ವಿಜ್ಞಾನ-ಪರಿಸರ

ಜೀವವಿರೋಧಿ ಕೀಟನಾಶಕಗಳು:ಅಖಿಲೇಶ್ ಚಿಪ್ಪಳಿ ಅಂಕಣ


ಭದ್ರಾವತಿ ಹುಡುಗಿ ಸಾಗರದ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಳು. ಪರೀಕ್ಷೆ ಬರೆದು ಫಲಿತಾಂಶ ಬಂದಾಗ ಫೇಲ್ ಆಗಿದ್ದಳು. ಸೀದಾ ಕೀಟನಾಶಕಗಳನ್ನು ಮಾರುವ ಅಂಗಡಿಗೆ ಹೋಗಿ ಫಾಲಿಡಾಲ್ ಬಾಟಲಿ ಕೊಡಿ ಎಂದಳು. ಅಂಗಡಿಯವ ಏನು ಎತ್ತ ವಿಚಾರಿಸದೆ ದುಡ್ಡು ಇಸಿದುಕೊಂಡು ಫಾಲಿಡಾಲ್ ಬಾಟಲಿಯನ್ನು ಕೊಟ್ಟ. ನೆಹರು ಮೈದಾನಕ್ಕೆ ಬಂದವಳು ಯಾರಿಗೂ ಕಾಣಬಾರದೆಂದು ಕೊಡೆ ಬಿಡಿಸಿಕೊಂಡು, ಬಾಟಲಿಯ ಮುಚ್ಚಳವನ್ನು ತೆಗೆದು ಗಟ-ಗಟ ಕುಡಿದೇ ಬಿಟ್ಟಳು. ೫ ನಿಮಿಷದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಿದ್ದಳು. ಆಟೋದವನು ನೋಡಿದವನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಬಾಳಿ ಬೆಳಗಬೇಕಾದ ಕುಡಿ ಅಕಾಲದಲ್ಲಿ ಸತ್ತುಹೋಯಿತು.
 
ದೇಶದ ಬೆನ್ನೆಲುಬು ನಮ್ಮ ರೈತ. ರೈತನಿಗಿರುವಷ್ಟು ಕಷ್ಟಗಳು ಬೇರಾರಿಗೂ ಇಲ್ಲ. ಇಡೀ ದೇಶದ ನಗರವಾಸಿಗಳ ಹೊಟ್ಟೆ ತುಂಬುವ ಕಾಯಕದಲ್ಲಿ ತೊಡಗಿಸಿಕೊಂಡ ರೈತ ಸಾಲಭಾದೆಯಿಂದಾಗಿ ಇದೇ ಕೀಟನಾಶಕಗಳನ್ನು ಕುಡಿದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಪತ್ರಿಕೆಗಳ ಮೂಲೆಯೊಲ್ಲೊಂದು ಸುದ್ಧಿಗೆ ಗ್ರಾಸವಾಗುತ್ತಾನೆ. ಈಗಿನ ಪೀಳಿಗೆಯ ರೈತನ ಪೂರ್ವಿಕರು ಯಾರೂ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಲ್ಲ. ೪೦-೫೦ ವರ್ಷಗಳ ಹಿಂದಿನ ಮಾತು. ಹಸಿರು ಕ್ರಾಂತಿ ಇನ್ನೂ ಕಾಲಿಡದ ಹೊತ್ತು. ರೈತರಿಗೆ ಆಹಾರ ಉತ್ಪಾದನೆ ಹೆಚ್ಚು ಮಾಡಿ ಎಂದು ಸರ್ಕಾರಗಳು ಬೆನ್ನು ಬಿದ್ದಿರಲಿಲ್ಲ. ತನಗೆ ಬೇಕಾದಷ್ಟು ಬೆಳೆದುಕೊಂಡು ಉಳಿದ ಮಾಲನ್ನು ಮಾರುತ್ತಿದ್ದ. ಯಾವಾಗ ಹಸಿರು ಕ್ರಾಂತಿ ಶುರುವಾಯಿತೋ ರೈತನ ಮೇಲೆ ಹೆಚ್ಚು ಬೆಳೆಯುವ ಒತ್ತಡ ಬಿತ್ತು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಯಥೇಚ್ಚ ಬಳಸಲು ಸರ್ಕಾರಿ ಪ್ರಣೀತ ಇಲಾಖೆಗಳು ಆಮಿಷ ಒಡ್ಡಿದವು. ಎಕರೆಗೆ ೨೦ ಚೀಲ ಭತ್ತ ಬೆಳೆಯುವ ರೈತ ಇವೆನ್ನೆಲ್ಲಾ ಬಳಸಿ ೪೦-೬೦ ಚೀಲ ಬೆಳೆಯತೊಡಗಿದ. ಜೀವಿ ವೈವಿಧ್ಯದ ಸೇವೆಯನ್ನು ಕಡೆಗಣಿಸಲಾಯಿತು. ಹೆಚ್ಚು-ಹೆಚ್ಚು ರಾಸಾಯನಿಕಗಳು ತಾತ್ಕಾಲಿಕವಾಗಿ ಇಳುವರಿಯನ್ನು ಹೆಚ್ಚಿಸಿದವು. ರೈತ ಮಿತ್ರರಾದ ಕಪ್ಪೆಗಳು, ಹಾವುಗಳು, ಜೇನುಗಳ ಸಂಖ್ಯೆ ಕಡಿಮೆಯಾಯಿತು. ರೈತರ ಬೆಳೆ ನಾಶ ಮಾಡುವ ದಂಶಕಗಳು, ಕೀಟಗಳು ಪ್ರತಿರೋಧಕ ಗುಣವನ್ನು ಬೆಳೆಸಿಕೊಳ್ಳುತ್ತಾ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಂಡವು. ರೈತಸ್ನೇಹಿ ಕೀಟಗಳು ಕಡಿಮೆಯಾದವು. ಹಕ್ಕಿಗಳ ಸಂತತಿ ಕಡಿಮೆಯಾಗುತ್ತಾ ಬಂತು. ಮತ್ತೆ-ಮತ್ತೆ ಇಳುವರಿ ಹೆಚ್ಚು ಮಾಡುವ ಭರದಲ್ಲಿ ಇನ್ನಿಷ್ಟು ರಾಸಾಯನಿಕಗಳು, ಕೀಟನಾಶಕಗಳನ್ನು ಉಪಯೋಗಿಸಲಾಯಿತು. ಇವುಗಳ ದುಷ್ಪರಿಣಾಮ ಈಗೀಗ ಗೊತ್ತಾಗುತ್ತಿದೆ. ಹುಲಿ ಸವಾರಿ ಮಾಡಿಯಾಗಿದೆ. ಇಳಿಯವುದು ಕಷ್ಟ ಎಂಬಂತಾಗಿದೆ. ಬದಲಿಯಾಗಿ ಪರಿಸರ ಸ್ನೇಹಿ ಕೃಷಿ ದುಬಾರಿಯದು ಎಂದು ಬಿಂಬಿಸಲಾಗುತ್ತಿದೆ. ಸರ್ಕಾರಿ ಗೊಬ್ಬರ ಹಾಕದಿದ್ದಲ್ಲಿ ಇಳುವರಿ ಬರುವುದಿಲ್ಲ ಎಂಬಂತೆ ರೈತರ ಮನಸ್ಸು ತಿರುಗಿಸಲಾಗಿದೆ.
 
ಇದಲ್ಲದೆ ಇನ್ನೂ ಕೆಲವು ಭಾನಗಡಿಗಳನ್ನು ಸರ್ಕಾರದವತಿಯಿಂದ ಹಮ್ಮಿಕೊಳ್ಳಲಾಯಿತು. ರೈತರ ಜಮೀನಿನಲ್ಲೇ ಕ್ಷೇತ್ರೋತ್ಸವ ಕಾರ್ಯಕ್ರಮಗಳು ನಡೆದವು. ಹೆಚ್ಚು ಬೆಳೆದ ರೈತನನ್ನು ಹಾಡಿಹೊಗಳಿದರು. ಪಕ್ಕದ ಜಮೀನಿನಲ್ಲಿ ಕಡಿಮೆ ಇಳುವರಿ ಪಡೆದ ರೈತನ ಮನಸ್ಸು ಖಿನ್ನತೆಗೊಳಗಾಯಿತು. ಆ ರೈತನ ಕುಟುಂಬದವರು ಕೀಳರಿಮೆಯಿಂದ ಬಳಲುವಂತೆ ಮಾಡಿದ ರಾಜಕಾರಣಿಗಳು-ಅಧಿಕಾರಿಗಳು ದಂಶಕಗಳಂತೆ ತಮ್ಮ ಸಂಖ್ಯೆಯನ್ನು ವೃದ್ದಿಸಿಕೊಳ್ಳುತ್ತಾ ಸಾಗಿದ್ದಾರೆ. ಇಷ್ಟು ಜಮೀನಿನಲ್ಲಿ ಇಷ್ಟು ಬೆಳೆ ಬೆಳೆಯಬಹುದು ಹಾಗೂ ಇದರಿಂದ ಇಷ್ಟು ಆದಾಯ ಗಳಿಸಬಹುದು ಎಂಬುದಕ್ಕೆ ಯಾವುದೇ ಸರಳ ಸೂತ್ರಗಳು ಕೃಷಿ-ತೋಟಗಾರಿಕೆಯ ಇಲಾಖೆಯ ಬಳಿಯಿಲ್ಲ. ಕೃಷಿ-ತೋಟಗಾರಿಕೆ ವಿಶ್ವ ವಿದ್ಯಾನಿಲಯಗಳಲ್ಲಿ ಭರ್ಜರಿ ಸಂಖ್ಯೆಯಲ್ಲಿ ಸಂಶೋಧನೆಗಳಾಗುತ್ತವೆ. ನೂರಾರು-ಸಾವಿರಾರು ಡಾಕ್ಟರೇಟರುಗಳು ಹೊರಬರುತ್ತಾರೆ. ರೈತನ ಬೆಳೆಗೆ ಇಷ್ಟು ಬೆಲೆ ಸಿಗಬಹುದು ಎಂಬ ನಿಗದಿಯಿಲ್ಲ. ಹೆಚ್ಚಿನ ಡಾಕ್ಟರೇಟರುಗಳು ಮತ್ತದೇ ಔಷಧ ಕಂಪನಿಗಳ ವಕ್ತಾರರಾಗಿ ಅವರಿಂದ ಉಪಕೃತರಾಗಿ ನೆಮ್ಮದಿಯ-ಭದ್ರತೆಯ ಜೀವನ ನಡೆಸುತ್ತಾರೆ.
 
ಕರ್ನಾಟಕದಲ್ಲಿ ಆಗಿಹೋದ ಆಗಿನ ಕಾಲದ ಜನಪ್ರಿಯ, ಜಾತ್ಯಾತೀತ, ದೂರದರ್ಶ್ವಿತ್ವ ಹೊಂದಿದ ಸಮಾಜವಾದ ಹಿನ್ನೆಲೆಯ ಮುಖ್ಯಮಂತ್ರಿಯ ಬಳಿ ಅಡಿಕೆ ಬೆಳೆಗಾರರ ನಿಯೋಗ ದೂರೊಂದನ್ನು ತೆಗೆದುಕೊಂಡು ಹೋದರು. ಚಾನಲ್ ಏರಿಯಾಗಳಲ್ಲಿ ಅಡಿಕೆ ಬೆಳೆಯುವುದನ್ನು ನಿಷೇಧಿಸಿ ಎಂದು ಮನವಿ ಮಾಡಿದರು. ಚಾನಲ್‌ಗಳನ್ನು ನಿರ್ಮಿಸಿದ್ದೇ ಆಹಾರ ಬೆಳೆಗಳನ್ನು ಬೆಳೆಯುವ ಉದ್ಧೇಶದಿಂದ. ಬುದ್ಧಿವಂತ ಮುಖ್ಯಮಂತ್ರಿ ತಲೆ ಓಡಿಸಿದರು. ಸಂಖ್ಯಾ ಲೆಕ್ಕಾಚಾರ ಹಾಕಿದರು. ಚಾನಲ್ ಏರಿಯಾದಲ್ಲೇ ಓಟು ಹೆಚ್ಚು. ಮಲೆನಾಡಿನ ಅಡಿಕೆ ಬೆಳೆಗಾರರ ಓಟು ನಗಣ್ಯ. ಉತ್ತರವಿತ್ತರು. ಬೆಳೆ ಬೆಳೆಯುವುದು ಅವರವರ ವಿವೇಚನೆಗೆ ಬಿಟ್ಟಿದ್ದು. ಇದರಲ್ಲಿ ನಾನು ಹಸ್ತಕ್ಷೇಪ ಮಾಡಬಾರದು ಎಂದು ಗಡ್ಡ ನೀವಿಕೊಂಡರು. ಆಚೆ ವರ್ಷ ಅರಿಶಿಣಕ್ಕೆ ರೇಟು ಬಂತು ಎಂದು ಎಲ್ಲರೂ ಅರಿಶಿಣ ಬೆಳೆದರು. ಮರುವರ್ಷ ಅರಿಶಿಣ ಕಿತ್ತ ಕೂಲಿಯೂ ಸಿಗದಷ್ಟು ಅರಿಶಿಣದ ದರ ಇಳಿಯಿತು.
 
ಡಿ.ಡಿ.ಟಿ.ಯೆಂಬ ಬೂದಿಯನ್ನು ಅಮೇರಿಕಾದಲ್ಲಿ ೧೯೭೨ರಲ್ಲಿ ನಿಷೇಧಿಸಲಾಯಿತು. ಡಿ.ಡಿ.ಟಿಯ ಅವಗುಣಗಳನ್ನು ಪಟ್ಟಿ ಮಾಡಿ, ಪರಿಸರಕ್ಕೆ ತುಂಬಾ ಹಾನಿ ಮಾಡುವ ಈ ಕೀಟನಾಶಕವನ್ನು ನಿಷೇಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರಿಂದ ಅಮೇರಿಕಾದಲ್ಲಿ ನಿಷೇಧಗೊಂಡಿತು. ಕಂಪನಿಗಳು ಕೈಕಟ್ಟಿ ಕೂರಲಿಲ್ಲ. ಅವರಿಗೆ ಲಾಭ ಮುಖ್ಯ. ಭಾರತದಂತಹ ದೇಶಕ್ಕೆ ಹಡಗಿನ ಮೂಲಕ ಡಿ.ಡಿ.ಟಿಯನ್ನು ಸರಬರಾಜು ಮಾಡಲಾಯಿತು. ಗೆದ್ದಲು ಕಾಟವೇ, ಸೊಳ್ಳೆಗಳು ಹೆಚ್ಚಿವೆಯೇ, ತಿಗಣಿ ಕಚ್ಚುತ್ತಿದೆಯೇ, ಜಿರಳೆಗಳ ಸಂಖ್ಯೆ ಜಾಸ್ತಿಯಾಗಿದೆಯೇ, ಬೆಳೆ ಸರಿಯಾಗಿ ಬರುತ್ತಿಲ್ಲವೆ, ಅಕ್ಕಿಗೆ ಹುಳ ಹಿಡಿಯುತ್ತಿದೆಯೇ ಇಂತಹ ನೂರಾರು ಸಮಸ್ಯೆಗಳಿಗೆ ಏಕೈಕ ಉತ್ತರ ಡಿ.ಡಿ.ಟಿ. ಪುಡಿ. ಈ ಪುಡಿಯಿಂದ ಅಮೇರಿಕಾದ ಪರಿಸರ ಹಾಳಾಗುತ್ತಿದೆ ಎಂದಾದರೆ ಭಾರತದಲ್ಲಿ ಪರಿಸರ ಹಾಳಾಗುವುದಿಲ್ಲವೇ? ಈ ಪ್ರಶ್ನೆಯನ್ನು ಯಾರು ಮಾಡಿಕೊಳ್ಳಬೇಕಿತ್ತು. ನಂತರದಲ್ಲಿ ಡಿ.ಡಿ.ಟಿಯನ್ನು ಭಾರತದಲ್ಲೂ ನಿಷೇಧಿಸಲಾಯಿತು. ಅಂಗಿಯ ಬಣ್ಣ ಮಾತ್ರ ಬದಲಾಯಿತು. ಬಿ.ಹೆಚ್.ಸಿ ಎಂಬ ಅಂಗಿ ತೊಟ್ಟ ಡಿ.ಡಿ.ಟಿಯ ತದ್ರೂಪು ಮಾರುಕಟ್ಟೆಯಲ್ಲಿ ಲಭ್ಯ. ಕೀಟನಾಶಕವನ್ನು ಪರಿಚಯಿಸುವುದಕ್ಕಿಂತ ಅದು ಹಾನಿಕರ ಎಂದು ನಿಷೇಧಿಸುವುದು ಕಷ್ಟ. ಸುಧೀರ್ಘ ಕಾನೂನು ಹೋರಾಟ ಮಾಡಬೇಕು. ಸರ್ಕಾರಗಳೇ ಮಾಡುವುದಾದರೆ ಸುಲಭವಾದೀತು, ಆದರೆ ಕಂಪನಿಗಳಿಂದ ಉಪಕೃತರಾದವರು ಅದನ್ನು ಏಕೆ ನಿಷೇಧಿಸಿಯಾರು? ಎಂಡೋಸಲ್ಫಾನ್ ಪರಿಣಾಮ ತಲತಲಾಂತರದವರೆಗೂ ಇರುತ್ತದೆ. ಸಂತ್ರಸ್ಥರಿಗೆ ನೆರವೂ ಇಲ್ಲ, ಪರಿಹಾರವೂ ಇಲ್ಲ.
 
 
ಫೇಲ್ ಆದರೆ ಕೀಟನಾಶಕ, ಸಾಲಭಾದೆಯಿಂದ ಸಾಯುವುದಕ್ಕೆ ಕೀಟನಾಶಕ ಹೀಗೆ ಬಹುಪಯೋಗಿ ಕೀಟನಾಶಕವನ್ನು ಇದೀಗ ಕಾಡು-ಖೂಳರು ಬಳಸುತ್ತಿದ್ದಾರೆ. ಅದೂ ಹುಲಿಯನ್ನು ಸಾಯಿಸಲು. ಹುಲಿ ಸಂರಕ್ಷಣೆ ಮಾಡುತ್ತಿರುವ, ವನ್ಯಜೀವಿ ಕಾನೂನುಗಳು ಬಿಗಿಯಾಗಿರುವ ಭಾರತದಲ್ಲೇ ಇದು ನಡೆಯುತ್ತಿದೆ. ಕಾರ್ಬೋಫುರಾನ್ ಎಂಬುದೊಂದು ಪುಡಿ. ಡಿ.ಡಿ.ಟಿಗಿಂತ ೧೨ ಸಾವಿರ ಪಟ್ಟು ವಿಷಕಾರಿ. ನೋಡಲು ಥೇಟ್ ಮೈದಾ ಹಿಟ್ಟಿನ ತರ. ನೆತ್ತಿ ಹತ್ತುವ ಘಾಟು ವಾಸನೆಯಿಲ್ಲ. ರುಚಿಯಿಲ್ಲ. ಯಾವುದರ ಜೊತೆಗಾದರೂ ಕೂಡಲೆ ಬೆರೆತುಹೋಗುವ ವಿಶಿಷ್ಟ ಗುಣ. ಹುಲಿ ರಕ್ಷಿತ ಪ್ರದೇಶದಲ್ಲಿ ಜಿಂಕೆಯನ್ನು ಕೊಂದು, ಅದರ ಹೊಟ್ಟೆ ಬಗೆದು ಈ ಕಾರ್ಬೋಫುರಾನ್ ಪುಡಿಯನ್ನು ಹಾಕಿದರಾಯಿತು. ಬಂದ ಹುಲಿರಾಯ ತಿಂದ ೧ ಗಂಟೆಯಲ್ಲೇ ಸಾಯುತ್ತದೆ. ಸಮೂಲ ಹುಲಿಯ ಶವ ಕಳ್ಳಬೇಟೆಗಾರರ ಏಟಿಎಂ. ಹುಲಿಯ ಹಲ್ಲು, ಉಗುರು, ಚರ್ಮ, ವೃಷಣ, ಜನನೇಂದ್ರಿಯ, ಕರುಳು ಹೀಗೆ ಪ್ರತಿಯೊಂದಕ್ಕೂ ಭಾರಿ ಬೆಲೆ. ಚೀನಾ-ಥೈಲ್ಯಾಂಡ್‌ಗಳಿಗೆ ಕಳುಹಿಸಿ ಲಕ್ಷಾಂತರ ದೋಚುತ್ತಾರೆ. ಖೂಳರಿಗೆ ಸಿಕ್ಕಿಬೀಳುವ ಭಯವಿಲ್ಲ. ಪ್ರತ್ಯಕ್ಷವಾಗಿ ಕೊಂದದ್ದಲ್ಲ. ಕಾರ್ಬೋಫುರಾನ್ ಅಂಶವಿದೆ ಎಂದು ಪ್ರಯೋಗಾಲಯದಲ್ಲೂ ಕಂಡು ಹಿಡಿಯಲಾಗುವುದಿಲ್ಲ. ಹೇಗಿದೆ ಕೀಟ ನಾಶಕ ಕಂಪನಿಗಳ ಹೊಸ ಆವಿಷ್ಕಾರ. ಯಥಾಪ್ರಕಾರ ಅಮೆರಿಕಾದಲ್ಲಿ ಇದನ್ನು ನಿಷೇಧಿಸಲಾಗಿದೆ. ಹಿಂದುಳಿದ ಕೀನ್ಯಾ ಕೂಡ ಇದನ್ನು ನಿಷೇಧಿಸಿದೆ. ಇಂಡಿಯಾದಲ್ಲಿ ಯಾರಿಗೆ ಬೇಕಾದರೂ ಎಷ್ಟು ಬೇಕಾದರೂ ಇದು ಸಿಗುತ್ತದೆ.
 
ತಂತ್ರಜ್ಞಾನ ಬೆಳವಣಿಗೆಯಾದಂತೆ, ಹೊಸ-ಹೊಸ ಆವಿಷ್ಕಾರಗಳಾಗುತ್ತವೆ. ಗಿಡಗಳಿಗೆ ಶೀಲಿಂಧ್ರ ತಗುಲಿ ಬೆಳೆ ಹಾಳಾಗುತ್ತದೆ. ಸರಿ ಶಿಲೀಂದ್ರನಾಶಕವನ್ನು ತಯಾರು ಮಾಡಿದರೆ ಜೇಬು ತುಂಬಾ ದುಡ್ಡು. ನಿಯೋನಿಕೋಟಿನಾಯ್ಡ್ ಎಂಬ ಶಿಲೀಂದ್ರ ನಾಶಕವನ್ನು ಅಮೆರಿಕಾದಲ್ಲಿ ವ್ಯಾಪಕವಾಗಿ ಬಳಸಿದರು. ಜೇನು ಸಂತತಿ ನಾಶವಾಯಿತು. ಸರಿ ನಿಯೋನಿಕೋಟಿನಾಯ್ಡ್‌ನ್ನು ನಿಷೇಧಿಸಿ ನಿಟ್ಟುಸಿರಿಟ್ಟರು. ಜೇನು ಸಂಖ್ಯೆ ಮತ್ತೂ ಕಡಿಮೆಯಾಗುತ್ತಲೇ ಇತ್ತು. ತಜ್ಞರ ತಂಡ ಅಧ್ಯಯನ ಕೈಗೊಂಡಿತು. ಕೀಟನಾಶಕವೆಂದರೆ, ಬರೀ ಹಾನಿಕಾರಕ ಕೀಟಗಳನ್ನು ಮಾತ್ರ ನಾಶ ಮಾಡುವುದಿಲ್ಲ. ಜೇನು-ಚಿಟ್ಟೆಗಳಂತಹ ಉಪಕಾರಿ ಕೀಟಗಳನ್ನು ನಾಶ ಮಾಡುತ್ತವೆ. ಇದರಿಂದ ಪರಾಗಸ್ಟರ್ಶ ಕ್ರಿಯೆ ಆಗುವುದಿಲ್ಲವಾದ್ದರಿಂದ ಆಹಾರ ಭದ್ರತೆಗೆ ಧಕ್ಕೆಯುಂಟಾಗುತ್ತದೆ. ಹಾಗಾಗಿ ಎಲ್ಲ ತರಹದ ಕೀಟನಾಶಕಗಳನ್ನು ನಿಷೇಧಿಸಿದರೆ ಜೇನು ಸಂತತಿ ಉಳಿಯಬಹುದು ಎಂಬ ವರದಿಯನ್ನು ತಜ್ಞರ ಸಮಿತಿ ನೀಡಿದೆ. ದೈತ್ಯ ಅಂತಾರಾಷ್ಟ್ರೀಯ ಕೀಟನಾಶಕ ಕಂಪನಿಗಳನ್ನು ಎದರು ಹಾಕಿಕೊಂಡು ಯಾವುದೇ ಸರ್ಕಾರ ಉಳಿಯುವುದು ಕಷ್ಟ.
 
ಮತ್ತೆ ಕಾಲಚಕ್ರ ತಿರುಗಿ ಹಿಂದೆ ಹೋಗಬೇಕಾಗುತ್ತದೆ. ರಾಸಾಯನಿಕರಹಿತ ಕೃಷಿಯಿಂದ ಆಹಾರ ಭದ್ರತೆಯೂ ಆಗುತ್ತದೆ. ಇತರ ಜೀವಿವೈವಿಧ್ಯಗಳು ಉಳಿಯುತ್ತವೆ. ರೈತ ಸುಖ-ಸಮೃದ್ಧಿ-ನೆಮ್ಮದಿ ಕಾಣಬಹುದು. ಆದರೆ ಇದು ಸಾಧ್ಯವೆ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ???
 
ಹಾಗೆಯೇ ಆಸಿಡ್ ಮಾರುವವರು ಕಡ್ಡಾಯ ಪರವಾನಿಗೆ ಹೊಂದಿರಬೇಕೆಂದು, ಕೊಳ್ಳುವವರ ಹತ್ತಿರ ಗುರುತಿನ ಚೀಟಿ ಕಡ್ಡಾಯವೆಂದು ಕೇಂದ್ರ ಸರ್ಕಾರ ಕಾನೂನು ರೂಪಿಸಲು ಹೊರಟ ಕ್ರಮ ಶ್ಲಾಘನೀಯ. ಇದೇ ತತ್ವವನ್ನು ಕೀಟನಾಶಕಗಳಿಗೂ ಅನ್ವಯಿಸಿದಲ್ಲಿ ಪರಿಸ್ಥಿತಿ ಸುಧಾರಣೆಯಾದೀತು. ದೇಶಕ್ಕೆ ಬದುಕು ನೀಡುವ ರೈತರ ಹುತಾತ್ಮಹತ್ಯೆ ಕಡಿಮೆಯಾದೀತು. 


ಕನ್ನಡದ ಬರಹಗಳನ್ನು ಹಂಚಿ ಹರಡಿ

3 thoughts on “ಜೀವವಿರೋಧಿ ಕೀಟನಾಶಕಗಳು:ಅಖಿಲೇಶ್ ಚಿಪ್ಪಳಿ ಅಂಕಣ

  1. ಜಾಗೃತಿಪರ ಲೇಖನ, ಎಚ್ಚರಿಕೆಯ ಗಂಟೆಯಂತಿದೆ. ಸಾಂದರ್ಭಿಕ ಲೇಖನ….

Leave a Reply

Your email address will not be published.