೀನ್ಯಾಕೆ ಪುನಃ ಇಲ್ಲೇ ಕೆಲಸ ಮಾಡುತ್ತಿರುವೆ? ಬೇರೆ ಕಡೆ ನೀನು ಕೆಲಸ ಮಾಡಬಹುದಲ್ವಾ?” ರೋಸ್ ಮೇರಿ ಕೇಳಿದಳು.

ನೀನೇನು ಎಣಿಸುತ್ತೀ ಇವರೆಲ್ಲಾ ಭಾಗ್ಯವಂತರೆಂದೇ?ಎಲ್ಲಿ ತನಕ ಅವರು ಹೇಳಿದಂತೆ ನಾವು ಮಾಡುತ್ತೇವೋ ಅಲ್ಲಿ ತನಕವೇ ಇದು ಒಂದು ರೀತಿಯ ವ್ಯವಹಾರ ಮಾಡುತ್ತಾರೆ. ಯಾವಾಗ ನಾವು ವಿರುಧ್ಧ ನಿಲ್ಲುತ್ತೇವೆಯೋ ಆಗ ನೋಡು ನಮ್ಮನ್ನು ಒಂದು ಗತಿ ಮುಟ್ಟಿಸುತ್ತಾರೆ, , , , , , ” ಊರ್ಮಿಳಾಳ ಮಾತನ್ನು ಜೀರ್ಣಿಸಲಾಗದ ರೋಸ್ ಮೇರಿ ಸುಮ್ಮನಾದಳು.
*******

ದಿನ ಕಳೆದಂತೆ ರೋಸ್ ಮೇರಿ ಪರೀಕ್ಷಿಸತೊಡಗಿದಳು, ಒಂದೊಂದೇ ಹೆಣ್ಣು ಮಕ್ಕಳು ಮಾಯವಾಗುತಿದ್ದರು. ಆಂಧ್ರದಿಂದ ಬಂದ ಒಬ್ಬ ಹೆಣ್ಣು ಮಗಳು ಒಬ್ಬ ಅರಬಿಯೊಂದಿಗೆ ಓಡಿ ಹೋದಳೆಂದು ಪಕಿಯಾ ಹೇಳುತಿದ್ದ. ಸ್ವಲ್ಪ ಹುಡುಗಿಯರು ಹೋಗುತಿದ್ದರೂ ಹೊಸ ಹೊಸ ಹುಡ್ಗೀರು ಬರುತಿದ್ದರು. ಯಾರೋ ಅಸ್ಸಾಂ–ಮೇಘಾಲಯದಿಂದ, ಇನ್ಯಾರೋ ಗಟ್ಟದ ಮೇಲಿಂದ, ಮತ್ತು ಎಲ್ಲಿಂದಲೋ, ಎಲ್ಲರಿಗೂ ಹಣ ಸಂಪಾದನೆ ಬೇಕಿತ್ತು. ಯಾವತ್ತೂ ನಿಲ್ಲದ ಬೊಂಬಾಯಿ ನಗರದಲ್ಲಿ ಇದರ ಅಗತ್ಯ ಇತ್ತು. ಇಲ್ಲಿಗೆ ಬರುವ ಹೆಚ್ಚಿನ ಗಿರಾಕಿಗಳು ಅಂದರೆ ಮದುವೆ ಆದ ಗಂಡಸರು, ವಕೀಲರು, ಡಾಕ್ಟರ್, ಎಲ್ಲಾ ಸಮಾಜದ ಪ್ರತಿಷ್ಠಿತರೇ, ಮಂತ್ರಿ/ಕಾರ್ಪೋರೇಟರ್ ಗಳ ನೆಂಟರು ಕೆಲವು ಸಲ ಅವರೇ ಖುದ್ದು.

ಒಂದೆರಡು ಸಲ ಮಾಯಾಬಾರ್ ನಲ್ಲಿ ಎರಡ ಮೂರು ಗಿರಾಕಿಗಳು ಒಂದೇ ಹೆಣ್ಣಿನ ಮೇಲೆ ಹಣ ಎಸೆಯುತಿದ್ದರು. ಅದಲ್ಲದೇ ಒಬ್ಬರ ನೋಟಿನ ಕಂತೆ ಮುಗಿದ ನಂತರ ಅವರಲ್ಲಿದ್ದ ಪಿಸ್ತೂಲು ಮಾತನಾಡುತಿತ್ತು. ಜೀವನದಲ್ಲಿ ಮೊದಲ ಬಾರಿಗೆ ಪಿಸ್ತೂಲು ಚಲಾವಣೆಯನ್ನು ನೋಡುತಿದ್ದ ಜೈನಾಬಿ ಬೆವರಿದಳು. ನಡುಗುತ್ತಾ ಡ್ಯಾನ್ಸ್ ಮಾಡುತ್ತಾ ಹೋಗುವಾಗ ಆಕೆ ತನ್ನ ಅಳಲನ್ನು ಪಕಿಯಾನ ಮುಂದೆ ತೋಡಿದಳು.

ಕೇಳಿದ ಪಕಿಯಾ ನಗಾಡಲು ಶುರು ಮಾಡಿದ. “ಜೈನಾಬಿ ನಿನಗೆ ನಾನು ಬೇರೆ ಕೆಲಸವನ್ನು ಹುಡುಕಿ ಕೊಡುತ್ತೇನೆ, ನೀನು ಚಿಂತಿಸಬೇಡ, ನಾನಿದ್ದೇನೆ ಬೇರೆಲ್ಲೂ ಕೆಲಸವನ್ನು ಹುಡುಕಬೇಡ. ”

ಹೀಗೆ ಜ್ವರದ ಕಾರಣ ಹೇಳಿ ಜೈನಾಬಿ ಸ್ವಲ್ಪ ದಿನ ಫ್ಲ್ಯಾಟಿನಲ್ಲೇ ಉಳಿದಳು. ದಿನಾ ಬದಿಯ ಫ್ಲ್ಯಾಟಿನಲ್ಲಿರುವ ಅಮ್ಮಿ ಅನ್ನ ರೊಟ್ಟಿ ಕೊಟ್ಟು ಸಂಭಾಳಿಸಿದಳು.

ಸ್ವಲ್ಪ ದಿವಸದ ನಂತರ ಪಕಿಯಾ ಬೇರೊಂದು ಕೆಲಸವನ್ನು ಜೈನಾಬಿಗೆ ಕೊಡಿಸಿದ, ಸಮಜಾಯಿಸಿದ. ವಿದೇಶೀಯ ಬ್ಯುಸ್ನೆಸ್ ಮಾಡುವವರು ಬರುತ್ತಾರೆ ಆಗ ಇತರ ರಾಜ್ಯದ ಬಿಸ್ನೆಸ್ ನವರೂ ಇಲ್ಲಿಗೆ ಬರುತ್ತಾರೆ. ಅವರೆಲ್ಲಾ ಐದು–ಏಳು ಸ್ಟಾರ್ ಹೋಟೇಲಿನಲ್ಲಿರುತ್ತಾರೆ, ಮತ್ತು ಅವರ ಮೀಟಿಂಗು ಅಲ್ಲಿ ನಡೆಯುತ್ತಾ ಇರುತ್ತದೆ. ಅವರನ್ನು ಏರ್ಪೋಟಿನಿಂದ ಸ್ವಾಗತಿಸಿ ಹೋಟೇಲ್ ಮುಟ್ಟುವ ತನಕ ನೀನು ಅಲ್ಲಿ ಇರಬೇಕು. “ಪಕಿಯಾ ಹೇಳುತ್ತಲೇ ಇದ್ದ.

“ಅಂದರೆ ನನ್ನ ಕೆಲಸ?” ರೋಸ್ ಮೇರಿ ಪ್ರಶ್ನಿಸಿದಳು.
“ಅದೇ ನಿನ್ನ ಕೆಲಸ”, ನೀನು ಅವರೊಂದಿಗಿದ್ದು ಕಂಪೆನಿ ಕೊಡುವುದು. ”
“ಆದರೆ ನನಗೆ ಮಾತನಾಡಲು ಭಾಷೆ ಬರುವುದಿಲ್ಲ, ಎಂತಹ ಕಂಪೆನಿ ಕೊಡಬಲ್ಲೆ ನಾನು?”ರೋಸ್ ಮೇರಿ ಸತ್ಯವನ್ನೇ ನುಡಿದಳು.

ಮನುಷ್ಯನಿಗೆ ಹಲವಾರು ಭಾಷೆಗಳಿರುತ್ತವೆ. ನಾಲಗೆ ಭಾಷೆ, ಕಣ್ಸನ್ನೆ ಭಾಷೆ, ಸಮಜಾಯಿಸುವ ಭಾಷೆ, ನೀನೇನೂ ಮಾತನಾಡಬೇಡ, ಒಳ್ಳೆಯ ಬಟ್ಟೆಗಳನ್ನು ಹಾಕಿ ಅವರೊಂದಿಗೆ ಇರು, ಮತ್ತೆ ಮುಗುಳ್ನಗುತ್ತಿರು. ಆ ಬಿಸ್ನೆಸ್ ಮ್ಯಾನ್ ಗಳ ಹತ್ತಿರ ಬೇಕಾದಷ್ಟು ಹಣವಿದ್ದರೂ ಸುಂದರ ಹುಡುಗಿಯರಿಲ್ಲ. ಅವರ ಮೀಟಿಂಗು ಮುಗಿದ ಮೇಲೆ ಖುಷಿಯಲ್ಲಿದ್ದರೆ ಅವರು ಯಥೇಚ್ಛ ಬಹುಮಾನವನ್ನು ಕೊಡುವರು. ”

“ಆದರೆ ಸುಂದರ ಹೆಣ್ಣು ಗಳು ಮತ್ತು ಈ ಬಿಸ್ನೆಸ್ ಮ್ಯಾನಗಳ ಸಂಬಂಧ ಏನು?”

“ಅರ್ರೇ ಹುಡುಗಿ ನಿನಗೆ ಹೇಗೆ ಸಮಜಾಯಿಸಲೀ? , , , , ಇದೊಂದು ಬಿಸ್ನೆಸ್ ಸ್ಟ್ರಾಟಜಿ, ಸುಂದರ ಹೆಣ್ಣುಗಳು ಬಗಲಲ್ಲಿದ್ದರೆ ಕತ್ತೆಯಂತಿರುವವನೂ ಬಗ್ಗುತ್ತಾನೆ. ಮತ್ತೆ ಕೆಲವೊಮ್ಮೆ ಈ ಮೋಡೆಲ್ಗಳನ್ನ ಈ ಬಿಸ್ನೆಸ್ನವರು ಎರಡು ಮೂರು ದಿನ ತಮ್ಮ ಬಳಿ ಇರಿಸುತ್ತಾರೆ. , , , ನೀನು ನನ್ನನ್ನು ನಂಬು ಹೆದರಬೇಡ ನಾನಿದ್ದೇನಲ್ಲಾ. ”
******

ದೇಶದ ಒಂದು ಚ್ಯಾರಿಟಿ ಟ್ರಸ್ಟ್ ನ ನಿರ್ದೇಶಕ ಬರುವವನಿದ್ದ ಕಾರಣ ಎರಡು ದಿನಗಳ ಸಲುವಾಗಿ ಅವನ ಸಂಗಾತಿಯಾಗಿ ರೋಸ್ ಮೇರಿಗೆ ಪಕಿಯಾ ಕೆಲಸವನ್ನು ಹೇಳುವಾಗ  ‘ಹೊಸ ಕೆಲಸವಾದುದರಿಂದ ಇದನ್ನು ಬೇಗನೇ ಕಲಿಯಬೇಕೆಂದು ಯೋಚಿಸಿದಳು.

ಅವನನ್ನು ಸ್ವಾಗತಿಸುವ ಸಲುವಾಗಿ ಕಾರು ಕಳುಹಿಸುವಾಗ ಕಾರಿನೊಂದಿಗೆ ರೋಸ್ ಮೇರಿಯನ್ನು ಕಳುಹಿಸಿದನು. ಡ್ರೈವರ್ ವೆಲ್ಕಮ್ ಬೋರ್ಡ್ ಹಿಡಿದು ರೋಸ್ ಮೇರಿಯ ಕೈಗೆ ಹೂವಿನ ಬೊಕೆಯನ್ನು ಕೊಟ್ಟು ಹೊರಗೆ ಬರುವ ದಾರಿಯಲ್ಲಿ ಅವಳ ಬದಿಯಲ್ಲಿ ನಿಂತ. ಸ್ವಲ್ಪ ಸಮಯದಲ್ಲಿಯೇ ಕುತ್ತಿಗೆಯಲ್ಲಿ ವಿವಿಧ ಹಾರಗಳನ್ನು ಹಾಕಿದ ದೊಡ್ಡ ಹೊಟ್ಟೆಯ ಡೈರೆಕ್ಟರ್ ತನ್ನ ಸಂಗಡಿಗರೊಂದಿಗೆ ಹೊರಗೆ ಬಂದ. ರೋಸ್ ಮೇರಿ ಡ್ರೈವರ್ ಹೇಳಿದಂತೆ  ನಗುತ್ತಾ ತನ್ನ ಕೈಲಿರುವ ಹೂವಿನ ಗುಚ್ಛವನ್ನು ಡೈರೆಕ್ಟರ್ಗೆ ಕೊಡುತಿದ್ದಂತೆ ಡೈರೆಕ್ಟರ್ ರೋಸ್ ಮೇರಿಯ ಮೃದು ಕೈಯನ್ನು ಸವರುತ್ತಾ ಉದ್ಗರಿಸಿದ “ಸುಂದರ ಬೊಕ್ಕೆ”

ಡ್ರೈವರ್ ಹಿಂಬದಿಯ ಸೀಟಿನಲ್ಲಿ ಡೈರೆಕ್ಟರ್ ಮತ್ತೆ ಅವನ ಎಡಬದಿಯಲ್ಲಿ ರೋಸ್ ಮೇರಿಯನ್ನು ಹಾಗೂ ತನ್ನ ಬದಿಯಲ್ಲಿ ಡೈರೆಕ್ಟರ್ನ ಪಿ. ಎ. ಯನ್ನು ಕುಳ್ಳಿರಿಸಿ ಕಾರು ಸ್ಟಾರ್ಟ ಮಾಡಿದ.

“ನಿನ್ನ ಹೆಸರೇನು ಬಾಲಿಕೆ” ಡೈರೆಕ್ಟರ್ ತನ್ನ ಗೂರಲು ಭಾಷೆಯಲ್ಲಿ ಕೇಳುವಾಗ ರೋಸ್ ಮೇರಿಗೆ ಯಾಕೋ ಅವನ ಕಣ್ಣುಗಳು ಅವಳನ್ನು ತಿನ್ನುವಂತೆ ನೋಡುತ್ತಿದೆ ಅನಿಸಿತು.

“ಜೈನಾಬಿ”
“ಓಹ್ ಮುಸ್ಲಿಂ? ವೆರಿಗುಡ್. . . . ವೆರಿಗುಡ್. . . . . ಮುಸ್ಲಿಂ ಹುಡುಗಿಯರು ಹೆಚ್ಚಾಗಿ ಬುರ್ಖಾ ಧರಿಸ್ತಾರೆ, ಆದರೇ ಆಧುನಿಕ ಹುಡುಗಿಯರೇ ನನಗೆ ಮೆಚ್ಚುಗೆ. ”
“ಹಿ. . ಹಿ, , ರೋಸ್ ಮೇರಿ ಕೃತಕವಾಗಿ ನಕ್ಕಳು.
“ನಿನಗೆ ಬಾಯ್ ಫ್ರೆಂಡ್ ಖಂಡಿತಾ ಇರಬಹುದು” ತನ್ನ ಗೂರಲು ಧ್ವನಿಯನ್ನು ತಗ್ಗಿಸಿ ಕೇಳಿದ .
ಅಷ್ಟರಲ್ಲಿ ಸಿಗ್ನಲ್ ನಲ್ಲಿ ಗಾಡಿ ನಿಂತಿತು.
ಎಡ ಬದಿಯಲ್ಲಿ ಸ್ವಲ್ಪ ಗಂಡಸರು ಜಾಮೂನು ಮಾರುತಿದ್ದರು.
ಡೈರೆಕ್ಟರ್ ಕೇಳಿದ “ಡ್ರೈವರ್ ಇದು ಜಾಮೂನು ಅಲ್ವಾ”?
ಡ್ರೈವರ್ ತನ್ನ ಸೀಟಿನ ಮೇಲಿನ ಕನ್ನಡಿಯಿಂದ  ಹಿಂದೆ ನೋಡಿದಾಗ ಡೈರೆಕ್ಟರ್ ನ ಕಣ್ಣು ಹುಡುಗಿಯ ರೂಪವನ್ನು ಹೀರುತಿತ್ತು.
“ಹಾಂ ಸಾಹೇಬರೇ ಒಳ್ಳೆ ಫ್ರೆಶ್ ಇದೆ.
ಓಹ್ ನೋಡಲು ಚೆನ್ನಾಗಿದೆ . . . . . ಹಿಂದಿನ ಸಲ ನೀನು ತಿನಿಸಿದ ಸ್ಟ್ರಾ ಬೇರೀ ಮಾತ್ರ ಹುಳಿಯಾಗಿತ್ತು.
ಡ್ರೈವರ್ ನಗಾಡಿದ. . . . .
“ಯಾವ ಊರಿನ ಜಾಮೂನು? ನೋಡುವಾಗ ಬೆಂಗಾಲಿಯಂತಿದೆ?”
ಡೈರೆಕ್ಟರ್ ಡ್ರೈವರ್ ಗೆ ಕಣ್ಣು ಮಿಟುಕಿಸಿದ.
“ಸೌತ್ ನದ್ದು”. .
ಜಾಮೂನು ಮಾರುವವ ಈಗ ಹಿಂದೆ ಸರಿದಿದ್ದ. ರೋಸ್ ಮೇರಿ ಕಾರಿನೊಳಗೆ ದೃಷ್ಟಿ ಹಾಯಿಸಿದಾಗ ಇಬ್ಬರೂ ಜಾಮೂನಿನ ಬಗ್ಗೆ ಚರ್ಚಿಸುತಿದ್ದರು.

ಅವರ ಕಣ್ಣಿನ ಭಾಷೆಯನ್ನು ಅರಿಯಲು ರೋಸ್ ಮೇರಿಗೆ ಹೆಚ್ಚು ಸಮಯ ತಾಗಲಿಲ್ಲ.
“ಗಂಡಸರೆಲ್ಲಾ ಗಂಡಸರೆ” ಮನದಲ್ಲಿ ಯೋಚಿಸಿದಳು.
ಸಿಗ್ನಲಿನಿಂದ ಗಾಡಿ ಮುಂದೆ ಹೋಯಿತು.

ಒಂದು ಫೈವ್ ಸ್ಟಾರ್ ಹೋಟೇಲಿನೊಳಗೆ ಕಾರು ನುಗ್ಗಿತು. ಇದುವರೆಗೆ ಸುಮ್ಮನಿದ್ದ ಪಿ. ಎ. ರಿಸೆಪ್ಷೆನ್ ನಿಂದ ಕೋಣೆಯ ಕೀಲಿ ತಗೊಂಡು ರೂಮ್ ಬಾಯ್ ನೊಟ್ಟಿಗೆ ರೋಸ್ ಮೇರಿಯ ಕೈಗೆ ಬ್ರೀಫ್ ಕೇಸ್ ಕೊಟ್ಟು ರಿಸೆಪ್ಶನ್ ನಲ್ಲಿ ಮಾತಿಗೆ ನಿಂತನು.

ಕೋಣೆಯ ಬಾಗಿಲು ತೆರೆದು ಡೈರೆಕ್ಟರ್ ಕೊಟ್ಟ ಎರಡು ಸಾವಿರದ ನೋಟನ್ನು ಪಡೆದು ರೂಮ್ ಬಾಯ್ ಸಲಾಮು ಹೊಡೆದು ಹೋಗುವಾಗ ರೋಸ್ ಮೇರಿ ಮನದಲ್ಲಿ ಯೋಚಿಸಿದಳು “ಅಬ್ಬಾ ಇವನು ಶ್ರೀಮಂತನೇ ಇರಬೇಕು. ಕೇವಲ ಕೋಣೆಯ ಬಾಗಿಲು ತೆಗೆದವನಿಗೆ ಎರಡು ಸಾವಿರ!”

ಸ್ವಲ್ಪ ಹೊತ್ತಿನ ನಂತರ ರೂಂ ಸರ್ವೀಸಿನವ ಕೈಯಲ್ಲಿ ಪೇಯದ ಎರಡು ಗ್ಲಾಸು  ಹಿಡಿದು ಬಂದ.
ರೋಸ್ ಮೇರಿಗೆ ಅಷ್ಟೇ ನೆನಪಿತ್ತು. .

*****
ಹೋಟೇಲಿನಿಂದ ರೋಸ್ಮೇರಿ ಹೇಗೆ ಮಿರಾರೋಡ್ ಫ್ಲ್ಯಾಟಿಗೆ ಬಂದಳು ಎಂಬುದು ರಹಸ್ಯ ವಾಗಿಯೇ ಉಳಿಯಿತು. ಅವಳು ಮಧ್ಯಾಹ್ನ  ಪಕಿಯಾನೊಡನೆ ವಿಚಾರಿಸಿದಳು‌ ಪಕಿಯಾ ನಗುನಗುತ್ತಾ ಹೇಳಿದ, “ಇದೆಲ್ಲ ನಿನಗೆ ತಿಳಿಯದು. . . . ಹೆದರಬೇಡ. . ನೀನು ಅಮಲು ಸೇವಿಸಿದ್ದು ಯಾರಿಗೂ ಗೊತ್ತಿಲ್ಲ. . . . ನೀನು ಆ ಡೈರಕ್ಟರ್ ಗೆ ಹೊಡೆದು ಮುಖ ಪರಚಿದ್ದು , , , , , , ಸತ್ಯ ಹೇಳ ಬೇಕೆಂದರೆ ನಿನ್ನನ್ನು ಸಂಭಾಳಿಸಿ ಇಲ್ಲೀ ತನಕ ತರುವಾಗ ತುಂಬಾ ಕಷ್ಟ ಆಯಿತು ನನಗೆ, , , ಆದರೂ ಅಡ್ಡಿ ಇಲ್ಲ, , , , ಇನ್ನು ಅಭ್ಯಾಸ ಆಗುತ್ತದೆ ನಿನಗೆ. . . . .

ರೋಸ್ ಮೇರಿಯ ತಲೆಗೆ ಒಂದೂ ಹೊಕ್ಕಲಿಲ್ಲ. “ಅಮಲು” ಓಹ್ ಹಾಗಾದರೆ ಆ ರೂಮ್ ಸರ್ವಿಸಿನವ ಕೊಟ್ಟದ್ದು ಅಮಲು ? ಆದರೆ ನಾನ್ಯಾಕೆ ಡೈರೆಕ್ಟರ್ ಮುಖ ಪರಚಿದೇ?
. . . ಅವಳು ತನ್ನಲ್ಲೇ ಯೋಚಿಸಿದಳು. ಅವಳ ಮೈಯಿಡೀ ನೋಯುತಿತ್ತು. . . . .

ರೋಸ್ ಮೇರಿ ಸ್ವಲ್ಪ ದಿನ ಫ್ಲ್ಯಾಟ್ ನಲ್ಲಿ ಉಳಿದಳು. ಸ್ವಲ್ಪ ದಿವಸದ ನಂತರ ಇನ್ನೊಬ್ಬ ಬಿಸ್ನೆಸ್ ಮ್ಯಾನ್ ನನ್ನ ನೋಡಲು ಹೋದಳು.
ಈ ಸಲ ರೋಸ್ ಮೇರಿ ಕುಡಿಯಲು ಏನನ್ನೂ ತಗೊಳ್ಳಲಿಲ್ಲ. ಎಲ್ಲಾ ಸಂಗತಿಗಳನ್ನು ಸುಮ್ಮನೆ ನೋಡತೊಡಗಿದಳು.
ಇವ ವಿದೇಶೀ ಪರಿಮಳ ದ್ರವ್ಯವನ್ನು  ಮಾಡುತಿದ್ದ. ಜೀವನದಲ್ಲಿ ಮೊದಲ ಬಾರಿ ವಿದೇಶಿ ಸೆಂಟು ಎಂದು ರೋಜ್ ಮೇರಿ ಸಂಭ್ರಮಿಸಿದಳು. ಆದರೆ ಈ ಸಲ ಕೂಡಾ ರೋಸ್ ಮೇರಿ ವಿಚಿತ್ರ ರೀತಿಯಲ್ಲಿ ಫ್ಲ್ಯಾಟಿಗೆ ಬಂದಿದ್ದಳು. ರೋಸ್ ಮೇರಿ ತಲೆ ತುಂಬಾ ಸಿಡಿಯುತಿತ್ತು, ಮೈ ನೋಯುತಿತ್ತು. . .

ದಿನ ಕಳೆಯುತ್ತಾ ರೋಸ್ ಮೇರಿಯ ಕೆಲಸ ಕಡಿಮೆ ಆಯಿತು. ಈಗ ದಿನಾ ಹೊರಡುತ್ತಿರಲಿಲ್ಲ. ಎಲ್ಲಿಯಾದರೂ ವಾರಕ್ಕೊಮ್ಮೆ ಅಥವಾ ಎರಡು ಸಲ, ಅಥವಾ  ಎರಡು ವಾರಕ್ಕೊಮ್ಮೆ ಕೆಲಸಕ್ಕೆ ಹೋಗುತಿದ್ದಳು. ಆದರೆ ಫ್ಲ್ಯಾಟಿಗೆ ಹಿಂದೆ ಬರುವ ರಹಸ್ಯ ಮಾತ್ರ ಆಕೆಗೆ ಗೊತ್ತಾಗಲೇ ಇಲ್ಲ.

ರೋಸ್ ಮೇರಿ ಮಾಯಾಬಾರ್ ನ ಕೆಲಸ ಬಿಟ್ಟು ಕೆಲವು ತಿಂಗಳುಗಳಾಗಿದ್ದವು. ಹಾಗಾಗಿ ಒಮ್ಮೆ  ಹೋಟೆಲಿಗೆ ಹೋಗಿ ಬರೋಣ ಎಂದು ಯೋಚಿಸಿ ‘ಮಾಯಾಬಾರ್’ ಗೆ ಬಂದಳು.

ವಿಚಿತ್ರ ಎಂದರೆ ರೋಜ್ ಮೇರಿಗೂ ತಿಳಿಯದ ಸಂಗತಿಗಳನ್ನು ಊರ್ಮಿಳಾಳಿಂದ ಕೇಳಿ ರೋಸ್  ಮೇರಿ ಆಶ್ಚರ್ಯಗೊಂಡಳು.

ಅದರಲ್ಲೂ ಆ ಕಾಸ್ಟಿಂಗ್ ಡೈರೆಕ್ಟರ್ ಈಗ ರೋಸ್ ಮೇರಿ ತನಗೆ ಸಿಕ್ಕಿದರೆ ಅಣ್ಣಾ ಶೇಠ್ ಹಾಗೂ ಪಕಿಯಾನಿಗೆ ವಿಶೇಷವಾದ ಕಮಿಷನ್ ಕೊಡುವನೆಂದು ಕೇಳಿ ರೋಸ್  ಮೇರಿ ಸ್ತಬ್ಧ ಳಾದಳು.

ಓಹ್, ಹಾಗಾದರೆ ಅಣ್ಣಾ ಶೇಠು ಪಕಿಯಾನಿಂದ ಪಕಿಯಾ ಇನ್ಯಾರೋ ಬೇರೆಯವರಿಂದ ಎಲ್ಲರನ್ನೂ ಉಪಯೋಗಿಸುವುದು, ಇವರೆಲ್ಲ ಯಾರದೋ ಜೀವನವನ್ನು ಹಾಳು ಮಾಡಿ ಮಜಾ ಮಾಡ್ತಾರೆ. . . .

ಸ್ವಲ್ಪ ದಿನ ರೋಸ್ ಮೇರಿಯ ತಲೆಯಲ್ಲಿ ಬೇರೆ ಬೇರೆ ಯೋಚನೆಗಳು ಕಾಡತೊಡಗಿದವು. ಈಗ ಆಕೆಯಿಂದ ಮಾಯಾ ಬಾರ್ ಗೆ ಹೋಗಿ ಬಿಸ್ನೆಸ್ ಮೀಟಿಂಗು ಮಾಡುವ ಮನಸ್ಸೇ ಇರಲಿಲ್ಲ‌. ತನ್ನೊಂದಿಗೆ ಏನೋ ಬೇಡವಾದುದು ನಡೆದಿದೆ ಎಂದು ಮನಸ್ಸು ಚಿಂತಿಸುತಿತ್ತು. .

*****

ಒಮ್ಮೆ ಮಾಧ್ಯಮ ದವರು, ಹಾಗೂ ಜನರು ಡ್ಯಾನ್ಸ್ ಬಾರ್ ಮುಚ್ಚಲು ವಿನಂತಿಸಿದರು. ಆಗ ತುಂಬಾ ಕುಟುಂಬಗಳು ಅನಾಥವಾದವು. ಡ್ರಗ್ಸ –ಸ್ಮಗ್ಲಿಂಗ್ ವಿಷಯ ಟಿ. ವಿ. -ಪೇಪರ್ ನಲ್ಲಿ ಬಿಸಿ ಸುದ್ದಿಯಾದ ನಂತರ ಮಾಯಾಬಾರ್ ಮೇಲೆ ದಾಳಿಯನ್ನು ಮಾಡುವ ಸುದ್ದಿಯನ್ನು ಅಧಿಕಾರಿಗಳು ಕೊಟ್ಟರು. ಅದರ ತಯಾರಿ ಎಂಬಂತೆ ಡ್ಯಾನ್ಸ್ ಮಾಡುವ ಹುಡುಗಿಯರಿಗೆ ಎರಡು ದಿನದ ರಜೆಯನ್ನು ಕೊಡಲಾಯಿತು.

ಪಕಿಯಾನಿಗೆ ಇದೆಲ್ಲಾ ಗೊತ್ತಿತ್ತು. ರೋಸ್ ಮೇರಿ ಪಕಿಯಾನಿಗೆ ಇಷ್ಟೇ ಕೇಳಿದಳು”ಪಕಿಯಾ ನನಗೆ ನೀನು ಒಂದು ಉಪಕಾರವನ್ನು ಮಾಡುತ್ತೀಯಾ, ನನಗೆ ಚಲನಚಿತ್ರ ದಲ್ಲಿ ನಟಿಸುವ ಆಸೆಯಾಗಿದೆ ಹಾಗಾಗಿ ಒಂದು ಚಿಕ್ಕ ರೋಲಾದರೂ ಸರಿ ಕೊಡಿಸುವಿಯಾ? ನಿನಗೆ ಆ ಕಾಸ್ಟಿಂಗ್ ಡೈರೆಕ್ಟರ್ ಗೊತ್ತಲ್ಲಾ? ಹಾಗಾಗಿ. . . . .

“ವ್ಹಾ. . . . . ನಿನಗೇನು ಗೊತ್ತು, ನಿನ್ನನ್ನು ನೋಡಿದ ದಿನವೇ ನೀನು ಫಿಲಂ ಗೆ ಫಿಟ್ ಅಂತ, ಖಂಡಿತಾ ನಾನು ಬೇಗನೇ ಅವರ ಹತ್ತಿರ ಮಾತನಾಡುತ್ತೇನೆ”

” ಪಕಿಯಾ ನನಗೆ ಸ್ವಲ್ಪ ಡ್ರಗ್ ಬೇಕಿತ್ತು. . . . ‌ನೋಡೋಕೆ ಬೇಕಿತ್ತು. . . ಕೊಡಿಸುವೆಯಾ”. . .

ಪಕಿಯಾ ನಗುತ್ತಾ ಹೇಳಿದ”ಏನು? ಹಾಗಾದರೆ ನಿನಗೆ ಡ್ರಗ್ಸ ರುಚಿ ತಾಗಿತು ಅನ್ನು. . . . ”

“ನನಗೆ ಅಡಗಿಸಿ ಕೊಡಬೇಡ ತೋರಿಸಿ ಕೊಟ್ಟರೆ ನನಗೂ ನೋಡಿದಂತಾಗುತ್ತದೆ”. . . ಅಲ್ವಾ

“ಮಾಯಾಬಾರ್ ನಲ್ಲಿರುವ ಸಾಯಿಬಾಬಾ ಫೋಟೋ ಇರವಲ್ಲಿ ಒಂದು ಡಬ್ಬಿಯಲ್ಲಿ ಚಿಕ್ಕ ಚಿಕ್ಕ ಪೊಟ್ಟಣಗಳಿವೆ. ಸ್ವಲ್ಪ ಕಾಯಂ ಗಿರಾಕಿಗಳು ಮಾತ್ರ ಅದನ್ನು ಕೇಳುತ್ತಾರೆ. ಹಾಗಾಗಿ ಅದನ್ನು ಅಲ್ಲಿ ಇಟ್ಟಿರುತ್ತೇವೆ. ಯಾರಿಗೂ ಈ ರಹಸ್ಯ ಗೊತ್ತಿಲ್ಲ. . . ನೀನೂ ಹೇಳಬೇಡ, ಎರಡು ದಿನ ಇರು, ನಿನಗೆ ಆ ಹುಡಿ ತೋರಿಸುತ್ತೇನೆ ನೀನು ಹೆದರಬಹುದೆಂದು ಮೊದಲು ನಿನಗೆ ಹೇಳಲೇ ಇಲ್ಲ”ಅಂದ.

******

ಲೆಕ್ಕ ಮಾಡಿದರೆ ಮೂರೇ ದಿನ ಆಗಿದೆ ಅಷ್ಟೇ. . . ‌.

ಟಿ. ವಿ. ಪೇಪರ್ ಮಾಧ್ಯಮ ಗಳಲ್ಲಿ ಹೆಡ್ ಲೈನ್ ನಲ್ಲಿ  ಪ್ರಿಂಟ್ ಆಗಿತ್ತು. “ಪಟ್ಟಣದ ತುಂಬಾ ದೊಡ್ಡ ಡ್ರಗ್ಸ ಸ್ಮಗ್ಲಿಂಗ್  ರೇಕೇಟಿನ ಪರದೆ ಬಯಲಿಗೆ”. . . . ‘ಮಾಯಾ ಬಾರ್’ ನಲ್ಲಿ ನಾರ್ಕೋಟಿಕ್ ಬ್ಯೂರೋದ ಅಧಿಕಾರಿ ಹಾಗೂ ಪೋಲಿಸ್ ಅಧಿಕಾರಿಗಳು ಫೋನ್ ನಲ್ಲಿ ಸಿಕ್ಕಿದ ಮಾಹಿತಿ ಯಂತೆ ದಾಳಿಯನ್ನು ಮಾಡಿತ್ತು. . . . . ಪೇಪರಿನಲ್ಲಿ ಅಣ್ಣಾ ಶೇಠ್ ಮತ್ತು ಪಕಿಯಾನ ಚಿತ್ರಗಳಿದ್ದವು. .

ರೋಸ್ ಮೇರಿ ತನ್ನ ಊರಿಗೆ ಹೋಗುವ ಸಿದ್ಧತೆಯಲ್ಲಿ ತೊಡಗಿದ್ದಳು. . . . . . . . .

*****

ಮೂಲ: ಕೊಂಕಣಿ, ಮೂಲ ಲೇಖಕರು: ವಲ್ಲಿ ಕ್ವಾಡ್ರೆಸ್, ಅಜೆಕಾರು..
ಕನ್ನಡಕ್ಕೆ ಅನುವಾದ: ವಸುಧಾ ಪ್ರಭು.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x