ಪ್ರತಿ ಸಂಜೆಯಾಯಿತೆಂದರೆ ಹಬ್ಬದ ವಾತಾವರಣವಿರುವ ಮಲ್ಲೇಶ್ವರಂ ಎಂಟನೇ ತಿರುವಿನಲ್ಲಿ ಸುತ್ತಾಡುವುದೇ ಕಣ್ಣಿಗೆ ಹಬ್ಬ… ಹದಿನೈದನೇ ತಿರುವಿನವರೆಗೂ ಸಣ್ಣಸಣ್ಣ ವ್ಯಾಪಾರದಂಗಡಿಗಳು ರಸ್ತೆ ಬದಿಯಲ್ಲಿ ತುಂಬಾ ಕಾಣಸಿಗುತ್ತವೆ. ಹೂವಿನ ರಾಶಿ, ಹಣ್ಣು-ಹಂಪಲು, ಆಟಿಕೆಗಳು, ಬಟ್ಟೆ ವ್ಯಾಪಾರಿಗಳು, ಚಪ್ಪಲ್ ಅಂಗಡಿ, ಬ್ಯಾಂಗಲ್ಸ್ ,ಬ್ಯಾಗ್ ಗಳು, ತಿನ್ನಲು ಸ್ವೀಟ್ ಕಾರ್ನ್,ಕತ್ತರಿಸಿ ಅಲಂಕರಿಸಿಟ್ಟ ಮಾವು , ಚರುಮುರಿ, ಸಮೋಸ, ಕಚೋರಿ, ಕುಡಿಯಲು ಕಾಫಿ, ಟೀ, ಜ್ಯೂಸ್ ಏನಿದೆ ?ಏನಿಲ್ಲ ? ಕೇಳುವುದೇ ಬೇಡ. ಅಪರೂಪಕ್ಕಾದರೂ ಬೇಟಿ ನೀಡುವುದೆಂದರೆ ನಮಗೂ ಖುಷಿ. ತುಂಬಿದ ಜೇಬಿನೊಂದಿಗೆ ಹೋದರೆ ಜೇಬು ಖಾಲಿಯಾಗಿ ಕೈತುಂಬಿಸಿಕೊಂಡು ಬರಬೇಕು..
**
ಮಳೆಗಾಲ ಬೇರೆ ಅಲ್ಲಿ ನೆಲದಲ್ಲಿ ವ್ಯಾಪಾರ ಮಾಡುವವರ ಕಷ್ಟ ಕೇಳುವುದೇ ಬೇಡ. ಜೋರಾಗಿ ಮಳೆ ಸುರಿಯಿತೆಂದರೆ, ಬಟ್ಟೆ-ಚೀಲದ ವ್ಯಾಪಾರಿಗಳು ಹೂವು ಮಾರುವ ಅಜ್ಜಿ ಎಲ್ಲರೂ ಗಡಿಬಿಡಿಯಲ್ಲಿ ಟಾರ್ಪಲ್ ಮುಚ್ಚುವುದರಲ್ಲೇ ಬಿಜಿ. ಜನರು ಮಳೆ ಬಂತು ಎಂದು ಓಡುತ್ತಾ ಸಿಕ್ಕ ಸಿಕ್ಕ ಅಂಗಡಿ ಎದುರಿನಲಿ ನಿಲ್ಲುತ್ತಿದ್ದರು.. ಒಂದಷ್ಟು ಸಮಯದ ನಂತರ ಮಳೆ ಬಿಟ್ಟಿತಾದರೂ ಮರದ ಕೊಂಬೆಯಿಂದ ಹನಿಯುತ್ತಿತ್ತು.. ಟಪ್ ಟಪ್ ತಲೆಗೆ ನೀರು ಬೀಳುತ್ತಿದ್ದರೂ ವ್ಯಾಪಾರ ನಿಲ್ಲಿಸಲಾಗದು. ಬ್ಯಾಂಗಲ್ ಅಂಗಡಿಯಾತ ಟೀ ಕುಡಿಯಲು ಹೋಗಿದ್ದ ನಾವು "ಬಳೆಗೆ ಎಷ್ಟು ?"ಎಂದು ಕೇಳಲು ಅವನಿರಲಿಲ್ಲ. ಅಲ್ಲೇ ಕೆಳಗೆ ಹೂ ಮಾರುತಲಿದ್ದ ಅಜ್ಜಿ "ಏನ್ ತಗೊಂಡ್ರು ನೂರು ರೂಪಾಯಿ" ಎಂದಳು.. ಇನ್ನೊಂದಷ್ಟು ಹೆಜ್ಜೆ ಮುಂದೆ ಹೋಗಿದ್ದೆವು ಪುಟ್ಟ ಮಗುವಿನ ಕೈಹಿಡಿದು ಅವನ ತಾಯಿಯನ್ನು ನಿಲ್ಲಿಸಿ ಕೈಗಡಿಯಾರದ ವ್ಯಾಪಾರಿ ಹಿಂದಿಯಲ್ಲಿ ಬೈಯುತಲಿದ್ದ.. ಯಾಕೆ ಕೇಳಿದರೆ ,ಆ ಮಗು ಯಾವಾಗಲು ಕದಿಯುವುದಂತೆ, ಆ ದಿನ ಕೈಗೆ ಸಿಕ್ಕಿದ. ನಾವಾಗೇ ಹೊಡೆಯುವುದು ಮಾಡಿದರೆ ದೊಡ್ಡ ಜಗಳವೇ ಆಗುತ್ತದೆ,ಜನರೆಲ್ಲ ಒಟ್ಟಾಗುವ ಹಾಗೆ ಮಗುವಿನ ತಾಯಿ ನಟಿಸುತ್ತಾಳೆ. ಅದಕ್ಕೆ ಅವನ ತಾಯಿಗೆ ಹೇಳಿದ್ದು. "ಇನ್ನೊಮ್ಮೆ ಈ ಬೀದಿಯಲ್ಲಿ ಕಾಣಿಸಿಕೊಂಡರೆ ಜಾಗೃತೆ"…ಎಂದು ಗದರಿಸಿದ. ಆ ಹುಡುಗ ವಾಚ್ ಎಳೆಯುವ ರಭಸದಲ್ಲಿ ಮೂರುನಾಲ್ಕು ವಾಚುಗಳು ಬಿದ್ದು ಅದರ ಗ್ಲಾಸು ಒಡೆದುಹೋಗಿತ್ತು. ದಂಡ ತೆತ್ತುವವರ್ಯಾರು? ಅದೊಂದು ನಷ್ಟವೇ ತಾನೆ.
**
ಇನ್ನೊಂದು ಕಡೆ ಸೈಕಲ್ನಲ್ಲಿ ಸಮೋಸ ಮಾರುತ್ತಿದ್ದ ಹುಡುಗ " ಸ್ವೀಟ್ಕಾರ್ನ್ ಹುಡುಗನ ಹತ್ತಿರ ಹಣಕೊಟ್ಟು ಖರೀದಿಸಿ ತಿನ್ನುತ್ತಿದ್ದ, ಇವನು ಹಾಗೆ ಸಮೋಸವನ್ನು ಹಣ ಕೊಟ್ಟು ತಿಂದನು… ಅದನ್ನ ನೋಡಿ ನನಗೆ ಖುಷಿಯಾಗಿದ್ದು ಕಾರಣ, ವ್ಯಾಪಾರಕ್ಕೆ ವ್ಯಾಪಾರವೂ ಆಯಿತು, ಸ್ವಲ್ಪ ಹೊಟ್ಟೆಯೂ ತುಂಬಿತು… ತರಕಾರಿಗೆಲ್ಲ ನೀರುಬಿದ್ದು ಕೊಳೆಯಲು ಶುರುವಾಗಿದ್ದವು.. ಮಳೆಯಲ್ಲಿ ಶೀತಗಾಳಿಗೆ ಚರುಮುರಿ ಮುದ್ದೆಯಾಗಿತ್ತು. ಕೊಳ್ಳುವವರಿರಲಿಲ್ಲ. ಝಗಮಗಿಸುವ ಬೆಳಕಿನಲ್ಲಿ ಎ.ಸಿ.ಶೋರೂಂ ನಲ್ಲಿದ್ದ ಬಟ್ಟೆತೊಡಿಸಿದ ಗೊಂಬೆಗೆ ಚಳಿ ಶುರುವಾಗಿತ್ತು… ದುಪ್ಪಟ್ಟು ಕೊಟ್ಟಾದರೂ ಬ್ರ್ಯಾಂಡೆಡ್ ವಸ್ತುಗಳಿಗೆ ಮಾರುಹೋಗುವವರಿಗೇನು ಕಡಿಮೆಯಿಲ್ಲ..ಬೀದಿಯಲ್ಲಿದ್ದ ಬಟ್ಟೆಯೇ ಎ.ಸಿ ರೂಮಲ್ಲಿ ಮಾರಾಟ ಮಾಡಿದರೂ ಜನರಿಗೆ ತಿಳಿಯುವುದೇ ಇಲ್ಲ. ಕೆಲವೊಮ್ಮೆ ಕೊಳ್ಳುವವರಿಗೆ "ವ್ಯಾಪಾರಿಗಳ ತಾಳ್ಮೆ ಪರೀಕ್ಷಿಸುವ ಕೆಟ್ಟ ಚಟ".. ರಾತ್ರಿ ೮:೩೦ ಗಂಟೆಯಾದರೂ ಜನರೇನು ಕಡಿಮೆಯಾಗರು. ಹಬ್ಬದ ವಾತಾವರಣವೂ ನಿಲ್ಲದು..ಆದರೂ, ಅವರಲ್ಲಿನ ಸ್ನೇಹ, ಪ್ರೀತಿ-ವಿಶ್ವಾಸ, ಸಾಮರಸ್ಯ ನೋಡಿದ ಸೂಕ್ಷ್ಮ ಮನಸ್ಸು ಅಲ್ಲೇ ಸುತ್ತುತ್ತಿದೆ.. ಅದರಲ್ಲೊಬ್ಬ ರಾತ್ರೆ ಹತ್ತಾದರೂ ಹೂವನ್ನು ಗುಡ್ಡೆಹಾಕಿಕೊಂಡು ಮಾರುತ್ತಿದ್ದ. ನೂರು ಗ್ರಾಮ್ಗೆ ಹತ್ತು ರೂಪಾಯಿ…ನೂರಕ್ಕೆ ಹತ್ತು…ನೂರಕ್ಕೆ ಹತ್ತು…ಎಂದು. ಅವನ ಹೆಂಡತಿ ಮನೆ ಬಾಗಿಲಿಗೆ ಹತ್ತು ಸಲಿ ಬಂದು ಇಣುಕಿಹೋದಳು. ಒಲೆಯನ್ನು ಹಿಡಿಸಿ, ಮತ್ತೆ ಆರಿಸಿಹೋಗುತ್ತಿದ್ದಳು. ಪುಟ್ಟಮಗು ಅಪ್ಪ ತರುವ ಚಾಕಲೇಟಿಗೆ ಕಾಯುತ್ತಿತ್ತು.
ಕೊರೆಯುವ ಚಳಿ. ನಡುಗುತ್ತಲೇ ಬೊಬ್ಬೆಹಾಕುತ್ತಿದ್ದ. ಕೈಕಾಲು ತಂಡಿಗಟ್ಟಿತ್ತು. ಮಳೆರಾಯ ಬೇಕಂತಲೇ "ಧೋ…" ಎಂದು ಸುರಿಯುತ್ತ ಅವನ ಸಹನೆಯ ಜೊತೆ ಆಟವಾಡುತ್ತಿದ್ದ… ನೆನೆದ ಹೂವು ಕೆ.ಜಿ.ಗೆ ಲೆಕ್ಕ ಸಿಗದೆಂದು ಬೆಳಿಗ್ಗೆಯಿಂದ ಯಾರು ಕೊಳ್ಳಲಿಲ್ಲ. ಆ ದಿನದ ವ್ಯಾಪಾರದಲ್ಲಿ ಹಾಲು , ಹಿಡಿಯಷ್ಟು ಅಕ್ಕಿ-ಬೇಳೆ, ನಾಲ್ಕು ತರಕಾರಿ , ಮೂರು ಮೊಟ್ಟೆ ತೆಗೆದುಕೊಂಡು ಹೋದರೆ ಮಧ್ಯರಾತ್ರೆ ಒಂದು ಊಟಮಾಡಬಹುದು. ಈ ದಿನ ಹಣದ ಚೀಲ ತುಂಬಲಿಲ್ಲ. ಗಂಟೆಯೂ ಆಯ್ತು. ಎಲ್ಲ ಬ್ಯಾಗಿಗೆ ತುಂಬಿಸಿ ಭಾರವಾದ ಮನಸ್ಸಿನಿಂದ ಮನೆಗೆ ವಾಪಾಸ್ಸಾದ.
ಬಾಗಿಲಿನಲ್ಲಿಯೇ ಹೆಂಡತಿ ಅವನ ಕೈನೋಡಿದಳು. "ಐದು ಮೊಟ್ಟೆ ತೆಗೆದುಕೊಳ್ಳುವಷ್ಟು ವ್ಯಾಪಾರವಾಯ್ತು ಮಾರಾಯ್ತಿ.. ಇದನ್ನೆ ಆಮ್ಲೇಟ್ ಮಾಡಿ ತಿನ್ನುವ. ಬೇಸರಿಸಬೇಡ.."
"ಹ್ಮ.. ನಮಗೆ ಅಡ್ಡಿಲ್ಲ. ಮಗು..?!. ಅದು ಪದೆ ಪದೇ ಏಳುತ್ತದೆ. ಹಸಿವಾಗಿ ಹೊಟ್ಟೇಲಿ ಸಂಕಟವಾಗುತ್ತೆ. ಆಗ ನಾನೇನು ಕೊಡಲಿ.?!
ನಾನು ಕೆಲಸಕ್ಕೆ ಹೋಗುತ್ತಿದ್ದೆ. ನನ್ನಿಂದಲೇ ಇಷ್ಟೆಲ್ಲ ಕಷ್ಟ ನಿಮಗೆ.. ಕ್ಷಮಿಸಿ.."
" ಅಯ್ಯೋ… ಹುಚ್ಚಿ , ನೀ ಇಲ್ಲದಿದ್ದರೆ ನಾನು ಇಷ್ಟೂ ದುಡಿಯುತ್ತಿರಲಿಲ್ಲವೇನೋ.. ? ಈಗೊಂದು ಜವಾಬ್ದಾರಿ ಬಂದಿದೆ. ನೀನೇ ನನಗೆ ಸ್ಪೂರ್ತಿ. ನಮ್ಮ ಮನೆ ಲಕ್ಷ್ಮಿ ನೀನು… ಏನೇನೋ ಯೋಚಿಸಬೇಡ.." "ಮಗು ಒಂದಾದರೂ ಬೇಕೇ ಬೇಕು, ನಮ್ಮ ನೋವು ಮರೆಸಲು ಅವಳೇ ಪುಟ್ಟದೇವತೆಯಾಗಿ ಬಂದಿದ್ದಾಳೆ. ಎಂದು ಸಮಾಧಾನ ಮಾಡುತ್ತಿದ್ದ.. ಅಲ್ಲೇ ಹತ್ತಿರದಲ್ಲಿದ್ದ ಮಗು "ಅಪ್ಪಾ… ಚಾಕಲೇಟ್ ತರಲಿಲ್ವಾ.. ಬೇಡಬಿಡು ನಾಳೆ ತಾ ಆಯ್ತಾ.." ಎಂದಾಗ ಗಂಡಹೆಂಡತಿರು ಮಗುವನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು.
ಹಾಗೆ ಮಾಡಿದ ಆಮ್ಲೇಟನ್ನು ತಿಂದು ಮಲಗಿದರು..
**
ಇಂತಹದ್ದು ಸಾವಿರಾರಿದೆ. ಅಂದಂದಿನ ದುಡಿಮೆಯಿಂದ ಜೀವನ ಸಾಗಿಸುವಂತಹ ಜನರು. ಚೆನ್ನಾಗಿ ವ್ಯಾಪಾರವಾದರೆ ಹೊಟ್ಟೆತುಂಬಾ ಊಟ, ಇಲ್ಲದಿದ್ದರೆ ತಣ್ಣೀರು ಬಟ್ಟೆ. ಯಾರೂ ಗಮನಿಸಿರುವುದೇ ಇಲ್ಲ ನೋಡಿ.
ಸಿಂಧು ಭಾರ್ಗವ್.
DhanyavadagaLu sir
ಧನ್ಯವಾದಗಳು ಸರ್…
ಆಯ್ಕೆ ಮಾಡಿದ್ದಕ್ಕೆ
ತುಂಬಾ ಖುಷಿಯಾಯಿತು…