“ಸಾಹೇಬ್ರೇ ನಮಸ್ಕಾರ್ರೀ…. ಹೆಂಗಾರ ಮಾಡಿ ನಮಗೊಂದೀಟು ಕುಡಿಯಾಕೆ ಅನುಕೂಲ ಮಾಡಿಕೊಡ್ರೀ….ಇಲ್ಲಾಂದ್ರ ಇದೇ ಕೊರಗಲ್ಲಿ ನಿದ್ರಿ, ಊಟ ಏನೂ ಸೇರದೆ ಸತ್ತೇ ಹೋಗಂಗಾಗದ್ರೀ… ನಮ್ಮ ನೋವು ಏಟಾಗಿದಿ ಅಂದ್ರಾ ಕರೋನ ಬಂದು ಸತ್ರೂ ಚಿಂತಿಲ್ಲ, ಏನೋ ಚಟ ಅಂಟಿಸ್ಕೊಂಬಿಟ್ಟೀವಿ, ಎಣ್ಣೀ ಕುಡ್ಕೊಂಡಾರೂ ಜೀವ ಬಿಡ್ತೀವ್ರಿ… ನಮಗೊಂದೀಟು ಉಪಕಾರ ಮಾಡ್ರೀ ಯಪ್ಪಾ…”
ಟಿವಿ ಸುದ್ದಿ ವಾಹಿನಿಯ ವರದಿಗಾರರೊಬ್ಬರನ್ನು ಕುಡುಕ ಮಹಾಶಯನೊಬ್ಬ ಎಣ್ಣೆ ಅಂಗಡಿ ಬಾಗಿಲು ತೆಗೆಸಿ ಅಂತ ತನ್ನ ಬೇಡಿಕೆಯನ್ನು ಆಸೆಗಣ್ಣಿನಿಂದ ಮುಂದಿಟ್ಟ ರೀತಿ ಇದು.
“ಎಂತೆಂಥ ವೈರಸ್ ಬಂದಾವೂ ಹೋಗ್ಯಾವು, ಇದು ಯಾವ್ ಮಹಾಮಾರಿ? ಕೊರೋನ ಅಂತೆ! ನಮ್ಮಪ್ಪನ ಕಾಲದಾಗ ಪ್ಲೇಗೂ, ಕಾಲರಾ, ಮಲೇರಿಯಾ, ಸಿಡುಬು, ಕೂಗಿನಮಾರಿ ಅಂತ ಬೇಕಾದಷ್ಟು ಕಾಯಿಲೆ ಬಂದು ಹೋಗ್ಯಾವು. ಇಡೀ ಊರಿಗೆ ಊರೇ ಜಾಗ ಖಾಲಿ ಮಾಡಿ ತಮ್ಮ ತೋಟ, ಹೊಲ ಗದ್ದೆ, ಹಳ್ಳದ ಹತ್ರಾ ತಿಂಗಾನುಗಟ್ಟಳೆ ಕಾಳು ಕಡ್ಡಿ ಗೆಡ್ಡೆ ಗೆಣಸು ತಿಂದುಕೊಂಡು ಸಾಂಕ್ರಾಮಿಕ್ ರೋಗ್ಗೊಳಿಂದ ಬದುಕಿ ಉಳಿದದ್ರಿಂದ್ಲೇ ನಾವು ಇನ್ನೂ ಉಳಿದೀವಿ. ಇದು ಯಾವ ಕಿರಿಕಿರಿ ಕೊರೋನ ಬಿಡಿ ಬುದ್ಧಿ. ನಮ್ಮನ್ನ ಏನೂ ಮಾಡವಲ್ದು, ಸುಮ್ನೆ ಯಾಕ್ ಗಾಬರಿ ಆದೀರಿ. ಅದರ ಪಾಡಿಗೆ ಅದನ್ನ ಬಿಟ್ಟು ನಮ್ ಪಾಡಿಗೆ ನಾವಿದ್ರೆ ಏನೂ ಆಗೋದಿಲ್ಲ….” ಇದು ಒಬ್ಬ ಸಾಮಾನ್ಯ ಹಳ್ಳಿಯವ ಕೊರೋನಾ ಬಗ್ಗೆ ಜಾಗೃತಿ ಮೂಡಿಸೋಕೆ ಬಂದ ಅಧಿಕಾರಿಗಳಿಗೆ ಸಮಾಧಾನ ಮಾಡೋ ಮುಗ್ಧ ಪರಿಯಿದು.
“ವಾರಾನುಗಟ್ಟಲೇ ಹೋಮ್ ಕ್ವಾರಂಟೈನ್ ಗೆ ಹಾಕಿದರೆ ನನ್ನ ಮನೇಲಿ ಹೆಂಡತಿ, ಮಕ್ಕಳು ಪಾಡೇನು ಸರ್. ಬೇರೆ ರಾಜ್ಯದಿಂದ ಬಂದ ಮಾತ್ರಕ್ಕೆ ನನಗೆ ಕೊರೋನಾ ಬಂದಿದೆ ಅಂತ ಹೇಗೆ ಹೇಳ್ತೀರಿ? ನೋಡಿ, ನಾನು ನಾರ್ಮಲ್ ಆಗೇ ಇದೀನಿ. ಯಾವ ತೊಂದರೇನೂ ಇಲ್ಲ. ಅಷ್ಟು ಅನುಮಾನ ಇದ್ದರೆ ನಮ್ಮ ಮನೆಲೇ ಇದ್ದು ಆಗಾಗ ಬಂದು ಆಸ್ಪತ್ರೇಲಿ ಚೆಕಪ್ ಮಾಡಿಸಿಕೊಳ್ಳುತ್ತೇನೆ. ನಾನಂತೂ ಇಲ್ಲಿರಲಾರೆ. ಪ್ಲೀಸ್ ಅರ್ಥ ಮಾಡ್ಕೋಳಿ, ನನ್ನನ್ನು ಕಳಿಸಿಕೊಡೀ…” ಮುಂಬೈಯಿಂದ ಬಂದ ಒಬ್ಬ ವ್ಯಕ್ತಿನಾ ಬಂಧಿಸಿ, ಹೋಮ್ ಕ್ವಾರಂಟೈನ್ ಗೆ ಒಳಪಡಿಸುವ ಸಂದರ್ಭದಲ್ಲಿ ಆ ವಿದ್ಯಾವಂತ ಪೋಲಿಸ್ ನವರಿಗೆ ಅಂಗಲಾಚುವ ರೀತಿ ಇದು.
” ಸರ್ ದಯವಿಟ್ಟು ನನ್ನನ್ನು ನಮ್ಮ ಹಳ್ಳಿಗೆ ಸೇರ್ಕೋಳ್ಳೋಕೆ ಬಿಡಿ. ವ್ಯವಸಾಯ ಮಾಡ್ಕೊಂಡು, ಹಳ್ಳೀಲೇ ನಮ್ಮ ಜೊತೆ ಇರು ಅಂತ ಬುದ್ಧಿ ಹೇಳಿದ ಅಪ್ಪ ಅಮ್ಮನ ಮಾತು ಕೇಳದೆ, ಸಿಟಿ ಜೀವನದ ಆಸೆಗೆ ಬಿದ್ದು ಬೆಂಗಳೂರು ಸೇರ್ಕೊಂಡಿದ್ದೆ. ಅಲ್ಲಿನ ಬದುಕು ಎಷ್ಟು ಕಷ್ಟ ಅನ್ನೋದು ಗೊತ್ತಿದ್ರೂ ಈ ಹಾಳು ದುಡ್ಡು ಸಂಪಾದನೆ ಹುಚ್ಚಿನಿಂದ ಸಿಟೀಲೆ ಉಳಿದುಬಿಟ್ಟಿದ್ದೆ. ಈ ಕೊರೋನಾ ಅನ್ನೋ ಬಿಗ್ ಬಾಸ್ ಬಂದು ನಮ್ಮ ಹಳ್ಳಿ ಜೀವನವೇ ವಾಸಿ ಅಂತ ಪಾಠ ಕಲಿಸೋಕೆ ಬಂದಿದೆ. ಬರಿಗಾಲಲ್ಲಿ ನಡಕೊಂಡಾದರೂ ಸರಿ, ನಾನು ಇನ್ಯಾವತ್ತೂ ಸಿಟಿ ಕಡೆ ಮುಖ ಮಾಡಿಯೂ ಮಲಗೋಲ್ಲ…. ” ಇದು ಸಾರಿಗೆ ವಾಹನಗಳು ಬಂದ್ ಆದ ಬಳಿಕ ತನ್ನ ಊರಿಗೆ ವಾಪಾಸಾಗಲು ಪರದಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸ್ ನವರು ಹಿಡಿದು ತಡೆದಾಗ ದೀನನಂತೆ ಬೇಡಿಕೊಂಡ ಉದಾಹರಣೆ.
ಇತ್ತೀಚೆಗೆ ಕೊರೋನಾ ವಿಷವರ್ತುಲದಲ್ಲಿ ಸಿಲುಕಿಕೊಂಡು, ಬಡವ ಸಿರಿವಂತ ಎಂಬ ಭೇದವಿಲ್ಲದೆ ಅಪಾರ ಜನರು ಪ್ರಾಣಕಳೆದುಕೊಳ್ಳುತ್ತಿರುವ ಇಟಲಿಯಲ್ಲಿ ಆದ ಒಂದು ವಿಚಿತ್ರ ಘಟನೆಯು ವಾಟ್ಸಾಪ್ ಮೂಲಕ ಹರಿದಾಡುತ್ತಿದೆ. ಇಟಲಿಯ ಒಬ್ಬ ಭಾರೀ ಶ್ರೀಮಂತ ಕೋಟ್ಯಧಿಪತಿ ಮನೆಯ ಸದಸ್ಯರಿಗೆಲ್ಲ ಕೊರೋನ ರೋಗ ಪಸರಿಸಿ ಧಾರುಣವಾಗಿ ಹೆಣವಾಗಿದ್ದಾರೆ. ಅವರನ್ನು ನೋಡುವಂತಿಲ್ಲ, ಮುಟ್ಟಿ ಅಂತಿಮ ನಮನವನ್ನೂ ಸಲ್ಲಿಸುವಂತಿಲ್ಲ. ಜೊತೆಯಾಗಿ ಬಾಳಿದ ಮನೆ ಮಂದಿಯ ಈ ಘೋರ ಸಾವಿನ ನೋವನ್ನು ಆ ಕೋಟ್ಯಧಿಪತಿ ಸಹಿಸಲಾಗದೆ, ಬೃಹತ್ ಬಹುಮಹಡಿ ಕಟ್ಟಡವೊಂದರ ತುತ್ತ ತುದಿಗೆ ಹತ್ತಿ, ಕೋಟಿ ಕುಳವಾದರೂ ದೀಪದ ಜ್ವಾಲೆಗೆ ಸಿಕ್ಕ ಹುಳುಗಳಂತೆ ಸತ್ತ ತನ್ನವರನ್ನು ನೆನೆಯುತ್ತಾ, ದುಃಖವನ್ನು ತಡೆಯಲಾರದೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡನಂತೆ.
ಈ ಎಲ್ಲಾ ಉದಾಹರಣೆಗಳ ಉಲ್ಲೇಖಕ್ಕೆ ಕಾರಣವಿದೆ. ಚೀನಾದ ವುಹಾನ್ ನಗರದಲ್ಲಿ ಉದಯಿಸಿ ಇಡೀ ವಿಶ್ವವನ್ನೇ ವ್ಯಾಪಿಸುತ್ತ ಮನುಕುಲದ ಅಸ್ತಿತ್ವವನ್ನೇ ಅಸ್ತಂಗತಗೊಳಿಸಲು ತೊಡಗಿರುವ ಕ್ರಿಮಿ, ವೈರಾಣು “ಕೊರೋನಾ” , ಮೈಮರೆತರೆ ಭೂಮಂಡಲವನ್ನೇ ಆಪೋಷನ ಮಾಡಿಕೊಳ್ಳುವಷ್ಟರ ಮಟ್ಟಿಗೆ ತನ್ನ ಕರಾಳತೆಯನ್ನು ಪ್ರದರ್ಶಿಸುತ್ತಿದೆ. ತಾಂತ್ರಿಕವಾಗಿ ಮುಂದುವರಿದಿರುವ ಚೀನಾ, ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಇಟಲಿ, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೇರಿಕಾ ಸೇರಿದಂತೆ ಫ್ರಾನ್ಸ್, ಸ್ಪೇನ್, ದಕ್ಷಿಣ ಕೊರಿಯಾ ಸೇರಿದಂತೆ ಬಹುತೇಕ ಎಲ್ಲಾ ರಾಷ್ಟ್ರಗಳಿಗೂ ವ್ಯಾಪಿಸಿ, ಸಾವಿರಾರು ಜನರನ್ನು ಅನಾಥ ಶವಗಳಾಗಿಸಿ ಅಲ್ಲಿನ ಆಡಳಿತ ಯಂತ್ರಗಳಿಗೆ ತಲೆನೋವು ನೀಡುತ್ತಿದೆ.
ಭಾರತ ದೇಶವೂ ಹೊರತಾಗದೆ ಸಾಕಷ್ಟು ಮುಂಜಾಗ್ರತೆ ಕ್ರಮಗಳ ನಡುವೆಯೂ ೨ ನೇ ಹಂತದಲ್ಲಿ ಕೊರೋನಾ ಹರಡುತ್ತಿದೆ. ಬೇರೆ ದೇಶಗಳ ದಯನೀಯ ಸ್ಥಿತಿಗೆ ಇನ್ನೂ ತಲುಪಿಲ್ಲವಾದರೂ ನಿರ್ಲಕ್ಷ್ಯ ಮಾಡಿದರೆ ಒಂದೆರಡು ತಿಂಗಳಲ್ಲಿ ಬೇರೆ ದೇಶಗಳು ಅನುಭವಿಸುತ್ತಿರುವ ಅಸಹಾಯಕ ಪರಿಸ್ಥಿತಿಯನ್ನು ನಮ್ಮ ದೇಶವೂ ಅನುಭವಿಸಬೇಕಾದೀತು. ಇದರ ಅರಿವಿದ್ದೇ ಕೇಂದ್ರ ಸರ್ಕಾರವು ನಮ್ಮ ದೇಶವಾಸಿಗಳ ರಕ್ಷಣೆಗಾಗಿ ಹರಸಾಹಸಪಟ್ಟು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತಿದೆ. ಆರ್ಥಿಕವಾಗಿ ಭಾರೀ ಪ್ರಮಾಣದ ನಷ್ಟವನ್ನು ಅನುಭವಿಸಿದರೂ ಇಡೀ ದೇಶವನ್ನು ಸಂಪೂರ್ಣವಾಗಿ “ಲಾಕ್ ಡೌನ್” ಗೆ ಒಳಪಡಿಸಿದೆ. ಇವೇ ಕಾರ್ಯ ಯೋಜನೆಗಳನ್ನು ರಾಜ್ಯ ಸರ್ಕಾರಗಳೂ ಚಾಚೂ ತಪ್ಪದೆ ಪಾಲಿಸುತ್ತಿವೆ. ಸೋಂಕಿತ ಮತ್ತು ಶಂಕಿತ ವ್ಯಕ್ತಿಗಳನ್ನು ಗುರ್ತಿಸುವಲ್ಲಿ, ಚಿಕಿತ್ಸೆ ನೀಡುವ ಕಾಯಕದಲ್ಲಿ ವೈದ್ಯರು, ನರ್ಸ್ಗಳು, ಆರೋಗ್ಯ ಕಾರ್ಯಕರ್ತರು, ಸಮರೋಪಾದಿಯಲ್ಲಿ ತಮ್ಮ ಕೌಟುಂಬಿಕ ಸುಖ ಸಂತೋಷಗಳನ್ನು ಬದಿಗೊತ್ತಿ, ಪ್ರಾಣದ ಹಂಗು ತೊರೆದು ತೊಡಗಿಸಿಕೊಂಡಿದ್ದಾರೆ. ಲಾಕ್ ಡೌನ್ ನ ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ಲಂಗು ಲಗಾಮು ಹಾಕುವಲ್ಲಿ , ಜಾಗೃತಿ ಮೂಡಿಸುವಲ್ಲಿ ಹಗಲಿರುಳೆನ್ನದೆ ಪೋಲಿಸ್ ಇಲಾಖೆಯು ಶ್ರಮಿಸುತ್ತಿದೆ. ಈ ಎಲ್ಲವುಗಳ ಮುಖ್ಯ ಉದ್ದೇಶವೆಂದರೆ ಅದೇ ‘ಜೀವ’ದ ಸಂರಕ್ಷಣೆ.
ಕಣ್ಣಿಗೆ ಕಾಣದೆ ಕಾಡುತ್ತಿರುವ, ಇನ್ನೂ ಔಷಧಿ ಆವಿಷ್ಕಾರ ಆಗದಿರುವ ಈ ‘ಕೊರೋನ’ ರೋಗವು ಅಂತ್ಯಗೊಳ್ಳಲು ಇರುವ ಬಹು ಮುಖ್ಯವಾದ ಮಾರ್ಗವೆಂದರೆ “ಸಾಮಾಜಿಕ ಅಂತರ”ವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ಮನೆಯಲ್ಲೇ ಇರುವುದು. ಸೋಂಕಿತ ವ್ಯಕ್ತಿಯ ಸ್ಪರ್ಶದಿಂದ, ಶೀತ ಕೆಮ್ಮು, ಉಸಿರಿನ ಮೂಲಕ ಮತ್ತೊಬ್ಬರಿಗೆ ವವರ್ಗಾವಣೆಗೊಳ್ಳುವ ಈ ಕೊರೋನ ವೈರಾಣುವಿನ ಹರಡುವಿಕೆಯ ಸರಪಳಿ ತುಂಡಾದಾಗ ಮಾತ್ರ ಮನುಕುಲ ವಿನಾಶದ ಅಪಾಯದಿಂದ ಪಾರಾಗಬಹುದು. ಈ ರೋಗದ ತೀವ್ರತೆಯ ಕನಿಷ್ಠ ಅರಿವಿನ ಕೊರತೆ ಇರುವ ಕೆಲವರ ಉಡಾಫೆ, ಅಲಕ್ಷ್ಯದಿಂದಾಗಿ ಕೊರೋನಾ ಪಸರಿಸುವಿಕೆಯ ಪಾಸಿಟಿವ್ ಕೇಸ್ ಗಳು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸ್ಟೇಜ್-೩ ನ್ನು ತಲುಪಿಬಿಡುವ ಆತಂಕವಿದೆ. ವ್ಯಾಪಾರ, ಕೂಲಿ, ದುಡಿಮೆ, ಬಡತನದ ನೆಪವೊಡ್ಡಿ ಕೆಲವರು ನಿಯಮಗಳನ್ನು ಗಾಳಿಗೆ ತೂರಿ ಬೀದಿಯಲ್ಲಿ ಓಡಾಡುವ, ಸಾರ್ವಜನಿಕರೊಡನೆ ವ್ಯವಹಾರ ಮಾಡುವ ಚಾಳಿಯನ್ನು ಬಿಡದೆ ಮುಂದುವರೆಸುತ್ತಿದ್ದಾರೆ. “ಜೀವವನ್ನು ಉಳಿಸಿಕೊಂಡರೆ ಮುಂದೆ ಹೇಗಾದರೂ ಜೀವನ ಮಾಡಬಹುದು”, ಅದಕ್ಕಾಗಿ ಬೇಕಾದಷ್ಟು ಮಾರ್ಗಗಳಿವೆ ಎಂಬುದಾಗಿ ತಿಳಿಸುತ್ತ, ಈ ‘ಲಾಕ್ ಡೌನ್’ ಸಮಯದ ತೊಂದರೆಗಳಿಗೆ ಕ್ಷಮೆ ಕೋರುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರ ಕಳಕಳಿಯನ್ನು ಅರ್ಥ ಮಾಡಿಕೊಂಡು ಸಹಕರಿಸಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಅಲಕ್ಷ್ಯ ಮಾಡಿ, ಅಸಡ್ಡೆತನವನ್ನು ಮುಂದುವರೆಸಿದರೆ ಇಡೀ ಮನುಕುಲದ ನಾಶಕ್ಕೆ ನಾವೇ ನಾಂದಿ ಹಾಡಿದಂತಾದೀತು. ಅದಕ್ಕಾಗಿ ಎಲ್ಲರೂ ಜೀ ಉಳಿಸಿಕೊಳ್ಳೋಣ, ಬದುಕಿದ್ದರೆ ಜೀವನ ಮಾರ್ಗಗಳು ನೂರಾರು ಇದ್ದೇ ಇರುತ್ತವೆ.
-ಹೊ.ರಾ.ಪರಮೇಶ್ ಹೊಡೇನೂರು