ಜೀವ ಜೀವನದ ಭಿನ್ನತೆಯೊಳಗಿನ ಸಂಭ್ರಮ: ಪಿ. ಕೆ. ಜೈನ್ ಚಪ್ಪರಿಕೆ

ಅಂದು ಪ್ರಕೃತಿಯು ತನ್ನ ವಸಂತಕ್ಕೆ ಕಾಲಿಟ್ಟ ಸಮಯ. ಆ ತಾಯಿಯು ತನ್ನೆಲ್ಲ ನೋವುಗಳನ್ನು ಮರೆತು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತಲ್ಲಿದ್ದಳು. ವಸಂತ ಎಂಬ ಪದವೇ ಹಾಗೆ. ಅವನಿಗೆ ಎಣೆ ಯಾರು? ಯಾರನ್ನಾದರೂ ಬಿಟ್ಟಿಹನೆ? ಸೃಷ್ಟಿಯ ರುವಾರಿಯಾದ ಬ್ರಹ್ಮನನ್ನೇ ಬಿಡದ ಮಾರ…ಪ್ರಕೃತಿಯನ್ನು ಬಿಡಬಲ್ಲನೆ? ಹಾಗೆಯೇ ವಸಂತಕ್ಕೆ ಕಾಲಿಟ್ಟ ಭೂಮಿ ತಾಯಿಯ ಜೊತೆ ಅನೋನ್ಯದಿಂದ ಜೀವಿಸುತ್ತಿದ್ದ ಪ್ರಾಣಿ ಪಕ್ಷಿಗಳು, ಗಿಡ ಮರಗಳಿಗೂ ಅದರ ಅನುಭವ ಆಗಬೇಕಲ್ಲವೇ… ಗಿಡ ಮರಗಳು ಮೈ ಕೊಡಗಿ ಚಿಗುರೊಡೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದವು…ಅವುಗಳನ್ನು ಅವಲಂಬಿಸಿದ ಪ್ರಾಣಿ ಪಕ್ಷಿಗಳಲ್ಲೂ ಏನೋ ಒಂದು ಬದಲಾವಣೆ. ಪ್ರಾಣಿಗಳೆಲ್ಲವೂ ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದವು. ಪಕ್ಷಿಗಳು ತಮ್ಮ ತಮ್ಮ ಸ್ವರವನ್ನು ಸರಿ ಪಡಿಸಿಕೊಂಡು ಇಳಿ ಸಂಜೆಗೆ ತಮ್ಮ ಸಂಗೀತ ಸಭೆಯನ್ನು ಆರಂಭಿಸುತ್ತಿದ್ದವು.

ಒಮ್ಮೆ ಯಾವುದೋ ಕೆಲಸದ ನಿಮಿತ್ತ ಊರಿಗೆ ನಾನು ಹೋಗಬೇಕಾಯಿತು. ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಈ ಮಧ್ಯಂತರ ಕಾಲಗಳು ಅಷ್ಟಾಗಿ ಪರಿಚಯವಿರುವುದಿಲ್ಲ. ನನಗೆ ಬಾಲ್ಯದಲ್ಲಿ ಇದರ ಪರಿಚಯವಿದ್ದರೂ ಇಲ್ಲಿಗೆ ಬಂದು ಸೇರಿ ಸುಮಾರು 12 ವರುಷಗಳೇ ಕಳೆದಿದ್ದರಿಂದ ಆ ಸಮಯದಲ್ಲಿ ಮನೆಯ ಸುತ್ತ ಮುತ್ತಲಿನ ವಸಂತದ ಸೊಬಗಿನ ಬಗ್ಗೆ ಊಹಿಸಿರಲಿಲ್ಲ. ಎಂದಿನಂತೆ ಬಸ್ಸಿಳಿದು ಸ್ವಲ್ಪ ದೂರ ನಡೆದಾಗ ನನ್ನ ಸ್ವಾಗತಕ್ಕೆ ನಿಂತಿದ್ದು ಚಿಗುರೊಡೆದ ಗಿಡಮರ ಬಳ್ಳಿಗಳು. ದುಂಬಿಗಳ ಝೇಂಕಾರ, ಪಕ್ಷಿಗಳ ಕಲರವ, ಪ್ರಾಣಿಗಳ ಮಿಂಚಿನ ಸಂಚಾರ. ಓಹೋ ಇವುಗಳಿಗೆಲ್ಲಾ ವಸಂತದ ಸಂಭ್ರಮ ಸಡಗರವೆಂದೂ ತಿಳಿದು ಸುಮಾರು 10 ನಿಮಿಷದ ವನದ ದಾರಿಯನ್ನು 30 ನಿಮಿಷ ತೆಗೆದುಕೊಂಡು ವನದ ಮದ್ಯೆ ವಿಹರಿಸುತ್ತಾ ಜನಜನಿತ ಯಕ್ಷಗಾನದ ವನ ವಿಹಾರದ ಪದ್ಯ “ಎಲ್ಲೆಲ್ಲೂ ಸೊಬಗಿದೆ” ಎಂಬ ಪದ್ಯವನ್ನು ನನ್ನದೇ ರಾಗದಲ್ಲಿ ಹಾಡುತ್ತಾ, ಅಭಿನಯಿಸುತ್ತಾ, ಹೆಜ್ಜೆ ಹಾಕುತ್ತಾ ಮನೆ ಸೇರಿದೆ.

ಸಂಜೆ ಎಂದಿನಂತೆ ಪಕ್ಷಿಗಳ ಸಂಗೀತ ಸಭೆ ಶುರುವಾಗಿತ್ತು. ಎಲ್ಲೋ ಕೂಗಿದ ನವಿಲಿನ ಧ್ವನಿ ನನಗೆ ಆಹ್ವಾನ ಪತ್ರಿಕೆಯಾಯಿತು. ಗೀಜಗ, ಮರಕುಟಕ, ಗಿಳಿ ಮುಂತಾದ ಪಕ್ಷಿಗಳು ತುರಾತುರಿಯಲ್ಲಿ ಸಭೆಗೆ ಹಾಜರಾಗಲು ಹೊರಟಿದ್ದವು. ಇಂದಿನ ಆ ಸಭೆಗೆ ನಾ ಹೋಗಲೇ ಬೇಕು ಎಂದು ನಿರ್ಧರಿಸಿ ಅವುಗಳನ್ನು ಹಿಂಬಾಲಿಸಿದೆ. ಅಂದು ಅವುಗಳ ಸಂಗೀತ ಸಭೆ ಆರಂಭವಾಗಿದ್ದು ಅರಣ್ಯ ಪ್ರದೇಶದ ಅಂಚಿನಲ್ಲಿ, ನಮ್ಮ ಮನೆಯಿಂದ ಸುಮಾರು ಕೂಗಳತೆಯ ದೂರದಲ್ಲಿ.

ಆಗಷ್ಟೇ ಎಲ್ಲಾ ಪಕ್ಷಿಗಳು ದಿನದ ಕಾರ್ಯ ಚಟುವಟಿಕೆಗಳನ್ನು ಮುಗಿಸಿ ಬಂದು ಸೇರಿದ್ದವು. ತಮ್ಮ ತಮ್ಮಲ್ಲೇ ಯೋಗಕ್ಷೇಮಗಳನ್ನು ವಿಚಾರಿಸಿಕೊಳ್ಳುತ್ತಾ ಇದ್ದವು. ಎಂದಿನಂತೆ ಗಿಳಿಗಳು ಮೇಲ್ಪಂಕ್ತಿಯಲ್ಲಿ ಕುಳಿತ್ತಿದ್ದವು. ಅವುಗಳಿಂದಲೇ ಆರಂಭವಾಯಿತು ಸಂಗೀತ ಸಭಾ. ಗಿಳಿಗಳ ಜೊತೆ ಉಳಿದ ಪಕ್ಷಿಗಳು ಸಹ ತಾವೇನೂ ಕಡಿಮೆ ಇಲ್ಲ ಎಂಬ ಭಾವನೆಯೊಂದಿಗೆ ಸ್ವರ ಸೇರಿಸಿದವು. ಒಂದರ ಸ್ವರಕ್ಕಿಂತ ಇನ್ನೊಂದು ಸ್ವರ ಮಿಗಿಲು. ಅವುಗಳಲ್ಲಿ ಏರಿಳಿತ. ಅಹಾ ಕೇಳಿ ಆನಂದವಾಯಿತು. ಮರೆಯಲ್ಲಿ ಗೂಬೆಯೊಂದು ನನ್ನನ್ನೇ ದಿಟ್ಟಿಸಿ ನೋಡುತ್ತಿತ್ತು ಅದಕ್ಕೆ ನಾನು ಹೋಲಿಕೆಯಾದನೋ ಅಥವಾ ನನ್ನ ಕಂಡು ನನಗೊಬ್ಬ ಸ್ಪರ್ಧಿ ಬಂದಿದ್ದಾನೋ ಎನ್ನುವ ರೀತಿಯಲ್ಲಿ ನನ್ನನ್ನೇ ಅಣಕಿಸುತ್ತಾ ನೋಡುತಿತ್ತು. ಇವುಗಳ ನಡುವೆ ಅಂದು ವಿಶೇಷವಾಗಿದ್ದು ಕಪ್ಪು ಬಣ್ಣದ ಕಾಗೆ ಸ್ವರೂಪಿಯಾದ ಕೋಗಿಲೆಯ ಗಾನ. ಅಂದಿನ ಸಭೆಗೆ ಅದು ಅತಿಥಿಯಾಗಿ ಬಂದಿತ್ತು. ನಾನಲ್ಲದೇ ಅಲ್ಲಿ ಉಳಿದ ಪಕ್ಷಿಗಳು ಕೆಲ ಸಮಯ ಮೌನದಿಂದ ಆಲಿಸತೊಡಗಿದವು. ಆಗ ನನಗೆ ವಸಂತಕಾಲದಲ್ಲಿ ಮಾತ್ರ ತನ್ನ ಪಂಚಮದ ಇಂಚರದಿಂದ ಉಳಿದವರನ್ನು ಸಂಗೀತದ ಲೋಕಕ್ಕೆ ಕರೆದೊಯ್ಯುವ ಕೋಗಿಲೆಯ ಬಗ್ಗೆ ತಿಳಿಯುವ ಮನಸ್ಸಾಯಿತು. ಹೇಗಿರಬಹುದು ಅದರ ವಾಸ, ಜೀವನ, ಗುಣ ಇತ್ಯಾದಿಗಳನ್ನು ತಿಳಿದುಕೊಳ್ಳುವ ಮನ ಮಾಡಿದೆ.

ಬಾನ ಭಾಸ್ಕರನು ಇವುಗಳ ಗಾನ ಗಾಯನವನ್ನು ಕೇಳುತ್ತಾ ಪಡುವಣ ದಿಕ್ಕನ್ನ ಸೇರಿದ್ದ. ಅಲ್ಲಿಗೆ ಅಂದಿನ ಸಭೆಯನ್ನು ಮುಗಿಸುವ ನಿರ್ಧಾರಕ್ಕೆ ಎಲ್ಲಾ ಪಕ್ಷಿಗಳು ಬಂದವು. ಆದರೆ ನನ್ನ ದೃಷ್ಟಿ ನೆಟ್ಟಿದ್ದು ಮಾತ್ರ ಗಾನದ ಕಂಪು ಸೂಸಿದ ಕೋಗಿಲೆಯ ಮೇಲೆಯೇ. ಎಲ್ಲವೂ ತಮ್ಮ ತಮ್ಮ ಗೂಡುಗಳಿಗೆ ಹೋರಟವು. ಹೇಗಾದರೂ ಮಾಡಿ ಕೋಗಿಲೆಯ ಮಾತನಾಡಿಸಬೇಕೆಂದು ಅಂದುಕೊಂಡರೆ ಬೆಳಕು ಸಾಲಾದಾಯಿತು. ಪಡುವಣ ಸೇರಿದ ಭಾಸ್ಕರ ಮುಳುಗಿದ್ದ. ಕತ್ತಲಾವರಿಸಿತು. ಕತ್ತಲೆಯೊಳು ಕೋಗಿಲೆಯನ್ನು ಹುಡುಕುವುದೇ ಕಷ್ಟವಾಯಿತು. ಎಲ್ಲಿ ಹೋಯಿತೋ ಆ ಸ್ವರ ಸಿಂಧೂರ ನನಗದು ತಿಳಿಯದೆ ಹೋಯಿತು. ಅದರ ಬಗ್ಗೆ ಹೇಗೆ ತಿಳಿದುಕ್ಕೊಳ್ಳಲಿ ಎಂಬುದರ ಬಗ್ಗೆ ಯೋಚಿಸುತ್ತಾ ಮನೆ ಸೇರಿದೆ.

ಕೋಗಿಲೆಯ ಸಹಪಾಠಿಗಳನ್ನ ವಿಚಾರಿಸಿದರೆ ಏನಾದರೂ ಮಾಹಿತಿ ಸಿಗಬಹುದು ಎಂಬ ಉದ್ದೇಶದಿಂದ ಮುಂಜಾನೆ ಸೂರ್ಯ ಉದಯವಾಗುವ ಸಮಯದಲ್ಲಿ ಎದ್ದು ಮತ್ತದೇ ಜಾಗಕ್ಕೆ ತೆರಳಿದೆ. ಅಲ್ಲಿ ಒಬ್ಬ ಅದರ ಗೆಳೆಯ ಕೆಂಬೂತ ನನಗೆ ಕೆಲವು ಮಹಿತಿಗಳನ್ನ ಕೊಟ್ಟು ನನಗೂ ಗೆಳೆಯನಾದ. ಅವನ ಹೇಳುತ್ತಿರುವ ಒಂದೊಂದು ವಿಷಯಗಳು ಸಹ ಕೇಳುವ ಕುತೂಹಲವನ್ನು ಹೆಚ್ಚಿಸುತ್ತಿತ್ತು. ಮೊದಲಿಗೆ ಅವನು ಹೇಳಿದ ಮಾತು. ಅದರ ಸ್ವರ ಎಷ್ಟು ಸುಮಧುರವೋ ಅದರ ನಡವಳಿಕೆ ಹಾಗೂ ಜೀವನ ಅಷ್ಟೇ ವಿಚಿತ್ರ ಎಂದ. ಕೇಳುವ ಕುತೂಹಲ ಹೆಚ್ಚಾಯಿತು. ಬಿಡಿ ಬಿಡಿಯಾಗಿ ಕೇಳಿದೆ. ಆಗ ಅವನು ಹೇಳಿದ ಮಾತು. “ಮಾತೃ ವಾತ್ಸಲ್ಯದ ಕುಡಿಗಳಲ್ಲ ಅವುಗಳು. ಹುಟ್ಟುವುದು ಒಂದೆಡೆ, ಬೆಳೆಯುವುದು ಒಂದೆಡೆ. ಜೀವನ ಸಾಗಿಸುವುದು ಇನ್ನೊಂದೆಡೆಯಲ್ಲಿ. ಇವುಗಳು ಸೋಮಾರಿ ಮನೆತನದವು. ಹೆಚ್ಚಾಗಿ ಒಂಟಿ ಜೀವನವನ್ನು ಸಾಗಿಸುತ್ತವೆ. ನಮ್ಮ ವಂಶದಲ್ಲಿ ಅತ್ಯಂತ ಕುಖ್ಯಾತಿ ಪಡೆದಿರುವ ಪಕ್ಷಿ ಎಂದರೆ ಅದು ಕೋಗಿಲೆಯೇ ಸರಿ. ಅದರ ಗಾಯನಕ್ಕೆ ಸೋತು ನಾವು ಅದನ್ನು ನಮ್ಮ ಜೊತೆ ಸೇರಿಸಿಕೊಂಡಿದ್ದೇವೆ. ತನಗಿರಲು ಒಂದು ಸ್ವಂತ ಗೂಡು ಸಹಾ ಇಲ್ಲ. ಕಟ್ಟಿಕೊಂಡ ಮಡದಿಯ ಬಗ್ಗೆ ಅಂತೂ ಹೇಳತೀರದು. ತನ್ನ ಮಕ್ಕಳನ್ನು ಸಾಕಲಾಗದ ಹೆಣ್ಣು ಅವಳು. ಧರಿಸಿದ ಗರ್ಭವನ್ನು ಕಾವಿಗಾಗಿ ಹಾಗೂ ಅದರ ಬೆಳವಣಿಗೆಗಾಗಿ ಬೇರೊಂದು ಪಕ್ಷಿಯ ಗೂಡನ್ನು ಆಶ್ರಯಿಸುತ್ತಾಳೆ. ನನ್ನ ಗೆಳೆಯ ಮೈನಾ ಹಾಗೂ ಕಾಗೆ ಇವರುಗಳೇ ಇವಳ ಟಾರ್ಗೆಟ್. ಇವಳ ಹೀನ ಕೃತ್ಯ ಏನು ಗೊತ್ತಾ?. ತಾನು ಮೊಟ್ಟೆ ಇಡುವ ಸಂಧರ್ಭ ನೇರವಾಗಿ ಯಾರಿಗೂ ತಿಳಿಯದೆ ನನ್ನ ಗೆಳೆಯನ ಗೂಡನ್ನು ಸೇರುತ್ತಾಳೆ. ಅಲ್ಲಿ ತನ್ನ ಮೊಟ್ಟೆಯನ್ನು ಇಟ್ಟರೂ ಏನು ಹೇಳುತ್ತಿರಲಿಲ್ಲ ನನ್ನ ಗೆಳೆಯರು. ತನ್ನ ಮೊಟ್ಟೆಗೆ ಕೊಡುವ ಕಾವಿನ ಜೊತೆ ಇವಳ ಮೊಟ್ಟೆಗೂ ಕಾವು ಕೊಟ್ಟು ಸಹಕರಿಸುತ್ತಿದ್ದವು. ಆದರೆ ಕರುಣೆಯೇ ಇಲ್ಲದ ಇವಳು ತನ್ನ ಮೊಟ್ಟೆಯನ್ನಿಟ್ಟು ಅದಕ್ಕೆ ಸಮನಾಗಿ ಅವುಗಳ ಮೊಟ್ಟೆಯನ್ನು ತಿಂದು ಬರುತ್ತಾಳೆ.

ಯಾವ ತಾಯಿಯಾದರೂ ಇಂತ ಕೃತ್ಯಕ್ಕೆ ಮನ ಮಾಡುತ್ತಾಳೆಯೇ? ಆದ್ದರಿಂದ ಅವಳನ್ನು ನಾವು ಇಷ್ಟ ಪಡುವುದಿಲ್ಲ ಎಂದ. ಅಷ್ಟಕ್ಕೆ ನಿಲ್ಲಿಸದೆ ” ಪಾಪ ನನ್ನ ಗೆಳೆಯರು ಅವಳ ಮೊಟ್ಟೆಗಳನ್ನು ಸಹ ಕಾವು ಕೊಟ್ಟು ಮರಿಗಳಿಗೆ ಜನ್ಮದಾತರಾಗುತ್ತಾರೆ. ಆದರೆ ಆ ಮರಿ ಮಾಡುವುದೇನು ಗೊತ್ತಾ? ಮೊದಲು ಹೊರ ಬರುವ ಮರಿ ತನ್ನ ರಕ್ಷಣೆಗೋಸ್ಕರ ಉಳಿದ ಮೊಟ್ಟೆಗಳನ್ನು ಮರಿಗಳನ್ನು ಬೀಳಿಸುವ ಕೆಲಸ ಮಾಡುತ್ತದೆ. ಹುಟ್ಟುವ ಮರು ಗಳಿಗೆಯಲ್ಲಿಯೇ ತನ್ನ ಕುತಂತ್ರ ತನವನ್ನು ತೋರಿಸುವ ಹಾಗೂ ಹುಟ್ಟುವಾಗಲೇ ಬಲಿಷ್ಠವಾದ ಮರಿ ಮಾತ್ರ ಬದುಕುತ್ತದೆ. ಹುಟ್ಟುವಾಗಲೇ ಮತ್ಸರದ ಛಾಯೆ ಇವುಗಳಲ್ಲೇ ಬರುವುದರಿಂದ, ನನ್ನ ಒಡಹುಟ್ಟುತಿರುವ ಸಹೋದರನನ್ನೇ ತಿಂದ ಈ ಮರಿಯ ತಾಯಿಯ ಬಗ್ಗೆ ಕಾವು ಕೊಟ್ಟವಳ ಮರಿಗಳಿಗೆ ಗೊತ್ತಾದರೆ ಸುಮ್ಮನಿರುತ್ತಾವೆಯೇ ಎಂದು ಅನ್ಯ ಮಾರ್ಗವಿಲ್ಲದೆ ನನ್ನ ಗೆಳೆಯರು ಕೋಗಿಲೆಯ ಮರಿಯನ್ನು ಹೊರಹಾಕುತ್ತಾರೆ. ಹೀಗೆ ತನ್ನ ಕುಖ್ಯಾತಿಯಿಂದ ಹೊರ ಹಾಕಲ್ಪಟ್ಟ ಕೋಗಿಲೆಯ ಮರಿಗೆ ತನ್ನವರು ಅಂತ ಯಾರು ಇರುವುದಿಲ್ಲ. ತನ್ನ ತಂದೆ ತಾಯಿಗಳು ಇವರೇ ಎಂದು ಹೇಳಿಕೊಳ್ಳುವ ಸೌಬಾಗ್ಯವಿಲ್ಲ. ಬಿಟ್ಟು ಹೋದ ತಾಯಿ ಎಲ್ಲಿಗೋ ವಲಸೆ ಹೋಗುತ್ತಾಳೆ. ಹುಟ್ಟುವಾಗಲೇ ತಾಯಿಯ ಪ್ರೀತಿ, ಮಮತೆ ಯನ್ನು ಕಾಣದ ತಬ್ಬಲಿಯಾಗಿ ಸಿಕ್ಕ ಸಿಕ್ಕ ಕೀಟಗಳು, ಹಣ್ಣುಗಳನ್ನ ತಿಂದು ತನಗೊಂದು ಜೊತೆಗಾರ ಸಿಗುವ ತನಕ ಒಂಟಿತನದ ಜೀವನ ಸಾಗಿಸುತ್ತದೆ. ಆ ಸೃಷ್ಟಿಕರ್ತ ಬ್ರಹ್ಮ ಅವರಿಗೆ ಇಂತಹ ಜೀವನವನ್ನು ಸೃಷ್ಟಿಸಿದ್ದಾನೆ ನೋಡು. ಸ್ವರ ನೀಡಿ ಗುಣ ನೀಡದೆ ಹೋದ. ಆದರೆ ವಸಂತಕ್ಕೆ ಸರಿಯಾಗಿ ನಮ್ಮ ಜೊತೆ ಸೇರಿಕೊಂಡು ತನ್ನ ಸ್ವರ ಸಿಂಚನದಿಂದ ನಮ್ಮನ್ನು ಮುದಗೊಳಿಸುತ್ತದೆ. ” ಎಂದ. ಅಬ್ಬಾ ! ಇದೇನು ಕೋಗಿಲೆಯ ಕತೆಯೋ ಅಥವಾ ಅದರ ಜೀವನದ ವ್ಯತೆಯೋ ಎಂಬಂತಾಯಿತು ನನಗೆ. ಹಾಗೆಯೇ ಇತರ ವಿಷಯದ ಬಗ್ಗೆ ಸ್ವಲ್ಪ ಹೊತ್ತು ಇಬ್ಬರೂ ಮಾತನಾಡಿದೆವು. ಅವುಗಳಲ್ಲಿ ಪ್ರಮುಖವಾಗಿ ಅವರ ಆಹಾರದ ಕೊರತೆ, ಮಾನವ ಮಾಡುತ್ತಿರುವ ಮಾಲಿನ್ಯ, ಅರಣ್ಯ ನಾಶ, ನಗರೀಕರಣ ಹಾಗೂ ಪಕ್ಷಿಗಳ ಆರೋಗ್ಯದ ಬಗ್ಗೆ ಸಹ ಮಾತನಾಡಿದೆ. ಇಷ್ಟೊಂದು ಕಷ್ಟದಲ್ಲಿ ನಾವು ಬದುಕುತ್ತಿದ್ದೇವೆ ಎಂಬುದನ್ನ ಗೆಳೆಯ ಕೆಂಬೂತ ನನಗೆ ಕಣ್ಣಿಗೆ ಕಟ್ಟಿದ ಹಾಗೆ ಹೇಳಿದ. ಎಲ್ಲವೂ ನಿಜವೆನಿಸಿತು. ಕೊನೆಯಲ್ಲಿ ಧನ್ಯವಾದದೊಂದಿಗೆ ಕೆಂಬೂತನನ್ನು ಬಿಳ್ಕೊಟ್ಟು ಮನೆಗೆ ಬಂದೆ.

ನಾವು ಕೆಲವು ವಿಶೇಷ ಪಕ್ಷಿಗಳನ್ನು ಕಾಣದಿದ್ದರೂ ಅವುಗಳ ಇರುವಿಕೆಯನ್ನು ಕವಿಗಳು ಕವಿತೆಗಳ ಮೂಲಕ ವರ್ಣಿಸಿದ್ದು ತಿಳಿದಿರಬಹುದು. “ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ…” ಎಂದು ಕವಿಯ ಕಲ್ಪನೆಯಲ್ಲಿ ಹೇಳಿದ್ದು ನೆನಪಾಯಿತು. ಚಕೋರ ಎಂಬ ಪಕ್ಷಿಗೆ ಯಾವಾಗಲೂ ಚಂದ್ರಮ ಬೆಳಕಿನಡಿ ಇರಬೇಕೆಂದು ಆಸೆಯಂತೆ. ಅದಕ್ಕಾಗಿ ಪ್ರತಿ ಬಾರಿಯೂ ಚಂದ್ರನಿಗಾಗಿ ಚಿಂತಿಸುತ್ತಾ ಇರುತ್ತದೆಯಂತೆ. ಹಾಗೆಯೇ ಚಾತಕ ಪಕ್ಷಿಯು ಇಬ್ಬನಿಯ ಹನಿಯನ್ನು ಕುಡಿದು ಜೀವಿಸುತ್ತದೆಯಂತೆ. ಇಬ್ಬನಿಯೇ ಆಹಾರವಂತೆ. ಹೀಗೆಲ್ಲಾ ಕೇಳಿದ್ದುಂಟು ಹೊರತು ನೋಡಿದ್ದಿಲ್ಲಾ..ಆದರೆ ಅಪರೂಪಕ್ಕೆ ನೋಡಲು ಸಿಗುವ ಈ ಗಾನ ಗಂಧರ್ವ ಕೋಗಿಲೆಯ ಜೀವನದ ಬಗ್ಗೆ ಕೆದಕಿದರೆ ವಿಶೇಷತೆಗಳು ಒಂದಾದಮೇಲೊಂದು ಹೊರಬಂದಿದ್ದು ಮಾತ್ರ ವಿಶೇಷ.

ಇಷ್ಟಕ್ಕೆ ಸುಮ್ಮನಾಗದೆ ನಾನು ವೈಜ್ಞಾನಿಕವಾಗಿ ಹಾಗೂ ಇತಿಹಾಸಗಳನ್ನು ಸ್ವಲ್ಪ ಕೆದಕಿದೆ. ಆಗ ಇನ್ನು ಕೆಲವು ವಿಷಯಗಳು ತಿಳಿದವು. ಇದು ಕುಕುಲಿಡೆ ಎಂಬ ಕುಟುಂಬಕ್ಕೆ ಸೇರಿರುವ ಪ್ರಭೇದವಾಗಿದೆ. ಗಂಡು ಕೋಗಿಲೆಯು ಕಪ್ಪು ಬಣ್ಣದಾಗಿದ್ದು ಕಾಗೆಯ ಹಾಗೆ ಕಂಡರೂ ಗಾತ್ರದಲ್ಲಿ ಸ್ವಲ್ಪ ಚಿಕ್ಕದು. ಹೆಣ್ಣು ಕೋಗಿಲೆಯು ಕಂದು ಹಾಗೂ ಕಪ್ಪು ಬಣ್ಣದ ಗೆರೆಗಳುಳ್ಳ ಪಕ್ಷಿಯಾಗಿದೆ. ಗ್ರೀಕನ ಪುರಾಣ ದೇವತೆ ಹೆರಾ ಆಗಿ ಕಾಣಿಸಿಕೊಂಡಿದೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಹಾಗೂ ಇದಕ್ಕೆ ಸಾಕಷ್ಟು ಅನ್ವರ್ಥ ನಾಮಗಳಿವೆ. ಇಂಗ್ಲಿಷಿನಲ್ಲಿ ಬ್ರೆನಾಫಿವರ ಪಕ್ಷಿ ಎಂದೂ, ಮರಾಠಿಯಲ್ಲಿ ಪಾವುಸ ಆಲಾ(ಮಳೆ ಬಂತು) ಹಾಗೂ ಹಿಂದಿಯಲ್ಲಿ (ಪಿಯಾ ಕಂಹಾ) ನನ್ನ ಪ್ರೇಮಿ ಎಲ್ಲಿ! ಎಂಬ ಅನ್ವರ್ಥ ನಾಮಗಳಿಂದ ಕರೆಯುತ್ತಾರಂತೆ.

ಪ್ರತಿಯೊಬ್ಬರ ಜೀವನಚಕ್ರದಲ್ಲೂ ಒಂದಲ್ಲ ಒಂದು ರೀತಿಯ ವಿಶೇಷತೆಗಳು ಇದ್ದೇ ಇರುತ್ತದೆ. ಅವುಗಳು ಕೇವಲ ಮಾನವರಲ್ಲಿ ಅಲ್ಲದೇ..ಪ್ರಾಣಿ-ಪಕ್ಷಿಗಳು, ಗಿಡ-ಮರ ಬಳ್ಳಿಗಳು, ನದಿ-ತೊರೆ ಸಾಗರಗಳು ಹೀಗೆ ಎಲ್ಲದರಲ್ಲೂ ವಿಭಿನ್ನವಾದ ಹಾಗೂ ಏನಾದರೂ ವಿಶೇಷತೆಗಳನ್ನ ನಾವು ನೋಡಬಹುದು. ಅದನ್ನು ನಮ್ಮ ನಿಜ ಜೀವನಕ್ಕೆ ಹೋಲಿಸಿದಾಗ ಕೆಲವೊಂದು ಆಶ್ಚರ್ಯಕರ ವಿಷಯಗಳಾಗುವುದು, ಕೆಲವೊಂದು ವಿಷಯಗಳಿಗೆ ಮರುಗಬೇಕೆಂದೇನಿಸುವುದು. ಕೆಲವೊಂದು ವಿಷಯಗಳಿಗೆ ನಾವು ಪಶ್ಚತ್ತಾಪಕ್ಕೆ ಒಳಗಾಗುವುದು ಸಹಜ. ಹೀಗೆ ವಸಂತಕಾಲದಲ್ಲಿ ಒಮ್ಮೆ ಊರಿಗೆ ಹೋದ ಅನುಭವ ಕೋಗಿಲೆಯ ಸುಮಧುರ ಕಂಠಕ್ಕೆ ಸಾಕ್ಷಿಯಾಯಿತು.

ಪಿ. ಕೆ. ಜೈನ್ ಚಪ್ಪರಿಕೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Sanjth Kumar
Sanjth Kumar
6 years ago

ಬಹಳ ಸುಂದರವಾಗಿ ವರ್ಣಿಸಲಾಗಿದೆ. ಅರ್ಥ ಪೂರ್ಣ ಲೇಖನ. ಧನ್ಯವಾದಗಳು.

1
0
Would love your thoughts, please comment.x
()
x