ಊರಿಗೆ ಬಂದು ಇಪ್ಪತ್ತು ವರ್ಷಗಳೆ ಕಳೆದಿತ್ತು. ಮೊದಲಿಗೆ ಅಪ್ಪ ಅಮ್ಮನಿರುವವರೆಗೂ ಇದ್ದ ಆಕರ್ಷಣೆ ಈಗೇನು ಇರಲಿಲ್ಲ. ಅಲ್ಲದೆ ನಾನು ಊರು ಬಿಟ್ಟು ಊರೂರು ಸುತ್ತತ್ತ ಹೆಂಡತಿ ಮಕ್ಕಳೊಡನೆ ಓಡಾಡಿದ್ದೆ ಆಯಿತು, ಸರಕಾರಿ ಚಾಕರಿಯೆ ಹಾಗೆ ಬಿಡಿ. ಈಗ ಮತ್ತೆ ಕರ್ನಾಟಕಕ್ಕೆ ಬಂದ ನಂತರ ಬೆಂಗಳೂರಿನಲ್ಲಿ ಮನೆ ಮಾಡಿ ಆರು ತಿಂಗಳಾಗುತ್ತ ಬಂದು, ಹುಟ್ಟಿದ ಊರನ್ನು ನೋಡಬೇಕೆಂಬ ಆಸೆ ಪ್ರಭಲವಾಯಿತು. ಅಲ್ಲಿ ಇದ್ದವನು ಅಣ್ಣನೊಬ್ಬನೆ. ಒಂದಿಷ್ಟು ವ್ಯಾಪಾರ ಅದು ಇದು ಎಂದು ಒದ್ದಾಡಿಕೊಂಡಿದ್ದ. ಮಕ್ಕಳನ್ನು ಚೆನ್ನಾಗಿ ಓದಿಸಿದ್ದ. ಮಗಳಿಗೆ ಮದುವೆ ಆಯಿತು , ಆದರೂ ಅಂತಹ ಹೇಳಿಕೊಳ್ಳುವ ಸ್ಥಿತಿಯಲ್ಲೇನು ಇರಲಿಲ್ಲ, ಊಟ ತಿಂಡಿಗೆ ಕೊರತೆ ಇಲ್ಲ ಅನ್ನುವ ಹಾಗಿದ್ದ.
ನಾನೊಬ್ಬನೆ ಹೊರಟಿದ್ದೆ ಊರಿಗೆ, ಹೆಂಡತಿ ಮಗ ಇಬ್ಬರೂ ಮುಂದಿನ ಸಾರಿ ಹೋಗುವಾಗ ಬರುವದಾಗಿ ತಿಳಿಸಿದ್ದರು, ಒಬ್ಬನೆ ಬಸ್ ಹತ್ತಿ ಊರು ಸೇರಿದೆ. ಅಣ್ಣ ಅತ್ತಿಗೆಯರಂತು ತುಂಬಾನೆ ಖುಶಿಪಟ್ಟರು , ಅಣ್ಣನ ಗಂಡು ಮಕ್ಕಳಿಬ್ಬರು ಆಗಲೇ ದೊಡ್ಡವರು, ಮೊದಲಿನಂತೆ ಚಿಕ್ಕಪ್ಪ ಚಿಕ್ಕಪ್ಪ ಎಂದು ಹಿಂದೆ ಸುತ್ತುವ ವಯಸ್ಸೇನಲ್ಲ ಆದರು ಬಳಿ ಕುಳಿತು ಹಿಂದಿನ ಸಲುಗೆಯಿಂದಲೇ ಮಾತನಾಡಿಸಿದರು.
ಮರುದಿನ ಊರು ಸುತ್ತುವ ಕೆಲಸವಾಯಿತು, ಇಪ್ಪತ್ತು ವರುಷ ಕಳೆದರು ಊರಿನಲ್ಲಿ ಅಂತಹ ಬದಲಾವಣೆ ಏನಿರಲಿಲ್ಲ, ಕೆಲವು ರಸ್ತೆಗಳಂತು ಅಲ್ಲಿ ಹಾಕಿದ ಕಲ್ಲು ಅಲ್ಲೆ ಅನ್ನುತ್ತಾರಲ್ಲ ಹಾಗೆ ಬಿದ್ದಿದ್ದವು. ಇದ್ದ ಮನೆಗಳಲ್ಲಿ ಕೆಲವು ಬಣ್ಣ ಕಳೆದುಕೊಂಡಿದ್ದರೆ, ಮತ್ತೆ ಕೆಲವು ಹೊಸರೂಪ ಪಡೆದುಕೊಂಡಿದ್ದವು.
ಗೆಳೆಯರನ್ನೆಲ್ಲ ಹುಡುಕಿದೆ. ಅವರು ಹಿಂದಿನದೆಲ್ಲ ನೆನೆಸಿಕೊಂಡು ಸಾಕಷ್ಟು ಮಾತನಾಡಿದರು. ಒಂದಿಬ್ಬರು ಮಾತ್ರ ಊರು ಬಿಟ್ಟು ಯಥಾಪ್ರಕಾರ ಬೆಂಗಳೂರು ಸೇರಿದ್ದರು, ಅವರ ವಿಳಾಸ ಫೋನ್ ನಂಬರ್ ಗಳು ಸಿಕ್ಕಿದವು, ಬೆಂಗಳೂರಿಗೆ ಹಿಂದಿರುಗಿದ ನಂತರ ಅವರನ್ನು ಹಿಡಿದು ಮಾತನಾಡಿಸುವ ಯೋಚನೆ ಇತ್ತು. ಸಂಜೆಯವರೆಗೂ ಸುತ್ತಾಟ , ರಾತ್ರಿ ಭರ್ಜರಿ ಊಟ , ನಿದ್ದೆ ಅಣ್ಣನ ಮನೆಯಲ್ಲಿ
ಮರುದಿನ ಅಣ್ಣನ ಮನೆಯ ಹತ್ತಿರವೆ ಇದ್ದ ಮತ್ತೊಬ್ಬ ಗೆಳೆಯ ದೇವರಾಜ್ ಅಂತ ಅವನನ್ನು ಹುಡುಕಿ ಹೋದೆ. ನಾನು ದೇವರಾಜನು ಹೈಸ್ಕೂಲು ಅಲ್ಲದೆ ಕಾಲೇಜು ಸಹ ಜೊತೆಯಲ್ಲಿಯೆ ಓದಿದವರು. ಎಮ್ಮೆಸ್ಸಿ ಪದವಿ ಪಡೆದು ನಾನು ಕೆಲಸ ಹುಡುಕಿ ಹೊರಟರೆ ಅವನಾದರು ಬಿಎಸ್ಸಿಗೆ ಅವನು ಓದು ನಿಲ್ಲಿಸಿದ , ಊರು ಬಿಡಲು ಒಪ್ಪಲೇ ಇಲ್ಲ, ಕೆಲಸಕ್ಕೆ ಸೇರಲು ಇಷ್ಟಪಡಲಿಲ್ಲ.
ಅವನು ನಾನ ಕಾರಣ ಕೊಡುತ್ತಿದ್ದ, ನನಗೆ ಬಂದಿರುವ ನಂಬರಿಗೆ ಎಂತಹ ಕೆಲಸ ಸಿಕ್ಕೀತು, ಸರ್ಕಾರಿ ಚಾಕರಿ ಎಂದರೆ ಅಷ್ಟೇ ಜೀತದ ಕೆಲಸದಂತೆ, ಕೊಡುವ ಸಂಬಳಕ್ಕೆ ಎಲ್ಲರ ಮಾತು ಕೇಳಬೇಕು ಯಾರಿಗೆ ಬೇಕು ಅಂತೆಲ್ಲ. ಆದರೆ ನಿಜ ಅಂದರೆ ಅವನಿಗೆ ಊರು ಬಿಡಲು ಇಷ್ಟವಿರಲಿಲ್ಲ ಅನ್ನುವುದು ಸತ್ಯ.
ಅವನು ಜಾತಿಯಿಂದ ಚಿನ್ನ ಬೆಳ್ಳಿ ಮಾಡುವ ಆಚಾರಿಗಳು ಅನ್ನುವರಲ್ಲ ಆ ಪಂಗಡ. ಆದರೆ ಅವರ ಅಪ್ಪನಾಗಲಿ ಯಾರೆ ಆಗಲಿ ಚಿನ್ನಬೆಳ್ಳಿಯ ವ್ಯಾಪಾರ ಮಾಡಿದ್ದು ಕಂಡಿರಲಿಲ್ಲ. ಅವನಾದರು ಅಷ್ಟೆ ಆಭರಣ ಮುಂತಾದ ವಿಷಯಗಳು ಅವನಿಗೆ ತಿಳಿದೇ ಇರಲಿಲ್ಲ. ಅವರ ತಂದೆಯಾದರೋ ಊರಿನ ಗ್ರಾಮದೇವತೆಯ ಗುಡಿಯಲ್ಲಿ ಪೂಜೆ ಮಾಡಿಕೊಂಡಿದ್ದರು, ಜೊತೆ ಜೊತೆಗೆ ಪ್ರೈಮರಿ ಶಾಲೆಯಲ್ಲಿ ಉಪಾದ್ಯಾಯರು. ಕಡೆಯಲ್ಲೊಮ್ಮೆ ಟ್ರಾನ್ಸಫರ್ ಅದು ಇದು ಅನ್ನುವಾಗ ಶಾಲೆಯ ಕೆಲಸ ಬಿಟ್ಟು ಬರೀ ದೇವಾಲಯದ ಪೂಜೆ ಅಲ್ಲದೆ ಮನೆಯ ಹತ್ತಿರ ಸಣ್ಣದೊಂದು ದಿನಸಿ ಅಂಗಡಿ ಅಷ್ಟೆ.
ದೇವಾರಾಜಾಚಾರಿಗೆ ಯಾವುದೇ ಕೆಲಸ ಕೈ ಹತ್ತಲಿಲ್ಲ, ನಾನು ಕಡೆಯಲ್ಲಿ ನೋಡುವಾಗ ಅವನು ನದಿಯ ದಡದ ಹತ್ತಿರದಲ್ಲಿದ್ದ ಸಣ್ಣ ದೇವಾಲಯದಲ್ಲಿ ಪೂಜೆಯ ಕೆಲಸ ವಹಿಸಿಕೊಂಡಿದ್ದ. ನಾನು ಅಲ್ಲಿಗೆ ಹೋಗಿದ್ದೆ
“ಇದೇನೊ ನಿನ್ನ ಅವಸ್ಥೆ ? , ನನ್ನ ಜೊತೆ ನೀನು ಡಿಗ್ರಿ ಮಾಡಿದ್ದಿ ಅದೂ ಸಹ ಸೈನ್ಸ್ ನಲ್ಲಿ, ಎಂತಾದೋ ಒಂದು ಕೆಲಸ ಹೊಂಚಿಕೊಂಡು ಸುಖವಾಗಿ ಇರದೆ , ಪೂಜೆ ಅಂತ ಓದದವರ ತರ ಓಡಾಡ್ತಿಯಲ್ಲ, ಇದರಿಂದ ಜೀವನ ನಿರ್ವಹಣೆ ಹೇಗೋ ಸಾದ್ಯ?” ಎಂದರೆ
“ಏನು ಓದಿದವರೆಲ್ಲ ಸರ್ಕಾರಿ ಕೆಲಸಕ್ಕೆ ಹೋಗಲೇ ಬೇಕೆಂದು ನಿಯಮವಾ? ನೀನಂತು ಮಾರ್ಕ್ಸ್ ತೆಗೆದಿದ್ದಿ, ಅಲ್ಲದೆ ನಿಮ್ಮವರಿಗೆ ಸರ್ಕಾರಿ ಕೆಲಸ ಎಂದರೆ ಕೈ ಹತ್ತುತ್ತೆ ಬಿಡು, ನನ್ನ ಮನಸಿಗೇಕೊ ಅದು ಒಗ್ಗುವದಿಲ್ಲ, ಸ್ವತ್ರಂತ್ರವೋ ಸ್ವರ್ಗ ಲೋಕವೋ ಅಂತ ಕೇಳಿಲ್ಲವೇ? ಜೀವನ ಸಾಗಿಸಲು ಇಂತದೇ ಅಂತ ಏನಿಲ್ಲ , ನಮಗೆ ಹಿತವೆನಿಸುವ ಕೆಲಸ ಒಂದು ಮಾಡಿದರಾಯಿತು ” ಎನ್ನುತ ವೇಧಾಂತ ಹೇಳಿದ್ದ.
ಅದೆಲ್ಲ ನಡೆದು ಇಪ್ಪತ್ತು ವರ್ಷ ಆಯಿತು. ಹಿಂದಿನದು ನೆನೆಯುತ್ತ ಮನೆಯ ಹತ್ತಿರ ಹೋದರೆ , ಮನೆಯಲ್ಲಿ ಬೇರಾರೊ ಇದ್ದರು, ಬಾಡಿಗೆಗೆ!. ಅಲ್ಲಿದ್ದ ದೇವರಾಜಚಾರ್ ಎಲ್ಲಿ ಎಂದು ವಿಚಾರಿಸಿದೆ, ಅವನೀಗ ಊರ ಹೊರಗಿನ ನದಿ ಹತ್ತಿರದ ದೇವಾಲಯದ ಪಕ್ಕದಲ್ಲಿ ಕಟ್ಟಿರುವ ಮನೆಗಳಲ್ಲಿಯೆ ಇರುವನಂತೆ, ಸರಿ ನನಗೆ ಕಾಣದ ಊರೇನು ಅಲ್ಲವಲ್ಲ ಆ ದಾರಿ ಹಿಡಿದೆ, ನದಿಯನ್ನು ನೋಡಿದ ಹಾಗು ಆಯಿತಲ್ಲ.
ಏಕ್ ಧಂ ಎಲ್ಲ ಬದಲಾವಣೆ, ಗುರುತು ಹಿಡಿಯುವುದೆ ಕಷ್ಟ ಅನ್ನುವ ಹಾಗೆ. ಮೊದಲ ನದಿ ದಡದಲ್ಲಿದ್ದ ದೊಡ್ಡ ಅರಳಿ ಮರ,ನದಿಯ ಒಳಗೆ ಇಳಿಯಲು ಕಲ್ಲಿನ ಮೆಟ್ಟಿಲುಗಳು, ಒಂದು ನವಗ್ರಹ ದೇವಾಲಯ, ಊರ ಮುಂದಿನ ಹನುಮನ ದೇವಾಲಯ ಯಥಾ ಪ್ರಕಾರ ಅಷ್ಟೆ ಇದ್ದಿದ್ದು. ಅಂತಾ ಜನ ಬರುವ ಜಾಗವೇನಲ್ಲ. ಸಂಜೆ ದನ ಕಾಯುವ ಹುಡುಗರು ಯಾರಾದರು ಇದ್ದರೆ ಬಂದು ಹೋದಾರು, ಬೆಳಗ್ಗೆ ಯಾರಾದರು ಮದುವೆಯಾಗದ ಹೆಣ್ಣು ಮಕ್ಕಳೊ, ಪರೀಕ್ಷೆ ಪಾಸು ಮಾಡದ ಗಂಡು ಹುಡುಗರೋ ಇದ್ದರೆ, ಎಳ್ಳು ದೀಪ ಹಚ್ಚುತ್ತೇನೆ ಅಂತ ಬಂದು ಹೋಗುತ್ತಿದ್ದರು.
ಈಗ ದೇವಾಲಯ ದೊಡ್ಡದಾಗಿ ಬೆಳೆದಿತ್ತು, ಮುಂದೆ ದೊಡ್ಡ ರಾಜಗೋಪುರ, ಇದ್ದ ಅರಳಿ ಮರ ದೇವಾಲಯದ ಒಳಗೆ ಸೇರಿ ಹೋಗಿತ್ತು, ನದಿಯ ಪಾತ್ರವೆ ಕಾಣದು , ಎರಡು ಬದಿಗಳಲ್ಲಿ ಹೊಸ ಹೊಸ ಕಟ್ಟಡಗಳು, ಹೋಟೆಲ್ ಗಳು, ಸಾಲು ಅಂಗಡಿಗಳು. ಖಾಲಿ ಜಾಗದಲ್ಲಿ ನಿಂತ ಸಾಲು ಸಾಲು ಕಾರ್ ಹಾಗು ಇತರೇ ವಾಹನಗಳು. ನಾನು ದಂಗಾಗಿ ನಿಂತೆ. ಇದು ನಾನು ನೋಡಿದ್ದ , ನಾನು ಆಟವಾಡಿಕೊಂಡು ಬೆಳೆದ ಜಾಗವೆ ? ಎಂದು.
ದೇವಾಲಯದ ಒಳಗೆ ಹೋಗುತ್ತ, ನೋಡಿದೆ, ಶ್ರೀ ಶನೀಶ್ವರ ಕ್ಷೇತ್ರ ಎಂದು ದೊಡ್ಡದಾದ ಭೋರ್ಡ್ ಗಮನ ಸೆಳೆಯಿತು. ಇದು ಏನು ಕತೆ ಅರ್ಥವಾಗಲಿಲ್ಲ. ಸರಿ ಇಲ್ಲಿ ನನ್ನ ಸ್ನೇಹಿತನನ್ನು ಹುಡುಕುವುದು ಹೇಗೆ. ಬಾಗಿಲಲ್ಲಿ ಜನರನ್ನು ನಿಯಂತ್ರಿಸಲು ನಿಂತಿದ್ದ ಗಾರ್ಡ್ ಒಬ್ಬನನ್ನು ಕೇಳಿದೆ”ಇಲ್ಲಿ ಮೊದಲು ಪೂಜೆ ಮಾಡುತ್ತಿದ್ದರು ದೇವರಾಜಾಚಾರ್ ಅಂತ, ಈಗ ಎಲ್ಲಿ ಸಿಗ್ತಾರೆ?” ಆತ ನನ್ನ ಮುಖವನ್ನು ಸ್ವಲ್ಪ ಆಶ್ಚರ್ಯದಿಂದಲೇ ನೋಡಿ, ‘ನಿಮಗೆ ಅವರು ಪರಿಚಯವಾ? ‘ ಎಂದು ಮತ್ತೆ ಕೇಳಿದ”ನನ್ನ ಬಾಲ್ಯ ಸ್ನೇಹಿತ, ಮೊದಲು ಇಲ್ಲಿದ್ದ ಗುಡೀಲಿ ಪೂಜೆ ಮಾಡ್ತಾ ಇದ್ದರು, ಈಗ ಇಲ್ಲಿಯೆ ಇದ್ದಾರೆ ಎಂದರು”
ನಾನು ಅನುಮಾನದಿಂದ ಹೇಳಿದೆ. ಅದಕ್ಕವನು
“ಸೀದ ಒಳಗೆ ಹೋಗಿ, ದೇವಾಯದ ಒಳಗೆ ಇರುತ್ತಾರೆ ”
ಅಲ್ಲಿ ನಿಂತದ್ದ ಕ್ಯೂ ತಪ್ಪಿಸಿ ನನ್ನನ್ನು ಬಲಬಾಗದಿಂದ ಪ್ರತ್ಯೇಕವಾಗಿ ಬಿಟ್ಟ, ನಾನು ಪರವಾಗಿಲ್ಲವೆ ನನ್ನ ಸ್ನೇಹಿತನ ಹೆಸರಿಗೆ ಒಳ್ಳೆ ಬೆಲೆಯಿದೆ ಎಂದು ಕೊಳ್ಳುತ್ತಲೆ ಒಳಗೆ ಹೋದೆ. ಅಲ್ಲಿ ಜನರು ಸತತವಾಗಿ ದೇವರ ಮುಂದೆ ಸರಿದು , ಕೈಮುಗಿದು ಹೋಗುತ್ತಿದ್ದರು, ಪೂಜೆಗೆ ಟಿಕೇಟ್ ಮಾಡಿಸಿದವರು, ಪಕ್ಕಕ್ಕೆ ನಿಂತರೆ ಒಳಗಿನಿಂದ ಬಂದ ಮರಿ ಪುರೋಹಿತರುಗಳು, ಅವರ ಕೈಲಿ ಸಂಕಲ್ಪ ಮಾಡಿಸಿ , ಅವರ ಕೈಲಿದ್ದ ಪೂಜಾ ಸಾಮಾಗ್ರಿಗಳನ್ನು ತೆಗೆದುಕೊಂಡು ಒಳಹೋಗಿ ಮತ್ತೆ ಪೂಜೆ ಮಾಡಿ ಪ್ರಸಾದ ತಂದು ಕೊಡುತ್ತಿದ್ದರು, ಪೂಜೆ ಮುಗಿಸಿದವರು, ತಮ್ಮ ಕೈಲಾದ ದಕ್ಷಿಣೆ ಅರ್ಪಿಸಿ ಹೊರಹೋಗುತ್ತಿದ್ದರು.
ಗಮನಿಸಿದೆ, ಬರುವವರೆಲ್ಲ ನೂರು ರೂಪಾಯಿ ನೋಟುಗಳಲ್ಲೆ ದಕ್ಷಿಣೆ ಕೊಡುತ್ತಿದ್ದರು, ಸಾಲಿನಲ್ಲಿ ಎಲ್ಲರ ಕೈಲೂ ಒಂದು ಲೀಟರ್ ನಷ್ಟು ಎಳ್ಳೆಣ್ಣೆ ಪ್ಯಾಕೆಟ್ , ಹಾಗು ಹೂವಿನ ಹಾರ. ನಾನು ನಿಂತಂತೆ ಒಳಗಿನಿಂದ ಬಂದ ಒಬ್ಬಾತ ನನ್ನನ್ನು ಕೇಳಿದ,
“ಏನು ಬೇಕು ಸುಮ್ಮನೆ ಏಕೆ ನಿಂತಿರುವಿರಿ?” ಎಂದು
ನಾನು ದೇವರಾಜಚಾರ್ ನನ್ನು ನೋಡಬೇಕೆಂದು ತಿಳಿಸಿದೆ, ನನಗಾಗಲೆ ನನ್ನ ಸ್ನೇಹಿತ ಮನಸಿನಿಂದ ಮರೆಯಾಗಿದ್ದ. ನಾನು ಹೇಳಿದ ಒಂದೆರಡು ನಿಮಿಷದಲ್ಲಿ, ದೀರ್ಘ ಗಡ್ಡದಾರಿ ವ್ಯಕ್ತಿಯೊಬ್ಬರು ಹೊರಬಂದು ನನ್ನನ್ನು ಅನುಮಾನದಿಂದ ದಿಟ್ಟಿಸಿದರು, ನನಗೂ ಸ್ವಲ್ಪ ತಡಕಾಟವಾಯಿತು, ಇದೊಳ್ಳೆ ಕತೆಯಾಯಿತಲ್ಲ ಎಂದು, ಕ್ರಮೇಣ ಹೊಳೆಯಿತು, ಆ ಗಡ್ಡದಾರಿ ವ್ಯಕ್ತಿಯೆ ನನ್ನ ಸ್ನೇಹಿತ ದೇವರಾಜಚಾರ್ ಎಂದು. ಅವನೂ ನನ್ನ ಗುರುತು ಹಿಡಿದ.
“ನೀನು ನಂಜುಂಡ ಅಲ್ಲವ ? ಯಾವಾಗ ಬಂದೆ ? ಒಂದು ಕೆಲಸ ಮಾಡು ಸ್ವಲ್ಪ ಹೊತ್ತು ಕಾಯುತ್ತೀಯ, ಒಂದು ಹತ್ತು ನಿಮಿಷ, ಇಲ್ಲಿ ಮಾತನಾಡಲು ಆಗುವದಿಲ್ಲ, ಹೊರಗೆ ಬರುತ್ತೇನೆ ವಿರಾಮವಾಗಿ ಮಾತನಾಡಬಹುದು. ನೀನು ಹೊರಗೆ ಪೂಜಾ ಕೌಂಟರ್ ಇದೆಯಲ್ಲಿ ಅಲ್ಲಿ ನಿಂತಿರು ಬಂದೆ” ಎಂದ.
ನನ್ನ ಜೊತೆ ಮಾತನಾಡುವಾಗಲೆ ಗಮನಿಸಿದೆ, ಬಹಳ ಜನ ಭಕ್ತಿಯಿಂದ ಅವನನ್ನು ದಿಟ್ಟಿಸುತ್ತಿದ್ದರು. ಕೆಲವರು ನನ್ನ ಕಣ್ಣ ಮುಂದೆಯೆ ಅವನ ಪಾದಗಳಿಗೆ ನಮಸ್ಕಾರ ಮಾಡಿದರು. ಆಗೆಲ್ಲ ಅವನು ತನ್ನ ಕೈಯಿಂದ ಅವರ ತಲೆ ಮುಟ್ಟಿ , ಆಶೀರ್ವದಿಸುತ್ತಿದ್ದ. ಸರಿ ಅವನು ಹೇಳಿದಂತೆ ಹೊರಗೆ ಬಂದು ನಿಂತೆ. ನನ್ನನ್ನು ಕಳಿಸಿದ ವಾಚ್ ಮನ್ ನನ್ನನ್ನು ನೋಡಿ”ಸಿಕ್ಕಿದ್ರಾ?” ಎಂದು ಕೇಳಿದ”ಸಿಕ್ಕಿದ್ರಪ್ಪ, ಇಲ್ಲಿ ನಿಂತಿರು ಬರುತ್ತೀನಿ ಅಂದರು” ಎಂದೆ .
ಆತ ಸ್ವಲ್ಪ ಆಶ್ಚರ್ಯದಿಂದಲೆ ಸುಮ್ಮನಾದ. ಎಂಟು ಹತ್ತು ನಿಮಿಷಗಳಲ್ಲಿ, ಹೊರಬಂದ ದೇವರಾಜಾಚಾರ್ ನಾನು ನಿಂತಿರುವಲ್ಲಿಗೆ ಬಂದ. ಅಲ್ಲಿದ್ದ ವಾಚ್ ಮನ್, ಕೌಂಟರ್ ನಲ್ಲಿದ್ದ ಮನುಷ್ಯ ಎಲ್ಲರು ಎದ್ದು ನಿಂತು ಅವನಿಗೆ ಗೌರವ ಸಲ್ಲಿಸಿದರು.
“ಬಾ ಹೊರಗೆ ಹೋಗೋಣ” ಎನ್ನುತ್ತ ಹೊರಟ. ನಾನು ಹಿಂಬಾಲಿಸಿದೆ.
ಕೇಸರಿ ಪಂಚೆ ಹಾಗು ಮೇಲು ಹೊದಿಕೆ ಧರಿಸಿ, ಹಣೆಯ ತುಂಬಾ ವಿಭೂತಿ, ನೊಸಳಿನಲ್ಲಿ ಅಗಲ ಕುಂಕುಮ, ತಲೆಯ ತುಂಬಾ ಕೂದಲು, ಹಿಂದೆ ಜುಟ್ಟು, ಉದ್ದಕ್ಕೆ ಬೆಳೆದ ಕರಿ ಬಿಳಿ ಬಣ್ಣದ ಗಡ್ಡದಾರಿಯಾದ ಅವನ ಪಕ್ಕ ಪ್ಯಾಂಟು ಶರ್ಟ ಧರಿಸಿ ನಡೆಯುತ್ತಿದ್ದ ನಾನು. ಒಂದಕ್ಕೊಂದು ಹೊಂದಿಕೆಯಾಗುವದಿಲ್ಲ ಅನ್ನಿಸಿತು ಮನಸಿಗೆ. ಎದುರಿಗೆ ಬರುತ್ತಿದ್ದ ಕೆಲವರು ಇವನನ್ನು ಕಾಣುತ್ತಲೆ ಬಗ್ಗಿ ನಮಸ್ಕರಿಸುತ್ತಿದ್ದರೆ ಇವನಿಗೆ ಅವರನ್ನು ಆಶೀರ್ವದಿಸುವುದೆ ಕೆಲಸ. ನನಗೆ ಆಶ್ಚರ್ಯವಾಗಿತ್ತು ಇದೆಂತ ಬದಲಾವಣೆ ಎಂದು.
ದೇವಾಲಯದಿಂದ ಹೊರಬರುವಾಗಲೆ ಅವನನ್ನು ಪ್ರಶ್ನಿಸಿದೆ,”ಇದೇನೊ ಪೂರ್ಣ ಬದಲಾವಣೆ, ಊರಿನಲ್ಲಿ ಹಾಗು ನಿನ್ನಲ್ಲಿ ..” ಎಲ್ಲರೂ ಅವನನ್ನು ಕಾಲು ಮುಟ್ಟಿನಮಸ್ಕರಿಸುತ್ತ ಇರುವಾಗ ನನಗೆ ಏಕವಚನದಲ್ಲಿ ಮಾತನಾಡಿಸಲು ತಡವರಿಸುವಂತೆ ಆಗಿತ್ತು.
*****
(ಮುಂದುವರೆಯುವುದು….)
ಪಾರ್ಥಅವರೆ ನಮಸ್ಕಾರ. ತಮ್ಮನ್ನು" ಸಂಪದ "ಹೊರತು ಪಡಿಸಿ ಇಲ್ಲೂ ಸಹ ಕಾಣುತ್ತಿದ್ದೇನೆ,ಬಹಳ ಸಂತೋಷ.
' ಜಿವನ ದರ್ಶನ ' ಕಥೆ ಕುತುಹಲಕರವಾಗಿ ತೆರೆದುಕೊಳ್ಳತ್ತಿದೆ. ಮುಂದಿನ ಭಾಗದ ನಿರೀಕ್ಷೆಯಲ್ಲಿದ್ದೇನೆ.
ವಂದನೆಗಳು………ರಮೇಶ ಕಾಮತ್