ಲೇಖನ

ಜೀವನವೊಂದು ಮುರಳಿ- ಸುಖ ಸಂತೋಷ ತರಲಿ: ಎಂ.ಎನ್.ಸುಂದರ ರಾಜ್

ದೀಪಾವಳಿ ಅಂದರೆ ಸಾಕು, ಮಕ್ಕಳು ಪುಳಕಿತಗೊಳ್ಳುತ್ತಾರೆ, ಹಿರಿಯರು ಸಂಭ್ರಮಿಸುತ್ತಾರೆ. ಏಕೆಂದರೆ, ಇದೊಂದು ಬೆಳಕಿನ ಹಬ್ಬ, ಅಜ್ಞಾನವೆಂಬ ಕತ್ತಲನ್ನು ಪರಿಹರಿಸಿ, ಜ್ಞಾನದ ಬೆಳಕನ್ನು ನೀಡುವ ದಿವ್ಯ ಸಂದೇಶವೇ ದೀಪಾವಳಿ. ಈ ಹಬ್ಬದ ವಿಶೇಷತೆಯೇನು ಎಂಬುದನ್ನು ತಿಳಿಯುವುದು ಅವಶ್ಯಕ.

ಶ್ರೀ ರಾಂಜಿ ಜೈನ್ ಎಂಬ ಆಧ್ಯಾತ್ಮಿಕ ಗುರುಗಳು ದೀಪಾವಲಿಯ ಸಂದರ್ಭದಲ್ಲಿ ಒಂದೆಡೆ ಮಾತನಾಡುತ್ತಾ ನಮ್ಮ ಜೀವನ ಹೇಗಿರಬೇಕು ಎಂಬುದನ್ನು ಅತ್ಯಂತ ಸೊಗಸಾಗಿ ವಿವರಿಸಿದ್ದಾರೆ. ಜೀವನ ಹೂವಿನ ಹಾಸಿಗೆಯಲ್ಲ, ಅದೊಂದು ಸಮಸ್ಯೆಯ ಗೂಡು ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ಜೀವನದ ಎಲ್ಲ ಕಷ್ಟನಷ್ಟಗಳನ್ನು, ಸಮಸ್ಯೆಗಳನ್ನೂ, ದುಃಖ ದುಮ್ಮಾನಗಳನ್ನೂ ಎದುರಿಸಬೇಕಾದರೆ ಆತ್ಮ ವಿಶ್ವಾಸ ಅತಿ ಮುಖ್ಯ. ನಮ್ಮ ಜೀವನ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಸರಳ, ನೇರ. ನಮ್ಮ ಜೀವನ ಒಂದು ಕೊಳಲಿನ ಹಾಗೆ ಇರಬೇಕು. ಕೊಳಲಿನಲ್ಲಿ ರಂಧ್ರಗಳಿರುತ್ತವೆ. ಅದೇ ರೀತಿ, ಜೀವನವೂ ಸಹ ಅನೇಕ ಒತ್ತಡ, ವಿಫಲತೆ, ನಿರಾಶೆ, ಅಸಮಾಧಾನ, ಕಷ್ಟ, ದುಮ್ಮಾನ ಗಳೆಂಬ ರಂಧ್ರಗಳನ್ನು ಹೊಂದಿರುತ್ತದೆ.

ಕೃಷ್ಣನ ಅತ್ಯಂತ ಪ್ರಿಯವಾದ ಕೊಳಲು ನಮಗೆ ಮೂರು ಪಾಠಗಳನ್ನು ಕಲಿಸುತ್ತದೆ. ಇದು ಎಲ್ಲರೂ ಅನುಸರಿಸಲು ಸಾಧ್ಯವಿರುವಂತಹ ಪಾಠಗಳು. ಇವುಗಳಂತೆ ನಡೆದುಕೊಂಡರೆ ಈಗ ಸುಖವಾಗಿ ಜೀವಿಸುವುದಷ್ಟೇ ಅಲ್ಲ, ಮುಂದಿನ ಜೀವನಕ್ಕೂ ಅನುಕೂಲಕರ. ಕೊಳಲು ತಿಳಿಯ ಪಡಿಸುವ ಮೂರು ಪಾಠಗಳೆಂದರೆ,

1. ಕೊಳಲು ನಾವು ನುಡಿಸಿದಾಗ ಮಾತ್ರ ಧ್ವನಿಹೊರಡಿಸುತ್ತದೆ.
2. ಅದು ಧ್ವನಿ ಮಾಡತೊಡಗಿದರೆ, ಮಧುರವಾಗಿ ಮಾತನಾಡುತ್ತದೆ.
3. ಅದರೊಳಗೆ ಯಾವಾಗಲೂ ಖಾಲಿಯಿರುತ್ತದೆ.

ಈ ಮೂರು ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ಜೀವನವೂ ಸಹ ಕೊಳಲಿನ ಮಾಧುರ್ಯದಂತೆ ಸುಖವಾಗಿರುತ್ತದೆ.

ಕೊಳಲು ಕಲಿಸುವ ಮೊದಲ ಪಾಠವೆಂದರೆ, ಕೊಳಲು ನಿನಾದ ಮೂಡಿಸುವುದು ಯಾವಾಗಲೂ ನಾವು ಅದಕ್ಕೆ ಪ್ರೇರೇಪಣೆ ನೀಡಿದಾಗ ಮಾತ್ರ. ಅಂದರೆ ಅವಶ್ಯಕತೆ ಇದ್ದಾಗ ಮಾತ್ರ ಮಾತನಾಡಬೇಕು, ಅನಾವಶ್ಯಕವಾಗಿ ಮಾತನಾಡಬಾರದು. ಎಂಬ ಪಾಠವನ್ನು ಬಧಿಸುತ್ತದೆ. ಅಂದರೆ ನಮ್ಮನ್ನು ಕೇಳಿದಾಗ ಮಾತ್ರ ನಾವು ಇನ್ನೊಬ್ಬರಿಗೆ ಸಲಹೆ ನೀಡಬೇಕೇ ವಿನಃ, ನಮ್ಮ ಬುದ್ಧಿವಂತಿಕೆಯನ್ನು ವಿನಾಕಾರಣ ಪ್ರದರ್ಶಿಸುವುದಾಗಲೀ, ನಮ್ಮನ್ನು ನಾವು ಹೊಗಳಿಕೊಳ್ಳುವುದಾಗಲೀ ಮಾಡಬಾರದು. ಸಂದರ್ಭಕ್ಕೆ ತಕ್ಕಂತೆ ಮಾತ್ರ ಮಾತನಾಡಬೇಕು. ಯಾರು ಅನಾವಶ್ಯಕವಾಗಿ ಮಾತನಾಡುತ್ತಾರೋ, ಅವರು ಸೌಹಾರ್ದ ವಾತಾವರಣವನ್ನು ನಾಶಮಾಡಿಕೊಳ್ಳುವುದಲ್ಲದೆ, ತಮ್ಮ ಇಡೀ ಜೀವನವನ್ನು ಋಣಾತ್ಮಕ ಚಿಂತನೆಗಳಿಂದ ಹಾಳು ಮಾಡಿಕೊಳ್ಳುತ್ತಾರೆ.

ಇನ್ನು ಕೊಳಲು ಕಲಿಸುವ ಎರಡನೆಯ ಪಾಠದತ್ತ ಗಮನ ಹರಿಸೋಣ. ಕೊಳಲನ್ನು ನುಡಿಸಿದಾಗ ಮಾತ್ರ ಹೇಗೆ ಮಧುರವಾದ ಧ್ವನಿಯನ್ನು ಹೊರಡಿಸುತ್ತದೆಯೋ ಹಾಗೆ, ನಾವು ಇನ್ನೊಬ್ಬರಿಗೆ ಹಿತವಾಗುವಂತೆ ಮಾತನಾಡಬೇಕು. ನಾವಾಡುವ ಮಾತುಗಳು ಇತರರಿಗೆ ಸಂತಸ ನೀಡುವಂತಿರಬೇಕು. ಇನ್ನೊಬ್ಬರ ಮನಸ್ಸಿಗೆ ನೋವುಂಟುಮಾಡುವ ಮತ್ತು ಗಡಸು ಧ್ವನಿಯಲ್ಲಿ ಮಾತನಾಡಬಾರದು. ಒಂದು ವೇಳೆ ನಾವು ಆಡುವ ಕಟುವಾದ ಸತ್ಯದ ಮಾತುಗಳು ಇತರರಿಗೆ ಮನಸ್ಸಿಗೆ ಹಿತಕಾರಿಯಲ್ಲದಿರಬಹುದು. ಆಗಲೂ ಸಹ ಇನ್ನೊಬ್ಬರಿಗೆ ಅವಮಾನವಾಗದಂತೆ, ಮನನೋಯಿಸದಂತೆ ಮಾತನಾಡಬೇಕು.

ಕೊಳಲು ಬೋಧಿಸುವ ಮೂರನೆಯ ಪಾಠ ಇನ್ನೂ ಉತ್ತಮವಿದೆ. ಕೊಳಲಿನ ಒಳಭಾಗ ಯಾವಾಗಲೂ ಖಾಲಿಯಾಗಿರುತ್ತದೆ. ಅಂದರೆ, ನಮ್ಮ ಗತಕಾಲದಲ್ಲಿ ನಡೆದ ಕಹಿಘಟನೆಗಳನ್ನು ಮರೆಯಬೇಕು ಮತ್ತು ಭವಿಷ್ಯದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬಾರದು. ಅಲ್ಲದೆ ಯಾವುದೇ ನಿರ್ಧರಿತ ಭಾವನೆಗಳನ್ನಾಗಲೀ, ಮನೋಭಾವವನ್ನಾಗಲೀ ಅಥವಾ ವರ್ತನೆಯನ್ನಾಗಲೀ ಹೊಂದಿರಬಾರದು. ನಮ್ಮ ಮನಸ್ಸು ಇಂತಹ ಮಾಲಿನ್ಯದಿಂದ ಕೂಡಿದ್ದರೆ, ನಮ್ಮ ಆಂತರಿಕ ಸಾಮಥ್ರ್ಯವನ್ನು ಕುಗ್ಗಿಸಿ, ವ್ಯಕ್ತಿಗತ ಸಂತಷವನ್ನು ಕಿತ್ತುಕೊಳ್ಳುತ್ತದೆ. ದ್ದರಿಂದ ನಮ್ಮ ಮನಸ್ಸನ್ನು ಯಾವಾಗಲೂ ಶುಭ್ರವಾಗಿ, ನಿಮ್ಮಳವಾಗಿ ಇಟ್ಟುಕೊಳ್ಳಬೇಕು.

ಖಾಲಿಯಾದ ಮನಸ್ಸು ಯಾವಾಗಲೂ ಶಾಂತಿಯುತವಾಗಿರುತ್ತದೆ. ಶಾಂತಯುತವಾದ ಮನಸ್ಸು ಸಂತೋಷವಾಗಿರುತ್ತದೆ. ಸಂತಸದಿಂದ ಕೂಡಿದ ಮನಸ್ಸು ಜೀವನ ಸೌಂದರ್ಯವನ್ನು ಆಸ್ವಾದಿಸುತ್ತದೆ ಮತ್ತು ಇತರರ ಸಂತೋಷಕ್ಕೆ ನೆರವು ನೀಡುತ್ತದೆ. ಇಂತಹ ಉದಾತ್ತ ಭಾವನೆಗಳು ನಮ್ಮ ಜೀವನದಲ್ಲಿ ಬರಲಿ.

ಆದ್ದರಿಂದ ನಾವೆಲ್ಲರೂ ಕೊಳಲಿನಂತೆ ಜೀವಿಸಬೇಕು. ಕೃಷ್ಣ ತನ್ನ ಕೊಳಲನ್ನೂದಿ ಹೇಗೆ ಇಡೀ ವಿಶ್ವವನ್ನು ಸಂತೋಷದಿಂದ ಮೈಮರೆಯುವಂತೆ ಮಾಡಿದ್ದನೋ ಹಾಗೆ ನಮ್ಮ ಮೃದು ಮಾತುಗಳು ಇನ್ನೊಬ್ಬರ ಮನಸ್ಸನ್ನು ಗೆಲ್ಲಬೇಕು ಎಂಬುದು ಬರಲಿರುವ ದೀಪಾವಳಿಯ ಸಂದೇಶವಾಗಿದೆ.
-ಎಂ.ಎನ್.ಸುಂದರ ರಾಜ್


 

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *