ತಗ್ಗು ದಿಬ್ಬ ಗುಂಡಿ ಗೊಟರು ಸರೋವರ ಸಂದುಗೊಂದುಗಳಲಿ ಬದುಕಿನಬಂಡಿ ಅಪಾಯಕ್ಕೆ ಸಿಲುಕದಂತೆ ಉಪಾಯವಾಗಿ ಪಾರುಮಾಡಿ ಮುಟ್ಟಬೇಕಾದ ಗುರಿ ತಲುಪುವಂತೆ ಮಾಡುವ ಜೀವನ ಕೌಶಲ್ಯಗಳು ಎಲ್ಲರಿಗೂ ಅವಶ್ಯ ಅಮೂಲ್ಯ!
ಬದುಕಿನಲ್ಲಿ ಶಾಲೆ, ಶಾಲೆಯಲ್ಲಿ ಪಠ್ಯಪುಸ್ತಕ, ಪಠ್ಯ ಪುಸ್ತಕದಲ್ಲಿ ಸ್ವಲ್ಪ ಬದುಕು ಇರುವುದು. ಪಠ್ಯಕ್ಕಿಂತ ಪಠ್ಯದಿಂದ ಹೊರಗಡೆಯೇ ಹೆಚ್ಚು ಬದುಕು ವ್ಯಾಪಿಸಿರುವುದು! ಶಾಲೆ, ಪಠ್ಯ ಪುಸ್ತಕ, ಅದರಲ್ಲಿನ ಜ್ಞಾನ ಏಕೆ ಬೇಕು! ಅವಿಲ್ಲದೆ ಬದುಕಲು ಆಗುವುದಿಲ್ಲವೆ? ಆಗುತ್ತದೆ! ಆದರೆ ಪಠ್ಯದಿಂದ ಹೊರಗಿರುವ ಬದುಕನ್ನು ವ್ಯವಸ್ಥಿತವಾಗಿ ಬದುಕುವಂತಾಗಲು, ಈಗ ಇರುವ ಬದುಕನ್ನು ಸುಂದರಗೊಳಿಸಿಕೊಳ್ಳಲು ಶಾಲೆ, ಶಿಕ್ಷಣ ಪಠ್ಯ ಬೇಕು? ಪಠ್ಯದ ಒಳಗಿನ ಮತ್ತು ಹೊರಗಿನ ಬದುಕನ್ನು ಬಹಳ ಸುಂದರ ಮಾಡುವ ಸಾಮರ್ಥ್ಯ ಶಾಲಾ ಕಾಲೇಜುಗಳಿಗಿದೆ! ಶಿಕ್ಷಕರಿಗಿದೆ! ಶಾಲಾ ಕಾಲೇಜಿನಲ್ಲಿನ ಜ್ಞಾನಕ್ಕಿದೆ. ಅದು ನಹೀ ಜ್ಞಾನೇನ ಸದೃಶಂ. ಅಂತಹ ಅದ್ಭುತ ಜ್ಞಾನವನ್ನು ಪಠ್ಯ ಹೊಂದಿದೆ. ಅದು ಮಾನವನ ಬದುಕನ್ನು ಸುಂದರಗೊಳಿಸುತ್ತದೆ! ಭವ್ಯವಾಗಿಸುತ್ತದೆ. ಹೀಗೆ ಶಾಲಾ ಕಾಲೇಜಿಗೆ ಹೋಗಿ ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಿದ್ದರು. ಜ್ಞಾನದ ಉದ್ದೇಶ ಎಲ್ಲರ ಬದುಕನ್ನು ಸುಂದರವಾಗಿಸುವುದು! ಪಾವನ ಮಾಡುವುದು! ಅದಕ್ಕೇ ಎಲ್ಲರೂ ಶಾಲಾ ಕಾಲೇಜುಗಳಿಗೆ ಹೋಗುತ್ತಿರುವುದು! ಇಂದು ಶಾಲಾ ಕಾಲೇಜುಗಳಿಗೆ ಹೋಗದೆ ಇರುವವರು ಹುಡುಕಿದರು ಸಿಗರು! ಅಂದರೆ ಎಲ್ಲರೂ ಶಾಲೆಗೆ ಹೋಗಿರುವುದರಿಂದ ಹೋಗುತ್ತಿರುವುದರಿಂದ ಎಲ್ಲರೂ ತಮ್ಮ ಬದುಕನ್ನು ಸುಂದರ ಮಾಡಿಕೊಳ್ಳಬೇಕು ಎಂಬುದ ಚೆನ್ನಾಗಿಯೇ ಕಲಿತವರೇ ಕಲಿಯುತ್ತಿರುವವರೆ ಆಗಿದ್ದಾರೆಯಲ್ಲವೆ? ಹೌದು. ಹೀಗೆ ಶಾಲಾ ಕಾಲೇಜಿಗೆ ಹೋಗಿ ತಮ್ಮ ಬದುಕನ್ನು ನಂದನ ಮಾಡಿಕೊಳ್ಳಬೇಕಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮನ್ನು ಟಿವಿಯಲಿ ಐಕ್ಯರಾಗಲು ಬಿಡುತ್ತಿಲ್ಲವೆಂದು ಮೊಬೈಲ್ ನಲ್ಲಿ ಮುಳುಗಲು ಮೊಬೈಲನ್ನೇ ಕೊಡುತ್ತಿಲ್ಲವೆಂದು ಬಯಸಿದ ಬೈಸಿಕಲ್ ಕೊಡಿಸಲಿಲ್ಲವೆಂದು ಕ್ಲಾಸಿನ ಟಾಪರ್ ಸ್ಥಾನ ಎರಡಂಕದಿಂದ ಕೈಜಾರಿತೆಂದು ಕಡಿಮೆ ಅಂಕ ಬಂದವೆಂದು ಫೇಲಾದೆನೆಂದು ಪರೀಕ್ಷೆಯ ಒತ್ತಡದಲ್ಲಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸದೆ ಬಿಟ್ಟು ಬಂದೆನೆಂದು ತಂದೆ ತಾಯಿ ಬುದ್ದಿ ಮಾತುಗಳ ಹೇಳಿದರೆಂದು ಶಿಕ್ಷಕರು ತಪ್ಪನ್ನು ಬಹಿರಂಗವಾಗೇ ತಿದ್ದಿದರೆಂದು ಗೆಳತಿ ಇತರರ ಎದುರು ಅವಮಾನಿಸಿದಳೆಂದು ಟೂರ್ ಕಳಿಸಲು ಪೋಷಕರು ನಿರಾಕರಿಸಿದರೆಂದು ವೀಡಿಯೋ ಗೇಮ್ ಪ್ಲೇಯರ್ ಕೊಡಿಸಲಿಲ್ಲವೆಂದು ಗೆಳತಿ ತನಗೆ ಕೊಡದೆ ಮತ್ತಾರಿಗೋ ನೋಟ್ಸ್ ಕೊಟ್ಟಳೆಂದು ಪೋಷಕರು ಪ್ರಿಯಕರನೊಂದಿಗೆ ಮದುವೆಯಾಗಲು ಒಪ್ಪಿಗೆ ಕೊಡಲಿಲ್ಲವೆಂದು ಪ್ರಿಯಕರ ಕಾಲ್ ರಿಸ್ಸೀವ್ ಮಾಡಲಿಲ್ಲವೆಂದು, ಪ್ರಿಯತಮ ಸಮಯಕ್ಕೆ ಸರಿಯಾಗಿ ಬರಲಿಲ್ಲವೆಂದು, ಬೇರೆಯವರೊಂದಿಗೆ ಸಲುಗೆಯಿಂದ ಇದ್ದಾನೆಯೆಂದು ಹೀಗೆ ಸಣ್ಣ ಸಣ್ಣ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡು ಎಲ್ಲದಕ್ಕೂ ಆತ್ಮಹತ್ಯೆಯೊಂದೆ ಪರಿಹಾರ ಎಂದು ಹಲವರು ಭಾವಿಸಿರಬೇಕಾದರೆ ಶಾಲಾ ಕಾಲೇಜುಗಳು ಹೇಗೆ ಬದುಕನ್ನು ಸುಂದರ ಮಾಡಿದಂತೆ ಆಯ್ತು? ಎಳೆಯರು ಶಾಲೆಗೆ ಬರುತ್ತಿದ್ದಾರೆಂದರೆ ಅವರ ಬದುಕನ್ನು ಅವರು ಸುಂದರಗೊಳಿಸಿಕೊಳ್ಳಲು ಬರುತ್ತಿದ್ದಾರೆಂದು ಅರ್ಥ. ಅವರು ಆತ್ಮಹತ್ಯೆ ಮಾಡಿಕೊಂಡರೆಂದರೆ, ಅಡ್ಡದಾರಿ ಹಿಡಿದರೆಂದರೆ ಅವರ ಬದುಕು ಸುಂದರವಾಗುವುದಿರಲಿ ಅಂತ್ಯಗೊಳಿಸಿದಂತಾಗಲಿಲ್ಲವೆ? ಹೌದು! ವಿದ್ಯಾರ್ಥಿಗಳ ಬದುಕನ್ನು ಸುಂದರವಾಗಿಸಬೇಕಿರುವ ಶಾಲೆ ಸುಂದರ ಏಕೆ ಆಗಿಸಲಿಲ್ಲ? ಬದುಕನ್ನೇ ಅಂತ್ಯ ಏಕೆ ಆಗಿಸಿತು? ಅಡ್ಡದಾರಿ ಏಕೆ ಹಿಡಿಸಿತು? ಇದರಿಂದ ಶಾಲೆಗೆ ಎಲ್ಲರ ಬದುಕನ್ನು ಸುಂದರಗೊಳಿಸಲು ಆಗುತ್ತಿಲ್ಲ ಎಂದಂತಾಯಿತಲ್ಲ? ವಿದ್ಯಾರ್ಥಿಗಳು ಇರಲಿ ಎಲ್ಲಾ ವಯೋಮಾನದವರೂ ನಾನಾ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು, ಅಪಾಯಗಳ ಮಾಡುತ್ತಿರುವುದು, ತೊಂದರೆ ಕೊಡುತ್ತಿರುವುದು ತೊಂದರೆ ಮಾಡಿಕೊಳ್ಳುತ್ತಿರುವುದು ಇದನ್ನೇ ಸೂಚಿಸುತ್ತದೆ! ರೈತರ ಆತ್ಮಹತ್ಯೆಗಳು ನಿಂತೇ ಇಲ್ಲ! ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ! ಜತೆಗೆ ದೇಶದಾದ್ಯಂತಾ ಹೆಚ್ಚುತ್ತಿರುವ ಅತ್ಯಾಚಾರಗಳು, ದೇಶ ದ್ರೋಹ, ಭ್ರಷ್ಟಾಚಾರ, ಉಗ್ರವಾದ, ಭಯೋತ್ಪಾದನೆ, ದೇಶದ ಸಾಲ ತೀರಿಸಲು ಬಯಸದೆ ಬೇರೆ ದೇಶದಲ್ಲಿ ಹಾಯಾಗಿ ಬದುಕುವ ವಂಚನೆ ಶಾಲಾ ಕಾಲೇಜುಗಳಲ್ಲಿ ಕಲಿತ ಶಿಕ್ಷಣದ ಕಡೆಗೇ ಬೆಟ್ಟುಮಾಡಿ ತೋರುತ್ತಿವೆ!
ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ತಂದೆಯನ್ನು, ಪ್ರಿಯಕರನೊಂದಿಗೆ ಓಡಿ ಹೋಗಲು ಸಹಕರಿಸಲಿಲ್ಲವೆಂದು ತಾಯಿಯನ್ನು, ತನ್ನ ಪಾಲಿಗೆ ಬರಬೇಕಾದ ಒಂದು ತೆಂಗಿನ ಮರನ್ನು ಕೊಡಲೊಪ್ಪದ ಅಣ್ಣನನ್ನು ಕೊಂದವರಿದ್ದಾರೆ. ಹುಲಿಯ ಕಂಡು ಅದು ದಾಳಿ ಮಾಡುವ ಮುನ್ನ ಬಯದಿ ಶವವಾದವರಿದ್ದಾರೆ. ಬಡತನವ ಎದುರಿಸಲಾಗದೆ ಕೊರಗಿ ಕೊರಗಿ ಸತ್ತವರಿದ್ದಾರೆ. ಕಷ್ಟಗಳು ಬರುವವೆಂದು ಕೇಳಿನೆ ನೆಲಕಟ್ಟಿದವರಿದ್ದಾರೆ. ಕೀಳಿರಿಮೆಯಿಂದ ಮಹಾನ್ ಪ್ರತಿಭೆ ಇದ್ದರೂ ಅರಳಲು ಅವಕಾಶ ಕೊಡದೆ ಬದುಕನ್ನು ಹಾಳು ಮಾಡಿಕೊಂಡವರಿದ್ದಾರೆ. ಇರುವ ಹಣದಿಂದ ಸಂಸಾರವ ಸರಿದೂಗಿಸಲಾಗದೆ, ಹಾಸಿಗೆ ಇದ್ದಷ್ಟು ಕಾಲು ಚಾಚು, ಹಿಟ್ಟು ಇದ್ದಷ್ಟು ರೊಟ್ಟಿ ಸುಡು ಎಂಬ ಗಾದೆಗಳಿಗೆ ಬೆಲೆ ಕೊಡದೆ ಒದ್ದಾಡಿ ಆತ್ಮಹತ್ಯೆ ಮಾಡೊಕೊಂಡವರು ಹೆಚ್ಚುತ್ತಿದ್ದಾರೆ. ಸಾಲ ಮಾಡಿ ತೀರಿಸಲಾಗದೆಂದು ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಸಾಲ ವಸೂಲಿಗೆ ಬರುವರೆಂಬ ಸುದ್ದಿ ಕೇಳಿಯೇ ಹೃದಯಾಘಾತದಿಂದ ಸತ್ತವರಿದ್ದಾರೆ! ಈ ಘಟನೆಗಳಿಂದ ವಿದ್ಯಾರ್ಥಿಗಳಿಗೆ ಜೀವದ ಮಹತ್ವ ಏನೆಂದು ಶಾಲೆಗಳು ಹೇಳಿಕೊಡುತ್ತಿಲ್ಲವೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಬದುಕಿನ ಮಹತ್ವ ತಿಳಿಯದಿರುವವರು ಬದುಕನ್ನು ಹೇಗೆ ಪ್ರೀತಿಸಿಯಾರು? ಈ ಎಲ್ಲಾ ಸಮಸ್ಯೆಗಳ, ಕಷ್ಟಗಳ ತೊಂದರೆಗಳ, ಅಪಾಯಗಳ ಸುಲಭವಾಗಿ ನಿಭಾಯಿಸಿ ಅರಾಮಾಗಿ ಬದುಕುವುದು ಹೇಗೆ ಎಂಬುದನ್ನು ಜೀವನ ಕೌಶಲ್ಯಗಳು ಹೇಳಿಕೊಡುತ್ತವೆ ! ಜೀವನ ಕೌಶಲ್ಯಗಳನ್ನು ಹೇಳಿಕೊಡದೆ ಬರಿ ಉತ್ತಮ ಅಂಕಗಳಿಸುವ ಪರಮ ಗುರಿ ತಲುಪುವುದು ಹೇಗೆ? ಉನ್ನತ ಉದ್ಯೋಗ ಗಿಟ್ಟಿಸುವುದು ಹೇಗೆ? ಅಧಿಕಾರ ಹಿಡಿಯುವುದು ಹೇಗೆ? ಚೆನ್ನಾಗಿ ಹಣ ಸಂಪಾದಿಸುವುದು ಹೇಗೆ? ಕಷ್ಟಪಡದೆ ಸುಖವಾಗಿ ಬದುಕುವುದು ಹೇಗೆ? ಐಷಾರಾಮಾವಾಗಿ ಬದುಕುವುದು ಹೇಗೆ ಎಂದು ಶಾಲಾ ಕಾಲೇಜುಗಳು ಹೇಳಿಕೊಟ್ಟುದ್ದರಿಂದ ಬದುಕನ್ನು ಅಪಾಯದಂಚಿಗೆ ದೂಡಿ ತಮ್ಮ ಬದುಕನ್ನ ನಾಶ ಮಾಡಿಕೊಂಡುದಲ್ಲದೆ ನಂಬಿದವರ ಬದುಕ ನರಕವಾಗಿಸುತ್ತಿದ್ದಾರೆ. ಮಕ್ಕಳು ಯಾವ ಅಡೆ ತಡೆಗಳಿಗೆ ಜಗ್ಗಬಾರದೆಂದರೆ ಬದುಕಿನ ಮಹತ್ವ ತಿಳಿಸುವ ಜೀವನ ಕೌಶಲ್ಯಗಳ ಕಲಿಸಬೇಕು. ಅಪಾಯ ಬಂದಾಗಲು ದೈರ್ಯಗೆಡದೆ ತಾಳ್ಮೆಯಿಂದ ಅದನ್ನು ಎದುರಿಸುವುದು, ಒತ್ತಡದಲ್ಲೂ ದುಡುಕದೆ ಸಮಾಧಾನಿಯಾಗಿ ಚಿಂತಿಸಿ ಸರಿಯಾದ ನಿರ್ದಾರ ತೆಗೆದುಕೊಳ್ಳುವುದು, ಯಾರಾದರೂ ಅಮೂಲ್ಯವಾದುದ ಹಾಳು ಮಾಡಿದರೆ ಕೋಪ ಮಾಡಿಕೊಳ್ಳದೆ ತಾಳ್ಮೆಯಿಂದ ಅದನ್ನು ಪರಿಶೀಲಿಸುವುದು, ಎಂಬಿಬಿಎಸ್ ಗೋ ಬಿಇಗೋ ವೆಟರ್ನರಿಗೋ ಡಿಪ್ಲಾಮಾಕ್ಕೋ … ಯಾವುದಕ್ಕೆ ಸೇರಬೇಕೆಂಬ ಗೊಂದಲದಿಂದ ಮುಕ್ತರಾಗಿಸುವುದು, ಯಾವುದು ಸರಿ ಯಾವುದು ತಪ್ಪು ಎಂದು ಸರಿಯಾಗಿ ಸ್ವಯಂ ನಿರ್ದಾರ ಮಾಡುವಂತಾಗುವುದು, ಕೋಪದ ಕೈಗೆ ಮನಸ್ಸನ್ನು ಕೊಡದಂತೆ ಸಮಾಧಾನವಾಗಿ ಸಂದರ್ಭವನ್ನು ನಿಭಾಯಿಸುವುದ ಮುಂತಾದ ಕ್ಲಿಷ್ಟಕರ ಸಂದರ್ಭಗಳಲ್ಲಿ ತೊಂದರೆ ಮಾಡದೆ ಮಾಡಿಕೊಳ್ಳದೆ ಜೀವನವ ನಿರ್ವಹಿಸುವುದು ಹೇಗೆಂದು ಜೀವನ ಕೌಶಲ್ಯಗಳು ಕಲಿಸುವುವು! ಇದರಿಂದ ಅನೇಕ ಕಾರಣಗಳಿಗೆ ಸಂಭವಿಸುವ ಆತ್ಮಹತ್ಯೆಗಳು ಕೊಲೆಗಳು ಅತ್ಯಾಚಾರಗಳು ಕಳ್ಳತನಗಳು ಮುಂತಾದ ಕೆಟ್ಟ ನಡೆಗಳು ಅಂತ್ಯವಾಗುವುವು! ಇವುಗಳನ್ನು ಶಾಲಾಕಾಲೇಜುಗಳಲ್ಲಿ ಇವು ತುಂಬಾ ಮುಖ್ಯವೆಂದು ಹೇಳಿಕೊಡುತ್ತಿದ್ದರು.
ಜೀವನ ವಿಶಾಲವಾದುದು. ಜೀವನ ಸುಖದ ಸುಪ್ಪತ್ತಿಗೆಯಲ್ಲ! ಕಷ್ಟಗಳ ಬಿಡದೆ ನಿರಂತರ ಸುರಿಸುವ ಮಳೆಯಲ್ಲ! ಸುಖ ಕಷ್ಟಗಳ ಹಾಸು. ಬೇವು ಬೆಲ್ಲದ ತಿನಿಸು! ಆದ್ದರಿಂದ ಜೀವನದಲ್ಲಿ ನಿರಂತರವಾಗಿ ಕಷ್ಟ ಸುಖಗಳು ಒಂದಾದ ನಂತರ ಒಂದು ಒಮ್ಮೊಮ್ಮೆ ಗುಂಪು ಗುಂಪಾಗಿ ಬರುತ್ತನೇ ಇರುತ್ತವೆ. ಸುಖಗಳು ಬಂದಾಗ ಹಿಗ್ಗುವುದು ಮಾನವನ ಸ್ವಭಾವ! ಕಷ್ಟಗಳು ಬಂದಾಗ ಕುಗ್ಗುವುದು ಸಹ ಸಹಜವಾದರೂ ಜೀವನವೇ ಮುಗಿದು ಹೋಯಿತೆಂಬಂತೆ ನಿರುತ್ಸಾಹಿಗಳಾಗಿ ಬದುಕಿನಿಂದ ಪಲಾಯನ ಮಾಡುವುದು ಸರಿಯಲ್ಲ! ಅವು ಬರುತ್ತವೆ ಹೋಗುತ್ತವೆ! ಕಷ್ಟಗಳು ಬದುಕಿನಲ್ಲಿ ಅನಿವಾರ್ಯ. ಆದ್ದರಿಂದ ಕಷ್ಟಗಳು ಮಾನವನನ್ನು ತಿದ್ದಿ ತೀಡಿ ಸುಂದರ ಶಿಲ್ಪ ಮಾಡಲು ಬರುತ್ತವೆ! ಆದ್ದರಿಂದ ಅವುಗಳಲ್ಲಿ ಮಿಂದು ಸುಂದರ ಶಿಲ್ಪವಾಗಿ ಮೇಲೇಳಬೇಕು! ಅಂದರೆ ನಿಧಾನವಾಗಿ ಅವುಗಳ ಪರಿಹರಿಸುವ ಮಾರ್ಗಗಳ ಹುಡುಕಿ ಬಗೆಹರಿಸಿಕೊಂಡು ಬದುಕಬೇಕು. ಬದುಕಿನಲ್ಲಿ ಕಷ್ಟಗಳು ಸಮಸ್ಯೆಗಳು ಕ್ಲಿಷ್ಟ ಸಂದರ್ಭಗಳು ಆಕಸ್ಮಿಕಗಳು ಸಂಭವಿಸಿದಾಗ ಅಪಾಯಗಳು ಗೋಚರಿಸಿದಾಗ ಆರ್ಥಿಕ ಸಮಸ್ಯೆಗಳು ಕಾಡಿದಾಗ ಪಲಾಯನ ಮಾಡದೆ ಎದೆಕೊಟ್ಟು ಹೋರಾಡಿ ಅವುಗಳ ಎದುರಿಸುವುದು ಹೇಗೆ? ಅವುಗಳ ಬಗೆಹರಿಸಿಕೊಳ್ಳುವುದು ಹೇಗೆ ಜೀವನವ ಸರಳ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕಲಿಸುವಂತಹವೆ ಜೀವನ ಕೌಶಲ್ಯಗಳು! ದೈರ್ಯ ಆತ್ಮವಿಶ್ವಾಸಗಳು ಜೀವನ ಕೌಶಲಗಳೇ ಆಗಿವೆ. ಕಳ್ಳರ ಧಾಳಿಗೆ ತುತ್ತಾಗಿ ರೈಲಿನ ತುಳಿತಕ್ಕೆ ಸಿಲುಕಿ ಕಾಲುಗಳ ಕಳೆದುಕೊಂಡ ಅರುಣಿಮ ಸಿನ್ಹ ಎದೆಗುಂದಿದ್ದರೆ ಬದುಕುಳಿಯುತ್ತಿದ್ದಳೆ? ಸರಿಯಾಗಿ ಕಾಲಿದ್ದವರೆ ಹಿಮಾಲಯ ಏರುವುದು ಕಷ್ಟ! ಕೃತಕ ಕಾಲುಗಳ ಸಹಾಯದಿಂದ ಹಿಮಾಲಯ ಹತ್ತಿ ಮಹಾನ್ ಸಾಧಕಿಯಾಗಿ ವಿಶ್ವವಿಖ್ಯಾತಿ ಹೊಂದುತ್ತಿದ್ದಳೇ? ದೈರ್ಯ, ಆತ್ಮವಿಶ್ವಾಸದಿಂದ ಸಂದರ್ಭವನ್ನು ನಿಭಾಯಿಸಿ ಬದುಕುಳಿದು ಮಹಾನ್ ಸಾಧಕಿಯಾದಳು! ” ತಮ್ಮ ಬದುಕಿನಲ್ಲಿ ಸಮಸ್ಯೆಗಳ ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಲು ಬೇಕಾದ ಹೊಂದಾಣಿಕೆಯ ಮತ್ತು ಸಕಾರಾತ್ಮಕ ನಡವಳಿ ಜೀವನ ಕೌಶಲ್ಯ ” – ಅಂತ WHO ಹೇಳಿದೆ. ಬದುಕಿನ ಸಮಸ್ಯೆಗಳಿಗೆ ಬೆನ್ನು ತೋರಿಸದೆ ಅವುಗಳನ್ನು ಎದುರಿಸುವ ಉಪಾಯಗಳನ್ನು ಗಳಿಸುವುದೇ ಜೀವನ ಕೌಶಲ್ಯಗಳು. ಸ್ವ ಅರಿವು, ಅನುಭೂತಿ, ಸೃಜನಾತ್ಮಕ ಚಿಂತನೆ, ಸ್ವನಿರ್ದಾರ, ವಿಮರ್ಶಾತ್ಮಕ ಆಲೋಚನೆ, ಪರಿಣಾಮಕಾರಿ ಸಂವಹನ, ಒತ್ತಡ ನಿಭಾಯಿಸುವಿಕೆ, ಸಂವೇದನೆಗಳು, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆಗಳು ಮುಂತಾದವು ಜೀವನ ಕೌಶಲ್ಯಗಳಾಗಿವೆ. ಪ್ರತಿಯೊಬ್ಬರು ತಮ್ಮ ಬದುಕ ಸುಂದರವಾಗಿಸಿಕೊಳ್ಳಲು ಇವು ಎಲ್ಲರಿಗೂ ಅವಶ್ಯಕ! ಜೀವನ ಕೌಶಲ್ಯಗಳನ್ನು ಮನೆಯಲ್ಲಿ ಶಾಲೆಯಲ್ಲಿ ಸಮಾಜದಲ್ಲಿ ಕಲಿಸದಿರುವುದರಿಂದ ಸಣ್ಣ ಸಣ್ಣ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗದೆ ಜೀವನಕ್ಕೆ ವಿಮುಖವಾಗುತ್ತಿದ್ದಾರೆ! ಇದ ತಿಳಿದು ಶಾಲೆ ಕಾಲೇಜುಗಳಲ್ಲಿ ಜೀವನ ಕೌಶಲ್ಯಗಳ ಕಲಿಸಲು ಪ್ರಾಮುಖ್ಯತೆ ಕೊಡಬೇಕು. ಇದರಿಂದ ಜೀವನದ ಸಮಸ್ಯೆಗಳನ್ನು ದೈರ್ಯವಾಗಿ ಎದುರಿಸಿ ಬಗೆಹರಿಸಿಕೊಂಡು ಮುನ್ನುಗ್ಗುವುದ, ಬದುಕ ಸುಂದರವಾಗಿಸಿಕೊಳ್ಳುವುದ ಕಲಿಯುವರಲ್ಲದೆ ಎಲ್ಲರೂ ಆತ್ಮವಿಶ್ವಾಸದಿಂದ ಬದುಕುವಂತಾಗುವರು! ಆದ್ದರಿಂದ ಶಾಲಾ ಕಾಲೇಜುಗಳಲ್ಲಿ ಬರಿ ಅಂಕ ಗಳಿಕೆಗೆ ಪ್ರಾಮುಖ್ಯತೆ ಕೊಡದೆ ಜೀವನ ಕೌಶಲಗಳಿಗೆ ಪ್ರಮುಖ್ಯತೆ ಕೊಡಬೇಕು! ಆಗ ಎಲ್ಲರ ಬದುಕು ಸುಂದರ ಆದೀತು!
–ಕೆ ಟಿ ಸೋಮಶೇಖರ್ ಹೊಳಲ್ಕೆರೆ.