ವಿಜ್ಞಾನ-ಪರಿಸರ

ಜೇನು-ಸವಿಜೇನು: ಅಖಿಲೇಶ್ ಚಿಪ್ಪಳಿ ಅಂಕಣ

ಹಿರಿಯ ಪರ್ತಕರ್ತ ಸ್ನೇಹಿತರಾದ ಅ.ರಾ.ಶ್ರೀನಿವಾಸ್ ಫೋನ್ ಮಾಡಿದ್ದರು. ಸಮಸ್ಯೆಯೆಂದರೆ ಅವರ ಪುಟ್ಟ ತೋಟದಲ್ಲಿರುವ ಹೈಬ್ರೀಡ್ ನೆಲ್ಲಿ ಮರದಲ್ಲಿ ಹೂವಿದ್ದರೂ ಕಾಯಿಗಟ್ಟುತ್ತಿರಲಿಲ್ಲ. ಜೇನಿನ ಅಭಾವವೇ ಈ ಸಮಸ್ಯೆಗೆ ಕಾರಣವೆಂದು ಮನಗಂಡು, ತಮ್ಮಲ್ಲಿರುವ ಹಳೇ ಜೇನುಪೆಟ್ಟಿಗೆಯಲ್ಲಿ ಜೇನು ಸಾಕಬೇಕೆಂಬ ತೀರ್ಮಾನ ಮಾಡಿದ್ದರು. ಅದಕ್ಕಾಗಿ ಜೇನು ತುಂಬಿ ಕೊಡಲು ಸಾಧ್ಯವೆ? ಎಂದು ಕೇಳಿದರು. ವಿನೋಬ ನಗರದಲ್ಲಿ ದೊಡ್ಡದೊಂದು ದೂರವಾಣಿ ಕೇಬಲ್ ಸುತ್ತಿಡುವ ಪ್ಲೈವುಡ್‌ನಿಂದ ತಯಾರಿಸಿದ ಉರುಟಾದ ಗಾಲಿಯೊಂದಿತ್ತು. ಅದರ ಮಧ್ಯಭಾಗದಲ್ಲಿ ೬ ಇಂಚು ಅಗಲದ ದುಂಡನೆಯ ರಂಧ್ರ. ಒಮ್ಮೆ ಅತ್ತ ಗಮನ ಹರಿಸಿದಾಗ ಜೇನ್ನೋಣಗಳು ಆ ರಂಧ್ರದಲ್ಲಿ ಹೋಗಿ ಬರುವುದು ಕಂಡಿತ್ತು. ಮತ್ತು ಅದರಲ್ಲಿ ಜೇನು ಹುಟ್ಟು ಇತ್ತು. ದಿನಾ ಗಮನಿಸುತ್ತಿದ್ದವನಿಗೆ, ಒಂದು ಆತಂಕವಿತ್ತು. ಚಳಿಗಾಲ ಯಾರಾದರೂ ಬೆಂಕಿ ಉರಿಸಲು ಕಟ್ಟಿಗೆ ಬೇಕೆಂದು ಗಾಲಿಯನ್ನು ಉರಳಿಸಿಕೊಂಡು ಹೋದರೆ? ಜೇನು ಹುಟ್ಟಿಗೆ ಅಪಾಯ. ಈ ಜೇನು ಹುಟ್ಟನ್ನು ಸುರಕ್ಷಿತ ಜಾಗಕ್ಕೆ ಸೇರಿಸಬೇಕೆಂಬ ಯೋಚನೆಯಿತ್ತು. ಇದೀಗ ಕಾಲ ಕೂಡಿ ಬಂದಿತ್ತು. ಜೇನು ಹುಟ್ಟನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸವ ಜವಾಬ್ದಾರಿ ನನ್ನ ಹೆಗಲಿಗೆ ಬಿತ್ತು.

ಪ್ರಕೃತಿಯ ಅಗಾಧ ಅಚ್ಚರಿಗಳಲ್ಲಿ ಜೇನು ಒಂದು. ಮಲೆನಾಡಿನ ಜನರಿಗೆ ಜೇನು ಗೊತ್ತು. ಇಲ್ಲಿ ಸಾಮಾನ್ಯವಾಗಿ ಕಂಡುಬರುವ ತಳಿಗಳೆಂದರೆ, ಹೆಜ್ಜೇನು, ತುಡವಿ ಮತ್ತು ಕೋಲ್ಜೇನು ಅಲ್ಲದೆ ಜೇನಿನ ಜಾತಿಗೆ ಸೇರಿದ ನಿಸರಿ. ಹೆಜ್ಜೇನು ಮತ್ತು ಕೋಲ್ಜೇನುಗಳನ್ನು ಸಾಕಲಾಗುವುದಿಲ್ಲ. ತುಡವಿ ಜೇನನ್ನು ವ್ಯಾಪಕವಾಗಿ ಸಾಕುತ್ತಾರೆ. ನಿಸರಿ ಸಾಕಲು ಕೃತಕ ಪೆಟ್ಟಿಗೆಗಳಿಲ್ಲ. ಹೊಸೂರಿನ ಮಿತ್ರ ಸತ್ಯೇಂದ್ರ ಜೇನು ಸಾಕಣೆ ವಿಚಾರದಲ್ಲಿ ಅಪಾರ ಜ್ಞಾನವಂತರು. ಮೂಲತ: ಕೃಷಿಕರು ಮತ್ತು ಆಧುನಿಕ ಚಿಂತನೆ ಹೊಂದಿದವರು. ತಲೆಗೊಂದು ವಿಚಾರ ಬಂತೆಂದರೆ ಅದನ್ನು ಪೂರೈಸಿಯೇ ತೀರಬೇಕು. ಸರಿ ಅವರಿಗೆ ದೂರವಾಣಿ ಮುಖಾಂತರ ವಿಚಾರ ತಿಳಿಸಲಾಯಿತು. ಫೋನಿನಲ್ಲಿ ಅವರೊಂದು ಸಂದೇಹ ವ್ಯಕ್ತ ಪಡಿಸಿದರು. ಸಾಮಾನ್ಯವಾಗಿ ಪೇಟೆಯಲ್ಲಿರುವುದು ಕೋಲ್ಜೇನು ಆಗಿರಲು ಸಾಧ್ಯ. ಯಾವುದಕ್ಕೂ ನಾನೇ ಬಂದು ನೋಡುತ್ತೇನೆ ಎಂದರು. ಮಾರನೇ ದಿನ ಅಂದರೆ ೨೦೧೪ರ ೨ನೇ ತಾರೀಖು ಬೆಳಗ್ಗೆ ೧೦.೩೦ಗೆ ಬಂದು. ನೋಡಿದರು ಇದು ತುಡವಿ ಜೇನು, ಮಧ್ಯಾಹ್ನ ೩.೩೦ ನಂತರ ಪೆಟ್ಟಿಗೆಯಲ್ಲಿ ತುಂಬಬಹುದು ಎಂದರು. 

ಸ್ಥಳಕ್ಕೆ ಜೇನು ಪೆಟ್ಟಿಗೆ ಬಂತು. ಸತ್ಯೇಂದ್ರರಿಗೆ ಒಬ್ಬ ಅಸಿಸ್ಟೆಂಟ್ ಬೇಕು. ಜೇನು ತುಂಬಲು ಕಲಿಸಿದ ಅನೇಕರಿಗೆ ಅವರೇ ಫೋನ್ ಮಾಡಿದರು. ಯಾರೂ ಲಭ್ಯವಿಲ್ಲ. ಕಲ್ಮನೆ ಪಂಚಾಯ್ತಿ ಸದಸ್ಯರಾದ ಅಕ್ಷರ ಇವರಿಗೆ ಕರೆ ಮಾಡಿದೆ. ೩.೩೦ಗೆ ಬರುತ್ತೇನೆ ಎಂದರು. ಆ ಹಳೇ ಜೇನು ಪೆಟ್ಟಿಗೆಯಲ್ಲಿ ಎಲ್ಲವೂ ಇದ್ದವು, ಗೇಟು ಇರಲಿಲ್ಲ. ಮತ್ತು ಜೇನು ರೊಟ್ಟು (ತತ್ತಿ)ಯನ್ನು ಕಟ್ಟಲು ಬಾಳೆನಾರು ಬೇಕಿತ್ತು. ಇದನ್ನು ತರಲು ಅಕ್ಷರನಿಗೆ ಹೇಳಿದೆವು. ಜೇನುತಜ್ಞ ನಾಗೇಂದ್ರ ಸಾಗರ್ ಮನೆಯಿಂದ ಗೇಟು, ತೋಟದಿಂದ ಅಡಿಕೆಯ ಹೊಂಬಾಳೆಯನ್ನು ತಂದಾಯಿತು. ಇಲ್ಲಿ ತತ್ತಿಯನ್ನು ಫ್ರೇಮಿಗೆ ಕಟ್ಟಲು ಬಾಳೆನಾರು ಅಥವಾ ಹೊಂಬಾಳೆ ದಾರ ಸೂಕ್ತ. ಇತರೆ ದಾರಗಳು ಅಥವಾ ಪ್ಲಾಸ್ಟಿಕ್ ದಾರಗಳನ್ನು ತುಂಡು ಮಾಡುವುದು ಜೇನ್ನೊಣಗಳಿಗೆ ಸಾಧ್ಯವಿಲ್ಲ (ಪ್ಲಾಸ್ಟಿಕ್ ದಾರದಂತಹ ಕೃತಕ ವಸ್ತುಗಳನ್ನು ಜೇನ್ನೋಣಗಳು ಇಷ್ಟ ಪಡುವುದಿಲ್ಲ) ಜೇನು ತುಂಬಲು ಪ್ಲಾಟ್‌ಪಾರಂ ರೆಡಿಯಾಗಿ ಮಹೂರ್ತವೂ ಫಿಕ್ಸ್ ಆಯಿತು. ಸಾಮಾನ್ಯವಾಗಿ ಜೇನು ಪೆಟ್ಟಿಗೆ ತಯಾರಿಸಲು ಸಾಗುವಾನಿ, ನಂದಿ, ತಾರೆ ಮರಗಳನ್ನು ಉಪಯೋಗಿಸುತ್ತಾರೆ. ಈಗೀಗ ಕೆಲವರು ಸುಲಭವಾಗಿ ಸಿಗುವ ಅಕೇಶಿಯಾ ಮರವನ್ನು ಉಪಯೋಗಿಸುತ್ತಾರೆ. ಆದರೆ ಅಕೇಶಿಯಾ ಮರದಿಂದ ಮಾಡಿದ ಪೆಟ್ಟಿಗೆಗಳಲ್ಲಿ ಜೇನು ನಿಲ್ಲುವುದಿಲ್ಲ. ನಂದಿ ಮರದ ಪೆಟ್ಟಿಗೆಯಾದರೆ ಜೇನು ನಿಲ್ಲುತ್ತದೆ ಎಂಬುದು ಜೇನು ಸಾಕುವವರ ಅನುಭವ. ಸ್ಥೂಲವಾಗಿ ಜೇನು ಪೆಟ್ಟಿಗೆಯೆಂದರೆ ತಳಪಾಯದಲ್ಲಿ ಸುಮಾರು ಒಂದು ಅಡಿ ಅಗಲದ ಚೌಕಾಕಾರದ ಹಲಗೆ. ಆ ಹಲಗೆಯ ಮೇಲೆ ಆರಿಂಚು ಎತ್ತರದ ಚೌಕದ ಪೆಟ್ಟಿಗೆ, ಆ ಪೆಟ್ಟಿಗೆಯಲ್ಲಿ ಜೇನ್ನೊಣಗಳಿಗೆ ತತ್ತಿ (ಜೇನುರೊಟ್ಟು) ಯನ್ನು ಕಟ್ಟಲು ಬೇಕಾದ ಆಯತಾಕಾರದ ೮ ಫ್ರೇಮ್‌ಗಳು ಇರುತ್ತವೆ. ಇದು ಜೇನು ಹುಟ್ಟಿನ ಮೂಲ ಮನೆ ಅಥವಾ ಸಂಸಾರ ಕೋಣೆ. ಇದರಲ್ಲಿರುವ ಜೇನು ತುಪ್ಪವನ್ನು ತೆಗೆಯುವ ಹಾಗಿಲ್ಲ. ಜೇನು ಮರಿಗಳಿಗೆ, ರಾಣಿ ಜೇನಿಗೆ ಆಹಾರಕ್ಕಾಗಿ ಇದು ಅವಶ್ಯ. ಸಂಸಾರ ಕೋಣೆಯ ಅರ್ಧ ಸೈಜಿನ ಇನ್ನೊಂದು ಪೆಟ್ಟಿಗೆಯನ್ನು ಮೂಲ ಮನೆಯ ಮೇಲಿಡುವುದು, ಇದಕ್ಕೆ ಸೂಪರ್ ಎನ್ನುತ್ತಾರೆ. ಇದರಲ್ಲಿ ಉತ್ಪತ್ತಿಯಾಗುವ ಮಧ್ಪುವನ್ನು ತೆಗೆದು ಉಪಯೋಗಿಸಬಹುದು. ಜೇನ್ನೊಣಗಳ ಸಂಖ್ಯೆ ಹೆಚ್ಚಾದಂತೆ ಈ ತರಹದ ಸೂಪರ್‌ಗಳನ್ನು ಏರಿಸುತ್ತಾ ಹೋಗಬಹುದು. ಸಾಕಿದ ಒಂದು ಆರೋಗ್ಯವಂತ ಜೇನು ಪೆಟ್ಟಿಗೆಯಿಂದ ವರ್ಷಕ್ಕೆ ೧೦ ಕೆ.ಜಿ. ಮಧುವನ್ನು ಪಡೆದವರಿದ್ದಾರೆ. ವ್ಯಾವಹಾರಿಕವಾಗಿಯೂ ಇದು ಲಾಭದಾಯಕ. ಅತ್ಯುತ್ತಮ ಮಧುವಿಗೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ೪೦೦ ರೂಪಾಯಿಗಳು. ಅಂದರೆ ಒಂದು ಪೆಟ್ಟಿಗೆಯಿಂದ ೪ ಸಾವಿರ ಆದಾಯ. ಇರಲಿ ಇಲ್ಲಿ ಲಾಭ-ನಷ್ಟದ ಲೆಕ್ಕಾಚಾರಗಳು ಬೇಡ. ಬರೀ ಮಧುವಿನಿಂದ ೪ ಸಾವಿರ ದುಡಿಯಬಹುದಾದರೆ, ಅದೇ ಜೇನು ಪೆಟ್ಟಿಗೆಯ ಜೇನುಗಳು ನಿಮ್ಮ ತೋಟದ ಇಳುವರಿಯನ್ನು ೨೦% ಹೆಚ್ಚಿಸುತ್ತವೆ ಎನ್ನುತ್ತದೆ ಸಂಶೋಧನಾ ವರದಿ.

ಸರಿ, ಜೇನು ತುಂಬುವ ಕಾರ್ಯಕ್ರಮವನ್ನು ೩.೩೦ಕ್ಕೆ ಶುರುಮಾಡಿದೆವು. ಆಗ ರಾಹುಕಾಲ ಶುರುವಾಗಿತ್ತು. ಪಕ್ಕದ ಪಂಕ್ಚರ್ ಅಂಗಡಿಯಿಂದ ಸ್ಪ್ಯಾನರ್, ಇಕ್ಕಳ, ಲಿವರ್‌ಗಳು ಬಂದವು. ಫ್ಲೈವುಡ್ ಅದಾಗಲೇ ಲಡ್ಡಾಗಿತ್ತು. ಹಾಗಾಗಿ ಹೆಚ್ಚು ತೊಂದರೆಯಾಗಲಿಲ್ಲ. ಸತ್ಯೇಂದ್ರ ನಿಧಾನವಾಗಿ ಬಲಗೈಯನ್ನು ಜೇನು ಹುಟ್ಟಿಗೆ ಹಾಕಿ ಒಂದು ಬೊಗಸೆ ಹುಳುಗಳನ್ನು ನಾಜೂಕಾಗಿ ತೆಗೆದು ಜೇನು ಪೆಟ್ಟಿಗೆಯ ಬಾಗಿಲಿಗೆ ಹಾಕಿದರು. ಆಗ ಬಿಸಿಲಿತ್ತು. ಕತ್ತಲನ್ನು ಅರಸಿದ ಹುಳುಗಳು ಸಾಲಾಗಿ ಜೇನು ಪೆಟ್ಟಿಗೆಯೊಳಕ್ಕೆ ಹೋದವು. ಇಷ್ಟರಲ್ಲಿ ಒಂದಷ್ಟು ಹುಳುಗಳು ಸತ್ಯೇಂದ್ರ ಮತ್ತು ಅಕ್ಷರ ಇವರಿಗೆ ಕಚ್ಚಿದವು. ಇಲ್ಲಿ ಕಚ್ಚಿದವು ಎಂದರೆ ತಪ್ಪಾಗುತ್ತದೆ. ವಿಷದ ಅಂಬನ್ನು ಚುಚ್ಚಿದವು. ಕಸುಬುದಾರರು ಅಂಜಲಿಲ್ಲ. ಜೇನು ಅಂಬು ಬಿಡುವಾಗ ಒಂದು ವಿಶಿಷ್ಟ ವಾಸನೆಯನ್ನು ಬಿಡುತ್ತದೆ. ಉಳಿದ ಜೇನುಗಳಿಗೆ ಎಚ್ಚರಿಕೆಯ ಸಂದೇಶ. ಚುಚ್ಚಿದ ಅಂಬನ್ನು ತೆಗೆದು ಸಿಕ್ಕಿದ ಎಲೆಯಿಂದ ಒರೆಸಿಕೊಂಡರಾಯಿತು. ಎಚ್ಚರಿಕೆಯ ವಾಸನೆ ಹೋಗುತ್ತದೆ. ಬೇರೆ ಜೇನ್ನೊಣಗಳು ಚುಚ್ಚುವುದಿಲ್ಲ. ಅಂಬನ್ನು ಬಿಟ್ಟ ಜೇನ್ನೊಣ ಸಾಯುತ್ತದೆ. ಅಂಬಿನ ಜೊತೆಗೆ ಅದರ ಪುಟ್ಟ ಕರುಳು ಹೊರಬಂದಿರುತ್ತದೆಯಾದ್ದರಿಂದ ಅದು ಸಾಯುತ್ತದೆ. ಜೇನುಗೂಡಿನಲ್ಲಿ ಮುಖ್ಯವಾದದು ರಾಣಿ ಜೇನು. ಇದಕ್ಕೆ ಮೊಟ್ಟೆಯಿಡುವುದೊಂದೆ ಕೆಲಸ. ಗಂಡು ಜೇನ್ನೊಣಗಳು ಸೋಮಾರಿಗಳು (ವಂಶಾಭಿವೃದ್ದಿಗಾಗಿ ಮಾತ್ರ). ಕೆಲಸಗಾರ ಜೇನುಗಳಿಗೆ ಆಹಾರ ಸಂಪಾದನೆಯ ಕೆಲಸ. ವಯಸ್ಸಾದ ಕೆಲಸಗಾರ ಇರುವೆಗಳೇ ಗೂಡು ಕಾಯುವ ಸೈನಿಕರು. ಹೇಗಿದೆ ನೋಡಿ ನಿಸರ್ಗದ ರಚನೆ. ಅಂಬು ಬಿಟ್ಟು ಸಾಯುವ ಸೈನಿಕ ಜೇನುಗಳಿಂದ ಮೂಲ ಜೇನು ಹುಟ್ಟಿಗೆ ಅಂತಹ ಧಕ್ಕೆಯಾಗುವುದಿಲ್ಲ.

ಕುಲಾಂತರಿ ಬೆಳೆಗಳಿಂದ, ಕೀಟ ಮತ್ತು ಪೀಡೆ ನಾಶಕಗಳಿಂದಾಗಿ ಪ್ರಪಂಚದಲ್ಲಿ ಜೇನು ಹುಟ್ಟುಗಳ ಸಂಖ್ಯೆ ಇಳಿಮುಖವಾಗುತ್ತಿದೆಯಾದರೂ ಸಾಕಷ್ಟು ಜೇನುಹುಟ್ಟುಗಳು ದಟ್ಟಕಾಡಿನಲ್ಲಿವೆ. ಜೇನು ಸಾಕಣೆದಾರರು ಹತ್ತಾರು ಪೆಟ್ಟಿಗೆಗಳನ್ನು ಒಟ್ಟೊಟ್ಟಿಗೆ ಇಟ್ಟರು ಹೊರ ಹೋದ ಕೆಲಸಗಾರ ಜೇನುಗಳು ಕರಾರುವಕ್ಕಾಗಿ ತಮ್ಮ ಪೆಟ್ಟಿಗೆಗೇ ವಾಪಾಸು ಬರುತ್ತವೆ. ಪ್ರತಿ ರಾಣಿಜೇನಿನಲ್ಲೂ ವಿಶಿಷ್ಟವಾದ ಫೆರೋಮಿನ್ ಇರುತ್ತದೆ. ಒಂದಕ್ಕಿಂದ ಒಂದರ ವಾಸನೆ ಭಿನ್ನವಾಗಿರುತ್ತದೆ. ಇದೇ ವಾಸನೆಯ ಜಾಡನ್ನು ಹಿಡಿದು ಕೆಲಸಗಾರ ಜೇನುಗಳು ಅದೇ ಗೂಡಿಗೆ ಮರಳುತ್ತವೆ. ಹಾಗೆ ಗೂಡಿನ ಪ್ರತಿ ಜೇನು ಹುಳುವೂ ದಿನಂಪ್ರತಿ ಒಂದು ಬಾರಿ ರಾಣಿಯನ್ನು ಮುಟ್ಟಿ ವಾಸನೆಯನ್ನು ಗ್ರಹಿಸುತ್ತದೆ. ಕೆಲಸಗಾರ ಜೇನು ಹೂವಿಂದ ಹೂವಿಗೆ ಹಾರಿ ಬಾಯಿಯ ಹಿಂಭಾಗದಲ್ಲಿರುವ ಮಧುಕೋಶದಲ್ಲಿ ಹೂವಿನ ಮಕರಂಧವನ್ನೂ ಮತ್ತು ಹಿಂಬದಿಯ ಕಾಲಿನಿಂದ ಹೂವಿನ ಕುಸುಮವನ್ನು ಸಂಗ್ರಹಿಸುತ್ತವೆ. ಮಕರಂದದಲ್ಲಿ ನೀರಿನ ಅಂಶವೇನಾದರೂ ಇದ್ದಲ್ಲಿ ಮಕರಂದವು ಒಂದು ಹದಕ್ಕೆ ಬರುವವರೆಗೂ ಮಧುಕೋಶದಿಂದ ಬಾಯಿಗೆ ಮತ್ತು ಬಾಯಿಯಿಂದ ಮಧುಕೋಶಕ್ಕೆ ರವಾನಿಸುತ್ತಾ ಕಡೆಯುತ್ತವೆ. ಈಗ ಗೂಡಿನಲ್ಲಿ ಮಧುವಿನ ಹದವನ್ನು ನೋಡುವುದಕ್ಕೆಂದೆ ನಿಯಮಿಸಲಾದ ಜೇನ್ನೊಣಗಳಿರುತ್ತವೆ. ಹೊರಗಿನಿಂದ ಮಧುವನ್ನು ತಂದ ಜೇನ್ನೊಣ ತನ್ನ ಮಧುಕೋಶದಿಂದ ಮಕರಂದವನ್ನು ಹದ ನೋಡುವ ಜೇನ್ನೊಣದ ಬಾಯಿಗೆ ವರ್ಗಾಯಿಸುತ್ತದೆ. ಇನ್ನೂ ಮಕರಂದದಲ್ಲಿ ನೀರಿನ ಅಂಶವಿದ್ದರೆ, ಈ ಜೇನ್ನೊಣವು ರೆಕ್ಕೆಬಡಿಯುತ್ತಾ ತನ್ನ ಮೈಯನ್ನು ದಂಡಿಸುತ್ತದೆ. ಬೆವರಿನ ಮೂಲಕ ನೀರು ಆವಿಯಾಗಿ ಮಧುವು ನಿಗದಿತ ಹದಕ್ಕೆ ಬರುತ್ತದೆ. ನಿಗದಿತ ಹದಕ್ಕೆ ಬಂದ ನಂತರವೇ ತತ್ತಿಯಲ್ಲಿ ಶೇಖರಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಕ್ವಾಲಿಟಿಯೇ ಮುಖ್ಯ. ರಾಜಿ ಪ್ರಶ್ನೆಯೇ ಇಲ್ಲ. ಹಾಗಾಗಿಯೇ ಮಧು ನೂರಾರು ವರ್ಷವಾದರೂ ಕೆಟ್ಟು ಹೋಗುವುದಿಲ್ಲ. ಪ್ರಪಂಚದಲ್ಲಿ ನಿಸರ್ಗ ಸಹಜವಾಗಿ ಕೆಡದ ಏಕೈಕ ಪದಾರ್ಥ ಮಧು. ರಾಜರ ಕಾಲದಲ್ಲಿ ಮಹಾರಾಜರ ಮಕ್ಕಳು ಅಕಾಲದಲ್ಲಿ ಸಿಗದ ವಸ್ತುವಿಗೆ ಬೇಡಿಕೆಯಿಡುತ್ತಿದ್ದರು. ಚಳಿಗಾಲದಲ್ಲಿ ಮಾವಿನ ಹಣ್ಣು ಬೇಕು ಎಂದು ರೊಳ್ಳೆ ತೆಗೆಯುತ್ತಿದ್ದರು. ಆಗಿನ ಜನ ಇದಕ್ಕೊಂದು ಉಪಾಯವನ್ನು ಕಂಡುಕೊಂಡಿದ್ದರು. ಜೇನಿನಲ್ಲಿ ಯಾವ ವಸ್ತುವನ್ನೇ ಶೇಖರಿಸಿಟ್ಟರೂ ಅದು ತಾಜತನದಿಂದ ಕೂಡಿರುತ್ತದೆ. ಚಳಿಗಾಲದಲ್ಲಿ ಮಾವಿನ ಹಣ್ಣು ಬೇಕೆಂದ ರಾಜಕುಮಾರನಿಗೆ ಜೇನಿನಲ್ಲಿ ನೆನೆಸಿಟ್ಟ ಮಾವಿನ ಹಣ್ಣನ್ನು ನೀಡುತ್ತಿದ್ದರು.

ಸೂರ್ಯ ಪಶ್ಚಿಮದಲ್ಲಿ ಮುಳುತ್ತಿದ್ದ. ಹೊರಗೆ ಹೋದ ಕೆಲಸಗಾರ ಜೇನುಗಳು ಗೂಡಿಗೆ ಮರಳುತ್ತಿದ್ದವು. ಇಲ್ಲಿ ನೋಡಿದರೆ ಗೂಡಿನ ಕಿಂಡಿ ದೊಡ್ಡದಾಗಿದೆ. ಅರ್ಧಕ್ಕರ್ಧ ಜೇನ್ನೊಣಗಳಿಲ್ಲ. ರಾಣಿ ಜೇನು ಗೂಡಿನ ಮಧ್ಯದಲ್ಲಿ ಸುರಕ್ಷಿತವಾಗಿರುತ್ತದೆ. ಬೊಗಸೆಯಲ್ಲಿ ತೆಗೆದು ಹಾಕುವಾಗ ಅದು ಪೆಟ್ಟಿಗೆಯಲ್ಲಿ ಸೇರಿತ್ತು. ಜೇನು ಗೂಡನ್ನು ಆಳುವುದು ರಾಣಿ ಜೇನಾಗಿದ್ದರಿಂದ, ಒಮ್ಮೆ ರಾಣಿ ಒಳಗೆ ಹೋಯಿತೆಂದರೆ, ಜೇನು ತುಂಬುವ ಕೆಲಸ ಅರ್ಧ ಮುಗಿದ ಹಾಗೆ. ರಾಣಿ ಎಲ್ಲಿಯೋ ಅಲ್ಲೇ ಸಮಸ್ತ ಜೇನು ಕುಟುಂಬ. ಒಂದೊಮ್ಮೆ ಅಪಾಯವಾಗಿ ರಾಣಿ ಜೇನು ಸತ್ತು ಹೋದರೆ? ಕುಟುಂಬ ಅನಾಥವಾಗುವುದಿಲ್ಲ. ಇದೇ ಕೆಲಸಗಾರ ಜೇನುಗಳು ಸೇರಿ ಮತ್ತೊಂದು ರಾಣಿಯನ್ನು ತಯಾರು ಮಾಡಿಕೊಳ್ಳುತ್ತವೆ. ವಯಸ್ಸಾಗಿ ಸಾಯುವವರೆಗೂ ರಾಣಿ ಜೇನು ಮೊಟ್ಟೆಯಿಡುತ್ತದೆ. ರಾಣಿ ಕಡೆಕಾಲದಲ್ಲಿ ಇಟ್ಟ ಮೊಟ್ಟೆಯಲ್ಲಿ ಅತ್ಯುತ್ತಮವಾದ ಮೊಟ್ಟೆಗಳನ್ನು ಆರಿಸಿಕೊಳ್ಳುತ್ತವೆ. ಮೊಟ್ಟೆಯೊಡೆದು ಹೊರ ಬರುವ ಮರಿಗಳಿಗೆ ಕೆಲಸಗಾರ ಜೇನುಗಳು ಹೂವಿನ ಕುಸುಮ ಮತ್ತು ತಮ್ಮದೇ ದೇಹದಲ್ಲಿರುವ ರಾಜಶಾಹಿ ಎಂಬ ರಸವನ್ನು ಬೆರೆಸಿ ತಿನ್ನಿಸುತ್ತವೆ. ರಾಣಿಯನ್ನು ತಯಾರು ಮಾಡುವಾಗ ಮಾತ್ರ ಬರೀ ರಾಜಶಾಹಿ ರಸವನ್ನೇ ನೀಡುತ್ತವೆ. ಇದರಿಂದ ಸಾಮಾನ್ಯ ಮೊಟ್ಟೆಯ ಮರಿಯು ಗಾತ್ರದಲ್ಲಿ ಹಿಗ್ಗಿ, ಗರ್ಭಕೋಶ ಬೆಳೆದು ರಾಣಿಯಾಗುತ್ತದೆ. ಗಂಡನ್ನು ಕೂಡುವ ಸಂದರ್ಭ ಬಂದಾಗ ರಾಣಿ ಹೊರಗೆ ಹಾರುತ್ತದೆ. ರಾಣಿಯನ್ನು ಹಿಂಬಾಲಿಸಿ ಗಂಡು ಹುಳಗಳು ಹಾರುತ್ತವೆ. ಸುಲಭವಾಗಿ ರಾಣಿ ಗಂಡುಗಳಿಗೆ ದಕ್ಕುವುದಿಲ್ಲ. ರಾಣಿ ಎತ್ತರೆತ್ತರಕ್ಕೆ ಹಾರುತ್ತದೆ. ರಾಣಿಯಷ್ಟು ಎತ್ತರಕ್ಕೆ ಹಾರಲಾರದ ಗಂಡು ಹುಳುಗಳು ನೆಲಕ್ಕೆ ಬೀಳುತ್ತವೆ. ರಾಣಿಯಷ್ಟು ಎತ್ತರಕ್ಕೆ ಹಾರಿದ ಗಂಡಿಗೆ ಸಮಾಗಮದ ಅವಕಾಶ. ಬಲಿಷ್ಟವಾದ ಸಂತತಿಯನ್ನು ಬೆಳೆಸುವಲ್ಲಿ ಪ್ರಕೃತಿ ರೂಪಿಸಿದ ಸೂತ್ರವಿದು. ಒಂದು ಬಾರಿ ಗಂಡಿನೊಡನೆ ಸೇರಿದ ರಾಣಿ ಗೂಡಿಗೆ ಮರಳುತ್ತದೆ. ಮುಂದೆ ಅದರ ಜೀವನವೆಂದರೆ ಬರೀ ಮೊಟ್ಟೆಯಿಡುವುದಷ್ಟೆ. ಒಂದೊಮ್ಮೆ ಸೇರಿದ ಗಂಡಿನಲ್ಲಿ ವಿರ್‍ಯಾಣುಗಳ ಕೊರತೆಯಿದ್ದಲ್ಲಿ ರಾಣಿ ಜೇನು ಇನ್ನೊಂದು ಗಂಡನ್ನು ಸೇರುತ್ತದೆ. ಇದು ನಡೆಯುವುದು ಅಪರೂಪದಲ್ಲಿ ಅಪರೂಪ.

ಸತ್ಯೇಂದ್ರ ಟೀಮಿನ ೯೦% ಕೆಲಸ ಮುಗಿದಿತ್ತು. ಸೂಪರ್ ಕೂರಿಸಿಯಾಗಿತ್ತು. ಹೊರಹೋದ ಜೇನ್ನೊಣಗಳು ವಾಪಾಸು ಬರುತ್ತಿದ್ದವು. ಕತ್ತಲಾಗುತ್ತಿತ್ತು. ಗಲಿಬಿಲಿಗೊಂಡ ಒಂದಿಷ್ಟು ಜೇನ್ನೊಣಗಳು ಪೆಟ್ಟಿಗೆಗೆ ಬಾರದೆ ಮೂಲ ಪ್ಲೈವುಡ್ ಗಾಲಿಯಲ್ಲೇ ಕುಳಿತಿದ್ದವು. ಒಂದು ಊದುಬತ್ತಿ ಹಚ್ಚಿ ಹೊಗೆ ಹಾಕಿ ಅಲ್ಲಿಂದ ಹಾರಿಸಿದಾಗ ಪೆಟ್ಟಿಗೆಯಲ್ಲಿ ಬಂದು ಕುಳಿತವು. ಇನ್ನು ಪೆಟ್ಟಿಗೆಯನ್ನು ಸಾಗಿಸುವುದಷ್ಟೇ ಉಳಿದ ಕೆಲಸ. ಕತ್ತಲಾಗುತ್ತಿದ್ದಂತೆ ಶ್ರೀನಿವಾಸರಿಗೆ ಕರೆ ಮಾಡಿದೆವು. ಅವರಿಗೊಂದಿಷ್ಟು ಜೇನು ಸಾಕಣೆ ಬಗ್ಗೆ ಟಿಪ್ಸ್ ನೀಡಲಾಯಿತು. ಮೊದಲನೆಯದಾಗಿ ಇರುವೆಗಳು ಜೇನಿಗೆ ಹಾನಿಯುಂಟು ಮಾಡುತ್ತವೆ. ಇರುವೆಗಳು ಬಾರದಂತೆ ಜೇನುಪೆಟ್ಟಿಗೆಯಿಡುವ ಸ್ಟ್ಯಾಂಡಿನ ಬುಡದಲ್ಲಿ ನೀರು ಹಾಕಬೇಕು. ಜೇನು ಪೆಟ್ಟಿಗೆಯ ಮುಂಭಾಗ ಅಂದರೆ ಜೇನ್ನೊಣಗಳಿಗೆ ಓಡಾಡುವ ದಿಕ್ಕು ಮಾತ್ರ ಪೂರ್ವ ಅಥವಾ ಪಶ್ಚಿಮಕ್ಕಿರಬೇಕು. ಭೂಮಿಯ ಚಲನೆಗೂ ಜೇನು ಹುಟ್ಟಿಗೂ ಸಂಬಂಧವಿದೆ. ಒಂದೊಮ್ಮೆ ಉತ್ತರ ದಿಕ್ಕಿಗೆ ಮುಖ ಮಾಡಿಟ್ಟರೆ, ಜೇನು ತತ್ತಿಗಳು ವಕ್ರ-ವಕ್ರವಾಗಿ ಕಟ್ಟಲ್ಪಡುತ್ತವೆ. ತತ್ತಿಗಳು ವಕ್ರವಾದರೆ ಒಂದಕ್ಕೊಂದು ಅಂಟಿಕೊಂಡು ಮಧು ತೆಗೆಯುವುದು ಕಷ್ಟ. ಇನ್ನೂ ಬಾಳೆನಾರಿನಿಂದ ತತ್ತಿಗಳನ್ನು ಕಟ್ಟಲಾಗಿತ್ತು. ಜೇನುಗಳು ಮಹಾ ಶುಭ್ರ. ಸತತವಾಗಿ ಬಾಳೆನಾರನ್ನು ಕಡಿದು ಚಿಕ್ಕ-ಚಿಕ್ಕ ತುಂಡು ಮಾಡಿ ಹೊರಗೆ ಸಾಗಿಸುತ್ತವೆ. ಜೇನುಗಳು ರಾತ್ರಿಹೊತ್ತಿನಲ್ಲೂ ಗೂಡಿನಲ್ಲಿ ಕೆಲಸ ಮಾಡುತ್ತವೆ. ಕಸವನ್ನೆಲ್ಲಾ ಬಾಗಿಲ ಬಳಿ ತಂದು ಹಾಕಿರುತ್ತವೆ. ಕಸವನ್ನು ಹೊರಗೆ ಹಾಕಲು ಜೇನುಗಳಿಗೆ ಅನುಕೂಲವಾಗುವಂತೆ ಸಂಜೆ ೫ ಗಂಟೆಯಿಂದ ಬೆಳಗಿನವರೆಗೂ ಗೇಟನ್ನು ತೆಗೆದಿಡಬೇಕು. ಬೆಳಗ್ಗೆ ಬೇಗ ಎದ್ದು ಗೇಟನ್ನು ಹಾಕಬೇಕು. ಇಲ್ಲವಾದಲ್ಲಿ ಹೊಸ ಜಾಗಕ್ಕೆ ಹೊಂದಿಕೊಳ್ಳಲಾರದ ಜೇನು ಹಾರಿಹೋಗಬಹುದು. ಕೆಲಸಗಾರ ಜೇನ್ನೊಣಗಳಿಗೆ ಓಡಾಡುವಷ್ಟು ಮಾತ್ರ ಕಂಡಿಗಳಿರುವ ವಸ್ತುವಿಗೆ ಗೇಟ್ ಎನ್ನುತ್ತಾರೆ. ಇದರಲ್ಲಿ ರಾಣಿ ಜೇನು ಹೊರಗೆ ಹೋಗಲಾರದು. ಯಜಮಾನಿ ರಾಣಿಯಾದರೂ, ಜೇನುಗಳ ನಡುವಳಿಕೆ ಕೊಂಚ ವಿಚಿತ್ರವಾಗಿದೆ. ರಾಣಿಯನ್ನು ನಿಯಂತ್ರಿಸುವುದು ಕೆಲಸಗಾರ ಜೇನುಗಳೇ. ರಾಣಿಗೆ ಆಹಾರ ಒದಗಿಸುವುದು ಇವುಗಳ ಜವಾಬ್ದಾರಿ. ಒಳ್ಳೆಯ ಮರದಿಂದ ಮಾಡದ ಪೆಟ್ಟಿಗೆಯಲ್ಲಿ ಜೇನುಗಳು ಇರುವುದಿಲ್ಲ. ಬಲವಂತವಾಗಿ ಗೇಟ್ ಹಾಕಿ ಸಾಕಬೇಕು. ಅಕೇಶಿಯಾ ಮರದಿಂದ ಮಾಡಿದ ಪೆಟ್ಟಿಗೆಗಳು ಜೇನು ಸಾಕಲು ಯೋಗ್ಯವಲ್ಲ. ಆದರೂ ಬಲವಂತವಾಗಿ ಗೇಟ್ ಹಾಕಿ ಸಾಕುವ ಪ್ರಯತ್ನ ಮಾಡಿದಾಗ, ಜೇನುಗಳು ನಮ್ಮ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತವೆ. ರಾಣಿಗೆ ಆಹಾರ ನೀಡುವುದನ್ನು ಕಡಿಮೆ ಮಾಡುತ್ತವೆ. ಒಂದೆರೆಡು ದಿನಗಳಲ್ಲಿ ರಾಣಿ ಜೇನು ಸೊರಗುತ್ತದೆ. ಕಿಂಡಿಯಿಂದ ಹೊರಗೆ ಹೋಗುವಷ್ಟು ಸೊರಗಿದ ರಾಣಿಯನ್ನು ಕೆಲಸಗಾರ ಜೇನುಗಳು ಎಳೆದು ತಂದು ಕಿಂಡಿಯಿಂದ ಹೊರಹಾಕುವ ಪ್ರಯತ್ನ ಮಾಡುತ್ತವೆ. ಮೆದುವಾಗಿ ಕಚ್ಚಿ ರಾಣಿಗೆ ಪೆಟ್ಟಾಗದ ಹಾಗೆ ಕಿಂಡಿಯಿಂದ ಹೊರಕ್ಕೆಳೆದು ಹಾರಿಸಿಕೊಂಡು ಹೋಗುತ್ತವೆ.

ಮಂಗನಿಂದ ಮಾನವನಾದ ನಾವು ಹಲವಾರು ಪ್ರಾಣಿಗಳನ್ನು ಪಳಗಿಸಿಕೊಂಡು ಬದುಕುವುದನ್ನು ಕಲಿತಿದ್ದೇವೆ. ಎತ್ತುಗಳಿಂದ ಉಳುಮೆ ಮಾಡಿಸುತ್ತೇವೆ. ಹಾಲಿಗಾಗಿ ಜಾನುವಾರುಗಳನ್ನು ಸಾಕುತ್ತಾರೆ. ವಯಸ್ಸಾದ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುತ್ತೇವೆ. ಪಶ್ಚಿಮ ದೇಶಗಳಲ್ಲಿ ಹೈನುಗಾರಿಕೆಯ ಜೊತೆಗೆ ಮಾಂಸವನ್ನೂ ಉತ್ಪಾದಿಸುತ್ತಾರೆ. ನೂರಾರು ಕೆ.ಜಿ. ಧಾನ್ಯ ತಿನ್ನಿಸಿ ಹತ್ತಾರು ಕೆ.ಜಿ. ಮಾಂಸ ಪಡೆಯುವುದು ಪ್ರಕೃತಿಯ ಬಿಸಿಯೇರಿಕೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಜೇನು ಸಾಕಣೆಯಿಂದ ಪರಿಸರಕ್ಕೆ ಯಾವುದೇ ತರಹದ ಹಾನಿಯಿಲ್ಲದಿದ್ದರೂ, ಜೇನಿನ ಸ್ವಾಭಾವಿಕ ಪರಿಸರದಿಂದ ಕೃತಕವಾಗಿ ನಿರ್ಮಿಸಿದ ಪರಿಸರದಲ್ಲಿ ಸಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೆಯಾದರೂ, ಕೃತಕ ಜೇನು ಸಾಕಣೆಯಿಂದ ಜೇನಿನ ಸಂತತಿಯ ಉಳಿಸಬಹುದಾದ ಪ್ರಯತ್ನವೂ ಇರುವುದರಿಂದ ಇದರಲ್ಲಿ ಪಾರಿಸಾರಿಕ ನ್ಯಾಯವು ಸೇರಿಕೊಂಡಿದೆ ಎನ್ನಬಹುದು. ಇನ್ನೂ ವರ್ಷದ ಎಲ್ಲಾ ದಿನಗಳಲ್ಲೂ ಹೂ ಬಿಡುವ ಕಾಲವಲ್ಲ. ಹಾಗಾಗಿ ಜೇನುಗಳು ಆಹಾರದ ಅಭಾವವನ್ನು ಎದುರಿಸುತ್ತವೆ. ಜೇನು ಸಾಕಣೆದಾರರು ಕೃತಕವಾಗಿ ತಯಾರಿಸಿದ ಆಹಾರವನ್ನು ನೀಡುವುದನ್ನು ಕಂಡುಕೊಂಡಿದ್ದಾರೆ. ಹೂವಿನ ಅಭಾವವಿದ್ದಾಗ ಇಡೀ ಕಡಲೆಯ ಸಿಪ್ಪೆಯನ್ನು ತೆಗೆದು ಅದನ್ನು ಹಿಟ್ಟು ಮಾಡಿ ಬೆಲ್ಲದಲ್ಲಿ ಕಲಸಿ ಉಂಡೆ ಮಾಡಿ ಇಡುವುದು ಒಂದು ಪದ್ಧತಿ. ಈ ಹಿಟ್ಟಿನ ಉಂಡೆಯನ್ನು ಜೇನ್ನೊಣಗಳು ಆಹಾರವಾಗಿ ಬಳಸುತ್ತವೆ.  

******

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಜೇನು-ಸವಿಜೇನು: ಅಖಿಲೇಶ್ ಚಿಪ್ಪಳಿ ಅಂಕಣ

Leave a Reply

Your email address will not be published. Required fields are marked *